Dr Ashok K R
ಹೆಚ್ಚೇನಲ್ಲ, ಕೇವಲ ಹದಿನೈದಿಪ್ಪತ್ತು ವರುಷಗಳ ಹಿಂದೆ ಲ್ಯಾಂಡ್‍ಲೈನ್ ಫೋನು ಮನೆಯಲ್ಲಿದ್ದರೆ ಅದು ಮೇಲ್ಮಧ್ಯಮ ವರ್ಗದ್ದೋ ಶ್ರೀಮಂತರ ಮನೆಯೆಂದೋ ಊಹಿಸಿಬಿಡುತ್ತಿದ್ದೆವು. ಹತ್ತಿಪ್ಪತ್ತು ಮೀಟರ್ ದೂರದವರೆಗೆ ಓಡಾಡುತ್ತಾ ಮಾತನಾಡಲು ಅನುವು ಮಾಡಿಕೊಡುವ ವೈರ್‍ಲೆಸ್ ಫೋನನ್ನಂತೂ ಬಾಯ್ಬಾಯಿ ಬಿಟ್ಟುಕೊಂಡು ನೋಡಿದ್ದೆವು. ತಂತ್ರಜ್ಞಾನ ಯಾವ ಪರಿ ವೇಗ ಪಡೆದುಕೊಂಡಿತೆಂದರೆ ಅಪರೂಪಕ್ಕೊಮ್ಮೆ ದರುಶನ ಕೊಟ್ಟು ಬೆಚ್ಚಿ ಬೀಳಿಸುತ್ತಿದ್ದ ಮೊಬೈಲು ಫೋನುಗಳು ಎಲ್ಲರ ಜೇಬಿನೊಳಗೂ ನಲಿದಾಡಲಾರಂಭಿಸಿತು. ಕಪ್ಪು ಬಿಳುಪು ಸ್ಕ್ರೀನ್ ಕಲರ್ ಆಗಿ ಇಂಟರ್ನೆಟ್ ಕೂಡ ಉಪಯೋಗಿಸಬಹುದು ಎಂಬ ಅಚ್ಚರಿ ಟಚ್ ಸ್ಕ್ರೀನ್ ಬಂದು ಮೊಬೈಲುಗಳೆಲ್ಲ ಸ್ಮಾರ್ಟ್ ಆಗುವಲ್ಲಿಗೆ ಸದ್ಯಕ್ಕೆ ನಿಂತಿದೆ. ಮೊಬೈಲುಗಳು ಸ್ಮಾರ್ಟಾದ ವೇಗದಲ್ಲೇ ಜನರೂ ಸ್ಮಾರ್ಟ್ ಆಗಿದ್ದಾರಾ? ಸತತ ಎರಡು ವರುಷಗಳ ತನಕ ಸ್ಮಾರ್ಟ್ ಫೋನ್ ಉಪಯೋಗಿಸಿದ ಅನುಭವದಲ್ಲಿ ಹೇಳುವುದಾದರೆ ಇಲ್ಲ!
ನೋಕಿಯಾದ ಪುಟ್ಟ ಫೋನನ್ನು ಉಪಯೋಗಿಸುತ್ತಿದ್ದಾಗ ಜೊತೆಯಲ್ಲಿದ್ದಿದ್ದು ಒಂದು ಲ್ಯಾಪ್‍ಟಾಪ್. ಆ ಲ್ಯಾಪ್‍ಟಾಪಿಗೊಂದು ಬಿಎಸ್‍ಎನ್‍ಎಲ್ಲಿನ ಬ್ರಾಡ್‍ಬ್ಯಾಂಡ್ ಕನೆಕ್ಷನ್. ಬಹಳಷ್ಟು ದಿನಪತ್ರಿಕೆಗಳನ್ನು, ಇಂಗ್ಲೀಷ್ ವಾರಪತ್ರಿಕೆಗಳನ್ನು ಲ್ಯಾಪ್‍ಟಾಪಿನಲ್ಲೇ ಓದುವುದು ಅಭ್ಯಾಸವಾಗಿತ್ತು. ಫೇಸ್‍ಬುಕ್, ಆರ್ಕುಟ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟುಗಳಿದ್ದುವಾದರೂ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬಾರಿ ಹತ್ತದಿನೈದು ನಿಮಿಷ ನೋಡುವುದಕ್ಕೆ ಸೀಮಿತವಾಗಿತ್ತು. ಆಗ ದಾಂಗುಡಿ ಇಟ್ಟಿದ್ದು ಸ್ಮಾರ್ಟ್‍ಫೋನುಗಳು. ಟಚ್ ಸ್ಕ್ರೀನು, ಒಳ್ಳೇ ಕ್ಯಾಮೆರಾದಂತಹ ಸಂಗತಿಗಳಿಗಿಂತ ಲ್ಯಾಪ್‍ಟ್ಯಾಪಿನಲ್ಲಿ ಮಾಡುವ ಬಹುತೇಕ ಕೆಲಸಗಳನ್ನು ಇದರಲ್ಲೇ ಮಾಡಬಹುದಂತೆ ಎಂಬ ವಿಷಯ ಸ್ಮಾರ್ಟ್‍ಫೋನ್ ಕಡೆಗೆ ಆಕರ್ಷಣೆ ಬೆಳೆಸಿತು. ಜೊತೆಗೆ, ಸಿಗುವ ನೂರಾರು ಆ್ಯಪ್‍ಗಳಲ್ಲಿ ಪುಸ್ತಕಗಳನ್ನು ಸರಾಗವಾಗಿ ಓದಬಹುದೆಂದು ತಿಳಿದಾಗ ಓದುವ ಹುಚ್ಚಿರುವವರಿಗೆ ಇಷ್ಟವಾಗದೇ ಇದ್ದೀತೆ? ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಮೈಕ್ರೋಮ್ಯಾಕ್ಸಿನ ಐದಿಂಚಿನ ಫೋನನ್ನು ಖರೀದಿಸಿದೆ.
ಏನಾಶ್ಚರ್ಯ?! ಲ್ಯಾಪ್‍ಟಾಪಿನಲ್ಲಿ ಓದುವುದಕ್ಕಿಂತ ಸಲೀಸಾಗಿ ಇದರಲ್ಲಿ ಓದಬಹುದು! ಜೇಬಿನಲ್ಲೇ ಇರುವ ಸಾಧನ, ಯಾವ ಜಾಗದಲ್ಲಾದರೂ ಯಾವ ಸಮಯದಲ್ಲಾದರೂ ಓದುವ ಸೌಕರ್ಯ! ತಗಳಪ್ಪ, ಇನ್ನು ಓದಿ ಓದಿ ಬಿಸಾಕೋದೇ ಎಂದು ಖುಷಿಯಾಗಿದ್ದೆ. ಬುಕ್ ರೀಡರ್‍ಗಳನ್ನು ಡೌನ್‍ಲೋಡ್ ಮಾಡಿಕೊಂಡು ಗುಟೆನ್‍ಬರ್ಗ್ (gutenberg.org) ನಂತಹ ವೆಬ್‍ಸೈಟುಗಳಲ್ಲಿ ಲಭ್ಯವಿರುವ ಲಕ್ಷಾಂತರ ಉಚಿತ ಪುಸ್ತಕಗಳಲ್ಲಿ ಓದಲೇಬೇಕೆಂದುಕೊಂಡಿದ್ದನ್ನು ಆರಿಸಿಕೊಂಡು ಮೊಬೈಲಿನಲ್ಲಿ ಪೇರಿಸಿದೆ. ಫೇಸ್‍ಬುಕ್ಕು, ನಂತರದ ದಿನಗಳಲ್ಲಿ ವಾಟ್ಸ್‍ಅಪ್ಪು ಮೊಬೈಲಿನಲ್ಲಿ ಸೇರಿಕೊಂಡಿತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಫ್ರಂಟ್‍ಲೈನ್, ಔಟ್‍ಲುಕ್, ಪ್ರಜಾವಾಣಿ, ಡೆಕ್ಕನ್, ಹಿಂದೂ, ಒನ್ ಇಂಡಿಯಾ ಇನ್ನೂ ಅನೇಕಾನೇಕ ವೆಬ್‍ಪುಟಗಳನ್ನು ಬುಕ್‍ಮಾರ್ಕ್ ಮಾಡಿಕೊಂಡೆ. ಲ್ಯಾಪ್‍ಟಾಪಿಗೊಂದಷ್ಟು ವಿಶ್ರಾಂತಿ ಕೊಟ್ಟೆ. ಓದುವ ವೇಗ ಹೆಚ್ಚಾಯಿತಾ?
ಹೆಚ್ಚು ಕಡಿಮೆ ಎರಡು ವರುಷದ ನಂತರ ಮೊಬೈಲನ್ನು ಯಾವುದಕ್ಕೆ ಉಪಯೋಗಿಸಿದ್ದೀನಿ, ಎಷ್ಟೆಲ್ಲಾ ಉಪಯೋಗಿಸಿದ್ದೀನಿ ಎಂದು ಪರಾಮರ್ಶಿಸಿ ನೋಡಿದಾಗ ನನ್ನ ಮೇಲೆ ನನಗೇ ಬೇಸರ ಮೂಡುವಷ್ಟು ನಿರಾಸೆಯಾಯಿತು. ಓದಲಿಕ್ಕೆಂದೇ ತೆಗೆದುಕೊಂಡ ಸ್ಮಾರ್ಟ್‍ಫೋನು ಓದುವುದನ್ನು ಬಿಟ್ಟು ಬೇರೆಲ್ಲದಕ್ಕೂ ಬಳಕೆಯಾಗುತ್ತಿತ್ತು. ಲ್ಯಾಪ್‍ಟಾಪಿನಲ್ಲಿ ಓದುವುದಕ್ಕೆ ಕುಳಿತರೆ ಕಡೇ ಪಕ್ಷ ಮೆಸೇಜುಗಳ ಹಾವಳಿ ಓದಿನ ನಿರಂತರತೆಗೆ ತೊಂದರೆ ಕೊಡುತ್ತಿರಲಿಲ್ಲ. ಆದರೆ ಸ್ಮಾರ್ಟ್‍ಫೋನಿನಲ್ಲಿ? ಇಂಟರ್ನೆಟ್ ಆನ್ ಇದ್ದರೆ ಸಾಕು ಫೇಸ್‍ಬುಕ್ಕಿನ ನೋಟಿಫಿಕೇಶನ್ನೋ, ವಾಟ್ಸ್‍ಅಪ್ಪಿನ ಗ್ರೂಪೊಂದರಲ್ಲಿ ಬಂದ ಮೆಸೆಜೋ ಓದಿನ ಮಧ್ಯೆಯೇ ಟಣ್ ಅಂತ ಬರುತ್ತದೆ. ಅಂತ ಮುಖ್ಯವಾದ ಮೆಸೇಜಿರುವುದಿಲ್ಲ ಎಂಬುದರ ಅರಿವಿದ್ದರೂ ಮೇಲಿಂದ ಕೆಳಗಡೆಗೆ ಸೀಟಿ ಆ ನೋಟಿಫಿಕೇಶನ್ನನ್ನು ನೋಡದಿದ್ದರೆ ಸಮಾಧಾನವಿರುವುದಿಲ್ಲ. ಒಂದು ನೋಟಿಫಿಕೇಶನ್ ನೋಡಲು ಫೇಸ್‍ಬುಕ್ಕು ತೆರೆದರೆ ಮತ್ತಷ್ಟನ್ನು ನೋಡದೆ ಹೊರಬರುವುದು ಕಷ್ಟ. ಬಹುಶಃ ಮನುಷ್ಯನಿಗೆ ತನ್ನ ಜೀವನಕ್ಕಿಂತ ಇತರರ ಜೀವನವನ್ನು ಇಣುಕಿ ನೋಡುವುದರಲ್ಲಿ ಹೆಚ್ಚು ಸಂತಸವಿರಬೇಕು. ಇಲ್ಲದಿದ್ದರೆ ಫೇಸ್‍ಬುಕ್ ಈಪಾಟಿ ಫೇಮಸ್ ಆಗುತ್ತಿರಲಿಲ್ಲ! ಫೇಸ್‍ಬುಕ್ ತೆರೆದ ಮೇಲೆ ಕನಿಷ್ಟ ಹತ್ತದಿನೈದು ನಿಮಿಷ ಮಂಗಮಾಯ. ಇನ್ನು ವಾಟ್ಸ್‍ಅಪ್ಪಿನ ‘ಗುಡ್ ಮಾರ್ನಿಂಗ್’ ‘ಗುಡ್ ಇವನಿಂಗ್’ ಮೆಸೇಜುಗಳು, ಎಲ್ಲಾ ಗುಂಪುಗಳಲ್ಲೂ ಪುನರಾವರ್ತನೆಯಾಗುವ ಅವವೇ ಜೋಕ್ಸು, ವಿಡಿಯೋಗಳನ್ನು ಒಂದು ಸುತ್ತು ನೋಡುವಷ್ಟರಲ್ಲಿ ಅರ್ಧ ಘಂಟೆ ಮುಗಿದಿರುತ್ತದೆ. ಗೆಳೆಯ ಗೆಳತಿಯರು ಫೇಸ್‍ಬುಕ್ಕಿನಲ್ಲೋ ವಾಟ್ಸ್‍ಅಪ್ಪಿನಲ್ಲೋ ಆನ್‍ಲೈನ್ ಇದ್ದಾಗ ಒಂದಷ್ಟು ಹರಟದಿದ್ದರಾದೀತೆ? ಹರಟೆಗೊಂದರ್ಧ ಘಂಟೆ. ಅಲ್ಲಿಗೆ ಓದಲೆಂದು ಸ್ಮಾರ್ಟ್‍ಫೋನನ್ನು ಕೈಲಿಡಿದು ಒಂದು ಒಂದೂವರೆಯಷ್ಟು ಸಮಯ ‘ಇತರೆ’ ಕೆಲಸಗಳಿಗೆ ವಿನಿಯೋಗಿಸಿದ ಮೇಲೂ ಓದುವುದು ಕಷ್ಟಸಾಧ್ಯ. ವಿಶೇಷವೆಂದರೆ ಈ ರೀತಿಯ ಅಭ್ಯಾಸಗಳು ಎಷ್ಟು ಆಕರ್ಷಕವೆನ್ನಿಸುತ್ತವೆಂದರೆ ದಿನಕಳೆದಂತೆ ಪತ್ರಿಕೆ – ಪುಸ್ತಕಗಳನ್ನು ಸ್ಮಾರ್ಟ್‍ಫೋನಿನಲ್ಲಿ ಓದುವುದು ಮರೆತೇ ಹೋಗಿ ದಿನಕ್ಕೆ ಕನಿಷ್ಠ ಹತ್ತು ಬಾರಿ ಫೇಸ್‍ಬುಕ್ಕು ನೋಡಲು ಇನ್ನೊಂದಿಪ್ಪತ್ತು ಬಾರಿ ವಾಟ್ಸ್‍ಅಪ್ ನೋಡುವುದರಲ್ಲಿ ತೃಪ್ತಿ ಸಿಗಲಾರಂಭಿಸಿತು. ಎರಡು ನಿಮಿಷ ಬಿಡುವು ಸಿಕ್ಕರೂ ಸುತ್ತಮುತ್ತಲಿನ ಪರಿವೆ ಮರೆತು ಫೋನು ತೆಗೆದು ಸೀಟುವುದು ಖುಷಿ ಕೊಡುವ ಸಂಗತಿಯೇ ಆಗಿತ್ತು. ಇನ್ನು ನಿಮ್ಮ ಮೊಬೈಲುಗಳಲ್ಲಿ ಹೈಕ್, ಇನ್ಸ್‍ಸ್ಟಾಗ್ರಾಮ್, ವೈಬರ್, ಲೈನ್, ವಿಚಾಟ್, ಟ್ವಿಟರ್, ಪಿನ್‍ಟರೆಸ್ಟ್‍ಗಳೆಲ್ಲ ಇದ್ದರಂತೂ ಕೇಳುವುದೇ ಬೇಡ. ಮೊಬೈಲು ನೋಡುವುದಕ್ಕೇ ದಿನದ ಇಪ್ಪತ್ತನಾಲ್ಕು ಘಂಟೆಗಳು ಸಾಲುವುದಿಲ್ಲ.
ಸತ್ಯಸಂಗತಿಯೆಂದರೆ ನನಗೂ ಅದೇ ಅಭ್ಯಾಸವಾಗಿತ್ತು, ಹೆಚ್ಚುಕಮ್ಮಿ ಜೀವನದ ಭಾಗವಾಗಿಬಿಟ್ಟಿತ್ತೆಂದರೆ ತಪ್ಪೇನಿಲ್ಲ. ಜೊತೆಜೊತೆಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳು ವಹಿಸಿದ ಪ್ರಮುಖ ಪಾತ್ರ, ಈಗಿನ ಪ್ರಧಾನಮಂತ್ರಿ ಅವುಗಳಿಗೆ ನೀಡುವ ಅತಿಯಾದ ಮಹತ್ವವೆಲ್ಲವೂ ಸ್ಮಾರ್ಟ್‍ಫೋನುಗಳಿಗೆ ಜೋತು ಬೀಳುವುದೇ ಸರಿಯಾದ ದಾರಿ ಎಂಬ ಭಾವ ಮೂಡಿಸುತ್ತಿತ್ತು. ಇವೆಲ್ಲವನ್ನೂ ನನಗೆ ನಾನೇ ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದು ಬೆಂಗಳೂರು ಒನ್‍ನಲ್ಲಿ ನಡೆದ ಒಂದು ಘಟನೆ. ನೀರಿನ ಬಿಲ್ಲು ಕಟ್ಟಲು ಹೋಗಿದ್ದಾಗ ಬೆಂಗಳೂರು ಒನ್ ಕೇಂದ್ರದಲ್ಲಿ ಜನವೋ ಜನ. ಬಿಪಿಎಲ್ ಕಾರ್ಡಿನ ನವೀಕರಣವೋ, ವಿಳಾಸ ಪರಿಶೀಲನೆಯೋ ನಡೆಯುತ್ತಿತ್ತು. ಮೂವತ್ತೈದು ನಲವತ್ತು ವರುಷದ ವ್ಯಕ್ತಿಯೊಬ್ಬ ಕೇಂದ್ರದವರೊಡನೆ ವಾಗ್ವಾದಕ್ಕಿಳಿದಿದ್ದ. ಮೊಬೈಲಿನಿಂದ ಮೆಸೇಜು ಕಳಿಸಿ ಎಂದು ಆಕೆ ಹೇಳುತ್ತಿದ್ದರು, ಮೆಸೇಜು ಯಾರಿಗೆ ಯಾಕೆ ಹೇಗೆ ಏನು ಎಂದಾತ ಕೇಳುತ್ತಲೇ ಇದ್ದ. ಐದಾರು ಸಲ ತಿಳಿಸಿ ಹೇಳಿದ ನಂತರವೂ ಆತನಿಗೆ ಮೊಬೈಲಿನಿಂದ ಏನನ್ನು ಹೇಗೆ ಯಾರಿಗೆ ಯಾಕೆ ಕಳುಹಿಸಬೇಕೆಂದು ಅರ್ಥವೇ ಆಗಲಿಲ್ಲ. ಅಜ್ಞಾನಿಯನ್ನು ಕಂಡು ರೋಸಿ ಹೋದ ಆಕೆ ‘ಹೋಗ್ಲಿ ನಿಮ್ದೂ ನಿಮ್ ಮನೆಯವರದೂ ವೋಟರ್ಸ್ ಐಡಿ ನಂಬರ್ ಬರೆದುಕೊಂಡು ಬನ್ನಿ. ನಾನೇ ಮಾಡಿಕೊಡ್ತೀನಿ’ ಎಂದಳು. ವೋಟರ್ಸ್ ಕಾರ್ಡ್ ಮೇಲೆ ನಂಬರ್ರೂ ಇರುತ್ತಾ ಎಂಬ ಅಚ್ಚರಿ ಆತನದು. ‘ರೀ ಸ್ವಾಮಿ’ ಎಂದಾಕೆ ರೇಗಿ ‘ನಿಮಗಿನ್ನು ಹೇಳೋದಿಕ್ಕೆ ಆಗಲ್ಲ. ಮನೇಲಿರೋ ಅಷ್ಟೂ ಕಾರ್ಡುಗಳನ್ನು ಗುಡ್ಡೆ ಹಾಕ್ಕೊಂಡು ಬನ್ನಿ. ಮುಂದಿನದನ್ನು ನಾನು ನೋಡ್ತೀನಿ’ ಎಂದ್ಹೇಳಿ ಕಳುಹಿಸಿದಳು. ಸ್ಮಾರ್ಟ್‍ಫೋನುಗಳ ತೆಕ್ಕೆಗೆ ಬಿದ್ದು, ತೆಕ್ಕೆಗೆ ಬಿದ್ದವರ ಸಂಗಡದಲ್ಲೇ ಇದ್ದಾಗ ಇಂತಹದ್ದೂ ಇದೆ ದೇಶದಲ್ಲಿ, ಎಂದು ನಂಬುವುದೇ ಕಷ್ಟವಾಗುತ್ತದೆ. ಇಂತಹ ಯೋಜನೆಗೆ ಇಂತಹ ಸಂಖೈಗೆ ಮೆಸೇಜು ಕಳಿಸಿ, ಮೇಲ್ ಮಾಡಿಬಿಡಿ ಎಂದು ಸರಕಾರದ ಅನೇಕ ಯೋಜನೆಗಳು ಘೋಷಿಸುವಾಗ ಮೊಬೈಲಿನಿಂದ ಮೆಸೇಜು ಕಳಿಸುವುದೆಂದರೇನು ಎಂದೇ ತಿಳಿಯದವರೂ ಇಲ್ಲಿ ಅನೇಕರಿರುವ ಸಂಗತಿ ಮರೆತುಬಿಡಲಾಗುತ್ತಿದೆಯಾ? ನಾನು ಸ್ಮಾರ್ಟ್‍ಫೋನನ್ನು ತೆಗೆದುಕೊಂಡ ಉದ್ದೇಶ, ಅದನ್ನೀಗ ಉಪಯೋಗಿಸುತ್ತಿರುವ ರೀತಿಗಳನ್ನೆಲ್ಲ ಮೆಲಕು ಹಾಕುವಾಗ ಕಳೆದೆರಡು ವರುಷಗಳಲ್ಲಿ ಎಷ್ಟೋ ದಿನಗಳನ್ನು ಈ ಸ್ಮಾರ್ಟ್‍ಫೋನಿನ ದೆಸೆಯಿಂದಾಗಿ ಕಳೆದುಕೊಂಡಂತಹ ಭಾವನೆ ಬಂತು. ಭ್ರಮೆಗಳಲ್ಲಿ ತೇಲಿಸುವ ಸ್ಮಾರ್ಟ್‍ಫೋನಿನ ಅನಿವಾರ್ಯತೆ ಇದೆಯೇ ಎಂದು ಯೋಚಿಸಿದೆ. ಲ್ಯಾಪ್‍ಟಾಪ್ ಅಂತರ್ಜಾಲ ಇರುವ ಕಾರಣ ವಾಟ್ಸ್‍ಅಪ್ ಹೊರತುಪಡಿಸಿ ಮತ್ಯಾವ ಕಾರ್ಯಕ್ಕೂ ಅಷ್ಟೇನೂ ತಡೆಯಾಗಲಾರದು ಎನ್ನಿಸಿತು. ಸ್ಮಾರ್ಟ್‍ಫೋನನ್ನು ತಕ್ಷಣ ಮಾರಿ ಮನೆಯಲ್ಲಿದ್ದ ಹಳೆಯ ನೋಕಿಯಾ ಫೋನನ್ನು ಉಪಯೋಗಿಸಲಾರಂಭಿಸಿ ಎರಡು ತಿಂಗಳ ಮೇಲಾಯಿತು. ಏನಾದರೂ ಬದಲಾವಣೆಗಳಿವೆಯಾ?
ಮೊದಲ ಬದಲಾವಣೆ ಫೇಸ್‍ಬುಕ್ಕೆಂಬುದು ಬೆಳಿಗ್ಗೆ ಸಂಜೆ ಹತ್ತತ್ತು ನಿಮಿಷ ನೋಡುವುದಕ್ಕಷ್ಟೇ ಅರ್ಹ ಎಂಬ ಸಂಗತಿ ಮನದಟ್ಟಾಯಿತು. ವಾರಕ್ಕೊಮ್ಮೆ ಹಾಯ್ ಬೆಂಗಳೂರ್, ಗೌರಿ ಲಂಕೇಶ್, ಸುಧಾ, ಅಪರೂಪಕ್ಕೆ ಅಗ್ನಿ, ಹದಿನೈದು ದಿನಕ್ಕೊಮ್ಮೆ ಓ ಮನಸೇ, ತಿಂಗಳಿಗೊಮ್ಮೆ ಮಯೂರ, ಮಧ್ಯೆ ಮಧ್ಯೆ ರೂಪತಾರ ತಪ್ಪದೇ ಓದುತ್ತಿದ್ದೆ. ಸ್ಮಾರ್ಟ್‍ಫೋನಿನ ದೆಸೆಯಿಂದ ಮ್ಯಾಗಝೀನುಗಳನ್ನು ಓದುವ ಅಭ್ಯಾಸವೇ ತಪ್ಪಿ ಹೋಗಿತ್ತು. ಈಗೊಂದು ತಿಂಗಳುಗಳಿಂದ ಮತ್ತೆ ಈ ಎಲ್ಲಾ ಪತ್ರಿಕೆಗಳನ್ನು ಓದುವುದಕ್ಕೆ ‘ಸಮಯ’ ಸಿಗುತ್ತಿದೆ! ಎಷ್ಟೋ ತಿಂಗಳುಗಳ ನಂತರ ಯಾವ ನೋಟಿಫಿಕೇಶನ್ನೂ ಇಲ್ಲದೆ ಲ್ಯಾಪ್‍ಟಾಪಿನಲ್ಲಿ ಇಂಗ್ಲೀಷ್ ನಿಯತಕಾಲಿಕೆಗಳನ್ನೂ ಓದುವುದು ಸಾಧ್ಯವಾಗಿದೆ! ಸ್ಮಾರ್ಟ್‍ಫೋನ್ ತೊರೆದ ನಂತರ ಖಂಡಿತವಾಗಿ ಬುದ್ಧಿ ಮತ್ತಷ್ಟು ಸ್ಮಾರ್ಟ್ ಆಗುತ್ತಿದೆ! ನಿಮ್ಮ ಬಳಿಯೂ ಸ್ಮಾರ್ಟ್‍ಫೋನ್ ಇದೆಯೇ? ಅದು ಬರುವುದಕ್ಕೆ ಮುಂಚಿನ ನಿಮ್ಮ ಚಟುವಟಿಕೆಗಳಿಗೂ ಈಗಿನದಕ್ಕೂ ಒಮ್ಮೆ ಹೋಲಿಸಿ ನೋಡಿ. ನನ್ನ ಅನುಭವಕ್ಕಿಂತ ಹೆಚ್ಚೇನೂ ಭಿನ್ನವಾಗಿರಲಿಕ್ಕಿಲ್ಲ.
No comments:
Post a Comment