ಇದೇ ಭಾನುವಾರ ಬಿಡುಗಡೆಯಾಗಲಿರುವ ಲಡಾಯಿ ಪ್ರಕಾಶನ ಪ್ರಕಟಿಸಿರುವ ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ ಪುಸ್ತಕದ ಲೇಖಕಿ ಡಾ. ಹೆಚ್. ಎಸ್. ಅನುಪಮ ಮಾತುಗಳು.
ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನಸಾಮಾನ್ಯರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎಂದು ಕರೆಸಿಕೊಳ್ಳುತ್ತಿದೆ. ವೈಚಾರಿಕ ಜಾಗೃತಿ ಮೂಡಿಸಬೇಕಾದ ಆಧುನಿಕ ಶಿಕ್ಷಣ ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ. ಶಿಕ್ಷಣ ಮೂಲಭೂತ ಹಕ್ಕು ಎನ್ನುವ ಹೊತ್ತಿಗೆ ಅದು ಖಾಸಗೀಕರಣಗೊಂಡಿದೆ. ನಗರ ಪ್ರದೇಶಗಳಲ್ಲಿ ಶಿಕ್ಷಣಸಂಸ್ಥೆ ತೆರೆಯುವುದೇ ಒಂದು ಉದ್ಯಮವಾಗಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವವರು ಶಿಕ್ಷಣತಜ್ಞರೆನಿಸಿಕೊಂಡಿದ್ದಾರೆ!
ಇದೆಲ್ಲದರ ನಡುವೆ ಸೇವೆ ಎಂಬ ಪದ ಅಂತರ್ಧಾನವಾಗಿದೆ.
ಭಾರತದ ಇವತ್ತಿನ ದೊಡ್ಡ ಪರಿತಾಪ ಜಾತಿ-ಧರ್ಮಗಳ ನಡುವಿನ ಅಸಹಿಷ್ಣುತೆ ಮತ್ತು ಕದಡುತ್ತಿರುವ ಕೋಮುಸೌಹಾರ್ದ ಮನೋಭಾವ. ಪ್ರತಿ ಮನುಷ್ಯನ ಸುತ್ತಲೂ ಭಾಷೆ-ರಾಜ್ಯ-ಧರ್ಮ-ಜಾತಿ-ಉಪಜಾತಿಗಳೆಂಬ ಗುರುತುಗಳು ಹಲವು ಸ್ತರಗಳ ಬೇಲಿ ನಿರ್ಮಿಸುತ್ತಿವೆ. ಹೀಗಿರುತ್ತ ಮಾನವನನ್ನು ಮಾನವನನ್ನಾಗಿ ನೋಡುವ; ಪ್ರಶ್ನಿಸಿಯೇ ಒಪ್ಪಿಕೊಳ್ಳುವ; ನಿನಗಷ್ಟೆ ಅಲ್ಲ, ಪರರಿಗಾಗಿಯೂ ಬದುಕು ಎಂದು ಕಲಿಸುವ ಶಿಕ್ಷಣ ಪ್ರತಿ ಮಗುವಿಗೆ ದೊರೆತರಷ್ಟೇ ಭವಿಷ್ಯದ ಜಗತ್ತು ಸುಂದರವಾಗಲಿದೆ. ಎಂದೇ ಮಕ್ಕಳೆಂಬ ಬಿಳಿಹಾಳೆಯ ಜೊತೆಗೆ, ಮುಗ್ಧತೆಯ ಬಾಲ್ಯದ ಜೊತೆಗೆ ಬೆಸೆತುಕೊಂಡಿರುವ ಶಿಕ್ಷಕ ವೃತಿ ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅತ್ಯಂತ ಜವಾಬ್ದಾರಿಯ ಕೆಲಸವಾಗಿ ಪರಿಗಣಿಸಲ್ಪಟ್ಟಿದೆ.
ಆದರೆ ಮಕ್ಕಳನ್ನು ಓದಿನ ಜೀತಕ್ಕೆ ಹಚ್ಚಿರುವ ನಾವು ಸಾಕ್ಷಿಯಾಗಿರುವ ಭಾವೀ ಪ್ರಜೆಗಳ ಸ್ಥಿತಿ ಹೇಗಿದೆ? ಪರೀಕ್ಷೆಯೆಂಬ ಕಡಿದಾದ ಬೆಟ್ಟ. ಬೆನ್ನ ಮೇಲೆ ಪುಸ್ತಕಗಳ ಹೊರೆ, ಪಾಲಕರ ನಿರೀಕ್ಷೆಯ ಹೊರೆ, ಭವಿಷ್ಯ ಕುರಿತ ಕಾತರದ ಹೊರೆ. ಎದುರು ಹರಡಿರುವ ಅವಕಾಶಗಳ ಕಿರುದಾರಿಯಲ್ಲಿ ನಾಮುಂದು ತಾಮುಂದು ಎಂದು ನುಗ್ಗಬಯಸುವ ಮಂದೆ..
ಈಗ ಕಲಿಸುವ ಶಾಲೆಗಳಿಗೆ ಕೊರತೆಯಿಲ್ಲ. ತರಬೇತಿ ಪಡೆದ ಶಿಕ್ಷಕರಿಗೆ ಕೊರತೆಯಿಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದಾದ ಮೇಲೆ ಊರೂರುಗಳಲ್ಲಿ ಶಾಲೆ ತೆರೆಯಲೂ ಯಾವ ಅಡ್ಡಿಯಿಲ್ಲ. ಆದರೆ ಕಲಿಕೆಯ `ಸಾಧನೆ’ಯನ್ನು ಪಾಲಕರೂ, ಮಕ್ಕಳೂ ಜೀವನ್ಮರಣದ ಪ್ರಶ್ನೆಯೆಂಬಂತೆ ಭಾವಿಸುವುದರಿಂದ ಓದು ಹೊರೆಯಾಗಿದೆ. ಇವತ್ತಿನ ತಾರತಮ್ಯ, ಅವಮಾನಕ್ಕೆ ಜಾತಿ, ವರ್ಗಗಳ ಜೊತೆಗೆ ಮಗು ಗಳಿಸಿದ ಅಂಕವೂ ಒಂದು ಕಾರಣವಾಗಿದೆ! ಜಾತಿ/ಧರ್ಮ/ವರ್ಗ ಯಾವುದೇ ಇರಲಿ, ಅಂಕಗಳಿಕೆಯಲ್ಲಿ ಹಿಂದೆ ಬಿದ್ದಿರುವ ಮಗು ಹಿಂಸೆ ಅನುಭವಿಸುತ್ತದೆ. ಬಹಳಷ್ಟು ಮಕ್ಕಳಿಗೆ ಇದೇ ಕಾರಣದಿಂದ ಶಾಲೆ ಖುಷಿ ಕೊಡುವ ಸ್ಥಳದ ಬದಲು ಜೈಲಿನಂತೆ ಕಾಣತೊಡಗಿದೆ.
ಶಾಲೆಗೆ ಹೋಗುವ, ಶಾಲೆಯಿರುವ ಮಕ್ಕಳ ಕಷ್ಟ ಈ ರೀತಿಯದಾದರೆ ಶಾಲೆಗೆ ಹೋಗದ, ನಡುವಿಗೇ ಶಾಲೆ ಬಿಡಬೇಕಾದವರ ಕಷ್ಟಗಳು ಇನ್ನೊಂದು ತೆರನಾಗಿವೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗೆ ಹೇಗೋ ಹೋಗುವ ಮಕ್ಕಳು ಹೈಸ್ಕೂಲಿಗೆ ಬೆನ್ನು ತಿರುಗಿಸುತ್ತಾರೆ. ಕಾಲೇಜು, ಪದವಿ ಎನ್ನುವ ಹೊತ್ತಿಗೆ ಬಹುಪಾಲು ಮಕ್ಕಳು ಕಲಿಕೆಯಿಂದ ಹಿಂದೆ ಸರಿದಿರುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆಯಿರುವ ಸರ್ಕಾರಿ ಶಾಲೆಗಳು ಮುಚ್ಚತೊಡಗಿದ್ದರೆ ಅಲೆಮಾರಿ/ದಲಿತ/ಆದಿವಾಸಿ ಸಮುದಾಯದ ಲಕ್ಷಾಂತರ ಮಕ್ಕಳು ಶಾಲೆಯ ಮುಖವನ್ನೇ ಕಾಣಲಾಗದೆ ಇವೆ. ಕಲಿತ ವಿದ್ಯೆ ಅನ್ನ ನೀಡೀತೆಂಬ ಭರವಸೆ ಇಲ್ಲದೆ ಗ್ರಾಮೀಣ ಭಾಗಗಳಲ್ಲಿ ಉನ್ನತ ಶಿಕ್ಷಣಕ್ಕಿರುವ ಒತ್ತು ಬರಬರುತ್ತ ಕಡಿಮೆಯಾಗುತ್ತಿದೆ.
ಶಿಕ್ಷಣ ವ್ಯವಸ್ಥೆ, ಅದರಲ್ಲಿರುವ ತಾರತಮ್ಯ, ಮಾತೃಭಾಷೆಗಿರುವ ಅಸಡ್ಡೆ ಕಣ್ಣಿಗೆ ರಾಚುತ್ತಿರುವಾಗಲೇ, ಶಾಲಾಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ದಿಗಿಲು ಹುಟ್ಟಿಸುವಂತಿದೆ. ಬಾಲಾಪರಾಧಿಗಳ ಸಂಖ್ಯೆಯೂ ಏರುತ್ತಿದೆ. ಪ್ರಾಥಮಿಕ ಶಾಲೆಗಳಲ್ಲಿ 80% ಹಾಗೂ ಹೈಸ್ಕೂಲು-ಕಾಲೇಜುಗಳಲ್ಲಿ 65-70% ಬೋಧಕ ಸಿಬ್ಬಂದಿ ಮಹಿಳೆಯರೇ ಆಗಿದ್ದರೂ ಹೆಣ್ಣುಮಗುವಿಗೆ ಶಾಲೆ ಸುರಕ್ಷಿತ ಸ್ಥಳವಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿದೆ.
ಹೀಗೆ ಶಿಕ್ಷಣ ಕ್ಷೇತ್ರವು ಹಲವಾರು ಸಮಸ್ಯೆಗಳಲ್ಲಿ ಗೊಂದಲದ ಗೂಡಾಗಿ ಮುಂದುವರೆದಿರುವಾಗ ಇದು ಯಾರಿಗೂ ಅರ್ಥವಾಗಿಲ್ಲ ಎಂದಲ್ಲ. ಬಹಳ ಜನರಿಗೆ ಈ ದೇಶದ ಸಾಮಾಜಿಕ ಪರಿಸ್ಥಿತಿ, ಶೈಕ್ಷಣಿಕ ಪರಿಸ್ಥಿತಿ, ಅವುಗಳ ಸಮಸ್ಯೆ-ಕಾರಣಗಳೆಲ್ಲ ಅರ್ಥವಾಗಿವೆ. ಆದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಕಡಿಮೆಯಾಗಿದ್ದಾರೆ. ತಾವೇ ಉದಾಹರಣೆಯಾಗಿ, ಸ್ಫೂರ್ತಿ ನೀಡುವ ಮಾದರಿಯಾಗಿ ಮಕ್ಕಳನ್ನು ಪ್ರಭಾವಿಸುವ; ಸಮಾಜವನ್ನೆದುರಿಸಿ ನಿಂತು ಅವಕಾಶ ವಂಚಿತರಿಗೆ ಕಲಿಸಹೊರಡುವ ಹುಮ್ಮಸ ಕಡಿಮೆಯಾಗುತ್ತಿದೆ.
ವಿಶ್ವಾದ್ಯಂತ ಧರ್ಮದ ಹೆಸರಿನಲ್ಲಿ ಮಹಿಳೆಯರ ಹಾಗೂ ಮಕ್ಕಳ ಬದುಕುವ ಅವಕಾಶ, ಹಕ್ಕು ಮೊಟಕುಗೊಳ್ಳುತ್ತಿದೆ. ಗುಂಡೇಟಿಗೊಳಗಾಗಿ ಬದುಕುಳಿದ ಮಲಾಲಾ; ಬೋಕೋ ಹರಾಂ ಸಂಘಟನೆಯಿಂದ ಅಪಹರಣಕ್ಕೊಳಗಾಗಿ ನಾಪತ್ತೆಯಾಗಿರುವ 250ಕ್ಕಿಂತ ಮಿಗಿಲು ಸಂಖ್ಯೆಯ ಆಫ್ರಿಕಾದ ಹೆಣ್ಣುಮಕ್ಕಳು; ಭಯೋತ್ಪಾದಕರ ದುಷ್ಟ ಕೃತ್ಯಕ್ಕೆ ಬಲಿಯಾದ ಪೇಶಾವರ ಶಾಲೆಯ ಮಕ್ಕಳು; ಧರ್ಮದ ಕಟ್ಟಾ ಅನುಯಾಯಿಗಳು ಎಳೆಯರಲ್ಲಿ ತುಂಬುತ್ತಿರುವ ಹುಸಿ ಧಾರ್ಮಿಕತೆ – ಇವು ಆಧುನಿಕ ಶಿಕ್ಷಣ ಮತ್ತು ಅದು ಕೊಡಮಾಡುವ ವಿಶ್ವಭ್ರಾತೃತ್ವ ಭಾವದಿಂದ ಮಕ್ಕಳು ವಂಚಿತರಾಗಲು ಕಾರಣವಾಗಿವೆ. ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿನ ಜಾತಿಯೆಂಬ ಗಾಯವನ್ನು ಧರ್ಮದ ಬಂಡೆಗೆ ಉಜ್ಜಿಉಜ್ಜಿ ಮತ್ತೆ ಹಸಿಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಹೀಗಿರುವಾಗ ಜಾತಿರಹಿತ ಸಮಾಜಕ್ಕಾಗಿ ಕನಸಿದ ಫುಲೆಗಳನ್ನು ಹೊಸ ಅರಿವಿನೊಂದಿಗೆ, ಹೊಸ ಬೆಳಕಿನೊಂದಿಗೆ ತಿಳಿಯುವುದು ಭಾರತೀಯರಿಗೆ ಅವಶ್ಯವಾಗಿದೆ. ಭಾರತೀಯ ಸಮಾಜದ ಕೆಡುಕುಗಳ ಮೂಲವನ್ನು ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರ ಆದರ್ಶವಾಗಬೇಕಿದೆ. ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರ ಧಿಕ್ಕರಿಸಿ ನಿಂತು ಅಕ್ಷರ ಕಲಿಯಬಾರದವರಿಗೆ ಓದುಬರಹ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೇ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ. ಅಂತಹ ಒಂದು ತಾಯ್ತನದ ಚೇತನದ ಶಿಸ್ತು, ಬದ್ಧತೆ, ತ್ಯಾಗ ಮತ್ತು ಸಹನೆಯ ಜೀವನ ಪಾಠಗಳನ್ನು ಓದಿಕೊಳ್ಳಬೇಕಾದ, ಅವರ ಚೈತನ್ಯವು ವಿಶ್ವದ ಎಲ್ಲೆಡೆ ಹರಡಬೇಕಾದ ತುರ್ತು ಮತ್ತೆ ಬಂದಿದೆ.
ಎಂದೇ ಈ ಕಿರು ಹೊತ್ತಗೆ ಸಿದ್ಧವಾಗಿದೆ.
ಅಂಥ ಕೆಲ ಚೇತನಗಳಿರುತ್ತವೆ: ಅವರು ನಮ್ಮೆದೆಗೆ ಎಷ್ಟು ಹತ್ತಿರವಾಗುತ್ತಾರೆಂದರೆ ಅವರನ್ನು ಮಹಾತ್ಮಾ, ಬಾಬಾ, ಮಾತೆ ಎಂಬಿತ್ಯಾದಿ ವಿಶೇಷಣಗಳಿಂದ ಗುರುತಿಸುವುದು ಸಾಧ್ಯವಾಗುವುದಿಲ್ಲ. ಅವರು ನಮ್ಮೊಳಗೆ ಸಂವಾದಿಸುತ್ತ ಬೆಳೆಯುವ ಕಾರಣದಿಂದ ಗಾಂಧಿಯ ಮುಂದೆ ಜಿ, ಅಂಬೇಡ್ಕರರ ಹಿಂದೆ ಬಾಬಾ, ಜೋತಿಬಾ ಹಿಂದೆ ಮಹಾತ್ಮ, ಸಾವಿತ್ರಿ ಬಾಯಿ ಹಿಂದೆ ಮಾತೆ, ಚೆಗೆವಾರನ ಹಿಂದೆ ಕಾಮ್ರೇಡ್ ಮೊದಲಾದ ಉಪಶೀರ್ಷಿಕೆಗಳು ವಜ್ಜೆ ಎನಿಸುತ್ತವೆ. ಇಂಥ ಗುಣವಿಶೇಷಣ, ನಾಮವಿಶೇಷಣಗಳು ನಮ್ಮ ಅವರ ನಡುವೆ ಗೋಡೆಯಂತೆ ನಿಂತು ಅವರನ್ನು ಮನುಷ್ಯರಾಗಿ ಅರಿಯುವಲ್ಲಿ, ಮನುಷ್ಯ ಪ್ರಯತ್ನಗಳ ವಿಸ್ತಾರ ಅರಿಯುವಲ್ಲಿ, ನಮ್ಮೊಳಗು ಮಾಡಿಕೊಳ್ಳುವಲ್ಲಿ ತೊಡಕು ಮಾಡುತ್ತವೆ. ಎಂದೇ ಈ ಪುಸ್ತಕದಲ್ಲಿ ಮಹಾತ್ಮ, ಮಾತೆ ಪದಗಳು ಕಾಣದಾಗಿವೆ.
ಬೆಳಕಿನ ದಾರಿಗೇಕೆ ಹಿಲಾಲು, ಪಂಜು? ಬನ್ನಿ, ದೀಪಧಾರಿಗಳ ಜಾಡನರಸುವ..
No comments:
Post a Comment