ಕ್ರಾಂತಿ ಜ್ಯೋತಿ ಪುಸ್ತಕದ ಒಂದು ಆಯ್ದ ಅಧ್ಯಾಯ "ಹಿಂಗ್ಯಾಕೆ"ಯ ಓದುಗರಿಗಾಗಿ....
ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಿತ್ತು. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು.
ವೃತ್ತಿಗೊಂದೊಂದು ಜಾತಿ ಸೃಷ್ಟಿಯಾಗಿ ಭಾರತೀಯ ಸಮಾಜ ನೂರಾರು ತುಂಡುಗಳಾಗಿ ಒಡೆದು ಪ್ರತಿಯೊಂದೂ ಮೇಲಾಟ, ಒತ್ತುವರಿ, ಪರಸ್ಪರ ಹಗೆತನ, ಶ್ರೇಷ್ಠತೆಯ ಪ್ರತಿಪಾದನೆಯಲ್ಲಿ ತೊಡಗಿದ್ದವು. ಜಾತಿವ್ಯವಸ್ಥೆ ಸೃಷ್ಟಿಸಿದವರು ಪರಮೋಚ್ಛ ಸ್ಥಾನದಲ್ಲಿ ಕುಳಿತು ಜ್ಞಾನ ಹಾಗೂ ಅಧಿಕಾರವೆಂಬ ಎರಡೂ ಸಂಪನ್ಮೂಲಗಳ ಮೇಲೆ ಏಕಾಧಿಪತ್ಯ ಸಾಧಿಸಿದ್ದರು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದರು. ಅವರ ಹೊರತು ಮತ್ತಾರಿಗೂ ಕಲಿಕೆಗೆ ಅವಕಾಶವಿರಲಿಲ್ಲ. ಒಂದುವೇಳೆ ಕಲಿತದ್ದೇ ಆದರೆ ಅದು ಉಲ್ಲಂಘನೆ ಎನಿಸಿಕೊಳ್ಳುತ್ತಿತ್ತು. ಅದಕ್ಕೆ ಕಠೋರ ದೈಹಿಕ ಶಿಕ್ಷೆಯಷ್ಟೇ ಅಲ್ಲ, ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳೂ ಜಾರಿಯಾಗುತ್ತಿದ್ದವು.
ಆ ಕಾಲದ ಮಹಿಳೆಯರ ಶಿಕ್ಷಣ ಕುರಿತು ಹೇಳುವಂತೇ ಇಲ್ಲ. ಮನು ಹೇಳಿದನಂತೆ: ಹೆಣ್ಣು ಅಬಲೆ, ಅವಳು ಸದಾ ಅಧೀನಳಾಗಿರಬೇಕು. ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಗಂಡುಮಕ್ಕಳು ಅವಳ ದೇಖರೇಖೆ ನೋಡಿಕೊಳ್ಳಬೇಕು. ಕಲಿಕೆಗೆ ಅವಳಿಗೆ ಅಧಿಕಾರವಿಲ್ಲ. ತಿಂಗಳಲ್ಲಿ ಮೂರು ದಿನ ಹೊರಗುಳಿಯುವವಳಾದ್ದರಿಂದ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ಆಚರಣೆ, ಜ್ಞಾನ ಅಥವಾ ಅಧಿಕಾರಕ್ಕೂ ಅವಳಿಗೆ ಅವಕಾಶವಿಲ್ಲ. ಮನು ಹೀಗೆ ಹೇಳಿದ್ದನ್ನು ಪಾಲಿಸುವವರು, `ಹೆಣ್ಣು ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯತೊಡಗುತ್ತಾಳೆ. ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಕಾಯಿಲೆ ಹಿಡಿದು ಬೇಗ ತೀರಿಕೊಳ್ಳುತ್ತಾನೆ’ ಎಂದು ಹೆದರಿಸುತ್ತಿದ್ದರು. ಹೆಣ್ಣುಮಗು ತನ್ನ ಬಾಲ್ಯದ ಮುಗ್ಧತೆಯಲ್ಲಿ ಜಗತ್ತಿಗೆ ಕಣ್ಬಿಡುವ ಹೊತ್ತಿಗೆ ಅವಳ ಮದುವೆಯಾಗಿ, ಯಾರದೋ ಹೆಂಡತಿಯಾಗಿ, ಸೊಸೆಯಾಗಿ ಕೊನೆಗೆ ಅಮ್ಮನಾಗಿ ಬಿಟ್ಟಿರುತ್ತಿದ್ದಳು. ಕುಟುಂಬ ನಿರ್ವಹಣೆಗಾಗಿ, ಕುಟುಂಬ ನಿರ್ವಹಣೆಯಿಂದಲೇ ಅವಳ ವ್ಯಕ್ತಿತ್ವ ರೂಪುಗೊಂಡು ಬದುಕು ಅಲ್ಲೇ ಕಳೆದುಹೋಗುತ್ತಿತ್ತು. ಹೆಣ್ಮಕ್ಕಳು ಯಾವತ್ತೂ ಪ್ರಶ್ನಿಸಬಾರದಂತೆ ಹೊರುವ, ಹೆರುವ, ಪೊರೆಯುವ ಕೊನೆಮೊದಲಿಲ್ಲದ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿತ್ತು.
ಒಟ್ಟಾರೆ ಶೂದ್ರಾತಿಶೂದ್ರ-ಮಹಿಳೆಯರಿಗೆ ವಿದ್ಯೆ ಎನ್ನುವುದು ಕನಸಿನಲ್ಲೂ ಮೂಡಲಾಗದ ಅಸ್ಪಷ್ಟ ಕಲ್ಪನೆಯಾಗಿಯೇ ಉಳಿದಿತ್ತು. ಲಿಂಗಸಮಾನತೆ ಎಂಬ ಪದ ಹೆಣ್ಣಿನ ಮನೋಕ್ಷಿತಿಜದಲ್ಲಿ ಎಂದೂ ಊಹಿಸಲಾರದ ಮೌಲ್ಯವಾಗಿತ್ತು.
ಹೀಗಿರುತ್ತ ಸವಲತ್ತು ಅನುಭವಿಸುತ್ತಿದ್ದವರಿಗೆ ಭಾರತೀಯ ಸಮಾಜವು ಉದಾತ್ತವೆಂದೂ, ಸನಾತನವೆಂದೂ ಕಾಣುತ್ತಿದ್ದರೆ ತಳಸಮುದಾಯಗಳಿಗೆ ಜಾತಿ ಹೆಸರಿನಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ಭಾವನೆ ಬಲಿಯತೊಡಗಿತ್ತು. ಧಾರ್ಮಿಕ ನೆಲೆಯಲ್ಲಿ ಭಕ್ತಿ ಚಳುವಳಿಯು ಜಾತಿ ಅಸಮಾನತೆಯನ್ನು ಪ್ರಶ್ನಿಸಿದ್ದರೂ ಅದನ್ನು ಸಾಮಾಜಿಕ ಚಳುವಳಿಯೋಪಾದಿಯಲ್ಲಿ ಒಯ್ಯುವ ಮನೋಭೂಮಿಕೆ ಸೃಷ್ಟಿಯಾಗಿರಲಿಲ್ಲ.
ಅದೇ ವೇಳೆಗೆ ವಸಾಹತುಶಾಹಿಗಳು ಬಂದರು. 19ನೇ ಶತಮಾನದ ವೇಳೆಗೆ ಬದಲಾಗಲಾರದೆಂದೇ ನಂಬಲಾಗಿದ್ದ ಜಾತಿ ಸಂಬಂಧಗಳಲ್ಲಿ ಕೊಂಚ ಸಂಚಲನ ಕಂಡುಬಂತು. ಕೆಲವು ಜಾತಿಗಳು ಶ್ರೇಣಿಯಲ್ಲಿ ತಾವು ಮೇಲೆ ಹೋಗಲು ಯತ್ನಿಸಿದರೆ ಮತ್ತೆ ಕೆಲವು ಜಾತಿಗಳು ಜಾತಿಪದ್ಧತಿಯನ್ನೇ ಪ್ರಶ್ನಿಸಿ ಅದನ್ನು ಬದಲಾಯಿಸುವ ಅಬ್ರಾಹ್ಮಣ ಚಳುವಳಿಯನ್ನು ಹುಟ್ಟುಹಾಕಿದವು. ಅಬ್ರಾಹ್ಮಣ ಚಳುವಳಿಯು ಬ್ರಾಹ್ಮಣ ಶ್ರೇಷ್ಠತೆಯನ್ನು ಆಕ್ಷೇಪಾರ್ಹಗೊಳಿಸಿತು.
19ನೇ ಶತಮಾನದಲ್ಲಿ ಕೆಲವು ಮಧ್ಯಮವರ್ಗದ ಭಾರತೀಯರು ತಮಗೆ ದೊರೆತ ಶಿಕ್ಷಣದ ಪ್ರಭಾವದಿಂದ ಹಿಂದೂ ಧರ್ಮದ, ಭಾರತೀಯ ಸಮಾಜದ ಅನಿಷ್ಟಗಳನ್ನು ಎತ್ತಿ ತೋರಿಸಿ, ಸೂಕ್ತ ಮಾದರಿಯನ್ನು ಸೂಚಿಸುವ ಉದಾರವಾದಿ ಪ್ರಯತ್ನಗಳಿಗೆ ಮುಂದಾದರು. ಮತ್ತೆ ಕೆಲವರು ದುಷ್ಟ ಆಚರಣೆಗಳನ್ನು ತಾತ್ವಿಕವಾಗಿ ಪ್ರಶ್ನಿಸಿ ಸುಧಾರಣೆಗಾಗಿ ಹೊಸ ಸಂಸ್ಥೆಗಳನ್ನು ಹುಟ್ಟುಹಾಕಿದರು. ಹಾಗೆ ಉದಾರವಾದಿ, ಸುಧಾರಣಾವಾದಿ ಕ್ರಮಗಳಿಗೆ ಕೈಹಾಕಿದ ಬಹುಪಾಲು ತರುಣರು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಆಗಿದ್ದರು. ಆದರೆ ಈ ವ್ಯವಸ್ಥೆಯ ಬಾಧಿತರ ದೃಷ್ಟಿಕೋನ ಭಿನ್ನವಾಗಿತ್ತು. ಅವರು ವ್ಯವಸ್ಥೆ ಬದಲಾಗಬೇಕೆಂದು ಆಮೂಲಾಗ್ರವಾಗಿ ಕ್ರಾಂತಿಕಾರಿ ಪ್ರಯತ್ನಗಳನ್ನು ನಡೆಸಿದರು. ಪರ್ಯಾಯ ಕಟ್ಟಲು ಹೊರಟರು.
ದೇಶವು ರಾಜಕೀಯ ಸ್ವಾತಂತ್ರ್ಯ ಬೇಕೆಂದು ಪ್ರತಿಪಾದಿಸುತ್ತ ರಾಷ್ಟ್ರೀಯ ಹೋರಾಟ ರೂಪುಗೊಳ್ಳತೊಡಗಿದ ಕಾಲದಲ್ಲಿ ಸಾಮಾಜಿಕ ಬದಲಾವಣೆ-ಸುಧಾರಣೆ ಆಗಬೇಕೆಂದು ಪ್ರತಿಪಾದಿಸುವ ಮತ್ತೊಂದು ಧಾರೆಯ ಹೋರಾಟವೂ ಶುರುವಾಯಿತು. ಮೇಲ್ಜಾತಿ/ವರ್ಗಗಳಿಗೆ ರಾಷ್ಟ್ರೀಯ ಹೋರಾಟ ಮುಖ್ಯವೆನಿಸಿದರೆ, ತಳಸಮುದಾಯಗಳು ಹಾಗೂ ಇಂಗ್ಲಿಷ್ ವಿದ್ಯಾಭ್ಯಾಸದಿಂದ ಪ್ರೇರಿತರಾದ ತರುಣರಿಗೆ ಸಾಮಾಜಿಕ ಬದಲಾವಣೆ ತುರ್ತು ಅವಶ್ಯಕತೆಯೆನಿಸಿತು. ರಾಷ್ಟ್ರವಾದಿಗಳಿಗೆ ಬ್ರಿಟಿಷರು ದೇಶ ಬಿಟ್ಟೋಡಿಸಬೇಕಾದ ವೈರಿಗಳಂತೆ ಕಂಡರೆ, ಶೂದ್ರಾತಿಶೂದ್ರರಿಗೆ ಇಂಗಿಷ್ ಶಿಕ್ಷಣ ಮತ್ತು ಉದ್ಯೋಗಾವಕಾಶ ನೀಡಿದ ಬ್ರಿಟಿಷರು ವಿಮೋಚಕರಂತೆ ಕಂಡುಬಂದರು. ಮೊದಲ ರಾಷ್ಟ್ರೀಯ ಹೋರಾಟವೆಂದು ಬಣ್ಣಿಸಲ್ಪಡುವ ಸಿಪಾಯಿದಂಗೆಯನ್ನು ಜೋತಿಬಾ, `ಅದು ಹೋರಾಟವಲ್ಲ, ಬ್ರಾಹ್ಮಣ ಭಟ್ಟ, ಭಿಕ್ಷುಗಳು ಬ್ರಿಟಿಷರ ವಿರುದ್ಧ ಎದ್ದ ದಂಗೆ. ಧನ್ಯವಾದ ದೇವರೇ, ನಮ್ಮ ತಾಯ್ತಂದೆಯರಂತಿರುವ ಬ್ರಿಟಿಷರು ಆ ಯುದ್ಧ ಗೆದ್ದರು’ ಎಂದು ತಮ್ಮ ವಿಶ್ವಾಸವನ್ನು ಬ್ರಿಟಿಷರ ಪರವಾಗಿ ಪ್ರಕಟಿಸಿದ್ದರು.
***
ಈ ನೆಲ ಋತುವಿಗೊಂದೊಂದು ಬಣ್ಣ ಧರಿಸುತ್ತದೆ; ಊರಿಗೊಂದೊಂದು ಬಣ್ಣ, ಗಮಲು ಹೊಂದಿದೆ. ಪ್ರತಿ ವರುಷವೂ ಮಳೆಯನ್ನು ಬರಮಾಡಿಕೊಳ್ಳುತ್ತೇವೆ; ಎಲ್ಲಿಂದಲೋ ಕಸಕೊಳೆಮೆಕ್ಕಲು ಮಣ್ಣನ್ನು ಕೊಚ್ಚಿ ತರುವ ನೆರೆಯನ್ನೂ ಎದುರುಗೊಳ್ಳುತ್ತೇವೆ. ಕುಡಿಯಲು ಹನಿ ನೀರೂ ಸಿಗದ ಬರವನ್ನು ಎದುರಿಸುತ್ತೇವೆ; ಇದ್ದ ನೀರು ಬಳಸಿಕೊಳ್ಳಲು ಬಿಡದ ಗಡಿ, ಯುದ್ಧಗಳಿಂದ ಬಸವಳಿಯುತ್ತೇವೆ. ಹಲವೆಂಟು ಜೀವಸಂಕಟಗಳ ಎದುರಿಸಿದರೂ ಸಾವಿರಾರು ವರ್ಷಗಳಿಂದ ಸಿಂಧುಗಂಗಾಗೋದಾವರಿಕಾವೇರಿ ಬಯಲಿನ ಜನಬದುಕು ಉಳಿದು ಬಂದಿದೆ.
ಇಲ್ಲಿ ಹಲವು ಧರ್ಮಗಳು ಅನುಸರಿಸಲ್ಪಡುತ್ತವೆ; ಹಲವು ನುಡಿಗಳು ಆಡಲ್ಪಡುತ್ತವೆ. ಹತ್ತುಹಲವು ಕಸುಬುಗಳಿವೆ. ಆಯಾ ಕಸುಬುಗಳಿಂದಲೇ ರೂಪುಗೊಂಡ ಹಲವು ಕುಲಜಾತಿಗಳಿವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಹೆಣ್ಣುಗಳು ಭೂಮಿಗೆ ಬರುವ ಮೊದಲೇ ಕೊನೆಯುಸಿರೆಳೆಯುತ್ತಿವೆ. ತಾರತಮ್ಯ ಅನುಭವಿಸುತ್ತ ಬದುಕಿರುವುದೇ ತಮ್ಮ ಪುಣ್ಯ ಎಂದು ಭಾವಿಸುತ್ತವೆ. ಮತ್ತೆಷ್ಟೋ ಹೆಣ್ಣು ಜೀವಗಳು ಹೇಗೆ ಹೋದರು, ಎಲ್ಲಿ ಹೋದರು, ಏನಾದರು ಎಂದೂ ತಿಳಿಯದೇ, ಅಳುವವರೂ ಇಲ್ಲದೇ, ಈ ನೆಲದ ಮೇಲಿಂದ ಖಾಯಮ್ಮಾಗಿ ನಾಪತ್ತೆಯಾಗುತ್ತವೆ.
ಹೀಗಿರುತ್ತ, ಒಂದೂಮುಕ್ಕಾಲು ಶತಮಾನ ಹಿಂದೆ ಅಂಥ ಜೀವಗಳು ಹುಟ್ಟಿದವು. ಅವು ಈ ನೆಲದ ಶೂದ್ರಾತಿಶೂದ್ರರು, ಹೆಣ್ಣುಮಕ್ಕಳು ಅನುಭವಿಸುತ್ತಿರುವ ತಾರತಮ್ಯದ ಮೂಲ ಯಾವುದು? ಅದಕ್ಕೆ ಪರಿಹಾರ ಏನು? ಎಂದು ತಮ್ಮ ಜ್ಞಾನ ಪರಿಧಿಯನ್ನೆಲ್ಲ ವಿಸ್ತಾರಗೊಳಿಸಿ ಆ ತಿಳಿವಿನ ಬೆಳಕಿನಲ್ಲಿ ವಿಶ್ಲೇಷಣೆ ನಡೆಸಿದರು. ಸಾವಿರಾರು ವರ್ಷಗಳ ನಾಗರಿಕತೆಯೆಂಬ ಹೆಗ್ಗಳಿಕೆಯ ಈ ಸಮಾಜವನ್ನು ಸ್ವವಿನಾಶದ ಕೂಪದಿಂದ ಎತ್ತಬೇಕಾದರೆ ಶೂದ್ರಾತಿಶೂದ್ರರು ಹಾಗೂ ಮಹಿಳೆಯರು ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಬೇಕು ಎಂದು ಕನಸಿದರು. ಸಮಾಜದ ಎಲ್ಲ ಅನಿಷ್ಟಗಳಿಗೂ ಕಾರಣವಾದ ಜಾತಿಪದ್ಧತಿ ಅಳಿಯಬೇಕೆಂದು ಚಾಲ್ತಿಯಲ್ಲಿದ್ದ ಬಹುಪಾಲು ವ್ಯವಸ್ಥೆ/ಆಚರಣೆ/ನಂಬಿಕೆಗಳಿಗೆ ಸವಾಲೆಸೆದರು. ಜ್ಞಾನದ ಮೇಲಿನ ಸರ್ವರ ಹಕ್ಕುಗಳ ಎತ್ತಿ ಹಿಡಿದು ಶಾಲೆ ತೆರೆದರು. ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವ ವಿರೋಧಿಸಿದರು. ವಿಧವೆಯರ ಮಾನವ ಹಕ್ಕುಗಳ ಎತ್ತಿ ಹಿಡಿದು ಮರುವಿವಾಹವನ್ನು ಪ್ರತಿಪಾದಿಸಿದರು. ಅಸ್ಪøಶ್ಯತೆಯನ್ನು ಕೊನೆಗೊಳಿಸಲು ವಿಶಿಷ್ಟವಾಗಿ ಹೋರಾಡಿದರು. ಎಲ್ಲ ಧರ್ಮಗಳ ಶಾಸ್ತ್ರ-ಪುರಾಣ-ಗ್ರಂಥಗಳ ನಿರಾಕರಿಸಿ ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಪುಸ್ತಕ ಬರೆದರು. ಸತ್ಯಶೋಧಕ ಸಮಾಜ ಕಟ್ಟಿದರು. ಕವಿತೆ ಬರೆದರು, ಭಾಷಣ ಮಾಡಿದರು, ಜನಸಾಮಾನ್ಯನನ್ನು ಯೋಚಿಸಲು ಹಚ್ಚಿ ಸಾಂಸ್ಕøತಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿಯನ್ನೇ ತರಲು ಪ್ರಯತ್ನಿಸಿದರು. ಲಿಂಗಸಮಾನತೆಯೂ ಸೇರಿದಂತೆ ಏನನ್ನು ಪ್ರತಿಪಾದಿಸಿದರೋ ಅದರಂತೆ ಬದುಕಿದರು.
ಆ ಮಹಾನ್ ಚೇತನಗಳೇ ಫುಲೆ ದಂಪತಿಗಳು. ಬಲಾಢ್ಯ ಜಾತಿಯನ್ನೂ, ವ್ಯವಸ್ಥೆಯನ್ನೂ ಎದುರು ಹಾಕಿಕೊಂಡು ಬದುಕಿನ ಕಷ್ಟಗಳಿಗಂಜದೆ ಕ್ರಾಂತಿಕಾರಕ ಪರ್ಯಾಯ ವ್ಯವಸ್ಥೆಯನ್ನು ತರಲೆತ್ನಿಸಿದ ಮೊದಲಿಗರಲ್ಲಿ ಜೋತಿಬಾ ಮತ್ತು ಸಾವಿತ್ರಿ ಬಾಯಿ ಫುಲೆ ಜೋಡಿ ಪ್ರಮುಖವಾದುದು.
ಅವರ ಕನಸುಗಳು ಸೆಕ್ಯುಲರ್ ಭಾರತವು ನೆನಪಿಟ್ಟುಕೊಳ್ಳಲೇಬೇಕಾದ ಆದರ್ಶ ಮಾದರಿಗಳು.
ಆದರ್ಶವನ್ನು ಬೋಧಿಸುತ್ತ ಹೋಗುವುದು ಬೇರೆ. ನಾವು ನಂಬಿದ ಆದರ್ಶಕ್ಕೆ ನಾವೇ ಮಾದರಿಗಳಾಗಿ ನಿಲ್ಲುವುದು ಬೇರೆ. ತಾವು ಪ್ರತಿಪಾದಿಸುವ ಮೌಲ್ಯಕ್ಕೆ ತಾವೇ ಉದಾಹರಣೆಯಾಗಿ ನಿಲ್ಲುವ ಆತ್ಮಶಕ್ತಿ ಬಹಳ ಕಡಿಮೆ ಜನರಲ್ಲಿ ಇರುತ್ತದೆ. ಅಂಥವರಲ್ಲಿ ಸಾವಿತ್ರಿ-ಜೋತಿಬಾ ಎಂಬ ಅಪರೂಪದ ದಂಪತಿಗಳೂ ಸೇರಿದ್ದಾರೆ. ಹೂಮಾರುವ ಮಾಲಿ ಸಮುದಾಯದ ಫುಲೆ ಸಂಗಾತಿಗಳು ಅಸಹಾಯಕರ ರಟ್ಟೆಗಳಲ್ಲಿ ಅರಳಿಸಿದ ಕ್ರಾಂತಿಹೂವಿನ ಕಾರಣದಿಂದ, ಶೋಷಿತರ ಎದೆಯಲ್ಲಿ ಅರಳಿಸಿದ ಅಕ್ಷರ ಹೂವಿನ ಕಾರಣದಿಂದ ಅವರು ಭಾರತೀಯ ಸಮಾಜ ಸುಧಾರಣೆಯ ಯುಗಪ್ರವರ್ತಕರು ಎನ್ನಬಹುದಾಗಿದೆ.
No comments:
Post a Comment