ಕು.ಸ.ಮಧುಸೂದನ್
ಮದುವೆಯಾಗಿ ಬೆಂಗಳೂರಿಗೆ ಬಂದಾಗ ನನಗೆ ಕೇವಲ ಹದಿನೈದು ವರ್ಷ. ಅಕ್ಕನ ಮದುವೆ ನಿಶ್ಚಯ ಮಾಡಿದ್ದ ಅಪ್ಪ ಮದುವೆ ಖರ್ಚಿಗಾಗಿ ಇದ್ದ ಒಂದೂವರೆ ಏಕರೆ ಜಮೀನು ಮಾರಬೇಕಾಗಿ ಬಂತು. ಹಾಗೆ ಜಮೀನು ಮಾರಿದರೆ ಎರಡನೆಯವಳ ಮದುವೆಗೇನು ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ, ಆಗಿನ್ನೂ ಎಸ್.ಎಸ್.ಎಲ್.ಸಿ ಓದುತ್ತಿದ್ದ ನನಗೂ ಮದುವೆ ಮಾಡಿ ತಲೆತೊಳೆದುಕೊಂಡು ಬಿಟ್ಟ. ಹಾಗೇನೆ ನನ್ನ ಮದುವೆಯಾದ ನಾಲ್ಕೇ ತಿಂಗಳಿಗೆ ವಿಷ ಕುಡಿದು ಸತ್ತು ಹೋದ.
ನನ್ನ ಮದುವೆಯಾದವನು ದೊಡ್ಡ ಕುಳವೇನಲ್ಲ. ಬೆಂಗಳೂರಿನಲ್ಲಿ ಸಣ್ಣ ವರ್ಕಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ರೂಮಿನ ತಗಡು ಶೀಟಿನ ಬಾಡಿಗೆ ಮನೆಯಲ್ಲಿ ನಾವು ಸಂಸಾರ ಮಾಡುತ್ತಿದ್ದೆವು. ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ, ಮದುವೆಯಾದ ಎರಡು ವರ್ಷಕ್ಕೆ ಎರಡು ಮಕ್ಕಳನ್ನು ಹೆತ್ತುಬಿಟ್ಟೆ. ನನ್ನ ಗಂಡ ಹತ್ತು ಕಾಸು ದುಡಿದರೆ ಹನ್ನೆರಡು ಕಾಸು ಕುಡಿಯೋನು. ಕುಡಿತಕ್ಕಾಗಿ ಊರ ತುಂಬಾ ಸಾಲ ಮಾಡಿಕೊಂಡಿದ್ದ. ಒಂದು ಕಡೆಯ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡೋದು ಅವನ ಚಾಳಿ. ಕೆಲಸ ಮಾಡುತ್ತಿದ್ದ ವರ್ಕ್‍ಶಾಪಿನಲ್ಲೂ ವರ್ಷಕ್ಕಾಗುವಷ್ಟು ಅಡ್ವಾನ್ಸ್ ತೆಗೆದುಕೊಂಡಿದ್ದರೂ, ಒಳ್ಳೆಯ ಕೆಲಸಗಾರ ಅನ್ನೋ ಕಾರಣಕ್ಕವನನ್ನು ಇಟ್ಟುಕೊಂಡಿದ್ದರು. ಹೀಗೆ ತನಗಿಷ್ಟ ಬಂದಾಗ ದಿನಸಿ ತಂದು ಹಾಕುತ್ತಿದ್ದವನ ಕಾಟ ಸಹಿಸಿಕೊಂಡು ಹೇಗೋ ಜೀವನ ಮಾಡುತ್ತಿದ್ದೆ. ಅಪ್ಪ ಸತ್ತ ಮೇಲೆ ತವರು ಮನೆ ಸೇರಿ, ಅಣ್ಣನ ಮಕ್ಕಳನ್ನು ನೋಡಿಕೊಂಡು ಜೀವನ ಮಾಡುತ್ತಿದ್ದ ಅಮ್ಮನಿಂದ ನನಗೇನೂ ಸಹಾಯವಾಗುವಂತಿರಲಿಲ್ಲ. ಇನ್ನು ನನ್ನ ಗಂಡನ ಮನೆಯವರ ಕಥೆಯಂತೂ ಕೇಳುವುದೇ ಬೇಡ. ಅದು ಕುಡಿದು ಸಾಯಲೆಂದೇ ಹುಟ್ಟಿದ ವಂಶವಾಗಿತ್ತು. ಅವರ ಮನೆಯ ಬಹಳಷ್ಟು ಗಂಡಸರ್ಯಾರು ಆಯಸ್ಸು ಪೂರಾ ಮಾಡಿ ಸಾಯಲೇ ಇಲ್ಲ. ಹೀಗಿರುವಾಗ ನನ್ನ ದೊಡ್ಡ ಮಗಳಿಗೆ ಆರು ವರ್ಷವಾದಾಗ ಹತ್ತಿರದ ಕಾರ್ಪೋರೇಷನ್ ಸ್ಕೂಲಿಗೆ ಸೇರಿಸಿದ್ದೆ. ಸೇರಿಸಿ ಒಂದು ವಾರವಾಗುವ ಹೊತ್ತಿಗೆ, ನನ್ನ ಬದುಕು ಬೀದಿಪಾಲಾಗಿ ಹೋಯಿತು. ಕುಡಿದ ಮತ್ತಿನಲ್ಲಿ ವರ್ಕ್‍ಶಾಪಿನಲ್ಲಿ ಕೆಲಸ ಮಾಡುತ್ತಿದ್ದಾಗ, ಕಾಲುಗಳು ಮಿಷಿನ್ನಿಗೆ ಸಿಕ್ಕು ತುಂಡಾಗಿ ಹೋದವು. ಅವನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ವರ್ಕ್‍ಶಾಪ್‍ನವರು ಮತ್ತಾಕಡೆ ತಲೆ ಹಾಕಲೇ ಇಲ್ಲ. ಮದುವೆಯಾಗುವ ತನಕ ಬೆಂಗಳೂರನ್ನು ನೋಡದೆ ಇದ್ದ ನನಗೆ ಅಂತ ಪ್ರಪಂಚ ಜ್ಞಾನವೂ ಇರಲಿಲ್ಲ. ಸರಿ ಅಂತ ಇದ್ದ ತಾಳಿ, ಮೂಗುಬಟ್ಟು ಮಾರಿ ಅವನನ್ನು ನೋಡಿಕೊಂಡೆ. ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದವನಿಗೆ ಕುಡಿಸಲು ಗಂಜಿಯೂ ಇರದ ಸ್ಥಿತಿಯಿತ್ತು. ನಮ್ಮ ಪಕ್ಕದ ಮನೆಯಲ್ಲಿ ರಾಮಣ್ಣ ಅನ್ನೋರಿದ್ದರು. ಅವರು ಮತ್ತು ಅವರ ಹೆಂಡತಿ ಮಾರ್ಕೆಟ್‍ನಲ್ಲಿ ಹೂ ಮಾರುತ್ತಿದ್ದರು. ಪಾಪ ಅವರು ನಮ್ಮ ಮನೆಗೆ ಒಂದು ತಿಂಗಳಿಗಾಗುವಷ್ಟು ರೇಷನ್ ತಂದು ಹಾಕಿ ನಾವು ಉಪವಾಸದಿಂದ ಸಾಯುವುದನ್ನು ತಪ್ಪಿಸಿದಳು. ಜೊತೆಗೆ ಅವಳಿಗೆ ಪರಿಚಯದವರೊಬ್ಬರಿಗೆ ಮನೆಕೆಲಸದವಳು ಬೇಕಾಗಿದ್ದು ಆ ಕೆಲಸ ಮಾಡುತ್ತೀಯ ಎಂದು ಕೇಳಿದರು. ಬೇರೆ ದಾರಿಯಿಲ್ಲದೆ ಕಂಡವರ ಮನೆ ಮುಸುರೆ ತಿಕ್ಕಲು ಶುರು ಮಾಡಿದೆ. ಇದಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಇನ್ನೊಂದು ಕಷ್ಟ ಎದುರಾಯ್ತು. ಮನೆಯಲ್ಲೇ ಇರುತ್ತಿದ್ದ ನನ್ನ ಗಂಡನಿಗೆ ಪಾಶ್ರ್ವವಾಯು ಹೊಡೆಯಿತು. ಅವನ ಬಲಗೈ ಸ್ವಾಧೀನ ಕಳೆದುಕೊಂಡು ಅವನ ಉಪಚಾರದಲ್ಲಿ ಕೆಲಸಕ್ಕೆ ಸರಿಯಾಗಿ ಹೋಗದಂತಾದ್ದರಿಂದ ಆ ಕೆಲ¸ವನ್ನÀ ಕಳೆದುಕೊಂಡೆ. ಈ ಸಮಯದಲ್ಲೇ ನನ್ನ ಎರಡನೇ ಮಗಳಿಗೆ ಟೈಫಾಯಿಡ್ ಆಗಿ ಆಸ್ಪತ್ರೆಗೆ ಸೇರಿಸಬೇಕಾಯ್ತು. ಕೈಯಲ್ಲೀ ಕವಡೆಕಾಸೂ ಇಲ್ಲ. ಸಾಲದಕ್ಕೆ ಕಷ್ಟಕ್ಕಾಗುತ್ತಿದ್ದ, ರಾಮಣ್ಣನವರ ಸಂಸಾರ, ಯಾವುದೋ ಚೀಟಿ ವ್ಯವಹಾರದಲ್ಲಿ ಸಿಲುಕಿ ಹೇಳದೆ ಕೇಳದೆ ಊರು ಬಿಟ್ಟು ಹೋಗಿದ್ದರು.
ಇಂತಹ ಸಂದರ್ಭದಲ್ಲಿ ನನಗೆ ಆಸ್ಪತ್ರೆಯಲ್ಲಿ ಪರಿಚಯವಾದವಳೆ ಪಾರ್ವತಿ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಬಂದವಳು ಪರಿಚಯವಾದ ದಿನವೇ ಹತ್ತಿರವಾದಳು. ನನ್ನ ನೋವನ್ನು ಯಾರ ಹತ್ತಿರವಾದರೂ ಹೇಳಿ, ಅತ್ತು ಹಗುರವಾಗುವ ಮನಸ್ಸಿನಲ್ಲಿ, ಎರಡು ಮೂರು ದಿನದಲ್ಲಿ ಅವಳ ಬಳಿ ನನ್ನ ಕಥೆಯನ್ನೆಲ್ಲಾ ಹೇಳಿಕೊಂಡೆ. ನನ್ನ ಕಥೆ ಕೇಳಿ ಮರುಗಿದ ಅವಳು ಏನು ಹೆದರಬೇಡ ದೇವರಿದ್ದಾನೆ, ದಾರಿ ತೋರಿಸುತ್ತಾನೆ ಅಂದು, ನನ್ನ ಮನೆಯ ಅಡ್ರೆಸ್ ತೆಗೆದುಕೊಂಡು ಹುಷಾರಾದ ಮೇಲೆ ನಿನ್ನ ಮನೆಗೆ ಬರುತ್ತೇನೆ ಎಂದು ಹೊರಟು ಹೋದಳು. ಮಗಳು ಹುಷಾರಾಗಿ ಮನೆಗೆ ಬಂದ ಮೇಲೆ ಪಾರ್ವತಿಯನ್ನು ಮರೆತುಬಿಟ್ಟಿದ್ದೆ. ನನ್ನ ಕಷ್ಟದಲ್ಲಿ ಅವಳ ನೆನಪಿಟ್ಟುಕೊಂಡು ಏನು ಮಾಡಲಿ? ಆದರೆ ಅದಾದ ಒಂದೇ ವಾರಕ್ಕೆ ಅವಳು ಮನೆಗೇ ಬಂದುಬಿಟ್ಟಳು.
ಬಂದವಳು ಅದೂ ಇದೂ ಮಾತನಾಡುತ್ತಾ ಮುಂದೇನು ಮಾಡ್ತೀಯ ಅಂತ ಕೇಳಿದಳು. ಅಳೋದು ಬಿಟ್ಟು ನನಗೇನು ಗೊತ್ತಾಗ್ತಿಲ್ಲ ಅಂದಾಗ ಸಮಾಧಾನ ಮಾಡಿದವಳು, ನೀನು ತಪ್ಪು ತಿಳಿಯಲ್ಲ ಅಂದರೆ ನಾನು ಮಾಡೋದನ್ನೇ ನೀನು ಮಾಡಬಹುದು ಅಂತ ತನ್ನ ಕೆಲಸ, ಜೀವನದ ಬಗ್ಗೆ ಹೇಳಿದಳು. ಅಂತವನ್ನೆಲ್ಲಾ ಕನಸು ಮನಸಲ್ಲೂ ಯೋಚಿಸಿರದ ನಾನು ಇಂಥಾ ಹಲ್ಕಾ ಕೆಲಸ ಮಾಡೋದ ಅಂತ ಬೈದುಬಿಟ್ಟೆ. ತಾಳ್ಮೆ ಕಳೆದುಕೊಳ್ಳದ ಅವಳು ಸಮಾಧಾನದಿಂದ ಆಯಿತು. ನೀನೀಗ ಅರ್ಥ ಮಾಡಿಕೊಳ್ಳೋ ಸ್ಥಿತಿಯಲ್ಲಿಲ್ಲ. ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಶಾಂತಿ ಟಾಕೀಸಿನ ಹತ್ತಿರ ಸಿಗು ಅಂತ ಹೇಳಿ ಎದ್ದು ಹೋದಳು. ಅವತ್ತೆಲ್ಲಾ ಅಳುತ್ತಲೇ ಅದರ ಬಗ್ಗೆ ಯೋಚಿಸಿದೆ. ತಪ್ಪು ಅನಿಸಿತ್ತು. ಗಂಡನ ಖಾಯಿಲೆ, ಮಕ್ಕಳ ಆರೈಕೆಗೆ ಬೇರೆ ದಾರಿಯೇ ಇರಲಿಲ್ಲ. ಭಿಕ್ಷೆ ಬೇಡುವುದೋ ಇಲ್ಲ ಸಾಯುವುದೋ ದಾರಿಯಾಗಿತ್ತು. ಮಕ್ಕಳನ್ನು ಅನಾಥರನ್ನಾಗಿ ಮಾಡಿ ಸಾಯುವುದು ಪಾಪ ಅನಿಸ್ತು. ಕೈಲಾಗದ ಗಂಡನನ್ನು ನೋಡಿಕೊಳ್ಳೋರು ಯಾರು ಅನಿಸ್ತು. ಅವತ್ತಿಡೀ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ.
ಬೆಳಗ್ಗೆ ಎದ್ದಾಗ ಮನಸ್ಸು ಸ್ವಲ್ಪ ತಿಳಿಯಾಗಿತ್ತು. ಮಕ್ಕಳಿಗೋಸ್ಕರ ಏನು ಮಾಡಿದರೂ ಪಾಪವಲ್ಲ ಅಂತಂದುಕೊಂಡು ಹತ್ತುಗಂಟೆಗೆ ಶಾಂತಿ ಟಾಕೀಸಿನ ಬಳಿ ಹೋಗಿ ಪಾರ್ವತಿಯನ್ನು ಭೇಟಿ ಮಾಡಿದೆ. ಆಗವಳು ಹತ್ತಿರದ ಪಾರ್ಕಿನಲ್ಲಿ ಕೂರಿಸಿಕೊಂಡು ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದಳು. ನಿನಗೇನಾದರೂ ತೊಂದರೆಯಾದರೆ ನಾನಿದ್ದೀನಿ, ಯೋಚನೆ ಮಾಡಬೇಡ ಬಾ ಅಂದು ಯಾವುದೋ ಒಂದು ಮನೆಗೆ ಕರೆದೊಯ್ದಳು. ಅಲ್ಲಿದ್ದ ಹೆಂಗಸಿಗೆ ನನ್ನ ಪರಿಚಯ ಮಾಡಿಕೊಟ್ಟು, ನಾಳೆಯಿಂದ ಇವಳು ಬರ್ತಾಳೆ. ಗಿರಾಕಿಗಳು ಕೋಡೋದ್ರಲ್ಲಿ ಅವಳ ಪಾಲಿನದನ್ನು ಸರಿಯಾಗಿ ಕೊಟ್ಟು ಬಿಡು. ಪಾಪದವಳು ಒಳ್ಳೆ ಹುಡುಗಿ ಯಾರ್ಯಾರೊ ಅಪಾಪೋಲಿಗಳನ್ನು, ಕುಡುಕರನ್ನು ಅವಳ ಹತ್ತಿರ ಕಳಿಸಬೇಡ ಅಂತ ಹೇಳಿ ನನ್ನನ್ನು ವಾಪಾಸು ಕರೆದುಕೊಂಡು ನನ್ನ ಮನೆಗೆ ಬಂದಳು. ಸಂಜೆಯ ತನಕ ಜೊತೆಯಲ್ಲಿದ್ದು ನಾನು ಅಲ್ಲಿಗೂ ಇಲ್ಲಿಗೂ ಬರ್ತಾ ಇರ್ತೀನಿ ಹೆದರಬೇಡ ದೇವರಿಟ್ಟ ಹಾಗಾಗುತ್ತೆ. ಮಕ್ಕಳನ್ನು ಚೆನ್ನಾಗಿ ಓದಿಸು, ಗಂಡನ್ನ ಮಕ್ಕಳನ್ನ ಚನ್ನಾಗಿ ನೋಡಿಕೋ ಅಂತ ಹೇಳಿ ಹೋದಳು.
ಆಮೇಲಿನದನ್ನು ಹೇಳೋದೇನಿದೆ. ಬೆಳಗೆದ್ದು ಮನೆಕೆಲಸ ಮಾಡಿ, ತಿಂಡಿ ಅಡುಗೆ ಮಾಡಿಟ್ಟು, ಮಕ್ಕಳನ್ನು ಸ್ಕೂಲಿಗೆ ಕಳಿಸಿ, ಗಂಡನಿಗೆ ಬೇಕಾದ್ದನ್ನೆಲ್ಲಾ ಅವನ ಪಕ್ಕದಲ್ಲಿಟ್ಟು ಪಾರ್ವತಿ ಪರಿಚಯಿಸಿದ ಮನೆಗೆ ಹೋಗುತ್ತಿದ್ದೆ. ಆ ಮನೆಯಲ್ಲಿ ನನ್ನ ಮತ್ತೊಂದು ಬದುಕು ಶುರುವಾಯ್ತು. ಮೊದಮೊದಲು ಪ್ರಾಣಕಳೆದುಕೊಳ್ಳುವಷ್ಟು ಅವಮಾನವಾದಂತಾಗುತ್ತಿತ್ತು. ಆದರೆ ಕಾಲ ಎಲ್ಲವನ್ನೂ ಮರೆಸುತ್ತೆ ನೋಡಿ. ನಿದಾನವಾಗಿ ಆ ಕಸುಬಿಗೆ ಒಗ್ಗಿಕೊಳ್ಳುತ್ತಾ ಹೋದೆ. ನಿಜ ಹೇಳ್ತೀನಿ ನಾನು ಎರಡು ಮಕ್ಕಳ ತಾಯಯಾಗಿದ್ರೂ ಮೊದಲ ಸಲ ನೋಡಿದ ಯಾರಿಗೂ ಹಾಗನ್ನಿಸುತ್ತಿರಲಿಲ್ಲ. ಹಾಗಾಗಿ ನನ್ನ ವ್ಯವಹಾರ ಚನ್ನಾಗಿ ನಡೆಯತೊಡಗಿತು. ಸತತ ಮೂರು ವರ್ಷಗಳ ಕಾಲ ಆ ಮನೆಯಲ್ಲೇ ದುಡಿದೆ. ಆಮೇಲೊಂದು ದಿನ ಯಾವುದೋ ವಿಷಯಕ್ಕೆ ಮನಸ್ತಾಪ ಬಂದು ಹೋಗುವುದು ನಿಲ್ಲಿಸಿದೆ.
ಆದರೆ ಅಷ್ಟರಲ್ಲಾಗಲೇ ಈ ದಂಧೆಯ ಆಳ ಅಗಲಗಳು ಅದರಲ್ಲಿರುವ ಹೆಂಗಸರ ಪರಿಚಯವಾಗಿತ್ತು. ಹಾಗೆ ಪರಿಚಯವಾಗಿದ್ದ ಬೇರೆಬೇರೆ ಹೆಂಗಸರ ಮನೆಗಳಿಗೆ ಹೋಗುತ್ತಿದ್ದೆ. ದಿನಕ್ಕೊಂದು ಏರಿಯಾದಲ್ಲಿ ದಿನಕ್ಕೊಂದು ಗಿರಾಕಿ ಒಟ್ಟಿನಲ್ಲಿ ಸ್ವತಂತ್ರವಾಗಿ ಕೆಲಸಮಾಡತೊಡಗಿದೆ. ಸುಳ್ಯಾಕೆ ಹೇಳಲಿ ಕೈತುಂಬಾ ಸಂಪಾದಿಸಿದೆ. ಹೆಚ್ಚು ಖರ್ಚು ಮಾಡದೆ ಮುಂದಕ್ಕಿರಲಿ ಅಂತ ಆದಷ್ಟೂ ದುಡ್ಡು ಕೂಡಿಡುತ್ತಿದ್ದೆ.
ಇಷ್ಟರಲ್ಲಿ ನಾನು ಬೇರೆ ಏರಿಯಾದ ಒಳ್ಳೆ ಮನೆಗೆ ಶಿಫ್ಟ್ ಆಗಿದ್ದೆ. ಆ ಮನೆಯ ಪಕ್ಕದಲ್ಲೇ ಇದ್ದ ಅಂಗಡಿ ಮಳಿಗೆಯ ಅಂಗಡಿಯೊಂದನ್ನು ಬಾಡಿಗೆಗೆ ತಗೊಂಡು ಗಂಡನಿಗೆ ಝೆರಾಕ್ಸ್ ಮತ್ತು ಎಸ್.ಟಿ.ಡಿ ಹಾಕಿಕೊಟ್ಟೆ. ಹತ್ತಿರದಲ್ಲಿ ಒಂದು ಸ್ಕೂಲ್ ಬೇರೆ ಇತ್ತು. ಹಾಗಾಗಿ ಮಕ್ಕಳಿಗೆ ಬೇಕಾಗುವ ಪೆನ್ನು,ಪೆನ್ಸಿಲ್,ಎಕ್ಸೈಜ್ ಮುಂತಾದ ವಸ್ತುಗಳನ್ನು ತಂದು ಜೋಡಿಸಿದೆ. ಅದೃಷ್ಟಕ್ಕೆ ವ್ಯಾಪಾರ ಚನ್ನಾಗಿ ನಡೆಯತೊಡಗಿತು. ಮಂಕಾಗಿ ಮಲಗಿರುತ್ತಿದ್ದ ಗಂಡನೂ ಲವಲವಿಕೆಯಿಂದ ಇರಲು ಶುರು ಮಾಡಿದ. ಮೊದಲ ಮಗಳು ಎರಡನೇ ಬಿಎಸ್ಸ್‍ಸಿ ಓದುತ್ತಿದ್ದಳು. ಎರಡನೆಯವಳ್ಯಾಕೋ ಪಿ,ಯು,ಸಿ ಮುಗಿಸಿ ಮುಂದೆ ಓದಲ್ಲ ಅಂತ ಹೇಳಿ ಅಪ್ಪನ ಜೊತೆ ಅಂಗಡಿಯಲ್ಲಿ ಕೂರುತ್ತಿದ್ದಳು. ಸದ್ಯ ಬದುಕು ಒಂದು ಹಂತಕ್ಕೆ ಬಂತಲ್ಲ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟು ಇನ್ನು ಈ ಕಸುಬು ಬಿಟ್ಟು ಆರಾಮಾಗಿರೋಣ ಅಂದುಕೊಳ್ಳುವಷ್ಟರಲ್ಲಿ ಮತೊಂದು ಆಘಾತ ಕಾದಿತ್ತು.
ಇದ್ದಕ್ಕಿದ್ದಂತೆ ನನ್ನ ಆರೋಗ್ಯ ಕೆಟ್ಟು, ಕೆಮ್ಮುಜ್ವರ ತಿಂಗಳಾದರೂ ಬಿಡಲಿಲ್ಲ. ಕೊನೆಗೆ ವಿಧಿಯಿಲ್ಲದೆ ದೊಡ್ಡಮಗಳು ಆಸ್ಪತ್ರೆಗೆ ಅಡ್ಮಿಟ್ ಮಾಡಿದಳು. ಅಲ್ಲಿ ರಕ್ತ ಪರೀಕ್ಷೆ, ಎಕ್ಸರೆ ಮಾಡಿದ ಡಾಕ್ಟರು ನನಗೆ ಹೆಚ್.ಐ.ವಿ. ಇದೆ ಅಂತ ಹೇಳಿಬಿಟ್ಟರು. ಜೊತೆಯಲ್ಲಿದ್ದ ಮಗಳು ಅವರು ಹೇಳಿದ್ದಕ್ಕೆಲ್ಲ ಹೂ ಅಂದು ಕೊಂಡು ಮನೆಗೆ ಬಂದವಳು ಅವರಪ್ಪನಿಗೆ, ತಂಗಿಗೆ ವಿಷಯ ಹೇಳಿದಳು. ಗಂಡನಂತೂ “ನಿನ್ನ ಮುಟ್ಟಿ ಇಪ್ಪತ್ತು ವರ್ಷವಾಯ್ತು. ಹೇಳು, ಈ ಕಾಯಿಲೆ ಹೇಗೆ ಬಂತು” ಅಂತ ಕೆಂಡಮಂಡಲವಾಗಿಬಿಟ್ಟ. ಅವನ ಅರಚಾಟದಿಂದ ಇರೋ ವಿಷಯವನ್ನು ಹೇಳಿ ತಪ್ಪು ಮಾಡಿಬಿಟ್ಟೆ, ಸಂಸಾರ ಸಾಕೋಕೆ ನಾನೀ ಕೆಲಸ ಮಾಡಿದೆ. ದಯವಿಟ್ಟು ಕ್ಷಮಿಸಿಬಿಡಿ ಅಂತ ಗಂಡನಿರಲಿ ಹೆಣ್ಣುಮಕ್ಕಳ ಕಾಲನ್ನೂ ಹಿಡಿದು ಬೇಡಿಕೊಂಡೆ. ಉಹುಂ ಯಾರೂ ಕರಗಲಿಲ್ಲ. ಇಂತ ಕೆಲಸ ಮಾಡೋ ಬದಲು ಅವತ್ತೇ ನಮ್ಮನ್ನೆಲ್ಲ ಸಾಯಿಸಿಬಿಡ್ಬೇಕಿತ್ತು ಅಂದು ಕೂಗಾಡಿ ಮನೆಯಿಂದ ಹೊರಹಾಕಿಬಿಟ್ಟರು. ಬೆಳಿಗ್ಗೆಯ ಹೊತ್ತಿಗಾದರೂ ಅವರ ಕೋಪ ಕಡಿಮೆಯಾಗಿ ನನ್ನ ಸೇರಿಸಬಹುದು ಅನ್ನೊ ನಂಬಿಕೆಯಿಂದ ಇಡೀ ರಾತ್ರಿ ಮನೆ ಬಾಗಿಲಲ್ಲೇ ಕೂತಿದ್ದೆ. ಆದರೆ ಬೆಳಿಗ್ಗೆ ಬಾಗಿಲು ತೆಗೆದ ಹೆಣ್ಣುಮಕ್ಕಳು ನನ್ನನ್ನು ಎಳೆದುಕೊಂಡು ಬಂದು ರಸ್ತೆಗೆ ಎಸೆದುಬಿಟ್ಟರು. ಅವತ್ತಿಗೆ ನನ್ನ ಅವರ ಋಣ ಮುಗಿದು ಹೋಯಿತು.
ಬೇರೆ ದಾರಿಯಿಲ್ಲದೆ ಸಾಯುವ ತೀರ್ಮಾನಕ್ಕೆ ಬಂದ ನಾನು ಹುಚ್ಚಿಯಂತೆ ಬೀದಿಬೀದಿ ಅಲೆದೆ. ಆದರೆ ಯಾರಿಗಾಗಿ ನಾನು ಇಷ್ಟೆಲ್ಲಾ ಕಷ್ಟಪಟ್ಟೆನೋ ಅವರೇ ಆರಾಮಾಗಿರಬೇಕಾದರೆ, ಬದುಕು ಒತ್ತೆಯಿಟ್ಟ ನಾನ್ಯಾಕೆ ಸಾಯಬೇಕು ಅನ್ನಿಸಿ ನನ್ನನ್ನು ಪರೀಕ್ಷಿಸಿದ ಡಾಕ್ಟರ ಹತ್ತಿರ ಹೋಗಿ ಮನೆಯಿಂದ ಹೊರಹಾಕಿರುವ ವಿಷಯ ಹೇಳಿದೆ. ಆಗವರು ಈಗ ನಾನಿರುವ ಈ ಸಂಸ್ಥೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಹೋಗು ಅಂದರು. ಜೊತೆಗೆ ನನ್ನೆದುರಿಗೇನೆ ಇಂತಹ ಹೆಣ್ಣುಮಗಳೊಬ್ಬಳನ್ನು ಕಳುಹಿಸುತ್ತಿದ್ದೇನೆ ಎಂದು ಸಹ ಹೇಳಿ ಉಪಕಾರÀ ಮಾಡಿದರು. ನನ್ನಂತಹ ಹೆಚ್.ಐ.ವಿ. ರೋಗಿಗಳ ಪುನರ್ವಸತಿಗಾಗಿರುವ ಈ ಸಂಸ್ಥೆಯಲ್ಲಿ ನಾವುಬಹಳಷ್ಟು ಮಕ್ಕಳು ಹೆಣ್ಣುಮಕ್ಕಳು ಇದ್ದೇವೆ. ಮಕ್ಕಳಿಗೆ ಇಲ್ಲೇ ಶಾಲೆಯಿದೆ. ಸ್ವಲ್ಪ ಗಟ್ಟಿಮುಟ್ಟಾಗಿರೋ ನನ್ನಂತಹ ಹೆಂಗಸರಿಗೆ ಕೈ ಕೆಲಸ ಹೇಳಿಕೊಟ್ಟಿದ್ದಾರೆ. ನಿರ್ವಂಚನೆಯಿಂದ ಅದನ್ನು ಮಾಡುತ್ತಾ, ನಮ್ಮ ಅನ್ನ ನಾವೇ ದುಡಿದು ತಿನ್ನುತ್ತಿದ್ದೇವೆ. ಇಲ್ಲಿ ಬಂದು ಒಂದು ತಿಂಗಳಾದ ಮೇಲೆ ಇಲ್ಲಿಯ ಒಬ್ಬ ಸ್ವಯಂಸೇವಕಿಯ ಹತ್ತಿರ, ನಮ್ಮ ಮನೆ ಅಡ್ರೆಸ್ ಕೊಟ್ಟು ನಾನಿಲ್ಲಿರುವ ವಿಚಾರ ಮನೆಗೆ ತಿಳಿಸುವಂತೆ ಹೇಳಿದೆ. ನನ್ನ ಗಂಡ ಮಕ್ಕಳಲ್ಲವೇ, ಎಂದಾದರೊಂದು ಇನ ಮನೆಗೆ ಕರೆದುಕೊಂಡು ಹೋಗಬಹುದೆಂಬ ಹುಚ್ಚು ಆಸೆ. ಆದರೇನು ಪ್ರಯೋಜನವಾಗಲಿಲ್ಲ. ಮನೆಗೆ ಹೋದ ಆಕೆಗೆ ಅವಳ್ಯಾರು ಅಂತ ಗೊತ್ತಿಲ್ಲ. ನೀವು ಇನ್ನೊಂದು ಸಾರಿ ಬಂದ್ರೆ ಪೋಲೀಸಿಗೆ ಕಂಪ್ಲೇಟ್ ಕೊಡುತ್ತೇವೆಂದು ಹೇಳಿ ಹೆದರಿಸಿ ಓಡಿಸಿದರಂತೆ. ನನಗೆ ಯಾರೂ ಇಲ್ಲ ಎಂದು ಅವತ್ತಿಂದ ಗಟ್ಟಿ ಮನಸ್ಸು ಮಾಡಿಕೊಂಡೆ.
ಐದು ವರ್ಷವಾಯ್ತು. ಇವತ್ತಿನವರೆಗೂ ಅವರುಗಳ ವಿಚಾರ ಗೊತ್ತಾಗಿಲ್ಲ. ಇಷ್ಟೇ ಸರ್ ನನ್ನ ಕಥೆ ಅಂತ ಮುಗಿಸಿದವಳಿಗೆ ಕೈಮುಗಿದು ಹೊರಡಲು ಅನುವಾದವನಿಗೆ, ಸರ್ ನನಗೊಂದು ಸಹಾಯ ಮಾಡುತ್ತೀರ? ಏನೂ ಇಲ್ಲ, ಈಗ ನನ್ನ ಮಕ್ಕಳು ಏನು ಮಾಡ್ತಿದಾರೆ ಅಂತ ತಿಳಿದುಕೊಂಡು ನನಗೆ ತಿಳ್ಸೋಕೆ ಆಗುತ್ತಾ?
ಆಯ್ತು ಖಂಡಿತಾ ಮಾಡ್ತೇನೆ ಎಂದು ಹೊರಗೆ ಬಂದವನಿಗೆ ಯಾಕೋ ಅಂತಹ ಕೃತಘ್ಞರ ಮುಖ ನೋಡಬೇಕೆನಿಸಲಿಲ್ಲ. ಜೊತೆಗೆ ಹೋಟೆಲ್ಲಿನ ರೂಮಿಗೆ ಬಂದವನಿಗೆ ಆಕೆಯಿಂದ ವಿಳಾಸವನ್ನೇ ಪಡೆಯದೇ ಬಂದದ್ದು ಅರಿವಿಗೆ ಬಂದು ಬೇಸರವಾಯಿತು!
No comments:
Post a Comment