Dr Ashok K R
ಈ ಸಿನಿಮಾ ನೋಡಬೇಕಾದರೆ ಹಿಂದಿನ ಹತ್ತಲವು ಸಿನಿಮಾಗಳು ನೆನಪಾಗುತ್ತವೆ! ಅದರಲ್ಲಿ ಮುಖ್ಯವಾದುದು ಸ್ಲಂ ಡಾಗ್ ಮಿಲಿಯನೇರ್, ಚಿನ್ನಾರಿ ಮುತ್ತ, ಜಿಮ್ಮಿ ಗಲ್ಲು. ಸ್ಲಂ ಡಾಗ್ ಮಿಲಿಯನೇರಿನ ಹಾಗೆ ಇಲ್ಲೂ ಒಂದು ದಿಢೀರ್ ಕೋಟ್ಯಾಧಿಪತಿಯಾಗುವ ಆಟವಿದೆ. ಬಡ ಹುಡುಗನೊಬ್ಬನ ಕಥೆಯಿದೆ. ಏನೂ ಇಲ್ಲದ ಹುಡುಗನೊಬ್ಬ ನಗರಕ್ಕೆ ಬಂದು ಪ್ರಚಂಡ ಯಶಸ್ಸು ಗಳಿಸುವ ಚಿನ್ನಾರಿ ಮುತ್ತ ಇಲ್ಲಿ ಸಿದ್ಧರಾಮನಾಗುತ್ತಾನೆ. ಬಾಲಪರಾಧಿಗಳ ಬದಲಾವಣೆಗೆ ಹಂಬಲಿಸುವ ಸಿನಿಮಾ ಖೈದಿಗಳ ಮನಪರಿವರ್ತನೆಯ ಜಿಮ್ಮಿ ಗಲ್ಲು ಚಿತ್ರವನ್ನು ನೆನಪಿಸುತ್ತದೆ! ಇಷ್ಟೆಲ್ಲಾ ಸಿನಿಮಾಗಳನ್ನು ನೆನಪಿಸಿಯೂ ತನ್ನದೇ ಸ್ವಂತ ಛಾಪು ಮೂಡಿಸುವ ಸಿನಿಮಾ ‘ಮೈತ್ರಿ’. ವಿಷ್ಣುವರ್ಧನ್ ಬಹಳಷ್ಟು ಸಂದರ್ಶನಗಳಲ್ಲಿ ಹೇಳಿರುವಂತೆ ಪ್ರಪಂಚದಲ್ಲಿರುವುದು ಏಳೋ ಎಂಟೋ ಕಥೆ! ಅವುಗಳನ್ನೇ ಬೇರ್ಪಡಿಸಿ ಮಾರ್ಪಡಿಸಿ ಸಿನಿಮಾ ಮಾಡಬೇಕು. ಹಳೆಯ ಚಿತ್ರಗಳಿಗೆ ಒಂದಷ್ಟು ಸಾಮ್ಯತೆಗಳಿದ್ದರೂ ಮೈತ್ರಿಯಲ್ಲಿ ಹೊಸತನವನ್ನು ಕಾಣಲು ಸಾಧ್ಯವಾಗಿರುವುದು ಈ ಬೇರ್ಪಡಿಸಿ ಮಾರ್ಪಡಿಸುವ ವಿಧಾನದಿಂದ.
ಅತಿ ಕಡಿಮೆ ಬಜೆಟ್ಟಿನ ನವಿಲಾದವರು ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಗಿರಿರಾಜ್‍ರವರ ನಾಲ್ಕನೇ ಚಿತ್ರವಿದು. ನವಿಲಾದವರು ಯುಟ್ಯೂಬಿಗಷ್ಟೇ ಸೀಮಿತವಾದ ಚಿತ್ರವಾಗಿತ್ತು. ಥಿಯೇಟರುಗಳಲ್ಲಿ ತೆರೆಕಂಡ ಜಟ್ಟ ಹೆಸರು ಮಾಡಿತು. ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿತು. ನಂತರ ತೆರೆಕಂಡ ಅದ್ವೈತ ಹೇಳಹೆಸರಿಲ್ಲದಂತೆ ಮಾಯವಾಯಿತು. ಅದ್ವೈತ ಮೊದಲೇ ಪ್ರಾರಂಭವಾಗಿದ್ದರೂ ಮೊದಲು ತೆರೆಕಂಡದ್ದು ಜಟ್ಟ. ಅದ್ವೈತ ಮೊದಲು ತೆರೆಕಂಡಿದ್ದರೆ ಮೈತ್ರಿ ಸಾಧ್ಯವೇ ಆಗುತ್ತಿರಲಿಲ್ಲವೇನೋ?! ಜಟ್ಟದಲ್ಲಿ ಎದ್ದು ಕಂಡಿದ್ದು ಕಥಾವಸ್ತು ಮತ್ತು ನಿರ್ದೇಶನ. ಕಥೆಗೆ ನ್ಯಾಯ ಒದಗಿಸಲು ನಿರ್ದೇಶನ ಮಾಡುವ ಗಿರಿರಾಜ್ ‘ಮೈತ್ರಿ’ಯಲ್ಲಿ ಪುನೀತ್ ಮತ್ತು ಮೋಹನ್‍ಲಾಲ್‍ರಂತಹ ಈಗಾಗಲೇ ‘ಸ್ಟಾರ್’ ಪಟ್ಟ ಪಡೆದು ಇಮೇಜಿನೊಳಗೆ ಬಂಧಿಸಲ್ಪಟ್ಟಿರುವ ನಟರೊಡನೆ ಯಾವ ರೀತಿಯ ಸಿನಿಮಾ ಮಾಡಬಹುದು ಎಂಬ ಕುತೂಹಲವಿತ್ತು. ಪುನೀತ್ ಮತ್ತು ಮೋಹನ್ ಲಾಲ್ ಒಂದೆರಡು ಕ್ಷಣ ಬಂದುಹೋಗುವ ಗೆಸ್ಟ್ ರೋಲಿನಲ್ಲಿ ಮಾಡಿರಬೇಕು. ಪಬ್ಲಿಸಿಟಿಗೋಸ್ಕರ ಅವರ ಚಿತ್ರಗಳನ್ನು ಉಪಯೋಗಿಸಿರಬಹುದು ಎಂಬ ಅನುಮಾನವೂ ಇತ್ತು. ‘ಮೈತ್ರಿ’ ನೋಡಿದ ನಂತರ ಅನುಮಾನಗಳೆಲ್ಲವೂ ಪರಿಹಾರವಾಗಿ ಕಥೆಗೆ ಅನ್ಯಾಯ ಮಾಡುವ ನಿರ್ದೇಶಕರಲ್ಲ ಗಿರಿರಾಜ್ ಎಂಬ ಅಂಶ ಮನದಟ್ಟಾಯಿತು.
ಸಿದ್ಧರಾಮ ಎಂಬ ಭಯಂಕರ ಬುದ್ಧಿವಂತ, ತರಲೆ ಹುಡುಗ ಸಿನಿಮಾದ ನಾಯಕ. ಸಿನಿಮಾದ ಪ್ರಾರಂಭದಲ್ಲೇ ಸ್ಟೇಷನ್ನು ಸೇರಿ ಗೂಳಿ ಶೇಖರನೆಂಬ ಕಿಡ್ನಾಪರ್ ಕಂ ಕಿಲ್ಲರ್ ಕಂ ಸಮಾಜಸೇವಕನ ನೆರವಿನಿಂದ ಹೊರಬರುತ್ತಾನೆ. ಬೆಂಕಿ ಆಕಸ್ಮಿಕದಲ್ಲಿ ತಾಯಿ ಸತ್ತ ನಂತರ ಅದೇ ಗೂಳಿ ಶೇಖರನ ‘ನೆರವಿನಿಂದ’ ಅಮಾಯಕನೊಬ್ಬನ ಸಾವಿಗೆ ಕಾರಣಕರ್ತನಾಗಿ ರಿಮ್ಯಾಂಡ್ ಹೋಮಿಗೆ ಸೇರುತ್ತಾನೆ. ಈ ಸಿದ್ಧರಾಮನಿಗೆ ಪವರ್ ಸ್ಟಾರ್ ಪುನೀತೆಂದರೆ ಅಪಾರ ಪ್ರೀತಿ. ಶಾಲೆಗೆ ಚಕ್ಕರ್ ಹೊಡೆದು ಪುನೀತ್ ಸಿನಿಮಾದ ಚಿತ್ರೀಕರಣಕ್ಕೆ ಹೋಗುತ್ತಾನೆ. ತನ್ನ ಚುರುಕುತನ ಮತ್ತು ಬುದ್ಧಿವಂತಿಕೆಯಿಂದ ಪುನೀತ್ ಮನಸ್ಸು ಗೆದ್ದಿರುತ್ತಾನೆ.
ರಿಮ್ಯಾಂಡ್ ಹೋಮಿನಲ್ಲೊಬ್ಬ ಖಡಕ್ ಆಫೀಸರ್. ಬಡತನದ ಕಷ್ಟದಲ್ಲೇ ಬೆಳೆದು ಆಫೀಸರ್ರಾಗಿರುವ ಅತುಲ್ ಕುಲಕರ್ಣಿಗೆ ಬಾಲಪರಾಧಿಗಳಿಗೆ ಜನ್ಮದಿಂದಲೇ, ರಕ್ತದಲ್ಲೇ ಕ್ರೌರ್ಯ ಸ್ವಭಾವ ಬಂದಿರುತ್ತದೆ ಎಂದು ಧೃಡವಾದ ನಂಬುಗೆ. ಹೊಡೆದು ಬಡಿದು ಶಿಕ್ಷೆ ಮೇಲೆ ಶಿಕ್ಷೆ ಕೊಟ್ಟು ಸರಿದಾರಿಗೆ ತರುವ ಹಂಬಲ. ದೃಶ್ಯವೊಂದರಲ್ಲಿ ಆತನೇ ಹೇಳುವಂತೆ ‘ಬಯ್ಯುವಷ್ಟು ಚೆನ್ನಾಗಿ ಬುದ್ಧಿ ಹೇಳಲು’ ಬರದವ! ಇಡೀ ಸಿನಿಮಾಗೊಂದು ಲವಲವಿಕೆ ತಂದುಕೊಂಡುವುದು ಜಾನ್ಸನ್ ಎಂಬ ಚಾಣಾಕ್ಷ ಕಳ್ಳ! ಹುಟ್ಟುಹಬ್ಬ ಆಚರಿಸಲು ಬರುವ ಪುನೀತ್ ರಾಜ್‍ಕುಮಾರರ ವಾಚನ್ನೂ ಕದ್ದುಬಿಡುವಷ್ಟು ಚುರುಕು! ಸಿದ್ಧರಾಮನ ಬುದ್ಧಿವಂತಿಕೆ, ಅವನಿಗೆ ಪುನೀತ್ ಬಗ್ಗೆಯಿದ್ದ ಪ್ರೀತಿಯನ್ನು ನೋಡಿ ಕರುನಾಡ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಸಿದ್ಧು ಆಯ್ಕೆಯಾಗುವಂತೆ ಮಾಡುವುದು ಜಾನ್ಸನ್. ಮೊಬೈಲ್ ಕದೀತಾನೆ, ಕಾಲು ಹಿಡೀತಾನೆ, ಒದೆಸಿಕೊಳ್ಳುತ್ತಾನೆ, ಜಾಣತನದಿಂದ ಸಿದ್ಧರಾಮನ ಓದಿನ ಸಲುವಾಗಿ ಪುಸ್ತಕಗಳನ್ನು ತರಿಸುತ್ತಾನೆ, ಮತ್ತೆ ಹೊಡೆಸಿಕೊಳ್ಳುತ್ತಾನೆ! ಇವೆಲ್ಲದರ ಮಧ್ಯೆ ನಗುತ್ತಲೇ ಇರುತ್ತಾನೆ! ಸಿದ್ಧರಾಮ ಕೋಟ್ಯಾಧಿಪತಿಯಾಗುವ ದಾರಿಯಲ್ಲಿ ಬರುವ ಅನೇಕ ತಿರುವುಗಳು, ಉಪಕಥೆಗಳನ್ನು ನಿರ್ದೇಶಕರು ನಿರ್ವಹಿಸಿರುವ ರೀತಿ ಮೆಚ್ಚುಗೆ ಗಳಿಸುತ್ತೆ.
‘ಮೈತ್ರಿ’ ಸಿನಿಮಾ ಟೆಕ್ನಿಕಲಿ ವೀಕ್ ಎಂಬ ಮಾತು ಗಾಂಧಿನಗರದಲ್ಲಿದೆ. ಸಿನಿಮಾದಲ್ಲಿ ಅತ್ಯದ್ಭುತ ಕ್ಯಾಮೆರಾ ಕೆಲಸವಿಲ್ಲ, ಬೆಳಕು ನೆರಳಿನಾಟಕ್ಕೆ, ಲೊಕೇಶನ್ನು, ಕಾಸ್ಟ್ಯೂಮುಗಳಿಗೆ ಭಯಂಕರ ಪ್ರಾಮಿನೆನ್ಸಿಲ್ಲ; ಸಿನಿಮಾ ಎಂದರೆ ಅದೊಂದು ಕಲೆ, ನಿರ್ದೇಶಕನ ಕಲಾಕೃತಿ ಎನ್ನುವುದನ್ನು ಮರೆಯಬಾರದು. ಗಿರಿರಾಜರ ನಿರ್ದೇಶನದ ಸೂಕ್ಷ್ಮಗಳು ಎಷ್ಟು ಮೇಲ್ಮಟ್ಟದಲ್ಲಿವೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ – ಅತುಲ್ ಕುಲಕರ್ಣಿಯ ಫೋನನ್ನು ಜಾನ್ಸನ್ ಕದಿಯುತ್ತಾನೆ, ಕರುನಾಡ ಕೋಟ್ಯಾಧಿಪತಿಯ ಪ್ರಶ್ನೆಗೆ ಉತ್ತರ ಕಳುಹಿಸಲು. ಆ ಸಂದರ್ಭದಲ್ಲಿ ಎರಡೇ ಎರಡು ಕ್ಷಣ ಅತುಲ್‍ರವರ ಫೋನಿನ ಸ್ಕ್ರೀನ್ ತೆರೆಯ ಮೇಲೆ ಕಾಣಿಸುತ್ತೆ. ಸ್ಕ್ರೀನಿನಲ್ಲಿ ಕ್ರಾಂತಿಕಾರಿ ಚೆಗುವಾರನ ಫೋಟೋ ಇರುತ್ತೆ! ಎರಡು ಸೆಕೆಂಡು ಕಾಣುವ ದೃಶ್ಯಕ್ಕೂ ಇಷ್ಟು ಪ್ರಾಮುಖ್ಯತೆ ಇರುವ ಚಿತ್ರವನ್ನು ಟೆಕ್ನಿಕಲಿ ವೀಕೆಂದು ಕರೆಯುವವರಿಗೆ ಸಿನಿಮಾ ಎಂದರೆ ಕಲಾಕೃತಿ ಎಂಬ ಸಂಗತಿಯೇ ಮರೆತುಹೋಗಿರಬಹುದು!
ಒಂದಷ್ಟು ಹಿರೋಯಿಸಂನ, ಅತಿ ಒಳ್ಳೆಯವರೆಂಬ ದೃಶ್ಯಗಳನ್ನೊರತುಪಡಿಸಿದರೆ ಸಾಮಾನ್ಯನ ಪಾತ್ರದಲ್ಲಿ ಅಭಿನಯಿಸಿರುವ ಪುನೀತ್ ರಾಜ್‍ಕುಮಾರ್ ಇಷ್ಟವಾಗುತ್ತಾರೆ. ಇಂತಹುದೊಂದು ಪಾತ್ರವನ್ನು ಪುನೀತ್ ಒಪ್ಪಿಕೊಂಡಿರುವುದೇ ಅಚ್ಚರಿ ಮೂಡಿಸುವುದು ಇಂದಿನ ನಾಯಕ ನಟರು ಇಮೇಜಿನ ಹಂಗಿಗೆ ಬಿದ್ದಿರುವುದು ಕಾರಣ. ಹತ್ತದಿನೈದು ನಿಮಿಷವಷ್ಟೇ ಚಿತ್ರದಲ್ಲಿ ಬರುವ ಮೋಹನ್ ಲಾಲ್‍ರದು ನೆನಪಿನಲ್ಲುಳಿಯುವಂತಹ ನಟನೆ. ಅತುಲ್ ಕುಲಕರ್ಣಿಯವರ ನೈಜ ಅಭಿನಯದ ಬಗ್ಗೆ ಹೇಳುವುದೇ ಬೇಡ. ದೆವ್ವಪೀಡಿತ ವಾರ್ಡನ್ ಅಸಿಸ್ಟೆಂಟ್ ಕಿರಣ್, ಗೂಳಿ ಶೇಖರನ ಪಾತ್ರದಲ್ಲಿ ಅಭಿನಯಿಸಿರುವ ರವಿ ಕಾಳೆ ಗಮನ ಸೆಳೆಯುತ್ತಾರೆ. ಈ ಎಲ್ಲಾ ದೈತ್ಯ ನಟರನ್ನು ಮೀರಿಸಿದ ಅಭಿನಯ ರಿಮ್ಯಾಂಡ್ ಹೋಮಿನ ಮಕ್ಕಳದ್ದು! ಅದರಲ್ಲೂ ಜಾನ್ಸನ್ ಚಿತ್ರ ಮುಗಿದ ಮೇಲೂ ಕಾಡತೊಡಗುತ್ತಾನೆ.
ಚಿತ್ರಕೃಪೆ: ಗಿರಿರಾಜರ ಫೇಸ್‍ಬುಕ್ ಪುಟ
No comments:
Post a Comment