Dr Ashok K R
ಗಿರಿರಾಜರ ಹೆಸರು ಮೊದಲು ಕೇಳಿದ್ದು ‘ವರ್ತಮಾನ’ ವೆಬ್‍ಪತ್ರಿಕೆ ಪ್ರತಿ ವರುಷ ನಡೆಸುವ ಕಥಾ ಸ್ಪರ್ಧೆಯ ಫಲಿತಾಂಶದಲ್ಲಿ. ಅವರ ‘ಗಲೀಜು’ ಎಂಬ ಕಥೆಗೆ ಎರಡನೆಯ ಬಹುಮಾನ ಬಂದಿತ್ತು. ಅದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗಿರಿರಾಜರನ್ನು ಭೇಟಿಯಾದಾಗಲೇ ತಿಳಿದಿದ್ದು ಇದೇ ಆಸಾಮಿ ‘ಜಟ್ಟ’ ಚಿತ್ರದ ನಿರ್ದೇಶಕರೆಂದು! ಜಟ್ಟ ಚಿತ್ರದ ಬಗ್ಗೆ ಆಗಲೇ ಸಾಕಷ್ಟು ಚರ್ಚೆ ನಡೆದಿತ್ತು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೋಗಿ ಚಿತ್ರ ನೋಡುವ ಉಮೇದು ಕಡಿಮೆಯಾಗಿದ್ದ ಕಾರಣ ‘ಜಟ್ಟ’ ಚಿತ್ರವನ್ನಿನ್ನೂ ನೋಡಿರಲಿಲ್ಲ. ಗೆಳೆಯ ನಿರ್ದೇಶಕ ಅಭಿ ಹನಕೆರೆ ಜಟ್ಟವನ್ನೊಂದಷ್ಟು ಹೊಗಳಿ ಹೋಗಿ ನೋಡು ಎಂದಿದ್ದ. ಕಾರಣಾಂತರಗಳಿಂದ ಜಟ್ಟ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ‘ಹುಚ್ಚ ವೆಂಕಟ್’ ಹೇಳುವ ಹಾಗೆ ಬಿಟ್ಟಿಯಾಗಿ ಟಿವಿಯಲ್ಲೇ ನೋಡಿದೆ! ಇಂತಹುದೊಂದು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದಿದ್ದುದಕ್ಕೆ ಬೇಸರವಿದೆ.
ಕಾಡ ನಡುವಿನಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ಟೆಂಪರರಿ ಫಾರೆಸ್ಟ್ ಗಾರ್ಡಾಗಿ ಕೆಲಸ ಮಾಡುವ ಜಟ್ಟ ಚಿತ್ರದ ನಾಯಕ. ಇವನ ಅಸಹಜ ಪ್ರಕೃತಿಯಿಂದಾಗಿ ಪತ್ನಿ ಟ್ರೆಕ್ಕಿಂಗಿಗೆಂದು ಬಂದವನೊಬ್ಬನ ಜೊತೆಗೆ ಓಡಿ ಹೋಗುತ್ತಾಳೆ. ಹಿಂದೂ ಧರ್ಮವನ್ನುಪಯೋಗಿಸಿಕೊಂಡು ರಾಜಕೀಯದಲ್ಲಿ ಮೇಲೇರುವ ಉದ್ದೇಶದ ರಾಜಕಾರಣಿಯೊಬ್ಬನ ಬಳಿ ಪತ್ನಿಯ ಕಥೆ ಹೇಳುವುದರೊಂದಿಗೆ ಚಿತ್ರದ ಪ್ರಾರಂಭವಾಗುತ್ತದೆ. ಧರ್ಮದ ಅಮಲನ್ನು, ಪುರುಷ ಸಂಸ್ಕೃತಿಯ ಅಮಲನ್ನು ಜಟ್ಟನೊಳಗೆ ತುಂಬಲು ರಾಜಕಾರಣಿ (ಬಿ.ಸುರೇಶ್) ಯಶಸ್ವಿಯಾಗುತ್ತಾನೆ. ಧರ್ಮದ ಅಮಲಿನ ಜಟ್ಟನಿಗೆ ತುಂಡುಡುಗೆ ತೊಡುವ, ಕುಡಿಯುವ ನಾರೀಮಣಿಗಳೆಲ್ಲ ಹಿಂದೂ ಧರ್ಮಕ್ಕೆ ಕಳಂಕಿತರಂತೆ ಕಾಣುತ್ತಾರೆ. ಮಂಗಳೂರಿನ ಹೋಮ್ ಸ್ಟೇ ಮೇಲೆ ಸಂಸ್ಕೃತಿ ರಕ್ಷಕರು ನಡೆಸಿದ ದಾಳಿಗಳೆಲ್ಲವೂ ಧಾರ್ಮಿಕ ಅಮಲಿಗೆ ಒಳಗಾದ ಜಟ್ಟನಲ್ಲಿ ಮತ್ತಷ್ಟು ಮತ್ತೇರಿಸುವಲ್ಲಿ ಸಫಲವಾಗುತ್ತವೆ. ತಲೆತುಂಬ ಸಂಸ್ಕೃತಿಯನ್ನು ತುಂಬಿಕೊಂಡ ಜಟ್ಟ ದಾರಿಯಲ್ಲಿ ಮರವೊಂದಕ್ಕೆ ಗುದ್ದಿ ನಿಂತ ಕಾರನ್ನು ನೋಡುತ್ತಾನೆ. ಕಾರಿನೊಳಗೆ ತುಂಡುಡುಗೆ ತೊಟ್ಟ ಯುವತಿ, ಕೈಯಲ್ಲೊಂದು ಬಿಯರ್ ಬಾಟಲಿ! ಸಂಸ್ಕೃತಿ ರಕ್ಷಣೆಯನ್ನು ಇವಳಿಂದಲೇ ಪ್ರಾರಂಭಿಸೋಣ ಎಂದು ನಿರ್ಧರಿಸುವ ಜಟ್ಟ ಅವಳನ್ನು ಹೊತ್ತೊಯ್ದು ಯಾರೂ ಬಾರದ ಕಾಡಿನೊಳಗಿನ ತನ್ನ ಒಂಟಿ ಮನೆಯಲ್ಲಿ ಅವಳನ್ನು ಸರಪಳಿಗಳಿಂದ ಬಂಧಿಸುತ್ತಾನೆ. ಧಾರ್ಮಿಕ ಅಮಲಿನ ನಾಯಕ ಹೊತ್ತು ತಂದದ್ದು ಸಿದ್ಧಾಂತದ ಅಮಲಿನ ನಾಯಕಿಯನ್ನು!
ಎಡಪಂಥೀಯ ವಿಚಾರಧಾರೆಯ ಫೆಮಿನಿಷ್ಟ್ ನಾಯಕಿಯನ್ನು ‘ಸಂಸ್ಕೃತಿಯ’ ಪರವಾಗಿ ಬಗ್ಗಿಸಲು ಜಟ್ಟ ಪ್ರಯತ್ನಿಸುತ್ತಾನೆ. ಹೊಡೆಯುತ್ತಾನೆ, ಬಡಿಯುತ್ತಾನೆ, ಕೊನೆಗೆ ಆಕೆ ಸೀರೆ ಉಟ್ಟು ಸಂಸ್ಕೃತಿ ಉಳಿಸಲೆಂಬ ಕಾರಣದಿಂದ ಆಕೆಯ ತುಂಡುಡುಗೆಯನ್ನೂ ಹರಿದು ಹಾಕುತ್ತಾನೆ. ನಾಯಕಿ ಸೀರೆ ಉಡುವುದಿಲ್ಲ. ಬೆತ್ತಲಾಗಿಯೇ ಉಳಿಯುತ್ತಾಳೆ. ‘ಮೊದಲು ನಮಗೆ ಬಡೀತೀರಾ, ಬಗ್ಗಲಿಲ್ಲವೋ ಮಾನ ಕಳೀತೀರ; ಅದಕ್ಕೂ ಜಗ್ಗಲಿಲ್ಲವೆಂದರೆ ರೇಪ್ ಮಾಡ್ತೀರ. ಮೊದಲೆರಡು ಮುಗಿಯಿತು, ಮೂರನೆಯದಕ್ಕೆ ಮುಹೂರ್ತ ಯಾವಾಗ?’ ಎಂದು ನಿರ್ಭಾವುಕತೆಯಿಂದ ಕೇಳುವ ನಾಯಕಿ ತನ್ನ ಹಟದ ಸ್ವಭಾವದಿಂದಲೇ ನಾಯಕನನ್ನು ಕೊಂಚ ಕೊಂಚ ಬದಲಿಸುತ್ತಾ ಹೋಗುತ್ತಾಳೆ. ಅವಳು ಸಿಟ್ಟಿನಿಂದ ಹೇಳಿದ ಮಾತುಗಳು, ಜಟ್ಟ ಸೀರೆ ಉಟ್ಟು ತನಗೆ ತಿನ್ನಿಸುವಂತೆ ಮಾಡುವ ಹಟ ಜಟ್ಟನ ಹಿಂದುತ್ವದ ಅಮಲನ್ನು ಇಳಿಸುತ್ತಾ ಸಾಗುತ್ತದೆ. ನಾಯಕಿಯ ಜೊತೆಗೆ ಫಾರೆಸ್ಟ್ ಆಫಿಸರ್ ಜಟ್ಟನ ಮತ್ತಷ್ಟು ಬದಲಾವಣೆಗೆ ಕಾರಣಕರ್ತನಾಗುತ್ತಾನೆ. ‘ಕಾಡಲ್ಲೇ ಹುಟ್ಟಿ ಬೆಳೆದ ನೀನು ಎಸ್ಸಿನೋ ಎಸ್ಟಿನೋ ಓಬಿಸಿನೋ ಅನ್ನೋದೇ ನಮ್ಮನ್ನಾಳುವವರಿಗೆ ಗೊತ್ತಿಲ್ಲ’ ಎಂಬ ಮಾತು ಧರ್ಮದ ಹಂಗಿಲ್ಲದ ಆದಿವಾಸಿಗಳ ಬದುಕನ್ನು ತೋರಿಸುತ್ತದೆ. ಜೊತೆಗೆ ಕಾಡಿನಾಚೆ ಬೆಳೆದ ಧರ್ಮಗಳು ತಮ್ಮ ತಮ್ಮ ಅನುಕೂಲಕ್ಕೆ ಆದಿವಾಸಿಗಳನ್ನು ಧರ್ಮದ ಪರಿಧಿಗೆ ಸೇರಿಸಲು ಪ್ರಯತ್ನಿಸುವ ಯತ್ನವನ್ನೂ ತಿಳಿಸುತ್ತದೆ. ಬಹುಶಃ ಜಟ್ಟನಲ್ಲಿ ಮಹತ್ವದ ಬದಲಾವಣೆ ಕಾಣುವುದು ಅಷ್ಟೂ ದಿನದವರೆಗೆ ಊರ ತಾಯಿ ಶಿವನ ಹೆಂಡತಿಯೆಂಬ ನಂಬಿಕೆ ಪೂಜಾರಿಯಿಂದಲೇ ಸುಳ್ಳೆಂದು ಅರಿವಾದಾಗ. ಊರ ದೇವರೇ ಅನೈತಿಕ ಮಾರ್ಗದಲ್ಲಿ ಶಿವನ ಜೊತೆಗೆ ಕೂಡಿಕೆ ಮಾಡಿಕೊಂಡವಳು ಎಂಬ ಸಂಗತಿ ಅಲ್ಲಿಯವರೆಗಿನ ಸಂಸ್ಕೃತಿಯ ನಂಬಿಕೆಯ ಬುಡವನ್ನೇ ಅಲ್ಲಾಡಿಸಿಬಿಡುತ್ತದೆ. ಹಿಂದುತ್ವದ ಅಮಲಿನಿಂದ ಜಟ್ಟ ದೂರಾಗುವ ಹೊತ್ತಿಗೆ ಆತನ ಹೆಂಡತಿ ವಾಪಸ್ಸಾಗುತ್ತಾಳೆ. ಓಡಿಹೋದವನ ನಿರ್ಲಕ್ಷ್ಯದ ನೆಪದಿಂದ ವಾಪಸ್ಸಾಗುತ್ತಾಳೆ. ಮುಂಚಿನ ಜಟ್ಟನಾಗಿದ್ದರೆ ಕೊಂದೇ ಬಿಡುತ್ತಿದ್ದನೇನೋ. ಈಗ ಜಟ್ಟ ಬದಲಾಗಿದ್ದಾನೆ. ಆಕೆ ಓಡಿಹೋದದ್ದು ತನ್ನ ತಪ್ಪಿನಿಂದ ಎಂಬ ಅರಿವಾಗಿರುತ್ತದೆ. ಓಡಿಸಿಕೊಂಡು ಹೋದವನೂ ಅವಳನ್ನು ಹುಡುಕಿ ಬರುತ್ತಾನೆ. ಅವನನ್ನು ಕಂಡಾಗಲೂ ಜಟ್ಟ ಕೋಪಗೊಳ್ಳುವುದಿಲ್ಲ! ಅವರೀರ್ವರ ನಡುವೆ ಇನ್ನೂ ಪ್ರೀತಿ ಉಳಿದಿರುವುದನ್ನು ಕಂಡು ಅವರು ಮತ್ತೆ ಹೋಗಿ ಕೂಡಿ ಬಾಳಲು ಜಟ್ಟನೇ ಹೇಳುತ್ತಾನೆ! ಊರ ದೇವರ ಮರವನ್ನು ಕಡಿಯಲು ಬರುವವರನ್ನು ಕತ್ತರಿಸುತ್ತಾನೆ. ಧರ್ಮದ ಅಮಲಿನಿಂದ ಸಂಪೂರ್ಣ ಹೊರಬಂದ ಜಟ್ಟ ನಾಯಕಿಯ ಬಳಿ ಬರುತ್ತಾನೆ. ಸಿದ್ಧಾಂತದ ಅಮಲಿನಲ್ಲೇ ಮುಳುಗಿಹೋದ ನಾಯಕಿಗೆ ಧರ್ಮದ ಅಮಲು ಕಳೆದುಕೊಂಡ ಜಟ್ಟ ಕಾಣಿಸುವುದೇ ಇಲ್ಲ. ಹಲವಾರು ಸಂಗತಿಗಳನ್ನು ಅನರ್ಥ ಮಾಡಿಕೊಂಡು ಜಟ್ಟನನ್ನು ಕೊಂದೇ ಬಿಡುತ್ತಾಳೆ. ಧರ್ಮದ ಅಮಲಿನಷ್ಟೇ ಅಥವಾ ಅದಕ್ಕಿಂತಲೂ ಸಿದ್ಧಾಂತದ ಅಮಲು ಅಪಾಯಕಾರಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ನಿರ್ದೇಶಕರು.
ಇಡೀ ಚಿತ್ರವನ್ನು ಪ್ರೀತಿಯಿಂದ ಹೊತ್ತು ನಡೆಸಿದ್ದಾರೆ ನಾಯಕ ಕಿಶೋರ್. ಅವರಿಗೆ ಸರಿಸಮಾನವಾಗಿ ನಟಿಸಿ ಗಮನಸೆಳೆಯುವುದು ನಾಯಕಿ. ಬಹುತೇಕ ಎಲ್ಲಾ ಪಾತ್ರಗಳಿಂದಲೂ ಅತ್ಯುತ್ತಮವೆನ್ನಿಸುವಂತಹ ನಟನೆ ತೆಗೆದಿರುವುದು ಗಿರಿರಾಜರ ಹೆಗ್ಗಳಿಕೆ. ಈ ಮಾತನ್ನು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರ ಬಗ್ಗೆ ಹೇಳುವಂತಿಲ್ಲ! ಕಮ್ಯುನಿಸಂ ಎಂದರೆ ಮಾರ್ಕ್ಸ್, ಲೆನಿನ್, ಮಾವೋ ಎಂಬ ಮಾಮೂಲತೆಯಿಂದ ಹೊರಬಂದು ಇಲ್ಲಿ ಕಮ್ಯುನಿಷ್ಟರು ಹೆಚ್ಚು ಇಷ್ಟಪಡುವುದು ಅಂಬೇಡ್ಕರ್‍ರನ್ನು ಎಂದು ಬಿಂಬಿಸಿರುವುದು ಒಂದು ಮಹತ್ವದ ಬದಲಾವಣೆಯೇ ಹೌದು. ಚಿತ್ರದ ಕೊನೆಯಲ್ಲಿ ಜಟ್ಟನಿಗೆ ಹಿಂದುತ್ವದ ಅಮಲನ್ನು ತುಂಬಿದ ರಾಜಕಾರಣಿ ಜಟ್ಟನ ಉದಾಹರಣೆಯನ್ನೇ ನೀಡುತ್ತಾ ಇಂತಹ ಕಾಡುಮೃಗಗಳನ್ನು ನಾಗರೀಕರನ್ನಾಗಿ ಮಾಡಲು ಕಾರ್ಪೋರೇಟ್ ಸಂಸ್ಕೃತಿ ಕಾಡಿನೊಳಗೆ ಕಾಲಿಡಬೇಕು ಎನ್ನುವುದರೊಂದಿಗೆ ಧಾರ್ಮಿಕ ರಾಜಕೀಯ ನಾಯಕನ ಧರ್ಮದ ಅಮಲಿನ ಮುಖವಾಡ ಕಳಚಿ ಬೀಳುತ್ತದೆ.
No comments:
Post a Comment