Dr Ashok K R
ರಾಜ್ಯವಲ್ಲದ
ರಾಜ್ಯದ ಚುನಾವಣೆಯೊಂದು ದೇಶದ ರಾಜಕೀಯ ಭವಿಷ್ಯದ ದಾರಿಯನ್ನೇ ಬದಲಿಸಿಬಿಡುವ ಭಯ – ಆಶಾಭಾವನೆ
ಮೂಡಿಸಿದೆ. ಈ ಭಯ ಮತ್ತು ಆಶಾಭಾವನೆಗಳೆರಡೂ ಪ್ರತಿಯೊಂದನ್ನೂ ಅತಿಗೆ ತೆಗೆದುಕೊಂಡು ಹೋಗುವ
ಇವತ್ತಿನ ಸಾಮಾನ್ಯ ಮನಸ್ಥಿತಿಯ ಪ್ರತೀಕವಾಗಿದೆಯಾ? ದೆಹಲಿಯ ಚುನಾವಣೆಯ ನಂತರದಲ್ಲಿ ಮಾಧ್ಯಮ ಒಂದು
ದೊಡ್ಡ ಯು – ಟರ್ನ್ ತೆಗೆದುಕೊಂಡು ಅರವಿಂದ್ ಕೇಜ್ರಿವಾಲ್ ಎಂಬ ನಾಯಕನ ಮತ್ತಾತನ ಆಮ್ ಆದ್ಮಿ
ಪಕ್ಷದ ಗುಣಗಾನದಲ್ಲಿ ನಿಂತುಬಿಟ್ಟಿದೆ. ಸರಿಸುಮಾರು ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ
ಕಡೆಗಣಿಸಲ್ಪಟ್ಟ ವ್ಯಕ್ತಿಯೊಬ್ಬ ಮತ್ತೆ ಮೀಡಿಯಾ ಡಾರ್ಲಿಂಗ್ ಆಗಿಬಿಟ್ಟಿದ್ದು ಹೇಗೆ? ಗೆದ್ದೆತ್ತಿನ
ವರದಿ ಮಾಡುವುದಕ್ಕೂ ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮಾಧ್ಯಮದ
ಸಹಾಯವಿದ್ದರೆ ಚುನಾವಣೆಯಲ್ಲಿ ಗೆಲುವು ಕಾಣಬಹುದು ಎಂಬುದಕ್ಕೆ ಹೋದ ಬಾರಿಯ ದೆಹಲಿಯ ಚುನಾವಣೆ
ಮತ್ತು ಲೋಕಸಭಾ ಚುನಾವಣೆ ಉದಾಹರಣೆಯಾಗಿದ್ದರೆ ಮಾಧ್ಯಮಕ್ಕೆ ಅಪ್ರಿಯರಾದರೂ ಜನರ ನೇರ ಸಂಪರ್ಕದಿಂದ
ಚುನಾವಣೆಯೊಂದನ್ನು ಗೆಲ್ಲಬಹುದು ಎಂಬುದನ್ನು ನಿರೂಪಿಸಿದೆ ಈ ಬಾರಿಯ ದೆಹಲಿ ಚುನಾವಣೆ.
ಅರವಿಂದ್
ಕೇಜ್ರಿವಾಲರ ಹೆಸರನ್ನು ನಾನು ಮೊದಲು ಕೇಳಿದ್ದು ಎಂಬಿಬಿಎಸ್ ಓದುವಾಗ ಸರಿಸುಮಾರು ಹತ್ತು ವರುಷಗಳ
ಹಿಂದೆ. ಆಗ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿತ್ತು. ಯಾರಿದು ಅರವಿಂದ್ ಕೇಜ್ರಿವಾಲ್ ಎಂದು
ಅಂತರ್ಜಾಲದಲ್ಲಿ ಹುಡುಕಾಡಿದಾಗ ಅವರ ಪರಿವರ್ತನ್ ಸಂಸ್ಥೆಯ ಬಗ್ಗೆ ತಿಳಿದಿತ್ತು. ನಂತರದಲ್ಲಿ ಅವರ
ಹೆಸರು ಎಲ್ಲರ ಬಾಯಲ್ಲು ಕೇಳಿಬರಲಾರಂಭಿಸಿದ್ದು ಅಣ್ಣಾ ಹಜಾರೆಯವರ ನೇತೃತ್ವದ ಭ್ರಷ್ಟಾಚಾರ
ವಿರೋಧಿ ಆಂದೋಲನದ ಸಂದರ್ಭದಲ್ಲಿ. ಚಳುವಳಿಯ ಮುಂಚೂಣಿಯಲ್ಲಿ ಅರವಿಂದ್ ಕೇಜ್ರಿವಾಲ್, ಕಿರಣ್
ಬೇಡಿ, ಪ್ರಶಾಂತ್ ಭೂಷಣ್ ಇದ್ದರು. ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧವಷ್ಟೇ ಅಂದು
ಮಾತನಾಡಿತ್ತು ಈ ತಂಡ. Ofcourse ಆಗ ದೇಶದಲ್ಲಿ ಕಾಂಗ್ರೆಸ್ಸಿನ ಭ್ರಷ್ಟಾಚಾರವೇ ಹೆಚ್ಚಿತ್ತು
ಬಿಡಿ. ಕಾಂಗ್ರೆಸ್ ವಿರೋಧದ ಕಾರಣದಿಂದಾಗಿ ಈ ಆಂದೋಲನ ಬಿಜೆಪಿಯ ಬೆಂಬಲಿಗರು ಮತ್ತು
ಆರ್.ಎಸ್.ಎಸ್ಸಿನ ಬೆಂಬಲವನ್ನೂ ಪಡೆದುಕೊಂಡಿತ್ತು. ಬಾಬಾ ರಾಮದೇವರಂತಹ ಬಿಜೆಪಿ ಬೆಂಬಲಿಗರು
ನೇರವಾಗಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಜನಲೋಕಪಾಲದಂತಹ ಮಸೂದೆಯನ್ನು ಜಾರಿಗೊಳಿಸುವ ಗುರಿ
ಆಂದೋಲನಕ್ಕೆ ಇತ್ತಾದರೂ ಅವರದೇ ವಿಪರೀತ ಹಟ ಮತ್ತು ತಮ್ಮ ಕುತ್ತಿಗೆಗೇ ಬರುವ ಮಸೂದೆಯನ್ನು
ಜಾರಿಗೊಳಿಸಲಾಗದ ರಾಜಕಾರಣಿಗಳ ಕುಟಿಲತೆಗಳೆಲ್ಲವೂ ಸೇರಿ ಆಂದೋಲನವನ್ನು ವಿಫಲಗೊಳಿಸಿದವು. ತನ್ನ
ಉದ್ದೇಶದಲ್ಲಿ ವಿಫಲವಾದರೂ ಕಾಂಗ್ರೆಸ್ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಭ್ರಷ್ಟಾಚಾರ
ವಿರೋಧಿ ಆಂದೋಲನ ಯಶ ಕಂಡಿತ್ತು. ಒಂದು ಮಸೂದೆಯನ್ನು ಜಾರಿಗೊಳಿಸಲು ರಾಜಕೀಯ ಪ್ರಭುತ್ವ
ಪಡೆಯುವುದೇ ದಾರಿ, ಕೇವಲ ಹೋರಾಟಗಳಿಂದ ಸಾಧ್ಯವಾಗಲಾರದು ಎಂಬ ಭಾವನೆಯಿಂದ ಅರವಿಂದ್ ಕೇಜ್ರಿವಾಲ್
‘ಆಮ್ ಆದ್ಮಿ ಪಕ್ಷ’ ಪ್ರಾರಂಭಿಸಿದಾಗ ಅವರನ್ನು ಹೀಗಳೆದವರೇ ಹೆಚ್ಚು. ಆಂದೋಲನದ ನೇತೃತ್ವ ವಹಿಸಿದ್ದ ಅಣ್ಣಾ ಹಜಾರೆಯವರು ಕೂಡ ಅರವಿಂದ್
ಕೇಜ್ರಿವಾಲರ ಬೆಂಬಲಕ್ಕೆ ನಿಲ್ಲಲಿಲ್ಲ. ಕಿರಣ್ ಬೇಡಿ ಕೇಜ್ರಿವಾಲರ ರಾಜಕೀಯ ನಡೆಯನ್ನು
ಸಾರಾಸಗಟಾಗಿ ವಿರೋಧಿಸಿದರು. ಒಂದು ಆಂದೋಲನವನ್ನು ತನ್ನ ರಾಜಕೀಯ ಆಕಾಂಕ್ಷೆಗಾಗಿ ಬಳಸಿಕೊಂಡ ಆರೋಪ
ಕೇಜ್ರಿವಾಲರ ಮೇಲಿತ್ತು. ಚಳುವಳಿಗಳು ರಾಜಕೀಯ ಗೆಲುವಿಗೆ ಸಹಕಾರಿಯಾಗುವುದಿಲ್ಲ ಎಂಬ ಇತಿಹಾಸದ
ಅನೇಕ ಉದಾಹರಣೆಗಳನ್ನು ಸುಳ್ಳು ಮಾಡುವ ಜವಾಬ್ದಾರಿ ಆಮ್ ಆದ್ಮಿ ಪಕ್ಷದ ಮೇಲಿತ್ತು.
2013ರ
ಡಿಸೆಂಬರಿನಲ್ಲಿ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲಾರದೇ ಮಾತು.
ಅವರ ಮಾತುಗಳೆಲ್ಲವೂ ರಾಷ್ಟ್ರೀಯ ಮಾಧ್ಯಮಗಳೆನ್ನಿಸಿಕೊಂಡ ದೃಶ್ಯವಾಹಿನಿಗಳಲ್ಲಿ ಅತಿಹೆಚ್ಚು
ಸಮಯವನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ಸಿನ ಹದಿನೈದು ವರುಷದ ಆಡಳಿತದ ವೈಫಲ್ಯ, ಕೇಂದ್ರದಲ್ಲಿ
ಹತ್ತು ವರುಷಗಳಿಂದ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹುಳುಕುಗಳೆಲ್ಲವೂ
ಕಾಂಗ್ರೆಸ್ಸಿನ ಸೋಲನ್ನು ಖಚಿತಪಡಿಸಿದ್ದವು. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಬ್ಯಾಂಕಲ್ಲಿ
ಒಂದಷ್ಟನ್ನು ಕಸಿದುಕೊಂಡರೆ ತಮಗೆ ಜಯ ಖಂಡಿತ ಎಂದು ಬಿಜೆಪಿ ನಂಬಿತ್ತು. ಜೊತೆಗೆ ಅಂದಿನ ಕಪ್ತಾನ
ಡಾ.ಹರ್ಷವರ್ಧನರ ವೈಯಕ್ತಿಕ ವರ್ಚಸ್ಸು ಪಕ್ಷಕ್ಕೆ ಅನುಕೂಲಕರವಾಗುತ್ತದೆ ಎಂದು ನಂಬಲಾಗಿತ್ತು.
ಆಮ್ ಆದ್ಮಿ ಪಕ್ಷ ಬಿಜೆಪಿ ಗೆಲುವಿಗೆ ಸಹಾಯ ಮಾಡುವ ಪಕ್ಷವಾಗಿ ಅಂದು ಕಂಡಿತ್ತೇ ಹೊರತು ಅದು
ಹತ್ತಂಕಿಯ ಸ್ಥಾನಗಳನ್ನು ಗೆಲ್ಲುವುದನ್ನು ಕೂಡ ಯಾರೂ ಊಹಿಸಿರಲಿಲ್ಲ. ಬಿಜೆಪಿ ಅನಾಯಾಸವಾಗಿ
ಬಹುಮತ ಪಡೆಯುತ್ತದೆ ಎಂಬ ನಂಬಿಕೆಯನ್ನು ಸುಳ್ಳು ಮಾಡಿದ ಮತದಾರ ಆಮ್ ಆದ್ಮಿ ಪಕ್ಷಕ್ಕೆ 28
ಸ್ಥಾನಗಳನ್ನು ಕೊಟ್ಟಿದ್ದ. ಬಿಜೆಪಿ ಬೇರೆಲ್ಲಾ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು
ಯಶಸ್ವಿಯಾದರೂ ಅಧಿಕಾರ ಹಿಡಿಯುವುದಕ್ಕೆ ಬೇಕಿದ್ದ ಮಾಯಾ ಸಂಖೈಯನ್ನು ಪಡೆಯಲು ವಿಫಲವಾಗಿತ್ತು.
ಆಮ್ ಆದ್ಮಿಯನ್ನು ಹಸುಗೂಸೆಂದು ತಳ್ಳಿಹಾಕುವಂತಿಲ್ಲ ಎಂದು ತೋರಿಸಿತ್ತು ಕಳೆದ ಬಾರಿಯ ಚುನಾವಣೆ.
ಸ್ಪಷ್ಟ ಬಹುಮತ ಪಡೆಯದ ಕಾರಣ ಆಮ್ ಆದ್ಮಿ ಪಕ್ಷ ತಾನು ಅದುವರೆಗೂ ವಿರೋಧಿಸಿಕೊಂಡೇ ಬಂದಿದ್ದ
ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲವನ್ನು ಪಡೆದುಕೊಂಡು ಸರಕಾರ ರಚಿಸಿತು. ಬಿಜೆಪಿಯ ಬೆಂಬಲಿಗರಿಂದ
ಕಾಂಗ್ರೆಸ್ಸಿನ ಬಿ ಟೀಮ್ ಆಮ್ ಆದ್ಮಿ ಪಕ್ಷ ಎಂಬ ಆರೋಪಕ್ಕೂ ಒಳಗಾಯಿತು. ಬಾಹ್ಯ ಬೆಂಬಲವಷ್ಟೇ,
ಸರಕಾರದ ನೀತಿ ರೀತಿಗಳು ನಮ್ಮ ಪಕ್ಷದ್ದೇ ಆಗಿರುತ್ತದೆ ಎಂಬ ಹೇಳಿಕೆಗಳು ಹೆಚ್ಚೇನೂ ಸಹಾಯ
ಮಾಡಲಿಲ್ಲ. ಆಮ್ ಆದ್ಮಿ ಪಕ್ಷದ ಹುಟ್ಟಿಗೆ ಮೂಲ ಪ್ರೇರಕ ಶಕ್ತಿಯಾಗಿದ್ದ ಜನಲೋಕಪಾಲ್ ಮಸೂದೆಯನ್ನು
ಕೊನೆಗೆ ದೆಹಲಿಯ ಮಟ್ಟಿಗಾದರೂ ಜಾರಿಗೊಳಿಸುವ ಉದ್ದೇಶಕ್ಕೆ ಬೇರೆ ಪಕ್ಷಗಳಿಂದ ಬೆಂಬಲ ದೊರಕದ ಕಾರಣ
ತನ್ನ ಮೊದಲ ಅಧಿಕಾರಾವಧಿಯನ್ನು ನಲವತ್ತೊಂಬತ್ತು ದಿನಕ್ಕೇ ಮೊಟಕುಗೊಳಿಸುವ ನಿರ್ಧಾರ
ಪ್ರಕಟಿಸಿತು, ರಾಜೀನಾಮೆ ನೀಡಿತು. ಏತನ್ಮಧ್ಯೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧರಣಿ
ಕುಳಿತದ್ದೂ ನಡೆಯಿತು. ಮುಖ್ಯಮಂತ್ರಿಯೇ ಅರಾಜಕತೆ ಸೃಷ್ಟಿಸುತ್ತ ಧರಣಿ ನಡೆಸಿದ್ದು
ಪ್ರಜಾಪ್ರಭುತ್ವದಲ್ಲಿ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಯೂ ನಡೆಯಿತು. ನಲವತ್ತೊಂಭತ್ತು ದಿನಕ್ಕೇ
ನೀಡಿದ ರಾಜೀನಾಮೆ ಆಮ್ ಆದ್ಮಿ ಪಕ್ಷದ ರಾಜಕೀಯ ಆತ್ಮಹತ್ಯೆಯ ನಡೆ ಎಂದು ಶರಾ ಬರೆಯಲಾಯಿತು.
ಇಷ್ಟರಲ್ಲಿ
ಲೋಕಸಭಾ ಚುನಾವಣೆಗೆ ಆಖಾಡ ಸಿದ್ಧವಾಗಿತ್ತು. ಮೋದಿಯ ಹೆಸರು ಹೆಚ್ಚೆಚ್ಚು ಕೇಳಲಾರಂಭಿಸಿತು.
ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧ ಎದ್ದ ಅಲೆ ಮತ್ತು ಮೋದಿಯ ‘ಅಭಿವೃದ್ಧಿ’ ಮಂತ್ರದ ಪರವಾಗಿ
ಎದ್ದ ಅಲೆ ಬಿಜೆಪಿ ಈ ಬಾರಿ ಕೇಂದ್ರದಲ್ಲಿ ಆಡಳಿತ ಹಿಡಿಯುವುದು ಶತಸಿದ್ಧ ಎಂಬ ಭಾವನೆಯನ್ನು
ನಿಧಾನವಾಗಿಯಾದರೂ ಮೂಡಿಸಲಾರಂಭಿಸಿತು. ದೆಹಲಿಯನ್ನೇ ಸರಿಯಾಗಿ ಉಳಿಸಿಕೊಳ್ಳಲಾಗದ ಕೇಜ್ರಿವಾಲ್
ಮತ್ತವರ ಪಕ್ಷ ದೇಶದೆಲ್ಲೆಡೆ ಕಾರ್ಯಕರ್ತರ ಪಡೆಯನ್ನು ಕಟ್ಟುವ ಮೊದಲೇ ಸಾಧ್ಯವಾಗುವ ಎಲ್ಲಾ
ಕ್ಷೇತ್ರಗಳಲ್ಲೂ ಸ್ಪರ್ಧಿಸುವ ನಿರ್ಧಾರ ಮಾಡಿತು. ಬಹುಶಃ ಅವರು ಕೊಟ್ಟ ರಾಜೀನಾಮೆಗಿಂತ ಯಾವುದೇ
ಪೂರ್ವ ತಯಾರಿಯಿಲ್ಲದೆ ಲೋಕಸಭೆಗೆ ಸ್ಪರ್ಧಿಸುವ ಅದರ ನಿರ್ಧಾರ ಪಕ್ಷಕ್ಕೆ ನಕರಾತ್ಮಕವಾಗಿ
ಪರಿಣಮಿಸಿತು ಎಂದರೆ ತಪ್ಪಲ್ಲ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅಂಬಾನಿ, ಅದಾನಿ ವಿರುದ್ಧ
ಅವರು ನೀಡಿದ ಹೇಳಿಕೆ ಇದ್ದಕ್ಕಿದ್ದಂತೆ ಮೀಡಿಯಾ ಡಾರ್ಲಿಂಗ್ ಪಟ್ಟವನ್ನು ಅವರಿಂದ
ಕಸಿದುಕೊಂಡಿತು. ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ಅವರು ನಿಷಿದ್ಧರಾಗಿಹೋದರು. ಸಾಂಕೇತಿಕ ಸ್ಪರ್ಧೆ
ಪ್ರಜಾಪ್ರಭುತ್ವದಲ್ಲಿ ಅಗತ್ಯವಾದರೂ ಆಮ್ ಆದ್ಮಿ ಪಕ್ಷದ ದಿಡೀರ್ ಸ್ಪರ್ಧೆ ಪಕ್ಷದ ಕೆಲವು
ಕಾರ್ಯಕರ್ತರಲ್ಲೇ ಬೇಸರ ಮೂಡಿಸಿದ್ದು ಸುಳ್ಳಲ್ಲ. ಮೋದಿಯ ಅಭಿವೃದ್ಧಿ ಮಂತ್ರ ಮತ್ತು ಹಿಂದೂ
ಸಂಘಟನೆಗಳ ತಂತ್ರಗಳು ಎಲ್ಲರ ನಿರೀಕ್ಷೆ ಮೀರಿಸಿ ಸಫಲವಾದವು. ಕಾಂಗ್ರೆಸ್ ಸೋಲುವುದು
ಖಚಿತವಾಗಿತ್ತು. ಬಿಜೆಪಿ ನೇತೃತ್ವದ ಎನ್.ಡಿ.ಎ ಬಹುಮತದ ಹತ್ತಿರಕ್ಕೆ ಬರುತ್ತದೆ, ಕೆಲವು
ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಸರಕಾರ ರಚಿಸುತ್ತದೆ ಎಂಬ ನಿರೀಕ್ಷೆ ಫಲಿತಾಂಶದಿಂದ ಬದಲಾಯಿತು.
ದಶಕಗಳ ನಂತರ ಏಕಪಕ್ಷವೊಂದು ಬಹುಮತ ಪಡೆಯಿತು. ಲೋಕಸಭಾ ಚುನಾವಣೆಯ ನಂತರ ನಡೆದ ಅನೇಕ ವಿಧಾನಸಭಾ
ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ನರೇಂದ್ರ ಮೋದಿ ಮತ್ತು ಅಮಿತ್ ಶಾರ ಜೋಡಿಯನ್ನು
ಸದ್ಯದಲ್ಲಿ ಯಾರೂ ಮಣಿಸಲಾಗುವುದಿಲ್ಲ ಎಂಬುದನ್ನು ಸುಳ್ಳು ಮಾಡಿದ್ದು ಬಿಹಾರದ ಉಪಚುನಾವಣೆಯೆಂದರೆ
ತಪ್ಪಲ್ಲ. ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಜೊತೆ ಸೇರಿ
ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಕಂಡಿದ್ದ ಬಿಜೆಪಿಯನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವ
ಮೂಲಕ ಸರಿಯಾದ ರಾಜಕೀಯ ತಂತ್ರಗಳಿಂದ ಮೋದಿ – ಶಾ ಜೋಡಿಯನ್ನು ಮಣಿಸಬಹುದು ಎಂದು
ತೋರಿಸಿಕೊಟ್ಟಿದ್ದರು. ಇವುಗಳ ಮಧ್ಯೆ ದೆಹಲಿ ಚುನಾವಣೆ ಘೋಷಣೆಯಾಯಿತು.
ದೆಹಲಿಯೆಂಬುದು
ಎಪ್ಪತ್ತು ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯವಲ್ಲದ ರಾಜ್ಯ. ದೊಡ್ಡ ದೊಡ್ಡ ರಾಜ್ಯಗಳ ಚುನಾವಣೆಗೆ
ಸಿಗದ ಮಹತ್ವ ದೆಹಲಿ ಚುನಾವಣೆಗೆ ಸಿಗುತ್ತದೆಂದರೆ ಅದಕ್ಕೆ ಕಾರಣ ದೆಹಲಿ ದೇಶದ ರಾಜಧಾನಿ ಮತ್ತು ‘ರಾಷ್ಟ್ರೀಯ’
ಮಾಧ್ಯಮಗಳೆನ್ನಿಸಿಕೊಂಡವು ದೇಶದ ರಾಜಧಾನಿಯಲ್ಲಿ ತಮ್ಮ ತಮ್ಮ ಒಬಿ ವ್ಯಾನುಗಳನ್ನು
ನಿಲ್ಲಿಸಿಕೊಂಡು ನಿಂತಿರುವುದು. ಕರ್ನಾಟಕದಲ್ಲಿ ಹೇಗೆ ಬೆಂಗಳೂರಿನ ಘಟನೆಗಳು ಹೆಚ್ಚು
ಸುದ್ದಿಯಾಗುತ್ತದೆಯೋ ಅದೇ ರೀತಿ ದೇಶದ ಮಟ್ಟಿಗೆ ದೆಹಲಿಯ ಕದಲಿಕೆಗಳಿಗೆ ಹೆಚ್ಚು ಮಹತ್ವ. ಒಂದು
ರೀತಿಯಲ್ಲಿ ಇದು ತಪ್ಪೆನ್ನಿಸಿದರೂ ಒಪ್ಪಿಕೊಳ್ಳಲೇಬೇಕಾದ ತಪ್ಪಿದು, ವಿಧಿಯಿಲ್ಲ. ಒಂದೂವರೆ
ಹಿಂದಿದ್ದ ಆಮ್ ಆದ್ಮಿ ಮೇನಿಯಾ ಈ ಬಾರಿಯಿರಲಿಲ್ಲ, ಮಾಧ್ಯಮದ ಮಟ್ಟಿಗೆ. ಅರವಿಂದ್
ಕೇಜ್ರಿವಾಲರಾಗಲೇ ಬಹುತೇಕ ಮಾಧ್ಯಮಗಳಿಂದ ನಿಷೇಧಕ್ಕೊಳಗಾಗಿದ್ದರು. ಮೋದಿ – ಶಾ ಜೋಡಿಯ ಚಾಣಾಕ್ಷ
ರಾಜಕೀಯ ನಡೆಗಳಾಗಲೇ ಖ್ಯಾತಿ ಪಡೆದಿದ್ದರಿಂದ ಈ ಬಾರಿಯೂ ಅವರ ಜೋಡಿಯ ರಾಜಕೀಯಕ್ಕೇ ಗೆಲುವು ಖಂಡಿತ
ಎಂದು ನಂಬಲಾಗಿತ್ತು. ಜೊತೆಗೆ ದೆಹಲಿಯಿಂದಲೇ ಕಾರ್ಯಭಾರ ನಡೆಸುವ ಕೇಂದ್ರ ಸರಕಾರದ ಪರವಾಗಿಯೇ
ಜನರು ಮತ ನೀಡುತ್ತಾರೆ ಎಂದು ನಂಬಲಾಗಿತ್ತು. ಇನ್ನಿತರೆ ರಾಜ್ಯಗಳಲ್ಲೇ ಗೆಲುವು ಕಂಡಿದ್ದೇವೆ,
ಇಲ್ಲಿ ಗೆಲ್ಲುವುದೇನು ದೊಡ್ಡ ಮಾತು ಎಂಬ ಬಿಜೆಪಿಯ ವಿಶ್ವಾಸ ಅತಿಯಾಗಿದ್ದೇ ಅವರಿಗೆ
ಮುಳುವಾಯಿತಾ? ಚಾಣಾಕ್ಷ್ಯ ರಾಜಕೀಯ ನಡೆಗಳೂ ಕೆಲವೊಮ್ಮೆ ತಪ್ಪಾಗಿರುತ್ತದೆ ಎನ್ನುವುದಕ್ಕೆ ದೆಹಲಿ
ಸಾಕ್ಷಿಯಾಯಿತು.
ಅದು
2004ರ ಚುನಾವಣೆ. ಮಾಧ್ಯಮಗಳಲ್ಲೆಲ್ಲಾ ಬಿಜೆಪಿಯ ಇಂಡಿಯಾ ಶೈನಿಂಗಿನದ್ದೆ ಕಲರವ; ಮಾಧ್ಯಮಗಳನ್ನೇ
ಗಮನಿಸುವವರಿಗೆ ಗೆಲುವು ಬಿಜೆಪಿಯದ್ದೇ ಎಂಬ ಭಾವ ಮೂಡಿಸಲಾಗಿತ್ತು. ಆದರೆ ನಡೆದದ್ದೇ ಬೇರೆ.
ಬಿಜೆಪಿ ಸೋಲನ್ನನುಭವಿಸಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅಧಿಕಾರಕ್ಕೆ ಬಂತು. ತಳಮಟ್ಟ ತಲುಪದ
ಬಿಜೆಪಿಯ ಕಾರ್ಯಕ್ರಮಗಳು ಇದಕ್ಕೆ ಎಷ್ಟು ಕಾರಣವೋ ಸೋನಿಯಾ ಗಾಂಧಿಯ ವಿದೇಶಿ ಮೂಲವನ್ನು ಪದೇ ಪದೇ
ಕೆಣಕಿದ್ದೂ ಕಾಂಗ್ರೆಸ್ಸಿನೆಡೆಗೆ ಮತಗಳು ಹರಿಯಲು ಕಾರಣವಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ
ನರೇಂದ್ರ ಮೋದಿಯನ್ನು ವೈಚಾರಿಕವಾಗಿ ವಿರೋಧಿಸುವುದಕ್ಕಿಂತ ವೈಯಕ್ತಿಕವಾಗಿ ಹೀಗಳೆಯುವುದರಲ್ಲೇ
ಅನ್ಯ ಪಕ್ಷಗಳು ಆಸಕ್ತಿ ವಹಿಸಿದವು. ಮತದಾರ ಬಿಜೆಪಿಯನ್ನು ಗೆಲ್ಲಿಸಿದ. ಇದರಿಂದ ಸ್ಪಷ್ಟವಾದ
ಅಂಶವೆಂದರೆ ಭಾರತೀಯ ಮತದಾರ ವೈಯಕ್ತಿಕ ಹೀಗಳಿಕೆಯನ್ನು ಇಷ್ಟಪಡುವುದಿಲ್ಲ. ಗೆಲುವು ಮತ್ತು
ಸೋಲಿಗೆ ಸಾವಿರ ಕಾರಣಗಳಿರುತ್ತವಾದರೂ ಅವುಗಳಲ್ಲಿ ಇದೂ ಒಂದು ಎಂಬುದನ್ನು
ಅಲ್ಲಗೆಳೆಯಲಾಗುವುದಿಲ್ಲ. ಇವುಗಳ ಅರಿವಾಗದೆಯೋ ಏನೋ ನರೇಂದ್ರ ಮೋದಿ ಮತ್ತವರ ಪಕ್ಷ ದೆಹಲಿಯ
ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲರನ್ನು ವೈಯಕ್ತಿಕ ಹೀಗಳಿಕೆಗೆ ಗುರಿಪಡಿಸಲಾರಂಭಿಸಿದರು. ಕಳೆದೊಂದು
ವರುಷದಿಂದ ನರೇಂದ್ರ ಮೋದಿಯವರ ಬಾಯಲ್ಲಿ ‘ಅಭಿವೃದ್ಧಿ’ ಮಂತ್ರವನ್ನಷ್ಟೇ ಕೇಳಿದ್ದ ಜನರು ಈಗ ಹೊಸ
ರೀತಿಯ ಭಾಷಣವನ್ನು ಕೇಳಲಾರಂಭಿಸಿದರು. ಅರವಿಂದ್ ಕೇಜ್ರಿವಾಲ್ ಒಬ್ಬ ಅರಾಜಕ, ನಿಷ್ಪ್ರಯೋಜಕ,
ಕಾಡು ಸೇರಿ ಆತ ನಕ್ಸಲನಾಗಲಿ ಎಂಬ ನರೇಂದ್ರ ಮೋದಿಯವರ ಹೇಳಿಕೆ, ಎಕೆ 49 ಎಂಬ ಮೂದಲಿಕೆ ಬಿಜೆಪಿಗೆ
ಕೆಡುಕನ್ನೇ ಉಂಟು ಮಾಡಿತು. ಡಾ.ಹರ್ಷವರ್ಧನರನ್ನು ಕೈಬಿಟ್ಟು, ದೆಹಲಿಯ ಸ್ಥಳೀಯ ನಾಯಕರನ್ನು
ಮರೆತು ಆಮ್ ಆದ್ಮಿ ಪಕ್ಷ ಕಟ್ಟಿ ರಾಜಕೀಯ ಸೇರಿದ ಅರವಿಂದ್ ಕೇಜ್ರಿವಾಲರ ನಡೆಯನ್ನು ಕಟುವಾಗಿ
ವಿರೋಧಿಸಿದ್ದ ಕಿರಣ್ ಬೇಡಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ
ಘೋಷಿಸಿದ್ದು ಆಮ್ ಆದ್ಮಿ ಪಕ್ಷದ ಸರಳ ರಾಜಕೀಯದಿಂದ ಬಿಜೆಪಿಯ ಮೋದಿ – ಶಾ ಜೋಡಿ
ಗಲಿಬಿಲಿಗೊಳಗಾಗಿದ್ದನ್ನು ತೋರ್ಪಡಿಸಿತು. ಕಿರಣ್ ಬೇಡಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಎರಡು
ಪ್ರಮುಖ ಕಾರಣಗಳಿತ್ತು. ಅವರ ವರ್ಚಸ್ಸಿನಿಂದ ಒಂದಷ್ಟು ಮತಗಳನ್ನು ಸೆಳೆಯಲು ಸಾಧ್ಯವಾದರೆ ತನ್ನ
ಸಾಂಪ್ರದಾಯಿಕ ಮತಗಳೊಡನೆ ಗೆಲುವು ಸಾಧ್ಯ ಮತ್ತಾ ಗೆಲುವನ್ನು ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ
ಅರ್ಪಿಸಬಹುದು ಎಂಬುದು ಮೊದಲ ಕಾರಣವಾದರೆ ಬಿಜೆಪಿ ಅಧಿಕಾರ ಹಿಡಿಯಲು ವಿಫಲವಾದರೆ ಕಿರಣ್ ಬೇಡಿಯವರ
ತಲೆಗೆ ಆ ಸೋಲನ್ನು ಕಟ್ಟವುದು ಮತ್ತೊಂದು ಕಾರಣ. ಬಿಜೆಪಿಯ ಈ ರಾಜಕೀಯ ನಡೆಗಳ ನಡುವೆ,
ಮಾಧ್ಯಮಗಳಲ್ಲಿ ಅವರಿಗೆ ಸಿಕ್ಕುತ್ತಿದ್ದ ಅಪಾರ ಸಮಯದ ನಡುವೆ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ
ಪಕ್ಷ ಗೆಲುವು ಕಂಡಿದ್ದಾದರೂ ಹೇಗೆ?
ಮಾಧ್ಯಮಗಳಿಂದ
ದೂರಾಗಿದ್ದ ಅರವಿಂದ್ ಕೇಜ್ರಿವಾಲ್ ಸರಳ ರಾಜಕೀಯ ನಡೆಯನ್ನು ಅನುಸರಿಸಿದ್ದರು. ಮಾಧ್ಯಮಗಳನ್ನು
ರಾಜಕಾರಣಿಗಳು ಬಳಸಿಕೊಳ್ಳುವುದು ಜನರನ್ನು ತಲುಪುವ ಸಲುವಾಗಿ. ಆ ಕಾರ್ಯವನ್ನು ಆಮ್ ಆದ್ಮಿ ಪಕ್ಷ
ನೇರವಾಗಿ ಜನರನ್ನು ಭೇಟಿ ಮಾಡುವ ಮೂಲಕ ಮತದಾರರ ಮನಗೆಲ್ಲಲು ಪ್ರಾರಂಭಿಸಿದರು. ಜೊತೆಗೆ ಸಾಮಾಜಿಕ
ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಹಿಂದೆ ಬೀಳಲಿಲ್ಲ. ನಡೆಸಿದ್ದು ನಲವತ್ತೊಂಬತ್ತೇ ದಿನಗಳ
ಆಡಳಿತವಾದರೂ ಆ ದಿನಗಳಲ್ಲೇ ನಾವು ಉತ್ತಮವಾದ ಕೆಲಸಗಳನ್ನು ಮಾಡಲು ಪ್ರಯತ್ನಿಸಿದೆವು ಎಂದು
ಮನವರಿಕೆ ಮಾಡಲು ಯತ್ನಿಸಿದರು. ತಮ್ಮ ತಪ್ಪುಗಳನ್ನು ಸಮರ್ಥಿಸುವ ಕೆಲಸಕ್ಕೆ ಕೈ ಹಾಕದೆ
ನಲವತ್ತೊಂಬತ್ತು ದಿನಕ್ಕೇ ರಾಜೀನಾಮೆ ಕೊಟ್ಟು ತಪ್ಪು ಮಾಡಿಬಿಟ್ಟೆವು, ನಮ್ಮನ್ನು ಕ್ಷಮಿಸಿಬಿಡಿ
ಎಂಬ ಆಮ್ ಆದ್ಮಿ ಪಕ್ಷದವರು ಪದೇ ಪದೇ ಹೇಳಿದ್ದು ಜನರಿಗೆ ಅವರು ಪ್ರಾಮಾಣಿಕರು ಎಂಬ ಭಾವ
ಮೂಡಿಸಿಬಿಟ್ಟಿತು. ಮಾಡಿದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ರಾಜಕಾರಣಿಗಳನ್ನೇ ನೋಡಿದ್ದವರಿಗೆ
ಕ್ಷಮಾಯಾಚನೆ ಹೊಸ ರೀತಿಯ ನಡೆಯಾಗಿ ಕಂಡಿತು. ತನ್ನದೇ ಹೆಸರು ಛಾಪಿಸಿರುವ ಸೂಟನ್ನು
ಧರಿಸುವವರಿಗಿಂತ ತಲೆಯ ಮೇಲೊಂದು ಹಳೆಯ ಮಫ್ಲರ್ ಸುತ್ತಿಕೊಳ್ಳುವವನೇ ತಮಗೆ ಹತ್ತಿರದವ ಎಂಬ ಭಾವನೆ
ಮೂಡಿರಲಿಕ್ಕೂ ಸಾಕು. ಪ್ರಣಾಳಿಕೆ ಬಿಡುಗಡೆ ಮಾಡಲೇ ಹರಸಾಹಸ ಪಟ್ಟ ಬಿಜೆಪಿಗಿಂತ ಅವಾಸ್ತವ
ಅಂಶಗಳನ್ನೊಳಗೊಂಡಿದ್ದರೂ ಎಪ್ಪತ್ತು ಅಂಶಗಳ ಜನರಿಗೆ ಹತ್ತಿರವಾದ ವಿಷಯಗಳಿಗೆ ಸಂಬಂಧಪಟ್ಟಂತಹ
ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವುದೇ ಸರಿ ಎಂಬ ನಿರ್ಧಾರ
ಮಾಡಿಬಿಟ್ಟ. ಯಾರೂ ನಿರೀಕ್ಷಿಸದ, ಚುನಾವಣೋತ್ತರ ಸಮೀಕ್ಷೆಗಳು ನಿರೀಕ್ಷೆ ಮಾಡದ ರೀತಿಯಲ್ಲಿ
ಎಪ್ಪತ್ತು ಸ್ಥಾನಗಳಲ್ಲಿ ಅರವತ್ತೇಳು ಸ್ಥಾನಗಳನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಿಬಿಟ್ಟ ಮತದಾರ.
ಮತಗಳಿಕೆಯ ಆಧಾರದಲ್ಲಿ ನೋಡುವುದಾದರೆ ಬಿಜೆಪಿ ಕಳೆದುಕೊಂಡಿದ್ದು ಕೇವಲ ಒಂದು ಪರ್ಸೆಂಟ್ (ಕಳೆದ
ಚುನಾವಣೆಯಲ್ಲಿ 33%, ಈ ಬಾರಿ 32%). ಉಳಿದೆಲ್ಲಾ ಪಕ್ಷಗಳ ಮತಗಳನ್ನೂ ತನ್ನೆಡೆಗೆ ಸೆಳೆದುಕೊಂಡ
ಆಮ್ ಆದ್ಮಿ ಪಕ್ಷ 54% ಪಡೆದುಕೊಂಡಿತು. ಜನರು ಅರವಿಂದ್ ಕೇಜ್ರಿವಾಲರನ್ನೇ ಗೆಲ್ಲಿಸಬೇಕೆಂದು ನಿರ್ಧರಿಸಿದ್ದು
ಇದರಿಂದ ಸ್ಪಷ್ಟವಾಗುತ್ತದೆ.
ಇದು ನರೇಂದ್ರ ಮೋದಿಯ
ಸೋಲಿನ ಪ್ರಾರಂಭವಾ?
ಲೋಕಸಭಾ
ಚುನಾವಣೆಗೂ ವಿಧಾನಸಭಾ ಚುನಾವಣೆಗೂ ಅನೇಕಾನೇಕ ವ್ಯತ್ಯಾಸಗಳಿರುತ್ತವೆ. ಲೋಕಸಭೆಯಲ್ಲಿ ಬೆಂಬಲಿಸಿದ
ಪಕ್ಷವನ್ನೇ ಮತದಾರ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ. ಸ್ಥಳೀಯ ಕಾರಣಗಳು, ಸ್ಥಳೀಯ
ಅವಶ್ಯಕತೆಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ಆದರೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಪಕ್ಷ
ಕೊನೇ ಪಕ್ಷ ಒಂದೆರಡು ವರುಷವಾದರೂ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಸಾಮಾನ್ಯ.
ವಿವಿಧ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಕಂಡಾಗ ಇದು ಮೋದಿ ಅಲೆಯಿಂದಾದ ಗೆಲುವು ಎಂದು
ಸಂಭ್ರಮಿಸುತ್ತಿದ್ದ ಬಿಜೆಪಿ ದೆಹಲಿಯ ಸೋಲನ್ನು ಮೋದಿ ಅಲೆಗುಂಟಾದ ಸೋಲು ಎಂದೊಪ್ಪಲು ತಯಾರಿಲ್ಲ!
ಗೆಲುವಿಗೆ ಸಾವಿರ ಗೆಳೆಯರು, ಸೋಲು ಅನಾಥ ಎಂಬ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ! ದೆಹಲಿ
ಚುನಾವಣೆಗೆ ಮುಂಚೆಯೇ ವೆಂಕಯ್ಯ ನಾಯ್ಡು ‘ಈ ಚುನಾವಣೆ ಮೋದಿ ಸರಕಾರದ ಕೆಲಸದ ಪರಾಮರ್ಶೆಯಲ್ಲ’
ಎಂಬರ್ಥದ ಹೇಳಿಕೆ ನೀಡಿದ್ದು ಚುನಾವಣೆಯಲ್ಲಿ ಸೋಲುವ ಮುನ್ಸೂಚನೆ ಬಿಜೆಪಿಗೆ ಮೊದಲೇ ಸಿಕ್ಕಿತ್ತು
ಎಂಬುದನ್ನು ಸೂಚಿಸುತ್ತದೆ. ಸೋಲಿನ ನಂತರ ಕಿರಣ್ ಬೇಡಿ ಬಿಜೆಪಿಯನ್ನು, ಬಿಜೆಪಿಯ ದೆಹಲಿಯ
ಕಾರ್ಯಕರ್ತರು ತಪ್ಪು ನಡೆ ನಡೆಸಿದ ಮೋದಿ – ಶಾ ಜೋಡಿಯನ್ನು, ಕಿರಣ್ ಬೇಡಿಯನ್ನು ದೂರುವುದರಲ್ಲಿ
ಬ್ಯುಸಿಯಾಗಿದ್ದಾರೆ! ಸೋಲಿಗೆ ಅತೀತರಾದವರು ಯಾರೂ ಇಲ್ಲ ಎಂಬ ಅಂಶವನ್ನು ದೆಹಲಿಯ ಚುನಾವಣೆ
ನಿರೂಪಿಸಿದೆ.
ಚುನಾವಣೆಯಲ್ಲಿ
ಬಹುಮತ ಪಡೆಯುವುದು ರಾಜಕೀಯ ಪಕ್ಷದ ವಿಶ್ವಾಸವನ್ನು ವೃದ್ಧಿಸುವುದನ್ನು ನೋಡಿದ್ದೇವೆ. ಆಮ್ ಆದ್ಮಿ
ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಈ ಚುನಾವಣೆಯ ಫಲಿತಾಂಶ ಭಯ ಮೂಡಿಸಿಬಿಟ್ಟಿದೆ.
ಇಷ್ಟೊಂದು ಬಹುಮತ ಸಿಕ್ಕಿಬಿಟ್ಟಿರುವುದು ಜನರು ಅವರಲ್ಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ,
ಜೊತೆಗೆ ಅವರ ನಿರೀಕ್ಷೆಯನ್ನೂ ತೋರ್ಪಡಿಸುತ್ತದೆ. ಆ ನಿರೀಕ್ಷೆಗೆ ತಕ್ಕನಾಗಿ ಕೆಲಸ ಮಾಡುವುದು
ಅರವಿಂದ್ ಕೇಜ್ರಿವಾಲರಿಂದ ಸಾಧ್ಯವಾ ಎಂಬ ಪ್ರಶ್ನೆ ಅವರ ಪಕ್ಷದವರ ಜೊತೆಜೊತೆಗೆ ಎಲ್ಲರನ್ನೂ
ಕಾಡಲಾರಂಭಿಸಿದೆ. ಹೆಚ್ಚೇನೂ ಅಧಿಕಾರವಿಲ್ಲದ ರಾಜ್ಯವಲ್ಲದ ರಾಜ್ಯವಾದ ದೆಹಲಿಯನ್ನು ಆಮ್ ಆದ್ಮಿ
ಪಕ್ಷ ನಡೆಸುವ ಆಡಳಿತದ ರೀತಿಯ ಮೇಲೆ ಈಗ ಎಲ್ಲರ ನಿರೀಕ್ಷೆಯಿದೆ. ನರೇಂದ್ರ ಮೋದಿಯವರ ಹನಿಮೂನ್
ಅವಧಿ ಮುಗಿದು ಅವರ ಮೇಲಿದ್ದ ನಿರೀಕ್ಷೆ ನಿಧಾನಕ್ಕೆ ಕುಸಿತ ಕಾಣಲಾರಂಭಿಸಿರುವಾಗ ಮತ್ತೊಬ್ಬ
ವ್ಯಕ್ತಿಯ ಮೇಲೆ ನಿರೀಕ್ಷೆಯ ಭಾರ ಬಿದ್ದಿದೆ. ರಾಜಕೀಯ ಪಕ್ಷಗಳ ಸಿದ್ಧ ಮಾದರಿಯನ್ನು ತಿರಸ್ಕರಿಸಿ
ತತ್ವ ಸಿದ್ಧಾಂತಗಳಿಗೆ ಜೋತು ಬೀಳದೆ ಒಳ್ಳೆಯದನ್ನು ಮಾಡಬೇಕು ಎಂಬುದಷ್ಟನ್ನೇ ಗುರಿಯಾಗಿಸಿಕೊಂಡಿರುವ
ಆಮ್ ಆದ್ಮಿ ಪಕ್ಷ ಭಾರತದ ಪ್ರಜಾಪ್ರಭುತ್ವದ ದಿಕ್ಕನ್ನು ಬದಲಿಸುತ್ತದಾ? ದೆಹಲಿಯ ಆಡಳಿತದಲ್ಲಿ ಆ
ಬದಲಾವಣೆ ಇಪ್ಪತ್ತೈದು ಪರ್ಸೆಂಟಿನಷ್ಟು ಕಂಡರೂ ಸಾಕು ಆಮ್ ಆದ್ಮಿ ಪಕ್ಷ ದೇಶದ ಇತರೆಡೆಯಲ್ಲೂ
ತಮ್ಮ ಖಾತೆ ತೆರೆಯುವುದರಲ್ಲಿ ಅನುಮಾನವಿಲ್ಲ. ವಿಪರೀತ ಬಹುಮತ ಪ್ರಜಾಪ್ರಭುತ್ವದ ಆರೋಗ್ಯಕ್ಕೆ
ತುಂಬಾ ಒಳ್ಳೆಯದಲ್ಲ ಎಂಬ ಅಂಶ ವಿರೋಧ ಪಕ್ಷವೇ ಇಲ್ಲದೆ ಸರಕಾರ ನಡೆಸಬೇಕಿರುವ ಆಮ್ ಆದ್ಮಿಗೆ
ನೆನಪಿರಬೇಕಷ್ಟೇ
No comments:
Post a Comment