ಪೆರುಮಾಳ್ ಮುರುಗನ್ |
ಚಾರ್ಲಿ ಹೆಬ್ಡೋ ಮೇಲೆ ಉಗ್ರರು ಪೈಶಾಚಿಕ ದಾಳಿ ನಡೆಸಿ ವ್ಯಂಗ್ಯಚಿತ್ರಕಾರರನ್ನು ಹತ್ಯೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲನೇಕರು ಹೇಗೆ ಹಿಂದೂ ಧರ್ಮ ಶಾಂತಿಯ ಪರವಾಗಿದೆ ಮತ್ತು ಆ ಕಾರಣಕ್ಕಾಗಿ ಹಿಂದೂ ಧರ್ಮದ ಹುಳುಕುಗಳ ಬಗ್ಗೆಯಷ್ಟೇ ಲೇಖಕರು ಸಿನಿಮಾ ಮಂದಿ ಅವಹೇಳನ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಎಲ್ಲೋ ಒಂದೆಡೆ ಅವರುಗಳ ಮನಸ್ಸಿನಲ್ಲಿ ಹಿಂದೂ ಧರ್ಮದ ರೂಢಿ - ಆಚರಣೆಗಳ ವಿರುದ್ಧ ಮಾತನಾಡುವವರಿಗೆ ಚಾರ್ಲಿ ಹೆಬ್ಡೋಗಾದ ಗತಿಯೇ ಆಗಬೇಕು ಎಂದಿತ್ತಾ? ಅಂತಹ ಹಿಂದೂ ಮೂಲಭೂತವಾದಿಗಳಿಗೆಲ್ಲ ಸಂತಸವಾಗುವಂತಹ ಸುದ್ದಿ ತಮಿಳುನಾಡಿನ ತಿರುಚಿನಗೊಡೆಯಿಂದ ಬಂದಿದೆ! ಈ ಊರಿನ ಪೆರುಮಾಳ್ ಮುರುಗನ್ ಎಂಬ ಮನುಷ್ಯನ ಒಳಗಿದ್ದ ಲೇಖಕ, ಕಾದಂಬರಿಕಾರನನ್ನು ಹತ್ಯೆ ಮಾಡಲಾಗಿದೆ. ಕಾರಣ ಆತ ಬರೆದ ಕಾದಂಬರಿಯೊಂದು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿತ್ತಂತೆ. ಚಾರ್ಲಿ ಹೆಬ್ಡೋದ ವಿರುದ್ಧ ನಡೆದ ಕೃತ್ಯಕ್ಕೆ ಕಣ್ಣೀರಾಕಿದ ಅನೇಕರಿಗೆ ಇದು ಸಮ್ಮತ ಕೃತ್ಯದಂತೆ ಕಾಣಿಸುತ್ತದೆ!
ತನ್ನೊಳಗಿನ ಲೇಖಕ ಸತ್ತ ಬಗೆಯನ್ನು ಫೇಸ್ ಬುಕ್ಕಿನಲ್ಲಿ ಪೆರುಮಾಳ್ ಮುರುಗನ್ ಬರೆದುಕೊಂಡಿದ್ದು ಹೀಗೆ:
ಸ್ನೇಹಿತರೇ, ಈ ಮಾಹಿತಿ ಇನ್ನೆರಡು ದಿನಗಳವರೆಗೆ ನನ್ನ ಮುಖಪುಟದಲ್ಲಿರುತ್ತದೆ. ನಂತರ ಸಾಮಾಜಿಕ ಜಾಲತಾಣದಿಂದ ಪೆರುಮಾಳ್ ಮುರುಗನ್ ನಿರ್ಗಮಿಸುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ನನಗೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದಗಳು.
ವಿಷಯ: ನನ್ನೊಳಗಿನ ಲೇಖನಕನನ್ನು ಬಿಡುಗಡೆಗೊಳಿಸಿದ್ದೇನೆ.
ಲೇಖಕ ಪೆರುಮಾಳ್ ಮುರುಗನ್ ಸತ್ತಿದ್ದಾನೆ. ಮತ್ತೆ ಉದ್ಭವಗೊಳ್ಳಲು ಆತ ದೇವರಲ್ಲ. ಪುನರ್ಜನ್ಮದಲ್ಲಿ ಅವನಿಗೆ ನಂಬುಗೆಯಿಲ್ಲ. ಇನ್ನು ಮೇಲೆ ಇಲ್ಲಿ ಬದುಕಿರುವವನು ಒಬ್ಬ ಸಾಮಾನ್ಯ ಕಳಪೆ ಸಂಪಾದಕ ಪಿ.ಮುರುಗನ್.
ಲೇಖಕ ಪೆರುಮಾಳ್ ಮುರುಗನ್ನಿನ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದ ಮಾಧ್ಯಮ, ಓದುಗರು, ಸ್ನೇಹಿತರು, ಲೇಖಕರು, ರಾಜಕೀಯ ಪಕ್ಷಗಳು, ಮುಖಂಡರು, ವಿದ್ಯಾರ್ಥಿಗಳಿಗೆ ನಾನು ಚಿರಋಣಿ.
ಈ ಸಮಸ್ಯೆ ಈಗ ವಿವಾದಕ್ಕೀಡಾಗಿರುವ 'ಮನೋರೂಭಗಮ್' ಕಾದಂಬರಿಯೊಂದಿಗೆ ಮುಗಿಯುವುದಿಲ್ಲ. ವಿವಿಧ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕಾದಂಬರಿಕಾರನ ಇನ್ನಿತರ ಕೃತಿಗಳ ಬಗ್ಗೆಯೂ ಸಮಸ್ಯೆ ಸೃಷ್ಟಿಸುತ್ತಾರೆ. ಆದ್ದರಿಂದ ಲೇಖಕ ಪೆರುಮಾಳ್ ಮುರುಗನ್ ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ:
1. ಸಂಪಾದಿತ ಕೃತಿಗಳನ್ನೊರತುಪಡಿಸಿ ಪೆರುಮಾಳ್ ಮುರುಗನ್ ತನ್ನ ಕಥೆ, ಕಾದಂಬರಿ, ಪ್ರಬಂಧ, ಕವಿತೆಗಳ ಪುಸ್ತಕಗಳನ್ನೆಲ್ಲ ಹಿಂಪಡೆಯುತ್ತಿದ್ದಾರೆ. ಅವರ ಯಾವುದೇ ಕೃತಿಗಳು ಇನ್ನು ಮುಂದೆ ಸಾರ್ವಜನಿಕ ಮಾರಾಟಕ್ಕೆ ಲಭ್ಯವಿರುವುದಿಲ್ಲ.
2. ಪ್ರಕಾಶಕರಾದ ಕಾಲಚುವುಡು, ನಾಟ್ರಿನೈ, ಅಡಯಾಲಮ್, ಮಲೈಗಲ್, ಕಾಯಲ್ ಕವಿನ್ನಿನ ಗೆಳೆಯರಿಗೆ ಈ ಮೂಲಕ ನನ್ನ ಯಾವ ಪುಸ್ತಕವನ್ನು ಇನ್ನು ಮುಂದೆ ಮಾರಾಟ ಮಾಡದಂತೆ ವಿನಂತಿಸಿಕೊಳ್ಳುತ್ತೇನೆ. ಅವರಿಗಾಗುವ ನಷ್ಟವನ್ನು ಸಂಪಾದಕ ಪಿ.ಮುರುಗನ್ ತುಂಬಿಕೊಡುತ್ತಾರೆ.
3. ಈಗಾಗಲೇ ಪೆರುಮಾಳ್ ಮುರುಗನ್ ಬರೆದ ಪುಸ್ತಕಗಳನ್ನು ಖರೀದಿಸಿದವರಿಗೆ ಅದನ್ನು ಸುಟ್ಟು ಹಾಕುವ ಎಲ್ಲಾ ಹಕ್ಕಿದೆ. ನಷ್ಟವಾದವರಿಗೆ ಪರಿಹಾರ ವಿತರಿಸಲಾಗುವುದು.
4. ಸಾಹಿತ್ಯಕ್ಕೆ ಸಂಬಂಧಪಟ್ಟ ಯಾವುದೇ ಸಮಾರಂಭಗಳಿಗೆ ಇನ್ನು ಮುಂದೆ ಪೆರುಮಾಳ್ ಮುರುಗನ್ ಭಾಗಿಯಾಗುವುದಿಲ್ಲ.
5. ಎಲ್ಲಾ ಪುಸ್ತಕಗಳನ್ನು ಹಿಂದೆಗೆದುಕೊಂಡಿರುವುದರಿಂದ ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ಮಾಡಬಾರದಾಗಿ ವಿನಂತಿಸುತ್ತೇನೆ.
ದಯವಿಟ್ಟು ಅವನನ್ನು ಬಿಟ್ಟುಬಿಡಿ.
ಎಲ್ಲರಿಗೂ ಧನ್ಯವಾದ.
image source: thehindu
image source: thehindu
No comments:
Post a Comment