ಪತ್ರಿಕಾ ಪ್ರಕಟಣೆ
ಅಧಿವೇಶನವಿರದ ಸಂದರ್ಭವನ್ನು ಬಳಸಿಕೊಂಡು, ಲೋಕಸಭೆಯಲ್ಲಿ ಚರ್ಚಿಸದೇ ಕೇಂದ್ರದ ಬಿ.ಜೆ.ಪಿ. ಸರ್ಕಾರವು ವಾಮಮಾರ್ಗದಿಂದ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ರಾಷ್ಟ್ರಪತಿಯವರ ಅಂಗೀಕಾರವನ್ನು ಪಡೆಯಲಾಗಿರುವ ಈ ತಿದ್ದುಪಡಿಗಳು ಸಂಪೂರ್ಣವಾಗಿ ಜನವಿರೋಧಿ ಮತ್ತು ರೈತವಿರೋಧಿಯಾಗಿವೆ. ಸಹಿ ಹಾಕುವ ಸಂದರ್ಭದಲ್ಲಿ ರಾಷ್ತ್ರಪತಿಗಳು ಸಹ, ತುರ್ತಾಗಿ ಈ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ.
ಈ ತಿದ್ದುಪಡಿಗಳಿಂದಾಗಿ, ಸರ್ಕಾರವಲ್ಲದೇ, ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದಾಗಿದೆ. ಭೂಮಿಯನ್ನು ಪಡೆದ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳದಿದ್ದರೆ ಈಗಿರುವ 2 ವರ್ಷಗಳ ಗಡುವನ್ನು 5 ವರ್ಷಗಳಿಗೆ ವಿಸ್ತರಿಸಿ ಅಕ್ರಮಗಳಿಗೆ ಹಾದಿಯನ್ನು ಸುಗಮವಾಗಿಸಿದೆ. ಪರಿಹಾರ ವಿತರಿಸುವ ಸಂದರ್ಭಗಳಲ್ಲಿ ಯಾವುದೇ ಅನಾನುಕೂಲವಾದರೆ ಈಗಿರುವ ಕಾನೂನಿನಲ್ಲಿ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಜರುಗಿಸಬಹುದಾಗಿದ್ದು, ಹೊಸ ತಿದ್ದುಪಡಿಯ ಪ್ರಕಾರ ಯಾರೂ ಇಂತಹ ಅನಾನುಕೂಲಗಳಿಗೆ ಜವಾಬ್ದಾರರಾಗಿರುವುದಿಲ್ಲ.
ಕೇಂದ್ರ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿಗಳ ಎದುರು ಇಂದು ಸೋಮವಾರ, ದಿನಾಂಕ 5.5.2015ರ ಬೆಳಿಗ್ಗೆ 11 ಗಂಟೆಗೆ ಸುಗ್ರೀವಾಜ್ಞೆಯ ಪ್ರತಿಯನ್ನು ಸುಟ್ಟುಹಾಕಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿದರು.
ಅದರಂತೆ ನಮ್ಮ ಬೆಂಗಳೂರಿನ ಕಾರ್ಯಕರ್ತರು ಶ್ರೀ ಸಿದ್ಧಾರ್ಥ್ ಶರ್ಮ ಮತ್ತು ಶ್ರೀ ರವಿ ಕೃಷ್ಣ ರೆಡ್ಡಿಯವರ ಮುಂದಾಳತ್ವದಲ್ಲಿ ಮಧ್ಯಾನ 12 ಗಂಟೆಗೆ ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಕಂದಾಯ ಭವನದ ಮುಂದೆ ಸೇರಿ, ಕೇಂದ್ರ ಸರಕಾರದ ಜನವಿರೋಧಿ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆಯನ್ನು ವಿರೋಧಿಸಿ ಅದನ್ನು ಸುಟ್ಟು ಹಾಕಿ ಮತ್ತು ಅದಕ್ಕೆ ಸಂಭಂದಿಸಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದರು.
ಮನವಿಪತ್ರ
ಜನವರಿ 5, 2015
ಗೆ,
ಭಾರತದ ಪ್ರಧಾನ ಮಂತ್ರಿಯವರಿಗೆ,
ಪ್ರತಿ: ಜಿಲ್ಲಾಧಿಕಾರಿ, ….
ಮಾನ್ಯರೇ,
ವಿಷಯ: ಭೂ ಸ್ವಾಧೀನ ಕಾಯಿದೆ (Act of 2013) ತಿದ್ದುಪಡಿ ಸುಗ್ರೀವಾಜ್ಞೆಗೆ ಆಮ್ ಆದ್ಮಿ ಪಕ್ಷದ ವಿರೋಧ
ನಮ್ಮ ಭಾರತ ಸರ್ಕಾರವು ಭೂ ಸ್ವಾಧೀನ ಕಾಯಿದೆಗೆ (Land Acquisition (RFCTLARR) Act of 2013) ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರೀವಾಜ್ಞೆಯು ನಮ್ಮ ದೇಶದ ರೈತರಿಗೆ ಹಾಗೂ ಆದಿವಾಸಿ ಕುಟುಂಬಗಳಿಗೆ ಸೇರಿದಂತೆ ದೇಶವಾಸಿಗಳಿಗೆ ಬಹಳ ಆಘಾತಕಾರಿಯಾದ ಕ್ರಮವಾಗಿದೆ. ಇನ್ನೂ ಆಘಾತಕರವಾದ ವಿಷಯವೆಂದರೆ, ಬಹುಮತ ಪಡೆದು ಸರ್ಕಾರ ರಚನೆ ಮಾಡಿದ ನಂತರವೂ ಕೋಟಿಕೋಟಿ ರೈತಾಪಿ ವರ್ಗ ಹಾಗೂ ಆದಿವಾಸಿಗಳ ಕುಟುಂಬಗಳಿಗೆ ಅನ್ಯಾಯವಾಗುವಂಥಹ ಈ ಭೂಸ್ವಾಧೀನದಂತಹ ಗಂಭೀರ ವಿಷಯವನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಯಾವುದೇ ತರಹದ ಚರ್ಚೆಗೆ ಅವಕಾಶವಿಲ್ಲದೇ, ಆ ಕಾಯಿದೆಯನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯ ಮೂಲಕ ಅನುಷ್ಟಾನಕ್ಕೆ ತರುವ ಭಾರತ ಸರ್ಕಾರದ ಕ್ರಮವು ನಮ್ಮ ದೇಶವನ್ನು ಬ್ರಿಟಿಷ್ ವಸಾಹತು ಕಾಲಕ್ಕೆ ಕರೆದುಕೊಂಡು ಹೋಗಿದೆ. ಕೋಟ್ಯಾನುಕೋಟಿ ಕೃಷಿ ಹಾಗೂ ಆದಿವಾಸಿ ಸಮುದಾಯಗಳ ಹಿತವನ್ನು ಅಲಕ್ಷಿಸಿ, ಇಂಥಹ ಸುಗ್ರೀವಾಜ್ಞೆ ಹೊರಡಿಸುವ ಸರ್ಕಾರದ ಕ್ರಮ ತನ್ನ ಕಾರ್ಪೊರೇಟ್ ಮಾಸ್ಟರ್‌ಗಳ ಹಿತಾಸಕ್ತಿಯನ್ನು ಮಾತ್ರ ಕಾಪಾಡುವಂತೆ ತೋರುತ್ತಿರುವುದು ಸ್ಪಷ್ಟವಾಗಿದೆ.
ಭಾರತ ಸರಕಾರದ ಈ ಶಾಸನ ತಿದ್ದುಪಡಿಯು ದೇಶದ ಬಹುಪಾಲು ರೈತ ಹಾಗೂ ಆದಿವಾಸಿ ಸಮುದಾಯದ ಹಿತದೃಷ್ಟಿಯಿಂದ ಒಂದು ಕರಾಳ ಶಾಸನವಾದ್ದರಿಂದ, ಆಮ್ ಆದ್ಮಿ ಪಕ್ಷವು ಭಾರತ ಸರ್ಕಾರದ ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕಟುವಾಗಿ ವಿರೊಧಿಸುತ್ತದೆ. ಈ ದೇಶದ ರೈತ ವರ್ಗ, ಆದಿವಾಸಿ ಸಮುದಾಯ ಹಾಗೂ ನ್ಯಾಯವಾದಿ ಪ್ರಜೆಗಳು ದುರುದ್ದೇಶದಿಂದ ಕೂಡಿದ ಈ ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆಯ ವಿರುದ್ಧ ತಲೆಯೆತ್ತಿ ನಿಲ್ಲಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಈ ಕೆಳಗಿನ ಅಂಶಗಳನ್ನು ಸಂಸತ್ತು ಹಾಗು ಜನರ ಮುಂದಿಡಲು ಪಕ್ಷ ಬಯಸುತ್ತದೆ.
1. ಸುದೀರ್ಘ ಹೋರಾಟ ಮತ್ತು ಸಮಾಲೋಚನಾ ನಂತರ ಇದಕ್ಕೆ ಮೊದಲಿನ ಸರ್ಕಾರ ಮತ್ತು ಪಕ್ಷಾತೀತವಾಗಿ ಎಲ್ಲರೂ ಕೆಳಗಿನ ಈ ಮೂಲಭೂತ ತತ್ವಗಳಿಗೆ ಒಪ್ಪಿ ತಮ್ಮ ಬದ್ಧತೆಯನ್ನು ತೋರಿಸಿದ್ದರು.
. ಭೂಸ್ವಾಧೀನ ಪ್ರಕ್ರಿಯೆ ಯಾವುದೇ ಪೂರ್ವಾನುಮತಿ ಇಲ್ಲದೆ ನಡೆಯಕೂಡದು.
. ಭೂಸ್ವಾಧೀನ ಪ್ರಕ್ರಿಯೆ ಆಹಾರ ಭದ್ರತಾ ಕಾಯ್ದೆಗೆ ಯಾವುದೇ ಧಕ್ಕೆ ತರಬಾರದು.
. ಈ ಕಾಯ್ದೆಯಡಿಯಲ್ಲಿ ಭೂ ವಂಚಿತರಾದವರಿಗೆ ಅಗತ್ಯ ಸೌಕರ್ಯ ಹಾಗು ಭೂಮಿ ಒದಗಿಸಲು ಅಗತ್ಯ ಮಾರ್ಪಾಡುಗಳನ್ನು ಮಾಡುವುದು.
ಅದರೆ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಶೇ.70 ರಷ್ಟು ರೈತರ ಅನುಮತಿ, ಸಾಮಾಜಿಕ ಪರಿಣಾಮದ ಅಂದಾಜು, ಇತ್ಯಾದಿ ವಿಚಾರಗಳೆಲ್ಲ ಇಲ್ಲವಾಗಿ, 1894 ರ ಕಾಯ್ದೆಯ ವಿರುದ್ಧ ಜನ ಮಾಡಿದ್ದ ಹೋರಾಟ ನಿಷ್ಪಲವಾಗಿ ಮತ್ತೆ ಅದೇ ಕ್ರೂರ ಕಾಯ್ದೆ ಜಾರಿಗೆ ಬಂದಂತಾಗಿದೆ.
2. ಅದರೆ ಈಗ ಭಾರತ ಸರ್ಕಾರವು ಸನ್ 2013 ರ ಅಧಿನಿಯಮದನ್ವಯ 5 ರೀತಿಯ ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ನಾಂದಿ ಹಾಡಿದೆ. ಅವುಗಳೆಂದರೆ ರಕ್ಷಣೆ, ಕೈಗಾರಿಕಾ ಕಾರಿಡಾರುಗಳು, ಗ್ರಾಮೀಣ ಮೂಲ ಸೌಕರ್ಯ, ಬಡವರಿಗೆ ವಸತಿ ಸೇರಿದಂತೆ ಕೈಗೆಟುಕುವ ದರದಲ್ಲಿ ವಸತಿ ಯೋಜನೆಗಳು, ಮತ್ತು ಯಾವುದೇ ತರಹದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ. ನಮ್ಮ ಭ್ರಷ್ಟ ಗುತ್ತಿಗೆದಾರರು-ಅಧಿಕಾರಿ-ರಾಜಕಾರಣಿಗಳನ್ನು ಒಳಗೊಂಡ ತಂಡ ಯಾವುದೇ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಮೆಲ್ಕಂಡ ಯಾವುದಾದರು ಒಂದು ವರ್ಗಕ್ಕೆ ಸೇರಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪಂಚತಾರಾ ಹೋಟೆಲ್‌ಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಕಾರ್ಪೊರೇಟ್ ಕಾಲೇಜುಗಳು ಸಹ ಈ ಮೇಲಿನ ಗುಂಪಿಗೆ ಅರ್ಹತೆಯನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಈ ಕಾಯ್ದೆ ದೋಷಪೂರಿತ ಎಂಬುದಂತು ಸ್ಪಷ್ಟ.
3. 5 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣವಾಗಿ ಮುಗಿಯದೆ ಇರುವಂತಹ ಯೋಜನೆಗಳ ಭೂಮಿಯನ್ನು ಮತ್ತೆ ಮೂಲ ಮಾಲಿಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಈ ಮೊದಲಿನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹಾಗೆಯೇ, ಭೂಸ್ವಾಧೀನವಾಗಿ 5 ವರ್ಷಗಳಾದರೂ ಇನ್ನೂ ಯೋಜನೆಗೆ ಬಳಕೆ ಮಾಡದ ಭೂಮಿಯನ್ನು ಸಹ ಮೂಲ ಭೂಮಾಲಿಕರಿಗೆ ಹಿಂದಿರುಗಿಸುವ ಕಾನೂನು ಇತ್ತು. ಈಗ ಅದೆಲ್ಲಕ್ಕೂ ತಿದ್ದುಪಡಿ ಮಾಡಲಾಗಿದೆ.
4. ಮೊದಲೆ ಹೇಳಿದಂತೆ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳಿಗೆ ವಿನಾಯತಿ ನೀಡಲಾಗಿದೆ. ಮಹತ್ತರವಾದ ವಿಷಯವೇನೆಂದರೆ ಪ್ರಸಕ್ತದಲ್ಲಿ "ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಯೋಜನೆ ರಕ್ಷಣೆಗೇ ಅನ್ವಯಿಕ" ಎಂಬಂತಾಗಿ ಅನೇಕ ಖಾಸಗಿ ಯೋಜನೆಗಳೂ ಈ ವ್ಯಾಖ್ಯಾನಗಳಿಗೆ ಒಳಪಡುತ್ತವೆ.
5. ಈ ಕಾಯ್ದೆಯನ್ವಯ ಯಾವುದೆ ಸರ್ಕಾರಿ ಅಧಿಕಾರಿ ವರ್ಗವನ್ನು ಕಾಯ್ದೆಯ ಉಲ್ಲಂಘನೆಯ ಶಿಕ್ಷೆಯಿಂದ ಹೊರತಾಗಿಸಬಹುದು. ಈ ನಿಟ್ಟಿನಲ್ಲಿ ಮೂಲ ಕಾಯ್ದೆಯ ಆಶಯವನ್ನೆ ಇಲ್ಲಿ ತಿರುಚಲಾಗಿದೆ. ಹಿಂದಿನಂತೆ ಕಾಯ್ದೆ ಉಲ್ಲಂಘನೆಯಾದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲು ಇಲ್ಲಿ ಅವಕಾಶವಿಲ್ಲ. ಇದಲ್ಲದೆ ಅಧಿನಿಯಮ 197 ರ ಪ್ರಕಾರ ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ವಿನಾಯತಿಯನ್ನೂ ಸಹ ನೀಡಿದೆ. ಅದರ ಪರಿಣಾಮವಾಗಿ ಕಾಯ್ದೆ ಉಲ್ಲಂಘನೆಗೆ ಯಾವುದೆ ಅಧಿಕಾರಿಗಳು ಹೊಣೆಗಾರರಾಗುವುದಿಲ್ಲ.
6. ಇಂತಹ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುವ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಬದಲಾವಣೆ ಮಾಡುತ್ತಿರುವುದು ಸಂಪೂರ್ಣವಾಗಿ ಅಸಮರ್ಥನೀಯ ಹಾಗು ಅನ್ಯಾಯ. ಸಂಸತ್ತಿನಲಿ ವಿಧೇಯಕ ಮಂಡನೆಗೆ ಎರಡು ಅವಧಿಗಳ ಅವಕಾಶವಿದ್ದರೂ ಸರಕಾರ ತುರ್ತಾಗಿ ತರಾತುರಿಯಲ್ಲಿ ಮಂಡಿಸುತ್ತಿರುವುದಾದರು ಏಕೆ? ಮುಂದಿನ ಅಧಿವೇಶನದವರೆಗೂ ಕಾಯುತ್ತಿಲ್ಲವೇಕೆ?
7. 2013 ರ ಭೂ ಸ್ವಾಧೀನ ಕಾಯ್ದೆಯನ್ನು ಬಿ.ಜೆ.ಪಿ ಒಳಗೊಂಡಂತೆ ಬಹುತೇಕ ರಾಜಕೀಯ ಪಕ್ಷಗಳು ಅಂಗೀಕರಿಸಿದ್ದವು. ಇಂದಿನ ಸ್ಪೀಕರ್ ಶ್ರೀಮತಿ ಸುಮಿತ್ರ ಮಹಾಜನ್ ಅವರೇ ಈ ಕಾಯ್ದೆಯ ಮಂಡನೆಗೆ ಅನುಮತಿ ನೀಡಿದ ಸಂಸದೀಯ ಸಮಿತಿಯ ನೇತೃತ್ವ ವಹಿಸಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆಡಳಿತ ಪಕ್ಷದ ಹಿರಿಯ ನಾಯಕರಾದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅಂದು ಸಂಸತ್ತಿನಲ್ಲಿ ಈ ಮಸೂದೆಯ ಪರವಾಗಿ ಮಾತನಾಡುತ್ತ ಸಾಮಾಜಿಕ ಪರಿಣಾಮಗಳ ಅಂದಾಜು, ಬಹುಸಂಖ್ಯಾತ ರೈತರ ಒಪ್ಪಿಗೆ, ಮತ್ತು ಯೋಜನೆ ಅನುಷ್ಟಾನವಾಗದಿದ್ದಲ್ಲಿ ಭೂಮಾಲಿಕರಿಗೆ ಜಮೀನು ವಾಪಸುಗಳ ಪರ ಗಟ್ಟಿಯಾಗಿ ವಾದಿಸಿದ್ದರು. ಆದರೆ ಈಗ ಅವರ ನಿಲುವಿನಲ್ಲಿ ಈ ಹಟಾತ್ ಬದಲಾವಣೆ ಏಕೆ?
8. ಪ್ರಸ್ತುತ ಮಸೂದೆಯು ಯಾವುದೆ ರೀತಿಯಿಂದಲೂ ಧನಾತ್ಮಕವಾಗಿಲ್ಲ. ದೇಶದ ಬಹುತೇಕ ರಾಜ್ಯಗಳು ಆ ಮಸೂದೆಗೆ ಬೇಕಾದ ನಿಯಮಗಳನ್ನು ರೂಪಿಸಲು ಇನ್ನು ಸಾಧ್ಯವಾಗಿಲ್ಲ. ಅಂದಮೇಲೆ ಇಂತಹ ಯೋಜನೆಯನ್ನು ಅಪ್ರಾಯೋಗಿಕವಾಗಿ ಜಾರಿಗೆ ತರುತ್ತಿರುವುದು ಯಾವ ಪುರುಷಾರ್ಥಕ್ಕೆ?
ಇದೆಲ್ಲದರ ಹಿಂದಿನ ಸತ್ಯ ಏನೆಂದರೆ, ಸರಕಾರ ದೊಡ್ಡ ಉದ್ಯಮಿಗಳು ಹಾಗು ವ್ಯಾಪಾರಸ್ಥರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಿದೆ. ಇದರ ಸಾಧಕ ಬಾಧಕಗಳನ್ನು ಸಾಮಾನ್ಯ ಜನರಿಂದ ಮರೆಮಾಚಿರುವುದು ಸ್ಪಷ್ಟವಾಗಿದೆ. ಆದರೆ ಈ ದೇಶದ ಪ್ರತಿಯೊಬ್ಬ ಶ್ರೀಸಾಮಾನ್ಯೆ ಹಾಗು ಶ್ರೀಸಾಮಾನ್ಯ ಇದನ್ನು ವಿರೋಧಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಹಾಗು ಇದನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ನಾವು ಬಲವಾಗಿ ನಂಬುತ್ತೇವೆ.
ಆಮ್ ಆದ್ಮಿ ಪಕ್ಷವು ಈ ಜನವಿರೋಧಿ ಮಸೂದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಈ ಮೂಲಕ ಭಾರತ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತದೆ.
ವಿಧೇಯಪೂರ್ವಕವಾಗಿ,
No comments:
Post a Comment