ಆರ್.ಕೆ.ನಾರಾಯಣರ
ಪುಸ್ತಕಗಳು ಸರಳತೆಗೆ ಮತ್ತೊಂದು ಹೆಸರು. ಪಾತ್ರ ಪರಿಚಯ, ಭಾಷೆ, ಕಥಾ ಹಂದರದಲ್ಲಾಗಲೀ ಕಠಿಣತೆಯ
ಮಾರ್ಗವನ್ನು ತೊರೆದ ಲೇಖನಿ ಅವರದು. ದೈನಂದಿನ ಜೀವನದ ಸರ್ವೇ ಸಾಧಾರಣ ಎಂಬಂತೆ ತೋರುವ, ಬಹಳಷ್ಟು
ಲೇಖಕರಿಂದ ತಿರಸ್ಕೃತವಾಗುವ ವಸ್ತುಗಳಿಗೆ ಸುಂದರದೊಂದು ಚೌಕಟ್ಟು ನಿರ್ಮಿಸುವ ಕಥೆಗಾರ ಆರ್.ಕೆ.
ನಾರಾಯಣ್. ತೀರ ಇತ್ತೀಚೆಗೂ ಆರ್.ಕೆ. ನಾರಾಯಣ್ ಸೃಷ್ಟಿಸಿದ ‘ಮಾಲ್ಗುಡಿ’ ಎಂಬ ಊರು ನಿಜವಾಗಿಯೂ
ಅಸ್ತಿತ್ವದಲ್ಲಿದೆ ಎಂದು ಹಿರಿಯರೊಬ್ಬರು ನನ್ನೊಂದಿಗೆ ವಾದಿಸಿದ್ದರು! ಅವರ ಕಥೆಗಳ ಶಕ್ತಿ ಮತ್ತು
ಪ್ರಭಾವವದು. ನಾರಾಯಣರ ‘Waiting for Mahatma’ ಕಾದಂಬರಿ ಕೂಡ ಇಂತದ್ದೇ ಒಂದು ಸರಳ ಕಥೆಯ
ಗುಚ್ಛ. ಸ್ವಾತಂತ್ರ್ಯದ ಸುತ್ತಮುತ್ತ ನಡೆಯುವ ಕಥೆಯೊಳಗಿರುವ ಒಂದು ಸುಂದರ ಪ್ರೇಮ ಪ್ರಸಂಗಕ್ಕೆ
ಮಹಾತ್ಮ ಗಾಂಧೀಜಿಯೇ ಹೀರೋ, ಗಾಂಧಿಯೇ ವಿಲನ್!
ಅಪ್ಪ
ಅಮ್ಮನನ್ನು ಕಳೆದುಕೊಂಡ, ಅಜ್ಜಿಯ ಮಡಿಲಲ್ಲಿ ಸೋಮಾರಿಯಾಗಿ ಬೆಳೆದ ಶ್ರೀರಾಮ್ ಕಥಾನಾಯಕ. ಥೇಟ್
ನಮ್ಮ ಇತ್ತೀಚಿನ ಫಿಲಮ್ಮುಗಳಲ್ಲಾಗುವಂತೆ ಮಾಲ್ಗುಡಿಯ ಬೀದಿಯಲ್ಲಿ ಗಾಯಕಿ ಭಾರತಿಯನ್ನು ನೋಡಿ
ಪರವಶನಾಗುತ್ತಾನೆ! ಮಹಾತ್ಮ ಗಾಂಧಿಯ ಸಭೆಗೆ ಚಂದಾ ಎತ್ತುತ್ತಿರುತ್ತಳಾಕೆ. ಚಂದಾ ಹಣ ನೀಡಿದ
ಶ್ರೀರಾಮ್ ಆಕೆಯನ್ನು ಕಾಣುವ ಸಲುವಾಗಿ ಮಹಾತ್ಮನ ಸಭೆಗೆ ಹೋಗಿ ಮಹಾತ್ಮನ ಹಿಂದೆಯೇ ಜೋಪಡಿಗೆ
ಹೋಗುತ್ತಾನೆ. ಭಾರತಿಯೊಂದಿಗೆ ಮೊದಲ ಬಾರಿಗೆ ಮಾತನಾಡುತ್ತಾನೆ. ನಿನಗೋಸ್ಕರ ಬಂದೆ ಎನ್ನುತ್ತಾನೆ.
ಬಾಪುವಿನೊಂದಿಗೂ ‘ಭಾರತಿಯ ಜೊತೆ ಇರುವ ಕಾರಣಕ್ಕಾಗಿ ಚಳುವಳಿ ಸೇರುತ್ತೇನೆ’ ಎಂದು
ಸತ್ಯವನ್ನಾಡುತ್ತಾನೆ! ರಾಜಕೀಯದ ಗಂಧಗಾಳಿಯಿಲ್ಲದ, ಅದರೆಡೆಗೆ ಆಸಕ್ತಿಯೂ ಇಲ್ಲದ ವ್ಯಕ್ತಿಯೊಬ್ಬ
ಒಂದು ಹುಡುಗಿಯ ಸಲುವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುತ್ತಾನೆ! ನಾನಿನ್ನನ್ನು
ಮದುವೆಯಾಗಬೇಕು ಎಂದು ಭಾರತಿಯಲ್ಲಿ ಹೇಳಿದಾಗ ಬಾಪೂವನ್ನು ಕೇಳಬೇಕು ಆದರೆ ಅವರು ಭಾರತದ ಬಗ್ಗೆ
ತಲೆಕೆಡಿಸಿಕೊಂಡಿರುವಾಗ ಭಾರತಿಯ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸುವುದು ಎಷ್ಟು ಸರಿ? ಎಂದು
ಮರು ಪ್ರಶ್ನಿಸುತ್ತಾಳೆ.
"I am a man without any communal notions and i don't like to talk about it. Somebody is killing somebody else. That is all i care to know."
ಸ್ವಾತಂತ್ರ್ಯ
ಚಳುವಳಿ ಕಾವು ಪಡೆದುಕೊಳ್ಳುತ್ತ ಜೈಲ್ ಭರೋ ನಡೆಸಲು ಗಾಂಧಿ ಅನುಯಾಯಿಗಳು ನಿರ್ಧರಿಸುತ್ತಾರೆ.
ಜೈಲಿನಲ್ಲಿ ಭಾರತಿಯನ್ನು ನೋಡಲು ಅನುಮತಿ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಶ್ರೀರಾಮ್ ಹೊರಗಡೆಯೇ
ಉಳಿದುಬಿಡುತ್ತಾನೆ. ಸ್ವಾತಂತ್ರ್ಯ ಮತ್ತು ರಾಜಕೀಯದ ಉದ್ದೇಶಗಳಿಲ್ಲದೆಯೇ ಗಾಂಧೀಜಿಯ ಶಾಂತಿ
ಹೋರಾಟದಲ್ಲಿ ಭಾಗಿಯಾದ ಶ್ರೀರಾಮನಿಗೆ ತನಗೆ ಕೆಲಸ
ವಹಿಸುತ್ತಿದ್ದ ಭಾರತಿ ಜೈಲು ಸೇರಿದ ಮೇಲೆ ಏನು ಮಾಡಬೇಕೆಂದೇ ತೋರುವುದಿಲ್ಲ. ಈ ಸಮಯದಲ್ಲಿ
ಶ್ರೀರಾಮನಿಗೆ ಜಗದೀಶ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಅವನ ಸಹವಾಸದಿಂದ ಸುಭಾಷ್ ಚಂದ್ರ ಬೋಸರ
Indian National Armyಗೆ ಕೆಲಸ ಮಾಡಲಾರಂಭಿಸುತ್ತಾನೆ! ಬಂಧನಕ್ಕೊಳಗಾಗುತ್ತಾನೆ. ಶ್ರೀರಾಮ್
ಉಗ್ರಗಾಮಿ – ಅಪರಾಧಿಯಾಗುತ್ತಾನೆಯೇ ಹೊರತು ರಾಜಕೀಯ ಖೈದಿಯಲ್ಲ. ಗಾಂಧಿಯ ರಾಜಕೀಯ ಖೈದಿಗಳೆಡೆಗೆ
ಅಪರಾಧಿಗಳಿಗಿರುವ ತಿರಸ್ಕಾರದ ಅರಿವಾಗುತ್ತದೆ. ಜೈಲಿನ ಇಡೀ ವಾತಾವರಣವನ್ನು ಒಂದು ಫಿಲಾಸಾಫಿಕಲ್
ದೃಷ್ಟಿಕೋನದಿಂದ ಸೃಷ್ಟಿಸಿದ್ದಾರೆ ಲೇಖಕರು.
"Human beings have done impossible things to other Human beings. It's no use discussing whether this community committed greater horrors or the other one"
ಕೊನೆಗೊಂದು
ದಿನ ಜೈಲಿನಿಂದ ಹೊರಬಂದಾಗ ಭಾರತ ಸ್ವತಂತ್ರ ರಾಷ್ಟ್ರವಾಗಿರುತ್ತದೆ. ವ್ಯತ್ಯಾಸಗಳೇನು
ಕಾಣಿಸುವುದಿಲ್ಲ ಶ್ರೀರಾಮನಿಗೆ. ಭಾರತಿಯನ್ನು ಹುಡುಕಿಕೊಂಡು ದೆಹಲಿಗೆ ಸಾಗುತ್ತಾನೆ.
ಕೊನೆಯಲ್ಲಾದರೂ ಭಾರತಿ ಶ್ರೀರಾಮನಿಗೆ ಸಿಗುತ್ತಾಳಾ?
ಉಡಾಳ,
ಉಡಾಫೆಯ ವ್ಯಕ್ತಿಯೊಬ್ಬ ಗಾಂಧಿಯ ಅನುಯಾಯಿಯಾಗಿ, ಕ್ವಿಟ್ ಇಂಡಿಯ ಚಳುವಳಿಯಲ್ಲಿ ಭಾಗವಹಿಸಿ,
Indian National Armyಯ ಭಾಗವಾಗುವುದಕ್ಕೆಲ್ಲ ಕಾರಣವಾಗಿದ್ದು ಹುಡುಗಿಯೆಡೆಗೆ ಬೆಳೆದ ಪ್ರೀತಿ.
ಪ್ರೇಮದ ಶಕ್ತಿಯನ್ನು ತೋರ್ಪಡಿಸುವ ಕಾದಂಬರಿಯಿದು. ಅದರ ಜೊತೆಜೊತೆಗೆ ಗಾಂಧಿಯ ಬಗ್ಗೆ, ಅವರ
ಚಳುವಳಿಯ ಬಗ್ಗೆ ಅಂದಿನ ದಿನಗಳಲ್ಲಿದ್ದ ಗೌರವ, ಭಯ, ಪ್ರೀತಿ, ಅಸಹನೆ, ತಿರಸ್ಕಾರವೆಲ್ಲವೂ
Waiting for Mahatma ಕಾದಂಬರಿಯನ್ನು ಇತಿಹಾಸದ ಪುಸ್ತಕವನ್ನಾಗಿಯೂ ಮಾಡುತ್ತದೆ. ಒಟ್ಟಿನಲ್ಲಿ
ಒಂದು ಒಳ್ಳೆಯ ಅನುಭವಕ್ಕೆ ಈ ಪುಸ್ತಕವನ್ನು ಓದಬೇಕು.
No comments:
Post a Comment