2014ರ ಡಿಸೆಂಬರ್ ತಿಂಗಳಂತ್ಯದಲ್ಲಿ ಬಿಡುಗಡೆಗೊಂಡ ಸಂತೋಷ್ ಆನಂದರಾಮ್ ನಿರ್ದೇಶನದ 'ಮಿ ಅಂಡ್ ಮಿಸೆಸ್ ರಾಮಚಾರಿ' ಚಿತ್ರ ನಾಗಲೋಟದಿಂದ ಗೆಲುವು ಸಾಧಿಸಿದೆ. ಚಿತ್ರದ ನಾಯಕ ಯಶ್ ರನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಈ ರಾಮಾಚಾರಿ ಚಿತ್ರ. ಕಳೆದ ವರ್ಷ ಗೆದ್ದ ಅನೇಕ ರೀಮೇಕ್ ಚಿತ್ರಗಳ ನಡುವೆ ಸಂತೋಷ್ ಆನಂದರಾಮ್ ರ ಈ ರಾಮಾಚಾರಿ ಸ್ವಮೇಕ್ ಎಂಬುದು ಕನ್ನಡ ಸಿನಿಪ್ರಿಯರು ಒಂದಷ್ಟು ಸಮಾಧಾನ ಪಡಬಹುದಾದ ಅಂಶ! ಗೆಲುವು ಕಾಣುವ ಸ್ವಮೇಕುಗಳಲ್ಲಿ ಎರಡು ವಿಧ, ಮೊದಲ ರೀತಿಯ ಗೆಲುವು ಚಿತ್ರರಂಗಕ್ಕೆ ಬಹಳಷ್ಟು ಹೊಸತನ್ನು ನೀಡಿ ಆ ಹೊಸ ದಾರಿಯಲ್ಲಿ ಇಡೀ ಚಿತ್ರರಂಗ ಮತ್ತೊಂದು ಹೊಸತನದ ಚಿತ್ರ ಬರುವವರೆಗೆ ಸಾಗುತ್ತದೆ. ಎರಡನೆಯದು ಹಳೆಯ ಹಾದಿಯಲ್ಲೇ ತೆಗೆದ ಚಿತ್ರ ಬೋರು ಹೊಡೆಸದ ತನ್ನ ನಿರೂಪಣೆಯಿಂದ ಗೆಲುವು ಸಾಧಿಸುವುದು. ಚಿತ್ರದ ಮಟ್ಟಿಗೆ, ಅದರಲ್ಲಿ ಭಾಗಿಯಾದ ಕಲಾವಿದರು - ತಂತ್ರಜ್ಞರ ಮಟ್ಟಿಗೆ ಅದು ಗೆಲುವಾದರೂ ಒಟ್ಟಾರೆಯಾಗಿ ಚಿತ್ರರಂಗದ ಮುನ್ನಡೆಗೆ ವಿಶೇಷ ಸಹಾಯವಾಗುವುದಿಲ್ಲ. ಅನುಮಾನವಿಲ್ಲದೇ ಹೇಳಬಹುದು ಈ ರಾಮಾಚಾರಿ ಎರಡನೇ ವಿಭಾಗಕ್ಕೆ ಸೇರಿರುವ ಚಿತ್ರ.
ಹೊಸ ನಿರ್ದೇಶಕನ ಚಿತ್ರವೆಂದರೆ ನಿರೀಕ್ಷೆಗಳೂ ಹೆಚ್ಚಿರುತ್ತವೆ. ಕಾರಣ ನಿರ್ದೇಶಕನಾಗಲು ಕಷ್ಟಪಟ್ಟ ಅಷ್ಟೂ ವರುಷದ ಪ್ರಯತ್ನ ಮೊದಲ ಚಿತ್ರದಲ್ಲಿ ಕಾಣಿಸುತ್ತದೆ. ರಾಮಾಚಾರಿ ಚಿತ್ರದ ಮೊದಲ ದೃಶ್ಯವೇ ನಿರ್ದೇಶಕರ ಬಗ್ಗೆ ಬೇಸರ ಮೂಡುವಂತೆ ಮಾಡುತ್ತದೆ! ರಾಮಾಚಾರಿ ಸ್ವಮೇಕ್ ಚಿತ್ರವೆಂದು ಪರಿಗಣಿತವಾದರೂ ಮೊದಲ ದೃಶ್ಯ ಪುಟ್ಟಣ್ಣರ 'ನಾಗರಹಾವು' ಚಿತ್ರದ ರೀಮೇಕು! ಪುಟ್ಟಣ್ಣರ ನಾಗರಹಾವು ಚಿತ್ರದ ರಾಮಾಚಾರಿಯ ಅಭಿಮಾನಿಯಾಗಿರುವ ಈ ರಾಮಾಚಾರಿ ಚಿತ್ರ ಪುಟ್ಟಣ್ಣ ಮತ್ತು ವಿಷ್ಣುವರ್ಧನರ ನೆರಳಿನಲ್ಲೇ ಸಾಗುತ್ತದೆ. ಕಥೆಗೆ ಪೂರಕವೆಂದೇನೆ ಸಮಜಾಯಿಷಿ ಬಂದರೂ ಕೊನೆಗಿದು ಹಳೆತಲೆಮಾರಿನ ನೆರಳಿನಿಂದ ಹೊರಬರಲಾರದ ಹೊಸ ನಿರ್ದೇಶಕನ ಬವಣೆ ತೋರಿಸುತ್ತದೆ. ರಾಮಾಚಾರಿ ತನ್ನೆದೆಯ ಮೇಲೆ ನಾಗರಹಾವಿನ ವಿಷ್ಣುರನ್ನು ಹಚ್ಚೆ ಹಾಕಿಸಿಕೊಂಡಿರುವುದು, ರಾಮಾಚಾರಿ ತನ್ನ ಹುಡುಗಿಯ ಹೆಸರನ್ನೇ ಕೇಳದೆ 'ಮಾರ್ಗರೇಟ್' ಎಂದು ಕರೆಯುವುದು, ಚಿತ್ರದ ಕ್ಲೈಮ್ಯಾಕ್ಸನ್ನು ಚಿತ್ರದುರ್ಗದಲ್ಲೇ ಚಿತ್ರೀಕರಿಸಿರುವುದೆಲ್ಲವೂ ಪುಟ್ಟಣ್ಣರ ನಾಗರಹಾವು ಚಿತ್ರವನ್ನೇ ಪದೇ ಪದೇ ನೆನಪಿಸುತ್ತದೆ! ತರಾಸುರವರ ಸೃಷ್ಟಿಸಿದ ಪಾತ್ರ ಪುಟ್ಟಣ್ಣರ ಕಲ್ಪನೆಯಲ್ಲಿ ಎಷ್ಟು ಸಶಕ್ತವಾಗಿ ಮೂಡಿಬಂದಿದೆ ಎಂಬುದಕ್ಕೆ ಆ ಚಿತ್ರ ಮತ್ತದರಲ್ಲಿನ ಪಾತ್ರಗಳು ಈ ತಲೆಮಾರಿಗೂ ತಲುಪುತ್ತಿರುವುದೇ ಸಾಕ್ಷಿ.
'ನಾಗರಹಾವಿಗೆ' ಜೋತು ಬೀಳದಿದ್ದರೆ ಗೆಲುವು ಕಾಣುವುದು ಕಷ್ಟವೆಂಬ ಭಯವಿತ್ತಾ ನಿರ್ದೇಶಕರಿಗೆ? ಇನ್ನೇನು ಈ ನಿರ್ದೇಶಕರಿಂದ ತುಂಬಾ ಏನು ನಿರೀಕ್ಷಿಸುವುದು ಬೇಡ ಎಂದುಕೊಳ್ಳುವಷ್ಟರಲ್ಲಿ ಅಪರೂಪದ ಪಾತ್ರಗಳನ್ನು ಸೃಷ್ಟಿಸುತ್ತಾರೆ! ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸುತ್ತಾರೆ! ಈ ಚಿತ್ರದ ಅಂತಹ ಒಂದು ಅಪರೂಪದ ಪಾತ್ರ ನಾಯಕಿಯ ಅಣ್ಣನ ಪಾತ್ರ. ತನ್ನ ಸ್ನೇಹಿತ ಪ್ರೀತಿಸುತ್ತಿರುವ ಹುಡುಗಿ ತನ್ನ ತಂಗಿ ಎಂದು ತಿಳಿದಾಗ ಒಂದಷ್ಟು ಮುನಿಸು ತೋರುತ್ತಾನಾದರೂ ಬಹುತೇಕ ಚಿತ್ರಗಳಲ್ಲಾಗುವಂತೆ ಅಣ್ಣನಿಲ್ಲಿ ವಿಲನ್ ಆಗದೆ ತಂಗಿ ಮತ್ತು ಸ್ನೇಹಿತನ ಪ್ರೀತಿಗೆ ಸೇತುವೆಯಾಗುತ್ತಾನೆ! ಅಪ್ಪ ಮಗನ ನಡುವಿನ ಬಾಂಧವ್ಯದ ದೃಶ್ಯಗಳು ನಿರ್ದೇಶಕರ ಮುಂದಿನ ಚಿತ್ರದ ಬಗ್ಗೆ ಖಂಡಿತ ನಿರೀಕ್ಷೆ ಮೂಡಿಸುತ್ತವೆ.
ಮುಂಗಾರು ಮಳೆಯ ಹ್ಯಾಂಗೋವರ್ರಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲವಾ ಎಂಬ ಪ್ರಶ್ನೆಯನ್ನು ಮೂಡಿಸುತ್ತಾನೆ ಈ ರಾಮಾಚಾರಿ. ಏನೂ ಮಾಡದ, ಸುಮ್ಸುಮ್ನೆ ಕಾಲಹರಣ ಮಾಡುವ, ಓತ್ಲಾ ಕ್ಯಾರೆಕ್ಟರುಗಳೇ ಗ್ರೇಟು ಎಂಬ ಟ್ರೆಂಡು ಪ್ರಾರಂಭವಾಗಿದ್ದು ಮುಂಗಾರು ಮಳೆಯಿಂದ. ನಂತರ ತೆರೆಕಂಡ ಯೋಗರಾಜ ಭಟ್ಟರ ಬಹುತೇಕ ಸಿನಿಮಾಗಳು ಅದೇ ದಾರಿಯಲ್ಲಿ ಸಾಗಿದವು. ಯಶ್ ನ ಡ್ರಾಮಾ, ಕಿರಾತಕ, ರಾಜಾಹುಲಿ, ಲಕ್ಕಿ ಕೂಡ ಒಂದು ಮಟ್ಟಿಗೆ ಅದೇ ದಾರಿ ಹಿಡಿದಿದ್ದವು. ಈ ರಾಮಾಚಾರಿ ಕೂಡ ಮುಕ್ಕಾಲು ಸಿನಿಮಾದಲ್ಲಿ ಓತ್ಲಾ! ನಂತರ ಜವಾಬ್ದಾರಿಯುತ ಪ್ರಜೆ! ಓದಿಕೊಂಡವರು ವೇಷ್ಟು ಓತ್ಲಾಗಳೇ ಗ್ರೇಟು ಎಂಬ ಭಟ್ಟರ ವ್ಯಂಗ್ಯ ಇನ್ನೂ ಎಷ್ಟು ವರುಷಗಳ ಕಾಲ ಚಿತ್ರರಂಗವನ್ನಾಳುತ್ತದೋ ಕಾದು ನೋಡಬೇಕು!
ಚಿತ್ರಗಳ ಎಲ್ಲಾ ಪಾತ್ರಗಳಿಂದ ನಿರ್ದೇಶಕರು ಅತ್ಯುತ್ತಮ ನಟನೆಯನ್ನು ಹೊರತೆಗೆಸಿದ್ದಾರೆ. ಎಲ್ಲಾ ಫೈಟುಗಳು ಒಂದೇ ತರ ಕಾಣುತ್ತವೆ, ಆದರೂ ಆಕರ್ಷಕವೆನ್ನಿಸುತ್ತದೆ. ಉಳಿದೆಲ್ಲಾ ಪಾತ್ರಗಳನ್ನು ಕಬಳಿಸಿಬಿಡಬಲ್ಲ ಛಾತಿ ನನಗಿದೆ ಎನ್ನುವಷ್ಟು ಚೆನ್ನಾಗಿ ನಟಿಸಿದ್ದಾರೆ ಯಶ್. ರಾಧಿಕಾ ಪಂಡಿತ್ ಗೆ ಸವಾಲಿನ ಪಾತ್ರವೇನಲ್ಲ ಇದು. ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಇರುವ ವಿಶೇಷ ಹಾಡುಗಳಲ್ಲಿಲ್ಲ. ಮಿ.ಆಂಡ್ ಮಿಸೆಸ್ ರಾಮ.....ಚಾರಿ ಎಂಬ ಸಾಲು ಹೊರತುಪಡಿಸಿ ಇನ್ಯಾವ ಹಾಡಿನ ಸಾಲೂ ನೆನಪಿರುವುದಿಲ್ಲ. ಕೊನೆಗೆ ಇಡೀ ಚಿತ್ರ ನೋಡಿ ಮುಗಿಸಿ ಹೊರಬಂದ ನಂತರ ನೆನಪಾಗಿ ಕಾಡುವುದು ಪುಟ್ಟಣ್ಣ ಕಣಗಾಲ್ ರ ನಾಗರಹಾವು ಮತ್ತು ರಾಮಾಚಾರಿ ವಿಷ್ಣುವರ್ಧನ್ ಎಂಬ ಸಂಗತಿ ಪುಟ್ಟಣ್ಣರ ದೈತ್ಯ ಪ್ರತಿಭೆಯನ್ನು ಮತ್ತೆ ಪರಿಚಯಿಸುತ್ತದೆ.
No comments:
Post a Comment