Dr Ashok K R
ಅವರು
ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು
ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ
ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ
ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್
ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals
ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ
ಶಿಖಾಮಣಿಗಳೆಂದೇ ತಿಳಿದಿದ್ದರು.
ತರಗತಿಯವರಿಗೆ ಮೊದಲ ಅಚ್ಚರಿಯಾಗಿದ್ದು ಮೊದಲ internalsನ
ಫಲಿತಾಂಶ ಹೊರಬಿದ್ದಾಗ. ಅದರಲ್ಲೂ ಬಯೋಕೆಮಿಸ್ಟ್ರಿಯಲ್ಲಿ ಇಡೀ ನೂರೈವತ್ತು ಮಂದಿಯಲ್ಲಿ ಕೇವಲ
ಇಪ್ಪತ್ತೆರಡು ವಿದ್ಯಾರ್ಥಿಗಳು ಪಾಸಾಗಿದ್ದರು. ಅವರಲ್ಲಿ ಇವರೂ ನಾಲ್ವರು! ಕ್ಲಾಸ್ ಮೇಟ್ಸಿಗೆಲ್ಲ
ಗಾಬರಿಯಾಗಿತ್ತು – ಕ್ಯಾಂಪಸ್ಸಿನಲ್ಲಿ ಸಂಜೆ ನಾಲ್ಕರ ಮೇಲೆ ಯಾವಾಗ ನೋಡಿದರೂ ಕೈಯಲ್ಲಿ
ಸಿಗರೇಟಿಟ್ಟುಕೊಂಡು ತಿರುಗುವ ಇಂತ ಅಪಾಪೋಲಿಗಳು ಪಾಸಾಗುವುದೆಂದರೆ ಏನರ್ಥ ಎಂದು
ರೋಷಗೊಂಡಿದ್ದರು.
‘ಥೂ.
ಇಂಥ ಹುಡುಗರ ಜೊತೆ ನಾನು ಮಾತನಾಡೋದಿಲ್ಲಪ್ಪ’ ಎಂದುಕೊಂಡಿದ್ದವರೆಲ್ಲ ಬಯೋಕೆಮಿಸ್ಟ್ರಿಯ
ಮಾರ್ಕ್ಸು ನೋಡುತ್ತಿದ್ದಂತೆ ‘ನೀನು ಯಾವ ಪುಸ್ತಕ ಓದಿದೆ’ ಅಂತ ಇವರನ್ನು ಕೇಳಿ ಗೋಳು
ಹುಯ್ದುಕೊಂಡು ‘ಥೂ ಥೂ ಯಾಕಾದ್ರೂ ಪಾಸಾದೆವಪ್ಪಾ. ಇವರ ಜೊತೆಯೆಲ್ಲ ಮಾತನಾಡಬೇಕಾಯಿತಲ್ಲ’ ಎಂಬ
ಚಿಂತೆ.
ಇಷ್ಟಕ್ಕೂ
ಈ ನಾಲ್ವರಿಗೆ ಬೇರೆಯವರ ಬಗ್ಗೆ ಕೋಪ ತಾಪ ಇರಲಿಲ್ಲವಾದರೂ ಇತರರೊಡನೆ ಏನು ಮಾತನಾಡಬೇಕು ಎಂಬುದೇ
ತಿಳಿಯುತ್ತಿರಲಿಲ್ಲ. ‘Institute of engineering’ ಬಟ್ಟೆ ಸೇಲಿಗೆ ಬಂದಿದೆಯಮತೆ; ಎಲ್ಲಾ
ಕಂಪನಿ ಮಾಲ್ ಅಂತೆ; ವಿಪರೀತ ಸಸ್ತಾ’ ‘ಕಾಳಿದಾಸ ರೋಡಿನಲ್ಲಿರೋ ತೇಗು ಮೆಸ್ಸಿನಲ್ಲಿ ಐವತ್ತು
ರುಪಾಯಿಗೆ ಫುಲ್ ಮೀಲ್ಸ್ ನಾನ್ ವೆಜ್ ಊಟ ಗುರು. ಏನ್ ಚೆನ್ನಾಗಿರುತ್ತೆ ಅಂತೀಯಾ’ ಥೂ ಈ
ನನ್ಮಕ್ಳಿಗೆ ಊಟ ಬಟ್ಟೆ ಬಿಟ್ಟು ಬೇರೇನೂ ಯೋಚನೇನೆ ಬರೋದಿಲ್ವಾ ಅಂತ ಬೇಸರಪಟ್ಟುಕೊಂಡು ಮಾತನಾಡೋ
ಮನಸ್ಸಿದ್ರೂ ಸುಮ್ಮನಾಗಿಬಿಡುತ್ತಿದ್ದರು.
ಒಟ್ಟಿನಲ್ಲಿ
ಹೇಳಬೇಕಂದ್ರೆ ಈ ನಾಲ್ಕೂ ಗೆಳೆಯರು ಎಲ್ಲರಂತಿರಲಿಲ್ಲ. ಅಪರೂಪಕ್ಯಾವಾಗಾದ್ರೂ ಇವರೊಡನೆ ಒಂದಷ್ಟು
ಸಮಯ ಕಳೆದವರು ‘ಸೈಕ್ ನನ್ಮಕ್ಳಲೇ ಅವರು. ಹದಿನೆಂಟು ವರ್ಷಕ್ಕೇ ಒಳ್ಳೆ ಇನ್ನೇನು ಸಾಯೋ ಸ್ಥಿತಿಯಲ್ಲಿರೋ
ಮುದುಕರ ಥರಾ ಏನೇನೋ ಮಾತನಾಡ್ತಾರೆ’ ಎಂದೆಲ್ಲ ಸುದ್ದಿ ಹಬ್ಬಿಸಿ ಮತ್ತಷ್ಟು
ನಿಗೂಢವಾಗಿಸಿಬಿಟ್ಟರು. ಇಂಥ ಸುಳ್ಳು ಸುದ್ದಿ ಹಬ್ಬಿಸುವವರ ದೆಸೆಯಿಂದ ಎದುರಿಗೆ ಸಿಕ್ಕಾಗ ‘ಹಾಯ್’
ಎಂದು ಕೈಮಾಡಿ ಮುಗುಳ್ನಗುತ್ತಿದ್ದ ಕೆಲವು ಹುಡುಗಿಯರೂ ಇವರನ್ನು ಕಂಡಾಕ್ಷಣ ತಲೆತಗ್ಗಿಸಿ
ಹೋಗಿಬಿಡುತ್ತಿದ್ದರು. “ಈ ಮೆಡಿಕಲ್ ಕಾಲೇಜಿನಲ್ಲಿ ಅಸ್ಪೃಶ್ಯರಾಗಿಬಿಟ್ವಮ್ಮ ನಾವು” ಅಂತಿರ್ತಾನೆ
ಅಭಯ್.
ಇನ್ನು
ಪಾಠ ಮಾಡೋ ಮೇಷ್ಟ್ರುಗಳಿಗೂ ಇವರ ಪರಿಚಯ ಸರಿಯಾಗಿರಲಿಲ್ಲ. ‘ಗಡ್ಡ ಬೋಳಿಸಲಿಕ್ಕಾಗಲ್ವ’ ‘ತಲೆ
ಸರಿಯಾಗ ಬಾಚೋದಿಕ್ಕೂ ಬರೋದಿಲ್ವೇನೋ ಮಗೂಗೇ’ ಎಂದು ಆಗಾಗ ಬಯ್ಯಿಸಿಕೊಳ್ಳುತ್ತಿದ್ದರಷ್ಟೇ.
ಪಾಠಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಬಹಳಷ್ಟು ಬಾರಿ ಇವರ ಮೌನವೇ ಉತ್ತರವಾಗುತ್ತಿತ್ತು.
ಮತ್ತಷ್ಟು ಬಯ್ಗುಳ. ‘ನಾವು ಜೀವನದ ವಿದ್ಯಾರ್ಥಿಗಳಾಗುತ್ತಿದ್ದೇವೆಯೇ ಹೊರತು ಮೆಡಿಕಲ್ ನದಲ್ಲ’
ಅನ್ನೋದು ಕ್ರಾಂತಿಯ ಆಂಬೋಣ. ಕಾಲೇಜಿನ ಸಮಾರಂಭಗಳಲ್ಲಿ ನಾಲ್ಕು ವಿಷಿಲ್ಲೂ ಹತ್ತು ರಾಕೆಟ್ಟು
ಬಿಸಾಡೋದರಲ್ಲಿ ಇವರ ಉತ್ಸಾಹ ಕುಗ್ಗಿಹೋಗುತ್ತಿತ್ತು. ಎಲ್ಲರೂ ಚೆಂದ ಚೆಂದದ ಬಟ್ಟೆ ಹಾಕ್ಕೊಂಡ್
ಬಂದ ದಿನ ನಾವು ಮಾತ್ರ ಯಾಕೆ ಔಟ್ ಶರ್ಟು ತೋಳು ಮಡಿಚಿ, ಕಾಲಿಗೊಂದು ಕಿತ್ತೋದ ಎಕ್ಕಡ ಹಾಕೊಂಡು
ಬರ್ತೀವಿ ಅನ್ನೋ ಪ್ರಶ್ನೆ ಕಾಡುತ್ತಲೇ ಜಾಗ ಖಾಲಿ ಮಾಡುತ್ತಿದ್ದರು. ಇವರು ಡಿಫರೆಂಟು ಅನ್ನೋದನ್ನ
ಪ್ರೂವ್ ಮಾಡೋಕೆ ಈ ರೀತಿ ಮಾಡ್ತೀವಾ ಅನ್ನುವ ಅನುಮಾನವೂ ಮೂಡುತ್ತಿತ್ತು.
ಇವೆಲ್ಲಾ
ಒತ್ತಟ್ಟಿಗಿರಲಿ, ಬೇರೆಯವರ ಜೀವನ ಶೈಲಿಯಿಂದ ಬದಲಾಗೋ ಆಸಾಮಿಗಳಲ್ಲ ಇವರು. ನಾವು ನಮಗೆ ಎಷ್ಟು
ಅರ್ಥವಾಗ್ತೀವಿ ಅನ್ನೋದಷ್ಟೇ ಮುಖ್ಯ ಅನ್ನೋ ಭಾವನೆಯವರು. ಒಂಭತ್ತರಿಂದ ನಾಲ್ಕು ಕಾಲೇಜು, ನಂತರ
ಒಂದಷ್ಟು ಸಿಗರೇಟು, ಮಾತು, ಹರಟೆ, ಓದು, ಮಾತು, ಹರಟೆ ನಿದ್ರೆಯಲ್ಲಿ ದಿನಗಳು ಏರಿಳಿತವಿಲ್ಲದೆ
ಸಾಗುತ್ತಿದ್ದಾಗ ಈ ಹಾದಿಯಿಂದ ಮೊದಲು ಕವಲೊಡೆದದ್ದು ಕ್ರಾಂತಿ ಸಂಭವ್.
*
* *
ಕುಡಿದು
ಗಲಾಟೆ ಮಾಡಿದ ಒಂದು ತಿಂಗಳೊಳಗೆ ರಾಘವ ಕಾಲೇಜಿನ ಪಕ್ಕದಲ್ಲಿ ರೂಮ್ ಮಾಡಿದ. ಹದಿನೈದು ದಿನದ ನಂತರ
ಅಭಯನೂ ಅವನ ರೂಮೇ ಸೇರಿದ. ‘ಈ ಬಾರಿಯ ಹಾಸ್ಟೆಲ್ ಶುಲ್ಕ ಈಗಾಗಲೇ ಕಟ್ಟಾಗಿದೆ. ಮೊದಲ ವರ್ಷ ಮುಗಿದ
ನಂತರ ಹೊರಗೆ ರೂಮು ಮಾಡೋ ಯೋಚನೆ ಮಾಡಿದರಾಯಿತು’ ಅಂದುಕೊಂಡು ಸುಮ್ಮನಿದ್ದರು ಕ್ರಾಂತಿ, ತುಷಿನ್.
ಒಂದು
ದಿನ ಸಂಜೆ ಆರರ ಸುಮಾರಿಗೆ ತುಷಿನ್ ರಾಘವನ ರೂಮಿಗೆ ಬಂದ. ರಾಘವ ಓದುತ್ತಾ ಕುಳಿತಿದ್ದ. ಅಭಯ್
ಸಿಗರೇಟ್ ತರಲು ಹೊರಹೋಗಿದ್ದ. ತುಷಿನ್ ನನ್ನು ನೋಡುತ್ತಿದ್ದಂತೆ ರಾಘವ ಪುಸ್ತಕ ಮುಚ್ಚಿಟ್ಟು “ಏನಪ್ಪಾ
ಒಬ್ಬನೇ ಬಂದುಬಿಟ್ಟಿದ್ದೀಯಾ. ಎಲ್ಲಿ ನಿನ್ನ ರೂಮ್ ಮೇಟು?” ಎಂದು ಕೇಳಿದ.
“ಆ
ವಿಷಯಾನೇ ಮಾತಾಡಬೇಕು ಅಂತ ಬಂದೆ. ಇತ್ತೀಚೆಗೆ ಅಂದ್ರೆ ಸುಮಾರು ಒಂದು ವಾರದಿಂದ ಈ ಕ್ರಾಂತಿಯ
ನಡವಳಿಕೇನೇ ಅರ್ಥವಾಗ್ತಿಲ್ಲ”
“ಅವನಿಗೇನಾಯ್ತು?”
“ನನಗೂ
ಗೊತ್ತಿಲ್ಲಪ್ಪ. ಅಭಯನೂ ಬರ್ಲಿ ಇರು ಹೇಳ್ತೀನಿ” ಎಂದು ಸುಮ್ಮನಾದ ತುಷಿನ್, ರಾಘವನ ಕುತೂಹಲವನ್ನು
ಹೆಚ್ಚಿಸಿ.
“ಯಾರಿಗಾಗಿ
ಬದುಕಿದನೋ ಅವನು
ಯಾರ
ಕೇಳಿ ತೆರಳಿದನೋ ಅವನು” ತುಟಿಯ ನಡುವೆ ಸಿಗರೇಟು ಸಿಕ್ಕಿಸಿಕೊಂಡು ಹಾಡು ಗುನುಗುತ್ತಾ ಒಳಬಂದ
ಅಭಯ್. ತುಷಿನ್ ನನ್ನು ನೋಡಿ “ಯಾಕೆ ಸ್ವಾಮಿ. ಪ್ರಾಣಕಾಂತೆಯ ಸನ್ನಿಧಿಯನ್ನು ಬಿಟ್ಟು ಒಬ್ಬರೇ
ಬಿಜಯಂಗೈಯ್ದಿರುವಿರಲ್ಲಾ. ಪ್ರಾಣಕಾಂತೆಯ ಮೇಲೆ ಮುನಿಸೇ ಅಥವಾ ಇನ್ಯಾರಾದ್ರೂ ಪಟಾಯಿಸಿಬಿಟ್ಟರೆ”
ಎಂದೇಳುತ್ತಾ ಹಾಸಿಗೆಯ ಮೇಲೆ ಅಡ್ಡಾದ.
“ಮುನಿಸೂ
ಇಲ್ಲ. ಏನೂ ಇಲ್ಲ. ಆ ಪ್ರಾಣಕಾಂತೆ ಯಾಕೋ ಒಂದು ವಾರದಿಂದ ನಿಗೂಢವಾಗಿಬಿಟ್ಟಿದ್ದಾನಂತೆ” ನಗುತ್ತಾ
ಹೇಳಿದ ರಾಘವ.
“ನಮ್ಮ
ಕ್ಲಾಸಿನವರಿಗೆ ನಾವು ನಿಗೂಢ. ಅಂಥದ್ರಲ್ಲಿ ನಮ್ಮನಮ್ಮಲ್ಲೇ ನಾವೂ ನಿಗೂಢರಾಗಿಬಿಟ್ರೆ
ಕತ್ತಲೊಳಗಿನ ನೆರಳಿನಂತಾಗಿಬಿಡ್ತೀವಿ ಅಷ್ಟೇ” ತುಷಿನ್ ಮಾತು ಕೇಳಿ ಅಭಯನಿಗೆ ಏನೊಂದೂ
ತಿಳಿಯಲಾಗಲಿಲ್ಲ. “ಏನಾಯ್ತ್ರಲೇ? ಏನೇನೋ ಮಾತನಾಡ್ತಿದ್ದೀರ ಇಬ್ಬರೂ. ಕತ್ತಲಲ್ಲಿ ನೆರಳು ಹುಡುಕೋ
ಹಾಗೆ ಮಾಡಿರೋದ್ಯಾರಪ್ಪ ನಮ್ಮ ನಾಲ್ವರಲ್ಲಿ”
“ಆ
ಕ್ರಾಂತಿ”
“ಅವನೇನ್ಮಾಡ್ದ”
“ಅದೇ;
ಅವನೇನು ಮಾಡ್ತಿದ್ದಾನೆ ಅಂತಾನೆ ತಿಳೀತಾ ಇಲ್ಲ. ಅಫ್ರೋಜ್ ಭಾಯ್ ಅಂಗಡೀಲಿ ಸಿಗರೇಟು ಸೇದಿ ಹೋಗ್ತೀವಾ.
ನಾನು ಒಂದು ಅರ್ಧ ಘಂಟೆ ಮಲಗೋಣ ಅಂತ ಮಂಚದ ಮೇಲೆ ಅಡ್ಡಾಗ್ತೀನಿ. ಐದೂ ಐದೂವರೆಗೆ ಏಳುವಷ್ಟರಲ್ಲಿ
ಆಸಾಮಿ ನಾಪತ್ತೆ. ನಂತರ ಏಳರ ಸುಮಾರಿಗೆ ವಾಪಸ್ಸಾಗ್ತಾನೆ. ಎಲ್ಲಿಗೆ ಹೋಗಿದ್ದೋ ಅಂದ್ರೆ ‘ಇಲ್ಲೇ
ಸ್ವಲ್ಪ ಕೆಲಸ ಇತ್ತು’ ಅಂತಾನೆ. ಒಂದು ವಾರದಿಂದಾನೂ ಇದೇ ಕಥೆ. ಸರಿಯಾಗಿ ಮಾತೂ ಆಡಲ್ಲ. ಪುಸ್ತಕದ
ಮುಂದೆ ಕುಳಿತಿರ್ತಾನೆ. ಘಂಟೆಗಟ್ಟಲೆಯಾದರೂ ಒಂದೂ ಪುಟ ಮುಂದೆ ಮಾಡಿರಲ್ಲ. ಏನೋ ಯೋಚ್ನೆ
ಮಾಡ್ತಿರ್ತಾನೆ. ‘ಏನ್ ಯೋಚ್ನೇನೋ?’ ಅಂದ್ರೆ ‘ಏನೂ ಇಲ್ಲ. ಯಾಕೋ ಓದಲು ಮನಸ್ಸಾಗ್ತಿಲ್ಲ’
ಎಂದ್ಹೇಳಿ ಟೆರೇಸಿಗೆ ಹೋಗಿಬಿಡ್ತಾನೆ. ಅವನಿಂದೆಯೇ ಮೇಲೆ ಹೋದರೂ ಮಾತನಾಡಿಸಲ್ಲ” ಒಂದೇ ಉಸುರಿಗೆ
ಇಷ್ಟನ್ನು ಹೇಳಿ ನಿರಾಳನಾದ ತುಷಿನ್. ಒಂದರೆಘಳಿಗೆ ರಾಘವ, ಅಭಯ್ ಅವನು ಹೇಳಿದ್ದರ ಬಗ್ಗೆಯೇ
ಯೋಚಿಸುತ್ತಾ ಕುಳಿತರು.
“ನಿಮ್ಮಿಬ್ಬರ
ಮಧ್ಯೆ ಏನಾದ್ರೂ ಚಿಕ್ಕಪುಟ್ಟ ಮನಸ್ತಾಪವಾಯಿತಾ?” ಅಭಯ ಕೇಳಿದ.
“ನನಗೆ
ಗೊತ್ತಿರೋ ಮಟ್ಟಿಗಂತೂ ಏನೂ ಇಲ್ಲಪ್ಪ. ಇದ್ದಿದ್ರೆ ಹೇಳ್ತಿದ್ದ ಬಿಡು”
“ಅದೂ
ಸರಿ ಅನ್ನು. ಯಾವುದಾದ್ರೂ ಹುಡುಗಿ ಹಿಂದೆ ಬಿದ್ದವ್ನಾ ಹೆಂಗಪ್ಪ” ರವಷ್ಟು ಅಚ್ಚರಿ, ಒಂದಷ್ಟು
ಅಸೂಯೆಯ ಭಾವದಿಂದ ಕೇಳಿದ ಅಭಯ್. ರಾಘವ ಜೋರಾಗಿ ನಕ್ಕುಬಿಟ್ಟ. “ಕ್ರಾಂತಿ ಮತ್ತು ಹುಡುಗಿ! ಒಳ್ಳೇ
ತಮಾಷೆ ಮಾಡ್ತೀಯಾ ಕಣೋ ಅಭಯ್”
“ತಮಾಷೆ
ಏನ್ ಬಂತ್ ಗುರು. ದೇಹದಲ್ಲಿ ಯಾವುದ್ಯಾವುದೋ ಹಾರ್ಮೋನು ಹೆಚ್ಚುಕಡಿಮೆ ಆಗ್ತಾ ಇರುತ್ತೆ.
ನಾವೆಷ್ಟೇ ಭಿನ್ನರು ಅಂದುಕೊಂಡರೂ ನಾವೂ ಮನುಷ್ಯರೇ ಅಲ್ಲವಾ. ಹುಡ್ಗೀರ ಬಗ್ಗೆ ಆಸಕ್ತಿ ಬೆಳೆದರೆ
ತಪ್ಪೇನು?”
“ಅಭಿ
ಹೇಳ್ತಿರೋದು ಕರೆಕ್ಟು ರಾಘವ. ಅವತ್ತು ನೀನೇ ಆ ಜಯಂತಿ ದೇವತೆ ಥರಾ ಕಾಣ್ತಿದ್ದಾಳೆ ಅಂತ ನಾಲಕ್ಕು
ಸಿಗರೇಟು ಹೆಚ್ಚಿಗೆ ಸೇದಿದ್ದು ಮರ್ತುಬಿಟ್ಟಾ? ಆದ್ರೂ ನಮ್ಮತ್ರಾ ಮುಚ್ಚಿಡೋ ವಿಷಯ ಏನಲ್ಲ ಬಿಡು
ಅದು”
“ಕೊನೆಗೆ
ನನ್ನ ಬುಡಕ್ಕೇ ತಂದಲ್ಲ. ನಾವು ನಾವೇ ಯಾಕೆ ಏನೇನೋ ಕಲ್ಪನೆ ಮಾಡಿಕೊಳ್ಳೋದು. ಇವತ್ತು ಹೇಗಿದ್ರೂ
ರಾತ್ರಿ ಡಾಬಾಗೆ ಹೋಗ್ತಿದ್ದೀವಲ್ಲ. ಅಲ್ಲೇ ಅವನನ್ನೇ ಕೇಳಿದರಾಯ್ತು ಬಿಡು” ರಾಘವನ ಮಾತಿಗೆ
ಉಳಿದವರೂ ಸಮ್ಮತಿ ಸೂಚಿಸಿದರು.
No comments:
Post a Comment