Dr Ashok K R
ಟಿ.ವಿ
9 ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಕೆಟ್ಟತನಕ್ಕಾಗಿ!
ಡಿ.ಕೆ.ಶಿವಕುಮಾರರ ಮೇಲೆ ಟಿ.ವಿ.9 ಮತ್ತು ಅದರ ಸೋದರ ಸಂಸ್ಥೆ ನ್ಯೂಸ್ 9 ಮಾಧ್ಯಮ
ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಆರೋಪವನ್ನೊರಸಿದ್ದಾರೆ. ಡಿ.ಕೆ.ಶಿವಕುಮಾರರು ತಮ್ಮ ಅಧಿಕಾರದ
ಪ್ರಭಾವಳಿಯನ್ನು ಬಳಸಿ ಕೇಬಲ್ ಆಪರೇಟರ್ರುಗಳ ಮೂಲಕ ಟಿ.ವಿ.9 ಮತ್ತು ನ್ಯೂಸ್ 9 ವಾಹಿನಿ
ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ! ಟಿ.ವಿ.9 ವಾಹಿನಿಯ ಪ್ರಕಾರ ಸೋಮವಾರ ಸಂಜೆಯಿಂದ ಮಂಗಳವಾರ
ಬೆಳಿಗ್ಗೆಯ ವರೆಗೆ ಈ ಬ್ಲ್ಯಾಕ್ ಔಟ್ ನಡೆದಿದೆ. ಮಾಧ್ಯಮಗಳನ್ನು ಹತ್ತಿಕ್ಕುವ ಸರ್ಕಾರದ
ಪ್ರತಿನಿಧಿಯ ಪ್ರಯತ್ನ ಸ್ವಹಿತಾಸಕ್ತಿಗಾಗಿ ನಡೆಸಿದ ಫ್ಯಾಸಿಸ್ಟ್ ಮನೋಭಾವವೇ ಹೊರತು ಮತ್ತೇನಲ್ಲ.
ಸರಕಾರದ ವಿರುದ್ಧ ಒಂದಾದ ಮೇಲೊಂದರಂತೆ ವರದಿಗಳನ್ನು ಪ್ರಕಟಿಸುತ್ತಿರುವುದು ಈ ಹತ್ತಿಕ್ಕುವಿಕೆಗೆ
ಕಾರಣವಂತೆ! ಮಾಧ್ಯಮದ ಕೆಲಸವೇ ವಿರೋಧ ಪಕ್ಷದಂತೆ ಕೆಲಸ ನಿರ್ವಹಿಸುವುದಲ್ಲವೇ? ಅದನ್ನೇ ಅವರನ್ನು
ಮಾಡಬೇಡಿ (ಅವರು ಮಾಡುತ್ತಿಲ್ಲ ಎಂಬುದು ಮತ್ತೊಂದು ಸತ್ಯ) ಎಂದರೆ ಹೇಗೆ ಸ್ವಾಮಿ? ಉಳಿದ
ವಾಹಿನಿಗಳೂ ಕೂಡ ಸರಕಾರದ ವಿರುದ್ಧ ವರದಿಗಳನ್ನು ಬಿತ್ತರಿಸುವಾಗ ಟಿ.ವಿ.9 ಮಾತ್ರ ಹೇಗೆ ಮತ್ತು
ಏಕೆ ಬಹಿಷ್ಕಾರಕ್ಕೊಳಗಾಯಿತು?
ಇದು
ಡಿ.ಕೆ.ಶಿ ಮತ್ತು ಟಿ.ವಿ.9 ಮಧ್ಯದ ವೈಯಕ್ತಿಕ ಕದನವೆಂದರೆ ತಪ್ಪಾಗಲಾರದು. 2014ರ ಮಾರ್ಚಿನಿಂದಲೇ
ಈ ಮುಸುಕು ಗುದ್ದಾಟ ಶುರುವಾಗಿದೆ. ಡಿ.ಕೆ.ಶಿಯ ವಿರುದ್ಧ ಕುಟುಕು ಕಾರ್ಯಾಚರಣೆ ಮಾಡಲು ಹೋಗಿ
ಟಿ.ವಿ.9 ವಾಹಿನಿಯ ಶ್ರೇಯಸ್ ಮತ್ತು ಶ್ವೇತಾ ಡಿ.ಕೆ.ಶಿ ಮತ್ತವನ ಬೆಂಬಲಿಗರಿಂದ ಕುಟುಕಿಸಿಕೊಂಡು
ಬಂಧನಕ್ಕೊಳಗಾಗಿತ್ತು.
Read: ಆಪರೇಷನ್ ಕನಕಾಸುರ! ಪತ್ರಿಕೋದ್ಯಮವನ್ನೇ ಕುಟುಕಿದ ಕಾರ್ಯಾಚರಣೆ!
ಡಿ.ಕೆ.ಶಿ
ಮತ್ತು ಟಿ.ವಿ.9 ಇಬ್ಬರೂ ತಮ್ಮ ತಮ್ಮ ಸಾಚಾತನಗಳ ಬಗ್ಗೆ ಹೇಳಿಕೊಂಡಿದ್ದರು. ಜನರಿಗೆ ಇಬ್ಬರ ಸಾಚಾತನದಲ್ಲೂ
ನಂಬುಗೆಯಿಲ್ಲ ಎಂಬುದು ಸುಳ್ಳೇನಲ್ಲ. ಆಗ ಶುರುವಾದ ಈರ್ವರ ನಡುವಿನ ಗುದ್ದಾಟ ಈಗ ಮತ್ತೊಂದು ಘಟ್ಟ
ತಲುಪಿದೆ. ಮತ್ತೀಗದು ತಲುಪಿರುವ ಘಟ್ಟದಿಂದ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆರಡಕ್ಕೂ
ದೊಡ್ಡ ಪೆಟ್ಟು ನೀಡಿದೆ. ಟಿ.ವಿ.9 ನೇರವಾಗಿ ಡಿ.ಕೆ.ಶಿಯ ಮೇಲೆ ಆರೋಪ ಹೊರಿಸಿದರೆ ಕೇಬಲ್
ಆಪರೇಟರ್ಗಳ ಸಂಘದವರು ಸರಕಾರಕ್ಕೂ ಇದಕ್ಕೂ ಸಂಬಂಧವಿಲ್ಲ, ಇದು ಟಿ.ವಿ.9 ವಾಹಿನಿಯ ಕೊಬ್ಬಿನ
ನಡವಳಿಕೆಗೆ ಕೇಬಲ್ ಆಪರೇಟರ್ ಗಳು ಕಲಿಸಿದ ಪಾಠ ಎಂದು ಹೇಳಿಕೆ ನೀಡಿದೆ. ಕೇಬಲ್ ಆಪರೇಟರುಗಳ ಸಂಘದ
ಅಧ್ಯಕ್ಷ ಪ್ಯಾಟ್ರಿಕ್ ರಾಜು ವಿವಿಧ ಕೇಬಲ್ ಆಪರೇಟರುಗಳಿಗೆ ಕಳಿಸಿದರೆನ್ನಲಾದ ಪತ್ರದ
ಸಾರಾಂಶವಿದು (ಟಿವಿ 9ನಲ್ಲಿ ಪ್ರಸಾರವಾಗಿದ್ದು)
“ಆತ್ಮೀಯ ಕೇಬಲ್ ಆಪರೇಟರ್
ಗಳೇ, ತುಂಬಾ ದಿನಗಳಿಂದಲೂ ಟಿವಿ9 ವಾಹಿನಿ ನಮ್ಮ ಉದ್ಯಮದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ
ಮಾಡುತ್ತಿದೆ. ಈ ವಾಹಿನಿಯು ಅನವಶ್ಯಕವಾಗಿ ಸರ್ಕಾರದ ವಿರುದ್ಧ ವರದಿಗಳನ್ನು ಮಾಡುವ ಮೂಲಕ ಕೆಟ್ಟ
ಹೆಸರು ತರುವ ಪ್ರಯತ್ನ ಮಾಡುತ್ತಿದೆ. ಇದರ ನೇರ ಪರಿಣಾಮ ನಮ್ಮ ಉದ್ಯಮದ ಮೇಲಾಗುತ್ತಿದ್ದು ನಾವು ಸರ್ಕಾರವನ್ನು
ಎದುರಿಸುವ ಪರಿಸ್ಥಿತಿ ಉಂಟಾಗಿದೆ. ನಿಮಗೆಲ್ಲಾ ತಿಳಿದಿರುವಂತೆಯೇ ನಾವು ಆಪ್ಟಿಕಲ್ ಕೇಬಲ್
ಅಳವಡಿಸಲು ಸರಿಯಾದ ಸ್ಥಳಾವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುತ್ತೇವೆ.
ಅಲ್ಲದೇ ಹೆಚ್ಚಿನ ಶುಲ್ಕವನ್ನೂ ವಿಧಿಸದಂತೆ ಮನವಿ ಮಾಡಿಕೊಂಡಿರುತ್ತೇವೆ. ಅದೃಷ್ಟವಶಾತ್
ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಈಗ ನಿಮಗೆಲ್ಲಾ ತಿಳಿದಿರುವಂತೆಯೇ ಡಿಜಿಟೈಸೇಶನ್
ಪರಿಣಾಮವನ್ನು ನಾವೆಲ್ಲಾ ಎದುರಿಸುತ್ತಿದ್ದೇವೆ. ನಾವು ಇನ್ನೂ ಯಾವುದೇ ರೀತಿಯ ಶುಲ್ಕ ಅಥವಾ ಇತರೆ
ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಮ್ಮ ಪ್ರತಿನಿಧಿಗಳು ಟಿವಿ9 ಸಂಸ್ಥೆಯ ಜೊತೆ
ಸರ್ಕಾರದ ವಿರುದ್ಧದ ವರದಿಗಳನ್ನು ಮಾಡಬೇಡಿ ಎಂದು ಕೋರುತ್ತಲೇ ಬಂದಿದ್ದೇವೆ. ಆದರೆ ಟಿವಿ9ನಿಂದ
ನಮ್ಮ ಪ್ರಯತ್ನಕ್ಕೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ನಾವುಗಳು ಅಂದರೆ
ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಅಸೋಸಿಯೇಶನ್ ಟಿವಿ9 ಹಾಗೂ ನ್ಯೂಸ್ 9 ಪ್ರಸಾರ ಸ್ಥಗಿತ ಮಾಡಲು ಎಲ್ಲಾ
ಕೇಬಲ್ ಆಪರೇಟರ್ ಗಳಿಗೆ ಸೂಚನೆ ನೀಡುತ್ತಿದ್ದೇವೆ. ಮುಂದಿನ ಸೂಚನೆ ನೀಡುವವರೆಗೂ ಇದು ಜಾರಿಯಲ್ಲಿ
ಇರತಕ್ಕದ್ದು.”
ಮೇಲಿನ
ಪತ್ರದಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಒಂದು - ಸರಕಾರದ ವಿರುದ್ಧ ವರದಿಗಳನ್ನು ಮಾಡಬೇಡಿ
ಎಂದು ಕೇಬಲ್ ಆಪರೇಟರುಗಳ ಸಂಘ ವಾಹಿನಿಯವರಿಗೆ ಮನವಿ ಮಾಡಿ ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗದ
ಕಾರಣ ಪ್ರಸಾರವನ್ನು ಸ್ಥಗಿತಗೊಳಿಸಲು ತೀರ್ಮಾನಿಸುವುದು. ಎರಡು - ಆಪ್ಟಿಕಲ್ ಕೇಬಲ್ಲುಗಳನ್ನು
ಅಳವಡಿಸಲು ಹೆಚ್ಚಿನ ವೆಚ್ಚ ವಿಧಿಸದಂತೆ ಸರಕಾರವನ್ನು ವಿನಂತಿಸಿರುವುದು. ಆಪ್ಟಿಕಲ್ ಕೇಬಲ್ಲಿಗೂ
ಸರಕಾರಕ್ಕೂ ಇಂಧನ ಸಚಿವರಿಗೂ ಏನು ಸಂಬಂಧವೆಂದು ತಿಳಿಯಲು ಎರಡು ತಿಂಗಳು ಹಿಂದೆ ಹೋಗಬೇಕು.
ಬೆಸ್ಕಾಂ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಲು ಮುಂಚೆ ಅನುಮತಿ ಇತ್ತು ಮತ್ತು
ಅದಕ್ಕೆ ಒಂದಷ್ಟು ದುಡ್ಡನ್ನೂ ತೆಗೆದುಕೊಳ್ಳುತ್ತಿದ್ದರು. ಅದು ಅಪಾಯಕಾರಿ ಎಂದರಿತೋ ಮತ್ಯಾವ
ಕಾರಣಕ್ಕೋ ಬೆಸ್ಕಾಂ ತನ್ನ ನಿರ್ಧಾರದಿಂದ ಹಿಂದೆ ಸರಿದು ಕೇಬಲ್ ವೈರುಗಳನ್ನು
ತೆಗೆಯಲಾರಂಭಿಸಿತ್ತು. ಆಗಸ್ಟ್ ಐದನೇ ತಾರೀಖು ಪ್ಯಾಟ್ರಿಕ್ ರಾಜು ಇಂಧನ ಸಚಿವರನ್ನು ಭೇಟಿಮಾಡಿ
ಕೇಬಲ್ಲುಗಳನ್ನು ತೆಗೆಯಬಾರದೆಂದು ಮನವಿ ಸಲ್ಲಿಸಿದ್ದರು. ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡ
ಇಂಧನ ಸಚಿವ ಡಿ.ಕೆ.ಶಿಯವರು ಟಿವಿ.9 ವಾಹಿನಿಯ ಪ್ರಸಾರವನ್ನು ನಿಲ್ಲಿಸಿದರೆ ನಿಮ್ಮ ಕೆಲಸ
ಸುಗಮವಾಗುತ್ತೆ ಎಂದು ಒತ್ತಡವಾಕಿದರಾ? ಸನ್ನಿವೇಶಗಳನ್ನು ಗಮನಿಸಿದರೆ ಅದೇ ಸತ್ಯವಾಗಿರುವ ಸಾಧ್ಯತೆ
ಹೆಚ್ಚಾಗಿ ಕಾಣುತ್ತದೆ.
ತಮ್ಮ
ವಿರುದ್ಧದ ವರದಿ ಬಂದಾಗ ನಿರ್ದಿಷ್ಟ ಪ್ರದೇಶದ ಶಾಸಕ ಕರೆಂಟು ತೆಗೆಸಿಯೋ, ಕೇಬಲ್ ಬ್ಲಾಕ್
ಮಾಡಿಸಿಯೋ ಅಥವಾ ಪತ್ರಿಕೆಯಾದರೆ ಎಲ್ಲಾ ಪತ್ರಿಕೆಯನ್ನು ಖರೀದಿಸಿ ಜನರ ಕೈಗೆ ಸಿಗದಂತೆ ಮಾಡುವುದು
ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಉದಯವಾದ ತೆಲಂಗಾಣದ ಮೊದಲ ಮುಖ್ಯಮಂತ್ರಿ
ಕೆ.ಚಂದ್ರಶೇಖರ್ ರಾವ್ ಕೂಡ ಟಿ.ವಿ.9 ಮತ್ತು ಎಬಿಎನ್
ಚಾನೆಲ್ಲುಗಳನ್ನು ತಮ್ಮ ಪಕ್ಷದ ಶಾಸಕರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎಂಬ ಕಾರಣ ನೀಡಿ
ತಾತ್ಕಾಲಿಕವಾಗಿ ತಡೆಯೊಡ್ಡಿದ್ದರು. ಈಗ ಡಿ.ಕೆ.ಶಿವಕುಮಾರರ ಸರದಿ. ಮಾಧ್ಯಮಗಳಲ್ಲಿ ಅನೇಕ
ಲೋಪದೋಷಗಳಿರಬಹುದು, ಭ್ರಷ್ಟರಾಗಿರಬಹುದು, ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಮತ್ತೊಬ್ಬರನ್ನು
ತೇಜೋವಧೆ ಮಾಡುವುದಕ್ಕೇ ಸೀಮಿತರಾಗಿರಬಹುದು – ಮಾಧ್ಯಮಗಳ ಬಗ್ಗೆ ಎಷ್ಟೆಲ್ಲ ನಕಾರಾತ್ಮಕ
ಅಂಶಗಳಿದ್ದರೂ ಅವುಗಳ ಪ್ರಸಾರವನ್ನೇ ಸ್ಥಗಿತಗೊಳ್ಳುವಂತೆ ಮಾಡುವುದು ಆರೋಗ್ಯವಂತ
ಪ್ರಜಾಪ್ರಭುತ್ವದ ಲಕ್ಷಣವಲ್ಲ. ಪ್ರಜಾಪ್ರಭುತ್ವ ಮರೆಯಾಗಿ ಫ್ಯಾಸಿಸಂ ಇಣುಕು ಹಾಕುವ ಲಕ್ಷಣವಿದು.
ಟಿ.ವಿ.9 ನಂತಹ ಚಾನೆಲ್ಲುಗಳನ್ನು ಬ್ಲಾಕ್ ಮಾಡಿ ಸರಿಯಾಗಿ ಬುದ್ಧಿ ಕಲಿಸಿದರು ಎಂಬ ವಾದವೂ
ಕೇಳಿಬರುತ್ತಿರುವುದು ವಾಹಿನಿಗಳು ಎಷ್ಟರ ಮಟ್ಟಿಗೆ ಜನರ ವಿಶ್ವಾಸವನ್ನು ಗಳಿಸಿವೆ ಎಂಬುದರ
ಸಂಕೇತವೂ ಹೌದು. ಪತ್ರಿಕೋದ್ಯಮದ ಧರ್ಮ ಮತ್ತು ಪ್ರಜಾಪ್ರಭುತ್ವದ ಕರ್ತವ್ಯಗಳೆರಡೂ ಅಪಾಯದಲ್ಲಿರುವ
ಸಂದರ್ಭವಿದು.
ಸರ್ಕಾರದ ವಿರುದ್ಧ ವರದಿಗಳನ್ನು ಮಾಡದಂತೆ ಕೇಬಲ್ ಆಪರೇಟರ್ಗಳ ಸಂಘ ಟಿವಿ ವಾಹಿನಿಗಳನ್ನು ಕೇಳುವುದು ಮತ್ತು ಅದನ್ನು ಪಾಲಿಸದ ಟಿವಿ ವಾಹಿನಿಗಳ ಪ್ರಸಾರವನ್ನು ನಿರ್ಬಂಧಿಸುವುದು ತುರ್ತು ಪರಿಸ್ಥಿತಿಯ ದಿನಗಳ ಮರುಕಳಿಕೆಗೆ ಸಮಾನ. ಹಾಗಾಗಿ ಇದು ತೀವ್ರ ಖಂಡನಾರ್ಹ. ಟಿವಿ ೯ ಕನ್ನಡ ವಾಹಿನಿಯು ಕನ್ನಡ ವಾಹಿನಿಗಳಲ್ಲಿ ಇದ್ದುದರಲ್ಲಿಯೇ ತುಸು ಉತ್ತಮ ವಾಹಿನಿ. ಈ ವಾಹಿನಿ ಧ್ವನಿಯಿಲ್ಲದವರಿಗೆ ಧ್ವನಿಯನ್ನು ಕೆಲವೊಮ್ಮೆಯಾದರೂ ನೀಡಿದೆ. ಮೂಢನಂಬಿಕೆಗಳ ವಿರುದ್ಧ ಕೆಲವೊಮ್ಮೆಯಾದರೂ ಧ್ವನಿಯೆತ್ತಿದೆ. ಉಳಿದ ಕನ್ನಡ ಟಿವಿ ವಾಹಿನಿಗಳು ಇಷ್ಟೂ ಮಾಡಿಲ್ಲ, ಮಾಡುತ್ತಿಲ್ಲ. ಹೀಗಾಗಿ ಟಿವಿ ೯ ಕನ್ನಡ ವಾಹಿನಿಯ ಮೇಲಿನ ದಬ್ಬಾಳಿಕೆ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವುದರಲ್ಲಿ ಸಂದೇಹವಿಲ್ಲ. ಸಿದ್ಧರಾಮಯ್ಯ ಸರ್ಕಾರ ಈ ವಿಷಯದಲ್ಲಿ ದಪ್ಪ ಚರ್ಮ ಬೆಳೆಸಿಕೊಂಡಿರುವುದು ಖಂಡನೀಯ.
ReplyDelete@anand prasad
ReplyDeleteಸತ್ಯ ಸರ್