ಇಂತಿ ನಮಸ್ಕಾರಗಳು |
ಲಂಕೇಶರ ಕೆಲವು ಬರಹಗಳನ್ನು (ಕಥೆ, ಕಾದಂಬರಿ ಹೊರತುಪಡಿಸಿ) ಅವರ ನಿಧನಾನಂತರ ಲಂಕೇಶ್ ಪತ್ರಿಕೆಯಲ್ಲಿ ಮತ್ತು ತದನಂತರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬಿಟ್ಟು ಬಿಟ್ಟು ಓದಿದ್ದಷ್ಟೇ. ನಾವೆಲ್ಲ ಓದು ಪ್ರಾರಂಭಿಸುವ ಹೊತ್ತಿಗೆ ಲಂಕೇಶರು ಮರಣ ಹೊಂದಿದ್ದರು. ಆ ತಲೆಮಾರಿನ ಅನೇಕ ಲೇಖಕರು, ಪತ್ರಕರ್ತರು ಲಂಕೇಶರನ್ನು ಹೊಗಳಿದರೂ ತೆಗಳಿದರೂ ಪ್ರೀತಿಯಿಂದ ಲಂಕೇಶರನ್ನು ಮೇಷ್ಟ್ರು ಎಂದು ಕರೆಯುವುದನ್ನು ನಿಲ್ಲಿಸುವುದಿಲ್ಲ! ಅಷ್ಟರಮಟ್ಟಿಗೆ ಲಂಕೇಶರ ಪ್ರಭಾವವಿದೆ. ಇನ್ನು ವಿಮರ್ಶೆಯಲ್ಲಿ ಹೆಸರು ಮಾಡಿರುವ ಡಿ.ಆರ್.ನಾಗರಾಜ್ (ಅದು ತಿಳಿದದ್ದು ಈ ಪುಸ್ತಕದಿಂದ) ಕುರಿತು ಏನೂ ತಿಳಿದಿಲ್ಲ. ಆವಾಗಿವಾಗ ಪ್ರಜಾವಾಣಿಯ ಸಾಪ್ತಾಹಿಕದಲ್ಲೋ, ಸುಧಾ - ಮಯೂರ ಪತ್ರಿಕೆಯಲ್ಲೋ ಅವರ ಹೆಸರನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಓದಿದ ನೆನಪು ಅಷ್ಟೇ. ಲಂಕೇಶ್ ಮತ್ತು ಡಿ.ಆರ್. ನಾಗರಾಜರ ಪ್ರಭಾವದಿಂದ ಬೆಳೆದವರು ಅನೇಕರಿರುವುದರಿಂದ 'ಇಂತಿ ನಮಸ್ಕಾರಗಳು' ಪುಸ್ತಕ ಉತ್ತಮ ಮಾರಾಟ ಕಾಣುತ್ತಿದೆ. ಅವರೀರ್ವರನ್ನೂ ಅಷ್ಟಾಗಿ ತಿಳಿಯದವರಿಗೆ ಈ ಪುಸ್ತಕದ ಓದು ಲಂಕೇಶ್ ಮತ್ತು ಡಿ.ಆರ್. ನಾಗರಾಜರನ್ನು ಓದಿಕೊಳ್ಳಲು ಪ್ರೇರೇಪಿಸುತ್ತದೆ. ಅಂದಹಾಗೆ ಈಗ ನಾನು ಓದುತ್ತಿರುವ ಪುಸ್ತಕ ಪಿ.ಲಂಕೇಶರ ಹುಳಿಮಾವಿನ ಮರ! 'ಇಂತಿ ನಮಸ್ಕಾರಗಳು' ಪುಸ್ತಕದಿಂದ ಕೆಲವು ಆಯ್ದ ಸಾಲುಗಳು ಹಿಂಗ್ಯಾಕೆ ಓದುಗರಿಗಾಗಿ:
`ಜಿದ್ದು ಹಟಗಳು ಒಂದು ದೃಷ್ಟಿಯಿಂದ ಮನುಷ್ಯನನ್ನು ದುರ್ಬಲಗೊಳಿಸುವ ಅಂಶಗಳಂತೆ ಕಂಡರೂ ಅವಿಲ್ಲದ ಮನುಷ್ಯ ಗೆಲ್ಲುವ ಹಂಬಲಗಳನ್ನು ಕಳೆದುಕೊಳ್ಳುತ್ತಾನೆ`
`ಈವಿಲ್ ನ ಒಂದು ಹಂತದ ಗೆಲುವಿಗೆ ಮುಖ್ಯ ಕಾರಣವೆಂದರೆ ಈವಿಲ್ ಗೆ ಇರುವ ವಿಚಿತ್ರವಾದ ಏಕೋದ್ದೇಶ. ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ನಮ್ಮ ದಿನನಿತ್ಯದ ಅನುಭವದಲ್ಲೇ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ಸುಳ್ಳು, ಮೋಸ ಎಲ್ಲ ಬೆರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚ ಸ್ವಭಾವದವರು ಹಿಂದೆ ಸರಿದು ಬಿಡುತ್ತಾರೆ. ಕೇಡಿನ ಗೆಲುವಿಗೆ ಇದು ಕೂಡ ಕಾರಣ`
`ಮೂರ್ಖ, ಕಣ್ಣು ಮುಚ್ಚಿ ಯೋಚಿಸು. ಅದೊಂದೇ ಕಣ್ಣು ಪಡೆಯುವ ಮಾರ್ಗ`
`ಭ್ರಷ್ಟಾಚಾರದ ಬಗ್ಗೆ ಅತಿರಂಜಿತವಾದ ಉತ್ಪ್ರೇಕ್ಷಿತ ಬರಹಗಳನ್ನು ಪ್ರಕಟಿಸುವವರ ಸಂಖೈ ಹೆಚ್ಚಾದ ಹಾಗೆಲ್ಲ ಸತ್ಯಶೋಧನೆ ಮಾಡಿ ವರದಿ ಮಾಡುವ ಪ್ರಾಮಾಣಿಕರ ದನಿ ಉಡುಗುತ್ತಾ ಹೋಗುತ್ತದೆ. ಭ್ರಷ್ಟರಿಗೆ ಈ ಸ್ಥಿತಿ ಆರಾಮದಾಯಕವಾಗತೊಡಗುತ್ತದೆ`
ಪುಸ್ತಕವನ್ನು ಖರೀದಿಸಲು ಇಲ್ಲಿಗೆ ಭೇಟಿ ಕೊಡಿ
ಚಿತ್ರಮೂಲ: ವರ್ತಮಾನ.ಕಾಮ್
ಪುಸ್ತಕವನ್ನು ಖರೀದಿಸಲು ಇಲ್ಲಿಗೆ ಭೇಟಿ ಕೊಡಿ
ಚಿತ್ರಮೂಲ: ವರ್ತಮಾನ.ಕಾಮ್
No comments:
Post a Comment