ಹೊಂಬಣ್ಣದ ಸಮಯ |
Dr Ashok K R
ಕ್ಯಾಮೆರಾ
ದೊಡ್ಡದೇ ಇರಲಿ ಪುಟ್ಟದೇ ಇರಲಿ ಫೋಟೋಗ್ರಫಿ ಕಲಿಯುವ ಉತ್ಸಾಹ ಮೂಡಿದ ಮೇಲೆ ಆ ಉತ್ಸಾಹದ
ಜೊತೆಜೊತೆಗೇ ಶಿಸ್ತು ಮೈಗೂಡದಿದ್ದರೆ ಕಷ್ಟ. ಶಿಸ್ತು ಮೈಗೂಡಿಸಿಕೊಂಡ ಮೇಲೆ ಕ್ಯಾಮೆರಾ
ಕೈಗೆತ್ತುಕೊಳ್ಳಬೇಕು. ಕ್ಯಾಮೆರಾ ಮತ್ತು ಫೋಟೋಗ್ರಫಿಯ ಮೇಲೆ ‘ಭಯಂಕರ’ ಪ್ರೀತಿ ಮೂಡಿದರೆ ಶಿಸ್ತು
ತಾನಾಗೇ ನಮ್ಮೊಳಗೆ ಪ್ರವೇಶಿಸಿಬಿಡುತ್ತದೆ. ಅದರಲ್ಲೂ ನಿದ್ರಾದೇವಿಯ ಅಪಾರ ಕೃಪೆಯಿರುವವರಿಗೆ ಮುಂಜಾನೆಯ ಸವಿನಿದ್ರೆಯಿಂದೇಳುವುದು ಹಿಂಸೆಯೇ ಸರಿ. ಕೋಳಿ ಕೂಗುವುದಕ್ಕಿಂತ ಮೊದಲೇ
ಎದ್ದು ಬೆಳಕಿನ ನಿರೀಕ್ಷೆಯಲ್ಲಿರುವವರಿಗೆ (ನನ್ನದೂ ಇದೇ ಕೆಟಗರಿ) ತೊಂದರೆಯಿಲ್ಲ ಬಿಡಿ!
ಸೂರ್ಯಾಸ್ತಮಾನದ ಬಣ್ಣಗಳು |
ಮೊದಮೊದಲಿಗೆ
ಫೋಟೋಗ್ರಫಿಯ ಬಗ್ಗೆ ಅಂತರ್ಜಾಲದಲ್ಲಿ ಓದುತ್ತಿದ್ದಾಗ ಕೆಲವು ಫೋಟೋಗಳಲ್ಲಿ ಕಾಣಿಸುತ್ತಿದ್ದ
ಹೊಂಬಣ್ಣದ ಲೇಪವನ್ನು ನೋಡಿದಾಗ ‘ಇದು ಫೋಟೋಶಾಪಿನಲ್ಲಿ ತುಂಬಿದ ಬಣ್ಣ’ ಎಂದು ಭಾವಿಸುತ್ತಿದ್ದೆ.
ಪ್ರಕೃತಿಯಲ್ಲಿ ಫೋಟೋದಲ್ಲಿ ಸೆರೆಸಿಗುವುದಕ್ಕಿಂತಲೂ ಹೆಚ್ಚಿನ ಆಹ್ಲಾದಕರ ಬಣ್ಣಗಳ ಸಮ್ಮೇಳನವಿದೆ
ಎಂಬ ಸಂಗತಿ ಕೆಲವೇ ದಿನಗಳಲ್ಲಿ ತಿಳಿಯಿತು. ಬೇರೆ ಬೇರೆ ಋತಮಾನಗಳಲ್ಲಿ, ದಿನದ ಯಾವ ಯಾವ
ಸಮಯದಲ್ಲಿ ಯಾವ್ಯಾವ ಬಣ್ಣಗಳನ್ನು ಪ್ರಕೃತಿ ಪ್ರಸ್ತುತಪಡಿಸುತ್ತದೆ ಎಂಬುದನ್ನು ಅರಿಯಲು ಒಂದು
ಜನ್ಮ ಸಾಲದು! ಫೋಟೋಗ್ರಫಿಯ ಭಾಷೆಯಲ್ಲಿ ಅದಕ್ಕೆ golden hours ಎಂದು ಹೆಸರು. Golden Hoursನ
ಸ್ವಲ್ಪ ಅರಿತ ನಂತರ ನಾನೇ ತೆಗೆದ ಕೆಲವು ಫೋಟೋಗಳನ್ನು ನೋಡಿ ಗೆಳೆಯರು ‘ಇದು ಫೋಟೋಶಾಪಿನಲ್ಲಿ
ತುಂಬಿದ ಬಣ್ಣವಾ?’ ಎಂದು ಕೇಳಿದಾಗ ‘ಓಹೋ ಪರವಾಯಿಲ್ಲ. ನನಗೂ ಸ್ವಲ್ಪ ಫೋಟೋಗ್ರಫಿ ಬರುತ್ತೆ’
ಎಂದು ಬೆನ್ನುತಟ್ಟಿಕೊಂಡು golden hoursನ ಬಗ್ಗೆ ಒಂದಷ್ಟು ವಿವರಿಸುತ್ತಿದ್ದೆ.
ಏನಿದು Golden Hours?
ಸೂರ್ಯ
ಹುಟ್ಟುವುದಕ್ಕೆ ಕೆಲವು ಸಮಯದ ಮುಂಚಿನಿಂದ ಅಂದರೆ ಸುಮಾರು ಐದೂವರೆ ಆರರ ಸಮಯದಿಂದ (ಋತುಮಾನಕ್ಕೆ
ತಕ್ಕಂತೆ ಸಮಯದಲ್ಲಿ ಕೊಂಚ ಬದಲಾವಣೆಯಾಗುತ್ತದೆ) ಎಂಟು ಎಂಟೂವರೆಯವರೆಗೆ ನಿಸರ್ಗದ ಬಳಿ ಸಮಯ
ಕಳೆದರೆ golden hoursನ ಅರಿವಾಗುತ್ತದೆ. ಇಡೀ ಪ್ರಕೃತಿ ಸೂರ್ಯನ ಎಳೆಯ ಕಿರಣಗಳಿಂದ
ಹೊಂಬಣ್ಣದಲ್ಲಿ ಅದ್ದಿದಂತಿರುತ್ತದೆ. ಬೆಳಗಿನ ಹೊಂಬಣ್ಣದಂತಲ್ಲದಿದ್ದರೂ ನಾಲ್ಕೂವರೆಯಿಂದ
ಸೂರ್ಯಾಸ್ತಮಾನದವರೆಗೂ ಒಂದಷ್ಟು ಚೆಂದದ ಬಣ್ಣಗಳನ್ನು ವೀಕ್ಷಿಸಬಹುದು.
ಎಳೆಯ ಕಿರಣಗಳು ಪಕ್ಷಿಯ ಸ್ಪರ್ಷಿಸಿದಾಗ |
Golden
hoursನ ಹೊಂಬಣ್ಣ Landscape ಫೋಟೋಗ್ರಫಿಗೆ ಅನಿವಾರ್ಯ. ಸೂರ್ಯೋದಯ ಮತ್ತು ಸೂರ್ಯಾಸ್ತಮಾನದಲ್ಲಿ
ಸೆರೆಸಿಗುವ (ಕಣ್ಣು ಮತ್ತು ಕ್ಯಾಮೆರಾಗಳಿಗೆರಡಕ್ಕೂ) ಪ್ರಕೃತಿ ದಿನದ ಉಳಿದ ಸಮಯದಲ್ಲಿ
ಸಿಗುವುದಿಲ್ಲ. ಈ ಹೊಂಬಣ್ಣದ ಮತ್ತೊಂದು ಅನುಕೂಲವೆಂದರೆ ಗಿಡಗಳ ಎಳೆ ಹಸಿರಿನ ಮತ್ತು ಗಾಢ ಹಸಿರಿನ
ಎಲೆಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ನೆರಳು ಬೆಳಕಿನಾಟ ಉತ್ತಮವಾಗಿರುತ್ತದೆ.
ಸೂರ್ಯ ಪ್ರಖರನಾದಷ್ಟೂ ಎಲ್ಲವೂ ಒಂದೇ ರೀತಿಯಾಗಿ harsh ಆಗಿ ಕಾಣಿಸುತ್ತದೆ.
ಸುಳ್ಯದ ನನ್ನ ಮೆಚ್ಚಿನ ಸೇತುವೆ |
Landscape
ಫೋಟೋಗ್ರಾಫರುಗಳು ಮಾತ್ರವಲ್ಲ ಪಕ್ಷಿಯ ಫೋಟೋ ತೆಗೆಯುವವರೂ ಪಕ್ಷಿಗಳಿಗೆ ಮುಂಚೆ ಎದ್ದು
ಹೊರಡಬೇಕು! ಪಕ್ಷಿಗಳು ದಿನವಹೀ ಕೆಲಸ ಕಾರ್ಯ ಮಾಡುತ್ತಾವಾದರೂ ಬೆಳಗಿನ ಸಮಯದಲ್ಲಿ ಫ್ರೆಶ್ ಆಗಿ
ಅತ್ಯಂತ ಚುರುಕಾಗಿರುತ್ತವೆ. ಸಂಜೆ ಮತ್ತೆ ಗೂಡು ಸೇರುವ ಸಂಭ್ರಮದಲ್ಲಿರುತ್ತದೆ. ಪಕ್ಷಿ, ಗಿಡಮರಗಳು
ಮತ್ತು ನಾವು ಕೂಡ ಬೆಳಗಿನ ಹೊತ್ತು ಹೆಚ್ಚು ಫ್ರೆಶ್ ಇರುತ್ತೇವೆನ್ನುವುದನ್ನು ಮರೆಯಬಾರದು.
‘ಈ
ಥರ ಕಲರ್ಸ್ ಎಲ್ಲಿ ಸಿಗುತ್ತೆ’ ಎಂದು ಕೇಳುವವರಿಗೆಲ್ಲಾ ನಾನು ಹೇಳುವುದು ‘ದೊಡ್ಡ ಕ್ಯಾಮೆರಾನೂ
ಬೇಡ, ಚಿಕ್ಕದೂ ಬೇಡ. ಸುಮ್ಮನೆ Golden hoursನಲ್ಲಿ ಪ್ರಕೃತಿಯನ್ನು ನೋಡ್ತಾ ಕೂರ್ಬೇಕು.
ಒಂದಷ್ಟು ದಿನದಲ್ಲಿ ಕಲರ್ ಫುಲ್ ಪ್ರಪಂಚದ ಅರಿವಾಗುತ್ತೆ’ ಸುಳ್ಯದ ಸುಬ್ರಮಣ್ಯ ರಸ್ತೆಯ ಬಳಿ
ಇರುವ ನನ್ನ ಮೆಚ್ಚಿನ ಸೇತುವೆಯ ಬಳಿ ಹೆಚ್ಚೆಚ್ಚು ಸಮಯ ಕಳೆದು golden hoursನ ಪ್ರಾಥಮಿಕ
ಜ್ಞಾನವನ್ನು ಪಡೆದುಕೊಂಡದ್ದು.
ಶಿಸ್ತು
ಕಲಿಸಿದ ಕ್ಯಾಮೆರಾಕ್ಕೊಂದು ಥ್ಯಾಂಕ್ಸ್.
No comments:
Post a Comment