Oct 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

“ಯಾಕ್ರಲೇ ಹಿಂಗ್ ನೋಡ್ತೀರಾ? ನಿಮಗ್ ಬೇಕಾದ್ರೆ ನೀವೂ ತರಿಸಿಕೊಳ್ಳಿ”
“ಯಾವಾಗಿಂದ ಕುಡೀತೀಯೋ?” ಕ್ರಾಂತಿ ಕೇಳಿದ.
“ಪಿ.ಯು ಎಕ್ಸಾಮ್ ಮುಗಿದ್‍ಮೇಲಿಂದ. ನನ್ನ ಮಾವ ಒಬ್ಬನಿದ್ದಾನೆ ಹಲ್ಕಟ್ ನನ್‍ಮಗ. ಅವನಿಂದ ಕಲ್ತದ್ದು”
“ಕೆಟ್ಟದ್ದಲ್ವೇನೋ?” ತುಷಿನ್ ಕೇಳಲೋ ಬೇಡವೋ ಎಂಬಂತೆ ಕೇಳಿದ.
“ಏನ್ ಜೀವನದಲ್ಲಿ ಬರೀ ಒಳ್ಳೇದನ್ನೇ ಮಾಡ್ಬೇಕಾ? ಕೆಟ್ಟದ್ದು ಹೆಂಗಿರುತ್ತೆ ಅಂತ ನೋಡ್ಬೇಕಪ್ಪಾ” ರಾಘು ಉತ್ತರ ಕೊಡುವಷ್ಟರಲ್ಲಿ ಖಡಕ್ಕಾಗಿ ಮಾತನಾಡಿದ್ದು ಅಭಯ್! “ನನಗೂ ಒಂದು ಹೇಳು ಭಯ್ಯಾ” ಎಂದಾತ ಮಂದ್ರ ಸ್ವರದಲ್ಲಿ ಉಸುರಿದಾಗ ಉಳಿದ ಮೂವರಿಗೆ ನಗದೇ ಇರಲಾಗಲಿಲ್ಲ.
“ಥೂ ಥೂ ಏನ್ಲೇ ಇದು ಕೊಳೆತ ಹಣ್ಣಿನ ವಾಸನೆ ಬರ್ತಾಯಿದೆ” ತುಷಿನ್ ಮೂಗಿನ ಬಳಿ ಹಿಡಿದಿದ್ದ ಬಾಟಲನ್ನು ಮೇಜಿನ ಮೇಲಿಟ್ಟು ಜೋರಾಗಿ ಉಸಿರಾಡಿದ. ಸಿಂಡರಿಸಿಕೊಂಡಿದ್ದ ಮುಖ ಸಡಿಲವಾಯಿತು.
“ನಾವ್ ಕುಡಿಯೋದಿಕ್ಕೆ ಹಂಗೆಲ್ಲಾ ಹೇಳ್ಬೇಡಾ ಗುರು. ಅಷ್ಟೊತ್ನಿಂದ ಎಲ್ಲಾ ಸಿಗರೇಟ್ ಸುಡ್ತಿದ್ದೀವಲ್ಲ. ಅದಕ್ಕೇನ್ ಶ್ರೀಗಂಧದ ಸುವಾಸನೆ ಇದೆಯಾ?” ಅಭಯ್‍ನ ಕಡೆ ತಿರುಗಿ “ನೋಡು ಅಭಿ. ಮೊದಲನೇ ಸಲ ಕುಡಿತಿದ್ದೀಯಾ. ಸಾಮಾನ್ಯವಾಗಿ ಬಿಯರ್‍ಗೆ ತುಂಬಾ ಕಿಕ್ಕೇನು ಏರೋದಿಲ್ಲ. ಆದರೂ ನಿಧಾನಕ್ಕೆ ಕುಡಿ. ಚಿಯರ್ಸ್” ರಾಘವ ಉಪದೇಶಿಸಿದ.
ಬಾಟಲ್ ಕೈಯಲ್ಲಿಟ್ಟುಕೊಂಡು ತದೇಕಚಿತ್ತದಿಂದ ಒಮ್ಮೆ ಅದನ್ನು ನೋಡಿ ಕಣ್ಣು ಮುಚ್ಚಿ ಧ್ಯಾನಿಸಿ ಅಭಯ್ ಚಿಯರ್ಸ್ ಎಂದ.
ಹನ್ನೊಂದೂವರೆಯ ಸುಮಾರಿಗೆ ಇಬ್ಬರ ಬಾಟ್ಲಿಗಳೂ ಖಾಲಿಯಾದವು.
ದುಡ್ಡು ಕೊಟ್ಟು ಇನ್ನೇನು ಹೊರಡಬೇಕು. “ಅಯ್ಯಯ್ಯೋ” ಎಂದು ಕಿರುಚಿಬಿಟ್ಟ ಅಭಯ್. ಕುಡಿದಾಗ ಅದರಲ್ಲೂ ಮೊದಲ ಸಲ ಕುಡಿದಾಗ ಹೊಟ್ಟೆಯೆಲ್ಲಾ ಉರಿ ಹತ್ತುತ್ತೆ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದ ರಾಘು.
“ಯಾಕೋ ಅಭಿ ಹೊಟ್ಟೆ ಉರೀತಾ ಇದೆಯಾ?”
“ಇಲ್ಲ”
“ವಾಂತಿ ಮಾಡ್ಬೇಕು ಅನ್ನಿಸ್ತಿದೆಯಾ?” ಅವನ ಬೆನ್ನ ಮೇಲೆ ಕೈಇಡುತ್ತಾ ಕೇಳಿದ. ಅಕ್ಕಪಕ್ಕದ ಟೇಬಲ್‍ಗಳಲ್ಲಿ ಪಾನಗೋಷ್ಟಿ ನಡೆಸುತ್ತಿದ್ದವರು ಇವರೆಡೆಗೆ ಒಮ್ಮೆ ನೋಡಿ ಮತ್ತೆ ತಮ್ಮ ಗ್ಲಾಸುಗಳೊಳಗೆ ಲೀನವಾದರು.
“ಇಲ್ಲ”
“ಮತ್ತೇನಾಗ್ತಿದೆ ಮಗ” ತುಷಿನ್ ಕೇಳಿದ.
“ಹಾಳಾಗ್ಹೋದೆ. ನಾನೇನೋ ದೊಡ್ಡ ಡಾಕ್ಟರಾಗಿ ಕಡಿದು ಕಟ್ಟೆ ಹಾಕ್ತೀನಿ ಅಂತ ನನ್ನ ಮನೆಯವರು ಅಂದುಕೊಂಡಿದ್ರೆ ನಾನಿಲ್ಲಿ ಹಲ್ಕಾ ನನ್ಮಕ್ಳ ನಿಮ್ ಸಾವಾಸ ಮಾಡಿ ಸಿಗರೇಟ್ ಕಲ್ತು, ಈಗ ಎಣ್ಣೇನೂ ಕಲ್ತು......ಹೋಯ್ತು ಹೋಯ್ತು...... ಎಲ್ಲಾ ಹೋಯ್ತು.....ಹೋ.....ಹೋ” ಬಿಕ್ಕಳಿಕೆ ಆರಂಭವಾಯ್ತು. ನೀರು ಕುಡಿಸಿದರು. ಉಪ್ಪು ನಿಂಬೆರಸ ಉಹ್ಞೂ ನಿಲ್ಲಲಿಲ್ಲ.
“ಒಂದು ಸಿ....ಸಿ....ಸಿಗ”
“ತಕ್ಕೋ ಬಡೆತ್ತದೆ” ನಗುತ್ತಾ ಕೊಟ್ಟ ಕ್ರಾಂತಿ. ಎರಡು ದಮ್ಮಿಗೆ ಬಿಕ್ಕಳಿಕೆ ನಿಂತಿತು.
“ಹಾಳಾಗೋದ್ನಲ್ರಲೇ...”
“ನಿನ್ನ ಯೋಗ್ಯತೆಗೆ. ಕುಡಿ ಅಂತ ಯಾರಾದ್ರೂ ಮೂಗಿಡಿದಿದ್ರಾ. ಕುಡಿದಾಯ್ತು. ಇನ್ನು ಮೇಲೆ ಕುಡಿಯಲೂ ಬೇಡ. ಸಿಗರೇಟು ಮುಟ್ಟಲೇಬೇಡಾ. ನಡಿ ಹಾಸ್ಟೆಲ್ಲಿಗೆ ಹೋಗೋಣ” ರಾಘವ ಆತನನ್ನು ಹಿಡಿದೆತ್ತಿ ಹೊರಕ್ಕೆ ಕರೆತಂದ.
“ಲೇ. ನೀನ್ಯಾವನಲೇ ನನಗೆ ಕುಡೀಬೇಡ ಸಿಗರೇಟ್ ಸೇದ್ಬೇಡಾ ಅನ್ನಕ್ಕೆ. ನಮ್ಮಪ್ಪನ್ ದುಡ್ಡು ನನ್ ಆರೋಗ್ಯ. ಬೇಕಾದಷ್ಟು ಕುಡೀತೀನಿ....ಆದ್ರೂ ಹಾಳಾಗೋದ್ನಲ್ರಲೇ.....”
ಬೈಕಿನಲ್ಲಿ ಕೂರಿಸಿದರು. ಬೀಳುವಂತಾದ. ಸರಿ ಕ್ರಾಂತಿ ಬೈಕ್ ಓಡಿಸಲು ಮುಂದೆ ಕೂತ, ಮಧ್ಯೆ ಅಭಯ್ ಅವನಿಂದೆ ರಾಘವ ಅಭಯನನ್ನು ಹಿಡಿದು ಕುಳಿತುಕೊಂಡ. ತುಷಿನ್ ಇನ್ನೊಂದು ಬೈಕೇರಿದ.
ಪುಣ್ಯಕ್ಕೆ ದಾರಿಯಲ್ಲಿ ಪೋಲೀಸರಿರಲಿಲ್ಲ. ಪಾಪಕ್ಕೆ ಹಾಸ್ಟೆಲ್ಲಿನ ಗೇಟು ತೆರೆಯಲು ಗಾರ್ಡ್ ಸತಾಯಿಸಿದ. ಐದತ್ತು ನಿಮಿಷ ಕಾಡಿಬೇಡಿದರೆ ಬಿಡ್ತಾರೆ ಅಂದಿದ್ರು ಸೀನಿಯರ್ಸ್. ಮುಂಚೆಯೂ ಅದೇ ರೀತಿ ಒಳಗೆ ಹೋಗಿದ್ದರು. ಆದರಿವತ್ತು ಅಭಯ್ ಕುಡಿದಿದ್ದ. ಗಾರ್ಡಿನೊಡನೆ ಎರಡ್ಮೂರು ನಿಮಿಷ ಕ್ರಾಂತಿ, ತುಷಿನ್ ಮಾತನಾಡಿದರು. ಅಭಯ್ ರಾಘವನ ಹೆಗಲಿಗಾನಿಕೊಂಡು ನಿಂತಿದ್ದವನು ಇದ್ದಕ್ಕಿದ್ದಂತೆ ನೇರವಾಗಿ ನಿಂತು “ಯಾರಲೇ ಅವನು ಗೇಟ್ ತೆಗೆಯಲ್ಲ ಅಂತ ಕಿರಿಕ್ ಮಾಡ್ತಿರೋನು” ಅಂದ.
‘ಸುಮ್ನಿರು ಸುಮ್ನಿರು’ ಉಳಿದವರು ಹೇಳಿದ್ದು ಫಲಕಾರಿಯಾಗಲಿಲ್ಲ.
ಗಾರ್ಡ್ ಕೂಡ ಸೆಟೆದು ನಿಂತ. ಇಬ್ಬರ ನಡುವೆ ದೃಷ್ಟಿಯುದ್ಧ ನಡೆಯಿತು. ಯಾರೂ ಸೋಲೊಪ್ಪಲಿಲ್ಲ.
“ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಏನು ಹೇಳಿದ್ರು. ಲೇ ಕ್ರಾಂತಿ ಟೈಮೆಷ್ಟಾಯ್ತಲೇ?” ಉತ್ತರ ಹೇಳಲೋ ಬೇಡವೋ ಅನ್ನೋ ಗೊಂದಲದಲ್ಲಿ ಕ್ರಾಂತಿ ಸುಮ್ಮನೆ ನಿಂತಿದ್ದ.
“ಟೈಮೆಷ್ಟಾಯ್ತಲೇ ಮಂಗ್ಯಾ”
“ಹನ್ನೆರಡಕ್ಕೆ ಐದು ನಿಮಿಷ”
“ಹ್ಞ. ನಾನೇಳ್ತಿದ್ದೆ. ಹ್ಞೂ. ಗಾಂಧೀಜಿ ಏನು ಹೇಳಿದ್ರು ಗೊತ್ತೇನ್ಲೇ....”ಗಾರ್ಡಿನೊಡನೆ ನಡೆಸಿದ್ದ ದೃಷ್ಟಿಯುದ್ಧವನ್ನು ತೀಕ್ಷ್ಣಗೊಳಿಸಿ ಕೇಳಿದ ಅಭಯ್.
“ಮದ್ಯಪಾನ ಮಹಾಪಾಪ ಅಂದವ್ರೆ” ನುಗ್ಗಿ ಬರುತ್ತಿದ್ದ ನಗು ಮತ್ತು ಕ್ರೋಧವನ್ನು ತಡೆದುಕೊಳ್ಳುತ್ತಾ ಹೇಳಿದ.
“ಥೂ. ಥೂ. ಅದಲ್ಲ” ತಲೆಕೊಡವಿದ. “ಯಾವತ್ತು ಮಧ್ಯರಾತ್ರಿ ಹೆಂಗಸು ಒಂಟಿಯಾಗಿ ಓಡಾಡ್ತಾಳೋ ಅವತ್ತೇ ನಿಜವಾದ ಸ್ವಾತಂತ್ರ್ಯ ಸಿಗೋದು ಅಂದಿದ್ರು....ಆ ಮಹಾತ್ಮರು. ಆದರೆ ನಿಮ್ಮಂಥ ಪಾಪಿ ನನ್ ಮಕ್ಳು ನಾವ್ ಗಂಡುಡುಗ್ರು ಅರ್ಧ ರಾತ್ರೀಲ್ ಬಂದ್ರೆ ತೊಂದರೆ ಕೊಡ್ತೀರಾ? ಥೂ ನಿಮ್ ಯೋಗ್ಯತೆಗೆ” ಕ್ಯಾಕರಿಸಿ ಉಗಿದ ರಸ್ತೆಗೆ.
“ಪ್ರಿನ್ಸಿಪಾಲ್ ಮಾಡಿರೋ ರೂಲ್ಸು”
“ಯಾವನ್ಲೇ ಅವ್ನು ಮಂಗ ಸೂಳಿಮಗ ಪ್ರಿನ್ಸಿ....” ಕ್ರಾಂತಿ ಅಭಯನ ಬಾಯಿ ಮುಚ್ಚಿದ. ಗಾರ್ಡ್ ಗೇಟು ತೆರೆದ. ಮಾರನೇ ದಿನ ನಾಲ್ವರೂ ಪ್ರಿನ್ಸಿಪಾಲ್ ಕೋಣೆಯಲ್ಲಿದ್ದರು.
“ಇದಿಕ್ಕೇ ಏನ್ರಯ್ಯಾ ನಿಮ್ಮಪ್ಪಾಮ್ಮ ಕಾಲೇಜಿಗೆ ಸೇರಿಸಿರೋದು. ಕುಡಿದು ಗಲಾಟೆ ಮಾಡೋದು; ಪ್ರಿನ್ಸಿಪಾಲರಿಗೆ ಎದುರುತ್ತರ ಕೊಡೋದು” ಇಷ್ಟು ಹೇಳಿ ಅವರ ಕೋಣೆಗೆ ಹೊಂದುಕೊಂಡಿದ್ದ ಬಾತ್‍ರೂಮಿಗೆ ಹೋದರು. ಪಿಚಕ್ಕೆಂದು ಉಗಿದಿದ್ದು ಕೇಳಿತು. ನಂತರ ಪ್ಲಾಸ್ಟಿಕ್ ಕವರ್ ಹರಿದ ಸದ್ದು. ಬಾಯೊಳಗ್ಹಾಕಿಕೊಂಡ ಗುಟ್ಕಾವನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಒತ್ತರಿಸಿಕೊಳ್ಳುತ್ತಾ ಹೊರಬಂದರು ಡಾ. ಗೋಪಾಲಕೃಷ್ಣೇಗೌಡ. ಅವರ ಕೋಟಿನ ಜೇಬಿನಲ್ಲಿ ಗುಟ್ಕಾದ ಇಷ್ಟುದ್ದದ ಸರ ಯಾವಾಗಲೂ ಇರುತ್ತೆ ಅನ್ನೋದು ಪ್ರತೀತಿ. ಕಂಡವರಾರೂ ಇರಲಿಲ್ಲವಾದರೂ ಯಾವಾಗಲೂ ಬೂದು ಮಿಶ್ರಿತ ಕೆಂಪು ನೀರಿನಲ್ಲಿ ಅದ್ದಿದಂತಿದ್ದ ಅವರ ಹಲ್ಲುಗಳು ಆ ಪ್ರತೀತಿ ನಿಜವೆನ್ನುತ್ತಿತ್ತು. ವಿದ್ಯಾರ್ಥಿಗಳೆಲ್ಲ ಪ್ರೀತಿಯಿಂದ ಜಿಕೆಜಿ ಉರುಫ್ ಗುಟ್ಕಾ ಕೃಷ್ಣೇಗೌಡ ಎಂದು ಕರೆಯುತ್ತಿದ್ದರು.
“ಕ್ಷಮಿಸಿಬಿಡಿ ಸರ್. ಮತ್ತೆ ಈ ರೀತಿ ಮಾಡಲ್ಲ” ತುಷಿನ್ ಕೆಂಪಗಾಗುತ್ತಿದ್ದ ಅವರ ತುಟಿಯ ಅಂಚನ್ನೇ ನೋಡುತ್ತಾ ಹೇಳಿದ.
“ಈ ರೀತಿ ಅಂದ್ರೆ?” ಗುಟ್ಕಾವನ್ನು ಮತ್ತೊಂದು ಮೂಲೆಗೆ ತಳ್ಳಿ “ಕುಡಿಯೋದಿಲ್ಲಾ ಇನ್ನು ಮುಂದೆ ಅಂತಾನೋ ಅಥವಾ ಕುಡಿದು ಗಲಾಟೆ ಮಾಡಲ್ಲಾ ಅಂತಾನೋ”
“ಕುಡಿದು ಗಲಾಟೆ ಮಾಡಲ್ಲ ಸರ್” ಬಿಟ್ಟ ಬಾಣದಂತೆ ಹೇಳಿದ ಅಭಯ್. ಮತ್ತೆ ಈ ನನ್ಮಗ ಏನೋ ಗ್ರಹಚಾರ ತಂದ ಅಂತ ಮೂವರೂ ಇವನತ್ತು ಕೆಕ್ಕರಿಸಿ ನೋಡುತ್ತಿದಾಗಲೇ ಜಿ.ಕೆ.ಜಿಯವರು ಯಾವ ಪರಿ ನಕ್ಕರೆಂದರೆ ಇನ್ನೊಂದು ಅಡಿ ಹತ್ತಿರ ನಿಂತಿದ್ದಿದ್ದರೆ ಅಭಿಷೇಕವಾಗುತ್ತಿತ್ತು.
“ಕರೆಕ್ಟು ಕಣಯ್ಯಾ ನೀನು ಹೇಳಿದ್ದು. ದುರಭ್ಯಾಸಗಳಿಲ್ಲದಿರೋನೂ ಒಬ್ಬ ಡಾಕ್ಟ್ರಾ? ಆದರೆ ಮತ್ತೆ ಸೆಕ್ಯುರಿಟಿಯವರ ಜತೆ ಗಲಾಟೆ ಮಾಡ್ಕೊಳ್ಳೋದೇನಾದ್ರೂ ಮಾಡಿದ್ರೆ ಅವತ್ತೇ ನಿಮ್ಮಷ್ಟೂ ಜನಾನ ಹಾಸ್ಟೆಲ್ನಿಂದ ಹೊರಗೆ ಕಳಿಸ್ತೀನಿ. ನಿಮ್ಮ ಮನೆಯವರಿಗೂ ಸುದ್ದಿ ಮುಟ್ಟುತ್ತೆ. ಹೊರಡಿ ಇನ್ನು” ಎಂದರು.
“ಸದ್ಯ ಇಷ್ಟಕ್ಕೇ ಬಿಟ್ರಲ್ಲಾ” ನಿಡುಸುಯ್ಯುತ್ತಾ ಹೇಳಿದ ಕ್ರಾಂತಿ.
“ಬಿಡದೇ ಏನ್ ಮಾಡ್ತಾರೆ ಬಿಡಲೇ. ಆದ್ರೂ ಈ ಜೈಲಿನಂತಿರೋ ಹಾಸ್ಟೆಲ್ ಸಹವಾಸಾನೇ ಬೇಡ. ಅವರ್ಯಾರು ನಮಗೆ ರಾತ್ರಿ ಇಷ್ಟೊತ್ತಿನೊಳಗೆ ರೂಮು ಸೇರ್ಬೇಕು ಅಂತ ಅಪ್ಪಣೆ ಮಾಡೋಕೆ. ನಮ್ಮ ಜೀವ್ನ ನಮ್ಮಿಷ್ಟ. ಏನೋ ಬೇರೆಯೋರಿಗೆ ತೊಂದ್ರೆ ಕೊಟ್ಟರೆ ತಪ್ಪು. ನಮ್ಮ ಪಾಡಿಗೆ ನಾವು ಕುಡಿದು ಬಂದು ಮಲಗೋಕೂ ಬಿಡಲ್ವಲ್ಲಾ ಇವರುಗಳು” ರಾಘವ ಇನ್ನೂ ಬುಸುಗುಡುತ್ತಿದ್ದ.
“ಹಾಸ್ಟೆಲ್ ಲೈಫ್ ಅಂದ್ಮೇಲೆ ಇದೆಲ್ಲಾ ಮಾಮೂಲಿ ನಡಿಯಮ್ಮ” ತುಷಿನ್ ಹೇಳುತ್ತಿದ್ದಂತೆ ಅವನ ಮೇಲೇ ಬೀಳುವಂತಾದ ರಾಘವ “ಅದಿಕ್ಕೆ ಮಕ್ಳಾ ನಮ್ ದೇಶ ಇಂಗಿರೋದು. ಇದು ಮಾಮೂಲಿ ಅದು ಮಾಮೂಲಿ ಅಂತ ಎಲ್ಲಾ ನಿನ್ ತರ ನಾಮರ್ಧಗಳಾಗಿಬಿಟ್ಟಿದ್ದಾರೆ”
“ದೇಶಕ್ಕೂ ಇದಕ್ಕೂ ಏನು ಸಂಬಂಧ”
“ಸಂಬಂಧ ಏನೋ ಯಾವನಿಗ್ಗೊತ್ತು. ಹೇಳ್ಬೇಕು ಅನ್ನಿಸ್ತು ಹೇಳ್ದೆ” ನೀವೇನಾದ್ರೂ ಮಾಡಿಕೊಳ್ರಪ್ಪ ನಾನಂತೂ ಹೊರಗಡೆ ರೂಮ್ ಮಾಡ್ತೀನಿ” ..... “ಬರೋರು ಬರಬಹುದು” ಅಷ್ಟರಲ್ಲಿ ತರಗತಿಯ ಮುಂದೆ ಬಂದಿದ್ದರು. ನಾಲ್ವರೂ ಒಳಹೊಕ್ಕುತ್ತಿದ್ದಂತೆ ಅಷ್ಟರವರೆಗೆ ತರಗತಿಯವರು ಮಾಡುತ್ತಿದ್ದ ಸದ್ದುಗದ್ದಲವೆಲ್ಲಾ ನಿಂತು ಎಲ್ಲರೂ ಇವರತ್ತಲೇ ನೋಡುತ್ತಿದ್ದರು. ಪ್ರಿನ್ಸಿಪಾಲರು ನಾಲ್ವರನ್ನೂ ತರಗತಿಯಿಂದ ಹೊರಗಾಕಿರ್ತಾರೆ. ಬ್ಯಾಗ್ ತಗೊಂಡು ಹೋಗಲು ಬಂದಿದ್ದಾರೆ ಪಾಪ ಅನ್ನೋ ದೃಷ್ಟಿಯಿಂದಲೇ ಬಹುತೇಕರು ನೋಡುತ್ತಿದ್ದರು. ಆದರೆ ಹಾಗೇನೂ ಆಗದೆ ನಾಲ್ವರೂ ತಮ್ಮ ಬ್ಯಾಗುಗಳಿದ್ದ ಕೊನೆಯ ಬೆಂಚಿಗೆ ಹೋಗಿ ಕುಳಿತುಕೊಂಡಾಗ ನಿರಾಸೆಯಾಯಿತು. ಮತ್ತೆ ಗುಸುಗುಸು ಶುರುವಾಯಿತು. ಇವರ ಮುಂದಿನ ಬೆಂಚಿನಲ್ಲಿ ಕುಳಿತಿದ್ದವನೊಬ್ಬ ಹಿಂದಿರುಗಿ “ಏನಂದ್ರೋ ಪ್ರಿನ್ಸಿಪಾಲ್ಲೂ” ಹಲ್ಕಿರಿಯುತ್ತಾ ಕೇಳಿದ.
“ಲೋ...ಅದೇನೋ ಅವಳ್ಜೊತೆ ಕಿಸ್ಕೊಂಡು ಮಾತಾಡ್ತಿದ್ದಲ್ಲ ಮುಚ್ಕೊಂಡು ಮಾತಾಡು. ಊರುಸಾಬರಿಯೆಲ್ಲಾ ನಿಂಗ್ಯಾಕೆ” ಮುಖಕ್ಕೆ ಹೊಡೆದಂತೆ ಹೇಳಿದ ರಾಘವ. ಆತ ಮುಂದಕ್ಕೆ ತಿರುಗಿದ. ಅವನ ಪಕ್ಕದ ಬೆಂಚಿನಲ್ಲಿ ಕುಳಿತಿದ್ದ ಆ ಹುಡುಗಿ ಕಣ್ಣಲ್ಲೇ ‘ಅಂಥವರ ಜೊತೆಯೆಲ್ಲಾ ಮಾತು ಬೇಡ’ ಎಂದು ಗದರಿಸಿದಳು. ಇವನು ಕಣ್ಣಲ್ಲೇ ‘ಸಾರಿ’ ಕೇಳಿದ.

* * *
ಮುಂದುವರೆಯುವುದು....

2 comments:

  1. i remembered my hostel days..we faced the same problem in our hostel.

    ReplyDelete
  2. @ Poorvi most of guys in hostel would have faced it!

    ReplyDelete