Oct 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

ಮನೆಯಲ್ಲಿ ಮಹಾಮೌನಿ. ಹೌದು, ಇಲ್ಲ ಇವುಗಳಲ್ಲೇ ತಿಂಗಳುಗಟ್ಟಲೇ ಕಳೆಯಬಲ್ಲ. ದೂರದವರ ದೃಷ್ಟಿಯಲ್ಲಿ ‘ಒರಟ ಬಡ್ಡೀಮಗ’ ಎನಿಸಿಕೊಂಡರೂ ಆತನ ಅಂತರಂಗದಲ್ಲಿರುವ ತಾಯಿ ಮನಸ್ಸು – ಇದಕ್ಕೂ ಬಯ್ತಾನವನು. ತಾಯಿ ಮನಸ್ಸು ಹೆಣ್ಗರುಳು ಇವೆಲ್ಲಾ ಮಹಿಳೆಯನ್ನು ಪುರುಷ ತನ್ನ ಪರಿಧಿಯಿಂದ ಹೊರಗಿಡಲು ಮಾಡಿದ ಕುತಂತ್ರ ಎನ್ನುತ್ತಾನೆ. ಇರಲಿ – ಆಪ್ತರಿಗಷ್ಟೇ ತಿಳಿದೀತು. ಇವನ ಅಂತರಂಗ ಮನೆಯವರಿಗೂ ತಿಳಿದಿರುವುದರಿಂದ ಇವನ ಕೋಪ, ಮುನಿಸು, ತಪ್ಪು ಎಲ್ಲದಕ್ಕೂ ಕ್ಷಮೆಯಿದೆ. ಮದುವೆಯಾಗುವವರೆಗೂ ಅಕ್ಕ ಅಚ್ಚು – ಮೆಚ್ಚು. ಅಪರೂಪಕ್ಕೊಮ್ಮೆ ಮನಬಿಚ್ಚಿ ಮಾತನಾಡಿದ್ದು ಅವಳೊಡನೆ ಮಾತ್ರ. ಜೀವನ ಅಂದ್ರೆ ಹೀಗೇ ಇರಬೇಕು ಎಂಬ ಸರಳರೇಖೆ ಹಾಕಿಕೊಂಡವನಲ್ಲ. ಹೇಗೆ ಬರುತ್ತೋ ಆ ರೀತಿ ಸ್ವೀಕರಿಸೋಣ ಅನ್ನುತ್ತಾನೆ. ಪಿ.ಯು.ಸಿಯಲ್ಲಿ ಉತ್ತಮ ಅಂಕಗಳು ಬಂತು. ಅವನು ಸಿ.ಇ.ಟಿ ಬರೆಯುವಷ್ಟರಲ್ಲಿ ಅಮೆರಿಕಾದಲ್ಯಾರಿಗೋ ನೆಗಡಿಯಾದ ಕಾರಣ ಭಾರತದ ಐ.ಟಿ ಕಂಪನಿಗಳು ಸೀನುತ್ತಿದ್ದವು. ವಿಶ್ವ ಹಳ್ಳಿಯಾದ ಪರಿಣಾಮ. ಸರಿ ಮೆಡಿಕಲ್ಲಿಗೇ ಸೇರೋಣ ಅಂತ ವೈದ್ಯ ವಿದ್ಯಾರ್ಥಿಯಾದವನು ನಮ್ಮ ಅಭಯ್.
ಕೊನೆಯದಾಗಿ ನನ್ನ ಚಿಕ್ಕ ಪ್ರವರ. ನನ್ನ ಹೆಸರು ನಿಮಗೀಗಾಗಲೇ ತಿಳಿದಿರಬೇಕು. ತುಷಿನ್ ಮಂಡ್ಯದಿಂದ. ಚಿಕ್ಕಂದಿನಿಂದ ಕಥೆ ಓದೋ ಹುಚ್ಚು. ಎಲ್ಲಾ ಚಂದಮಾಮ ಬಾಲಮಿತ್ರದ ಪ್ರಭಾವ. ತಂದೆತಾಯಿಗೆ ಒಬ್ಬನೇ ಮಗ. ತಂದೆ ದಂತ ವೈದ್ಯ. ಮಂಡ್ಯದಲ್ಲಿ ಕ್ಲಿನಿಕ್ ನಡೆಸ್ತಾರೆ. ತಾಯಿ ಗೃಹಿಣಿ. ವರದಿಗಾರನಾಗಬೇಕೆಂಬುದು ಅವತ್ತಿನ ಆಸೆ. ಇವತ್ತಿನ ಕನಸು. ಹತ್ತನೇ ತರಗತಿಯಲ್ಲಿ ಹುಡುಗಿಯೊಬ್ಬಳ ಹಿಂದೆ ಬಿದ್ದು ಓದಿಗೆ ಅಲ್ಪವಿರಾಮ ಹಾಕಿದ್ದೆ. ಪರೀಕ್ಷೆಗೆ ಒಂದು ತಿಂಗಳಿರುವವರೆಗೂ ನಮ್ಮಿಬ್ಬರ ಪ್ರೇಮಸಲ್ಲಾಪ ಕಣ್ಣೋಟಗಳಲ್ಲಿ, ಅಪರೂಪಕ್ಕೊಮ್ಮೆ ಪಿಸುಮಾತುಗಳಲ್ಲಿ ಸಾಗಿತ್ತು. ನಂತರ ಇದ್ದಕ್ಕಿದ್ದಂತೆ ಕಾರಣವೇ ಇಲ್ಲದೆ ನಾನವಳಿಗೆ ಅಣ್ಣನಂತೆ ಕಂಡೆ! ಅಲ್ಲಿಗೆ ಹುಡುಗಿಯರ ಮೇಲಿನ ಆಸಕ್ತಿ ಕಡಿಮೆಯಾಯಿತು, ಪರೀಕ್ಷೆಗಳಲ್ಲಿನ ಅಂಕವೂ. ಮೊದಲ ಪಿ.ಯು.ಸಿಯಲ್ಲೆಲ್ಲಾ ಅವಳದೇ ಗುಂಗು. ನಮ್ಮ ಚಿಕ್ಕಪ್ಪ ಕೂಡ ನನ್ನ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿದ್ದ ಕಾರಣ ಮೊದಲ ಪಿ.ಯು ಪಾಸಾದೆ. ಎರಡನೇ ವರ್ಷ ಮನ ಒಂದಷ್ಟು ಸ್ಥಿಮಿತಕ್ಕೆ ಬಂದಿತ್ತು. ಪುಸ್ತಕಗಳು ಗೆಳೆಯರಾದವು. ಹುಚ್ಚಾಪಟ್ಟೆ ಓದಿದ್ದಕ್ಕೆ ಪ್ರತಿಫಲವಾಗಿ ತುಂಬಾನೇ ಒಳ್ಳೇ ಅಂಕಗಳು ಬಂದು ಬಿ.ಎ ಪತ್ರಿಕೋದ್ಯಮ ಮಾಡಬೇಕೆಂದಿದ್ದ ಕನಸು ನುಚ್ಚು ನೂರಾಗಿ ಮೆಡಿಕಲ್ಲಿನ ಕೂಪಕ್ಕೆ ಬೀಳಬೇಕಾಯಿತು. ಸಿಕ್ಕ ಗೆಳೆಯರ ಕಾರಣದಿಂದ ಬೇಸರ ನೀಗಿದ್ದು ಸತ್ಯ. ಪಿ.ಯು.ಸಿವರೆಗೆ ಬರೆದಿದ್ದ ಕಥೆಗಳು ಸೀದಾ ಪತ್ರಿಕೆಯ ಕಸದಬುಟ್ಟಿಗೇ ಸೇರಿದ್ದವು. ಒಳಗೊಂದು ಲಕೋಟೆ ಇಟ್ಟ ಕಾರಣದಿಂದ ಒಂದು ಕಥೆ ತಿರುಗಿ ಬಂದು ಮನೆಯವರಿಗೆ ಸಿಕ್ಕು ಪ್ರಶಸ್ತಿಯೇ ಬಂತೆಂಬಂತೆ ಖುಷಿಪಟ್ಟಿದ್ದರು. ಇಷ್ಟು ದಿನ ಹೇಳಲೇ ಇಲ್ಲವಲ್ಲ ಕಥೆ ಬರೀತೀನಿ ಅಂತ ಖುಷಿಯಲ್ಲೂ ಬೇಸರಪಟ್ಟುಕೊಂಡಿದ್ದರು. ಅಂದಹಾಗೆ ನಾನು ಕ್ರಾಂತಿ ಮಂಡ್ಯದಲ್ಲೇ ಪಿ.ಯು.ಸಿ ಮಾಡಿದ್ದರೂ ಇಬ್ಬರದೂ ಬೇರೆ ಬೇರೆ ಕಾಲೇಜಾಗಿದ್ದರಿಂದ ಪರಿಚಯವಿರಲಿಲ್ಲ. ಒಬ್ಬರನ್ನೊಬ್ಬರು ಹಾಳು ಮಾಡಿಕೊಳ್ಳಲು ಮೈಸೂರೇ ವೇದಿಕೆಯಾಯಿತು.

ಮನೆಯಲ್ಲಿ ಹೊರಗಡೆ ಮಾತನಾಡಲು ಪ್ರಾರಂಭಿಸಿದರೆ ಕೊನೆಯೇ ಇಲ್ಲ. ಈಗೀಗ ಅನ್ನಿಸುತ್ತೆ. ಒಂದು ದಿನದಲ್ಲಿ ನಾವಾಡುವ ನೂರು ಮಾತುಗಳಲ್ಲಿ ತೊಂಬತ್ತೈದಕ್ಕೆ ಅರ್ಥ ಅನಿವಾರ್ಯತೆ ಎರಡೂ ಇರುವುದಿಲ್ಲ. ಮಾತನಾಡಬೇಕು ಮಾತಾಡ್ತೀವಿ ಅಷ್ಟೇ! ಮಾತಿಗಿಂತ ಮೌನದಲ್ಲೇ ಹೆಚ್ಚು ಅರ್ಥವಿರುತ್ತೆ. ಮಂಡ್ಯದಲ್ಲಿರುವವರೆಗೂ ನನ್ನ ನೆಚ್ಚಿನ ಗೆಳೆಯನಂತಿದ್ದಿದ್ದು ಸ್ಟೇಡಿಯಂನ ಪಕ್ಕದಲ್ಲಿದ್ದ ನಗರ ಕೇಂದ್ರ ಗೃಂಥಾಲಯ. ಯಾವುದಾದರೂ ಪುಸ್ತಕ ಹಿಡಿದು ಕೂತರೆ ಸುತ್ತಲಿನ ಪರಿಸರದ ಅರಿವೇ ಇರುವುದಿಲ್ಲ ಎನ್ನೋದು ನನ್ನ ಬಗ್ಗೆ ಅನ್ಯರು ಮಾಡುವ ಕಮೆಂಟು, ಕಂಪ್ಲೇಂಟು, ಕಾಂಪ್ಲಿಮೆಂಟು. Over to ಲೇಖಕ.
ಮುಂದುವರೆಯುವುದು....

No comments:

Post a Comment