Dr Ashok K R
“ಭಯ್ಯಾ
ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ
ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ
ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು
ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು
ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು.
ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ
ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು
ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ
ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ
ಪ್ರಶ್ನೆಯೇ ನನ್ನ ಉತ್ತರ”
Also read
“ಈ
ಮೊಂಡುವಾದಾನೇ ಬೇಡ ಅನ್ನೋದು ನಾನು” ಹೊದಿಕೆಯಿಂದ ಹೊರಬಂದು ಸಿಗರೇಟಿಗೆ ಕೈಚಾಚುತ್ತಾ ಆರ್ಭಟಿಸಿದ
ರಾಘವ. ಅವನ ಕೈಗೆ ಸಿಗರೇಟನ್ನಿತ್ತು “ಮೊಂಡುವಾದ ಹೇಗಾಗುತ್ತೆ. ಎಲ್ಲಾ ಪ್ರಶ್ನೆಗೂ ಉತ್ತರ ನಿರೀಕ್ಷಿಸೋದು
ಎಷ್ಟರ ಮಟ್ಟಿಗೆ ಸರಿ? ನನ್ನಲ್ಲಿ ಚೂರುಪಾರು ಉತ್ತರವಿದ್ದಿದ್ದರೆ ಹೇಳ್ತಿದ್ದೆ. ನನ್ನಲ್ಲೂ ಪ್ರಶ್ನೆಗಳು
ನಿನ್ನಲ್ಲೂ ಪ್ರಶ್ನೆ....”
“ನಿಮ್ಮ
ಯೋಗ್ಯತೆಗೆ ಪ್ರಶ್ನೆಗಳಂತೆ ಪ್ರಶ್ನೆಗಳು. ನಾಳೆ ಇಂಟರ್ನಲ್ಸ್ ಇದೆ. ಹಾಸ್ಟೆಲ್ಲಿನಲ್ಲಿ ಎಲ್ಲಾ ತಿಕ
ದಬಾಕೊಂಡು ಓದ್ತಾ ಇದ್ದಾರೆ. ನೀವ್ನೋಡಿದ್ರೆ” ಬಾಗಿಲೊದ್ದು ಒಳಬಂದ ತುಷಿನ್‍ನ ಮುಖದಲ್ಲಿ ನಗುವಿತ್ತು.
“ನಾವೂ
ಓದ್ತಾ ಇದ್ದೀವಿ” ರಾಘವನೂ ನಗು ತಂದುಕೊಂಡು ಹೇಳಿದ.
“ಏನ್
ಓದ್ತಿದ್ರೋ ಮಹಾಸ್ವಾಮ್ಗಳು”
“ಇಬ್ಬರೂ
ಜೀವ್ನ ಅನ್ನೋ ಮಹಾಕಾವ್ಯದ ಅಧ್ಯಯನದಲ್ಲಿ ತೊಡಗಿದ್ದ ಈ ಸುಸಮಯದಲ್ಲಿ ಭಂಗ ತಂದ ನೀನು ನಾಳೆ ಇಂಟರ್ನಲ್ಸಿನಲ್ಲಿ
ಫೇಲಾಗ್ಹೋಗು”
“ಹ್ಹ
ಹ್ಹ ಹ್ಹ .. ಅಲ್ಲಲೇ ರಾಘವ ಇಂಟರ್ನಲ್ಸಿನಲ್ಲಿ ಪಾಸಾಗುವಷ್ಟಂತೂ ಓದಿದ್ದೀನಿ. Atleast ಹಂಗಂತ ಅಂದ್ಕೊಂಡಿದ್ದೀನಿ.
ಒಳ್ಳೆ ಮಾರ್ಕ್ಸ್ ತೆಗಿಯೋ ಆಸಕ್ತಿ ಇದ್ದಿದ್ರೆ ನಿಮ್ಮ ರೂಮಿಗ್ ಯಾಕ್ ಬರ್ತಿದ್ದೆ ಹೇಳು” ಅಭಯನ ಕಾಲಿನ
ಬಳಿಯಿದ್ದ ಚಪ್ಪಲಿಗಳನ್ನು ಬದಿಗೆ ಸರಿಸಿ ಕುಳಿತ ತುಷಿನ್.
“ಅಂದ್ರೆ
ನಿನ್ನ ಮಾತಿನ ಪ್ರಕಾರ ನನ್ನ ರೂಮಿರೋದು ಅಡ್ನಾಡಿಗಳಿಗೆ ಅಂತಾನೋ”
“ಹಂಗಲ್ಲಲೇ.
ಮೊದಲೆರಡು ಇಂಟರ್ನಲ್ಲಲ್ಲಿ ನಿಮಗೆ ಸಾಕಾಗುವಷ್ಟು ಮಾರ್ಕ್ಸ್ ಬಂದಿದೆ. ನೀವಿಬ್ರೂ ಓದ್ತಿರೋದಿಲ್ಲ
ಅಂತ ಗ್ಯಾರಂಟಿ ಇತ್ತು. ಅದಿಕ್ಕೆ ಬಂದೆ”
“ಒಳ್ಳೇದಾಯ್ತು
ಬಿಡು. ನಮ್ಮಿಬ್ಬರಲ್ಲೂ ಬರೀ ಪ್ರಶ್ನೆಗಳಿತ್ತು. ಉತ್ತರ ಹೇಳೋದಿಕ್ಕೆ ಯಾರಾದ್ರೂ ಬೇಕಿತ್ತು. ಅವನೆಲ್ಲಿ
ಕ್ರಾಂತಿ?” ಸಿಗರೇಟಿನ ಕೊನೆಯ ತುಂಡನ್ನು ಲೋಟದೊಳಗೆ ಹಾಕುತ್ತಾ ಕೇಳಿದ ಅಭಯ್.
“ಊರಿಂದ
ಕೆ.ಟಿ.ಗಟ್ಟಿದೂ ಮಿತಿ ಅಂತ್ಯಾವುದೋ ಕಾದಂಬರಿ ತಂದಿದ್ದೆ. ‘ಸಮಾ ಹುಳಾ ಐತ್ಲೇ ಬುಕ್ಕು’ ಅಂತಾ ಓದ್ತಾ
ಕೂತಿದ್ದ. ನನಗೂ ಬೇಜಾರಾಗ್ತಿತ್ತು. ಎದ್ಬಂದೆ”
“ಅಂತೂ
ಎಲ್ಲಾ ನಾಳಿನ ಪರೀಕ್ಷೆಗೆ ಭರ್ಜರಿಯಾಗೇ ತಯಾರಿ ತಗೋತಿದ್ದೀವಿ” ರಾಘವನ ಮಾತಿಗೆ ಎಲ್ಲರೂ ನಕ್ಕರು.
Related
*
* *
ನಿಲ್ದಾಣದಾಚೆ
ನಮಸ್ತೆ.
ನಾವೆಲ್ಲ ಮೈಸೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು. ಈ ಲೇಖಕನ ಒತ್ತಾಯದ ಮೇರೆಗೆ ನಮ್ಮ ಹಿಂದಿನ
ದಿನಗಳ ಅಂದರೆ ಈ ಕಾಲೇಜಿಗೆ ಸೇರುವುದಕ್ಕೆ ಮುಂಚಿನ ದಿನಗಳ ನಮ್ಮ ಜೀವನದ ಬಗ್ಗೆ ಹೇಳಲಿಕ್ಕೆ ನಾನು
ಟಿಪ್ಪಣಿ ಮಾಡಿಕೊಂಡಿದ್ದೀನಿ. ರಾಘವ, ಅಭಯ್, ನಾನು ತುಷಿನ್ ಮತ್ತು ಕ್ರಾಂತಿ ಸಂಭವ್– ನಾವು ನಾಲ್ಕು
ಜನ ಬೇರೆ ಊರು, ಬೇರೆ ಸಂಸ್ಕೃತಿ, ಬೇರೆ ಪರಿಸರದ ಹಿನ್ನೆಲೆಯಿಂದ ಬಂದು ಮೈಸೂರಿನಲ್ಲಿ ಒಟ್ಟಾಗಿ ಸೇರಿದೆವು.
ಪ್ರತಿ ಊರೂ ಪ್ರತಿ ಮನೆಯ ಸಂಸ್ಕೃತಿಯೂ ವಿಭಿನ್ನವಾಗಿರುತ್ತೆ ವಿಶಿಷ್ಟವಾಗಿರುತ್ತೆ ಎಂದು ನನ್ನ ಅಭಿಪ್ರಾಯ.
ಕ್ರಾಂತಿಯ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಕೊನೆಯಲ್ಲಿ ಸೇರಿಸಿದ್ದೇನೆ. ಈ ಲೇಖಕ ನಮ್ಮೆಲ್ಲರಿಗಿಂತ
ಮುಂಚೆ ಅವನ ಪಾತ್ರವನ್ನು ಪರಿಚಯಿಸಿ ಬೆಳೆಸಿರುವುದರಿಂದ ಅವನ ಬಗ್ಯೆ ಹೇಳುವುದು ಅಷ್ಟಾಗಿ ಉಳಿದಿಲ್ಲ.
ರವಷ್ಟು ಅಸೂಯೆ ಇರುವುದೂ ಸುಳ್ಳಲ್ಲ.
ಕಾದಂಬರಿಯ
ಮೊದಲಲ್ಲಿ ಬರುವ ಶ್ರವಂತ್, ಸುಮಯ್ಯ, ರಮ್ಯಾ.....ಉಹ್ಞು...ನನಗೂ ಅವರಿಗೂ ಸದ್ಯಕ್ಕೆ ಪರಿಚಯವಿಲ್ಲ.
ಮುಂದಕ್ಕೆ ಏನಾಗುತ್ತೋ ಲೇಖಕನಿಗಷ್ಟೇ ಗೊತ್ತು. ಕ್ರಾಂತಿಯ ಪೂರ್ವ ವೈದ್ಯಕೀಯ ಜೀವನದ ಬಗ್ಗೆ ನಿಮಗೀಗಾಲೇ
ಒಂದು ಸ್ಥೂಲ ಪರಿಚಯ ಸಿಕ್ಕಿರುವುದರಿಂದ ಉಳಿದ ಮೂವರ ಒಂದು ಚಿಕ್ಕ ವ್ಯಕ್ತಿ ಚಿತ್ರಣ ಕೊಡುವ ಜವಾಬುದಾರಿ
ನನ್ನ ಮೇಲಿದೆ. ನನ್ನ ಮೇಲೂ ಲೇಖಕನೆಂಬ ಆಪಾದನೆಯಿರುವುದರಿಂದ ನನಗೆ ಈ ಕೆಲಸ ಸಿಕ್ಕಿದೆಯೆಂದು ಭಾವಿಸುತ್ತೇನೆ.
ಒಂದಷ್ಟು ಕತೆ, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆಯಾದರೂ....ಬಿಡಿ ನನ್ನ ಆತ್ಮರತಿ ಕೊನೆಗಿರಲಿ.ಮೊದಲು
ರಾಘವ, ಅಭಯನ ವಿಷಯ ನೋಡೋಣ. ಅಂದಹಾಗೆ ನಮ್ಮೆಲ್ಲರ ಈ ಪರಿಚಯ ನಾವು ಮೈಸೂರಿನಲ್ಲಿ ಸೇರುವುದಕ್ಕೆ ಮುಂಚೆ.
ಮೈಸೂರಿಗೆ ಸೇರಿದ ನಂತರ ನಮ್ಮ ವ್ಯಕ್ತಿತ್ವದಲ್ಲೂ ಬಹಳ ಬದಲಾವಣೆಗಳಾಗಿವೆ. ಎಲ್ಲಾ ಉನ್ನತಿ ಹೊಂದಲು
ಆದ ಬದಲಾವಣೆಗಳು ಅಂತ ನಮಗೆ ನಾವೇ ಸಮಾಧಾನ ಮಾಡಿಕೊಳ್ತಿರ್ತೀವಿ. ಅದನ್ನೆಲ್ಲಾ ಈ ಲೇಖಕ ವಿವರಿಸ್ತಾನೆ
ಬಿಡಿ.
ರಾಘವ,
ರಾಘು, ಬೊಮ್ಮ, ಕಳ್ಳಬ್ರಾಹ್ಮಣ. ಕಳ್ಳಬ್ರಾಹ್ಮಣನೆಂದು ಕರೆದರೂ ಸುಮ್ಮನಿರುತ್ತಾನೆ. ಆದರೆ ಅಪ್ಪಿತಪ್ಪಿ
‘ಏನಪ್ಪಾ ಬ್ರಾಹ್ಮಣಾ’ ಅಂತ ಕರೆದ್ರೋ ಅವತ್ತಿನ ದಿನವೇ ನಿಮ್ಮ ಶ್ರಾದ್ಧ ಮಾಡಿಸದೆ ಬಿಡೋನಲ್ಲ. ‘ಬ್ರಾಹ್ಮಣಿಕೆ
ಅನ್ನೋದು ನಮ್ಮ ಜ್ಞಾನದಿಂದ, ನಮ್ಮ ಕಾರ್ಯಗಳಿಂದ ಬರಬೇಕಾದ್ದು. ಅವನ್ಯಾವನೋ ತಲೆಕೆಟ್ಟವನೊಬ್ಬ ಶತಶತಮಾನಗಳ
ಹಿಂದೆ ಹುಟ್ಟಿನಿಂದ ಬರಬೇಕಾದ್ದು. ಅವನ್ಯಾವನೋ ತಲೆಕೆಟ್ ಬಡ್ಡಿಹೈದ ಶತಶತಮಾನಗಳ ಹಿಂದೆ ಹುಟ್ಟಿನಿಂದ
ಜಾತಿ ಗುರುತಿಸಿ ಸತ್ತ. ನಾವುಗಳು so called educated civilised people ಮಂಗ್‍ಸೂಳಿಮಕ್ಳು ಇವತ್ತಿಗೂ
ಅದನ್ನೇ ಫಾಲೋ ಮಾಡ್ತಿದ್ದೀವಿ. ಇವತ್ತಿನವರೆಗಂತೂ ನಾನು ಬ್ರಾಹ್ಮಣನಾಗಿಲ್ಲ. ಮುಂದೊಂದಿನ ಆಗಲೂಬಹುದು.
ಭವಿಷ್ಯವನ್ನು ಹೇಳಬಲ್ಲವರಾರು? ಇವತ್ತಿನ ದಿನಕ್ಕೆ ನನ್ನಲ್ಲಿರುವುದು ಕ್ಷತ್ರಿಯ ಗುಣ’ ಇದು ಅವನ ವಾದಸರಣಿ.
ಮೈಸೂರು
ಜಿಲ್ಲೆಯವನೇ. ಮೈಸೂರಿನಿಂದ ಕೊಡಗಿಗೆ ಹೋಗುವಾಗ ನಲವತ್ತೆಂಟು ಕಿ.ಮಿ. ಕ್ರಮಿಸಿದರೆ ಸಿಗುವ ಹುಣಸೂರು
ತಾಲ್ಲೂಕಿನವನು. ಅಪ್ಪ ಹುಣಸೂರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಾರೆ. ಹುಣಸೂರಿನ ಮಟ್ಟಿಗೆ ದೊಡ್ಡ
ಪ್ರಾವಿಷನ್ಸ್ ಸ್ಟೋರ್ಸ್ ಅದು. ತಾಯಿ ಮನೆ ಅಂಗಡಿ ಎರಡರ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಇರೋಳೊಬ್ಬಳು ಅಕ್ಕ. ಬಿಎಸ್ಸಿ ಮಾಡಿದ ನಂತರ ಪಿರಿಯಾಪಟ್ಟಣದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿರುವ
ವೈದ್ಯನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಹೊರಟ ಕುಟುಂಬಕ್ಕೆ
ಕಬಾಬ್ ಮೇ ಹಡ್ಡಿ ಅಂತ ರಾಘವನಿದ್ದಾನೆ. ಕಬಾಬು ಹಡ್ಡೀ ಎಲ್ಲಾ ರಾಘವನಿಗೆ ಮಾತ್ರ ಸಂಬಂಧಪಟ್ಟಿದ್ದು
ಬಿಡಿ. ಏಳನೇ ಇಯತ್ತೆಯವರೆಗೆ ಹುಣಸೂರಿನ ಸಂತ ಜೋಸೆಫ ಶಾಲೆಯಲ್ಲಿ ಓದಿ ನಂತರ ಮೈಸೂರಿನ ರಾಮಕೃಷ್ಣ ಆಶ್ರಮ
ಸೇರಿದ. ಪಿಯುಸಿಯವರೆಗೂ ಅಲ್ಲೇ ಓದಿದ್ದು. ನಾನು ಕಂಡ ಹಾಗೆ ಈ ವಸತಿ ಶಾಲೆಗಳಿಂದ ಹೊರಬಂದ ವಿದ್ಯಾರ್ಥಿಗಳಲ್ಲಿ
ಎರಡು ವಿಧ. ಮೊದಲನೇ ಪಂಗಡಕ್ಕೆ ಸೇರಿದವರು ಪೂರ್ತಿ ಒಳ್ಳೆಯವರಾಗಿ (ಒಳ್ಳೆತನ ಅಂದ್ರೇನು ಅನ್ನೋದು
ಕೂಡ ಒಳ್ಳೇ ಪ್ರಶ್ನೇನೆ) ಓದು ಒಂದಷ್ಟು ಆಧ್ಯಾತ್ಮ ಅಂತಿದ್ದರೆ ಉಳಿದವರು ಅಷ್ಟೂ ದಿನದ ಜೈಲುವಾಸದಿಂದ
ಬಿಡುಗಡೆಗೊಂಡವರಂತೆ ಪ್ರಪಂಚದಲ್ಲಿರುವ ಎಲ್ಲವನ್ನೂ ಅನುಭವಿಸಲು ಹಾತೊರೆಯುವವರು. ರಾಘವ ಯಾವ ವಿಧ ಅನ್ನೋದು
ಅವನಿಗೂ ಸರಿಯಾಗಿ ತಿಳಿದಿರುವಂತಿಲ್ಲ. ಜೈಲಿನಿಂದಲೂ ಹತ್ತಾರು ಬಾರಿ ತಪ್ಪಿಸಿಕೊಳ್ಳಲು ಯತ್ನಿಸಿದಾತ.
ಹತ್ತನೇ ಇಯತ್ತೆಯಲ್ಲಿ ತಾತನ ಜುಬ್ಬಾದಿಂದ ಸಿಗರೇಟು ಕದ್ದು ಮನೆಯಲ್ಲಿ ಸಿಕ್ಕಿಕೊಂಡಾತ. ಎಲ್ಲಾ ಬಂಧಗಳಿಂದಲೂ
ಮುಕ್ತಿ ಹೊಂದಲು ಹಾತೊರೆಯುತ್ತಾನೆ. ‘ಬೇಲಿ ಗಾಳಿಯನ್ನು ಸಂಪೂರ್ಣ ತಡೆದ ದಿನ ನನ್ನ ಸ್ವಾತಂತ್ರ್ಯಹರಣವಾಗುತ್ತೆ’
ಇದು ಅವನ ಮನಸ್ಸಿನ ಮೇಲೆ ಅವನಿಗಿರುವ ನಂಬಿಕೆ. ಸಿಗರೇಟು, ಎಣ್ಣೆ, ಮಾಂಸ ಇವೆಲ್ಲ ಅಭ್ಯಾಸಬಾಗಿದ್ದು
ಪಿಯುಸಿಯಲ್ಲಿ. ಆದರೆ ಅವನಿಗೆ ಪ್ರಪಂಚದಲ್ಲಿ ಅನಿವಾರ್ಯವಾದ ವಸ್ತು ವ್ಯಕ್ತಿ ಇಲ್ಲವೇ ಇಲ್ಲ ಎಂದೆನಿಸುತ್ತೆ.
ಹತ್ತನೇ ತರಗತಿಯಿಂದ ಜೀವನದ ಅರ್ಥ ಹುಡುಕುವುದರಲ್ಲಿ ಬ್ಯುಸಿ. ಇವನ ಪ್ರಶ್ನೆಗಳ ಕಾಟ ತಾಳಲಾರದೆ ಮನೆಯವರೂ
ಅಪರೂಪಕ್ಕೆ ಮನೆಗೆ ಬಾ ಎಂದ್ಹೇಳಿಬಿಟ್ಟಿದ್ದಾರಂತೆ. ಬೆಳಿಗ್ಗೆ ತಿಂಡೀನೇ ಯಾಕೆ ತಿನ್ನಬೇಕು? ಬೆಳಿಗ್ಗೆ
ಊಟ ಮಾಡಿ ರಾತ್ರಿ ತಿಂಡಿ ತಿಂದ್ರೆ ಏನಾಗುತ್ತೆ? ಎಂದೆಲ್ಲ ಪ್ರಶ್ನೆ ಕೇಳುವವನನ್ನು ಯಾರು ತಾನೇ ಸಹಿಸಿಕೊಳ್ತಾರೆ
ಹೇಳಿ.
ಇನ್ನು
ನಮ್ಮ ಅಭಯ್,
ಮುಂದುವರೆಯುವುದು...
No comments:
Post a Comment