Oct 13, 2014

ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ - ವೀರಣ್ಣ ಮಡಿವಾಳರ ಖಂಡಕಾವ್ಯ ಬಿಡುಗಡೆ ಸಮಾರಂಭ

veeranna madiwala
ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ
ವೀರಣ್ಣ ಮಡಿವಾಳರು ಬರೆದಿರುವ ಖಂಡಕಾವ್ಯ "ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ" ಚಾನೂ ಪ್ರಕಾಶನ, ಗಾವಡ್ಯಾನವಾಡಿಯ ವತಿಯಿಂದ ಪ್ರಕಟವಾಗಿದೆ. ಇದೇ ಭಾನುವಾರ ದಿನಾಂಕ 19/10/2014ರಂದು ಬೆಂಗಳೂರಿನ ಕರ್ನಾಟಕ ಅಕಾಡೆಮಿಯ ಚಾವಡಿಯಲ್ಲಿ ಬೆಳಿಗ್ಗೆ ಹತ್ತಕ್ಕೆ ಲೋಕಾರ್ಪಣೆಯಾಗಲಿದೆ. ಖಂಡಕಾವ್ಯದ ಪುಟ್ಟ ಭಾಗ "ಹಿಂಗ್ಯಾಕೆ" ಓದುಗರಿಗೆ.
                                           
ಸಮಯಾಸಮಯಗಳ ಸಂಗಮದಲ್ಲಿ ಋತುಬಳಗ ದಿಕ್ಕಾಪಾಲು
ಚೈತ್ರ ವಸಂತ ಹಾಡಿದ್ದೆಲ್ಲ ಚರಮಗೀತೆ
ನೋವ ಅಳೆಯುವ ಮಾಪು ಇನ್ನೂ ಬಂದಿಲ್ಲ
ಕಳಂಕ ಮಮತೆ ಗಳೆಲ್ಲ ಅದಲು ಬದಲು
ಎಲ್ಲದಕ್ಕೂ ಇಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ
ಮೋಡ ನುಡಿದ ಮೌನ ಸದ್ದಿದು
ಬರೆದವನ ಬಡಬಡಿಕೆಯಲ್ಲ
ಕೋಗಿಲೆಯ ಒಡಲೊಳಗೆ ಉಳಿದ ಪದವಿದು
ನಂಬಿಕೆಯ ರಿಯಾಯಿತಿ ಬೇಡುವುದಿಲ್ಲ
ಸಕಲ ಜೀವದ ಕಣ್ಣಹನಿಯ ಸ್ವಗತ
ತೋರಿ ತಾಕುವ ತಾಕತ್ತು ಯಾವುದರಲ್ಲೂ ಇಲ್ಲ




ಸಹೃದಯಿ
ಕಾವ್ಯ ಅಕಾವ್ಯದಾಚೆ
ಅಪಸ್ವರಕ್ಕೂ
ಕಿವಿದೆರೆಯುವ ನಿನಗೆ
ಬಾಗುತ್ತೇನೆ
ಕೇಳಿಸಿಕೊ...



ಮೊದಲ ಬಾರಿಗೆ
ಲೋಕದ ಅದಾಲತ್ತಿನಲಿ
ನ್ಯಾಯ ಕೇಳಬೇಕು
ದೇವರ ವಿಕಾರಗಳ ಒತ್ತೊತ್ತಿ ಹೇಳಿ
ಹರತಾಳ ಹೂಡಬೇಕು
ಸಾಧ್ಯವಾದರೆ
ನಮಗೆ ಸಿಗದಿರುವ ರೊಟ್ಟಿಯಲಿ
ಕೋಟ್ಯಾನುಕೋಟಿ ದೇವತೆಗಳಿಗೆ ಪಾಲು ನೀಡಬೇಕು
ಅನಾಮಿಕರ ತೀರ್ಪು 
ಯಾವಾಗಲೂ
ಉಳ್ಳವರ ಪರವೆಂದು ಗೊತ್ತಿದ್ದರೂ
ಬಿಕ್ಕುವ ಗುಬ್ಬಚ್ಚಿಗಳ
ಒಡಲಲ್ಲಿ ಬಚ್ಚಿಟ್ಟುಕೊಂಡು
ಹರ್ಕತ್ತು ಮಾಡಬೇಕು
ರೋದನ ಕೇಳಿಸದಂತೆ
ತುಟಿಕಚ್ಚಿ ನುಂಗಬೇಕು
ತರಹೇವಾರಿ ತರ್ಕಕ್ಕೆ
ತಕ್ಕ ಉತ್ತರ ನೀಡಿ
ತೆಪ್ಪಗೆ ಮಾಡಬೇಕು
ಸುಮ್ಮನೆ ಹುಟ್ಟಿ ಬಂದ ತಪ್ಪಿಗೆ 

ಕಹಿಪ್ರೇಮ ಪುರಾಣ ಬರೆಯುತ್ತಿದೆ ಒಣಮರ
ಬಿಸಿಲಾದರೂ ಓದಲೆಂದು
ಸಿಡಿಲಿಗೂ ಮರಕ್ಕೂ
ಯಾರೋ ಮಾಡಿದ ಮದುವೆ ಬಂಧ
ಮಿಂಚಿನ ಮೋಹ
ಮರಕ್ಕೂ ಕಾಡಿತ್ತು ಹಗಲೂ ಇರುಳು
ಕೊರಳ ಹಾರ
ಮಾಡಿಕೊಂಡು ಮಿಂಚಬೇಕು
ತಾನೂ ಸಿಡಿಲ ಒಡನಾಡಿಯಾಗಿ
ಕನಸಿತ್ತು ಮರ ಹಂಚಿತ್ತು ಬೇರಿಗೂ
ಬೇರೆ ಮಾತು ಕೇಳಿಸಲಿಲ್ಲ ಕಿವಿಗೆ
ನಾಲ್ಕು ಹನಿ ಮಳೆಯ ಆಮಿಷ ಒಡ್ಡಿ
ಕರೆದೇ ಬಿಟ್ಟಿತು ಮಧು ಮಂಚಕೆ
ಅಡ್ನ್ಯಾಡಿ ಸಿಡಿಲು
ಬಿಡಿಸಿ ಹೇಳುವವರು ಯಾರು

ಮೈತುಂಬ ಹಸಿರು ಹೂಹಣ್ಣು ಚಿಗುರು
ಎಷ್ಟು ತಿಂದರೂ ಮುಗಿಯದ ಫಲತುಂಬಿದ ಮರ
ಮರಿಗಳ
ತಪ್ಪು ಹೆಜ್ಜೆ
ತೊದಲ ಉಲಿಯ ಕಲರವ
ಎಲ್ಲವನೂ ಮರಕೆ ಒಪ್ಪಿಸಿ
ಹೊರಡುತ್ತಿದ್ದವು ಹಕ್ಕಿ ಕಾಳು ಹುಡುಕಿ
ಹಾವು ಪಕ್ಕದಲ್ಲೇ ಸುಳಿದಾಡಿದರೂ

ಬೀಜ ಮರವ ಹೆತ್ತಿರಬಹುದು
ಮರ ಬೀಜ ಮಾತ್ರ ಹೆರುವುದಿಲ್ಲ
ಗೂಡನ್ನೂ ಹೆರುತ್ತದೆ
ಹಕ್ಕಿಗಳನ್ನೂ ಹಡೆಯುತ್ತದೆ
ಮರಿಗಳಿಗೂ ಜೀವ ಕೊಡುತ್ತದೆ
ಹಾವು ಹಲ್ಲಿ ಹುಳು ಅಳಿಲು ಗಿಳಿ ಗೊರವಂಕ
ಓತಿಕ್ಯಾತ ಊಸರವಳ್ಳಿ
ಎಲ್ಲದಕ್ಕೂ

ಮರವೇ ತಾಯಿ ಮರವೇ ತಂದೆ

ello kaleduhogide vasantha
ಪುಸ್ತಕ ಬಿಡುಗಡೆ ಸಮಾರಂಭದ ವಿವರ
ಬೆನ್ನುಡಿಯಿಂದ..
ಇದೊಂದು ನೋವು ಮತ್ತು ನೋವಿನಲ್ಲೇ ಮಗು ಹೆರುವ ಹೊಣೆಗಾರಿಕೆಯ ಖಂಡಕಾವ್ಯ. ಬುದ್ಧನ ಬೆಳಕಿನಲ್ಲಿ ಜಗಕ್ಕೆ ಬೆಳಕು ಅರಸುತ್ತಾ ಪ್ರಕೃತಿಯೊಂದಿಗೆ ಮಾತಾಡುವ ಕಾವ್ಯಕ್ಕೆ ಮನುಷ್ಯ ಪ್ರಕೃತಿಯ ಕೂಸಾಗಬೇಕೆಂಬುದು ತಿಳಿದಿದೆ. ಆದರೆ ಅದೂ ವರ್ತಮಾನದ ನಡಾವಳಿಯಂತೆ ಭ್ರಷ್ಟವಾಗುತ್ತಿದೆಯೇನೋ ಎಂಬ ಆತಂಕ ಆವರಿಸುತ್ತದೆ.

ಇಡೀ ಕಾವ್ಯ ಬದುಕಿನ, ವ್ಯವಸ್ಥೆಯ ವೈರುಧ್ಯಗಳನ್ನು ಮುಖಾಮುಖಿಯಾಗಿಸುತ್ತಾ ವ್ಯವಸ್ಥೆಗೆ, ಬದುಕಿಗೆ ಉಸಿರುನೀಡಲು ಹಂಬಲಿಸುತ್ತದೆ. ವಿಷಾದದ ಕಣ್ಣಲ್ಲಿ ಚಿಗುರಿನ ಕನಸಿರುವ, ಕಣ್ಣೀರಿನಲ್ಲೂ ಜೀವಜಲ ಹುಟ್ಟಿಸುವ ಛಲವಿರುವ ಕಾವ್ಯ ಸಾಹಿತ್ಯಚರಿತ್ರೆಯು ಇದುವರೆಗೂ ಸಾಹಿತ್ಯದ ಕುರಿತು ತಿಳಿದಿರುವ ತಿಳಿವನ್ನು
ಬುಡಮೇಲಾಗಿಸುವ ಅರಿವನ್ನು ಹೊಂದಿದೆ.
ಸಬಿತಾ ಬನ್ನಾಡಿ


ಮುನ್ನುಡಿಯಿಂದ...
        ‘ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ ಎನ್ನುವ ಖಂಡ ಕಾವ್ಯದಲ್ಲಿ ವೀರಣ್ಣ ಮಡಿವಾಳರ ಕುತ್ತಿಗೆ ಕೊಟ್ಟು ಕಾವ್ಯ ಪಡೆದಂತಿದೆ ಖಂಡ ಕಾವ್ಯದಲ್ಲಿ ಅಂತಹ ವಿಷಾದ ಕಪ್ಪು ನೀರಿನಂತೆ ಮಡುಗಟ್ಟಿ ನಿಂತಿದೆಕಾವ್ಯ ಕಟ್ಟುವ ಕೆಲಸ ಎಂಥ ಯಾತನೆ ಹಾಗು ಎಂಥ ಪರಿಹಾರ ಎನ್ನುವುದಕ್ಕೆ ಖಂಡ ಕಾವ್ಯವೇ ಸಾಕ್ಷಿಯಾಗಿದೆ.  
ವೀರಣ್ಣ ಮಡಿವಾಳರ ರಮ್ಯ ಪ್ರಜ್ಞೆಯ ಎಲ್ಲ ಪರಿಕರಗಳನ್ನು ಬಳಸಿಕೊಂಡು ವಾಸ್ತವದ ಬದುಕನ್ನು ಹಿಡಿದ ರೀತಿಯೇ ಅಚ್ಚರಿ ಹುಟ್ಟಿಸುತ್ತದೆಇಲ್ಲಿ ವಸಂತ, ಚೈತ್ರ, ಕೋಗಿಲೆ, ನವಿಲು, ಕೊಳಲು, ಗುಲಾಬಿ, ಗುಬ್ಬಚ್ಚಿಗಳು, ಹೂ ಬನ, ಚುಕ್ಕೆ, ಚಿಟ್ಟೆಗಳು, ಸೂರ್ಯ, ಚಂದಿರ, ಮರಗಳು, ಆಕಾಶ, ಜಿಂಕೆ, ಕುದುರೆ, ಮೋಡಗಳು ಎಲ್ಲವೂ ಇವೆಇವೆಲ್ಲವೂ ಭಾವಾತಿರೇಕಕ್ಕೆ ಹಾದಿ ಮಾಡಿ ಕೊಡುವ ಪ್ರೇಮದ ಸಲಕರಣೆಗಳಾಗಿವೆಆದರೆ ಇವೆಲ್ಲವುಗಳಿಗೆ ಅಗ್ನಿಸ್ಪರ್ಶ ಮಾಡಿ, ರಮ್ಯದ ಸಾಧನಗಳನ್ನು ವಾಸ್ತವದ ಉರಿಯುವ ಪಂಜುಗಳನ್ನಾಗಿ ಪರಿವರ್ತಿಸಿದ್ದು ಕಾವ್ಯದ ಧನ್ಯತೆಗೆ ಕಾರಣವಾಗಿದೆಲಿರಿಕಲ್ ಸಾಮಗ್ರಿಗಳಿಗೆ ಬೆಂಕಿ ಇಟ್ಟು ಅವುಗಳ ಮಧ್ಯದಿಂದ ಬದುಕಿನ ಹೊಸ ಕಾಣ್ಕೆಗಳನ್ನು ಎತ್ತಿ ಹೊರಗೆ ಎಳೆದಂತಿದೆಇಲ್ಲಿ ಎಲ್ಲ ಕಾವ್ಯ ಪರಿಕರಗಳು ಬದುಕಿಗಾಗಿ ದುಡಿದು ಅರ್ಥ ಸ್ಫುರಿಸಿವೆಕಾವ್ಯ ಬದುಕಿನ ವ್ಯವಹಾರವಾಗಿದೆಖಂಡ ಕಾವ್ಯದ ಕೊನೆಯಲ್ಲಿಸಿಡಿಲಿಗೂ ಮರಕ್ಕೂ ಮದುವೆಯ ಬಂಧ ಎಂದು ಹೇಳುತ್ತಮರವೇ ಸುಡುಗಾಡು, ಗೂಡು ಗೂಡುಗಳೆಲ್ಲ ಹೆಣ ತುಂಬಿದ ಗೋರಿ ಎನ್ನುವ ಚಿತ್ರಗಳನ್ನು ಕೊಡುತ್ತ, ಕೈತಪ್ಪುತ್ತಿರುವ ವರ್ತಮಾನದ ಬದುಕನ್ನು ಯಥಾರ್ಥವಾಗಿ ಅನಾವರಣಗೊಳಿಸುತ್ತಾ, ಖಂಡ ಕಾವ್ಯದ ಇತಿಮಿತಿಗಳನ್ನು ದಾಟಿ, ಮರವು ಜೀವವೃಕ್ಷವಾಗುವ ಹಾಗು ನಾಶವಾಗುವ, ರೂಪಕವು ಒಟ್ಟು ಕಾವ್ಯ ಶಿಲ್ಪದಲ್ಲಿ ಅಂತಿಮ ಪೆಟ್ಟು ಎನ್ನುವಂತೆ ಎಪಿಕ್ ಪ್ರಮಾಣದಲ್ಲಿ ಪುಟಿದು ಬಂದಿದೆ
ಒಳ್ಳೆಯ ಕಾವ್ಯಕ್ಕೆ ಬರಗಾಲವೆಂದು ಪರಿತಪಿಸುವ ದಿನಗಳಲ್ಲಿ ವೀರಣ್ಣ ಮಡಿವಾಳರ ಅವರ ಖಂಡ ಕಾವ್ಯ ಎದೆಯ ಮೇಲಿನ ಕೈಯಂತೆ ಹೊಸ ಭರವಸೆ ಮೂಡಿಸಿದೆ ಹಾಗು ಕವಿಯ ಕಾವ್ಯ ಕ್ಷಿತಿಜದ ಹೊಳೆಯುವ ಹೊಸ ಅಂಚುಗಳನ್ನು ತೋರಿಸಿದೆ.
ಎಸ್.ಎಫ್. ಯೋಗಪ್ಪನವರ್                

No comments:

Post a Comment