Oct 17, 2014

ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು!

raghaveshwara swamy case
ರಾಘವೇಶ್ವರ ಸ್ವಾಮಿ
Dr Ashok K R 


ಅದೊಂದು ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರ್ವೇಸಾಧಾರಣ ಎಂದೇ ಕರೆಯಬಹುದಾದ ಒಂದು ಪ್ರಕರಣ. ತಮ್ಮ ಸ್ಥಾನವನ್ನು ಬಳಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು, ಲೈಂಗಿಕ ಹಿಂಸೆಗೆ ಒಳಪಡಿಸಿಬಿಟ್ಟರು ಎಂಬ ದೂರು ಪೋಲೀಸರನ್ನು ತಲುಪುತ್ತದೆ. ದೂರನ್ನು ಸ್ವೀಕರಿಸಿಕೊಂಡ ಪೋಲೀಸರು ಯಾವ ರೀತಿ ಕಾರ್ಯನಿರ್ವಹಿಸಬೇಕು? ನ್ಯಾಯಾಲಯ ಯಾವ ರೀತಿ ಕೆಲಸ ಮಾಡಬೇಕು? ಸಮಾಜದ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ದೂರು ಸ್ವೀಕರಿಸಿಕೊಂಡ ಪೋಲೀಸರು ಆಪಾದಿತನನ್ನು ವಿಚಾರಿಸಿ ಅಗತ್ಯವಿದ್ದರೆ ಬಂಧಿಸಿ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ನ್ಯಾಯಾಲಯ ಅಪರಾಧದ ಹಿಂದು ಮುಂದನ್ನು ಪರಿವೀಕ್ಷಿಸಿ ಆಪಾದಿತನಿಗೆ ಜಾಮೀನು ಕೊಡಬಹುದು ಅಥವಾ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತೆನ್ನಿಸಿದರೆ ಮತ್ತಷ್ಟು ವಿಚಾರಣೆಗೆ ಅನುಮತಿ ನೀಡಬೇಕು. ಒಂದು ಗುರುತರ ಆರೋಪಕ್ಕೊಳಗಾಗಿರುವ ವ್ಯಕ್ತಿಯನ್ನು ಸಮಾಜ ಆರೋಪ ಸಾಬೀತಾಗುವವರೆಗೂ ಅಪರಾಧಿಯನ್ನಾಗಿ ಮಾಡುವ ಅವಶ್ಯಕತೆಯಿರದಿದ್ದರೂ ಒಂದು ಪುಟ್ಟ ಅನುಮಾನದ ದೃಷ್ಟಿಯಿಂದಲಾದರೂ ನೋಡಬೇಕು. ನಂತರದ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದು ಸತ್ಯಾಸತ್ಯತೆಗಳು ಹೊರಬರಬೇಕು. ಸಂವಿಧಾನಕ್ಕೆ ಕಾನೂನಿಗೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಕರಣಗಳ ವಿಚಾರಣೆಗಳೂ ಇದೇ ರೀತಿ ನಡೆಯಬೇಕಲ್ಲವೇ? ಕ್ಷಮಿಸಿ ಈ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚು ಸಮಾನರು.

Also Read
ಧರ್ಮ ಮರೆತ ನಾಡಿನಲ್ಲಿ
ಅವರು ಗೋಸ್ವಾಮಿ ಎಂದೇ ಖ್ಯಾತರು. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಸ್ವಾಮಿ ಪ್ರಸಿದ್ಧರಾಗಿದ್ದೇ ಗೋವುಗಳನ್ನು ‘ಸಂರಕ್ಷಿಸುವ’ ಕಾರ್ಯದಿಂದ. ಗೋವಿನ ಮೂತ್ರದಿಂದಿಡಿದು ಹಾಲಿನವರೆಗೂ ಅದರಿಂದಾಗುವ ಅನುಕೂಲಗಳನ್ನು ಪಟ್ಟಿ ಮಾಡುಮಾಡುತ್ತ ಇಂತಹ ಗೋವನ್ನು ಹತ್ಯೆ ಮಾಡಬೇಡಿ ಕಟುಕರಿಗೆ ಕೊಡಬೇಡಿ ಎಂಬ ಎಂದಿನ ರಾಗವನ್ನಾಡುತ್ತಿದ್ದವರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ನಿರ್ಧಾರವಾದಾಗ ಮತ್ತೊಂದಷ್ಟು ವಿವಾದವಾಗಿ ರಾಘವೇಶ್ವರ ಸ್ವಾಮಿಗಳು ಮತ್ತಷ್ಟು ಕುಪ್ರಸಿದ್ಧಿ ಪಡೆದರು. ಗೋಸಂರಕ್ಷಣೆಯ ಕಾರಣಕ್ಕೋ ರಾಮಕಥೆಯ ಕಾರಣಕ್ಕೋ ‘ನಮ್ಮವರು’ ಎಂಬ ಜಾತೀಯತೆಯ ಕಾರಣಕ್ಕೋ ಹಿಂದು ಸ್ವಾಮಿ ಎಂಬ ಕಾರಣಕ್ಕೋ ರಾಘವೇಶ್ವರ ಸ್ವಾಮಿಗಳು ಬಹಳಷ್ಟು ಬೆಂಬಲಿಗರನ್ನು ಅಭಿಮಾನಿಗಳನ್ನು ಪಡೆದಿದ್ದಾರೆ. ಅವರನ್ನು ದೇವರೆಂದು ಇಡೀ ವಿಶ್ವದ ಗೋವುಗಳ ಸಂರಕ್ಷಕನೆಂದು ಆರಾಧಿಸುವವರ ಸಂಖ್ಯೆಯೂ ಕಡಿಮೆಯೇನಲ್ಲ. ಈ ರೀತಿಯ ಆರಾಧನಾ ಮನೋಭಾವವಿದ್ದ ವರುಷಗಳಿಂದ ನಂಬಿಕೊಂಡು ನಡೆದಿದ್ದ ಹೆಣ್ಣುಮಗಳ ಕುಟುಂಬವೊಂದು ರಾಘವೇಶ್ವರ ಸ್ವಾಮಿಗಳ ವಿರುದ್ಧ ಬಲಾತ್ಕಾರ, ಬಲವಂತದ ಲೈಂಗಿಕ ಕಿರುಕುಳದ ಆರೋಪ ಮಾಡಿದೆ. ಆರೋಪ ಮಾಡಿ ತಿಂಗಳು ಕಳೆದರೂ ರಾಘವೇಶ್ವರ ಸ್ವಾಮಿಯವರನ್ನು ವಿಚಾರಣೆ ನಡೆಸುವುದಕ್ಕೂ ತ್ರಾಸ ಪಡುವಷ್ಟು ನಮ್ಮ ಕಾನೂನು ‘ಬಲಿಷ್ಟ’ವಾಗಿದೆ!
ಆರೋಪ ಮಾಡಿರುವ ಪ್ರೇಮಲತಾ ಮತ್ತವರ ಪತಿ ದಿವಾಕರ ಶಾಸ್ತ್ರಿ ವರುಷಗಳಿಂದ ಮಠದಲ್ಲೇ ದುಡಿಯುತ್ತಿದ್ದವರು. ದಿವಾಕರ ಶಾಸ್ತ್ರೀ ಮಠದ ಆಡಳಿತದಲ್ಲಿ ಕಾರ್ಯಾಧ್ಯಕ್ಷರಾಗಿದ್ದರೆ ಪ್ರೇಮಲತಾ ರಾಮಚಂದ್ರಾಪುರ ಮಠ ಪ್ರಾರಂಭಿಸಿದ್ದ ರಾಮಕಥೆಯಲ್ಲಿ ಪ್ರಮುಖ ಗಾಯಕಿಯಾಗಿದ್ದರು. ಪ್ರೇಮಲತಾ ಮತ್ತವರ ಕುಟುಂಬದವರು ಆರೋಪಿಸುವಂತೆ ತಾವು ದೂರು ನೀಡುವುದನ್ನು ಅರಿತ ಮಠದ ಮಂದಿ ಪ್ರೇಮಲತಾ ಮತ್ತು ದಿವಾಕರರ ವಿರುದ್ಧ ಬ್ಲ್ಯಾಕ್ ಮೇಲ್ ದೂರನ್ನು ನೀಡುತ್ತಾರೆ. ಮೂರು ಕೋಟಿಯ ಬೇಡಿಕೆಯಿಟ್ಟಿದ್ದಾರೆ, ಬೇಡಿಕೆ ಈಡೇರಿಸದಿದ್ದರೆ ಸ್ವಾಮೀಜಿಯ ಮೇಲೆ ರೇಪ್ ಕೇಸನ್ನು ಹಾಕುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂಬ ದೂರು ನೀಡುತ್ತಾರೆ. ಗಮನಿಸಬೇಕಾದ್ದೆಂದರೆ ಈ ದೂರು ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರೀ ಸ್ವಾಮೀಜಿಗಳ ವಿರುದ್ಧ ದೂರು ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಾಗ ದಾಖಲಾದದ್ದು. ಅಲ್ಲಿಗೆ ಮೊದಲ ದೂರು ಮಠದ ಕಡೆಯಿಂದಲೇ ಬಂತು. ಆಪಾದಿತರಾದ ಪ್ರೇಮಲತಾ ಮತ್ತು ದಿವಾಕರರನ್ನು ವಿಚಾರಣೆಗೊಳಪಡಿಸಬೇಕಾದದ್ದು ಸ್ವಾಭಾವಿಕ ಮತ್ತದು ನಡೆಯಿತು ಕೂಡ. ಎಲ್ಲಿಯವರೆಗೆಂದರೆ ಬ್ಲ್ಯಾಕ್ ಮೇಲ್ ಪ್ರಕರಣವೊಂದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಪೋಲೀಸರು ಅವರೀರ್ವರನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೂ ಪ್ರಸ್ತುತಪಡಿಸುತ್ತಾರೆ. ಪೋಲೀಸರ ಕಾರ್ಯವೈಖರಿಗೆ ಶಹಬ್ಬಾಸ್ ಎನ್ನುತ್ತಿರೇನೋ!?!
ನ್ಯಾಯಾಲದಲ್ಲಿ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರೀ ವಿಚಾರಣೆ ನಡೆದಾಗ ಸಿದ್ಧ ಮಾಡಿಕೊಂಡಿದ್ದ ದೂರನ್ನು ನ್ಯಾಯಾಧೀಶರಿಗೇ ನೀಡುತ್ತಾರೆ. ಜೊತೆಜೊತೆ ಅವರ ಮಗಳು ಬೆಂಗಳೂರಿನ ಬನಶಂಕರಿ ಪೋಲೀಸರಿಗೆ ಸ್ವಾಮಿಯ ವಿರುದ್ಧ ದೂರು ನೀಡುತ್ತಾರೆ. ಮಠದ ದೂರಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಪೋಲೀಸರಿಗೆ ನೀವು ಶಹಬ್ಬಾಸ್ ಕೊಡುವ ತೀರ್ಮಾನ ಮಾಡಿದ್ದರೆ ಒಂದು ಕ್ಷಣ ನಿಲ್ಲಿ! ಅತ್ಯಾಚಾರ, ಬಲಾತ್ಕಾರದಂತಹ ಗಂಭೀರ ಆರೋಪಗಳಿರುವ ದೂರು ಬಂದಾಗ್ಯೂ ನಮ್ಮ ಪೋಲೀಸರು ಅಲ್ಲಾಡುವುದಿಲ್ಲ ಅಥವಾ ಅವರನ್ನು ಅಲ್ಲಾಡದಂತೆ ತಡೆಹಿಡಿಯಲಾಯಿತು. ಕೆಳಗಿನ ಹಂತದ ನ್ಯಾಯಾಲಯದಲ್ಲಿ ರಾಘವೇಶ್ವರ ಸ್ವಾಮಿಗಳ ವಿರುದ್ಧ ಕೇಳಿಬಂದಿರುವ ಆರೋಪ ಹುರುಳಿಲ್ಲದ್ದು, ಅದನ್ನು ರದ್ದುಗೊಳಿಸಬೇಕು ಎಂಬ ಅಹವಾಲು ಮಠದ ಕಡೆಯಿಂದ ಬಂತು. ಜೊತೆಯಲ್ಲೇ ಈ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಮಾತನಾಡಬಾರದು ಮಾಧ್ಯಮಗಳಲ್ಲಿ ಸುದ್ದಿ ಬರಬಾರದು ಎಂಬಂತಹ ಬೇಡಿಕೆಗಳೂ ಸೇರಿಹೋಗಿದ್ದವು. ಕೊನೆಗೆ ಹೈಕೋರ್ಟ್ ಕಾನೂನಿನ ಮುಂದೆ ಎಲ್ಲರೂ ಸಮಾನರು, ರಾಘವೇಶ್ವರ ಸ್ವಾಮಿಯವರನ್ನು ಬಂಧಿಸುವ ವಿಚಾರಣೆಗೊಳಪಡಿಸುವ ವಿವೇಚನೆ ತನಿಖಾಧಿಕಾರಿಗಳಿಗೆ ಸೇರಿದ್ದು ಎಂದು ಹೇಳಿ ಆರೋಪದ ತನಿಖೆ ಪ್ರಾರಂಭವಾಗುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಕೇಂದ್ರದ ಮಹಿಳಾ ಆಯೋಗ ಸ್ವಯಂದೂರು ದಾಖಲಿಸಿಕೊಂಡು ತನಿಖೆ ಮಾಡಲು ಕರ್ನಾಟಕಕ್ಕೆ ಬಂದಿದೆ. ಪ್ರೇಮಲತಾರವರ ವಿಚಾರಣೆಯನ್ನೂ ಮಾಡಿದೆ. ಪೋಲೀಸರು ಯಾವುದೇ ಒತ್ತಡವಿಲ್ಲದೆ – ಪೂರ್ವಾಗ್ರಹಗಳಿಲ್ಲದೆ ಕಾರ್ಯನಿರ್ವಹಿಸಿದ್ದರೆ ಒಂದು ಕ್ರಿಮಿನಲ್ ಪ್ರಕರಣವನ್ನು ಮಹಿಳಾ ಆಯೋಗ ತನಿಖೆ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತೇ?
ಇಲ್ಲಿ ರಾಘವೇಶ್ವರ ಸ್ವಾಮಿಗಳಾಗಲೀ ಪ್ರೇಮಲತಾ ದಿವಾಕರ್ ಶಾಸ್ತ್ರಿಗಳಾಗಲೇ ಅಪರಾಧಿಗಳಲ್ಲ ಆಪಾದಿತರಷ್ಟೇ. ಒಂದು ಆಪಾದನೆ ಬಂದಾಗ ಅದನ್ನು ಸೂಕ್ತವಾಗಿ ವಿಚಾರಣೆ ಮಾಡದೆ ಸತ್ಯಾಂಶ ಹೊರಬರಲು ಸಾಧ್ಯವೇ? ಇಬ್ಬರು ದೂರುದಾರರಲ್ಲಿ ಒಬ್ಬರು ಅಪರಾಧಿಗಳಾಗಿರುವಾಗ ಇಬ್ಬರನ್ನೂ ಸಮಾನವಾಗಿ ಕಾಣದೆ ಮೇಲ್ನೋಟಕ್ಕೆ ಸಂಪೂರ್ಣವಾಗಿ ಒಬ್ಬರ ಪರವಾಗಿ ನಿಂತಿರುವ ವ್ಯವಸ್ಥೆ ಅಸಮಾನತೆಯ ಸಮಾಜವನ್ನು ಪ್ರತಿಬಿಂಬಿಸುತ್ತಿದೆ. ಸ್ವಾಮೀಜಿಗಳು ಚಾತುರ್ಮಾಸ್ಯದ ವ್ರತದಲ್ಲಿದ್ದಾರೆ, ಆದ್ದರಿಂದ ಅವರನ್ನು ವಿಚಾರಣೆ ನಡೆಸಿದರೆ, ಬಂಧಿಸಿದರೆ ಒಂದು ಸಮಾಜದ ಜನ, ಒಂದು ಧರ್ಮದ ಜನ ನೊಂದುಹೋಗುತ್ತಾರೆ, ರೊಚ್ಚಿಗೇಳುತ್ತಾರೆ ಎಂಬುದೇ ವಿಚಾರಣೆಯನ್ನು ಮುಂದೂಡಲು ಕಾರಣವಾದರೆ ಹದಿನೈದಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದೇ ನೆಪವಾಗಿ ಜಯಲಲಿತಾರನ್ನು ಬಿಟ್ಟುಬಿಡಬೇಕಷ್ಟೇ.
ದೇಶದಲ್ಲಿ ದೈವಾಂಶ ಸಂಭೂತರು, ದೇವಮಾನವರು ಮತ್ತು ಸ್ವಾಮೀಜಿಗಳ ಮೇಲಿನ ಆರೋಪಗಳು ಹೊಸತಲ್ಲ. ಭೂಕಬಳಿಕೆ, ಮಹಿಳೆ, ಮಕ್ಕಳ ಮೇಲೆ ನಡೆಸಿದ ಲೈಂಗಿಕ ಹಲ್ಲೆಗಳು, ಕೆಲವೊಮ್ಮೆ ಅವರ ಕುಮ್ಮಕ್ಕಿನಿಂದಲೇ ನಡೆದುಹೋದ ಕೊಲೆಗಳು – ಹೀಗೆ ಜನಸಾಮಾನ್ಯರು ನಡೆಸುವ ಎಲ್ಲಾ ರೀತಿಯ ಅಪರಾಧಗಳು ದೇವರ ಜೊತೆಗೇ ಸಂಭಾಷಣೆ ನಡೆಸುವವರಿಂದಲೂ ನಡೆಯುತ್ತವೆ. ಅಲ್ಲಿಗೆ ಸಾಮಾನ್ಯರ ರೀತಿ ಬದುಕುವುದನ್ನು ತೊರೆದ ಮೇಲೂ ಸಾಮಾನ್ಯರಲ್ಲಿ ಜಾಗ್ರತವಾಗಿರುವ ನವರಸಗಳ ಅನುಭೂತಿಯಿಂದ ಮುಕ್ತಿ ಪಡೆಯಲು ಅವರುಗಳಿಗೆ ಸಾಧ್ಯವಾಗಿಲ್ಲ. ಭೂಕಬಳಿಕೆಯಂತಹ ಪ್ರಕರಣಗಳು ಬಹಳಷ್ಟು ಬಾರಿ ಕಬಳಿಕೆ ಮಾಡಿದ ಭೂಮಿಯಲ್ಲಿ ಶಿಕ್ಷಣ ಸಂಸ್ಥೆಯೋ, ಮಠವೋ ಕಟ್ಟುಬಿಟ್ಟ ಕಾರಣ ವಿವಿಧ ಜಾತಿ ಜನಾಂಗದ ರಾಜಕೀಯ ಮುಖಂಡರ ಒತ್ತಡದಿಂದ ಸರಕಾರಗಳೇ ಸುಮ್ಮನಾಗಿಬಿಡುವುದೂ ಇದೆ. ಗಣಪತಿ ಸಚ್ಚಿದಾನಂದ ಆಶ್ರಮ, ಸುತ್ತೂರು ಮಠ, ಆದಿಚುಂಚನಗಿರಿ ಮಠ, ಮಾತಾ ಅಮೃತಾನಂದಮಯಿ ಮಠ – ಹೀಗೆ ಬಹುತೇಕ ಪ್ರಮುಖ ಮಠಗಳು ಒಂದಲ್ಲ ಒಂದು ಹಂತದಲ್ಲಿ ಭೂಕಬಳಿಕೆಯ ಆರೋಪಕ್ಕೆ ಒಳಗಾದಂತವೇ ಆಗಿವೆ. ಭೂಕಬಳಿಕೆಯ ಆರೋಪದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಭೂಕಬಳಿಕೆಯಲ್ಲಿ ಮಠವೊಂದರ ಆಡಳಿತ ವರ್ಗದ ಪಾತ್ರ ಹೆಚ್ಚಿರುವುದನ್ನು ಅಲ್ಲಗಳೆಯಲಾಗದು. ಆದರೆ ವೈಯಕ್ತಿಕ ಪರಿಧಿಯ ಲೈಂಗಿಕ ದೌರ್ಜನ್ಯಗಳು ಕೂಡ ಭಾರತದಲ್ಲಿ ಹೊಸದಲ್ಲ.
ಬಹುಶಃ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಪಡೆದಿದ್ದು ಪುಟ್ಟಪರ್ತಿಯ ಸಾಯಿಬಾಬಾ ಪ್ರಕರಣ. ಎಪ್ಪತ್ತರ ದಶಕದಿಂದಲೇ ಸಾಯಿಬಾಬಾರವರ ಮೇಲೆ ಚಿಕ್ಕ ಹುಡುಗರನ್ನು ಮತ್ತು ಯುವಕರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುವ ಆರೋಪಗಳಿತ್ತು. ಶಿರಡಿ ಸಾಯಿಬಾಬಾರವರ ಮುಂದುವರಿಕೆ ನಾನು ಎಂದೇ ಪ್ರಸಿದ್ಧಿಗೆ ಬಂದಿದ್ದ ಪುಟ್ಟಪರ್ತಿ ಸಾಯಿಬಾಬಾರವರಿಗೆ ಬಹುತೇಕ ಎಲ್ಲಾ ಪಕ್ಷಗಳಲ್ಲೂ ಅಭಿಮಾನಿಗಳಿದ್ದರು, ಅಂಧಾಭಿಮಾನಿಗಳಿದ್ದರು. ಇಲ್ಲದಿದ್ದರೆ ಅಷ್ಟೊಂದು ಆರೋಪಗಳಿದ್ದಾಗ್ಯೂ ಅವರ ಮೇಲೆ ಯಾವುದೇ ಕ್ರಮಕೈಗೊಳ್ಳದೇ ಇರಲು ಸಾಧ್ಯವಾಗುತ್ತಿತ್ತೇ? ಬಿಬಿಸಿ ಆ ಆರೋಪಗಳ ಬೆನ್ನು ಹತ್ತಿ ತನಿಖಾ ವರದಿಯನ್ನೂ ಮಾಡುತ್ತದೆ. ‘ವಿದೇಶದಲ್ಲಿ ಸಾಯಿಬಾಬಾರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸಹಿಸಲಾಗದೆ ಮಾಡುತ್ತಿರುವ ಆರೋಪಗಳಿವು’ ಎಂದು ಆರೋಪಗಳನ್ನು ತೇಲಿಸಲಾಗುತ್ತಿತ್ತು. ಆದರಿದುವರೆಗೂ ಸಾಯಿಬಾಬಾರ ಕೋಣೆಯಲ್ಲಿ 1993ರಲ್ಲಿ ನಡೆದುಹೋದ ನಾಲ್ಕು ಯುವಕರ ಹತ್ಯೆ ಕೂಡ ಯಾವುದೇ ಸೂಕ್ತ ತನಿಖೆಗಳು ನಡೆಯದೆ ಸ್ವರಕ್ಷಣೆಗಾಗಿ ಆಶ್ರಮದ ಸಿಬ್ಬಂದಿ ಹತ್ಯೆ ಮಾಡಿದರು ಎಂಬ ಶರಾದೊಂದಿಗೆ ಮುಚ್ಚಿ ಹೋಯಿತು. ಇನ್ನು ಓಶೋ ರಜನೀಶರು ತಮ್ಮ ಮುಕ್ತ ಸೆಕ್ಸ್ ಬಗೆಗಿನ ಮಾತುಕತೆಯಿಂದ ಸಮಾಜವನ್ನು ಬೆಚ್ಚಿ ಬೀಳಿಸಿದವರು. ಅವರ ಸೆಕ್ಸ್ ಬಗೆಗಿನ ಮಾತುಗಳಷ್ಟೇ ಚರ್ಚೆಯ ವಿಷಯಗಳಾಗಿ ಇತರೆ ಬರಹಗಳು ಭಾಷಣಗಳು ಹಿಂದೆ ಸರಿದು ಹೋದವು ಎಂಬುದೂ ಸತ್ಯ. ಮಾದಕ ವಸ್ತುಗಳ ಉಪಯೋಗ, ಲೈಂಗಿಕತೆಯ ಆರೋಪಗಳಿಂದ ಅಮೆರಿಕಾಗೆ ಓಡಿಹೋಗಿ ಅಲ್ಲಿಂದಲೂ ಓಡಿಸಿಕೊಂಡವರವರು.
ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು ಅಸಾರಾಮ್ ಬಾಪುರ ವಿರುದ್ಧ. ಹದಿನಾರು ವರುಷದ ಹುಡುಗಿಯೊಬ್ಬಳು ಬಾಪುರನ್ನು ನೋಡಲು ತೆರಳುತ್ತಾಳೆ, ಹೊರಗಡೆ ಹುಡುಗಿಯ ಅಮ್ಮ ಕಾದು ಕುಳಿತಿರುತ್ತಾರೆ. ಒಳಗಡೆ ಆ ಹುಡುಗಿಯ ಮೇಲೆ ಅಸಾರಾಮ್ ಬಾಪು ಲೈಂಗಿಕ ದೌರ್ಜನ್ಯ ನಡೆಸುತ್ತಾರೆ! ಪೋಲೀಸ್ ಕೇಸ್ ಆದ ನಂತರ ಅಸಾರಾಮ್ ಬಾಪುವಿನ ಅಪಾರ ಬೆಂಬಲಿಗರು ಅವರನ್ನು ‘ರಕ್ಷಿಸಲು’ ನಿಲ್ಲುತ್ತಾರೆ. ರಾಜಕೀಯ ಪಕ್ಷಗಳ ಮುಖಂಡರೂ ಅಸಾರಾಮ್ ಬಾಪುರನ್ನು ರಕ್ಷಿಸಲು ಬೇಕಾದ ಎಲ್ಲಾ ಕಸರತ್ತುಗಳನ್ನೂ ಮಾಡುತ್ತಾರೆ. ನಾಗರೀಕವೆನ್ನಿಸಿಕೊಂಡ ಸಮಾಜವೊಂದು ಅನಾಗರೀಕ ಕಾರ್ಯವನ್ನು ಸಂರಕ್ಷಿಸಿಕೊಳ್ಳುವ ಪರಿಯಿದು. ಕೊನೆಗೂ ಅವರ ಬಂಧನವಾಗುತ್ತದೆ, ಲೈಂಗಿಕ ಕಿರುಕುಳದ ಆರೋಪದ ಜೊತೆಜೊತೆಗೆ ಕೆಲವು ವರುಷಗಳ ಹಿಂದೆ ನಿಗೂಢವಾಗಿ ಸತ್ತು ಹೋಗಿದ್ದ ಇಬ್ಬರು ಯುವಕರ ಕೊಲೆ ಪ್ರಕರಣದ ವಿಚಾರಣೆಯಲ್ಲೂ ಬಾಪುವಿನ ಹೆಸರು ಕೇಳಿ ಬರುತ್ತದೆ.
Nithyananda case
ನಿತ್ಯಾನಂದ
ಇನ್ನು ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ರಂಜನೀಯವಾಗಿ ನಡೆಯುತ್ತಿರುವ ಪ್ರಕರಣ ಬಿಡದಿಯ ಬಳಿ ಆಶ್ರಮವಾಸಿಯಾಗಿರುವ ಆಧ್ಯಾತ್ಮ ಗುರು ನಿತ್ಯಾನಂದರದ್ದು. ನಿತ್ಯಾನಂದ ಮತ್ತು ಚಿತ್ರನಟಿ ರಂಜಿತಾ ಜೊತೆಗಿರುವ ಸರಸ ಸಲ್ಲಾಪದ ವಿಡೀಯೋ ತುಣುಕುಗಳು ವಾಹಿನಿಗಳಿಗೆ ಲಭ್ಯವಾಗಿ ನಿತ್ಯಾನಂದರ ವಿರುದ್ಧ ಆಕ್ರೋಶ ಮಡುಗಟ್ಟಿ ಅನೇಕ ಸ್ಥಳೀಯ ಸಂಸ್ಥೆಗಳು ಅವರ ವಿರುದ್ಧ ಪ್ರತಿಭಟನೆಗೆ ಇಳಿಯುತ್ತವೆ. ನಿತ್ಯಾನಂದರ ಬಂಧನವೂ ನಡೆಯುತ್ತದೆ. ತದನಂತರ ಬಿಡುಗಡೆಯೂ ಆಗುತ್ತಾರೆ. ಬೇರೆಲ್ಲ ಪ್ರಕರಣಗಳಂತೆ ಈ ಪ್ರಕರಣದಲ್ಲೂ ನಿತ್ಯಾನಂದರ ಶಿಷ್ಯವರ್ಗ ಅವರನ್ನು ಸಮರ್ಥಿಸಿಕೊಳ್ಳುತ್ತದೆ. ಆರತಿ ರಾವ್ ಎಂಬ ಮಹಿಳೆ ನಿತ್ಯಾನಂದರ ಮೇಲೆ ಅತ್ಯಾಚಾರದ ಕೇಸನ್ನು ದಾಖಲಿಸುತ್ತಾರೆ. ಅದನ್ನೂ ನಿತ್ಯಾನಂದ ತಿರಸ್ಕರಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಗಮನಿಸಬೇಕಾದ್ದೆಂದರೆ ಚಿತ್ರನಟಿ ರಂಜಿತಾ ನಿತ್ಯಾನಂದರ ವಿರುದ್ಧ ಬಲಾತ್ಕಾರದ ಆರೋಪವನ್ನೇನೂ ಹೊರಿಸುವುದಿಲ್ಲ, ಕೆಲವು ತಿಂಗಳುಗಳ ನಂತರ ಮತ್ತೆ ಆಶ್ರಮಕ್ಕೆ ಭೇಟಿ ನೀಡುವ ರಂಜಿತಾ ಅಲ್ಲಿನ ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ! ಸ್ಥಳೀಯ ಜನಬೆಂಬಲ, ರಾಜಕೀಯ ಬೆಂಬಲವಿಲ್ಲದ ಕಾರಣದಿಂದಲೋ ಏನೋ ಉಳಿದ ಸ್ವಾಮೀಜಿಗಳ ಗುರುಗಳ ವಿರುದ್ಧ ವಿಳಂಬ ಧೋರಣೆ ತಾಳುವ ತನಿಖೆಗಳು ನಿತ್ಯಾನಂದರ ವಿಷಯದಲ್ಲಿ ಒಂದಷ್ಟು ಚುರುಕಾಗಿವೆ. ಅವರ ಪೌರುಷದ ಪರೀಕ್ಷೆ ನಡೆಸುವಷ್ಟರ ಮಟ್ಟಿಗೆ ಶಕ್ತವಾದ ತನಿಖೆ ನಡೆಸುತ್ತಿವೆ. ಆರತಿ ರಾವ್ ಆರೋಪವನ್ನೊರತುಪಡಿಸಿದರೆ ರಂಜಿತಾರ ಜೊತೆಗಿನ ವಿಡೀಯೋ ತುಣುಕುಗಳು ನಿತ್ಯಾನಂದರನ್ನು ಅಪರಾಧಿಯನ್ನಾಗಿ ಮಾಡುವ ಸಂಭವ ಕಡಿಮೆ, ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸುವುದು ಸಾಧ್ಯವಿಲ್ಲವಲ್ಲ.
ಹಲವಷ್ಟು ಬಂಧನದ ನಂತರವೂ ಸ್ವಾಮೀಜಿಗಳಿಗೆ ಶಿಕ್ಷೆಯಾಗುವುದು ಅಪರೂಪದಲ್ಲಿ ಅಪರೂಪ. ಕಂಚಿಯ ಜಯೇಂದ್ರ ಸರಸ್ವತಿ ಕಂಚೀಪುರದ ವರದರಾಜ ಪೆರುಮಾಳ್ ದೇವಸ್ಥಾನದ ಮ್ಯಾನೇಜರ್ ಶಂಕರಮಣನ್ ಹತ್ಯೆಯ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರು. ಕೊನೆಗೆ ಸಾಕ್ಷ್ಯಾಧಾರದ ಕೊರತೆಯಿಂದ ಆರೋಪ ಸಾಬೀತಾಗದೆ ಖುಲಾಸೆಯಾಗಿದ್ದಾರೆ. ಅವರು ಅಪರಾಧಿಗಳೋ ನಿರಪರಾಧಿಗಳೋ ಎಂಬುದನ್ನು ತನಿಖೆ (ತನಿಖೆಯಲ್ಲಿ ಆಗುವ ಲೋಪಗಳು, ಸಾಕ್ಷಿಗಳು ಪ್ರತಿಕೂಲವಾಗಲು ಬರುವ ಬೆದರಿಕೆಭರಿತ ಒತ್ತಡಗಳನ್ನು ಮರೆಯಲಾಗದಿದ್ದರೂ ಕೊನೆಪಕ್ಷ ಹೆಸರಿಗಾದರೂ ಒಂದು ತನಿಖೆ ನಡೆಯಿತಲ್ಲ ಎಂದು ಬಹಳಷ್ಟು ಪ್ರಕರಣಗಳಲ್ಲಿ ಸಮಾಧಾನಪಟ್ಟುಕೊಳ್ಳಬೇಕು!) ಮತ್ತು ತನಿಖೆಯ ವಿಚಾರಣೆ ನಡೆಸಿದ ನ್ಯಾಯಾಲಯಗಳು ತೀರ್ಮಾನಿಸಬೇಕೆ ಹೊರತು ಜನರೇ ಭಾವುಕವಾಗಿ ನಿರಪರಾಧಿಯೆಂದೋ ಅಥವಾ ಅಪರಾಧಿಯೆಂದೋ ನಿರ್ಧರಿಸಿಬಿಡುವುದು ಎಷ್ಟರ ಮಟ್ಟಿಗೆ ಸರಿ. ಮತ್ತು ಜನರನ್ನು ಈ ರೀತಿ ಭಾವುಕವಾಗಿಸುವ ರೀತಿಯಲ್ಲಿ ದೈವಾಂಶ ಸಂಭೂತರು ಮಾತನಾಡುವುದು ಎಷ್ಟು ಸರಿ?
ಹೈಕೋರ್ಟಿನ ಆದೇಶದ ಮೇಲೆ ರಾಘವೇಶ್ವರ ಸ್ವಾಮಿಗಳ ಮೇಲಿನ ತನಿಖೆ ಚುರುಕು ಪಡೆಯಬಹುದೆಂದು ನಿರೀಕ್ಷಿಸಬಹುದು. ಸ್ವಾಮಿಗಳ ವಿಚಾರಣೆ ನಡೆಯುವುದಕ್ಕೂ ಮುಂಚೆಯೇ ಭಾರತೀಯ ಜನತಾ ಪಕ್ಷದ ಪ್ರಮೀಳಾ ನೇಸರ್ಗಿಯಂತಹ ಮಹಿಳಾ ನಾಯಕರು ‘ಇದು ಸುಳ್ಳು ಕೇಸು’ ಎಂದು ಸ್ವಾಮಿಯ ಪರ ವಕಾಲತ್ತು ವಹಿಸಿ ಮಾತನಾಡಿರುವುದನ್ನು ನೋಡಿದರೆ ಎಷ್ಟರ ಮಟ್ಟಿಗೆ ನಿಷ್ಪಕ್ಷವಾಗಿ ತನಿಖೆ ನಡೆಯಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ. ರಾಜ್ಯದಲ್ಲಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರವಾದ್ದರಿಂದ ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಪಿತೂರಿಗೆ ಬೆಲೆ ಸಿಗುವುದಿಲ್ಲವೆಂದುಕೊಳ್ಳುವಂತಿಲ್ಲ. ದ್ವಾರಕಾನಾಥರು ಹೇಳಿದಂತೆ ‘ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಇದೆ’! ದಿವಾಕರ ಶಾಸ್ತ್ರಿಯವರ ತಮ್ಮ ಶ್ಯಾಮ ಶಾಸ್ತ್ರೀ ಮಠದ ಪರವಾಗಿ ಹೇಳಿಕೆ ಕೊಡಬೇಕೆಂದು ಬಂದ ಸತತ ಒತ್ತಡದಿಂದ ಬೇಸತ್ತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ತನ್ನ ಗಂಡನ ಸಾವಿಗೆ ಮಠದಿಂದ ಬರುತ್ತಿದ್ದ ಬೆದರಿಕೆ ಕರೆಗಳೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಅದರ ತನಿಖೆಯೂ ಕುಂಟುತ್ತಾ ಸಾಗಿದೆ. ಇಷ್ಟೆಲ್ಲಾ ಆರೋಪಗಳನ್ನು ಹೊತ್ತ, ಒತ್ತಡ ವಶೀಲಿಬಾಜಿ ನಡೆಸುತ್ತಿರುವ ಮಠವೊಂದರ ಪರವಾಗಿ ವಿದ್ಯಾವಂತರೂ ನಿಲ್ಲುತ್ತಾರೆ ಎಂದರೆ ನಮ್ಮ ಸುಶಿಕ್ಷತೆಯ ಬಗ್ಗೆಯೇ ಅನುಮಾನಗಳು ಕಾಡುತ್ತವೆ. ಜಾತಿಯ ಕಾರಣದಿಂದಾಗಿ ಹವ್ಯಕರು ರಾಘವೇಶ್ವರರನ್ನು ಬೆಂಬಲಿಸುವ ಮಾತನಾಡುವವರು ಒಂದೆಡೆಯಾದರೆ, ಇದು ಹಿಂದೂ ಗುರುಗಳನ್ನು ತುಳಿಯಲು ನಡೆಯುವ ಹುನ್ನಾರ ಎಂದು ಇಡೀ ಪ್ರಕರಣಕ್ಕೆ ಕೋಮುಬಣ್ಣ ಹಚ್ಚುವವರು ಇನ್ನೊಂದೆಡೆ. “ಥೂ… ಈ ಹವ್ಯಕ ಬೋ…ಮಕ್ಕಳಿಗೆ ಬೇರೆ ಕೆಲಸ ಇಲ್ಲ. ರಾಘವೇಶ್ವರ ಸ್ವಾಮಿಗೆ ಬೆಂಬಲ ಕೊಡಲು ಈ ಪುಟ ಲೈಕ್ ಮಾಡಿ, ಈ ನಂಬರ್ರಿಗೆ ಮಿಸ್ಡ್ ಕಾಲ್ ಕೊಡಿ ಎಂದು ಮೆಸೇಜ್ ಮೇಲೆ ಮೆಸೇಜ್ ಕಳುಹಿಸ್ತಾರೆ…ಥೂ ಇವ್ರ” ಎಂದು ಹೇಳಿದ ಹವ್ಯಕ ಗೆಳೆಯನೊಬ್ಬ ನಾಗರೀಕ ಸಮಾಜದ ಅನಾಗರೀಕತೆಯ ಮೇಲೆ ಬೆಳಕು ಚೆಲ್ಲಿದ.
(ಪ್ರಜಾಸಮರಕ್ಕೆ ಬರೆದ ಲೇಖನ)
 

7 comments:

  1. edannu baredavanu kochchelli huttidavanu endu balasida shabdadinda saabitaguttade

    ReplyDelete
  2. ಧನ್ಯವಾದ ಪ್ರತಿಕ್ರಿಯೆಗೆ :-)

    ReplyDelete
  3. kamale kannige kanuvadella haldiye.
    nimage aa tara kanuvdarinda iidi samajada bagge nivadiruvudu sari illa.

    ReplyDelete
  4. sathyana janagalige aragisikollaagade..vichitra comments madidaare

    ReplyDelete
  5. @Anonymous ಯಾವ ಕಾಮಾಲೆಯ ಬಗ್ಗೆ ಮಾತನಾಡುತ್ತಿದ್ದೀರೋ ತಿಳಿಯಲಿಲ್ಲ...

    ReplyDelete
  6. iidi samajada bagge nivu heluruva danan kaayile endu pariganisi. haladi iruva(aa background)nimage purti samaja matte hege kanisutte?

    ReplyDelete
  7. @anonymous.... ನೀವು ಇಂಗ್ಲೀಷಿನಲ್ಲಿ ಕನ್ನಡ ಟೈಪಿಸಿರುವುದರಿಂದ ಸರಿಯಾಗಿ ಅರ್ಥವಾಗಲಿಲ್ಲ...ಹಳದಿ ಬ್ಯಾಕ್ ಗ್ರೌಂಡ್ ಎಂದರೆ ಏನು ಎಂದು ನನಗಂತೂ ತಿಳಿದಿಲ್ಲ. ಇಡೀ ಸಮಾಜ ಮತ್ತೆ ಹೇಗೆ ಕಾಣಿಸುತ್ತೆ ಎಂಬ ಪ್ರಶ್ನೆಯ ಅರ್ಥವಾಗಲಿಲ್ಲ.... ಕಾನೂನು ಮತ್ತು ಸರಕಾರಗಳು ಹೇಗೆ ವ್ಯಕ್ತಿಗಳ ವರ್ಚಸ್ಸಿನಿಂದಾಗಿ ಪ್ರಭಾವಿತಗೊಂಡು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಈ ಲೇಖನದ ಉದ್ದೇಶ. ಕಾಮಾಲೆ ರೋಗದ ಬಗ್ಗೆ ಬಹಳಷ್ಟು ಹೇಳಿದ್ದೀರಿ - ನಿಜದ ವಿಷಯವೆಂದರೆ ಕಾಮಾಲೆ ರೋಗವಿರುವವರ ಮೈಬಣ್ಣ ಹಳದಿ ಇರುತ್ತದೆಯೇ ಹೊರತು ಅವರಿಗೆ ಕಾಣಿಸುವುದು ಹಳದಿಯಿರುವುದಿಲ್ಲ!! :-)

    ReplyDelete