Oct 27, 2014

ಮಾಧ್ಯಮ ಮತ್ತು ಜನಸಾಮಾನ್ಯ

media and common man
Dr Ashok K R


ಭಾರತದ ಮಕ್ಕಳ ಏಳಿಗೆಗಾಗಿ, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರ ವಿರುದ್ಧ ಅವಿರತ ಹೋರಾಟ ಮಾಡಿದ ಕೈಲಾಶ್ ಸತ್ಯಾರ್ಥಿ ಎನ್ನುವವರಿಗೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಹಿಯ ಜೊತೆಗೆ ಜಂಟಿಯಾಗಿ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಘೋಷಣೆಯಾಯಿತು. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದ ನೋಬಲ್ ಪ್ರಶಸ್ತಿ ಸಂತಸ ನೀಡುವುದರ ಜೊತೆಜೊತೆಗೆ “ಯಾರಿದು ಕೈಲಾಶ್ ಸತ್ಯಾರ್ಥಿ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಬಹುಶಃ ಕೈಲಾಶ್ ಸತ್ಯಾರ್ಥಿಯ ಸಂಘಟನೆಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇನ್ಯಾರಿಗೂ ಅವರ ಹೆಸರಾಗಲೀ ಅವರ ಕೆಲಸ ಕಾರ್ಯಗಳಾಗಲೀ ತಿಳಿದೇ ಇರಲಿಲ್ಲ. ನೋಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆಯೂ ಅವರ ಬಗ್ಗೆಯೇ ಮಾತು, ಅವರ ಬಗ್ಗೆಯೇ ಚರ್ಚೆ. ದೂರದೂರಿನವರಿಗಿರಲಿ ಅವರು ಕೆಲಸ ಮಾಡುತ್ತಿದ್ದ ರಾಜ್ಯದ ಹೆಚ್ಚಿನ ಜನರಿಗೂ ಅವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲವಂತೆ. ಎಲೆಮರೆಕಾಯಿಯಂತೆ ಅವರು ಕೆಲಸ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳಬಹುದಾದರೂ ಜನಸಾಮಾನ್ಯರಿಗೆ ಜನಸಾಮಾನ್ಯರ ಮಧ್ಯೆಯೇ ಇದ್ದು ಅತ್ಯುತ್ತಮವೆನ್ನಿಸುವಂತಹ ಕೆಲಸ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿಯವರನ್ನು ನೋಬೆಲ್ ಬರುವುದಕ್ಕೆ ಮುಂಚೆಯೇ ಪರಿಚಯಿಸುವ ಕೆಲಸ ಮಾಧ್ಯಮದ್ದಾಗಿತ್ತಲ್ಲವೇ? ಒಬ್ಬ ವ್ಯಕ್ತಿ ಆತನ ಕೆಲಸಗಳು ನಮ್ಮ ಮಾಧ್ಯಮದಲ್ಲಿ ಬರುವುದಕ್ಕೂ ವಿದೇಶಿ ಪ್ರಶಸ್ತಿಯೊಂದು ಅವರಿಗೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಾದರೂ ಯಾಕೆ?

ಕೈಲಾಶ್ ಸತ್ಯಾರ್ಥಿಯ ಘಟನೆ ಇಂದಿನ ಮಾಧ್ಯಮ ಜನಸಾಮಾನ್ಯರಿಂದ ಎಷ್ಟು ದೂರವಾಗಿದೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ. ಇಷ್ಟಕ್ಕೂ ಜನಸಾಮಾನ್ಯನ ದೃಷ್ಟಿಯಲ್ಲಿ ಮಾಧ್ಯಮಗಳ ಕರ್ತವ್ಯವೇನು ಮತ್ತದು ನಡೆದುಕೊಳ್ಳುತ್ತಿರುವ ರೀತಿ ಎಂತಹುದು ಎಂಬುದನ್ನು ಅವಲೋಕಿಸಿದರೆ ಮಾಧ್ಯಮ ಮತ್ತು ಜನಸಾಮಾನ್ಯನ ನಡುವಿನ ಅಂತರವು ಹೆಚ್ಚುತ್ತಾ ಮಾಧ್ಯಮಗಳು ಆಳುವ ವರ್ಗಗಳ ಕಡೆಗೆ ಹೆಚ್ಚೆನ್ನಿಸುವಷ್ಟೇ ವಾಲಿರುವ ಸತ್ಯದ ಅರಿವಾಗುತ್ತದೆ. ಕೆಲವೆಡೆ ಆಡಳಿತದ ತೆಕ್ಕೆಗೆ ಬೀಳುವಷ್ಟು ವಾಲಿಬಿಟ್ಟಿರುವುದೂ ಹೌದು! ಮಾಧ್ಯಮವೆಂದರೆ ಅನಧಿಕೃತ ವಿರೋಧ ಪಕ್ಷವಾಗಿ ಆಡಳಿತಶಾಹಿಯ ಹುಳುಕುಗಳನ್ನು ಬಯಲಿಗೆಳೆಯುವ, ಸಮಾಜದ ಓರೆಕೋರೆಗಳನ್ನು ಆಡಳಿತಶಾಹಿಯ ಗಮನಕ್ಕೆ ತರುವ ಕೆಲಸ ಮಾಡಬೇಕು. ಹಾಗೆಂದ ಮಾತ್ರಕ್ಕೆ ಸಮಾಜದ, ಆಡಳಿತದ ನಕರಾತ್ಮಕ ಅಂಶಗಳಷ್ಟೇ ಮಾಧ್ಯಮದಲ್ಲಿರಬೇಕೆಂದಲ್ಲ. ತಮ್ಮ ತಮ್ಮ ಪರಿಧಿಯಲ್ಲಿ, ಕೆಲವೊಮ್ಮೆ ಸರಕಾರದ ಯಾವೊಂದು ನೆರವೂ ಇಲ್ಲದೆ, ಕೆಲವೊಮ್ಮೆ ಪ್ರಜ್ಞಾಪೂರ್ವಕ ಅರಿವೂ ಇಲ್ಲದೆ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುವವರ ಬಗ್ಗೆಯೂ ತಿಳಿಸಬೇಕು. ಹತ್ತು ಜನರ ಸ್ವಾರ್ಥ ರಹಿತ ಬದುಕು ದೂರದ ಊರಿನ ಅಜ್ಞಾತ ನೋಡುಗನನ್ನೋ ಓದುಗನನ್ನೋ ತಲುಪಿ ಅದರಿಂದ ಸ್ಪೂರ್ತಿ ಪಡೆದು ಕನಿಷ್ಟ ಒಬ್ಬನಾದರೂ ತನ್ನ ಬದುಕಿನಲ್ಲಿ ಸಮಾಜಕ್ಕೆ ಪೂರಕವಾದ ಕೆಲ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾನೆ. ಒಂದು ಕಾಲದಲ್ಲಿ ಚಳುವಳಿಗಳನ್ನು ರೂಪಿಸುವಲ್ಲಿ, ಬಲಪಡಿಸುವುದರಲ್ಲಿ ಕೈಜೋಡಿಸುತ್ತಿದ್ದ ಮಾಧ್ಯಮಗಳು ಇವತ್ತು ಚಳುವಳಿಯೊಂದನ್ನು ನಾಶಗೊಳಿಸದಿದ್ದರೆ ಅದೇ ಪುಣ್ಯ ಎಂಬ ಪರಿಸ್ಥಿತಿಯಲ್ಲಿವೆ.
ಇತ್ತೀಚಿನ ವರುಷಗಳಲ್ಲಿ ಮಾಧ್ಯಮದಿಂದ ದಿಡೀರ್ ರೂಪಿತವಾಗಿ ಬಲಿಷ್ಟವಾಗಿ ಬೆಳೆದು ಅಷ್ಟೇ ವೇಗವಾಗಿ ಕಣ್ಮರೆಯೂ ಆಗಿಹೋಗುವಂತೆ ಕಾಣುತ್ತಿರುವ ಚಳುವಳಿಯೆಂದರೆ ಭ್ರಷ್ಟಾಚಾರ ವಿರೋಧಿ ಚಳುವಳಿ. ಮೊದಲಿಗೆ ಅಣ್ಣಾ ಹಜಾರೆ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರಾರಂಭವಾದ ‘ಭ್ರಷ್ಟಾಚಾರ ವಿರೋಧಿ ಚಳುವಳಿ’ ಕೆಲವೇ ದಿನಗಳಲ್ಲಿ ದೇಶದ ವಿವಿದೆಡೆ ಹಬ್ಬಿ ಆಡಳಿತದಲ್ಲಿದ್ದ ಯು.ಪಿ.ಎ ಸರಕಾರ ನಡುಗಿಹೋಗಿದೆ, ದೇಶದಲ್ಲಿ ಭ್ರಷ್ಟಾಚಾರ ತೊಲಗೇ ಹೋಯಿತು ಎಂಬ ಭರವಸೆ ಮೂಡಿಸಿದ್ದು ಇಡೀ ‘ಭ್ರಷ್ಟಾಚಾರ ವಿರೋಧಿ ಚಳುವಳಿ’ಗೆ ಮಾಧ್ಯಮ ಕೊಟ್ಟ ಅತಿಯಾದ ಪ್ರಚಾರ. ಬಿಡುವಿನ ವೇಳೆಯಲ್ಲಿ, ವಾರಾಂತ್ಯದಲ್ಲಿ, ಕೆಲವರು ರಜೆ ಹಾಕಿ ಪಾಲ್ಗೊಂಡ ಈ ಚಳುವಳಿಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹೋಲಿಸಲಾಯಿತು. ಜನಸಾಮಾನ್ಯರಿಗೆ ದಿನನಿತ್ಯ ಕಾಡುವ ಭ್ರಷ್ಟಾಚಾರದ ವಿರುದ್ಧವಾದ ಚಳುವಳಿಗೆ ಸಿಕ್ಕ ಮಾಧ್ಯಮದ ಬೆಂಬಲ ಚಳುವಳಿಯನ್ನು ಎಷ್ಟು ಬಲಪಡಿಸುವಂತೆ ತೋರಿತೋ ಅಷ್ಟೇ ಅಚಾನಕ್ಕಾಗಿ ಚಳುವಳಿಯ ನಾಶವನ್ನೂ ಮಾಡಿಬಿಟ್ಟಿತು. ಮಧ್ಯಮ ವರ್ಗ ಪಾಲ್ಗೊಂಡ ಚಳುವಳಿಯ ನೇರಪ್ರಸಾರ ಟಿ.ಆರ್.ಪಿಯನ್ನು ಇನ್ನಿಲ್ಲದಂತೆ ಏರಿಸಿತ್ತು. ‘ಉದ್ದೇಶ ಸಾಕು, ಸೈದ್ಧಾಂತಿಕ ತಳಹದಿಯ ಅವಶ್ಯಕತೆ ಚಳುವಳಿಗೆ ಖಂಡಿತ ಇಲ್ಲ’ ಎಂಬುದನ್ನು ಪ್ರಚುರಪಡಿಸಿದ ಮಾಧ್ಯಮಗಳು ಮತ್ತು ಅದನ್ನೇ ನಂಬಿದ ಚಳುವಳಿಗಾರರ ಕಾರಣದಿಂದ ಅನೇಕಾನೇಕ ಸಾಧ್ಯತೆಗಳ ಒಂದು ಚಳುವಳಿ ತಾತ್ಕಾಲಿಕವಾಗಿ ಸೋತು ಹೋಯಿತು. ಪ್ರಸಾರ ಸಂಖೈ ಹೆಚ್ಚುವವರೆಗೂ, ನಾಟಕದ ದೃಶ್ಯಾವಳಿಗಳು ಸಿಗುವವರೆಗೂ ಕೊಡುತ್ತಿದ್ದ ಮಹತ್ವ ಇನ್ನೀ ಚಳುವಳಿ ನಮ್ಮ ಪ್ರಸಾರ ಸಂಖೈಗೆ, ಟಿ.ಆರ್.ಪಿಗೆ ಯಾವುದೇ ಸಹಾಯ ಮಾಡಲಾರದು ಎಂಬ ತಿಳುವಳಿಕೆ ಬಂದ ತಕ್ಷಣ ಕಡಿಮೆಯಾಯಿತು. ನಂತರದ ದಿನಗಳಲ್ಲಿ ಚಳುವಳಿಯಲ್ಲಿ ಕಾರ್ಯನಿರ್ವಹಿಸಿದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿ ದೆಹಲಿಯ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿ ನಲವತ್ತೊಂಬತ್ತು ದಿನಗಳಿಗೆ ರಾಜೀನಾಮೆಯನ್ನೂ ಕೊಟ್ಟು ಅನೇಕ ಪ್ರಹಸನಗಳು ನಡೆದು ಹೋದವು. ಆಮ್ ಆದ್ಮಿ ಪಕ್ಷಕ್ಕೆ ಅಗತ್ಯ ಮಹತ್ವ ಕೊಟ್ಟ ಮಾಧ್ಯಮಗಳು ಇದ್ದಕ್ಕಿದ್ದಂತೆ ಒಂದು ನಿರ್ದಿಷ್ಟ ದಿನದಿಂದ ಅರವಿಂದ್ ಕೇಜ್ರಿವಾಲರನ್ನು ಕಡೆಗಣಿಸಲಾರಂಭಿಸಿಬಿಟ್ಟವು! ಯಾಕೆ ಈ ಕಡೆಗಣನೆ?
ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ಅಷ್ಟು ದಿನದ ಹೋರಾಟದಲ್ಲೂ ಮಾತನಾಡದವರು ಇದ್ದಕ್ಕಿದ್ದಂತೆ ಅಂಬಾನಿ, ಅದಾನಿ ಎಂದು ಬೃಹತ್ ಉದ್ದಿಮೆದಾರರ ವಿರುದ್ಧ ಮಾತನಾಡಿಬಿಡುತ್ತಾರೆ! ಅಷ್ಟೇ ಅಚಾನಕ್ಕಾಗಿ ಅಂದಿನಿಂದ ಅರವಿಂದ್ ಕೇಜ್ರಿವಾಲರಿಗೆ ಮತ್ತು ಆಮ್ ಆದ್ಮಿ ಪಕ್ಷದ ಸುದ್ದಿಗಳು ಹೆಚ್ಚಿನ ಮಾಧ್ಯಮಗಳಿಂದ ಕಾಣೆಯಾಗಲಾರಂಭಿಸುತ್ತದೆ! ಇದು ಮಾಧ್ಯಮಗಳು ಯಾರ ಪರವಾಗಿದ್ದಾರೆ ಎಂಬುದರ ಮತ್ತೊಂದು ದ್ಯೋತಕ. ಉದ್ದಿಮೆದಾರರೇ ಅನೇಕ ವಾಹಿನಿಗಳ ಮಾಲೀಕರು, ಇನ್ನುಳಿದ ಅನೇಕ ಮಾಧ್ಯಮಗಳು ಹೆಚ್ಚು ಆಧಾರವಾಗಿರುವುದು ಈ ಉದ್ದಿಮೆದಾರರು ನೀಡುವ ಮತ್ತು ಸರಕಾರದ ಕಡೆಯಿಂದ ಕೊಡಿಸುವ ಜಾಹೀರಾತುಗಳ ಮೇಲೆ. ಅವರಿಗೆ ಮಾಧ್ಯಮವೇಗೆ ದ್ರೋಹ ಬಗೆಯಲು ಸಾಧ್ಯ. ಹಾಗಾಗಿಯೇ ಅವರ ಅನ್ಯಾಯವೇನಿದ್ದರೂ ಹೆಚ್ಚೇನೂ ಪ್ರಶ್ನೆ ಮಾಡದ ಕೊಟ್ಟಿದ್ದನ್ನು ಮಹಾಪ್ರಸಾದವೆಂಬಂತೆ ಸ್ವೀಕರಿಸುತ್ತಿರುವ ಜನಸಾಮಾನ್ಯ ಮಾತ್ರ.
ಕೇವಲ ಜನರಿಗನುಕೂಲವಾಗುವ ಚಳುವಳಿ ಕಟ್ಟುವ ವಿಷಯದಲ್ಲಿ ಮಾತ್ರವಲ್ಲ ದೈನಂದಿನ ಸುದ್ದಿ ನೀಡುವ ವಿಷಯದಲ್ಲೂ ಮಾಧ್ಯಮಗಳು ಜನರಿಗೆ ಸುದ್ದಿಯ ಹೆಸರಿನಲ್ಲಿ ಮನೋರಂಜನೆ ನೀಡುವತ್ತ ಗಮನಹರಿಸಿವೆಯೇ ಹೊರತು ಈ ವರದಿ ಮತ್ತಿದರ ಮುದ್ರಣ/ಪ್ರಸಾರ ಜನರಿಗೆ ನಿಜಕ್ಕೂ ಅವಶ್ಯಕತೆಯಿದೆಯೇ ಎಂಬುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿರಲಿಲ್ಲ. ಮಾಧ್ಯಮಗಳ ಮನೋಭಾವ ಮತ್ತು ಜನರು ಮಾಧ್ಯಮಗಳ ಮೇಲಿಟ್ಟ ನಂಬುಗೆಗಳೆರಡೂ ಅತಿವೇಗವಾಗಿ ಅಧಃಪತನಕ್ಕೊಳಗಾಗಿದ್ದು ದೃಶ್ಯವಾಹಿನಿಗಳ ಹೆಚ್ಚಳದಿಂದ ಎಂದರದು ಅತಿಶಯೋಕ್ತಿಯೇನಲ್ಲ. 24 * 7 ಸುದ್ದಿವಾಹಿನಿಗಳ ಆಗಮನದಿಂದ ಸುದ್ದಿಯನ್ನು ಘಟನೆಯನ್ನು ವರದಿ ಮಾಡುವ ರೀತಿ, ಅದನ್ನು ಜನರ ಮುಂದೆ ಪ್ರಸ್ತುತಪಡಿಸುವ ರೀತಿಯಲ್ಲಿ ಆದ ಮಾರ್ಪಾಟು ಸುದ್ದಿವಾಹಿನಿಗಳ ಸಂಖೈ ಹೆಚ್ಚುತ್ತಿರುವಂತೆ ಮತ್ತಷ್ಟು ಅದೋಗತಿಗಿಳಿಯುತ್ತಿದೆ. ಡಿಡಿ ಚಂದನದಲ್ಲಿ ಬರುತ್ತಿದ್ದ ಯಾವುದೇ ರೀತಿಯ ಭಾವಾವೇಶವಿಲ್ಲದ ಸುದ್ದಿ ನಿರೂಪಣೆ ಇವತ್ತು ಎಷ್ಟು ಮಾಧ್ಯಮಗಳಲ್ಲಿ ಕಂಡುಬರುತ್ತದೆ? ನಾಟಕ – ಸಿನಿಮಾದ ಡೈಲಾಗ್ ಹೇಳುವವರಂತೆ ಇರುತ್ತದೆ ಇಂದಿನ ನಿರೂಪಕರ ಶೈಲಿ. ಈ ಅಧಃಪತನಕ್ಕೆ ಪ್ರಮುಖ ಕಾರಣ 24 * 7 ನ್ಯೂಸ್ ಕೊಡುತ್ತೇವೆನ್ನುವುದು. ಯಾವುದೇ ಸಮಾಜದಲ್ಲಿ, ಅದು ಎಷ್ಟೇ ಕ್ರಿಯಾಶೀಲವಾಗಿರಲಿ, ಯುದ್ಧಪೀಡಿತವಾಗಿರಲಿ, ಕಳ್ಳ – ಕಾಕರ ಜನಸಂಖೈಯೇ ಹೆಚ್ಚಿರಲಿ ವಾರವಿಡೀ ದಿನದ ಇಪ್ಪತ್ತನಾಲ್ಕು ತಾಸು ನೀಡುವುದಕ್ಕೆ ಸುದ್ದಿಯಾದರೂ ಏನಿರಲು ಸಾಧ್ಯ? ಇದ್ದ ಸುದ್ದಿಯನ್ನೇ ರಂಜನೀಯ ಶೈಲಿಯಿಂದ ನಿರೂಪಿಸಿದರೂ ಇಪ್ಪತ್ತನಾಲ್ಕು ಘಂಟೆ ತುಂಬಿಸಲು ಸಾಧ್ಯವಾಗಲಿಲ್ಲ. ಆಗ ವಿಧಿಯಿಲ್ಲದೇ ಸುದ್ದಿಯಲ್ಲದ ಸುದ್ದಿಯನ್ನು ವೈಭವೀಕರಿಸುವ ಪರಿಪಾಟ ಪ್ರಾರಂಭವಾಯಿತು. ಖಾಸಗಿ ವೈಯಕ್ತಿಕ ಸಂಗತಿಗಳನ್ನು ಕೂಡ ಸುದ್ದಿ ಮನೆಗೆ ಎಳೆದು ತರಲಾಯಿತು. ರಾಜಕಾರಣಿಗಳ ತಪ್ಪುಗಳನ್ನು ತೋರ್ಪಡಿಸುವ ಕಾರ್ಯಕ್ರಮಗಳೂ ಕೂಡ ಮನೋರಂಜನಾತ್ಮಕ ರೂಪ ಪಡೆದುಕೊಂಡಿತು. Informationಗಾಗಿ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ಜನರಿಗೆ Entertainment ಸಿಗಲಾರಂಭಿಸಿತು. ಕ್ರಮೇಣ ಜನರಲ್ಲೂ ಸುದ್ದಿಯೆಂದರೆ ಮನರಂಜನೆ ಇರಬೇಕು ಎಂಬ ಭಾವ ಮೂಡಲಾರಂಭಿಸಿತು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ತಪ್ಪು ರಾಜಕೀಯ ನಡೆಗಳನ್ನಿಡುತ್ತಿದ್ದಾಗ “ಟಿವಿ ಹಾಕು. ಇವರ ನಾಟ್ಕ ಶುರುವಾಗುತ್ತೆ” ಎಂದು ಹೇಳಿ ನಗುನಗುತ್ತಾ ಆ ಪ್ರಕರಣಗಳನ್ನು ನೋಡುವವರಿದ್ದರು! ಇಡೀ ದೇಶದಲ್ಲಿ ಕರ್ನಾಟಕದ ರಾಜಕೀಯ ಅವಮಾನಕರವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಅದೊಂದು ತಮಾಷೆಯ ನಾಟಕವಾಗಿತ್ತು!
ಮಾಧ್ಯಮದಿಂದ ಜನಸಾಮಾನ್ಯನ ಅಭಿರುಚಿಗಳು ರೂಪುಗೊಳ್ಳುತ್ತದೋ ಅಥವಾ ಜನಸಾಮಾನ್ಯನ ಅಭಿರುಚಿಗೆ ತಕ್ಕಂತೆ ಮಾಧ್ಯಮಗಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೋ ಎಂಬ ಪ್ರಶ್ನೆ ಕೋಳಿ ಮೊದಲಾ ಇಲ್ಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಯಷ್ಟೇ ಕಠಿಣವಾದುದು. ದೃಶ್ಯಮಾಧ್ಯಮದಲ್ಲಿರುವ ಪತ್ರಕರ್ತ ಮಿತ್ರರನ್ನು ಕೇಳಿ ನೋಡಿ “ಜನ ಏನನ್ನು ಕೇಳ್ತಾರೋ ಅದನ್ನೇ ಕೊಡೋದು ನಾವು. ಜನರು ಜವಾಬ್ದಾರರೇ ಹೊರತು ನಾವಲ್ಲ” ಎಂದೇ ಹೇಳುತ್ತಾರೆ. ಯಾವುದೋ ಊರಿನ ಆಂಟಿ ಅಂಕಲ್ಲಿನ ಕಥೆಯನ್ನು ಪ್ರಸಾರ ಮಾಡಿ ಎಂದು ಜನರು ಕೇಳಿದ್ದರಾ? ದಿನ ಬೆಳಿಗ್ಗೆ ಬ್ರಹ್ಮಾಂಡ ಅರಿತವರಿಂದ ನಮ್ಮ ಶಾಸ್ತ್ರ ತಿಳಿಸಿ ಎಂದೂ ಜನರೇ ಒತ್ತಾಯಿಸಿದ್ದರಾ? ಆಂಟಿ ಅಂಕಲ್ಲಿನ ಕಥೆಗಳು, ಜ್ಯೋತಿಷ್ಯ – ವಾಸ್ತುಶಾಸ್ತ್ರದ ಕಾರ್ಯಕ್ರಮಗಳು ಬರದಿದ್ದ ಸಮಯದಲ್ಲೂ ಜನರು ವಾಹಿನಿಗಳನ್ನು ವೀಕ್ಷಿಸುತ್ತಿದ್ದರು ಎಂಬುದನ್ನು ಮರೆಯದಿರೋಣ. ಅನ್ಯರ ಬದುಕಿನ ವೈಯಕ್ತಿಕ ಹುಳುಕುಗಳನ್ನು ಕಂಡು ಖುಷಿ ಪಡುವ ಮನಸ್ಥಿತಿ ಹೆಚ್ಚಿನ ಜನರಲ್ಲಿರುತ್ತದೆ, ಅದನ್ನೇ ಎನ್ ಕ್ಯಾಷ್ ಮಾಡಿಕೊಳ್ಳುವ ಸಲುವಾಗಿ ಆಂಟಿ ಅಂಕಲ್ಲಿನ ಕಥೆಗಳನ್ನು ಹೆಚ್ಚೆಚ್ಚು ಪ್ರಸಾರಿಸಿದರೆ ಜನರ ಮನಸ್ಥಿತಿಯನ್ನು ಮತ್ತಷ್ಟು ಹಾಳುಗೆಡವುಹುದಕ್ಕೆ ಮಾಧ್ಯಮಗಳು ಹೊಣೆಯಾಗುತ್ತವೆ. ಜನರಲ್ಲಿನ ವೈಚಾರಿಕತೆಯನ್ನು ಬೆಳೆಸುವ ಜವಾಬ್ದಾರಿಯುಳ್ಳ ಮಾಧ್ಯಮವೇ ಇಂದು ಅಂಧಶೃದ್ಧೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಕನ್ನಡದಲ್ಲಿ ಒಂದಾದ ಮೇಲೊಂದರಂತೆ ಸುದ್ದಿ ವಾಹಿನಿಗಳು ಪ್ರಾರಂಭವಾಗುತ್ತಿವೆ. ಹೊಸ ವಾಹಿನಿಯ ಬಹುತೇಕ ಎಲ್ಲಾ ಕಾರ್ಯಕ್ರಮಗಳು ಹಳೆಯ ವಾಹಿನಿಗಳ ಯಥಾವತ್ ನಕಲು. ಸುದ್ದಿಯನ್ನು ಸತತವಾಗಿ ಮನೋರಂಜನೆಯನ್ನಾಗಿ ಮಾಡಿಬಿಟ್ಟಿರುವ ಕಾರಣ ನಿಜವಾದ ಧನಾತ್ಮಕ ಸುದ್ದಿ ನೀಡಿದರೂ ಅದು ಜನರಿಗೆ ಮನೋರಂಜನೆಯಾಗಿ ತಲುಪುತ್ತಿದೆಯೇ ಹೊರತು ಸ್ಪೂರ್ತಿ ನೀಡಬಹುದಾದ ಸುದ್ದಿಯಾಗಲ್ಲ.
ಸುದ್ದಿವಾಹಿನಿಗಳ ಘರ್ಜನೆಯಲ್ಲಿ ದಿನಪತ್ರಿಕೆಗಳು ಕಳೆದೇ ಹೋಗುತ್ತದೆಂಬ ಭಾವ ಮೂಡಿತ್ತಾದರೂ ಪತ್ರಿಕೆಗಳ ಪ್ರಸಾರ ಸಂಖೈ ವರ್ಷದಿಂದ ವರ್ಷಕ್ಕೆ ಏರುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ದಿನದ ಸುದ್ದಿಗಳನ್ನೆಲ್ಲ ವಾಹಿನಿಯಲ್ಲೇ ನೋಡುತ್ತೇವಲ್ಲ ಇನ್ನು ಓದುವುದಕ್ಕೇನು ಉಳಿದಿದೆ ಎಂಬ ಭಾವನೆಯಿಂದ ಮನೆಗೆ ಪತ್ರಿಕೆ ಹಾಕಿಕೊಳ್ಳುವುದನ್ನು ನಿಲ್ಲಿಸಿದವರನ್ನು ನಾನಂತೂ ಕಂಡಿಲ್ಲ. ಅಷ್ಟರಮಟ್ಟಿಗೆ ದಿನಪತ್ರಿಕೆಗಳು ಇನ್ನೂ ‘ಸುದ್ದಿ’ ನೀಡುವ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತಿವೆ. Ofcourse ಸುದ್ದಿವಾಹಿನಿಗಳ ಪ್ರವಾಹದಿಂದಾಗಿ ಹೆಡ್ಡಿಂಗಿನ ಶೈಲಿಗಳು ಬದಲಾಗಿಹೋಗಿದೆ. ಟ್ಯಾಬ್ಲಾಯ್ಡಿನಲ್ಲಿ ಕಾಣಸಿಗುತ್ತಿದ್ದ ಹೆಡ್ಡಿಂಗುಗಳು ಈಗ ದಿನಪತ್ರಿಕೆಗಳಲ್ಲಿ ವಿವಿಧ ಬಣ್ಣಗಳಲ್ಲಿ ಕಾಣಸಿಗುತ್ತಿದೆ. ಮುಖಪುಟಗಳಲ್ಲಂತೂ ಹೆಚ್ಚಿನ ಬಾರಿ ಮನೋರಂಜನಾತ್ಮಕ ಸುದ್ದಿಗಳಿಗೆ, ವಿವಾದಗಳಿಗೆ ಮಾತ್ರ ಮೀಸಲು. ಗ್ರಾಮೀಣ ಭಾಗಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ಮುಖಪುಟದಲ್ಲಿ ನೋಡಿ ಎಷ್ಟು ದಿನಗಳಾಯಿತು ಎಂಬುದನ್ನು ಯೋಚಿಸಿದರೆ ದಿನಪತ್ರಿಕೆಗಳು ತುಳಿಯುತ್ತಿರುವ ಹಾದಿ ಅರ್ಥವಾಗುತ್ತದೆ. “ಸೇಲೆಬಲ್ ಸುದ್ದಿಗಳು ಜಾಹೀರಾತುದಾರರ ದೃಷ್ಟಿಯಿಂದ ಮುಖ್ಯ. ರೈತನ ಆತ್ಮಹತ್ಯೆಯೋ, ನೀರಿಲ್ಲದ ಊರಿನ ಗೋಳೋ ಮುಖಪುಟದ ಸುದ್ದಿಯಾದರೆ ಜಾಹೀರಾತುದಾರರಿಗೆ ಪ್ರಿಯವಾಗುವುದಿಲ್ಲ” ಎಂಬುದು ಬಹಳಷ್ಟು ಪತ್ರಿಕೆಯವರ ಅಭಿಮತ. ಈ ಕಾರಣದಿಂದಲೇ ‘ಡೆವಲೆಂಪ್ಮೆಂಟಲ್ ಜರ್ನಲಿಸಂ’ ಎನ್ನುವುದು ಪತ್ರಿಕೆಗಳ ಒಳಪುಟಕ್ಕೆ ವರ್ಗಾವಣೆಯಾಗಿಬಿಟ್ಟಿದೆ. ಕೆಲವೇ ವರುಷಗಳಲ್ಲಿ ಕಣ್ಮರೆಯಾದರೂ ಅಚ್ಚರಿಯೇನಿಲ್ಲ. ಪತ್ರಿಕೆಗಳನ್ನು ಓದಿದರೆ, ವಾಹಿನಿಗಳನ್ನು ನೋಡಿದರೆ ಒಂದಷ್ಟು ಕೊಲೆ, ಸುಲಿಗೆ, ಅತ್ಯಾಚಾರವನ್ನೊರತುಪಡಿಸಿದರೆ ಉಳಿದಿದ್ದೆಲ್ಲವೂ ದೇಶದಲ್ಲಿ ಸರಾಗವಾಗಿ ಯಾವೊಂದೂ ತೊಂದರೆಯೂ ಇಲ್ಲದೆಯೇ ನಡೆಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಜನಸಾಮಾನ್ಯನ ಸಂಕಷ್ಟಗಳಿಗೆ ಧ್ವನಿಯಾಗದೆಯೂ ಮಾಧ್ಯಮಗಳು ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಳ್ಳಬಹುದು, ಬೃಹದಾಕಾರವಾಗಿ ಬೆಳೆಯಲೂಬಹುದು ಎಂಬುದಂತೂ ಈಗ ಸಾಬೀತಾಗಿದೆ. ಇರುವ ಮಾಧ್ಯಮ ತನ್ನ ನೋವಿಗೆ ದನಿಯಾಗದಿರುವಾಗ ಜನಸಾಮಾನ್ಯರಿಗಿರುವ ಪರ್ಯಾಯ ಮಾರ್ಗವ್ಯಾವುದು?
 (ಪ್ರಜಾಸಮರದ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನ) 

2 comments: