Oct 15, 2014

ಡಿ.ಎಸ್.ಎಲ್.ಆರ್ ಕ್ಯಾಮೆರಾ ಖರೀದಿಸುವ ಮುನ್ನ

fast vs slow shutter speed
Understanding shutter speed
Dr Ashok K R
ಸುಳ್ಯದ ಪರಿಸರದಿಂದ ಉತ್ತೇಜಿತನಾಗಿ ‘ದೊಡ್ಡ’ ಕ್ಯಾಮೆರಾ ಖರೀದಿಸಬೇಕೆಂದು ನಿರ್ಧರಿಸಿದೆ. ಒಂದಷ್ಟು ಪರಿಚಯದ ಫೋಟೋಗ್ರಾಫರುಗಳನ್ನು ಕೇಳಿದಾಗ ಬಹುತೇಕರು ‘ನಿಕಾನ್’ ಎಂದರು. ಇಂಟರ್ನೆಟ್ ಯುಗದಲ್ಲಿ ಜನರನ್ನು ಕೇಳಿ ತಿಳಿದು ಸುಮ್ಮನಿರಲಾದೀತೇ! ಸರಿ ಗೂಗಲ್ಲಿನಲ್ಲಿ ‘Best DSLR for beginners’ ಎಂದು ಟೈಪಿಸಿ ಗೂಗಲ್ ಹರವಿದ ಲಕ್ಷಾಂತರ ಪುಟಗಳಲ್ಲಿ ಒಂದಷ್ಟನ್ನು ತೆರೆತೆರೆದು ಓದುವುದಾರಂಭವಾಯಿತು. ನಿಕಾನ್ ಮತ್ತು ಕೆನಾನ್ ಮಧ್ಯೆ ಜೋರು ಯುದ್ಧವೇ ನಡೆದಿತ್ತು. ಹದಿನೈದು ದಿನದ ಓದಿನ ನಂತರವೂ ಯಾವ ಕ್ಯಾಮೆರಾ ಖರೀದಿಸಬೇಕೆಂದು ತೀರ್ಮಾನಿಸಲಾಗಲಿಲ್ಲ. ಹದಿನೈದು ದಿನದ ಓದಿನಿಂದ ಕ್ಯಾಮೆರಾಗಳ ಬಗೆಗಿನ ತಾಂತ್ರಿಕ ವಿವರಗಳ ಬಗ್ಗೆ ಸ್ವಲ್ಪ ತಿಳಿದಂತಾಗಿ ನನಗೆ ಗೊತ್ತಿಲ್ಲದ ಫೋಟೋಗ್ರಫಿಯ ಮೂಲಭೂತ ಅಂಶಗಳೇ ಅಧಿಕವಾಗಿದೆ ಎಂಬುದರಿವಾಯಿತು! ಸದ್ಯಕ್ಕೆ ನಿಕಾನೂ ಬೇಡ, ಕೆನಾನೂ ಬೇಡ ಎಂದು ನಿರ್ಧರಿಸಿ ಅಷ್ಟರವರೆಗೆ ಜೊತೆಗಿದ್ದ ಸೋನಿ DSC S930 ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾ ಕೈಗೆತ್ತಿಕೊಂಡೆ.
Also Read
Flash "ಬ್ಯಾಕ್"

ಆ ಪುಟ್ಟ ಕ್ಯಾಮೆರಾದಲ್ಲಿ ತಾಂತ್ರಿಕ ವಿವರಗಳ ಅ ಆ ಇ ಈ ಕಲಿಯುವ ಸ್ವ – ತರಗತಿಗಳು ಪ್ರಾರಂಭವಾದವು (ಈಗಲೂ ನನಗೆ ಗೊತ್ತಿರುವುದು ಅ ಆ ಇ ಈ ಮಾತ್ರ!). ಇಂಟರ್ನೆಟ್ಟಿನಲ್ಲಿ ‘Basics of Photography’ ಬಗ್ಗೆ ಒಂದಷ್ಟು ಪಿಡಿಎಫ್ ಕಡತಗಳನ್ನು ಡೌನ್‍ಲೋಡ್ ಮಾಡಿಕೊಂಡೆ. ಅಪರ್ಚರ್ (f ಪಾಯಿಂಟ್), ಶಟರ್ ಸ್ಪೀಡ್ ಮತ್ತು ISO – ಇವಿಷ್ಟನ್ನು ಮೊದಲಿಗೆ ಸ್ವಲ್ಪವಾದರೂ ಅರಿತುಕೊಂಡರೆ ಉಳಿದ ತಾಂತ್ರಿಕ ವಿವರಗಳು ನಿಧಾನಕ್ಕೆ ಅರಿವಿಗೆ ಬರುತ್ತದೆ. ಸೋನಿಯ ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾದಲ್ಲಿ ಅಪರ್ಚರ್ ಮತ್ತು ಶಟರ್ ಸ್ಪೀಡನ್ನು ನಿಯಂತ್ರಿಸುವ ಸೌಕರ್ಯವಿರಲಿಲ್ಲ. ಛೇ! ಇದರಲ್ಲಿ ಇನ್ನೇನು ಕಲಿಯೋದು ಎಂದುಕೊಂಡೆನಾದರೂ ಎರಡು ಮೂರು ದಿನಗಳಲ್ಲಿ ISO ಬದಲಿಸಿದರೆ ಪುಟ್ಟ ಕ್ಯಾಮೆರ f ಪಾಯಿಂಟ್ ಮತ್ತು ಶಟರ್ ಸ್ಪೀಡುಗಳನ್ನು ತಾನಾಗೇ ಬದಲಿಸುವ ಸಂಗತಿ ಅರಿವಿಗೆ ಬಂತು.
ಹಾರಾಟದಲ್ಲಿರುವ ಪಕ್ಷಿ, ಓಡುತ್ತಿರುವ ಪ್ರಾಣಿ, ವಾಹನ, ಜನ – ಒಟ್ಟಿನಲ್ಲಿ ಚಲನೆಯಲ್ಲಿರುವುದನ್ನು ಸೆರೆಹಿಡಿಯಲು ಶಟರ್
shutter speed vs aperture
Understanding f point
ಸ್ಪೀಡ್ ಜಾಸ್ತಿಯಿರಬೇಕು. ಸ್ಥಿರ ವಸ್ತುಗಳನ್ನು ಸೆರೆಯಿಡಿಯಲು ಶಟರ್ ಸ್ಪೀಡ್ ಕಡಿಮೆಯಿದ್ದರೂ ನಡೆಯುತ್ತದೆ. ಇನ್ನು ಕಡಿಮೆ f ಪಾಯಿಂಟ್ (ದೊಡ್ಡ ಅಪರ್ಚರ್) ಒಂದು ನಿರ್ದಿಷ್ಟ ವಸ್ತುವನ್ನು ನಿಖರವಾಗಿಸಿ ಸುತ್ತಲಿನದನ್ನು ಮತ್ತು ಹಿಂದಿನದನ್ನು ಮಬ್ಬಾಗಿಸಿದರೆ ಅಧಿಕ f ಪಾಯಿಂಟ್ (ಸಣ್ಣ ಅಪರ್ಚರ್) ಫ್ರೇಮಿನಲ್ಲಿರುವುದನ್ನೆಲ್ಲಾ ನಿಖರವಾಗಿಸಲು ಪ್ರಯತ್ನಿಸುತ್ತದೆ. ಅಧಿಕ f ಪಾಯಿಂಟ್ ಮತ್ತು ಅಧಿಕ ಶಟರ್ ಸ್ಪೀಡ್ ಉಪಯೋಗಿಸಲು ಉತ್ತಮ ಬೆಳಕು ಅತ್ಯವಶ್ಯಕ. f point is inversely proportional to shutter speed ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. f ಪಾಯಿಂಟ್ ಹೆಚ್ಚಿಸಿದಾಗ ಶಟರ್ ಸ್ಪೀಡನ್ನು ಕಡಿಮೆ ಮಾಡಬೇಕು, ಶಟರ್ ಸ್ಪೀಡನ್ನು ಹೆಚ್ಚಿಸಿದಾಗ f ಪಾಯಿಂಟನ್ನು ಕಡಿಮೆ ಮಾಡಬೇಕು. ಇಲ್ಲವಾದರೆ ಕ್ಯಾಮೆರಾದೊಳಗೆ ಅಗತ್ಯ ಬೆಳಕು ಸಂಚರಿಸುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ನಿರ್ದಿಷ್ಟ f ಪಾಯಿಂಟ್ ಮತ್ತು ಶಟರ್ ಸ್ಪೀಡ್ ಅನಿವಾರ್ಯವಾಗಿ ಬೇಕಾದಾಗ ಬೆಳಕಿನ ಕಿರಣಗಳ ಪ್ರವೇಶವನ್ನು ನಿಯಂತ್ರಿಸಲು ISO ಸಹಾಯಕ್ಕೆ ಬರುತ್ತದೆ. ಕಡಿಮೆ ಬೆಳಕಿನ ಜಾಗಗಳಲ್ಲಿ ಹೆಚ್ಚು ISO, ಹೆಚ್ಚು ಬೆಳಕಿರುವ ಜಾಗದಲ್ಲಿ ಕಡಿಮೆ ISO. ISO ಹೆಚ್ಚಾದಷ್ಟೂ ಚಿತ್ರದ ಗುಣಮಟ್ಟ ಕಡಿಮೆಯಾಗುತ್ತದೆ. ಪ್ರತಿಯೊಂದು ಕ್ಯಾಮೆರಾ ನಿರ್ದಿಷ್ಟ ISOದವರೆಗೆ ಮಾತ್ರ ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಬಲ್ಲದು. ಅದನ್ನು ಗುರುತುಮಾಡಿಕೊಳ್ಳಬೇಕು. ನಾನು ಗಮನಿಸಿದಂತೆ ನಿಕಾನ್ ಡಿ.ಎಸ್.ಎಲ್.ಆರ್ ಕ್ಯಾಮೆರಾಗಳು ISO ವಿಷಯದಲ್ಲಿ ಕೆನಾನಿಗಿಂತ ಉತ್ತಮ. ಕೆನಾನ್ ಸೆಮಿಪ್ರೊಫೆಷನಲ್ ಡಿ.ಎಸ್.ಎಲ್.ಆರ್‍ಗಳು 800 ISOಗೆ ಏದುಸಿರು ಬಿಟ್ಟರೆ ಅದೇ ವಿಭಾಗದ ನಿಕಾನ್ ಕ್ಯಾಮೆರಾಗಳು 1600, 3200 ISOವರೆಗೆ ಉತ್ತಮ ಚಿತ್ರಗಳನ್ನು ನೀಡಬಲ್ಲದು. ಸಂಪೂರ್ಣ ಪ್ರೊಫೆಷನಲ್ ಕ್ಯಾಮೆರಾಗಳು 6400, 12800 ISOದಲ್ಲೂ ಅತ್ಯುತ್ತಮ ಚಿತ್ರಗಳನ್ನು ನೀಡುತ್ತವೆ.
Related
ಬೆಳ್ಳಕ್ಕಿಗಳ ಪ್ರಪಂಚ
ಈಗ ಬರುವ ಬಹಳಷ್ಟು ಪಾಯಿಂಟ್ ಅಂಡ್ ಶೂಟ್ ಮತ್ತು ಬ್ರಿಡ್ಜ್ ಕ್ಯಾಮೆರಾಗಳಲ್ಲಿ ಅಪರ್ಚರ್, ಶಟರ್ ಸ್ಪೀಡ್ ಮತ್ತು ISOಅನ್ನು ನಾವೇ ನಿಯಂತ್ರಿಸಬಹುದು. Ofcourse ಈ ಮೂರು ಮೂಲಭೂತ ಅಂಶಗಳ ಅತ್ಯುತ್ತಮ ನಿಯಂತ್ರಣ ಸಿಗುವುದು ಡಿ.ಎಸ್.ಎಲ್.ಆರ್ ಕ್ಯಾಮೆರಾಗಳಲ್ಲಿ. ‘ಫೋಟೋ ತೆಗ್ಯೋನು ಮುಖ್ಯ, ಕ್ಯಾಮೆರಾ ಅಲ್ಲ’ ಎಂಬ ಕ್ಯಾಮೆರಾ ಗಾದೆಯಲ್ಲಿ ನಂಬುಗೆಯಿಟ್ಟು ಡಿ.ಎಸ್.ಎಲ್.ಆರ್ ಖರೀದಿಸುವ ಶುಭಘಳಿಗೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿ ಸೋನಿ DSC S930 ಕ್ಯಾಮೆರಾದಲ್ಲಿ ಮೊದಲ ಪಾಠಗಳನ್ನು ಕಲಿಯಲನುವಾದೆ!

No comments:

Post a Comment