Sep 27, 2014

“Flash” ಬ್ಯಾಕ್


payaswini
ಸುಳ್ಯದ ಸಮೀಪ

Dr Ashok K R
ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ ಎಂಬ ಮಾತಿದೆ. ಫೋಟೋಗ್ರಫಿಗಿರುವ ಈ ಶಕ್ತಿಯನ್ನು ಅರಿಯಲು ನಾನು ಸವೆಸಿದ ಒಂದು ಪುಟ್ಟ ಹಾದಿಯ ಅನುಭವಗಳನ್ನು ಈ ‘ಕ್ಯಾಮೆರಾ ಕಣ್ಣು’ ಅಂಕಣದ ಮೂಲಕ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ. ಫೋಟೋಗ್ರಫಿಯ ಅ ಆ ಇ ಈ ತಿಳಿಸಿಕೊಡಲು ಸಾವಿರಾರು ಪುಸ್ತಕಗಳು ಲಭ್ಯವಿದೆ (ಬಹುತೇಕ ಪುಸ್ತಕಗಳನ್ನು ಮುಟ್ಟಿ ನೋಡಷ್ಟೇ ತೃಪ್ತಿ ಪಟ್ಟುಕೊಳ್ಳಬೇಕು, ಅಷ್ಟು ದುಬಾರಿ), ಅಂತರ್ಜಾಲದಲ್ಲೂ ನೂರಾರು ತಾಣಗಳು ಉಚಿತವಾಗಿ ಫೋಟೋಗ್ರಫಿಯ ಮೂಲ ಪಾಠಗಳನ್ನು ಹೇಳಿಕೊಡುತ್ತವೆ. Dp review, digital photography school ನಾನು ಪ್ರಾರಂಭದ ದಿನಗಳಲ್ಲಿ ಓದಿದ ತಾಣಗಳು. ಓದೋದ್ಯಾರು ಅನ್ನೋರಿಗೆ ಯೂಟ್ಯೂಬಿನಲ್ಲಿ ಫೋಟೋಗ್ರಫಿ ಟುಟೋರಿಯಲ್ಸಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳಿವೆ. ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ತಿಳಿಸುವ ತಾಣಗಳು ಒಂದಷ್ಟು ಕಡಿಮೆಯೇ.

‘ಕ್ಯಾಮೆರಾ ಕಣ್ಣಿನಲ್ಲಿ’ ತಾಂತ್ರಿಕ ವಿಷಯಗಳೆಡೆಗೆ ಹೆಚ್ಚು ಗಮನ ಕೊಡುವ ಉದ್ದೇಶ ನನಗಿಲ್ಲ. ಕಾರಣ ತಾಂತ್ರಿಕ ವಿವರಗಳು ಅಂತರ್ಜಾಲದಲ್ಲಿ ಬೇಕಾದಷ್ಟಿವೆ. ಕ್ಯಾಮೆರಾದೊಡನೆ ಬರುವ ಚಿಕ್ಕ ಪುಸ್ತಕವೇ ತಾಂತ್ರಿಕ ವಿವರಗಳನ್ನರಿಯಲು ಬೇಕಾದಷ್ಟಾಯಿತು. ಮತ್ತು ಅನೇಕ ತಾಂತ್ರಿಕ ವಿವರಗಳು ನಾವು ಕ್ಯಾಮೆರಾದೊಂದಿಗೆ ಒಡನಾಡುವ ಮೂಲಕವೇ ಅರ್ಥವಾಗುವಂತದ್ದು. ನಾನೇನು ಉತ್ತಮ-ಅತ್ಯುತ್ತಮ ಅಥವಾ ಸಾಧಾರಣ ಛಾಯಾಗ್ರಹಕನೂ ಅಲ್ಲ! ಬರೆಯುವುದೂ ಅಭ್ಯಾಸವಾಗಿರುವುದರಿಂದ ಗೊತ್ತಿರುವುದನ್ನು ನಾಲ್ಕು ಜನರಿಗೆ ಹಂಚಿಕೊಂಡರೆ ಸಮಾಧಾನ! ನಾಲ್ವರಲ್ಲಿ ಒಬ್ಬರಿಗೆ ಕಲಿಯಲೊಂದಿಷ್ಟು ಮಾಹಿತಿ ಸಿಕ್ಕರೆ ಸಂತೋಷ. ಫೋಟೋ ಸುತ್ತಲಿನ ಕಥೆಗಳು, ಫೋಟೋಗ್ರಫಿ ಕಲಿಸಿದ ಪಾಠಗಳಿಗೆ ಹೆಚ್ಚಿನ ಆದ್ಯತೆ.
ಈ ಫೋಟೋಗ್ರಫಿಯ ಹುಚ್ಚು ಚಿಕ್ಕಂದಿನಿಂದಲೂ ಇತ್ತು. ದೃಶ್ಯಗಳನ್ನು ಸುಂದರವಾಗಿ ಸೆರೆಹಿಡಿಯಬೇಕೆಂಬ ಉದ್ದೇಶದಿಂದ ಮೂಡಿದ ಹುಚ್ಚಲ್ಲ, ದೊಡ್ಡ ಕ್ಯಾಮೆರಾವನ್ನು ಕತ್ತಿಗೆ ನೇತ್ಹಾಕಿಕೊಂಡು ಗತ್ತಿನಿಂದ ತಿರುಗಾಡಬೇಕೆಂಬ ಆಸೆಯಿಂದ ಮೂಡಿದ ಹುಚ್ಚು. ಮನೆಗೆ ಬಂದ ಮೊದಲ ಕ್ಯಾಮೆರಾ ಕೊಡ್ಯಾಕಿನದು. 999 ರುಪಾಯಿಯ ಕ್ಯಾಮೆರ. ‘ಓ! ಸೂರ್ಯಾಸ್ತಮಾನ ಎಷ್ಟು ಚೆನ್ನಾಗಿದೆ’ ‘ಆಹಾ ಇದು ಅದ್ಭುತ ಫೋಟೋ ಆಗುತ್ತೆ’ ಎಂದು ಕ್ಲಿಕ್ಕಿಸಿದ ಫೋಟೋಗಳೆಲ್ಲ ಡೆವಲಪ್ ಮಾಡಿಸಿ ಪ್ರಿಂಟಾಕಿಸಿದ ಮೇಲೆ ‘ಎಲ್ಲಿ ಸೂರ್ಯ’ ಎಂದು ಹುಡುಕಿದ ಪ್ರಸಂಗ ಪುಟ್ಟ ಕ್ಯಾಮೆರಾದ ಮತ್ತದಕ್ಕಿಂತ ಹೆಚ್ಚಾಗಿ ಕ್ಯಾಮೆರಾದ ಬಗೆಗಿನ ನನ್ನ ಅರಿವಿನ ಮಿತಿಗಳನ್ನು ತೋರಿಸಿತು. ಟೆನ್ಥೂ, ಹುಡುಗಿ, ಪಿಯುಸಿ ಅಂತ ಓದಿನ ಕಡೆಗೆ ಗಮನ ಹೆಚ್ಚಾಗಿ ಕ್ಯಾಮೆರಾದ ಬಗ್ಗೆ ಮರೆತೇ ಹೋಯಿತು. ಮೆಡಿಕಲ್ಲಿಗೆ ಸೇರಿದಾಗ ಮುಂದಿನ ಹಂತದ ಕ್ಯಾಮೆರಾ ಕೊಳ್ಳುವ ಮನಸ್ಸಾಯಿತಾದರೂ ಬೆಲೆ ಕೇಳಿ ಹೌಹಾರಿ ಸುಮ್ಮನಾಗಿದ್ದೆ.
ಸೋನಿ ಸೈಬರ್ ಶಾಟ್ ಖರೀದಿಸಿದ್ದು ಕಲ್ಬುರ್ಗಿಯಲ್ಲಿದ್ದಾಗ. ಫೋಟೋಗ್ರಫಿಯ ಆಸೆಯಿಂದ ಕೊಂಡದ್ದಲ್ಲ. ಡೆಸರ್ಟೇಶನ್ನಿನ ಸಲುವಾಗಿ ಖರೀದಿಸಿದ್ದು. ಫೋಟೋಗ್ರಫಿ ತಲೆಯಿಂದ ಮರೆಯಾಗಿಹೋಗಿತ್ತು. ಪಿ.ಜಿ ಮುಗಿಸಿದ ನಂತರ ಕೆಲಸಕ್ಕೆ ಸೇರಿದ್ದು ಸುಳ್ಯದಲ್ಲಿ. ಬಹುಶಃ ಸುಳ್ಯಕ್ಕೆ ಹೋಗದೇ ಇದ್ದಿದ್ದರೆ ಫೋಟೋಗ್ರಫಿಯನ್ನು ಅಭ್ಯಸಿಸುವ ಭಾವನೆಯೂ ಸುಳಿಯುತ್ತಿರಲಿಲ್ಲವೇನೋ. ದಕ್ಷಿಣ ಕನ್ನಡ ಮತ್ತು ಮಡಿಕೇರಿಯ ಪರಿಸರ ‘ಕತ್ತಿಗೊಂದು ದೊಡ್ಡ ಕ್ಯಾಮೆರಾ ನೇತ್ಹಾಕಿಕೊಂಡು ಗತ್ತಿನಿಂದ ತಿರುಗಬೇಕೆಂಬ’ ನನ್ನ ಚಿಕ್ಕಂದಿನ ಆಸೆಯನ್ನು ಪುನಶ್ಚೇತನಗೊಳಿಸಿತು.

No comments:

Post a Comment