Sep 13, 2014

ಧರ್ಮ ಮತ್ತು ಅಂಧತ್ವ



ಡಾ ಅಶೋಕ್ ಕೆ ಆರ್.
ಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು. 
(ಪ್ರಜಾಸಮರ ಪಾಕ್ಷಿಕಕ್ಕೆ ಬರೆದ ಲೇಖನ)

ಕಳೆದೊಂದು ವಾರದಿಂದ ಅಂತರ್ಜಾಲ ತಾಣಗಳಲ್ಲಿ ಬುರ್ಖಾದ ಬಗೆಗಿನ ಚರ್ಚೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮೇಲಿನ ಘಟನೆ ನೆನಪಾಯಿತು. ‘ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ’ ಎಂದೇ ಮಾತುಗಳನ್ನಾರಂಭಿಸಿದ್ದ ದಿನೇಶ್ ಅಮೀನ್ ಮಟ್ಟುರವರ ಮಾತುಗಳು ಮತ್ತೆ ಚರ್ಚೆಗಳೊಂದಷ್ಟನ್ನು ಹುಟ್ಟುಹಾಕಿವೆ. ಪತ್ರಕತ್ರ ಬಿ.ಎಂ.ಬಷೀರ್‍ರವರ “ಬಾಡೂಟದ ಜೊತೆ ಗಾಂಧಿ ಜಯಂತಿ” ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ. ಅವರು ಮೋದಿಯ ಬಗ್ಗೆ, ಮಾಧ್ಯಮದ ಬಗ್ಗೆ, ಮಂಗಳೂರಿನ ಕೋಮು ಸಾಮರಸ್ಯದ ಬಗ್ಗೆ, ಆ ಕೋಮು ಸಾಮರಸ್ಯದಿಂದಲೇ ಹುಟ್ಟಿದ ಕೋಮುವಾದತನದ ಬಗ್ಗೆ, ಕೋಮುವಾದಿಗಳ ಅಟ್ಟಹಾಸದ ನಡುವೆಯೇ ನಿಜ ಜಾತ್ಯತೀತ ಮನೋಭಾವದ ಧರ್ಮಸಹಿಷ್ಣುಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊನೆಗೆ ಅವರ ಭಾಷಣ ಚರ್ಚೆಗೊಳಗಾಗುತ್ತಿರುವುದು ಅವರು ಪ್ರಸ್ತಾಪಿಸಿದ ಬುರ್ಖಾ ಪದ್ಧತಿಯ ಬಗೆಗೆ ಮಾತ್ರ! ಅವರು ಬುರ್ಖಾ ವಿಷಯಕ್ಕೆ ಬರುವುದಕ್ಕೆ ಮೊದಲು ಮುಸ್ಲಿಂ ಸಮಾಜದ ಒಳಬೇಗುದಿಗಳನ್ನು ಸಮಾಜದ ಮುಂದೆ ತೆರದಿಡುವ ಕೆಲಸವನ್ನು ಬೋಳುವಾರ ಮೊಹಮದ್, ಸಾರಾ ಅಬೂಬಕ್ಕರ್, ಫಕೀರ್ ಮೊಹಮದ್ ಕಟ್ಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಹಾಕಿದ ದಾರಿಯಲ್ಲಿ ಜ್ಯೋತಿಯನ್ನಿಡಿದು ನಡೆಯುವವರ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಬಿ.ಎಂ.ಬಷೀರ್ ಸ್ವಲ್ಪ ಸಾಫ್ಟ್ ಕಾರ್ನರಿನಲ್ಲಿ ಬರೆಯೋದು ಜಾಸ್ತಿ. ಮುಸ್ಲಿಂ ಸಮುದಾಯದ ತಲ್ಲಣಗಳು ಈ ಪುಸ್ತಕದಲ್ಲಿ ಕಾಣಸಿಗುತ್ತಿಲ್ಲ ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಮುಸ್ಲಿಮನಾದವನು ಆ ಸಮುದಾಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯ ಎಂಬುದು ಎಷ್ಟು ಸತ್ಯವೋ ಮುಸ್ಲಿಂ ಲೇಖಕನಾದ ಮಾತ್ರಕ್ಕೆ ಮುಸ್ಲಿಂ ಸಮುದಾಯದ ತಲ್ಲಣಗಳನ್ನಷ್ಟೇ ಬರೆಯಬೇಕು ಎಂಬುದೂ ಒಪ್ಪತಕ್ಕ ವಿಷಯವೇನಲ್ಲ.
ಬುರ್ಖಾದ ವಿಷಯವಾಗಿ ನಡೆಯುತ್ತಿರುವ ಚರ್ಚೆಗಳು ಬಹುಶಃ ಸಮಾಜ ನಡೆಯುತ್ತಿರುವ ದಾರಿಯನ್ನು ತೋರಿಸುತ್ತಿವೆಯೇನೋ. ಇಲ್ಲಿಯವರೆಗೆ ದಿನೇಶ್ ಅಮೀನ್ ಮಟ್ಟು ತಮ್ಮ ಲೇಖನಗಳಿಂದ, ವಿಚಾರಗಳಿಂದ ಹಿಂದೂ ಧರ್ಮಾಂಧರ ಟೀಕೆಗೆ ಗುರಿಯಾಗಿದ್ದರೆ, ಈಗ ಬುರ್ಖಾದ ವಿಷಯವಾಗಿ ಚರ್ಚೆಗೆ ನಾಂದಿ ಹಾಡಿದ ಕಾರಣ ಮುಸ್ಲಿಂ ಧರ್ಮಾಂಧರ ಟೀಕೆಗೆ ಗುರಿಯಾಗುತ್ತಿದ್ದಾರೆ. ದಿನೇಶರನ್ನು ಮತ್ತವರನ್ನು ಬೆಂಬಲಿಸುತ್ತಿರುವವರನ್ನು ‘ಅಲ್ಲಾಹುನ ವಿರೋಧಿಗಳು’ ‘ಆರ್ರೆಸ್ಸಿನ ವಕ್ತಾರರು’ ಇನ್ನಿತರ ಚರ್ವಿತಚರ್ಣ ಮಾತುಗಳಿಂದ ಹೀಯಾಳಿಸುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಧರ್ಮಾಂಧರು ತಮ್ಮ ಧರ್ಮದ ಮೇಲೆ ಸ್ವಲ್ಪ ಮಟ್ಟಿಗೆ ಟೀಕೆ ಎದುರಾದರೂ ಒಂದೇ ರೀತಿಯಲ್ಲಿ ವರ್ತಿಸುತ್ತಾರೆನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಚರ್ಚೆಗೆ, ಪ್ರಶ್ನೆಗೆ ಒಡ್ಡಿಕೊಳ್ಳದ ಧರ್ಮ ತನ್ನ ಸ್ಥಗಿತತೆಯಿಂದಾಗಿಯೇ ಅಸ್ತಿತ್ವವನ್ನು ಕಳೆದುಕೊಳ್ಳುವ, ಅದಕ್ಕಿಂತಲೂ ಹೆಚ್ಚಾಗಿ ಅರ್ಥ ಕಳೆದುಕೊಳ್ಳುವ, ಅಪಾರ್ಥವಾಗಿ ಅನರ್ಥಕ್ಕೆಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದ್ಯಾಕೆ ಈ ಧರ್ಮಾಂಧರಿಗೆ ಅರಿವಾಗುವುದಿಲ್ಲ.
ಮೇಲ್ನೋಟಕ್ಕೆ ಹಿಂದೂ ಧರ್ಮ ಉದಾರವಾದಿಯಾಗಿಯೂ, ಎಲ್ಲಾ ತರಹದ ಪ್ರಶ್ನೆಗಳಿಗೆ ಉತ್ತರವನ್ನೀಯಲು ಪ್ರಯತ್ನಿಸುವ ಧರ್ಮವಾಗಿಯೂ ಕಾಣುತ್ತದೆ. ಅದು ಭಾಗಶಃ ಸತ್ಯ ಮತ್ತು ಭಾಗಶಃ ಸುಳ್ಳು. ಹಿಂದೂ ಧರ್ಮದ ಕೆಲವು ಬದಲಾವಣೆಗಳೂ ಜಾರಿಯಾಗಲು ಶತಮಾನಗಳೇ ಹಿಡಿದಿವೆ, ಶತಮಾನಗಳು ಉರುಳಿದರೂ ಮತ್ತಷ್ಟು ಕಂದಾಚಾರಗಳು ಹಾಗೆಯೇ ಉಳಿಯುತ್ತವೆ. ಧರ್ಮ ವಿರೋಧಿಗಳನ್ನು ಮಟ್ಟವಾಕುವಲ್ಲಿ ಹಿಂದೂ ಧರ್ಮದ ವಕ್ತಾರರೆನ್ನಿಸಿಕೊಂಡವರು ತಮ್ಮ ಪಾಲಿನ ಕ್ರೌರ್ಯ ಮೆರೆದಿದ್ದಾರೆ. ಆ ಕ್ರೌರ್ಯದ ಫಲವಾಗಿಯೇ ಭಾರತದಲ್ಲಿ ಹುಟ್ಟಿಯೂ ಬೌದ್ಧ ಧರ್ಮ ನೆಲೆಯನ್ನರಸಿ ಬೇರೆಡೆಗೆ ತೆರಳಿದ್ದು. ಇದೆಲ್ಲದರ ನಡುವೆಯೂ ಪ್ರಶ್ನೆ ಕೇಳಿದವರನ್ನೆಲ್ಲಾ, ಸಂಪ್ರದಾಯವನ್ನು ಚರ್ಚೆಯ ನಿಕಷಕ್ಕೆ ಒಡ್ಡಿದವರನ್ನೆಲ್ಲಾ ಅಂತ್ಯ ಕಾಣಿಸದ ಕಾರಣದಿಂದ ಲಿಂಗಾಯತ ಧರ್ಮ ತಲೆಯೆತ್ತಲು ಸಾಧ್ಯವಾಯಿತು. ಏಕದೇವಕ್ಕೆ ಸೀಮಿತವಾಗದೆ ತನ್ನ ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ದೇವರನ್ನು ನಿರ್ಮಿಸಿಕೊಂಡು ಪೂಜಿಸಿದ್ದೂ ಕೂಡ ಹಿಂದೂ ಧರ್ಮದಲ್ಲಿ ಸ್ವಲ್ಪ ಮಟ್ಟಿಗಿನ ಉದಾರಿತನ ಉಳಿದುಕೊಳ್ಳಲು ಕಾರಣವಾಯಿತೆನ್ನಬಹುದು.
ಏಕದೇವತೆಯ ಆಧಾರದಲ್ಲೇ ಹುಟ್ಟಿಕೊಂಡ ಕ್ರಿಶ್ಚಿಯಾನಿಟಿ, ಇಸ್ಲಾಂನಂತಹ ಧರ್ಮಗಳಲ್ಲಿ ಆ ಕಾರಣದಿಂದಾಗಿಯೇ ಅಸಹಿಷ್ಣುತೆ ಹೆಚ್ಚಾಗಿಬಿಟ್ಟಿತಾ? ಯಾರೋ ರಾಮನಿಗೆ ಅವಹೇಳನ ಮಾಡುವಂತಹ ಮಾತನ್ನಾಡಿದರೆ ಅದು ಅನೇಕ ‘ಹಿಂದೂ’ಗಳಿಗೆ ವಿಚಲಿತವನ್ನುಂಟುಮಾಡುವ ಸಂಗತಿಯೆನ್ನಿಸುವುದೇ ಇಲ್ಲ. ಯಾಕೆಂದರೆ ಅನೇಕರಿಗೆ ರಾಮ, ಕೃಷ್ಣ ರಾಮಾಯಣ, ಮಹಾಭಾರತದ ಒಂದು ಪಾತ್ರವಷ್ಟೇ, ಮನೆ ದೇವರು ಬೇರೆಯೇ ಇರುತ್ತಾರೆ. ಕ್ರಿಶ್ಚಿಯಾನಿಟಿ, ಇಸ್ಲಾಂನಲ್ಲಿ ಪ್ರಶ್ನೆ ಕೇಳುವ ಹಾಗೇ ಇಲ್ಲ ಎಂದ್ಹೇಳುವುದೂ ಭಾಗಶಃ ಸತ್ಯವಾಗುತ್ತದಷ್ಟೇ. ಇಸ್ಲಾಂ ಧರ್ಮದ ಹುಟ್ಟಿನ ಇತಿಹಾಸವನ್ನು ಗಮನಿಸಿದರೆ ಅದು ಕ್ರಿಶ್ಚಿಯಾನಿಟಿಯದೇ ಮುಂದುವರೆದ ರೂಪ, ಮೊಹಮದ್ ಪೈಗಂಬರರಂತೆ ಜೀಸಸ್ ಕೂಡ ದೇವರ ಪ್ರವಾದಿ. ಪೈಗಂಬರರ ಮನಸ್ಸಿನಲ್ಲಿ ಅಲ್ಲಿಯವರೆಗಿದ್ದ ಧರ್ಮಗಳ ಬಗ್ಗೆ ಚರ್ಚೆ ನಡೆಯದಿದ್ದಲ್ಲಿ, ಪ್ರಶ್ನೆ ಮೂಡದಿದ್ದಲ್ಲಿ ಇಸ್ಲಾಂ ಧರ್ಮ ರೂಪುಗೊಳ್ಳುತ್ತಿತ್ತೆ? ಹಿಂದಿನ ಧರ್ಮಗಳ, ಆಚರಣೆಗಳ ವಿರುದ್ಧ ಜೀಸಸ್ ಪ್ರಶ್ನೆ ಮಾಡದಿದ್ದಲ್ಲಿ ಕ್ರಿಶ್ಚಿಯಾನಿಟಿ ಹುಟ್ಟುತ್ತಿತ್ತೇ? ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮಗಳ ಜನನವಾದ ನಂತರವೂ ಅದೇ ಧರ್ಮದೊಳಗೆ ಪ್ರಶ್ನೆಗಳು ಹುಟ್ಟದೆ, ಚರ್ಚೆಗಳಾಗದೆ ಇದ್ದಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಾಗಲೀ ಇಸ್ಲಾಂ ಧರ್ಮದಲ್ಲಾಗಲೀ ಅಷ್ಟೊಂದು ಪಂಗಡಗಳು ಹುಟ್ಟುಪಡೆಯುತ್ತಿತ್ತೆ? ಬುರ್ಖಾದ ಬಗೆಗೆ ಚರ್ಚೆಯೇ ಬೇಡವೆನ್ನುವವರು ಒಮ್ಮೆ ಯೋಚಿಸಬೇಕು.
ಬುರ್ಖಾದ ಬಗ್ಗೆ ಮುಸ್ಲಿಮರಷ್ಟೇ ಚರ್ಚಿಸಬೇಕು ಉಳಿದರಿಗ್ಯಾಕೆ ಅದರ ಗೊಡವೆ ಎಂಬ ಪ್ರಶ್ನೆ ಅನೇಕರದ್ದು. ಒಂದು ಸಮಾಜದಲ್ಲಿ ಎಲ್ಲ ಜಾತಿ – ಧರ್ಮದವರೂ ಬಾಳುತ್ತಿರುವಾಗ ಒಂದು ಧರ್ಮದ ಜನರ ಕಷ್ಟ ಸುಖಗಳಿಗೆ ಮತ್ತೊಂದು ಧರ್ಮದವರು ಆಗುತ್ತಿರುವಾಗ ಒಂದು ಧರ್ಮದ ಬಗೆಗೆ ಮತ್ತೊಂದು ಧರ್ಮದವರು ಚರ್ಚಿಸುವುದು ಮತ್ತು ಆ ಚರ್ಚೆಗೆ, ಚರ್ಚೆಗೊಳಪಡಲ್ಪಟ್ಟ ಧರ್ಮದ ಸದಸ್ಯರು ಬೆಂಬಲಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ನಮ್ಮ ಸಮಾಜ ಅನಾರೋಗ್ಯದ ಮಡುವಿನಲ್ಲಿ ಹೊರಳಾಡುತ್ತಿದೆಯೆನ್ನಿಸಿದರೂ ಚರ್ಚೆಗೆ ಅವಕಾಶವಿನ್ನೂ ಇರುವ ಕಾರಣ ಇದು ಇತರೆ ಎಷ್ಟೋ ಸಮಾಜಗಳಿಗಿಂತ ಆರೋಗ್ಯಕರವಾಗಿಯೇ ಇದೆ. ಮುಸ್ಲಿಂ ಹುಡುಗರು ಧರಿಸುವ ದಿರಿಸಿನ ಬಗ್ಗೆ ನಡೆಯದ ವಿವಾದ ಮಹಿಳೆಯರು ತೊಡಬೇಕೆನ್ನಲಾಗುವ ಬುರ್ಖಾದ ವಿಷಯವಾಗಿ ಯಾಕಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಅದು ಇಸ್ಲಾಂ ಇರಲಿ, ಕ್ರಿಶ್ಚಿಯಾನಿಟಿ ಇರಲಿ, ಹಿಂದೂ ಧರ್ಮವಿರಲಿ ‘ಧರ್ಮ ರಕ್ಷಣೆಯ’ ನೆಪದಲ್ಲಿ, ‘ಸಂಸ್ಕೃತಿಯ ರಕ್ಷಣೆಯ’ ನೆಪದಲ್ಲಿ ಹೆಚ್ಚು ತೊಂದರೆಗೊಳಗಾಗುವುದು, ಧರ್ಮ – ಸಂಸ್ಕೃತಿ ‘ರಕ್ಷಿಸುವ’ ಹೊಣೆಗಾರಿಕೆ ಹೆಚ್ಚಾಗಿ ತಗುಲಿಕೊಳ್ಳುವುದು ಮಹಿಳೆಗೆ. ಇಸ್ಲಾಂ ಹುಟ್ಟಿದ ನಾಡಿನಲ್ಲಿ ಅಲ್ಲಿನ ಪುರುಷರು ಧರಿಸುವ ಉದ್ದುದ್ದದ ಪೈಜಾಮ ಥರಹದ ಧಿರಿಸನ್ನು ಅಬ್ಬಬ್ಬಾ ಎಂದರೆ ಹಬ್ಬದ ದಿನಗಳಲ್ಲಿ ಬಿಟ್ಟು ಉಳಿದ ದಿನಗಳಲ್ಲಿ ಎಷ್ಟು ಮುಸ್ಲಿಮರು ಧರಿಸುತ್ತಾರೆ?. ಮಹಿಳೆಯರು ಸೀರೆಯನ್ನಷ್ಟೇ ಧರಿಸಬೇಕು ಎಂದಬ್ಬರಿಸುವವರ್ಯಾಕೆ ಜುಬ್ಬಾ ಪೈಜಾಮ ಧರಿಸದೆ ಪಾಶ್ಚಿಮಾತ್ಯರ ಬಳುವಳಿಯಾದ ಪ್ಯಾಂಟು ಶರ್ಟುಗಳನ್ನು ಧರಿಸುತ್ತಾರೆ? ಗಂಡು ಮಕ್ಕಳು ಪೋಲಿ ತಿರುಗಿದರೂ ಸರಿ ಹೆಣ್ಣು ಮಕ್ಕಳು ಆ ಪೋಲಿ ಗಂಡು ಮಕ್ಕಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾ ಸಂಸ್ಕೃತಿಯ ರಕ್ಷಣೆ ಮಾಡಬೇಕು! ಇದು ಹೆಚ್ಚು ಕಡಿಮೆ ಎಲ್ಲ ಧರ್ಮಗಳ ಮನಸ್ಥಿತಿ. ನನ್ನ ಓದಿನ ಪರಿಧಿಯಿಂದ ಅರಿವಾದಂತೆ ಇಸ್ಲಾಂ ಧರ್ಮ ಉಳಿದೆಲ್ಲ ಧರ್ಮಗಳಿಗಿಂತ ಹೆಚ್ಚು ಡೆಮಾಕ್ರಟಿಕ್ ಆಗಿದ್ದ ಧರ್ಮ, ಹೆಣ್ಣುಮಕ್ಕಳನ್ನು ಪುರುಷರಿಗೆ ಸರಿಸಮಾನವಾಗಿ ಕಂಡ ಧರ್ಮ. ಆ ಧರ್ಮವೂ ಕೂಡ ಉಳಿದನೇಕ ಧರ್ಮಗಳಂತೆ ಪುರುಷ ‘ಪೌರುಷಕ್ಕೆ’ ಶರಣಾಗುತ್ತ ಮಹಿಳೆಯರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣಲು ಪ್ರಾರಂಭಿಸಿತು. ಇನ್ನಿತರ ಧರ್ಮಗಳ ವಕ್ತಾರರಂತೆ ಈ ಮನಸ್ಥಿತಿಗೆ ಹೆಣ್ಣುಮಕ್ಕಳ ರಕ್ಷಣೆಯ ಸಲುವಾಗಿ ಎಂಬ ಸಾಲುಗಳನ್ನು ಉದುರಿಸುತ್ತದೆ!
ಧರ್ಮವೆಂದರೆ ಕೇವಲ ಬಟ್ಟೆಯೊಂದರಿಂದಡಗಿ ಕುಳಿತ ಅಧೈರ್ಯವಂತ ಜೀವವೇ? ಬಟ್ಟೆಗಳೇ ಸೃಷ್ಟಿಯಾಗದ ಕಾಲದಿಂದಲೂ ಧರ್ಮವೊಂದು ಅಸ್ತಿತ್ವದಲ್ಲಿದೆ. ಅದು ಮಾನವ ಧರ್ಮ. ಸ್ಥಳೀಯ ಅನುಕೂಲತೆಗೆ, ಅಲ್ಲಿನ ಪ್ರಕೃತಿ ಹುಟ್ಟಿಸಿದ ಭೀತಿಗೆ – ಪ್ರೀತಿಗೆ ಮಾನವ ಧರ್ಮವೆಂಬುದು ಸಾವಿರಾರು ಟಿಸಿಲುಗಳಾಗಿ ಚಿಗುರೊಡೆದಿವೆ. ಆ ಚಿಗುರುಗಳಲ್ಲಿ ಬಹುತೇಕವು ತನ್ನ ಮೂಲವಾದ ಮಾನವ ಧರ್ಮಕ್ಕೆ ಮರ್ಮಾಘಾತವನ್ನೀಯುತ್ತಿವೆ. ಬುರ್ಖಾವೆಂಬುದು ಕಂದಾಚಾರವೇನಲ್ಲ, ಬುರ್ಖಾ ಧರಿಸುವುದು ಎಷ್ಟರಮಟ್ಟಿಗೆ ಮುಸ್ಲಿಂ ಮಹಿಳೆಯ ಹಕ್ಕೋ, ಬುರ್ಖಾ ಧರಿಸದಿರುವುದೂ ಆಕೆಯ ಹಕ್ಕೇ ಹೌದು ಎಂಬುದನ್ನು ಮರೆಯಬಾರದು. ನನ್ನ ವಿದ್ಯಾರ್ಥಿಗಳಲ್ಲನೇಕರು ಮುಸ್ಲಿಮರಿದ್ದಾರೆ. ಬುರ್ಖಾ ಧರಿಸಿ ಕಾಲೇಜಿನವರೆಗೆ ಬಂದು ಕಾಲೇಜಿನಲ್ಲಿ ತಲೆಯ ಮೇಲೊಂದು ವಸ್ತ್ರವನ್ನು (ಹಿಜಾಬನ್ನು) ಧರಿಸುವವರಿದ್ದಾರೆ. ಇದ್ಯಾವುದನ್ನೂ ಧರಿಸದೆ ಬರುವವರ ಸಂಖೈಯೂ ಕಡಿಮೆಯಿಲ್ಲ. ಧರಿಸದವರಿಗೆ ಅವರ ಗೆಳತಿಯರು ಮತ್ತು ಮುಸ್ಲಿಂ ಹುಡುಗರು ಕೆಲವೊಮ್ಮ ಹೀಯಾಳಿಸುತ್ತಲೂ ಇದ್ದರು, ಕೆಲವರು ಹೀಯಾಳಿಕೆಗೆ ಬಗ್ಗಲಿಲ್ಲ, ಕೆಲವರು ಹೀಯಾಳಿಕೆ ತಡೆಯಲಾಗದೆ ಧರಿಸಲಾರಂಭಿಸಿದರು. ಅವರ ವ್ಯಕ್ತಿತ್ವವನ್ನು ಬದಲಿಸದ ಈ ಬದಲಾವಣೆಯಿಂದ ಧರ್ಮಕ್ಕಾಗಲೀ ಆಕೆಗಾಗಲೀ ಯಾವ ಅನುಕೂಲವಾಯಿತು? ಚಿಕ್ಕಂದಿನಿಂದಲೂ ಹೀಗೆಯೇ ಇರಬೇಕು ಇಂಥದ್ದೇ ಮಾಡಬೇಕು ಯಾವುದನ್ನೂ ಪ್ರಶ್ನಿಸಕೂಡದು (ಮನೆಯಲ್ಲಿ ಪ್ರತಿಯೊಂದು ಸಂಪ್ರದಾಯಕ್ಕೂ ಆಚರಣೆಗೂ ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ನನ್ನಂಥವರಿಗೆ ‘ಸುಮ್ನಿರು ಎಷ್ಟು ತಲೆ ತಿಂತೀಯಾ’ ಎಂಬ ಬೈಗುಳ ಖಾಯಂ!) ಎಂಬುದನ್ನು ತಲೆಗೆ ತುಂಬಿದ ಕಾರಣ ಒಂದು ಸಂಪ್ರದಾಯವನ್ನು ಆಚರಿಸದವರು, ಪ್ರಶ್ನಿಸುವವರು ಧರ್ಮವಿರೋಧಿಗಳಾಗಿ ಕಾಣಲಾರಂಭಿಸುತ್ತಾರೆ.
ಧರ್ಮಗಳುಟ್ಟುವುದಕ್ಕೆ ಮುಂಚಿನಿಂದಲೂ ಮನುಷ್ಯರಿದ್ದಾರೆ ಎಂಬ ಸಾಮಾನ್ಯ ಜ್ಞಾನವಿಲ್ಲದಿದ್ದಾಗ ಮಾತ್ರ ‘ಧರ್ಮದೊಳಗಿನ ಕಂದಾಚಾರಗಳನ್ನು ಒಣ ಆಚರಣೆಗಳನ್ನು ವಿರೋಧಿಸೋಣ’ ಎಂದು ಹೇಳಿದ ಮಾತುಗಳೂ ಕೂಡ ಧರ್ಮವಿರೋಧಿ ನಡುವಳಿಕೆಯಾಗಿ ಕಾಣುವುದು. ಪ್ರಶ್ನೆಗಳೇ ಮೂಡದಿದ್ದ ಪಕ್ಷದಲ್ಲಿ ಇವತ್ತಿದ್ದ ಧರ್ಮಗಳ್ಯಾವೂ ಇರುತ್ತಿರಲಿಲ್ಲ. ಸಾವಿರ ವರುಷದ ನಂತರ ಉತ್ತಮವೋ ಅಧಮವೋ ಆದ ಧರ್ಮ ಹುಟ್ಟುವುದಕ್ಕೂ ಪ್ರಶ್ನೆಗಳಿರಲೇಬೇಕು. ಧರ್ಮವನ್ನು ಸ್ಥಗಿತಗೊಳಿಸುವ ಹುನ್ನಾರದಿಂದಲೇ ಧರ್ಮವನ್ನುಟ್ಟು ಹಾಕಿದವರನ್ನು ಧಾರ್ಮಿಕ ಸರಪಳಿಗಳಿಂದ ಬಂಧಿಸಿ ಅವರ ವಿಚಾರಗಳನ್ನು ಮರೆತು ಕೆಲವು ಆಚರಣೆಗಳನ್ನಷ್ಟೇ ಧರ್ಮಕ್ಕೆ ಸೀಮಿತಗೊಳಿಸುವ ಕಾರ್ಯ ಸಾಂಗೋಸಾಂಗವಾಗಿ ಬಹುತೇಕ ಎಲ್ಲಾ ಧರ್ಮದಲ್ಲೂ ನಡೆಯುತ್ತಿರುವುದು. ಎಲ್ಲರೂ ಸಮಾನರಾಗಬೇಕೆನ್ನುವ ಆಶಯದಿಂದ ಲಿಂಗಾಯತ ಧರ್ಮ ಹುಟ್ಟುಹಾಕಿದ ಬಸವಣ್ಣ ಪ್ರತಿಮೆಗಳಿಗ ಸೀಮಿತವಾಗಿ, ಬ್ರಾಹ್ಮಣರ ನಂತರ ನಮ್ಮದೇ ಶ್ರೇಷ್ಠ ಜಾತಿ ಎಂದು ಲಿಂಗಾಯತರಲ್ಲನೇಕರು ಪರಿಭಾವಿಸುವುದಕ್ಕೆ, ಪ್ರತಿಯೊಬ್ಬನಿಗೂ ಬುದ್ಧನಾಗುವುದಕ್ಕೆ ಸಾಧ್ಯವಿದೆ ಪ್ರತಿಯೊಬ್ಬನೂ ಬುದ್ಧನಾಗುವುದಕ್ಕೆ ತನ್ನದೇ ಸ್ವಂತ ದಾರಿ ಹುಡುಕಿಕೊಳ್ಳಬೇಕು ಎಂದ್ಹೇಳಿದ ಬುದ್ಧನನ್ನೇ ಬೌದ್ಧ ಧರ್ಮಕ್ಕೆ ಸೀಮಿತವಾಗಿಸಿದ್ದಕ್ಕೆ, ದೇವರನ್ನು ಗೆಳೆಯನನ್ನಾಗಿ ಕಾಣುವ, ಹೊಗಳುವ - ತೆಗಳುವ ಸೂಫಿ ಪದ್ಧತಿಯನ್ನು ವಿರೋಧಿಸುವುದಕ್ಕೆ ಧರ್ಮ ಸ್ಥಗಿತವಾಗಿರಬೇಕೆಂಬ ಹುನ್ನಾರವೇ ಕಾರಣವೆಂದರೆ ತಪ್ಪಾಗಲಾರದು.
ಕೆಲವು ದಿನಗಳ ಹಿಂದೆ ಪತ್ರಕರ್ತ ಮೊಹಮ್ಮದ್ ಇರ್ಷಾದ್ ತಮ್ಮ ಫೇಸ್ ಬುಕ್ ಪುಟದಲ್ಲಿ ಖ್ಯಾತ ಇಸ್ಲಾಮೀ ಪ್ರಗತಿಪರ ಚಿಂತಕ ಜಿಯಾವುದ್ದೀನ್ ಸರ್ದಾರ್ ಅವರ ಸ್ವರ್ಗ ಸಾಧನೆಯ ಉತ್ಕಟ ಬಯಕೆಸಂದೇಹಿ ಮುಸ್ಲಿಮನ ಯಾತ್ರೆಗಳು ಪುಸ್ತಕದಿಂದ ಆಯ್ದ ಭಾಗವನ್ನು ಹಾಕಿದ್ದರು – 
“ಜಿಯಾವುದ್ದೀನ್ ಸರ್ದಾರ್ ಪಾಕಿಸ್ಥಾನದ ಮದರಸಾದ ವಿದ್ಯಾರ್ಥಿಯೊಬ್ಬನ ಜೊತೆಗೆ ಚರ್ಚಿಸುತ್ತಾ ...... ವಿದ್ಯಾರ್ಥಿ ನೀವು ಶಿಯಾನಾ? ಎಂದು ಕೇಳಿ .. ನಾನು ಅಲ್ಲ ಎಂದೆ. 'ಶಿಯಾಗಳು ಮುಸ್ಲಿಮರಲ್ಲ. ಅವರು ನಿಜವಾದ ಇಸ್ಲಾಮೀ ಗಣರಾಜ್ಯಕ್ಕೆ ಸೇರುವುದಿಲ್ಲಎಂದು ಆತ ಯಾವುದೇ ಹಿಂಜರಿಕೆ ಇಲ್ಲದೆ ಹೇಳಿದ. ನೀವು ಒಳ್ಳೆಯ ಮುಸ್ಲಿಮರೇ? ಎಂದು ಆತ ಕೇಳಿದ ನಾನೊಬ್ಬ ಮುಸ್ಲಿಮ್. ಆದ್ರೆ ಒಳ್ಳೆಯ ಮುಸ್ಲಿಮನೋ ಹೇಗೆ ಎಂದು ನನಗೆ ಗೊತ್ತಿಲ್ಲಎಂದೆ. ನೀವು ಮುಸ್ಲಿಮರಾಗಿದ್ದರೆ ನಿಮಗೆ ಗಡ್ಡವೇಕಿಲ್ಲ? ಯಾಕೆಂದರೆ ಮುಸ್ಲಿಮರಾಗಲು ಗಡ್ಡದ ಅವಶ್ಯಕತೆಯಿಲ್ಲ. ಇಲ್ಲ, ಅದು ಪ್ರವಾದಿಗಳ ಸುನ್ನಾ (ಸಂಪ್ರದಾಯದ ಮುಂದುವರಿಕೆ). ಯಾರು ಪ್ರವಾದಿಗಳ ಸುನ್ನಾವನ್ನು ಅನುಸರಿಸುವುದಿಲ್ಲವೋ ಅವರು ಮುಸ್ಲಿಮರಲ್ಲ
ಹಾಗಾದರೆ ನೀವ್ಯಾಕೆ ಒಂಟೆಗಳ ಮೇಲೆ ಓಡಾಡುತ್ತಿಲ್ಲ? ನನ್ನ ಮಾತಿನಿಂದ ಆತ ಗಲಿಬಿಲಿಗೊಂಡಿದ್ದಏನು ನೀವು ಹೇಳುತ್ತಿರುವುದು? ‘ ಒಂಟೆಯ ಮೇಲೆ ಓಡಾಡುವುದು ಕೂಡಾ ಸುನ್ನಾ . ಪ್ರವಾದಿಗಳು ತಮ್ಮ ಬದುಕಿನ ಬಹಳಷ್ಟು ಸಮಯವನ್ನು ಒಂಟೆಯ ಬೆನ್ನ ಮೇಲೆ ಕುಳಿತೇ ಕಳೆದಿದ್ದರು” ‘ಆದರೆ ಇವತ್ತು ನಮ್ಮ ಹತ್ತಿರ ಕಾರು ಬಸ್ಸುಗಳಿವೆಯಲ್ಲಾ.’ ‘ಹಾಂ. ಅದೇ ನಾನು ಹೇಳುತ್ತಿದ್ದುದು.’ ಎಂದು ನಾನು ಆವನಿಗೆ ಹೇಳಿದೆ. ‘ ಆಗಿನ ಕಾಲದಲ್ಲಿ ಬ್ಲೇಡುಗಳು ಇದ್ದಿದ್ದರೆ ಪ್ರವಾದಿಗಳೂ ಅದನ್ನು ಉಪಯೋಗಿಸುತ್ತಿದ್ದರು. ಅದರಲ್ಲಿ ಅನುಮಾನವೇ ಇಲ್ಲ. ನೀವು ಸುರ್ಮಾ ಹಚ್ಚಿಕೊಂಡಿದ್ದೀರಿ ಅಲ್ಲವೇ? ಎಂದು ನಾನು ಕೇಳಿದೆ ಹೌದು ಅದು ಸುನ್ನಾ . ಆದರೆ ಅದರಲ್ಲಿ ಸೀಸವು ಸೇರಿಸುತ್ತದೆ. ಅದು ನಿಮ್ಮ ಕಣ್ಣುಗಳನ್ನು ಹಾಳುಮಾಡಿ ನಿಮ್ಮ ದೇಹಕ್ಕೆ ವಿಷವನ್ನು ಸೇರಿಸಬಹುದು. ಆತ ಸುಮ್ಮನೆ ನಿಂತಿದ್ದ. ಪ್ರವಾದಿಯರ ಹಲವು ಕೃತ್ಯಗಳು ಅವರ ಕಾಲದಲ್ಲಿ ಅನಿವಾರ್ಯವಾಗಿದ್ದವು. ಅವುಗಳೆಲ್ಲಾ ಸುನ್ನಾದ ಅಂಶಗಳೆಂದು ನಾನು ತಿಳಿಯುವುದಿಲ್ಲ. ನನ್ನಾ ಪ್ರಕಾರ ಸುನ್ನಾ ಎಂದರೆ ಅವರು ಪ್ರತಿಪಾದಿಸಿದ ಮೌಲ್ಯಗಳ ಚೈತನ್ಯಕ್ಕೆ ಸಂಬಂಧಿಸಿದ್ದು. ಅವರ  ಔದಾರ್ಯ , ಪ್ರೀತಿ, ಮತ್ತು ಸಹನೆ, ತಮಗೆ ಕಿರುಕುಳ ಕೊಟ್ಟವರನ್ನೂ , ಶೋಷಿಸಿದವರನ್ನೂ ಮನ್ನಿಸುವ ಅವರ ಕ್ಷಮಾಗುಣ, ಹಿರಿಯರು, ಮಕ್ಕಳು,ಮತ್ತು ಪರಿತ್ಯಕ್ತರ ಬಗ್ಗೆ ಅವರು ತೋರಿಸುತ್ತಿದ್ದ ಗೌರವ ಮತ್ತು ಕಾಳಜಿ, ನ್ಯಾಯ ಧರ್ಮ ಮತ್ತು ಸಮಾನವಕಾಶಗಳಿಗಾಗಿ ಇದ್ದ ತುಡಿತ , ಶೋಧನೆ , ಜ್ಞಾನ ಮತ್ತು ವಿಮರ್ಶೆಗಳಿಗೆ ಅವರಿಗಿದ್ದ ಅರ್ಪಣಾ ಮನೋಭಾವ.” ಸಂಪ್ರದಾಯದ ವಿರುದ್ಧ ಪ್ರಶ್ನೆಗಳನ್ನು ಕೇಳಿದವರನ್ನೆಲ್ಲಾ ದೈವವಿರೋಧಿಗಳು, ಧರ್ಮನಿಂದಕರು ಎಂದು ಜರೆಯುವ ಮನೋಭಾವವನ್ನು ಮೊದಲು ಬಿಡಬೇಕು. ಏನೊಂದೂ ಪ್ರಶ್ನಿಸದೇ ಮಾತೇ ಆಡದೆ ಪೂಜಿಸಿ ಹೊರನಡೆದುಬಿಡುವ ಅಂಧ ಆಸ್ತಿಕನಿಗಿಂತ ಪ್ರಶ್ನೆ ಕೇಳಿ ಕೇಳಿ ತಲೆಚಿಟ್ಟಿಡಿಸುತ್ತ ಚರ್ಚಿಸುವ ನಾಸ್ತಿಕನೇ ದೇವರಿಗೆ ಹೆಚ್ಚು ಪ್ರಿಯರೆಂಬುದನ್ನೂ ಮರೆಯಬೇಡಿ!

3 comments:

  1. ನಿಮ್ಮ ಲೇಖನ ಇಷ್ಟವಾಯಿತು. ಒಟ್ಟಿನಲ್ಲಿ, ಎಲ್ಲಿಯವರೆಗೆ ಮಹಿಳೆಯೊಬ್ಬಳು ತನ್ನಂತಹ ಮಹಿಳೆಯರ ಅನುಕೂಲಕ್ಕಾಗಿಯೇ ಹೊಸದಾದ 'ಸಾಂಸ್ಥಿಕ ಧರ್ಮ'ವೊಂದನ್ನು ಸ್ಥಾಪಿಸಿ, ಪ್ರಚಾರ ನೀಡಿ, ಅನುಯಾಯಿಗಳನ್ನು ಸಂಪಾದಿಸಿ, ಪುರುಷವಿರೋಧಿ ಆಚರಣೆಗಳನ್ನು ಜ್ಯಾರಿಗೆ ತರುವುದಿಲ್ಲವೋ, ಅಲ್ಲಿಯವರೆಗೆ ಈಗ ಜಗದಗಲ ಚಾಲ್ತಿಯಲ್ಲಿರುವ ಎಲ್ಲ ಪುರುಷನಿರ್ಮಿತ, ಪುರುಷಾನುಕೂಲಿತ 'ಸಾಂಸ್ಥಿಕ ಧರ್ಮಾವಲಂಭಿ' ಮಹಿಳೆಯರು, ತಮಗೆ ಇಷ್ಟವಿರಲಿ ಇಲ್ಲದಿರಲಿ, ಬಗೆ ಬಗೆಯ ಕಟ್ಟುಪಾಡುಗಳ, ಬಗೆ ಬಗೆಯ ಬಣ್ಣಗಳ ಬುರ್ಖಾದೊಳಗೆಯೇ ಮುದುಡಿಕೊಂಡಿರಬೇಕಾಗುತ್ತದೆ.

    ReplyDelete
  2. ಮಹಿಳೆಯರೇ ಹುಟ್ಟುಹಾಕಿದ ಧರ್ಮದಿಂದಲೂ ಮಹಿಳೆಯರನ್ನು ಮುದುಡಿಸುವ ಆಚರಣೆಗಳು ಬರುವುದಿಲ್ಲವೆಂದು ನಂಬುವುದು ಕಷ್ಟ

    ReplyDelete
  3. Sushi Kadanakuppe22/12/16 8:52 PM

    ನಿಜ! ಯಾವುದೇ ವಿಚಾರಗಳು ಧರ್ಮದ ಪರಿಕಲ್ಪನೆಯಲ್ಲಿ ಗಟ್ಟಿಗೊಂಡರೆ ಅದು ಕ್ರಮೇಣ ಸ್ಥಗಿತಗೊಳ್ಳುವ ಅಪಾಯವನ್ನು ನಾವು ಅರಿಯಬೇಕಾಗುತ್ತದೆ. ಉದಾಹರಣೆಗೆ, ಬೌದ್ಧ ಧರ್ಮ. ಮಹಿಳೆಯರು ಹುಟ್ಟುಹಾಕಿದರೂ ಅಷ್ಟೇ!

    ReplyDelete