Sep 18, 2014

ಹನುಮಂತ ಹಾಲಿಗೇರಿಯವರ "ಕೆಂಗುಲಾಬಿ" ಇ ಆವೃತ್ತಿಯಲ್ಲಿ.

Hanumant haaligeri
ಕೆಂಗುಲಾಬಿ
ಕೆಲವು ದಿನಗಳ ಹಿಂದೆ ಕನ್ನಡ ಪುಸ್ತಕಗಳ ಇ-ಆವೃತ್ತಿಯ ಬಗ್ಗೆ ಲೇಖನ ಬರೆದಾಗ ತುಂಬಾ ಹೆಚ್ಚೇನೂ ಪ್ರತಿಕ್ರಿಯೆಗಳು ಸಿಕ್ಕಿರಲಿಲ್ಲ. ಕೆಲವರು ಇ-ಆವೃತ್ತಿಗಳು ಮುದ್ರಿತ ಪ್ರತಿಗಳ ಮಾರಾಟ ಕಸಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದಂತೂ ಸತ್ಯ, ಕನ್ನಡ ಪುಸ್ತಕಕ್ಕೆ ಸದ್ಯಕ್ಕೆ ಇ-ಆವೃತ್ತಿಯ ಮಾರುಕಟ್ಟೆ ಅಷ್ಟಾಗಿ ಇಲ್ಲ. ನಾನು ಹಿಂದೊಮ್ಮೆ ಬರೆದಂತೆ ಇ-ಆವೃತ್ತಿಯನ್ನು ಓದುವವರ ಸಂಖೈ ಹೆಚ್ಚಾದ ದಿನ ಕನ್ನಡ ಪುಸ್ತಕ ಇಲ್ಲದಂತಾಗಬಾರದು. ನನ್ನವೆರಡು ಪುಸ್ತಕಗಳು ಇ-ಆವೃತ್ತಿಯಲ್ಲಿ ಗೂಗಲ್ ಪ್ಲೇ ಮತ್ತು ಸ್ಮಾಶ್ ವರ್ಡ್ಸಿನಲ್ಲಿ ಲಭ್ಯವಿದೆ (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ). ಪತ್ರಕರ್ತ ಹನುಮಂತ ಹಾಲಿಗೇರಿಯವರು ತಮ್ಮ ಕಾದಂಬರಿ "ಕೆಂಗುಲಾಬಿ - ವೇಶ್ಯಾಜಗತ್ತಿನ ಅನಾವರಣ" ಕಾದಂಬರಿಯನ್ನು ಇ - ಆವೃತ್ತಿಗೆ ಪರಿವರ್ತಿಸುವ ಸಲುವಾಗಿ ಕಳುಹಿಸಿದ್ದರು. ಕೆಂಗುಲಾಬಿ ನಿಜಕ್ಕೂ ಬೆಚ್ಚಿ ಬೀಳಿಸುವ ಕೃತಿ. ತನ್ನ ಸಹಜತೆಯಿಂದ, ಯಾವುದೊಂದನ್ನೂ ಅತಿರೇಕಕ್ಕೆ ಕೊಂಡೊಯ್ಯದ ನಿರೂಪಣೆಯಿಂದಾಗಿ ಗಮನ ಸೆಳೆಯುತ್ತದೆ. ಕಾದಂಬರಿಗೆ ಶಿವಮೊಗ್ಗದ ಕರ್ನಾಟಕ ಸಂಘದಿಂದ ನೀಡಲಾಗುವ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ದಕ್ಕಿವೆ. ನಾಡಿನ ವಿವಿದೆಡೆ ಈ ಕಾದಂಬರಿಯ ಕುರಿತಾಗಿ ಸಂವಾದಗಳು ನಡೆದಿವೆ.
ಗೂಗಲ್ ಪ್ಲೇನಲ್ಲಿ ಈ ಕಾದಂಬರಿ ಇಂದಿನಿಂದ ಲಭ್ಯವಿದೆ. 
ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ.

ಪುಸ್ತಕದ ಒಂದು ಭಾಗ ಹಿಂಗ್ಯಾಕೆಯ ಓದುಗರಿಗಾಗಿ
ಒಬ್ಬೊಬ್ಬರ ಬದುಕು ಒಂದೊಂಥರಾ. ಒಂದರೊಳಗ ಸಿಕ್ಕ ಹಾಕ್ಕೊಂಡವರು ಅದರಿಂದ ಬಿಡಿಸಿಕೊಳ್ಳಾಕ ಅವರ ಹಿಂದಿನ ಬದುಕಿನ ಅಧ್ಯಾಯಗಳು ಅಷ್ಟು ಸರಳ ಬಿಡುದಿಲ್ಲ. ಸುತ್ತಲಿನ ಪ್ರಪಂಚವನ್ನು ಕಣ್ಣರಳಿಸಿ ನೋಡುವ ಮುನ್ನವೇ, ಯಾರದೋ ಹುನ್ನಾರಕ್ಕೆ ಬಲಿಯಾಗಿ, ತಾವು ಮಾಡದ ತಪ್ಪಿಗಾಗಿ, ಎಷ್ಟೋ ಹೆಣ್ಮಕ್ಕಳು ಇಂದು ತಮ್ಮ ಮೈಯನ್ನೇ ಸಂತೆಯೊಳಗ ಬಿಕರಿಗಿಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳಾಕ ಹತ್ಯಾರ. ಅಂಥ ಮೈ ಮಾರೊಳ ಹೊಟ್ಟಿಯೊಳಗಿಂದ ಭೂಮಿಗೆ ಇಳಿದು ಬಂದವ ನಾ. ಹಿಂದೆ, ಇಂದು, ಮುಂದೆಂದೂ ಬ್ಯಾನಿ ನನ್ನನ್ನು ಬಿಟ್ಟು ಬಿಡದ ಕಾಡಕೋತನ ಇರತೈತಿ. ಚಣದ ನೋವ ಹಂಚಿಕೊಳ್ಳಾಕ ನನಗ ನನ್ನೋರು ಅನ್ನೋರು ಯಾರು ಇಲ್ಲ. ಬಾಯಿಬಿಟ್ಟು ಹಂಚಿಕೊಳ್ಳೋ ನೋವು ನನ್ನವಲ್ಲ. ನನ್ನ ನೋವು ಕೇಳಿದವರಿಂದ, ಅಬ್ಬಬ್ಬಾ ಅಂದ್ರ ಸಹಾನುಭೂತಿಯ ಒಂದು ನೋಟ, ಇಲ್ಲಂದ್ರ ಅಸಹ್ಯದ ಮುಖಭಾವ; ಇವೆರಡೇ ಎದುರಾಗೋದು. ಆದರೆ ಹಂಚಿಕೊಳ್ಳದಿದ್ದರ ಒಳಗಡೆ ಕೊತ ಕೊತ ಕುದಿಯುವ, ಹೊಯ್ದಾಡುವ ಕುದಿತ. ಯಾರ ಮುಂದಾದ್ರೂ ಹಂಚಕೋಬೇಕು, ಬಿಡುಗಡೆಯಾಗಬೇಕು ಅಂತ ಜೀವ ತಳಮಳಸತೈತಿ.
 'ಅಕ್ಷರ ಬಿಡುಗಡೆಯ ಭಾಗ್ಯ' ಅಂತಾರ. ಅದು ಒಬ್ಬೊಬ್ಬರಿಗೆ ಒಂದೊಂದು ಥರಾ ದೈವ. ಆದ್ರ ಅದು ನನಗ ಖರೇನ ಅಂದ್ರ ನನ್ನ ನೋವುಗಳನ್ನು ಬಚ್ಚಿಟ್ಟುಕೊಳ್ಳುವ ಮೌನಬಾವಿ, ನನ್ನೆಲ್ಲ ನೋವುಗಳನ್ನು ಆತು ಕೇಳುವ ಜಿಗರಿದೋಸ್ತ. ನನಗೆ ಸ್ವತಃ ಅನುಭವಿಸಿ ನರಳಿದ್ದನ್ನು, ಕಂಡು ದಂಗಾದುದನ್ನು, ಕೇಳಿ ಕಣ್ಣೀರಿಟ್ಟಿದ್ದನ್ನು, ಕಣ್ಣೀರು ಒಸರುತ್ತಿದ್ದ ಕಣ್ಣುಗಳೊಳಗೆ ಕಣ್ಣಿಟ್ಟು ಕಂಡುಕೊಂಡದ್ದನ್ನು ಆಗಾಗ ನನಗೆ ಡೈರಿಯೊಳಗ ಬರೆಯೊ ಚಟವಿತ್ತು. ಚಟ ಅನ್ನುವುದಕ್ಕಿಂತಲೂ ಕದಡುವ ಮನಸ್ಸನ್ನು ಸ್ಥಿರಗೊಳಿಸಲು, ಹಗುರಾಗಿಸಲು ನಾನೇ ಚಟಾನ ಬೆಳೆಸಿಕೊಂಡೀನಿ. ಒಬ್ಬೊಬ್ಬರಿಗೆ ಒಂದೊಂದು ಚಟ, ಬದುಕಿನ ದುರಂತಗಳನ್ನು ಹಗುರಾಗಿಸಿಕೊಳಾಕ. ನನಗ ಅಕ್ಷರ ಒಲಿದಿದ್ರಿಂದ ನನ್ನ ಮಾಯದ ಗಾಯಕ್ಕ ಮುಲಾಮಾಗಿ ಡೈರಿ ಬರಿತಿದ್ನಿ.
ನಾನು ಹೇಳಿ ಕೇಳಿ ಜೋಗತಿ ಮಗ. ಆದ್ರ ಬಹಳಷ್ಟು ಮಂದಿ ನನ್ನನ್ನು 'ಸೂಳೆ ಮಗ' ಅಂತ ಕರೀತಾರ. ನಾನೂ ಹಂಗೂ ಹಿಂಗೂ ಬಾಳ ಪರಿಪಾಟ ಪಟ್ಟು ಎಂ.. ಮಟ ಓದಿನಿ. ತಾಯಿ ತಂದೆ ಎರಡು ಒಬ್ಬರೆ ಆಗಿದ್ದ ನನ್ನವ್ವ ಅಕ್ಷರ ಎಂಬ ದಿವ್ಯಾಸ್ತ್ರ ಕೊಡಿಸಾಕ, ಮತ್ತ ನಾ ಪಡೆಯಾಕ ಪಟ್ಟ ಪರಿಪಾಟ ಬರದ್ರಅದೊಂದು ದೊಡ್ಡ ಪುಸ್ತಕಾ ಅಕ್ಕೈತಿ. ನನಗ ನನ್ನವ್ವಳ ಬದುಕ ಒಂದು ದೊಡ್ಡ ಕೌತುಕ. ಆಕಿಗಿ ದಿನಕ್ಕೊಂದು ಲಗ್ನ. ದಿನಕೊಬ್ಬನ ಕೂಡ ಶೋಭನ. ಹಂಗ ನೋಡಿದರ ಐದು ಮಂದಿ ಸಂಭಾಳಿಸುತ್ತಿದ್ದ ದ್ರೌಪದಿಗಿಂತ ನನ್ನವ್ವ ಬಾಳ ಗ್ರೇಟು. ದ್ರೌಪದಿ ಐದು ಮಂದಿ ಗಂಡರನ್ನ ಸಂಭಾಳಿಸಿದರ, ನನ್ನವ್ವ ಹೆಚ್ಚು-ಕಮ್ಮೀ ನನ್ನೂರಿನ ಎಲ್ಲ ಗಂಡಸರನ್ನು ಸಂಭಾಳಿಸಿ ಗೆದ್ದಾಳ. ಬರೆ ಐದು ಜನರಿಗೆ ಸುಸ್ತು ಹೊಡೆಯುತ್ತಿದ್ದ ದ್ರೌಪದಿಯನ್ನು ನಮ್ಮ ಸಮಾಜ ದೇವತಿ ಅಂತ ಕರದು ಪೂಜಿ ಮಾಡತೈತಿ. ಆದ್ರ ನಮ್ಮವ್ವನ್ನ ಸೂಳೆ ಅಂತ ಬೈದು ದೂರ ಮಾಡತೈತಿ. ನಮ್ಮವ್ವನ ದೈನಂದಿನ ಗಂಡಂದಿರು ಊರಿನ ಪ್ರತಿಷ್ಠಿತ ಗಣ್ಯರು. ಅವರ ಕೂದಲಿನ ಗೌರವವು ಚೂರೂ ಕೊಂಕಂಗಿಲ್ಲ.
ಅವರು ಹೆಂಗಾರೂ ಹಾಳಾಗಿ ಹೋಗಲಿ. ಆದ್ರ ನನಗ ಅಪ್ಪ ಯಾರು ಅಂತ ಇನ್ನೂ ಮಟ ಗೊತ್ತಿಲ್ಲ. ನಮ್ಮಪ್ಪ ಯಾರೂ ಸ್ವತಃ ನಮ್ಮವ್ವಗೂ ಗೊತ್ತಿಲ್ಲ. 'ಯಾರು' ಅಂತ ಕೇಳಿದರ 'ಗುಡಿಯೊಳಗಿನ ಹನ್ಮಪ್ಪ' ಅಂತ ಹೇಳ್ತಾಳ ನಮ್ಮವ್ವ. ಹೌದು! ನಾನು ಹನ್ಮಪ್ಪ ದೇವ್ರ ಮಗಾ ಅಂದ್ರೆ ದೇವಕುಮಾರ. ಆದ್ರ ಯಾಕ ಹುಡುಗುರು ನನ್ನ ಸೂಳಿ ಮಗ ಅಂತಾರ. ಒಂದೂ ತಿಳಿವೊಲ್ಲದು.
ಇಚಿತ್ರ ಅಂದ್ರ; ಗುಡಿಯೊಳಗಿನ ದೇವರನ್ನ, ಅಂದ್ರ ನಮ್ಮಪ್ಪನ್ನಾ ನಾನು ಇದುವರೆಗೂ ಭೆಟ್ಟಿಯಾಗಿಲ್ಲ. ನಾನಷ್ಟ ಅಲ್ಲ, ಅವ್ವ ಸೈತಾ ಹನಮಂತನ ಹಂತ್ಯಾಕ ಹೋಗಿದ್ದ ಒಮ್ಮಿ ನೋಡಿಲ್ಲ. ಹೋಗಲಿ, ಮಗ ಅಂತ ಮಮಕಾರದಿಂದ ಅಪ್ಪ ಹನುಮಪ್ಪ ಆದ್ರೂ ಬಂದು ನನ್ನ ನೋಡಬಾರದೇನು? ಮಂದಿ ಹುಡುಗರ ಅಪ್ಪಂದಿರನ್ನೆಲ್ಲಾ ನೋಡಿದಾಗ ಎಷ್ಟು ಖುಷಿ ಅಕೈತಿ. ಒಳಗೊಳಗ ಅಷ್ಟು ದುಕ್ಕಾನೂ ಆಕ್ಕೈತಿ.
'ನಮ್ಮಪ್ಪ ಹ್ಯಾಂಗ ಆದಾನಬೇ' ಅಂತ ನಾನು ಒಮ್ಮಿ ಸಿಟ್ಟಿಗೆದ್ದ ಕೇಳಿದ್ದೆ, 'ಅಂವಂದು ಒಂಕ ಮೋತಿ, ಬಂಗಾರ ಕಣ್ಣು, ಬೆಳ್ಳಿ ಗದೆ, ಇಷ್ಟುದ್ದಾ ಬಾಲ' ಅಂತ ಏನೆನೋ ನಮ್ಮವ್ವ ಕತಿ ಮಾಡಿ ಹೇಳಿದ್ಲು.
ಅಷ್ಟೊಂದು ಬೆಳ್ಳಿ-ಬಂಗಾರ ಇರೋ ಸಿರಿವಂತ ನಮ್ಮಪ್ಪ ಅಂತ ಖುಷಿಯಾತು. ಆದ್ರ, ನಮಗಾ ಅಂತ ಏನೂ ಕೊಡದ ನಮ್ಮಪ್ಪ ಹನ್ಮಪ್ಪ ಬಾಳ ಜಿಪುಣ ಇರಬೇಕು ಅಂತ ಬೇಸರಾನೂ ಆಗಿತ್ತು.
'ಅಲ್ಲಬೇ ಯವ್ವ, ಮತ್ತ ನಾವ ಯಾಕ ನಮ್ಮಪ್ಪನ ಮನಿಗೆ ಹೋಗಬಾರದು. ಅದು ಎಷ್ಟ್ ದೊಡ್ಡದೈತಿ' ಅಂದೆ.
'ನಿಮ್ಮಪ್ಪ ನನ್ನ ಕೂಡ ಜಗಳಾ ಮಾಡ್ಯಾನ. ಅದಕ್ಕ ಬರೋದು ಬಿಟ್ಟಾನ' ಅಂತ ಏನೇನೋ ಸಮಾಧಾನ ಮಾಡಿದ್ಲು.
ನಾನು ಸುಮ್ಮನಿರದೆ 'ಅಲ್ಲಬೇ ಮತ್ತ ದಿನ ಒಬ್ಬೊಬ್ಬ ಕಾಕಾಗೊಳು ನಮ್ಮ ಮನಿಗೆ ಬರ್ತಾರಲ್ಲಾ' ಅಂದೆ.
'ಏಟು ಜಗಳ ಮಾಡಿದರೂ ನಿಮ್ಮಪ್ಪಗ ನನ್ನ ಮ್ಯಾಲ ಪ್ರೀತಿ ಕಮ್ಮೀ ಆಗಿಲ್ಲ. ಅದಕ್ಕ ಇವರಂತ್ಯಾಕ ರೊಕ್ಕ ಕೊಟ್ಟ ಕಳಿಸತಾನ' ಅಂದ್ಲು.
'ಮತ್ತ ಒಮ್ಮೊಮ್ಮಿ ಕುಡುದು ಬಂದು ನಿನ್ನ ಬಡೆಯೋದು ಬೈಯ್ಯೊದು ಮಾಡ್ತಾರಲ್ಲಬೇ ಮಕ್ಕಳುಅಂದೆ ಪಟ್ಟುಬಿಡದೆ.
'ನಿಮ್ಮಪ್ಪ ಜಾಸ್ತಿ ರೊಕ್ಕ ಕೊಟ್ಟಿರತಾನ. ಆದ್ರ, ಬಾಡ್ಯಾಗೋಳು ಸ್ವಲ ರೊಕ್ಕ ತಮಗ ಇಟಗೊಂಡು ಉಳದ ರೊಕ್ಕಾ ನನಗ ಕೊಡತಾರ. ಆದಕ್ಕ ನಾನು ಅವರ ಕೂಡ ಜಗಳ ಮಾಡ್ತಿನಿ'
'ನಿಮ್ಮೌನ, ನಿ ಮತ್ಯಾಕ ಇದ ನಮ್ಮಪ್ಪಗ ಹೇಳಂಗಿಲ್ಲ' ಅಂದದ್ದೇ, 'ನಿಮ್ಮಪ್ಪ ನನ್ನ ಕೂಡ ಮಾತಾಡೂದಿಲ್ಲ ಅಂತ ಹೇಳಿದ್ದನೆಲ್ಲ' ಅಂದು ಸುಮ್ಮನಾದ್ಲು.
'ಅವತ್ತು ಹುಡುಗನ ತಂದಿ ಹೆಸರೇನು ಅಂತ ಸಾಲಿಯೊಳಗ ನಮ್ಮ ಮಾಸ್ತರ ಕೇಳಿದಾಗ ತಂದಿ ಇಲ್ಲ ಅಂತ ಹೇಳಿದ್ಯಲ್ಲಾ?'
ನನ್ನ ಇಂಥ ಪ್ರಶ್ನಿ ಕೇಳಿ ಕೇಳಿ ಅವ್ವಗ ಬಾಳ ಸಿಟ್ಟು ಬಂದಿರಬೇಕು, ಅಥವಾ ಉತ್ತರಾ ಕೊಡಾಕ ಆಗಿರಲಿಕ್ಕಿಲ್ಲ. ಸಿಟ್ ಬಂದು ಮಗ್ಗಲ್ದಾಗ ಮಕ್ಕೊಂಡಿದ್ದ ನನ್ನ ಮುಸಡೀಗೆ ಒಂದೆರಡು ಏಟು ಕೊಟ್ಟು ಅಳಸಿದ್ಲು. ತಾನೂ ಸೈತಾ ಮುಖ ಮುಚ್ಚಿಕೊಂಡು ಮುಸಿ ಮುಸಿ ಅತ್ಲು.

ಅವ್ವ ಅವತ್ತು ಯಾಕ ಹೊಡದ್ಲು ಅಂತ ನನಗ ಈಗೀಗ ಗೊತ್ ಆಗಾಕ ಹತ್ತೈತಿ.

English Summary - Journalist Hanumanth Haaligeri's first novel Kengulabi - Veshya Jagattina Anavarana is now available as kannada ebook in google play (click to download). The novel has been awarded by Shivamogga's Karnataka Sangha and Sameerawadi datti Prashasthi. 

No comments:

Post a Comment