ಅಪರೂಪದ ವಿದ್ಯಮಾನವೊಂದರಲ್ಲಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯು ಧೃಡ ನಿರ್ಧಾರವೊಂದರ ಸಮೀಪ ಬಂದು ನಿಂತಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಮತ್ತು ಗ್ರಾಹಕ ಹಕ್ಕು ಮಣ್ಣು ಮಸಿ ಅಂಥ ಬೊಬ್ಬೆ ಹೊಡೆಯುವವರು ವೈಲೆಂಟಾಗದೆ ಸೈಲೆಂಟಾಗಿ ಸೈಡಿಗೋದರೆ ಈ ಧೃಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ವಾಣಿಜ್ಯ ಮಂಡಳಿಯ ಗೋಡೆಗಳು ಪಿಸುಗುಟ್ಟುತ್ತಿದ್ದುದಾಗಿ ಅನಧಿಕೃತ ಮೂಲಗಳು ತಿಳಿಸಿವೆ.
ಏನಿದು ಧೃಡ ನಿರ್ಧಾರ?
ಹಿರಿತೆರೆಯಲ್ಲಿ ಹೆಸರು ಮಾಡಿ ಸ್ಟಾರ್ ಗಿರಿ ಪಡೆದು ಈಗ ಕಿರುತೆರೆಯಲ್ಲಿ ಆ ಸ್ಟಾರ್ ಗಿರಿಯ ನೆಪದಲ್ಲಿ ಆ್ಯಂಕರಿಂಗ್ ಮಾಡುತ್ತ ಹೆಚ್ಚು ಶ್ರಮವಹಿಸದೆಯೇ ಹಣ ಮಾಡುವ ದಾರಿ ಕಂಡುಕೊಂಡಿದ್ದು ಹಿರಿತೆರೆಯಲ್ಲಿ ಚಿತ್ರ ತಯ್ಯಾರು ಮಾಡುವ ನಿರ್ಮಾಪಕರಿಗೆ ಸಂಕಟವುಂಟುಮಾಡಿದೆ. ಆದಕಾರಣವಾಗಿ ಈ ರೀತಿ ಒಂದೆಡೆ ದಕ್ಕಿದ ಸ್ಟಾರ್ ಗಿರಿಯನ್ನು ಮತ್ತೊಂದೆಡೆ ಉಪಯೋಗಿಸುತ್ತ ಮೂಲ ತಾಯಿಗೆ ದ್ರೋಹ ಬಗೆಯುತ್ತಿರುವ ‘ದ್ರೋಹಿ’ಗಳಾದ ರಮೇಶ್, ಸುದೀಪ್ ಮತ್ತು ಗಣೇಶರಿಗೆ ಇನ್ನು ಮುಂದೆ ಅಭಿನಯಿಸದಿರುವಂತೆ ನಿಷೇಧಾಜ್ಞೆ ವಿಧಿಸುವುದೇ ಈ ಧೃಡ ನಿರ್ಧಾರ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾದ ಈ ನಿರ್ಣಯವನ್ನು ವಿನಾಕಾರಣ ಕೆಲವರು ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ವಿರೋಧಿಸುತ್ತಿರುವುದು ಇಡೀ ಕನ್ನಡ ಭಾಷೆಗಾದ ಅವಮಾನವೆಂಬ ಸಂಗತಿಯನ್ನು ಹೆಸರು ಬಹಿರಂಗಗೊಳಿಸಲಿಚ್ಛಿಸದ ಮಂಡಳಿಯ ಸದಸ್ಯರೊಬ್ಬರು ತಿಳಿಸಿದರೆಂದು ವದಂತಿ.
(ಈ ಎಲ್ಲಾ ವದಂತಿ - ಸಂಗತಿಗಳ ಬಗ್ಗೆ
ಕೂಲಂಕುಷವಾಗಿ ಪರಿಶೀಲಿಸಿ ವರದಿ ಮಾಡಲು ಹಿಂಗ್ಯಾಕೆ ತಂಡದ ಪತ್ತೇದಾರಿ ವರದಿಗಾರರನ್ನು
ಕಳುಹಿಸಲಾಗಿ ಈ ಕೆಳಗಿನ ಮಾಹಿತಿಗಳು ಲಭ್ಯವಾಗಿವೆ – ಸಂ.)
ಖ್ಯಾತನಾಮರು ಕಿರುತೆರೆಗೆ ಕಾರ್ಯಕ್ರಮವನ್ನು
ನಡೆಸಿಕೊಡಲು ಬರುವುದು ಖಾಸಗಿ ವಾಹಿನಿಗಳು ಶುರುವಾದಾಗಿನಿಂದಲೂ ಬಹುತೇಕ ಎಲ್ಲಾ ಭಾಷಾ
ವಾಹಿನಿಗಳಲ್ಲೂ ನಡೆಯುವ ಪ್ರಕ್ರಿಯೆ ಇದಕ್ಕೆ ವಿರೋಧವ್ಯಾಕೆ ಎಂದು ಕೇಳಿದಾಗ “ಈ ಸ್ಟಾರುಗಳೆಲ್ಲ ಬಿಟ್ಟಿಯಾಗಿ
ಟಿವಿಯೊಳಗೇ ಬಂದುಬಿಟ್ರೆ ಅವರನ್ನು ನೋಡಲು ಕಾಸು ಕೊಟ್ಟು ಥಿಯೇಟ್ರೊಳಗೆ ಯಾರ್ರೀ ಬರ್ತಾರೆ?
ಅದಿಕ್ಕೆ ಗುಮ್ಮೋಣ ಅಂತ” ಎಂದು ಸಿನಿಮೀಯ ಶೈಲಿಯಲ್ಲಿ ಉತ್ತರಿಸಿದವರೇ ಅಧಿಕ. ‘ಸ್ಟಾರುಗಳನ್ನಲ್ಲ
ಸಿನಿಮಾವನ್ನು ನೋಡೋಕೆ ಬರ್ತಾರೆ ಸಾರೂ’ ಎಂಬ ಮಾತು ಎದುರಿಗಿದ್ದವರೆಲ್ಲ ಕಲಾಪುತ್ರರೇ ಆಗಿದ್ದ
ಕಾರಣ ನಮ್ಮ ವರದಿಗಾರರಲ್ಲೇ ಉಳಿದು ಹೋಯಿತು. ಪತ್ರಿಕಾಗೋಷ್ಠಿ ಮುಗಿದ ತರುವಾಯ ವೈಯಕ್ತಿಕ
ಮಾತುಕತೆಗೆ ಸಿಕ್ಕಾಗ ನಿಜಕ್ಕೆ ಹತ್ತಿರವಿರಬಹುದಾದ ಕಾರಣಗಳನ್ನು ಸನ್ಮಿತ್ರರಲ್ಲಿ ಕೆಲವರು
ತಿಳಿಸಿದರು.
“ನೋಡ್ರಿ ಆ ಚಾನೆಲ್ಲಿನವರು ‘ನಿಮ್ ಪಿಕ್ಚರ್
ತಗಂಡ್ರೆ ಲಾಸು’ ಅಂತ ಹೇಳ್ತಾರೆ. ಅದ್ಯಾವ್ದೋ ಉಳಿದವರು ಕಂಡಂತೆ ಅಂತೆ, ಅದನ್ನೂ ತಗಂಡಿಲ್ಲ ಅಂತ
ಸುದ್ದಿ. ನಾಳೆ ದಿನ ಯಾವ ಸಿನಿಮಾನೂ ತಗಳ್ದೆ ಹೋದ್ರೆ ಬರೋ ಮಿನಿಮಮ್ ಗ್ಯಾರಂಟಿ ಹಣಾನೂ ಇಲ್ದೇ
ಹೋಗುತ್ತಲ್ರೀ. ಅದಿಕ್ಕೆ ಈ ಟೆಕ್ನಿಕ್ಕೂ”. “
“ಈ ಸ್ಟಾರ್ಗಳು ಪಿಕ್ಚರ್ ಪಬ್ಲಿಸಿಟಿಗೆ ಬರೋಕೆ
ಎಷ್ಟು ನಖರಾ ಮಾಡ್ತಾರೆ. ಹೋಗಿ ಟಿವಿಲೀ ಕಿಸೀತಾ ಮಾತಾಡ್ತಾರೆ. ಉರಿಯೋದಿಲ್ವೇನ್ರೀ ನಮ್ಗೆ”
‘ಸಾರೂ.. ಆ ಗಣೇಶೂ ಟಿವಿಯಿಂದ್ಲೇ ಅಲ್ವೇ
ಬಂದಿದ್ದು’
“ಲಾ ಪಾಯಿಂಟೆಲ್ಲ ಹಾಕ್ಬೇಡಿ”
‘ಈ ಐಡಿಯಾ ಹೆಂಗೆ ಹೊಳೀತೂ ಸಾರು’
“ಐಡಿಯಾ ಬರಕ್ಕೂ ಬಿಗ್ ಬಾಸೇ ಕಾರಣ ಬಾಸೂ! ನಮ್
ರವಿಚಂದ್ರನ್ ಅವತ್ತು ಬಿಗ್ ಬಾಸಲ್ಲಿ ಮಾತಾಡ್ತ ‘ಮುಂಚೆಯೆಲ್ಲ ನಾವು ಜನ ಥಿಯೇಟ್ರಿಗೆ ಬಂದು ಕೊಡೋ
ದುಡ್ಡು ನಂಬ್ಕಂಡು ಪಿಕ್ಚರ್ ಮಾಡ್ತಿದ್ವಿ ಸೆಟಲೈಟ್ ರೈಟ್ಸಿಗಲ್ಲ’ ಅಂತ ಹೇಳಿದ್ರಲ್ಲ. ಆಗ ‘ಎಷ್ಟು
ದಿಟ ಅಲ್ವಾ’ ಅಂತ ಟೂಬ್ ಲೈಟ್ ಹೊತ್ಕೊಂತು. ಈ ಟಿವಿಯವ್ರನ್ನ ನಂಬ್ಕಂಡು ಪಿಕ್ಚರ್ ಯಾಕ್
ತೆಗೀಬೇಕು ಅಂತ ಈ ತೀರ್ಮಾನ ತಕ್ಕಂಡೋ”
‘ಟಿವಿಯೋರು ಇನ್ಯಾವ ಪಿಕ್ಚರ್ರಿಗೂ ಪಬ್ಲಿಸಿಟಿ
ಕೊಡಲ್ಲ ಅಂದ್ರೆ’
“ಬಿಡ್ರೀ ರೀ. ಅವರೇನ್ ಬಿಟ್ಟಿ ಹಾಕ್ತಾರ.
ದುಡ್ಡು ಕಾಸು ಊಟ ಗಿಫ್ಟು ಎಲ್ಲ ಕೊಡಲ್ವಾ ನಾವು. ಅಂದ್ಹಾಗೆ ಇವತ್ತು ಊಟ ಅರೇಂಜ್ ಮಾಡಿದ್ದೀವಿ
ತಿನ್ಕೊಂಡೇ ಹೋಗ್ಬೇಕು”
‘ಅದ್ ಹೇಳ್ಬೇಕಾ ಬಾಸೂ. ತಿನ್ಕೊಂಡೇ ಹೋಗೋದು’
ಇನ್ನೇನು ಊಟಕ್ಕೆ ಹೋಗಬೇಕೆನ್ನುವಷ್ಟರಲ್ಲಿ
ದಿಢೀರ್ ಎಂದು ಮತ್ತೊಂದು ಪತ್ರಿಕಾಗೋಷ್ಠಿ ಪ್ರಾರಂಭವಾಯಿತು
“ಸನ್ಮಿತ್ರರೇ ದೇಶದಲ್ಲೀಗ ಎಲ್ಲದರಲ್ಲೂ ಧೃಡ
ನಿರ್ಧಾರವನ್ನು ಏಕಪಕ್ಷೀಯವಾಗಾದರೂ ತೆಗೆದುಕೊಳ್ಳುವ ಪ್ರಧಾನಮಂತ್ರಿಯಿರುವುದರಿಂದ ನಾವೂ ಕೂಡ ಅವರ
ಹಾದಿಯಲ್ಲೇ ನಾಯಕರನ್ನು ಕಿರುತೆರೆಯಲ್ಲಿ ನಿಷೇಧಿಸುವ ನಮ್ಮ ಧೃಡ ನಿರ್ಧಾರವನ್ನು ಮತ್ತಷ್ಟು
ಧೃಡಪಡಿಸುವ ತೀರ್ಮಾನ ಮಾಡಿದ್ದೇವೆ. ಹಿರಿತೆರೆಯಿಂದ ಕಿರುತೆರೆಗೆ ಹೋಗಿರುವವರನ್ನು ನಿಷೇಧಿಸುವ
ಜೊತೆಜೊತೆಗೆ ಕಿರುತೆರೆಯಿಂದ ಹಿರಿತೆರೆಗೆ ಬಂದಿರುವವರನ್ನು ನಿಷೇಧಿಸುತ್ತ ಅವರು ಮತ್ತೆ
ಕಿರುತೆರೆಗೆ ಮರಳಿ ಹೋಗಬೇಕೆನ್ನು…………” ಒಳಗಿನಿಂದಲೇ ಒಂದು ಕಲ್ಲು ಬಿತ್ತು. ಕನ್ನಡ ದ್ರೋಹಿಗಳನ್ನು
ದೂಷಿಸುತ್ತ ಪತ್ರಿಕಾಗೋಷ್ಠಿ ಬರಕಸ್ತಾಯ್ತು.
No comments:
Post a Comment