Aug 25, 2014

ಇತಿಹಾಸವನ್ನರಸುತ್ತ.....


Saketh Rajan
Making History

ಡಾ. ಅಶೋಕ್. ಕೆ. ಆರ್.
ಇತಿಹಾಸವೆಂದರೆ ಏನು? ಶಾಲೆಯಲ್ಲಿ ಸಮಾಜ ವಿಜ್ಞಾನವೆಂದರೆ ಆಸಕ್ತಿಯೇ ಮೂಡಿಸದ ಪಾಠಗಳ ಸರಮಾಲೆ. ಜಿಯೋಗ್ರಫಿಯಲ್ಲಿ ಮ್ಯಾಪುಗಳನ್ನು ಬರೆಬರೆದು ಅಭ್ಯಸಿಸಿ, ಸಿವಿಕ್ಸಿನಲ್ಲಿ ಅರ್ಥವಾಗದ್ದನ್ನೆಲ್ಲಾ ಉರು ಹೊಡೆದು ಇತಿಹಾಸದ ಪುಸ್ತಕ ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು! ಆ ಇತಿಹಾಸದ ಪುಸ್ತಕದಲ್ಲಾದರೂ ಏನಿರುತ್ತಿತ್ತು? ಒಂದಾದ ಮೇಲೊಂದರಂತೆ ಅಸಂಖ್ಯ ಇಸವಿಗಳು. ಇಂತಿಪ್ಪ ಇಸವಿಯಲ್ಲಿ ಇಂತಿಪ್ಪ ಜಾಗದಲ್ಲಿ ಇಂತೀರ್ವ ರಾಜರು ಕಾದಾಡಿ ಇಂತಿಪ್ಪ ರಾಜ ಗೆದ್ದು ಅಂತಿಪ್ಪ ರಾಜ ಸೋತೋ – ಸತ್ತೋ ಯುದ್ಧ ಮುಗಿಯುವುದೇ ಇತಿಹಾಸ. ಸದ್ಯ ಹತ್ತನೇ ತರಗತಿಗೆ ಆ ಪಠ್ಯದ ಇತಿಹಾಸದಿಂದ ಮುಕ್ತನಾದೆ!

ಇತಿಹಾಸ ಕೂಡ ಆಸಕ್ತಕರ ಓದಾಗಬಹುದೆಂಬ ಅರಿವಾಗಿದ್ದು ಪಠ್ಯೇತರ ಓದು ಪ್ರಾರಂಭಿಸಿದ ನಂತರ. ಮನುಷ್ಯ ವರ್ತಮಾನದ ಸಂಗತಿಗಳಿಗಿಂತ ಹೆಚ್ಚಾಗಿ, ಭವಿಷ್ಯತ್ತಿನ ಯೋಜನೆಗಳಿಗಿಂತ ಹೆಚ್ಚಾಗಿ ಕಾದಾಟ ನಡೆಸುವುದು ಇತಿಹಾಸದಲ್ಲಿ ಗತಿಸಿಹೋದ ಬದಲಿಸಲಾಗದ ಸಂಗತಿಗಳಿಗಾಗಿ. ಅದು ಧಾರ್ಮಿಕ ಕಾರಣಕ್ಕಾಗೇ ಇರಬಹುದು, ತತ್ವ – ಸಿದ್ಧಾಂತ – ವೈಚಾರಿಕ ಕಾರಣಕ್ಕಾಗಿಯೂ ಇರಬಹುದು.
ಇತಿಹಾಸವೆಂಬುದು ಗತಿಸಿಹೋದ ಸಂಗತಿಗಳ ಕುರಿತಾಗಿರುವಾಗ ಪ್ರತಿಯೋರ್ವನಿಗೂ ಆ ಸಂಗತಿಯ ಬಗೆಗಿನ ದೃಷ್ಟಿಕೋನ ವಿಭಿನ್ನವಾಗಿಯೇ ಇರುತ್ತದೆ. ಒಬ್ಬನಿಗೆ ರಾಜ ಮುಖ್ಯವಾದರೆ, ಮತ್ತೊಬ್ಬನಿಗೆ ಚಾಣಾಕ್ಷ ಮಂತ್ರಿಯ ಪಾತ್ರ ಮಹತ್ವದ್ದಾಗುತ್ತದೆ, ಮಗದೊಬ್ಬನಿಗೆ ರಾಜನ ಆಳ್ವಿಕೆಯಲ್ಲಿ ಬೆಳೆದ – ನಲುಗಿದ ಜನತೆಯ ಕಥನ ಪ್ರಮುಖವಾಗುತ್ತದೆ. ಅಧಿಕಾರಸ್ಥ ಪಕ್ಷದ ಒಲವು ನಿಲುವುಗಳಿಗಾಗಿ ಇತಿಹಾಸವನ್ನು ಪುನಃ ಪುನಃ ತಿರುಚಲಾಗುತ್ತದೆ. ತಿರುಚಲಾಗುತ್ತದೆ ಎನ್ನುವುದಕ್ಕಿಂತ ಸೃಷ್ಟಿಸಲಾಗುತ್ತದೆ ಎನ್ನುವುದು ಸರಿ. ಕೆಟ್ಟ ಸೃಷ್ಟಿ ಅಥವಾ ಒಳ್ಳೆಯ ಸೃಷ್ಟಿ.
ಈ ಎಲ್ಲ ಕಾರಣಗಳಿಗಾಗಿ ನನ್ನ ಜೀವನದ ಗುರುಗಳಲ್ಲೊಬ್ಬರೆಂದೇ ನಾನು ಪರಿಗಣಿಸಿರುವ ಸಾಕೇತ್ ರಾಜನ್ ಬರೆದಿರುವ ಕರ್ನಾಟಕದ ಇತಿಹಾಸದ ಬಗೆಗಿನ ಪುಸ್ತಕವನ್ನು ಅನುವಾದಿಸಲು ತೀರ್ಮಾನಿಸಿದ್ದೇನೆ. ಸಾಕೇತ್ ಬಗೆಗೆ ತಿಳಿದಿದ್ದೇ ಆತ ಕಾಮ್ರೇಡ್ ಪ್ರೇಮ್ ಆಗಿ ಪೋಲೀಸರ ಗುಂಡಿಗೆ ಮೆಣಸಿನಹಾಡ್ಯದಲ್ಲಿ ಬಲಿಯಾದಾಗ. 1947ರ ನಂತರ ಪ್ರಭುತ್ವದ ವಿರುದ್ಧ ಬಂದೂಕಿಡಿದಿದ್ದ ಕಾರಣ ಆತನಿಗೆ ದೇಶದ್ರೋಹಿಯ ಪಟ್ಟ ಸಿಕ್ಕಿತು. ಸ್ವಾತಂತ್ರ್ಯಕ್ಕೂ ಮುಂಚೆ ಹುಟ್ಟಿ ಬಂದೂಕಿಡಿದು ಸತ್ತಿದ್ದರೆ ಅಮರ ದೇಶಪ್ರೇಮಿಯಾಗಿರುತ್ತಿದ್ದ! ಇರಲಿ. ನಕ್ಸಲ್ ವಾದದೆಡೆಗೆ ಆ ದಿನಗಳಲ್ಲಿದ್ದ ಆಕರ್ಷಣೆ ಸಾಕೇತ್ ನನ್ನು ಮತ್ತಷ್ಟು ಇಷ್ಟಪಡುವಂತೆ ಮಾಡಿತು. ನಾನು ಆಗ ಆತನ ಊರಾದ ಮೈಸೂರಿನಲ್ಲೇ ಇದ್ದಿದ್ದು ಮತ್ತೊಂದು ಕಾರಣವಿರಬೇಕು. ಕರ್ನಾಟಕದ ಇತಿಹಾಸದ ಬಗ್ಗೆ ಸಾಕೇತ್ ಎರಡು ಸಂಪುಟಗಳ ಪುಸ್ತಕ ಬರೆದಿದ್ದಾನೆ. ಮೊದಲ ಸಂಪುಟ ಸಿಗಲಿಲ್ಲ. ಎರಡನೆಯದು ಅಂತರ್ಜಾಲದಲ್ಲಿ ಲಭ್ಯವಿತ್ತು. ಆ ಪುಸ್ತಕವನ್ನು ಅನುವಾದಿಸಬೇಕೆಂದೆನ್ನಿಸಿದ್ದಕ್ಕೆ ಅದರ ಶೀರ್ಷಿಕೆಯೇ ಕಾರಣ! ‘Making History’ ಎಂಬ ಶೀರ್ಷಿಕೆ ಇತಿಹಾಸವೆಂದರೇನೆಂಬುದರ ಅರ್ಥವನ್ನು ತನ್ನಲ್ಲೇ ಅಡಗಿಸಿಕೊಂಡಿದೆ. ವರ್ತಮಾನದ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಕಟ್ಟುವುದೇ ಇತಿಹಾಸ! ಸೆಪ್ಟೆಂಬರ್ ಮೊದಲ ವಾರದಿಂದ ‘ಹಿಂಗ್ಯಾಕೆ?’ಯಲ್ಲಿ ಕಂತುಗಳಲ್ಲಿ “ಮೇಕಿಂಗ್ ಹಿಸ್ಟರಿ – ಜನರ ಇತಿಹಾಸ (1800 – 1857)” ಪ್ರಕಟವಾಗಲಿದೆ. ನಿಮ್ಮ ಬೆಂಬಲ – ಅಭಿಪ್ರಾಯ – ಸಲಹೆಗಳಿರಲಿ.

4 comments:

  1. ಒಳ್ಳೆ ಕಾರ್ಯಕ್ಕೆ ಹೊರಟಿದ್ದೀರಿ ಶುಭವಾಗಲಿ ನಾನೂ ಇತ್ತೀಚಿನ ವರೆಗೂ ಇತಿಹಾಸವೆಂದರೆ ಬೋರ್ ಹೊಡೆಸುವ ವಿಷಯವೆಂದೇ ಭಾವಿಸಿದ್ದೆ ,ಯಾವಾಗ ಬೆಳ್ಳಾರೆ ಬೀಡಿನ ಅರಸರು ಯಾರು ಎಂದು ತಿಳಿಯಲು ಹೊರಟೆನೋ ಅಲ್ಲಿಂದ ಇತಿಹಾಸ ಕೂಡ ಅತ್ಯಂತ ಕುತೂಹಲಕಾರಿ ಮತ್ತು ಇನ್ನೂ ಸಾಕಷ್ಟು ಅಧ್ಯಯನವಾಗಲಿಕ್ಕಿರುವ ವಿಷಯ ಎಂದು ಮನವರಿಕೆ ಆಯಿತು ಕಳೆದ 5 ವರ್ಷದಿಂದ ಏನೇ ಹುಡುಕಾಡಿದರೂ ಬೆಲ್ಲಾರೆಯನ್ನು ಆಳಿದ ಅರಸ ಯಾರು ?ನೈದಾಲ ಪಾಂಡಿ ಯೇ ಆತನೇ ?ಎಂಬುದಕ್ಕೆ ಇನ್ನೂ ಇದಮಿಥ್ಹಂ ಎಂಬ ನಿರ್ಣಯಕ್ಕೆ ಬರಲು ನನಗೆ ಸಾಧ್ಯವಾಗಿಲ್ಲ ಆದರೆ ಇತಿಹಾಸದೆಡೆಗೆ ಆಕರ್ಷಿತಳಾಗಳು ಇದು ಕಾರಣವಾಯಿತು ,ಅನಂತರ ಪೆರುವಾಜೆಯಲ್ಲಿ ಪತ್ತೆಯಾದ 1500 ವರ್ಷಕ್ಕಿಂತ ಪ್ರಾಚೀನ ಬುದ್ಧನ ವಿಗ್ರಹ ಇನ್ನಷ್ಟು ಇಂಬು ನೀಡಿತು ನನಗೆ !ಈಗ ನನಗೆ ಇತಿಹಾಸ ಎಂದೂ ಬೋರ್ ಹೊಡೆಸುವುದಿಲ್ಲ

    ReplyDelete
    Replies
    1. ಅನುವಾದವನ್ನು ಇದುವರೆಗೂ ಮಾಡಿರಲಿಲ್ಲ. ಒಳ್ಳೆ ಕಾರ್ಯವೆಂಬುದು ಎಷ್ಟು ಸತ್ಯವೋ ಜವಾಬ್ದಾರಿಯುತ ಕಾರ್ಯವೆಂಬುದೂ ಅಷ್ಟೇ ಸತ್ಯ. ಎಷ್ಟರಮಟ್ಟಿಗೆ ಯಶ ಕಾಣುತ್ತೀನೋ ಕಾದು ನೋಡಬೇಕು. ಗೆಳೆಯರೊಬ್ಬರು ಮೇಕಿಂಗ್ ಹಿಸ್ಟರಿಯ ಒಂದನೇ ಭಾಗವನ್ನು ಕೊಡುವುದಾಗಿ ತಿಳಿಸಿದ್ದಾರೆ. ಮೊದಲ ಭಾಗವನ್ನು ಮೊದಲು ಅನುವಾದಿಸಲು ತೀರ್ಮಾನಿಸಿರುವುದರಿಂದ ಪ್ರಕಟಣೆ ಒಂದಷ್ಟು ವಿಳಂಬವಾಗಬಹುದು.

      Delete
  2. ತುಂಬಾ ಸಂತೋಷದ ವಿಷಯ ತುಂಬ ತಡಮಾಡ ಬೇಡಿ. Please

    ReplyDelete
    Replies
    1. ತಡ ಮಾಡುವ ಉದ್ದೇಶ ನನಗೂ ಇರಲಿಲ್ಲ. ಕೆಲವು ತಯಾರಿಗಳು ಮುಗಿಯಬೇಕಿರುವುದರಿಂದ, ಮುಂದೊಂದಷ್ಟು ಕಾನೂನಾತ್ಮಕ ಸಮಸ್ಯೆಗಳು ಮೂಡದಿರುವಂತೆ ಸ್ವಲ್ಪ ಕೆಲಸಗಳನ್ನು ಮಾಡಬೇಕಿರುವುದರಿಂದ ತಡವಾಗುವ ಸಾಧ್ಯತೆಗಳೇ ಅಧಿಕವಾಗಿವೆ :-(

      Delete