ಡಾ ಅಶೋಕ್ ಕೆ ಆರ್.
ಕಳೆದೊಂದಷ್ಟು ದಿನಗಳಿಂದ ಅತ್ಯಾಚಾರಗಳದ್ದೇ
ಸುದ್ದಿ. ಎಲ್ಲ ಸುದ್ದಿ ವಾಹಿನಿಯವರು ನಾ ಮುಂದು ತಾ ಮುಂದು ಎನ್ನುತ್ತ ಅತ್ಯಾಚಾರಗಳ ಬಗ್ಗೆ
ವರದಿಗಳನ್ನು ಮಾಡಿದ್ದಾರೆ. ಇಡೀ ಕರ್ನಾಟಕವೇ ಅತ್ಯಾಚಾರಿಗಳ ಕೂಪವಾಗಿಬಿಟ್ಟಿದೆ ಎಂಬ ಅಭಿಪ್ರಾಯ
ಮೂಡಿಸಿಬಿಟ್ಟಿವೆ. ‘ರೇಪ್ ಕ್ಯಾಪಿಟಲ್’ ‘ರೇಪಿಸ್ಟ್ ರಾಜ್ಯ’ ಎಂಬ ವಿಷೇಶಣಗಳನ್ನು ಕರ್ನಾಟಕಕ್ಕೆ
ನೀಡಿವೆ. ಹೀನಾತಿ ಹೀನ ಕೃತ್ಯಗಳು ಕರ್ನಾಟಕದಲ್ಲಿ ನಡೆದಿರುವುದು ನಿಜ, ಅದನ್ನು ಮಾಧ್ಯಮಗಳು
ಸುದ್ದಿ ಮಾಡಬೇಕಿರುವುದೂ ನಿಜ ಆದರೆ ಸುದ್ದಿ ಬಿತ್ತರಿಸುವಾಗ ಅವಶ್ಯವಾಗಿ ಇರಬೇಕಿದ್ದ ಸಂಯಮ
ಮಾಯವಾಗಿದೆ. ಕಾರ್ಯಾಂಗ ಎಂದಿನಂತೆ ತುಂಬಾ ಕ್ರಿಯಾಶೀಲವಾಗಿಯೇನೂ ಇಲ್ಲ. ಅತ್ಯಾಚಾರಗಳ ಬಗ್ಗೆ
ವರದಿಗಳು ಸರದಿಯ ಮೇಲೆ ಆಗುತ್ತಿರುವಾಗ ನ್ಯಾಯಾಂಗದ ಕಾರ್ಯನಿರ್ವಹಣೆಯ ಬಗ್ಗೆ,
ಅತ್ಯಾಚಾರಿಗಳಿಗಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ. ಶಾಸಕಾಂಗ
ಎಂದಿನಂತೆ ನಿದ್ರಾವಸ್ಥೆಯಲ್ಲಿದೆ, ದೂರದೃಷ್ಟಿ ಪರಿಹಾರಗಳನ್ನು ರೂಪಿಸಬೇಕಾದ ಶಾಸಕಾಂಗ ಇವತ್ತು
ಪ್ರತಿ ಘಟನೆಯನ್ನೂ ತಮ್ಮ ವೈಯಕ್ತಿಕ ಮತ್ತು ಪಕ್ಷದ ರಾಜಕೀಯ ಕಾರಣಕ್ಕೆ ಯಾವ ರೀತಿ
ಉಪಯೋಗವಾಗಬಲ್ಲದು ಎಂಬುದನ್ನು ಲೆಕ್ಕ ಹಾಕುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇನ್ನು
ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಸಿಗುವ ಘಟನಾವಳಿಗಳಿಗೆ ಮಾತ್ರ ಪ್ರತಿಕ್ರಯಿಸುತ್ತ ಪ್ರತಿಭಟಿಸುತ್ತ
ಸಾಗುತ್ತಿರುವ ‘ಜಾಣ ಜನರಾದ’ ನಾವಿದ್ದೀವಿ. ನಮ್ಮೆಲ್ಲರ ಮಧ್ಯೆ ಅತ್ಯಾಚಾರಕ್ಕೊಳಗಾಗುತ್ತಲೇ ಇರುವ
ಮಕ್ಕಳ, ಯುವತಿಯರ, ಮಹಿಳೆಯರ, ವೃದ್ಧರ ಆಕ್ರಂದನವಿದೆ.
ಪ್ರಕೃತಿಯಲ್ಲಿ ಹೆಣ್ಣಿನ ವಿರೋಧವಿದ್ದರೂ ಗಂಡು
ಆಕೆಯೊಡನೆ ಸಂಭೋಗಿಸಲು ಪ್ರಯತ್ನಿಸುವುದು ಸಾಮಾನ್ಯವಾಗಿ ಕಾಣದ ಸಂಗತಿ. ಎಲ್ಲೋ ಕೆಲವೇ ಕೆಲವು
ಪ್ರಾಣಿಗಳಲ್ಲಿ ಮಾತ್ರ ಈ ರೀತಿಯ ಸಂಗತಿಯನ್ನು ಕಾಣಬಹುದಷ್ಟೇ, ಮತ್ತಾ ರೀತಿಯ ಬಲಾತ್ಕಾರ ಕೂಡ
ಅಪಾಯದಲ್ಲಿರಬಹುದಾದ ಜೀವಸಂಕುಲದ ಮುನ್ನಡೆಗೆ ಪ್ರಕೃತಿ ಮಾಡಿರುವ ನೀತಿಯೆಂಬುದು ತಜ್ಞರ
ಅಭಿಪ್ರಾಯ. ಆ ಕೆಲವೇ ಕೆಲವು ಪ್ರಾಣಿಗಳನ್ನೊರತುಪಡಿಸಿದರೆ ಇನ್ನುಳಿದ ಬಹುತೇಕ ಪ್ರಾಣಿ –
ಪಕ್ಷಿಗಳಲ್ಲಿ ಸಂಭೋಗಕ್ಕೆ, ಸಂಸಾರದಾರಂಭಕ್ಕೆ ಹೆಣ್ಣಿನ ಒಪ್ಪಿಗೆ ಅತ್ಯವಶ್ಯಕ. ಹೆಣ್ಣನ್ನು
ತನ್ನೆಡೆಗೆ ಆಕರ್ಷಿಸುವ ಸಂಪೂರ್ಣ ಜವಾಬ್ದಾರಿ ಗಂಡಿನದ್ದು. ನೋಡಲಾಕರ್ಷವೆನ್ನಿಸುವ ಸಿಂಹ, ನವಿಲು,
ಇನ್ನಿತರ ಅನೇಕ ಪ್ರಾಣಿ ಪಕ್ಷಿಗಳೆಲ್ಲವೂ ಗಂಡು ಜಾತಿಗೆ ಸೇರಿರುವುದು ಇದೇ ಕಾರಣಕ್ಕೆ.
ಸೌಂದರ್ಯದಿಂದ, ಪರಾಕ್ರಮದಿಂದ, ಸುಂದರ ಗೂಡು ಕಟ್ಟುವುದರಿಂದ, ಆಹಾರವನ್ನು ಹೆಕ್ಕಿ ತರುವುದರಿಂದ
ಹೆಣ್ಣಿನ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಬೇಕಿರುವುದು ಗಂಡಿನ ಕರ್ತವ್ಯ. ಜೀವಸಂಕುಲದ ತುತ್ತ
ತುದಿಯಲ್ಲಿದ್ದೇನೆಂದು ಹೇಳಿಕೊಳ್ಳುವ ಮಾನವ ಸಂಕುಲದ ಪ್ರಾರಂಭದ ದಿನಗಳಲ್ಲೂ ಇದೇ ರೀತಿ
ಇದ್ದಿರಬಹುದೆಂಬುದು ಅನೇಕ ಆದಿವಾಸಿ ಪಂಗಡಗಳಲ್ಲಿ ಮದುವೆಯ ಸಮಯಕ್ಕೆ ಒಳ್ಳೆಯ ಬೇಟೆಯಾಡಿ
ಬರಬೇಕೆಂಬ ಶರತ್ತುಗಳು ನಿರೂಪಿಸುತ್ತವೆ. ಕಾಲಕ್ರಮೇಣ ಪುರುಷಪ್ರಧಾನ ಸಮಾಜದ ಕಾರಣದಿಂದಲೋ ಅಥವಾ
ಪ್ರಕೃತಿಯೇ ನಮಗರ್ಥವಾಗದ ರೀತಿಯಲ್ಲಿ ನಿಯಮಗಳನ್ನು ಬದಲಿಸಿದ ಪರಿಣಾಮದಿಂದಲೋ ಹೆಣ್ಣು ಗಂಡನ್ನು
ಆಯ್ಕೆಮಾಡಿಕೊಳ್ಳಬೇಕೆಂದು ಬದಲಾಗಿ ಬಹಳಷ್ಟು ಸನ್ನಿವೇಶಗಳಲ್ಲಿ ಗಂಡೇ ಹೆಣ್ಣನ್ನು ಆಯ್ಕೆ
ಮಾಡಿಕೊಳ್ಳುವ ಪದ್ಧತಿ ಪ್ರಾರಂಭವಾಯಿತು. ಈ ಆಯ್ಕೆಯ ಪದ್ಧತಿಯಲ್ಲೂ ಹೆಣ್ಣೂ ಕೂಡ ಸಂಭೋಗಕ್ಕೆ
ತನ್ನ ಸಮ್ಮತಿ ನೀಡುವ ಅವಶ್ಯಕತೆಯಿತ್ತು. ಮೇಲಾಗಿ ಮಾನವ ಕುಲದ ಮುಂದುವರಿಕೆಗೆ ಸದ್ಯದ ಮಟ್ಟಿಗೆ
ಯಾವ ರೀತಿಯ ಅಪಾಯವೂ ಇಲ್ಲದ ಕಾರಣ ಮಾನವನೆಂಬ
ಪ್ರಾಣಿಗೆ ಪ್ರಕೃತಿದತ್ತವಾಗಿ ಬಲವಂದಿಂದ ಹೆಣ್ಣನ್ನು ಸಂಭೋಗಕ್ಕೆ ಒಳಪಡಿಸುವ ನೈಸರ್ಗಿಕ
ಅನಿವಾರ್ಯತೆಗಳಿಲ್ಲ. ಇವೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ ಅತ್ಯಾಚಾರದ ಘಟನೆಗಳನ್ನು
ವಿಶ್ಲೇಷಿಸುವಾಗ – ಬಹಿರಂಗ ಚರ್ಚೆಗಳಲ್ಲದಿದ್ದರೂ ಖಾಸಗಿ ಚರ್ಚೆಗಳಲ್ಲಿ – ಅನೇಕರು ಗಂಡಸಾದವನು
ಎಲ್ಲೋ ದಾರಿ ತಪ್ಪಿಬಿಡುತ್ತಾನೆ ಬಿಡಿ ಎಂಬ ಸಮರ್ಥನೆ ನೀಡುವ ಮನಸ್ಥಿತಿಯವರಾಗಿದ್ದಾರೆ. ಅತ್ಯಾಚಾರವೆಂಬುದು
ಹೀನ ಮನಸ್ಸಿನ ವಿಕೃತ ಕೃತ್ಯವಷ್ಟೇ.
ಪ್ರತಿಯೊಂದು ಅತ್ಯಾಚಾರ ನಡೆದಾಗಲೂ
“Victimising the victim” ಕಾರ್ಯಗಳು ಪ್ರಾರಂಭವಾಗಿಬಿಡುತ್ತದೆ. ಅತ್ಯಾಚಾರಕ್ಕೊಳಗಾದವಳು ಆ
ಸಮಯಕ್ಕೆ ಅಲ್ಲಿಗ್ಯಾಕೆ ಹೋಗಬೇಕಿತ್ತು? ಒಬ್ಬಂಟಿಯಾಗಿ ಯಾಕೆ ತಿರುಗಬೇಕಿತ್ತು? ಅಂಥ ಬಟ್ಟೆ
ಧರಿಸಿದರೆ ರೇಪ್ ಮಾಡೋದಿಲ್ಲವೇನ್ರಿ? ಸರಿಯಾಗಿ ಬಟ್ಟೆ ಹಾಕ್ಕೊಳ್ಳೋದಿಕ್ಕೆ ಹೇಳಿ; ಇಲ್ಲವಾದ್ರೆ
ಈ ಹುಡುಗ್ರು ಮಾಡೋದೆ ಹೀಗೆ – ಎಂಬಂತಹ ಪ್ರಶ್ನೆಗಳು, ಸಮರ್ಥನೆಗಳು ಒಟ್ಟಾರೆಯಾಗಿ ನಾಗರೀಕರಿಂದ
ತುಂಬಿದೆಯೆಂದು ನಂಬಲಾದ ಸಮಾಜದ ಚಲನಶೀಲತೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮತ್ತೀ
ರೀತಿಯ ಪ್ರಶ್ನೆಗಳು ಸಂಪ್ರದಾಯವಾದಿ ದೇಶಗಳೆಂದು ಕರೆದುಕೊಳ್ಳುವವರಿಂದ ಹಿಡಿದು ಆಧುನಿಕ ಮನೋಭಾವದ
ದೇಶವೆಂದೆನ್ನಿಸಿಕೊಳ್ಳುವವರೆಲ್ಲ ಕೇಳುತ್ತಾರೆ. ಈ ಪ್ರಶ್ನೆಗಳು ಹುಟ್ಟುವುದಕ್ಕೂ ಒಂದು
ಕಾರಣವಿದೆ. ಅದು ಕೆಲವೇ ಕೆಲವೇ ಅತ್ಯಾಚಾರಗಳು ಮಾತ್ರ ಚರ್ಚೆಗೆ ಒಳಪಡುವುದೇ ಆಗಿದೆ. National
Crime bureauದ ವರದಿಯನ್ನು ಓದಿದರೆ ಈ ಪ್ರಶ್ನೆಗಳೆಲ್ಲಾ ಎಷ್ಟು ಅಸಂಬದ್ಧ ಎಂಬುದರ
ಅರಿವಾಗುತ್ತದೆ.
ಐಪಿಎಸ್ ಸೆಕ್ಷನ್ 376ರ ಅಡಿಯಲ್ಲಿ
ದಾಖಲಾಗಿರುವ ಅತ್ಯಾಚಾರದ ಪ್ರಕರಣಗಳು ವರ್ಷದಿಂದ ವರುಷಕ್ಕೆ ಹೆಚ್ಚುತ್ತಲೇ ಸಾಗಿದೆ. National
Crime bureauದ ಅಧಿಕೃತ ವರದಿಯಂತೆ 2008ರಲ್ಲಿ 21,467 ರಷ್ಟಿದ್ದ ಅತ್ಯಾಚಾರ ಪ್ರಕರಣಗಳು
2012ರಲ್ಲಿ 24,923ಕ್ಕೆ ಏರಿಕೆಯಾಗಿದೆ. ಅಲ್ಲಿಗೆ ದೇಶದಲ್ಲಿ ಒಂದು ದಿನಕ್ಕೆ ಅರವತ್ತೆಂಟು
ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ, ಘಂಟೆಗೆ ಮೂರು ಮಂದಿ. ಇಷ್ಟೆಲ್ಲಾ ಅತ್ಯಾಚಾರ
ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದರೂ ಚರ್ಚೆಗೆ ಒಳಪಡುವುದು ವರುಷಕ್ಕೆ ಒಂದೋ ಎರಡೋ ಅತ್ಯಾಚಾರಗಳ
ಬಗ್ಗೆ ಮಾತ್ರ. ಅತ್ಯಾಚಾರಕ್ಕೊಳಗಾದವರು ಯಾವ ಪ್ರದೇಶದವರೇ ಆಗಿರಲಿ, ಯಾವ ಪಂಗಡಕ್ಕೇ ಸೇರಿರಲಿ,
ಯಾವ ವಯಸ್ಸಿನವರೇ ಆಗಿರಲಿ ಕಾನೂನಿನ ಪ್ರಕಾರ ಆಗಬೇಕಿರುವ ಶಿಕ್ಷೆಯಲ್ಲಿ
ವ್ಯತ್ಯಾಸಗಳಿರುವುದಿಲ್ಲ, ಆದರೆ ನಮ್ಮ ಪ್ರತಿಕ್ರಿಯೆಗಳಲ್ಲಿ ಯಾಕೆ ವ್ಯತ್ಯಾಸಗಳಾಗುತ್ತಿವೆ? ನಗರಕೇಂದ್ರಿತ
ಸುದ್ದಿಗಳಷ್ಟೇ ಪ್ರಾಮುಖ್ಯತೆ ಪಡೆಯುತ್ತವಲ್ಲ ಯಾಕೆ? ಹೈಪ್ರೊಫೈಲ್ ಕೇಸುಗಳನ್ನಷ್ಟೇ ಮಾಧ್ಯಮಗಳು,
ರಾಜಕಾರಣಿಗಳು, ಬಹಳಷ್ಟು ಚಳುವಳಿಗಾರರು ಮತ್ತು ಜನರು ಪ್ರಾಮುಖ್ಯತೆ ಕೊಟ್ಟು
ಚರ್ಚಿಸುತ್ತಿರುವುದು.
ಇತ್ತೀಚಿನ ವರುಷಗಳಲ್ಲಿ ಅತಿ ಹೆಚ್ಚು
ಚರ್ಚೆಗೊಳಗಾಗಿದ್ದು, ಕಾನೂನನ್ನೇ ಮಾರ್ಪಡಿಸುವಷ್ಟು ಪ್ರಬಲ ಚಳುವಳಿಯಾಗಿ ಬೆಳೆದಿದ್ದು ದೆಹಲಿಯ
ನಿರ್ಭಯಾ ಪ್ರಕರಣ. ಚಲಿಸುತ್ತಿರುವ ಬಸ್ಸಿನಲ್ಲಿ ಪೈಶಾಚಿಕರು ನಡೆಸಿದ ಹೀನಕೃತ್ಯವನ್ನು ಎಷ್ಟು
ಖಂಡಿಸಿದರೂ ಸಾಲದು. ‘ನಿರ್ಭಯಾಳ’ ಜಾತಿ, ಧರ್ಮ, ಪಂಗಡ ಆರ್ಥಿಕ ಪರಿಸ್ಥಿತಿಗಳ್ಯಾವುದೂ
ತಿಳಿಯದಿದ್ದಾಗ್ಯೂ ಅದೊಂದು ಚಳುವಳಿಯ ರೂಪ ಪಡಿದಿತ್ತು. ನಿರಾಕರಿಸಲಾಗದ ಸತ್ಯವೆಂದರೆ ಅತ್ಯಾಚಾರ
ನಡೆದಿದ್ದು ದೇಶದ ಪ್ರತಿಷ್ಟಿತ ರಾಜಧಾನಿ ದೆಹಲಿಯ ರಾಜಬೀದಿಗಳಲ್ಲಾದ್ದರಿಂದ ಅದಕ್ಕಷ್ಟು
ಪ್ರಾಮುಖ್ಯತೆ ದಕ್ಕಿತೇ ಹೊರತು ದೂರದ ಊರೊಂದರ ನಿರ್ಜನ ರಸ್ತೆಯಲ್ಲಿ ಈ ರೀತಿಯ ಘಟನೆ ನಡೆದಿದ್ದರೆ
ಇಷ್ಟು ಚರ್ಚೆಗಳೇ ನಡೆಯುತ್ತಿರಲಿಲ್ಲ. ಸರಿಸುಮಾರು ಅದೇ ಸಮಯಕ್ಕೆ ನಮ್ಮದೇ ಧರ್ಮಸ್ಥಳದಲ್ಲಿ ನಡೆದ
ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು. ನಗರ ಕೇಂದ್ರಿತ
ಪ್ರಕರಣಗಳಿಗಷ್ಟೇ ಸಿಗುವ ಪ್ರಾಮುಖ್ಯತೆಯಿಂದಾಗಿ ದೆಹಲಿಯ ಪ್ರಕರಣದಲ್ಲೂ ‘ನಿರ್ಭಯಾ’
ಒಬ್ಬಂಟಿಯಾಗಿ ಗೆಳೆಯನೊಡನೆ ಯಾಕೆ ಹೊರಗೆ ಹೋಗಬೇಕಿತ್ತು? ಎಂಬ ಪ್ರಶ್ನೆಯನ್ನು ಕೆಲವರು
ಕೇಳಿದ್ದು. ನಾಗರೀಕ ಸಮಾಜದಲ್ಲಿ ಹೊರಗೆ ಅಪವೇಳೆಯಲ್ಲಿ ಒಬ್ಬಂಟಿಯಾಗಿ ತಿರುಗುವುದು
ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಅಪಾಯಕಾರಿಯೇ! ಅಪರಿಚಿತ ಜಾಗದಲ್ಲಿ ಅಪವೇಳೆಯಲ್ಲಿ
ತಿರುಗುವುದನ್ನು ತಪ್ಪಿಸಿದರೆ ಅನೇಕ ಅತ್ಯಾಚಾರದ ಘಟನೆಗಳು ತಪ್ಪಿಹೋಗುತ್ತವೆ ಎಂಬುದು ನಿಮ್ಮ
ಅಭಿಪ್ರಾಯವಾಗಿದ್ದರೆ ಒಂದು ಕ್ಷಣ ನಿಲ್ಲಿ, National Crime bureauದ ವರದಿ ಅದಕ್ಕೂ
ಉತ್ತರಕೊಡುತ್ತದೆ.
2012ರ ವರದಿಯಂತೆ ಶೇಕಡಾ 98.2 ಪ್ರಕರಣಗಳಲ್ಲಿ
(24,470) ಪರಿಚಿತರೇ ಅತ್ಯಾಚಾರವೆಸಗುತ್ತಾರೆ. ಮನೆಯವರು, ನೆಂಟರು, ಪಕ್ಕದ ಮನೆಯವರು
ಅತ್ಯಾಚಾರವೆಸಗುವ ಪ್ರಕರಣಗಳೇ ಅಧಿಕ. ಅಲ್ಲಿಗೆ ಅಪರಿಚಿತ ಜಾಗಗಳಿಗ್ಯಾಕೆ ಹೋಗಬೇಕು? ಎಂದು
ಕೇಳುವುದೇ ಅಸಂಬದ್ಧವಾಗಿಬಿಡುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಅತ್ಯಾಚಾರದ ಬಗೆಗಿನ
ಚರ್ಚೆಗಳನ್ನು ತೀವ್ರಗೊಳಿಸಿದ ವಿಬ್ ಗಯಾರ್ ಶಾಲೆಯಲ್ಲಿ ನಡೆದ ಪ್ರಕರಣದಲ್ಲೂ ಅತ್ಯಾಚಾರಿ
ಅಪರಿಚಿತನೇನಲ್ಲ. ದಿನನಿತ್ಯ ಪಾಠ ಮಾಡಲು ನಿಯೋಜಿಸಲಾಗಿದ್ದ ಶಿಕ್ಷಕನೇ ಅತ್ಯಾಚಾರವೆಸಗಿದ್ದಾನೆ. ಮಕ್ಕಳ
ಮೇಲೂ ಅತ್ಯಾಚಾರವೆಸಗುವ ನೀಚರಿರುವ ಸಮಯದಲ್ಲಿ ಪ್ರಚೋದನೆಯ ಉಡುಪೇ ಬಹಳಷ್ಟು ಸಮಯದಲ್ಲಿ
ಅತ್ಯಾಚಾರಕ್ಕೆ ಪ್ರೋತ್ಸಾಹ ನೀಡುತ್ತದೆ ಎಂಬ ಹೇಳಿಕೆಗಳ ಪೊಳ್ಳನ್ನೂ ಸುಳ್ಳು ಮಾಡುತ್ತವೆ.
ಹೆಣ್ಣು ಧರಿಸಿದ ಉಡುಪು ಕಾಮದ ಭಾವನೆ ಮೂಡಿಸುವುದಕ್ಕೂ ಅತ್ಯಾಚಾರ ಮಾಡುವಂತೆ
ಪ್ರೇರೇಪಿಸುವುದಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದು ಸಹಜ
ನೈಸರ್ಗಿಕ ಸಂಗತಿಯಾದರೆ ಎರಡನೆಯದು ವಿಕೃತ ಮನಸ್ಸಿನ ಪ್ರತಿಬಿಂಬ. ಮಕ್ಕಳ ಮೇಲೆ ವೃದ್ಧರ ಮೇಲೆ
ನಡೆಯುವ ಅತ್ಯಾಚಾರಗಳು ಹೆಚ್ಚುತ್ತಿರುವಾಗಲೂ ‘ಉಡುಪೇ ಅತ್ಯಾಚಾರಕ್ಕೆ ಕಾರಣ’ ಎಂದು
ಸಮರ್ಥಿಸುವವರು ಕೂಡ ಬಹುಶಃ ಅತ್ಯಾಚಾರಿಗಳದೇ ಮನಸ್ಥಿತಿ ಹೊಂದಿರುವವರೋ ಏನೋ?
ಈ ಉಡುಪಿನ ಬಗೆಗಿನ ಚರ್ಚೆ ನಡೆಯುವುದು ಮತ್ತೆ
ಯಥಾಪ್ರಕಾರ ನಗರಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗೆಗೆ. ಅವರ ಮಾತನ್ನೇ ಒಂದು ಕ್ಷಣ
ಅಂಗೀಕರಿಸುವುದಾದರೆ ನಗರ ಸಂಸ್ಕೃತಿಯಿಂದ ದೂರ ಬಹುದೂರವಿರುವ ಊರುಗಳಲ್ಲಿ ಯಾವ ‘ಪ್ರಚೋದನೆಯ’
ಉಡುಪು ಧರಿಸಿರುತ್ತಾರೆ? ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಇಬ್ಬರು ಹದಿನಾಲ್ಕರ ಹುಡುಗಿಯರನ್ನು
ಅತ್ಯಾಚಾರಗೈದು ಕೊಂದು ಮರಕ್ಕೆ ನೇತುಹಾಕಿದ ಪ್ರಕರಣದಲ್ಲಿ ಯಾವ ‘ಪ್ರಚೋದನೆ’ಯಿತ್ತು? ದುರದೃಷ್ಟವಶಾತ್
ಇಂಥ ಘೋರ ಘಟನೆಗಳು ಚರ್ಚೆಗೊಳಗಾಗುವುದೇ ಇಲ್ಲ, ಚರ್ಚೆಗೊಳಪಟ್ಟಿದ್ದರೆ ‘ಉಡುಪು, ಹೆಣ್ಣೇ ಕಾರಣ,
ಪ್ರಚೋದನೆ’ಯಂತ ಪದಗಳು ಅತ್ಯಾಚಾರದ ಚರ್ಚೆಗಳಲ್ಲಿ ಜನ್ಮತಾಳುತ್ತಿರಲಿಲ್ಲ. ಅತ್ಯಾಚಾರಕ್ಕೊಳಗಾದವಳನ್ನು
ಮಹಿಳೆಯನ್ನಷ್ಟೇ ಆಗಿ ನೋಡಬೇಕೆಂದುಕೊಂಡರೂ ನಮ್ಮ ರಾಜಕಾರಣಿಗಳು, ಮಾಧ್ಯಮಗಳು, ಕಾರ್ಯಾಂಗ ಮತ್ತು
ಕೆಲವೊಮ್ಮೆ ನ್ಯಾಯಾಂಗ ಕೂಡ ಮಾಡುವ ಭೇದಭಾವಗಳನ್ನು ನೋಡಿದಾಗ ಅನಿವಾರ್ಯವಾಗಿ ಮಹಿಳೆಯ ಜಾತಿ,
ಆರ್ಥಿಕ ಪರಿಸ್ಥಿತಿಯ ಬಗೆಗೆ ಚರ್ಚೆ ಮಾಡಲೇಬೇಕಾಗುತ್ತದೆ. ನಗರದ ಅತ್ಯಾಚಾರಗಳ ಬಗ್ಗೆ
ನಡೆಯುವಷ್ಟು ಚರ್ಚೆ ಹಳ್ಳಿಗಳ ಅತ್ಯಾಚಾರಗಳ ಬಗ್ಗೆ ನಡೆಯುವುದಿಲ್ಲ. ಹಳ್ಳಿಗಳ ಅತ್ಯಾಚಾರಗಳಲ್ಲಿ
ಮೇಲ್ವರ್ಗದ ಮಹಿಳೆ ಮತ್ತು ಕೆಳವರ್ಗದ ಮಹಿಳೆ ಶೋಷಣೆಗೊಳಪಟ್ಟಾಗ ಸಿಗುವ ಪ್ರತಿಕ್ರಿಯೆಗಳಲ್ಲಿ
ಅನೇಕಾನೇಕ ವ್ಯತ್ಯಾಸಗಳಿರುತ್ತವೆ. ಕೆಲವು ಪ್ರಕರಣಗಳಿಗಷ್ಟೇ ಪ್ರಾಮುಖ್ಯತೆ ಸಿಗುವುದು
ಆಕಸ್ಮಿಕವೇನಲ್ಲ.
ಕಾಮೋದ್ರೇಕತೆ ಮತ್ತು ಮನೋವಿಕೃತಿಗಳಷ್ಟೇ
ಅತ್ಯಾಚಾರಕ್ಕೆ ಕಾರಣವೆಂದಾಗಿದ್ದರೆ ಪ್ರಬಲ ಕಾನೂನು, ಶೀಘ್ರ ವಿಚಾರಣೆ, ಬಲಿಷ್ಠ ಮನೋವೈದ್ಯರ
ತಂಡದಿಂದ ಅತ್ಯಾಚಾರ ಪ್ರಕರಣಗಳನ್ನು ತಹಬದಿಗೆ ತರಬಹುದಿತ್ತು. ಬಹಳಷ್ಟು ಪ್ರಕರಣಗಳಲ್ಲಿ ರಾಜಕೀಯ
ದ್ವೇಷಕ್ಕಾಗಿ, ಕೌಟುಂಬಿಕ ಸೇಡಿಗಾಗಿ ಅತ್ಯಾಚಾರ ನಡೆಯುತ್ತದೆ. ಹೆಣ್ಣನ್ನು ಒಂದು ಭೋಗದ
ವಸ್ತುವಾಗಿ ನೋಡುವ ಸಾಮಾಜಿಕ ಮನಸ್ಥಿತಿಯಲ್ಲಿ ಕಲಹಗಳಲ್ಲಿ, ಯುದ್ಧದಲ್ಲಿ, ಕೋಮುಗಲಭೆಗಳಲ್ಲಿ
ವಸ್ತುವೊಂದನ್ನು ನಾಶಪಡಿಸಿದಂತೆ ಹೆಣ್ಣನ್ನು ಬಲತ್ಕರಿಸುವುದನ್ನು ಅನೇಕ ಘಟನೆಗಳಲ್ಲಿ ಕಾಣಬಹುದು.
ಅಧಿಕೃತ ಅಂಕಿ ಅಂಶಗಳಿಗಿಂತ ಇನ್ನೂ ಹೆಚ್ಚು ಅತ್ಯಾಚಾರ ಪ್ರಕರಣ ದೇಶದಲ್ಲಿ ನಡೆಯುತ್ತವೆ.
ಅಧ್ಯಯನವೊಂದರ ಪ್ರಕಾರ ಸಮಾಜದ ಮುಂದೆ ತಲೆತಗ್ಗಿಸಬೇಕಾದ ಭೀತಿಯಿಂದ, ಅತ್ಯಾಚಾರಿಗಳ ಪ್ರಭಾವದ
ಭೀತಿಯಿಂದ, ಮತ್ತೀಚಿನ ದಿನಗಳಲ್ಲಿ ಅತ್ಯಾಚಾರ ಮಾಡುವಾಗ ವೀಡಿಯೋ ಮಾಡಿಕೊಂಡು ಬೆದರಿಸುವ
ವಿಕೃತರಿಂದಾಗಿ ಅತ್ಯಾಚಾರಕ್ಕೊಳಗಾದರೂ ದೂರು ನೀಡದೆ ಹೋಗುವವರ ಸಂಖೈ ಶೇಕಡಾ ಐವತ್ತಕ್ಕಿಂತ ಅಧಿಕ.
ವರುಷದಿಂದ ವರುಷಕ್ಕೆ ಏರುತ್ತಲೇ ಸಾಗುತ್ತಿರುವ ಅತ್ಯಾಚಾರಗಳನ್ನು ತಡೆಯುವುದಾದರೂ ಹೇಗೆ?
ಹೆಣ್ಣು ಭೋಗದ ವಸ್ತು, ಅತ್ಯಾಚಾರಕ್ಕೆ ಹೆಣ್ಣೇ
ಕಾರಣ ಎಂಬ ಸಮಾಜದ ಮನಸ್ಥಿತಿಯನ್ನು ಮೊದಲು ಬದಲಿಸಬೇಕು. ಶಾಲೆಯ ಶಿಕ್ಷಣದ ಜೊತೆಜೊತೆಗೆ
ಮನೆಯಲ್ಲಿನ ಸಂಸ್ಕೃತಿ ಶಿಕ್ಷಣವೂ ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಅನೇಕ ಪ್ರಕರಣಗಳಲ್ಲಿ
ಅತ್ಯಾಚಾರಿಗಳು ತಲೆಎತ್ತಿ ನಡೆಯುತ್ತಾ ಅತ್ಯಾಚಾರಕ್ಕೊಳಗಾದ ಮಹಿಳೆ ತಲೆತಗ್ಗಿಸಿ ದೈನ್ಯದಿಂದ
ವರ್ತಿಸುವುದು ಕೂಡ ನಮ್ಮ ಸಮಾಜ ಅತ್ಯಾಚಾರಕ್ಕೊಳಗಾದ ಮಹಿಳೆ ಬಗೆಗೆ ಬೆಳೆಸಿಕೊಳ್ಳುವ ಅಸಹ್ಯದ
ಸಂಕೇತ. ತಪ್ಪು ಮಾಡಿರುವುದು ಅತ್ಯಾಚಾರಿಗಳು, ಅವರು ತಲೆತಗ್ಗಿಸಬೇಕು ನೀನಲ್ಲ ಎಂಬ
ವಿಶ್ವಾಸವನ್ನು ಮಹಿಳೆಯಲ್ಲಿ ಮೂಡಿಸದ ಹೊರತು ಠಾಣೆಗೆ ಬಂದು ದೂರು ನೀಡುವವರ ಸಂಖೈ
ಹೆಚ್ಚುವುದಿಲ್ಲ. ದೂರೇ ದಾಖಲಾಗದೆ ಶಿಕ್ಷೆಯೂ ಆಗದ ಸಮಾಜದಲ್ಲಿ ಆ ಅತ್ಯಾಚಾರಿಗಳು ಮತ್ತಷ್ಟು
ಅತ್ಯಾಚರಗಳನ್ನು ನಡೆಸಿದರೆ ಅದಕ್ಕೆ ಸಮಾಜವೇ ನೇರ ಹೊಣೆಯಾಗುತ್ತದೆ. ಮಹಿಳೆ ಧೈರ್ಯ ಮಾಡಿ ದೂರು
ನೀಡಲು ಬಂದಾಗ ಪೋಲೀಸರ ನಿಷ್ಕ್ರಿಯತೆ ಬೆಳಕಿಗೆ ಬರುತ್ತದೆ. ಉತ್ತರಪ್ರದೇಶದ ಬಿದಾಯೂಂನ
ಘಟನೆಯಲ್ಲಿ ಕಾಣೆಯಾದ ಮಕ್ಕಳ ಬಗೆಗೆ ದೂರು ನೀಡಲು ಹೋದಾಗ ಅಲ್ಲಿನ ಪೋಲೀಸ್ ಅಧಿಕಾರಿಗಳು
ಎಫ್.ಐ.ಆರನ್ನೇ ದಾಖಲಿಸುವುದಿಲ್ಲ. ‘ಎಲ್ಲೋ ಹೋಗಿರ್ತಾರೆ, ಬರ್ತಾರೆ ಬಿಡ್ರಿ’ ಎಂಬ ಅಸಡ್ಡೆ
ತೋರಿಸಿದ್ದರು. ಆ ಈರ್ವ ಹುಡುಗಿಯರೂ ಹೆಣವಾಗಿ ಮರದ ಮೇಲೆ ನೇತಾಡುತ್ತಿದ್ದಾಗಲೂ, ಅವರನ್ನು
ಅತ್ಯಾಚಾರಗೈದು ನೇಣು ಹಾಕಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದ ಮೇಲೂ ಅಲ್ಲಿನ ಪೋಲೀಸರು ಚುರುಕುಗೊಳ್ಳಲಿಲ್ಲ.
ಹಿಂದುಳಿದ ವರ್ಗಕ್ಕೆ ಸೇರಿದ ಹುಡುಗಿಯನ್ನು ಅತ್ಯಾಚಾರಗೈದಿದ್ದು ಊರಿನ ಬಲಿಷ್ಠ ವರ್ಗಕ್ಕೆ ಸೇರಿದ
ಯುವಕರು ಎಂಬುದೇ ಈ ನಿಷ್ಕ್ರಿಯತೆಗೆ ಕಾರಣವೆಂಬುದು ನಂತರದ ದಿನಗಳಲ್ಲಿ ಬೆಳಕಿಗೆ ಬಂದು,
ಪ್ರತಿಭಟನೆ ಒತ್ತಡಗಳು ಹೆಚ್ಚಿದ ನಂತರ ಪೋಲೀಸ್ ಅಧಿಕಾರಿಗಳನ್ನು ಬದಲಿಸಲಾಯಿತು. ಬೆಂಗಳೂರಿನಲ್ಲೂ
ಅತ್ಯಾಚಾರದ ಪ್ರಕರಣವೊಂದರಲ್ಲಿ ಪೋಲೀಸ್ ಅಧಿಕಾರಿಯೊಬ್ಬರನ್ನು ನಿಷ್ಕ್ರಿಯತೆಗಾಗಿ
ಅಮಾನತ್ತುಗೊಳಿಸಲಾಗಿದೆ, ಅವರ ಮೇಲೂ ಕೇಸು ದಾಖಲಿಸಲಾಗಿದೆ (ಈ ಘಟನೆಯಲ್ಲಿ ಪೋಲೀಸ್ ಅಧಿಕಾರಿ, ಮಾಧ್ಯಮಗಳು
ಮತ್ತು ವಿರೋಧ ಪಕ್ಷದವರು ಹೇಳುವಷ್ಟು ನಿಷ್ಕ್ರಿಯವಾಗಿರಲಿಲ್ಲ. ಅತ್ಯಾಚಾರಕ್ಕೊಳಗಾದ ಹುಡುಗಿಯೇ
ಪೋಲೀಸರ ಪರ ಹೇಳಿಕೆ ನೀಡಿದ್ದಾಳೆ ಎಂಬ ಆಯಾಮವೂ ಇದೆ). ಅತ್ಯಾಚಾರ ಪ್ರಕರಣಗಳಲ್ಲಿ ಪೋಲೀಸರು
ನಡೆದುಕೊಳ್ಳಬೇಕಾದ ರೀತಿಯಲ್ಲಿ ಮಾರ್ಪಾಡಾಗಬೇಕು. ಉಳಿದ ಕ್ರೈಮುಗಳಿಗಿಂಥ ಅತ್ಯಾಚಾರ ಪ್ರಕರಣಗಳು
ಹೇಗೆ ವಿಭಿನ್ನ ಎಂಬುದನ್ನು ಪೋಲೀಸರು ಅರ್ಥೈಸಿಕೊಳ್ಳಬೇಕು. ಉಳಿದ ಕ್ರೈಮುಗಳಲ್ಲಿ ದೈಹಿಕ ಹಿಂಸೆ
ಅಧಿಕವಾಗಿದ್ದರೆ ಅತ್ಯಾಚಾರ ಪ್ರಕರಣಗಳಲ್ಲಿ ದೈಹಿಕ ಹಿಂಸೆಯಷ್ಟೇ ಮಾನಸಿಕ ಜರ್ಜರಿತಕ್ಕೂ ಮಹಿಳೆ
ಒಳಪಟ್ಟಿರುತ್ತಾಳೆ. ‘ಬೈಕೆಲ್ಲಿ ಕಳುವಾಯ್ತು?’ ‘ಎಷ್ಟೊತ್ತಿಗೆ’ ‘ಅಲ್ಯಾಕೆ ನಿಲ್ಲಿಸಿದ್ರಿ’
ಧಾಟಿಯ ವಿಚಾರಣೆಯನ್ನು ಅತ್ಯಾಚಾರ ಪ್ರಕರಣಗಳಲ್ಲಿ ಮಾಡಬಾರದು. “ಏನ್ ಮಾಡ್ತೀರಿ ಸರ್. ದಿನಾ
ಹಲ್ಕಾ ಜನಗಳನ್ನ ನೋಡಿ ನೋಡಿ ನಾವೂ ಸ್ವಲ್ಪ ಅವರ ಥರಾನೇ ಆಗಿಬಿಡ್ತಿವೇನೋ” ಎಂದು ಒಬ್ಬ ಪೋಲೀಸ್
ಪೇದೆ ಹೇಳಿದ್ದು ಪೋಲೀಸರಿಗೂ ವಿಧವಿಧದ ಅಪರಾಧ ಪ್ರಕರಣಗಳ ವಿಚಾರಣೆಯನ್ನು ನಡೆಸುವ ರೀತಿಯ ಬಗೆಗೆ
ತರಬೇತಿಯ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಪೋಲೀಸರು ಇಷ್ಟೆಲ್ಲದರ ನಂತರವೂ ಉತ್ತಮ ವಿಚಾರಣೆ
ನಡೆಸಿ ಅಪರಾಧಿಗಳನ್ನು ಹಿಡಿದು ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ನಿರ್ಧರಿಸಿದರೂ
ಅನೇಕಾನೇಕ ಪ್ರಭಾವಗಳು ಅವರನ್ನು ಕಾಡಲಾರಂಭಿಸುತ್ತದೆ. ಹೆಚ್ಚು ಚರ್ಚೆಗೊಳಪಟ್ಟ ಹೈಪ್ರೊಫೈಲ್
ಕೇಸುಗಳಲ್ಲಿ, ಅತ್ಯಾಚಾರಿ ಕಡುಬಡವನಾಗಿದ್ದ ಪಕ್ಷದಲ್ಲಿ ಪ್ರಭಾವಗಳಿರುವುದಿಲ್ಲ, ಇನ್ನುಳಿದಂತೆ
ಹೆಚ್ಚಿನ ಪ್ರಕರಣಗಳಲ್ಲಿ ಪ್ರಭಾವದ್ದೇ ರಾಜದರ್ಬಾರು. ಜಾತಿ, ಧರ್ಮ, ಆರ್ಥಿಕತೆ, ರಾಜಕೀಯ
ವಲಯಗಳಿಂದೆಲ್ಲ ಬರುವ ಪ್ರಭಾವಗಳನ್ನೂ ಮೀರಿ ನ್ಯಾಯಾಲಯದ ವ್ಯಾಪ್ತಿಗೆ ಪ್ರಕರಣ ಬಂದರೆ
ತ್ವರಿತವಾಗಿ ನ್ಯಾಯ ಸಿಗುವ ಸಂಭವ ಅತೀ ಕಡಿಮೆ. ಅತ್ಯಾಚಾರ ಪ್ರಕರಣಗಳಿಗಾಗಿ ತ್ವರಿತ
ನ್ಯಾಯಾಲಯಗಳನ್ನು ಸ್ಥಾಪಿಸುವ ಕೆಲಸ ದೆಹಲಿಯ ನಿರ್ಭಯಾ ಪ್ರಕರಣದ ನಂತರ ಚಾಲ್ತಿಯಲ್ಲಿದೆ. ನ್ಯಾಯ
ಸಿಕ್ಕರೂ ಅತ್ಯಾಚಾರವೆಂಬ ಘೋರ ಅನ್ಯಾಯಕ್ಕೆ ಕೆಲವೇ ವರುಷಗಳ ಶಿಕ್ಷೆ ಸಾಕೇ? ಎಂಬ ವಾದವಿದೆ.
ಕೆಲವೊಂದು ಪೈಶಾಚಿಕ ಘಟನೆಗಳಲ್ಲಿ ನೇಣುಗಂಬಕ್ಕೇರುವ ಶಿಕ್ಷೆಯೂ ಆಗಿದೆ. ಅತ್ಯಾಚಾರದ ಬಗೆಗಿನ ಚರ್ಚೆಗಳು
ವರುಷಕ್ಕೊಂದಾವರ್ತಿ ಪ್ರಾರಂಭಗೊಂಡಾಗೆಲ್ಲಾ ಕೆಲವು ದೇಶಗಳಲ್ಲಿರುವ ಶಿಕ್ಷೆಯ ರೂಪದ ಬಗೆಗೆ
ಚರ್ಚೆಗಳಾಗುತ್ತವೆ. ಆ ದೇಶದಲ್ಲಿ ಜನನಾಂಗವನ್ನೇ ಕತ್ತರಿಸುತ್ತಾರಂತೆ, ಈ ದೇಶದಲ್ಲಿ
ಸಾರ್ವಜನಿಕವಾಗಿ ತಲೆ ಕಡಿಯುತ್ತಾರಂತೆ, ಮಗದೊಂದು ದೇಶದಲ್ಲಿ ಪಬ್ಲಿಕ್ಕಿನ ಕೈಯಲ್ಲಿ ಕಲ್ಲು
ಹೊಡೆದು ಸಾಯಿಸುತ್ತಾರಂತೆ – ಆ ತರಹ ನಮ್ಮ ದೇಶದಲ್ಲೂ ಮಾಡಬೇಕು ಕಣ್ರೀ ಆಗಲೇ ಈ ಅತ್ಯಾಚಾರವೆಲ್ಲ
ನಿಂತುಬಿಡೋದು ಎಂಬ ವಾದಗಳಾಗುತ್ತವೆ. ಇಂತಹ ವಾದಗಳನ್ನು ವಿರೋಧಿಸಿದರೆ ನಿಮ್ಮ ಮನೆಯಲ್ಲಿ ಇದೇ
ರೀತಿಯಾಗಿದ್ದರೆ ಗೊತ್ತಾಗಿರೋದು ನಿಮಗೆ ಎಂಬ ವಿಚಿತ್ರ ಪ್ರತಿವಾದ ಹೂಡುತ್ತಾರೆ. ಅಂತಹ ಘೋರ
ಶಿಕ್ಷೆಗಳನ್ನು ನೀಡಿದರೂ ಆ ದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳು ನಿಂತು ಹೋಗಿದೆಯಾ? ಎಂಬ
ಪ್ರಶ್ನೆಗೆ ಉತ್ತರ ಇಲ್ಲವೆಂದ ಮೇಲೆ ಶಿಕ್ಷೆಯ ಘೋರತೆಯಿಂದ ಅಪರಾಧಗಳು ನಿಲ್ಲುವುದಿಲ್ಲವೆಂಬುದು
ಸ್ಪಷ್ಟ. ಮೇಲಾಗಿ ಅಂಥ ಘೋರ ಶಿಕ್ಷೆಯ ರೂಪಗಳು ಅನೇಕ ಬಾರಿ ನಿರಪರಾಧಿ ವಿರೋಧಿಗಳನ್ನು ಹಣಿಯುವುದಕ್ಕಾಗಿ
ಹೂಡುವ ಸಂಚಾಗಿಯೂ ಪರಿವರ್ತಿತವಾಗಬಹುದು. ತ್ವರಿತ ಗತಿಯಲ್ಲಿ ತನಿಖೆ ನಡೆದು, ಪ್ರಭಾವಗಳೆಲ್ಲವೂ
ಇಲ್ಲವಾಗಿ ತ್ವರಿತ ಗತಿಯಲ್ಲಿ ನ್ಯಾಯ ನೀಡುವಿಕೆಯ ಪ್ರಕ್ರಿಯೆ ನಡೆದು ಶಿಕ್ಷೆ ನೀಡಿದಾಗಲಷ್ಟೇ
ಅತ್ಯಾಚಾರಿಗಳ ಮನಸ್ಸಿನಲ್ಲಿ ಭಯ ಮೂಡಲು ಸಾಧ್ಯ.
ಟಿ.ಆರ್.ಪಿ ಕೇಂದ್ರಿತ ಮಾಧ್ಯಮಗಳ ಅವಸರಗಳ
ಬಗ್ಗೆ ಒಂದೆರಡು ಮಾತು ಹೇಳದೇ ಲೇಖನ ಮುಗಿಸುವುದು ಕಷ್ಟ. ಅತ್ಯಾಚಾರ ಪ್ರಕರಣಗಳಲ್ಲಿ ವರದಿ ಯಾವ
ರೀತಿ ಮಾಡಬೇಕು ಎಂಬುದಕ್ಕೆ ಅನೇಕ ನಿಯಮಗಳಿವೆ. ಸಂತ್ರಸ್ತೆಯ ಹೆಸರು ಎಲ್ಲೂ ಬಹಿರಂಗವಾಗಬಾರದು,
ಆಕೆಯನ್ನು ತೋರಿಸಬಾರದು ಒಟ್ಟಿನಲ್ಲಿ ಉಳಿದ ಸಮಾಜಕ್ಕೆ ಆಕೆಯ ಗುರುತು ಹತ್ತಬಾರದು,
ಗೋಪ್ಯವಾಗಿರಬೇಕು ಎಂಬುದ್ದೇಶದ ನಿಯಮಾವಳಿಗಳಿವೆ. ಆದರೆ ನಮ್ಮ ಮಾಧ್ಯಮಗಳು ಮಾಡುತ್ತಿರುವುದೇನು?
ಕೆಲವೊಮ್ಮೆ ಬಾಯಿ ತಪ್ಪಿ ಸಂತ್ರಸ್ತೆಯ ಹೆಸರು ಹೇಳಿಬಿಡುತ್ತಾರೆ. ಆಕೆಯ ಮನೆ - ಕೇರಿ,
ಸಂಬಂಧಿಕರು, ಅಪ್ಪ – ಅಮ್ಮ, ಕೆಲಸ ಮಾಡುವ ಜಾಗ ಎಲ್ಲವನ್ನೂ ತೋರಿಸಿ ಸಂತ್ರಸ್ತೆ ಯಾರೆಂಬುದು
ಊರಿಗೆಲ್ಲಾ ತಿಳಿಯುವಂತೆ ಮಾಡಿಬಿಡುತ್ತಾರೆ. ಇದು ಮಾನಸಿಕ ಅತ್ಯಾಚಾರವಲ್ಲದೆ ಮತ್ತೇನೂ ಅಲ್ಲ
ಎಂಬುದನ್ನು ಮಾಧ್ಯಮವೃಂದದವರು ಅರಿಯಬೇಕು.
ಚಿತ್ರಮೂಲ - amritaspeaks.wordpress.com
ವಾಸ್ತವವನ್ನು ಹೇಳಿದ್ದೀರಿ ,ನಮ್ಮ ಸಮಾಜ ಯಾವಾಗ ಬದಲಾಗುತ್ತದೋ ತಿಳಿಯದು ,ನಿರಂತರ ಪ್ರಯತ್ನ ಹೋರಾಟವೊಂದೆ ದಾರಿ
ReplyDeleteಲೇಖನ ಚೆನ್ನಾಗಿದೆ ,
ಹೀಗೆ ಬರೆಯುತ್ತಾ ಇರಿ
ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಮ್.
Deleteಇಂತಹ ಸಂಗತಿಗಳು ಪದೇ ಪದೇ ನಡೆಯುತ್ತಿರುವಾಗ 'ಪಡುವಾರಳ್ಳಿ ಪಾಂಡವರು' ಚಿತ್ರದ ಕ್ಲೈಮಾಕ್ಸ್ ನೆನಪಾಗುತ್ತೆ. "ಅವರು ಬರ್ತಾನೇ ಇರ್ತಾರೆ.... ನೀವು ಓಡಿಸ್ತಾನೆ ಇರ್ಬೇಕು....."