Jul 11, 2014

ರಂಗಪ್ರಶಸ್ತಿಯ ಗೌರವ ಹೆಚ್ಚಿಸಿದ ‘ರಕ್ಷಿದಿ’ಗೆ ಧನ್ಯವಾದಗಳು

Bellekere Hallitheatre
ಪ್ರಸಾದ್ ರಕ್ಷಿದಿ


ಡಾ ಅಶೋಕ್ ಕೆ ಆರ್.
ಕೆ.ಎಸ್.ಸಚ್ಚಿದಾನಂದ ರಂಗಪ್ರಶಸ್ತಿಯ ಹಿರಿಮೆಯನ್ನು ಹೆಚ್ಚಿಸಿದ ರಕ್ಷಿದಿ ಮತ್ತು ಬೆಳ್ಳೇಕೆರೆಯ ಅಂತಃಸತ್ವಕ್ಕೆ ಧನ್ಯವಾದಗಳು.
ಪ್ರಸಾದ್ ರಕ್ಷಿದಿಯವರ ಪರಿಚಯವಾಗಿದ್ದು ಕುಪ್ಪಳ್ಳಿಯಲ್ಲಿ ನಡೆದ ‘ನಾವು – ನಮ್ಮಲ್ಲಿ’ ಕಾರ್ಯಕ್ರಮದಲ್ಲಿ. ಆಗಷ್ಟೇ ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ನನ್ನ ಕೆಲವು ಕಥೆಗಳು ಪ್ರಕಟವಾಗಲಾರಂಭಿಸಿದ್ದವು. ವರ್ತಮಾನದ ರವಿಕೃಷ್ಣಾರೆಡ್ಡಿಯವರು ನನ್ನನ್ನವರಿಗೆ ಪರಿಚಯಿಸಿದಾಗ, ಆ ಕಥೆಗಳಲ್ಲೊಂದಷ್ಟನ್ನು ಓದಿದ್ದ ರಕ್ಷಿದಿಯವರು ನನ್ನ ಹೆಸರು ಕೇಳಿ ಗುರುತು ಹಿಡಿದರು! ‘ಪರ್ವಾಯಿಲ್ಲ! ಒಂದೆರಡು ಕಥೆಗೇ ಒಬ್ಬರಾದರೂ ಗುರುತು ಹಿಡಿದರು! ಶಭಾಷ್ ಅಸೋಕ’ ಎಂದು ಬೆನ್ನು ತಟ್ಟಿಕೊಂಡೆ. ಒಂದೈತ್ತು ನಿಮಿಷ ಮಾತನಾಡಿದೆವು. ಅವರ ವಿಷಯ ಮಂಡನೆಯೂ ಇತ್ತು ಅಂದಿನ ವಿಚಾರ ಸಂಕಿರಣದಲ್ಲಿ. ಎಲ್ಲವನ್ನೂ ಥಿಯರೈಸ್ ಮಾಡುವುದು ಅನಗತ್ಯ ಮತ್ತು ಕೆಲವೊಮ್ಮೆ ಅಪಾಯಕಾರಿ ಎಂದು ತಮ್ಮೂರಿನ ಹೋಟೆಲ್ಲೊಂದೊರ ಉದಾಹರಣೆ ನೀಡುತ್ತಾ ವಿವರಿಸಿದರು. ತದನಂತರದ ದಿನಗಳಲ್ಲಿ ಕ್ಯಾಮೆರಾ – ಚಟದಿಂದಾಗಿ ಅವರ ಮಗ ಅಕ್ಷರ ಆತ್ಮೀಯನಾದ. ಅಕ್ಷರನ ಮುಖಾಂತರ ಪ್ರಸಾದ್ ರಕ್ಷಿದಿಯವರೂ ಒಂದಷ್ಟು ಅರಿವಾದರು.
ಪ್ರಸಾದ್ ರಕ್ಷಿದಿ ಮತ್ತವರ ಜೈ ಕರ್ನಾಟಕ ನಾಟಕ ಸಂಘದ ಅಗಾಧತೆ ಅರಿವಾದದ್ದು ರಕ್ಷಿದಿ – ಬೆಳ್ಳೇಕೆರೆಗೆ ಭೇಟಿಯಿತ್ತ ನಂತರ. ಹೆಚ್ಚೇನೂ ಜನಸಂಖೈಯಿಲ್ಲದ ಒಂದು ಪುಟ್ಟ ಊರಿನಲ್ಲಿ ಬಯಲು ರಂಗಮಂದಿರ ನಿರ್ಮಿಸಿ ಅದಕ್ಕೆ ಹೊಂದುಕೊಂಡಂತೆಯೇ ಒಳಾಂಗಣ ರಂಗಮಂದಿರ ಕಟ್ಟುವ ಕೆಲಸಗಳು ಸಾಗಿದ್ದವು. ಮನೋರಂಜನೆಯ ನಾಟಕಗಳ ಜೊತೆಜೊತೆಗೇ ಬೌದ್ಧಿಕ ಕಸರತ್ತುಂಟುಮಾಡಿಸುವ ನಾಟಕಗಳನ್ನೂ ಎಲ್ಲ ವಯೋಮಾನದವರೂ ನೋಡುವಂತೆ ಮಾಡುವುದು ಸಾಧನೆಯೇ ಸರಿ.  ‘ದೊಡ್ಡ’ ನಗರಗಳ ‘ದೊಡ್ಡ’ ನಾಟಕಗಳೇ ಜನರ ಕೊರತೆಯಿಂದ ಸೊರಗುವಾಗ ಸಕಲೇಶಪುರ ತಾಲ್ಲೂಕಿನ ಪುಟ್ಟ ಊರಿನ ಜನರು ನಾಟಕ ತಂಡ ಕಟ್ಟಿ  ರಾಜ್ಯಾದ್ಯಂತ ನಾಟಕ ಪ್ರದರ್ಶನ ನೀಡಿ ಖ್ಯಾತ ನಾಟಕ ತಂಡಗಳನ್ನು ತಮ್ಮ ಊರಿಗೆ ಕರೆಸಿ ಆದರಾಥಿತ್ಯ ನೀಡುವ ಮಟ್ಟಕ್ಕೆ ಬೆಳೆಯಲು ದಶಕಗಳೇ ಹಿಡಿದಿದೆ. ಊರಿಗೆ ಭೇಟಿಯಿತ್ತಾಗ ಶಾಲೆಯ ಮಗ್ಗುಲಲ್ಲಿದ್ದ ಹಳೆಯ ರಂಗಸ್ಥಳಗಳನ್ನೆಲ್ಲಾ ತೋರಿಸಿ ನಾಟಕ ತಂಡದ ಜೊತೆಜೊತೆಗೆ ಊರಿನ ಕಲಾಮನಸ್ಸು ಬೆಳೆದ ರೀತಿಯನ್ನು ಸ್ಥೂಲವಾಗಿ ವಿವರಿಸಿದ್ದರು ಪ್ರಸಾದ್ ರಕ್ಷಿದಿ. ಅವರ ‘ಬೆಳ್ಳೇಕೆರೆ ಹಳ್ಳಿಥೇಟರ್’ ಪುಸ್ತಕವನ್ನು ಕೊಟ್ಟು ಕಳುಹಿಸಿದ್ದರು. ಹೆಸರಿಗದು ಗ್ರಾಮೀಣ ರಂಗಭೂಮಿಯ ಆತ್ಮಕಥೆಯಾದರೂ ಅದು ಇಡೀ ಊರಿನ ಕೋಪ, ತಾಪ, ಪ್ರೀತಿ, ದ್ವೇಷ, ಮತ್ಸರ, ಅನುರಾಗ, ಅನುಬಂಧದ ಕಥಾನಕ. ರಂಗ ನಿರಾಸಕ್ತರಲ್ಲೂ ಆಸಕ್ತಿ ಹುಟ್ಟಿಸುವಂತಹ ಪುಸ್ತಕ. ಅನೇಕ ಕಥೆ-ಕಾದಂಬರಿಗಳಿಗೆ ವಸ್ತುವಾಗಬಲ್ಲ ಘಟನಾವಳಿಗಳ ಗುಚ್ಛ ‘ಬೆಳ್ಳೇಕೆರೆ ಹಳ್ಳಿಥೇಟರ್’.
K V Shankaregowda
ಕೆವಿ ಶಂಕರೇಗೌಡ ಮತ್ತು ಕೆಎಸ್ ಸಚ್ಚಿದಾನಂದ ಪ್ರಶಸ್ತಿ
ಪ್ರಸಾದ್ ರಕ್ಷಿದಿಯವರಿಗೆ ಮಂಡ್ಯದ ಕೆ.ವಿ.ಶಂಕರೇಗೌಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕೆ.ಎಸ್.ಸಚ್ಚಿದಾನಂದ ರಂಗ ಭೂಮಿ ಪ್ರಶಸ್ತಿ ಲಭಿಸಿದೆ. ಒಡನಾಟವಿದ್ದರೂ ಇದುವರೆಗೂ ಪ್ರಸಾದ್ ರಕ್ಷಿದಿಯವರ ರಚನೆಯ ಅವರ ಊರಿನ ಜನರಭಿನಯಿಸಿರುವ ನಾಟಕವನ್ನು ನೋಡಲಾಗಿಲ್ಲ ನನಗೆ. ಒಮ್ಮೆ ಮೇಲುಕೋಟೆಗೆ ‘ಚಂದ್ರಮಂಡಲ’ ನಾಟಕವನ್ನು ನೋಡಲು ತೆರಳಿದ್ದೆನಾದರೂ ಮಲೆನಾಡಿನಿಂದ ತಂಡದೊಡನೆ ಮಳೆರಾಯನನ್ನೂ ಕರೆದುಕೊಂಡು ಬಂದಿದ್ದರಿಂದ ನೋಡಲಾಗಲಿಲ್ಲ! ರಂಗಭೂಮಿಗೆ ಅವರೆಷ್ಟು ಸಮರ್ಪಿತರು ಎಂಬುದಕ್ಕೆ ಅವರ ಮನೆಯ ಬಚ್ಚಲುಮನೆಯ ಉದಾಹರಣೆಯೇ ಸಾಕು! ಮೊದಲ ಬಾರಿ ಅವರ ಮನೆಗೆ ಹೋಗಿದ್ದಾಗ ಹಳೆಯ ಬಚ್ಚಲುಕೋಣೆಯಿತ್ತು. ನವೀಕರಿಸಬೇಕೆಂದು ಹೇಳುತ್ತಿದ್ದರು. ನಮ್ಮಲ್ಲನೇಕರು ಬಚ್ಚಲು ಮನೆಗಳನ್ನು ಬೆಡ್ರೂಮಿಗೆ ಅಂಟಿಸಿಕೊಂಡು ‘ಇದು ನಮ್ಮ ವೈಯಕ್ತಿಕ ಆಸ್ತಿ’ ಎಂಬ ಭಾವ ಬೆಳೆಸಿಕೊಳ್ಳುತ್ತಿದ್ದರೆ ಅವರು ನವೀಕರಣದ ಸಂದರ್ಭದಲ್ಲಿ ಪಕ್ಕಪಕ್ಕದಲ್ಲೇ ಎರಡು ಬಚ್ಚಲುಮನೆಯನ್ನು ಕಟ್ಟಿಸಿದ್ದಾರೆ. ನಾಟಕ ತಂಡಗಳನ್ನು ಆಹ್ವಾನಿಸಿದಾಗ ಅವರ ಉಪಯೋಗಕ್ಕೊಂದು (ಈಗಾಗಲೇ ಮನೆಯ ಹೊರಗೊಂದು ಬಚ್ಚಲುಕೋಣೆ ಇದ್ದಾಗ್ಯೂ), ಮನೆಯವರಿಗೊಂದು. ಒಂದು ಯಕಶ್ಚಿತ್ ಬಚ್ಚಲುಮನೆ ಕಟ್ಟುವಾಗ ಕೂಡ ಸಾಮುದಾಯಿಕ ಚಿಂತನೆ ಹೇಗೆ ಕೆಲಸ ಮಾಡಬಲ್ಲದು ಎಂಬುದರ ಅರಿವಾಯಿತಲ್ಲಿ.
ಮತ್ತೊಮ್ಮೆ ಕೆ.ಎಸ್.ಸಚ್ಚಿದಾನಂದ ರಂಗಪ್ರಶಸ್ತಿಯ ಹಿರಿಮೆಯನ್ನು ಹೆಚ್ಚಿಸಿದ ರಕ್ಷಿದಿ ಮತ್ತು ಬೆಳ್ಳೇಕೆರೆಯ ಅಂತಃಸತ್ವಕ್ಕೆ ಧನ್ಯವಾದಗಳು.

No comments:

Post a Comment