ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 32 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 32 ಓದಲು ಇಲ್ಲಿ ಕ್ಲಿಕ್ಕಿಸಿ
ಬಸ್ ಶ್ರೀರಂಗಪಟ್ಟಣ ದಾಟಿ
ಹಾಸನದ ಕಡೆಗೆ ಪಯಣ ಬೆಳೆಸಿತ್ತು. ‘ಎಂಥಾ ಜೀವನ ಇದು?! ಜೀವನದ ತುಂಬಾ ಅನಿಶ್ಚಿತತೆಯೇ ತುಂಬಿಕೊಂಡಿದೆಯಲ್ಲಾ.
ಒಂದು ತಿಂಗಳ ಮುಂಚೆ ಕೀರ್ತನಾ ಯಾರೆಂಬುದೂ ತಿಳಿದಿರಲಿಲ್ಲ. ಭೇಟಿಯಾಗಿದ್ದು ಎರಡೇ ಬಾರಿ. ಎರಡನೇ ಬಾರಿಯಷ್ಟೇ
ಇಬ್ಬರ ಮನಗಳೂ ತೆರೆದುಕೊಂಡಿದ್ದು. ಬರೀ ಅಷ್ಟಕ್ಕೆ ನಮ್ಮಿಬ್ಬರ ನಡುವೆ ಎಷ್ಟು ಗಾಢವಾದ ಸಂಬಂಧ ಬೆಳೆದಿದೆ.
ಈ ಸಂಬಂಧಕ್ಕೆ ಏನು ಅರ್ಥ? ಏನು ಹೆಸರು? ಎರಡು ಬಾರಿ ಭೇಟಿಯಾದವನನ್ನು ನಂಬಿ ನನ್ನ ಜೊತೆ ಬಂದಿದ್ದಾಳೆಂದರೆ
ನಮ್ಮ ಸಂಬಂಧದ ಮೇಲೆ ಆಕೆಗೆ ಎಷ್ಟು ಧೃಡ ನಂಬಿಕೆಯಿರಬೇಕು’ ಬೀಸುವ ಗಾಳಿಗೆ ಮುಖವೊಡ್ಡಿ ಕುಳಿತ ಲೋಕಿ
ಯೋಚನೆಗಳಲ್ಲಿ ಮುಳುಗಿದ್ದ. ಕೀರ್ತನಾ ಆತನ ತೊಡೆಯ ಮೇಲೆ ಮಲಗಿದ್ದಳು. ಲೋಕಿ ಯೋಚನೆಗಳಿಂದ ಹೊರಬಂದಿದ್ದು
ಕೀರ್ತನಾಳ ಕಣ್ಣೀರಹನಿಗಳು ಪ್ಯಾಂಟನ್ನು ತೋಯಿಸಿದಾಗ.
“ಯಾಕೆ ಕೀರ್ತನಾ ಅಳ್ತಾ ಇದ್ದೀಯಾ?”
ಕೀರ್ತನಾಳ ತಲೆ ನೇವರಿಸುತ್ತ ಕೇಳಿದ. ಲೋಕಿಯ ಮಾತು ಕೇಳಿ ಎದ್ದು ಕುಳಿತಳು ಕೀರ್ತನಾ. ಕಣ್ಣೀರನ್ನು
ಒರೆಸಿಕೊಳ್ಳುತ್ತಾ “ನಿನಗೂ ನಿದ್ರೆ ಬಂದಿಲ್ವಾ ಲೋಕಿ?”
“ಇಲ್ಲ. ಯೋಚ್ನೆ ಮಾಡ್ತಿದ್ದೆ.
ಕೇವಲ ಎರಡು ಭೇಟಿಯಿಂದ ನಮ್ಮಿಬ್ಬರ ಸಂಬಂಧ ಇಷ್ಟು ಗಾಢವಾಗಿದೆಯಲ್ಲಾ ಹೇಗೆ ಅಂತ?”
“ಸಂಬಂಧಗಳು ಗಟ್ಟಿಯಾಗಬೇಕು
ಅಂದ್ರೆ ಎಷ್ಟು ಬಾರಿ ಭೇಟಿಯಾಗ್ತೀವಿ ಅನ್ನೋದಕ್ಕಿಂತ ಒಬ್ಬರೊಬ್ಬರ ಮೇಲೆ ಎಷ್ಟರಮಟ್ಟಿಗೆ ನಂಬಿಕೆಯಿದೆ
ಅನ್ನೋದು ಮುಖ್ಯವಾಗುತ್ತೆ”
“ನೀ ಹೇಳೋದೂ ಸರಿ ಅನ್ನು.
ಯಾಕ್ ಅಳ್ತಾಯಿದ್ದೆ? ಮನೆಯವರ ನೆನಪಾಯ್ತಾ?”
“ಹ್ಞೂ. ಎಷ್ಟೇ ಪ್ರಯತ್ನಪಟ್ಟರೂ
ಭಾವನೆಗಳ ಹರಿವನ್ನು ತಡೆಯುವುದಕ್ಕಾಗುತ್ತಿಲ್ಲ ಕಣೋ ಲೋಕಿ”
“ಭಾವನೆಗಳನ್ನು ಯಾಕೆ ತಡೆ
ಹಿಡಿಯುತ್ತೀಯಾ? ಎಲ್ಲೆಲ್ಲಿ ಹರಿದು ಹೋಗಬೇಕು ಅನ್ಸುತ್ತೋ ಅಲ್ಲೆಲ್ಲಾ ಹರಿಯುವುದಕ್ಕೆ ಬಿಟ್ಟುಬಿಡು.
ಭಾವನೆಗಳ ನದಿಗೆ ಅಣೆಕಟ್ಟು ಕಟ್ಟೋದ್ರಿಂದ ನಮ್ಮ ಮನಕ್ಕೇ ಹೆಚ್ಚು ಒತ್ತಡ ಬೀಳುತ್ತೆ. ಅದರ ಅವಶ್ಯಕತೆ
ಏನಿದೆ. ನದಿಯನ್ನು ಅದರ ಪಾಡಿಗೆ ಹರಿಯಲು ಬಿಡು. ಅದರಲ್ಲಿ ನಾವು ಕೊಚ್ಚಿಕೊಂಡು ಹೋಗದಂತೆ ನೋಡಿಕೊಂಡರೆ
ಸಾಕು”
“ಪ್ರಯತ್ನಿಸುತ್ತೀನಿ ಲೋಕಿ”
“ನಾಳೆ ತುಂಬಾನೇ ಕೆಲಸವಿದೆ.
ಮಲಗಿಕೋ ಪೂರ್ಣಿ” ಎಂದು ಕಣ್ಣುಮುಚ್ಚಿದ ಲೋಕಿ.
“ಸಾಹೇಬ್ರೇ ನಾನು ಪೂರ್ಣಿಯಲ್ಲ
ಕೀರ್ತನಾ” ಆತನ ಭುಜವನ್ನಲ್ಲಾಡಿಸುತ್ತಾ ನಕ್ಕು ಹೇಳಿದಳು ಕೀರ್ತನಾ.
“ಓ! ಹೌದಲ್ಲಾ! ಮಲಗಿಕೋ ಕೀರ್ತನಾ”
*
* *
“ಇಷ್ಟೊಂದು ಓದಬೇಡ ಕಣೇ ಪೂರ್ಣಿ
ಫೇಲಾಗ್ಹೋಗ್ತೀಯ” ಬಾಗಿಲನ್ನು ತಳ್ಳುತ್ತಾ ರೂಮಿನೊಳಗೆ ಬಂದು ಹೇಳಿದಳು ಸಿಂಚನಾ.
“ಸುಮ್ನೆ ಬಾರೇ ಕತ್ತೆ. ನಿನ್ನಷ್ಟಂತೂ
ಓದಿಲ್ಲ. ಏನೋ ಈಗೀಗ ಬುಕ್ ಇಡೀತಾ ಇದ್ದೀನಿ”
“ತಿಂಡಿ ಆಯ್ತಾ?”
“ಹ್ಞೂ.ನಿಂದು”
“ಈಗಷ್ಟೇ ಆಯ್ತು. ಲೋಕಿ ಫೋನ್
ಮಾಡಿದ್ನಾ?”
“ಲೋಕಿ ಫೋನ್ ಮಾಡಿದ್ರೆ ಮಾತ್ರ
ನಾನಿಲ್ಲಿಗೆ ಬರಬೇಕಾ? ಮೊನ್ನೆ ತಾನೇ ಭೇಟ್ಟಿಯಾಗಿದ್ದೀಯಾ? ಆಗಲೇ ವಿರಹ ವೇದನೆ ಶುರುವಾಗಿಹೋಯ್ತ?”
“ಅಮ್ಮಾ ತಾಯಿ. ನಿನಗೆ ಕೈ
ಮುಗೀತೀನಿ. ಸ್ವಲ್ಪ ಮೆಲ್ಲಗೆ ಮಾತನಾಡು. ಒಳಗೆ ಅಮ್ಮನಿಗೆ ಕೇಳಿಸೀತು”
“ಅಳಿಯನ ವಿಷಯ ಈಗಲೇ ಗೊತ್ತಾಗಲಿ
ಬಿಡು”
“ಪೂರ್ಣಿಮಾ. ನೋಡು ನಿನಗ್ಯಾವುದೋ
ಪತ್ರ ಬಂದಿದೆ” ಪೂರ್ಣಿಮಾಳ ತಾಯಿ ಕೂಗಿ ಹೇಳಿದರು.
ಪೂರ್ಣಿಮಾ ಹೊರಗೆ ಬಂದು ತಾಯಿಯ
ಕೈಯಿಂದ ಪತ್ರವನ್ನು ತೆಗೆದುಕೊಂಡು ರೂಮಿನೊಳಗೆ ಬಂದಳು.
“ಯಾರದೇ ಪತ್ರ?”
“ಗೊತ್ತಿಲ್ಲಪ್ಪ. ಅಕ್ಷರ ನೋಡಿದರೆ
ಲೋಕಿಯದ್ದಿದ್ದ ಹಾಗಿದೆ”
“ಓ.ಹೋ. ವಿರಹವೇದನೆಗಳನ್ನು
ಅಕ್ಷರದ ರೂಪದಲ್ಲಿ ಬರೆದು ಕಳುಹಿಸಿರಬೇಕು” ರೇಗಿಸುವ ದನಿಯಲ್ಲಿ ಹೇಳಿದಳು. ಯಾವತ್ತೂ ಪತ್ರ ಬರೆಯದಿದ್ದವನು
ಇವತ್ಯಾಕೆ ಬರೆದಿದ್ದಾನೆ ಎಂದು ಯೋಚಿಸುತ್ತಾ ರೂಮಿನ ಬಾಗಿಲನ್ನು ಮುಂದೆ ತಳ್ಳಿ ಚಿಲಕ ಹಾಕಿ ಸಿಂಚನಾಳ
ಪಕ್ಕ ಹೋಗಿ ಕುಳಿತಳು. ಪತ್ರ ತೆರೆಯಲಾರಂಭಿಸಿದಳು. ಮನದಲ್ಲಿ ಬರುತ್ತಿದ್ದ ಕೆಟ್ಟ ಆಲೋಚನೆಗಳಿಂದ ಕೈ
ನಡುಗುತ್ತಿತ್ತು. ಪತ್ರ ತೆರೆದಳು
‘ಪೂರ್ಣಿ,
ನಾ ಹೋಗ್ತಿದ್ದೀನಿ. ಪ್ರೀತಿಯಲ್ಲಿ
ಅಲ್ಲಲ್ಲ ಪ್ರೇಮದಲ್ಲಿ ಕ್ಷಮೆಯಿರಲಿ.
ನಿನ್ನವನಾಗಬೇಕಿದ್ದವ,
ಲೋಕಿ’
ಪತ್ರದಿಂದಾದ ಅಘಾತದಿಂದ ಒಂದು
ಕ್ಷಣ ಅಳುವುದೂ ಮರೆತುಹೋಯಿತು. ಮರುಕ್ಷಣದಲ್ಲಿ ಅಳಲಾರಂಭಿಸಿದಳು. ಪೂರ್ಣಿಮಾ ಅಳುವುದನ್ನು ನೋಡಿ ಗಾಬರಿಯಾದ
ಸಿಂಚನಾ ಪೂರ್ಣಿಮಾಳ ಕೈಯಲ್ಲಿದ್ದ ಪತ್ರವನ್ನು ತೆಗೆದುಕೊಂಡು ಓದಿದಳು. ಲೋಕಿ ಇವಳನ್ನು ಬಿಟ್ಟು ಹೊರಟುಹೋಗಿದ್ದಾನೆ
ಎಂಬುದು ಸ್ಥೂಲವಾಗಿ ಅರ್ಥವಾಯಿತಷ್ಟೇ. ಪೂರ್ಣಿಮಾಳ ಹೆಗಲ ಮೇಲೆ ಕೈಹಾಕುತ್ತಾ
“ಸಮಾಧಾನ ಮಾಡ್ಕೋ ಪೂರ್ಣಿ.
ಇಬ್ಬರ ಮಧ್ಯೆ ಜಗಳವೇನಾದ್ರೂ ಆಗಿತ್ತಾ?” ಸಿಂಚನಾ ಪ್ರಶ್ನೆ ಕೇಳಿದ ಬಹಳ ಸಮಯದ ನಂತರವೂ ಪೂರ್ಣಿ ಅಳುತ್ತಿದ್ದಳು.
ನಂತರ ಕೊಂಚ ಸಮಾಧಾನ ಮಾಡಿಕೊಂಡು “ಜಗಳವೇನೂ ಆಗಿರಲಿಲ್ಲ ಸಿಂಚನಾ. ಕೊಟ್ಟ ಮಾತಿಗೆ ತಪ್ಪುತ್ತಾನಿವನು
ಎಂದೂ ತಿಳಿದಿರಲಿಲ್ಲ”
“ನನಗೊಂದೂ ಅರ್ಥವಾಗ್ತಿಲ್ಲ
ಪೂರ್ಣಿ”
“ಎಲ್ಲವನ್ನೂ ನಿಧಾನಕ್ಕೆ ತಿಳಿಸುತ್ತೀನಿ.
ಈಗ ಮೊದ್ಲು ಲೋಕಿಯ ಮನೆಗೆ ಹೋಗೋಣ ನಡಿ” ಎಂದಳು.
*
* *
“ಏನಮ್ಮಾ ಇನ್ನೂ ಕಾಲೇಜಿಗೆ
ಹೋಗಿಲ್ವಾ?” ತಿಂಡಿ ತಿನ್ನುತ್ತಾ ಸ್ನೇಹಳನ್ನು ಕೇಳಿದರು ಶಿವಶಂಕರ್.
“ಬೆಳಗಿನ ಪಿರಿಯಡ್ ಇರಲಿಲ್ಲ
ಅಪ್ಪ. ಅದಿಕ್ಕೆ ಹೋಗಿಲ್ಲ. ಹತ್ತೂವರೆಗೆ ಹೋಗ್ತೀನಿ”
“ಹೋಗಬೇಕಾದರೆ ಪಕ್ಕದ ಮನೆಯಲ್ಲಿ
ಕೀ ಕೊಟ್ಟು ಹೋಗು. ಲೋಕಿ ಎಷ್ಟೊತ್ತಿಗೆ ಬರ್ತಾನೋ ಏನೋ”
“ಯಾರ ಮನೆಗೆ ಹೋಗ್ತೀನಿ ಅಂತ
ಹೇಳಿದ್ನಾ?”
“ಸ್ನೇಹಿತನ ರೂಮಿಗೆ ಎಂದು
ಹೇಳಿದ. ಯಾರು ಅಂತ ನಾನೂ ಕೇಳಲಿಲ್ಲ. ಪರೀಕ್ಷೆಗೆ ಓದ್ತಾ ಇದಾನಲ್ವಾ. ಮನೆಯಲ್ಲಿದ್ದರೆ ಸಿಗರೇಟು ಸೇದೋದಿಕ್ಕಾಗೋದಿಲ್ವಲ್ಲ
ಅದಿಕ್ಕೆ ಸ್ನೇಹಿತನ ರೂಮಿಗೆ ಹೋಗಿರಬೇಕು”
“ಆ ವಿಷಯ ಮಾತನಾಡೋದಿಲ್ಲ ಅಂತ
ಹೇಳಿದ್ಯಲ್ಲಪ್ಪ”
“ಅಣ್ಣನನ್ನು ಚೆನ್ನಾಗಿ ವಹಿಸಿಕೊಳ್ತೀಯ.
ನಿನ್ನನ್ನು ಅವನು ಎಷ್ಟು ಚೆನ್ನಾಗಿ ನೋಡ್ಕೋತಾನೋ ಆ ದೇವರೇ ಬಲ್ಲ”
“ನೋಡ್ತಾ ಇರಿ. ನನ್ನಣ್ಣ ನನ್ನನ್ನು
ಎಷ್ಟು ಚೆನ್ನಾಗಿ ನೋಡ್ಕೋತಾನೆ ಅಂತ. ಬೇರೆ ಹುಡುಗೀರು ನನಗಿಂತಾ ಅಣ್ಣ ಇರಬಾರದಿತ್ತಾ ಅಂದ್ಕೋಬೇಕು”
“ಸರಿ.ಸರಿ. ಅಣ್ಣನ್ನು ಹೊಗಳು
ಅಂದ್ರೆ ಇಡೀ ದಿನ ಸಾಲಲ್ಲ ನಿನಗೆ” ನಗುತ್ತ ಹೇಳಿ ತಿಂಡಿಯ ಪ್ಲೇಟನ್ನು ಅಡುಗೆಮನೆಯಲ್ಲಿಟ್ಟು ಬಂದು
“ನಾನಿನ್ನು ಬರ್ತೀನಿ. ಕೀ ಕೊಟ್ಟು ಹೋಗೋದನ್ನು ಮರೆಯಬೇಡ” ಎಂದ್ಹೇಳಿ ಹೊರಟರು.
ತಂದೆ ಹೋದ ನಂತರ ಸ್ನೇಹಾ ಪ್ಲೇಟಿಗೆ
ತಿಂಡಿ ಹಾಕಿಕೊಂಡು ತಿನ್ನಲಾರಂಭಿಸಿದಳು. ತಿಂಡಿ ತಿಂದ ನಂತರ ಪಾತ್ರೆಗಳನ್ನು ತೊಳೆಯಲು ಅಡುಗೆಮನೆಗೆ
ಹೋದಳು. ಎಲ್ಲಾ ಪಾತ್ರೆಗಳನ್ನು ಬೆಳಗಿ ಇನ್ನೇನು ತೊಳೆಯಲು ಪ್ರಾರಂಭಿಸಬೇಕು ಅಷ್ಟರಲ್ಲಿ ಅಂಚೆಯವನು
‘ಪೋಸ್ಟ್ ಪೋಸ್ಟ್’ ಎಂದು ಕೂಗಿಕೊಂಡ. ‘ನಮ್ಮ ಮನೆಗೆ ಯಾವ ಪೋಸ್ಟ್? ಟೆಲಿಫೋನ್ ಬಿಲ್ಲಿರಬೇಕು’ ಎಂದುಕೊಂಡು
ಕೈ ತೊಳೆದುಕೊಂಡು ಬಂದು ಬಾಗಿಲು ತೆರೆದಳು. ಬಂದಿದ್ದು ಪತ್ರ ಟೆಲಿಫೋನ್ ಬಿಲ್ಲಲ್ಲ. ತನ್ನ ಹೆಸರಿಗೆ
ಪತ್ರ ಬಂದಿತ್ತು. ಅಕ್ಷರಗಳನ್ನು ನೋಡುತ್ತಿದ್ದಂತೆ ಅದು ಲೋಕಿಯದು ಎಂದು ತಿಳಿಯಿತು. ಇವನ್ಯಾಕೆ ಪತ್ರ
ಬರೆದಿದ್ದಾನೆ ಎಂದು ಗಾಬರಿಯಾಯಿತು. ‘ಇಂದ’ ವಿಳಾಸವನ್ನು ಬರೆಯುವ ಜಾಗದಲ್ಲಿ ‘ಜೈ ಹಿಂದ್’ ಎಂದು ಬರೆದಿದ್ದ
ಲೋಕಿ. ಗಾಬರಿ ಮತ್ತಷ್ಟು ಹೆಚ್ಚಾಯಿತು. ಬಾಗಿಲನ್ನು ಹಾಕಲು ಮರೆತು ವರಾಂಡದಲ್ಲೇ ಕುಳಿತು ಪತ್ರವನ್ನು
ತೆರೆದಳು
‘ನಲ್ಮೆಯ ತಂಗಿ ಸ್ನೇಹಾ,
ನೀನು ತುಂಬಾನೇ ಹಚ್ಚಿಕೊಂಡಿದ್ದ,
ನಿನ್ನ ನಂಬಿಕೆಯ ಅಣ್ಣ ಇವತ್ತು ನಿನ್ನಿಂದ ದೂರಾಗುತ್ತಿದ್ದಾನೆ. ನನ್ನನ್ನು ಕ್ಷಮಿಸಿಬಿಡು. ಗಾಬರಿಯಾಗಬೇಡ.
ನನ್ನ ಜೀವಕ್ಕೇನೂ ಅಪಾಯ ಮಾಡಿಕೊಳ್ಳುತ್ತಿಲ್ಲ. ದೇಶಸೇವೆಗೆ ಹೊರಡೋ ಸಮಯ ಬಂದಿದೆ. ಹೋಗ್ತಾ ಇದ್ದೀನಿ.
ಈ ಪತ್ರವನ್ನು ತಂದೆಗೆ ಬರೆಯಬೇಕೆಂದುಕೊಂಡಿದ್ದೆ. ಆದರವರು ನಿನ್ನಷ್ಟು ಗಟ್ಟಿ ಮನಸ್ಸಿನವರಲ್ಲ. ಎಲ್ಲಿಗೆ
ಹೋಗ್ತಾ ಇದ್ದೀನಿ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ. ಅಂದುಕೊಂಡಿರೋ ಗುರಿ ತಲುಪುವ ಮನಸ್ಸಿದೆ
ವಿಶ್ವಾಸವೂ ಬೆಟ್ಟದಷ್ಟಿದೆ. ನಿನ್ನ ಶುಭ ಹಾರೈಕೆ ಯಾವತ್ತೂ ನನ್ನ ಮೇಲಿರಲಿ.
ವಿಜಿಗೆ ನನ್ನನ್ನು ಕ್ಷಮಿಸಲೇಬೇಕೇಂತೆ
ಎಂದು ತಿಳಿಸು. ನನ್ನ ಆದರ್ಶಗಳ ವಿರುದ್ಧ ನಡೆದುಕೊಂಡುಬಿಟ್ಟೆ ವಿಜಿಗೆ ಅನ್ಯಾಯವಾದಾಗ. ಸಂಸಾರದೊಳಗೆ,
ವ್ಯವಸ್ಥೆಯೊಳಗಿದ್ದು ಅನ್ಯಾಯದ ವಿರುದ್ಧ ಹೋರಾಟ ಮಾಡುವುದಕ್ಕಾಗುವುದಿಲ್ಲವೆಂದು ನನಗೆ ಮನವರಿಕೆಯಾಗಿದ್ದೇ
ವಿಜಿಯ ವಿಷಯದಲ್ಲಿ. ಅಪ್ಪನ ಬಲವಂತ, ಇನ್ಸ್ ಪೆಕ್ಟರ್ ರ ಒತ್ತಡ ನನ್ನನ್ನು ಮೆತ್ತಗಾಗಿಸಿಬಿಟ್ಟವು.
ನಾನಂಬಿದ ಆದರ್ಶಗಳಿಗೆ ವಿರುದ್ಧವಾಗಿ ನಿಲ್ಲೋದು ಅಸಾಧ್ಯ. ವಿಜಿಯ ವಿಷಯದಲ್ಲಿ ನಾ ನಡೆದುಕೊಂಡ ರೀತಿಗೆ
ಇಂದೂ ಕೊರಗುತ್ತಿದ್ದೇನೆ. ಸಾಧ್ಯವಾದರೆ ನನ್ನನ್ನು ಕ್ಷಮಿಸುವಂತೆ ಆತನಿಗೆ ಹೇಳು.
ಅಪ್ಪನನ್ನು ಸಮಾಧಾನಪಡಿಸುವ
ಸಂಪೂರ್ಣ ಜವಾಬ್ದಾರಿ ನಿನ್ನದೇ. ನಾನು ದೇಶದ್ರೋಹದ ಕೆಲಸದಲ್ಲಿ ತೊಡಗುತ್ತೀನಿ ಅನ್ನೋ ಅನುಮಾನ ನಿನಗೆ
ಬೇಡ. ಈ ದೇಶದ ಸಮಾಜದ ಪರವಾಗಿಯೇ ಕೆಲಸ ಮಾಡುತ್ತೇನೆ. ಆ ಕೆಲಸ ಕಾನೂನಿಗೆ ವಿರುದ್ಧವಾಗಿರಬಹುದಷ್ಟೇ.
ನನ್ನ ಮನಸ್ಥಿತಿಯನ್ನು ನೀನು ಅರ್ಥಮಾಡಿಕೊಳ್ತೀಯ ಎಂದು ನಂಬಿದ್ದೇನೆ.
ಪೂರ್ಣಿಗೂ ಪತ್ರ ಬರೆದಿದ್ದೇನೆ.
ಒಂದು ಹುಡುಗಿಯ ಮನಸ್ಸಿನಲ್ಲಿ ಪ್ರೀತಿ ಪ್ರೇಮದ ಭಾವನೆ ಹುಟ್ಟಿಸಿ ನಡುದಾರಿಯಲ್ಲಿ ಅವಳ ಕೈಬಿಟ್ಟು
ಹೋಗುತ್ತಿರುವುದಕ್ಕೆ ನನ್ನ ಮೇಲೆ ನನಗೇ ಜಿಗುಪ್ಸೆಯಾಗುತ್ತಿದೆ. ನಾನು ನಿಸ್ಸಹಾಯಕ.
ಸಾಧ್ಯವಾದರೆ, ಜೀವದಿಂದಿದ್ದರೆ
ಮತ್ತೆ ಭೇಟಿಯಾಗುತ್ತೇನೆ.
ಇಂತಿ ನಿನ್ನ ಪ್ರೀತಿಯ,
ಲೋಕಿ.
‘ಜೀವದಿಂದಿದ್ದರೆ’ ಅಂದರೆ
ಸಾಯೋದಕ್ಕೂ ಸಿದ್ಧವಾಗೇ ಹೊರಟುಹೋಗಿದ್ದಾನೆ. ನಮಗಿಂತ ಈ ದೇಶದ ಮೇಲಿರುವ ಆತನ ಪ್ರೀತಿಯನ್ನು ನೆನೆದು
ಒಂದು ಕ್ಷಣ ಲೋಕಿಯ ಮೇಲೆ ಹೆಮ್ಮೆಯುಂಟಾಯಿತು. ಯಾವತ್ತಿದ್ದರೂ ಆತ ದೇಶಕ್ಕೊಳ್ಳೇ ಮಗನಾಗ್ತಾನೇ ಎಂದನೇಕ
ಬಾರಿ ಅನ್ನಿಸಿತ್ತು. ಆದರೆ ಈ ರೀತಿ ನಮ್ಮನ್ನೆಲ್ಲಾ ಬಿಟ್ಟು ಹೋಗ್ತಾನೆ ಎಂದು ಒಮ್ಮೆಯೂ ಅನ್ನಿಸಿರಲಿಲ್ಲ.
ನಮಗಾರೀತಿಯ ಅನುಮಾನ ಕೂಡ ಬರದಂತೆ ನಡೆದುಕೊಳ್ತಿದ್ದನಲ್ಲ. ಎಲ್ಲಿಗೆ ಹೋಗಿರಬಹುದು ಅವನು. ಯೋಚನೆಯಲ್ಲಿ
ಮುಳುಗಿದ್ದಾಗ ಪೂರ್ಣಿಮಾ ಮತ್ತು ಸಿಂಚನಾ ಚಿಲಕ ಹಾಕದ ಬಾಗಿಲನ್ನು ತಳ್ಳುತ್ತಾ ಒಳಬಂದರು. ಪೂರ್ಣಿಮಾಳನ್ನು
ನೋಡುತ್ತಿದ್ದಂತೆ ಈಕೆಗೂ ಪತ್ರ ತಲುಪಿದೆ ಎಂಬುದನ್ನರಿತು ‘ಅತ್ತಿಗೆ’ ಎಂದು ಕೂಗಿ ಅವಳ ಬಳಿ ಬಂದು
ತಬ್ಬಿಕೊಂಡಳು. ಇಬ್ಬರೂ ಅತ್ತರು. ಅವರ ಅಳುವನ್ನು ನೋಡಿ ಸಿಂಚನಾಳ ಕಣ್ಣೂ ತೇವವಾಯಿತು.
ಮುಂದುವರೆಯುವುದು...
No comments:
Post a Comment