Jul 8, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 31

hingyake
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ


“ಸಾರಿ. ಸ್ವಲ್ಪ ಹೆಚ್ಚೆನಿಸುವಷ್ಟೆ ಭಾವುಕನಾಗಿಬಿಟ್ಟೆ” ಎಂದ. ಈಗಲೂ ಕೀರ್ತನಾಳ ಹಸ್ತವೇ ಮಾತನಾಡಿತು.
“ನನ್ನ ವಿಷಯವೇನೋ ಹೇಳಾಯ್ತು. ನಿನ್ನ ಸಮಾಚಾರ ಹೇಳು. ರಾಜೀವ್ ದೀಕ್ಷಿತರಿಂದ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕೆಂದು ತೀರ್ಮಾನಿಸಿದೆ ಅನ್ನೋದು ತಿಳಿಯಿತು. ಆದರೆ ನಿನಗ್ಯಾಕೆ ನಕ್ಸಲ್ ತತ್ವಗಳಲ್ಲಿ ಆಸಕ್ತಿ ಬಂತು?”
“ನಕ್ಸಲ್ ಸಿದ್ಧಾಂತಗಳಲ್ಲಿ ಆಸಕ್ತಿ ಬಂದಿದ್ದು ತೀರ ಇತ್ತೀಚೆಗೆ ಲೋಕಿ. ಫೈನಲ್ ಇಯರ್ ಬರುವವರೆಗೆ ಅದರ ಬಗ್ಗೆ ಅಷ್ಟು ತಿಳಿದಿರಲಿಲ್ಲ, ತಿಳಿಯಬೇಕೆಂಬ ಆಸಕ್ತಿಯೂ ಇರಲಿಲ್ಲ. ಕೊನೆಯ ವರ್ಷದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೇ ಹೆಚ್ಚು ಇರಬೇಕು. ಹಿಂದಿನ ವರ್ಷಗಳಲ್ಲೂ ರೋಗಿಗಳನ್ನು ನೋಡುತ್ತೇವಾದರೂ ಈಗಿನಷ್ಟಲ್ಲ. ರೋಗಿಗಳ ನಡುವೆ ಓಡಾಡುವುದು ಹೆಚ್ಚಾದಷ್ಟೂ ಮನದಲ್ಲಿ ಅಸಮಾಧಾನ, ವ್ಯವಸ್ಥೆಯೆಡೆಗೆ ಸಿಟ್ಟು, ಏನೂ ಮಾಡೋದಿಕ್ಕಾಗುತ್ತಿಲ್ಲವಲ್ಲ ಅನ್ನೋ ಕಾರಣಕ್ಕೆ ನನ್ನ ಮೇಲೆ ನನಗೇ ಬೇಸರ ಉಂಟಾಗುತ್ತಿತ್ತು”
“ಯಾಕೆ?”
“ಯಾಕೆ ಅಂತ ಕೇಳ್ತೀಯಾ ಲೋಕಿ! ಒಂದು ದಿನ ಆಸ್ಪತ್ರೆಗೆ ಬಂದು ನೋಡು ನಿನಗೇ ತಿಳಿಯುತ್ತೆ. ಹಣವಿಲ್ಲದಿದ್ದರೆ ಈ ಪ್ರಪಂಚದಲ್ಲಿ ಬದುಕೋದಿಕ್ಕಾಗೋದಿಲ್ಲ ಲೋಕಿ. ಐನೂರಾರ್ನೂರು ರುಪಾಯಿ ಕೊಟ್ಟು ಪರೀಕ್ಷೆಗಳನ್ನು ಮಾಡಿಸಿಕೊಳ್ಳೋದಿಕ್ಕೂ ಆಗದೇ ಇರುವವರಿಗೆ ಹೃದಯದ ತೊಂದರೆ ಇರುತ್ತೆ. ಅವರು ಹೇಗೆ ತಾನೆ ಲಕ್ಷಾಂತರ ಖರ್ಚು ಮಾಡಿ ಆಪರೇಶನ್ ಮಾಡಿಸಿಕೊಳ್ತಾರೆ ಹೇಳು? ಆಪರೇಶನ್ ಮಾಡಿಸಿಕೊಳ್ಳದಿದ್ದರೆ ಜೀವಕ್ಕೆ ಕುತ್ತು. ಮಾಡಿಸಿಕೊಳ್ಳೋದಿಕ್ಕೆ ದುಡ್ಡಿರೋದಿಲ್ಲ”

“ನೀನು ಹೇಳೋದು ನೋಡಿದ್ರೆ ವೈದ್ಯವೃತ್ತಿಯಲ್ಲಿರುವವರ ಮೇಲೆಯೇ ನಿನಗೆ ಕೋಪವಿರೋ ಹಾಗಿದೆ. ಅವರೂ ಏನು ಮಾಡೋದಿಕ್ಕಾಗೋದಿಲ್ಲ ಅಲ್ವಾ? ಲಕ್ಷಾಂತರ ಖರ್ಚು ಮಾಡಿ ಓದಿರ್ತಾರೆ. ಕೋಟ್ಯಂತರ ಖರ್ಚು ಮಾಡಿ ಆಸ್ಪತ್ರೆ ಕಟ್ಟಿಸುತ್ತಾರೆ. ಅವರು ಕೇಳೋ ದುಡ್ಡು ಜಾಸ್ತಿ ಅಂತೇನೂ ನನಗನ್ನಿಸಿಲ್ಲ”
“ನಿನಗನ್ನಿಸಿಲ್ಲ ಅಂದ್ರೆ ದುಡ್ಡಿನ ಕೊರತೆಯಿಲ್ಲ ನಿನಗೆ ಅಷ್ಟೇ. ಯಾರೇಳಿದ್ದು ಲೋಕಿ ಲಕ್ಷಾಂತರ ರುಪಾಯಿ ಖರ್ಚು ಮಾಡಿರ್ತಾರೆ ಅಂತ. ಇನ್ನು ಮುಂದೆ ಓದುವವರು ಅಷ್ಟು ಖರ್ಚು ಮಾಡ್ತಾರೇನೋ. ಆದರೆ ನಮಗೆ, ನನ್ನಿಂದಿನವರಲ್ಲಿ ಬಹುತೇಕರಿಗೆ ವರುಷದ ಫೀಸು ಎಷ್ಟು ಅಂದುಕೊಂಡಿದ್ದೀಯಾ? ಹದಿನೈದು ಸಾವಿರ ಅಷ್ಟೇ. ಒಬ್ಬ ಡಾಕ್ಟರಿಗೆ ಅದ್ರಲ್ಲೂ ಚೂರೇಚೂರು ಹೆಸರು ಗಳಿಸಿದವನಿಗೆ ದುಡ್ಡು ದುಡಿಯೋದು ಏನೇನೂ ಕಷ್ಟ ಅಲ್ಲಾ. ನರ್ಸಿಂಗ್ ಹೋಮುಗಳ ವಿಷಯ ಬಿಡು, ಅದು ಬೇರೆಯೇ ಲೋಕ. ನಮ್ಮ ಆಸ್ಪತ್ರೆಯ ವೈದ್ಯರ ವಿಷಯ ತೆಗೆದುಕೋ. ಹೊರಗಡೆಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಎಲ್ಲಾದಕ್ಕೂ ದುಡ್ಡು ಬಹಳಾನೇ ಕಡಿಮೆ. ಸರಕಾರಿ ಆಸ್ಪತ್ರೆಯಲ್ಲಿ ಲಂಚ ಕೊಡುವುದಕ್ಕಿಂತ ನಮ್ಮ ಆಸ್ಪತ್ರೆಗೆ ಬರೋದೇ ಉತ್ತಮ ಎಂದು ಬಹಳಷ್ಟು ಜನ ಬರ್ತಾರೆ. ಆದ್ರೆ ನಮ್ಮ ಆಸ್ಪತ್ರೆಯಲ್ಲೂ ಲಂಚವಿದೆ ಅನ್ನೋದಿಕ್ಕೆ ಒಂದು ಉದಾಹರಣೆ ಹೇಳ್ತೀನಿ. ನಮ್ಮ ಆಸ್ಪತ್ರೆಯಲ್ಲೊಂದು ಸಿಟಿ ಸ್ಕ್ಯಾನ್ ಯಂತ್ರವಿದೆ. ಹಣ ಹೆಚ್ಚು ಅನ್ನೋ ಕಾರಣಕ್ಕೆ ನಮ್ಮ ಕಾಲೇಜಿನವರು ಸ್ಕ್ಯಾನ್ ಯಂತ್ರವನ್ನು ಖರೀದಿಸದೆ ಖಾಸಗಿಯವರಿಗೆ ಕೊಟ್ಟಿದ್ದಾರೆ. ಅವರಿಗೆ ಹೆಚ್ಚು ಲಾಭ ಮಾಡಬೇಕೆಂಬ ಆಸೆ. ಅದಕ್ಕೋಸ್ಕರ ಅವರು ಸಿ.ಟಿ ಸ್ಕ್ಯಾನ್ ಬರೆಯೋ ಪ್ರತೀ ವೈದ್ಯರಿಗೆ ಮುನ್ನೂರು ರುಪಾಯಿ ಕಮಿಷನ್ ಕೊಡ್ತಾರೆ. ಸ್ಕ್ಯಾನಿಗೆ ಸಾವಿರ ರುಪಾಯಿಯನ್ನು ರೋಗಿಯ ಕಡೆಯಿಂದ ಪಡೆಯುತ್ತಾರೆ. ಇನ್ನೂ ಹೆಚ್ಚೆಚ್ಚು ಹಣ ಖರ್ಚಾಗೋ ಸ್ಕ್ಯಾನಿಂಗಿದೆ ಬಿಡು- ಅದಕ್ಕೆಲ್ಲಾ ಇನ್ನೂ ಹೆಚ್ಚು ಕಮಿಷನ್ ಕೊಡ್ತಾರೆ. ಈಗ ಲೆಕ್ಕ ಹಾಕು ಸಾವಿರ ರುಪಾಯಿ ವಸೂಲಿ ಮಾಡಿ ಅದರಲ್ಲಿ ಮುನ್ನೂರು ರುಪಾಯಿ ವೈದ್ಯರಿಗೆ ಕೊಟ್ಟರೆ ಅವರ ಬಳಿ ಏಳುನೂರು ಉಳಿಯುತ್ತೆ. ಆ ಏಳುನೂರು ರುಪಾಯಿಯಲ್ಲೂ ಬಹಳಷ್ಟು ಲಾಭ ಇಟ್ಟುಕೊಂಡಿರುತ್ತಾರೆ ಅಂದ್ರೆ ಒಂದು ಸಿ.ಟಿ.ಸ್ಕ್ಯಾನಿಗೆ ನಿಜವಾಗಿ ಎಷ್ಟು ಖರ್ಚಾಗಬಹುದು? ಈ ರೀತಿ ಕಮಿಷನ್ ಕೊಡುವುದರಿಂದ ಏನಾಗ್ತಿದೆ ಗೊತ್ತಾ? ಎರಡು ದಿನದ ತಲೆನೋವು ಅಂತ ಬಂದ್ರೂ ಒಂದು ಸಿ.ಟಿ.ಸ್ಕ್ಯಾನ್ ಬರೆದುಬಿಡ್ತಾರೆ. ಕೆಲವು ವೈದ್ಯರಂತೂ ಈ ವಿಷಯವನ್ನು ನಮ್ಮ ಮುಂದೆ ಹೆಮ್ಮೆಯಿಂದೆಂಬಂತೆ ಹೇಳಿಕೊಳ್ತಾರೆ – ಕೊಂಚವೂ ನಾಚಿಕೆಯಿಲ್ಲದೆ. ಆ ಕಮಿಷನ್ ಹಣವನ್ನು ಬಿಟ್ಟರೂ ಅವರು ಮೂವತ್ತು ಸಾವಿರದ ಮೇಲೆ ಆರಾಮವಾಗಿ ದುಡಿಯುತ್ತಾರೆ. ಆದರೂ ರೋಗಿಗಳ ಹಣದಿಂದ ಬರುವ ಕಮಿಷನ್ ಮೇಲಿರುವ ಆಸೆ ಅವರಿಗೆ ಕಡಿಮೆಯಾಗೊಲ್ಲ. ಹೋಗ್ಲಿ ಬರೋ ರೋಗಿಗಳು ಶ್ರೀಮಂತರು ಅವರಿಗೆ ಮುನ್ನೂರು ರುಪಾಯಿ ಹೊರೆಯಲ್ಲ ಅನ್ನೋಣವೆಂದ್ರೆ ನಮ್ಮ ಆಸ್ಪತ್ರೆಗೆ ಬರೋ ಬಹಳಷ್ಟು ಜನರು ಮಧ್ಯಮ ವರ್ಗ ಮತ್ತು ಅದರ ಕೆಳಗಿರುವವರು. ಅವರತ್ರಾನೂ ಬಿಡದೇ ಸುಲಿಯುತ್ತಾರೆ. ಇದನ್ನೆಲ್ಲಾ ನೋಡಿಕೊಂಡು ಏನೂ ಮಾಡ್ಲಿಕ್ಕಾಗದೇ ಕೈಕೈ ಹಿಸುಕಿಕೊಳ್ಳುತ್ತಾ ನಿಂತಿರೋದಷ್ಟೇನಾ ನನ್ನಿಂದ ಆಗೋದು ಅನ್ನಿಸಿಬಿಡುತ್ತೆ” ಕೀರ್ತನಾ ಮುಖದ ಮೇಲಿದ್ದ ಮಂದಹಾಸ ಮಾಯವಾಗಿತ್ತು.
“ಇದಕ್ಕೆಲ್ಲ ಪರಿಹಾರನೇ ಇಲ್ವಾ?”
“ಯಾಕಿಲ್ಲ?! ನಮ್ಮ ರಾಜಕಾರಣಿಗಳು ಅವರ ಮನೆಯ ವಾಸ್ತು ಬದಲಿಸೋದಿಕ್ಕೆ ಉಪಯೋಗಿಸೋ ಹಣ – ಜನರ ಹಣವನ್ನು ಒಂದು ಸ್ಕ್ಯಾನಿಂಗ್ ಯಂತ್ರ ತೆಗೆದುಕೊಳ್ಳೋದಿಕ್ಕೆ ಉಪಯೋಗಿಸಿದರೆ ಆಯಿತು. ಆ ಸ್ಕ್ಯಾನಿಂಗ್ ಕೇಂದ್ರ ಸರಿಯಾಗಿ ಜನಪರವಾಗಿ ಕಾರ್ಯನಿರ್ವಹಿಸಲು ಲಂಚಕೋರತನಕ್ಕೆ ಕಡಿವಾಣ ಹಾಕಬೇಕು. ಅದು ಸಾಧ್ಯವಾ?” ಆವೇಶದಿಂದ ಕೇಳಿದಳು.
“ಆವೇಶಗೊಂಡರೆ ಏನೂ ಉಪಯೋಗ ಇಲ್ಲಾ ಕೀರ್ತನಾ. ಲಂಚಕೋರತನಕ್ಕೆ ಕಡಿವಾಣ ಬೀಳಬೇಕು ಅಂದ್ರೆ ಇಡೀ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾವಣೆಯಾಗಬೇಕು – ಆ ಬದಲಾವಣೆ ವ್ಯವಸ್ಥೆಯೊಳಗಿದ್ದು ಮಾಡೋದಿಕ್ಕಾಗಲ್ಲ ಅನ್ನೋ ಕಾರಣಕ್ಕೇ ಅಲ್ವಾ ನನಗೆ ನಿನಗೆ ನಮ್ಮಂಥ ಅನೇಕರಿಗೆ ನಕ್ಸಲ್ ತತ್ವಗಳಲ್ಲಿ ನಂಬಿಕೆ ಮೂಡುತ್ತಿರುವುದು”
“ಹ್ಞೂ”
“ಆದರೆ ಕೀರ್ತನಾ ನನಗೊಂದು ಅನುಮಾನ. ನಕ್ಸಲಿಸಂ ಅನ್ನೋದು ದಶಕಗಳಿಂದ ಇದೆ. ಅದರಿಂದ ಎಲ್ಲಾ ಬದಲಾಗೋದಿಕ್ಕೆ ಸಾಧ್ಯವಿದೆಯಾ?”
“ಬದಲಾವಣೆ ಅನ್ನೋದು ಕ್ಷಣಗಳಲ್ಲಿ ಆಗೋದಿಲ್ಲ. ಯುಗಗಳೇ ಬೇಕಾಗುತ್ತೆ ಕೆಲವೊಮ್ಮೆ. ಪ್ರತಿಯೊಂದು ಗುರಿಯೂ ಸಮಯ ಬೇಡೇ ಬೇಡುತ್ತೆ. ಸಮಯದ ಪರಿವೆಯಿಲ್ಲದೆ ಗುರಿಯೆಡೆಗೆ ಪಯಣಿಸಬೇಕು. ಗುರಿ ಮುಟ್ಟಿದ ಮೇಲೆ ಎಷ್ಟು ಸಮಯ ಬೇಕಾಯ್ತು ಅನ್ನೋದನ್ನ ನೋಡಬೇಕೆ ಹೊರತು ಹೆಜ್ಜೆ ಹೆಜ್ಜೆಗೂ ಸಮಯ ನೋಡುತ್ತಾ ‘ಅಯ್ಯೋ ಗುರಿ ಇನ್ನೂ ಸಿಗಲೇ ಇಲ್ಲವಲ್ಲ’ ಎಂದುಕೊಳ್ಳೋದು ಮೂರ್ಖತನ”
ಹೌದೆಂಬಂತೆ ಲೋಕಿ ತಲೆಯಾಡಿಸಿದ. ನಂತರ ಕೇಳಿದ
“ಆಜಾದಿ ಪತ್ರಿಕೆಯನ್ನು ಶುರುಮಾಡಬೇಕೆಂಬ ಆಲೋಚನೆ ಹೇಗೆ ಬಂತು?”
“ಇಂಟರ್ನೆಟ್ಟಿನಲ್ಲಿ ನಕ್ಸಲ್ ಸಂಬಂಧಿ ಸಾಹಿತ್ಯವನ್ನು ಶೋಧಿಸುತ್ತಿದ್ದವಳಿಗೆ peoplesmarch.com ಎಂಬ ವೆಬ್ ಸೈಟಿನ ಪರಿಚಯವಾಯಿತು. ಅದರಲ್ಲಿ ‘ಮೂವತ್ತು ವರ್ಷದ ನಕ್ಸಲಿಸಂ’ ಎಂಬ ಪುಸ್ತಕವೊಂದು ಓದಲು ಸಿಕ್ಕಿತು. ಆಂಧ್ರದಲ್ಲೀಗ ಬಲವಾಗಿ ಬೇರೂರಿರುವ ನಕ್ಸಲಿಸಂ ಅನ್ನು ಮೊದಲು ಪ್ರಚುರಪಡಿಸಿದ್ದು ಗುಂತೂರು ಮೆಡಿಕಲ್ ಕಾಲೇಜಿನ ಒಬ್ಬ ವಿದ್ಯಾರ್ಥಿ. ಆತ ಲಿಬರೇಷನ್ ಎಂಬ ಆಂಗ್ಲ ಭಾಷೆಯಲ್ಲಿ ಬರುತ್ತಿದ್ದ ಕ್ರಾಂತಿಕಾರಿ ಪತ್ರಿಕೆಯನ್ನು ತೆಲುಗು ಭಾಷೆಗೆ ಅನುವಾದಿಸಿ ವಿದ್ಯಾರ್ಥಿಗಳ ಮಧ್ಯೆ ಹಂಚುತ್ತಿದ್ದ. ಅದೇ ನನಗೆ ಸ್ಪೂರ್ತಿಯಾಯಿತು. ವಿದ್ಯಾರ್ಥಿಗಳ ನಡುವೆ ಹಂಚುವಷ್ಟು ಧೈರ್ಯ ಸಾಲದೆ ಗೃಂಥಾಲಯದಲ್ಲಿ ಇಡಬೇಕೆಂದು ತೀರ್ಮಾನಿಸಿದೆ”
“ನಿಮ್ಮ ಕಾಲೇಜಿನ ಗೃಂಥಾಲಯದಲ್ಲೂ ಆಜಾದಿಯನ್ನು ಇಡ್ತಾ ಇದ್ದೀಯಾ?”
“ಇಲ್ಲಪ್ಪಾ. ಇನ್ನೂ ಅಷ್ಟು ಧೈರ್ಯ ಬಂದಿಲ್ಲ. ಅದೂ ಅಲ್ಲದೆ ಅಲ್ಲಿಟ್ಟರೆ ನನ್ನ ಸ್ನೇಹಿತರಿಗೆ ಅನುಮಾನ ಬರುತ್ತೆ. ನಾನೇ ಈ ಕೆಲಸ ಮಾಡಿರಬೇಕೆಂದು”
“ನಿನ್ನ ಸ್ನೇಹಿತರಿಗೆ ಗೊತ್ತಾ ನೀನೀ ರೀತಿ ನಕ್ಸಲ್ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದೀಯಾ ಅಂತ?”
“ನಕ್ಸಲ್ ಬೆಂಬಲಿಗಳು ಅನ್ನೋದು ಗೊತ್ತಿಲ್ಲ. ಆದರೆ ಆದರ್ಶ, ಕ್ರಾಂತಿ ಅಂತ ಭಾಷಣ ಬಿಗೀತಿರ್ತೀನಲ್ಲ! ತಲ್ಕೆಟ್ಟೋಳು ಅಂತಾರೆ! ತಪ್ಪು ನನ್ನದಾ ಜನರದ್ದಾ ಅನ್ನೊದು ತಿಳೀತಾಯಿಲ್ಲ” ನಗುತ್ತಾ ಹೇಳಿದಳೂ ಕೀರ್ತನಾ. “ಮುಂದಿನ ಹೆಜ್ಜೆ ಏನು ಲೋಕಿ”
“ನನ್ನ ಕೈಯಲ್ಲಿ ಇನ್ನೂ ಬಹಳಷ್ಟು ದಿನ ಕಾಯೋದಿಕ್ಕಾಗೋದಿಲ್ಲ ಕೀರ್ತನಾ. ಆದಷ್ಟು ಬೇಗ ಮಲೆನಾಡಿನಲ್ಲಿರೋ ನಕ್ಸಲರಲ್ಲೊಬ್ಬನಾಗಬೇಕು ಎಂದುಕೊಂಡಿದ್ದೇನೆ?”
“ಆದರೆ ಅವರನ್ನು ಸೇರೋ ದಾರಿ?”
“ನಾವು ತಲುಪಬೇಕು ಅಂತಿರೋ ಗುರಿಗೆ ಯಾವ ರಸ್ತೆಯೂ ಇಲ್ಲ. ಕಾಡಿನ ಪ್ರವೇಶ ಭಾಗದಲ್ಲಿದ್ದೇವೆ. ಗುರಿಯಿಡೆಗೆ ನಾವೇ ಒಂದು ಕಾಲುದಾರಿ ಮಾಡಿಕೊಂಡು ಪಯಣಿಸಬೇಕು. ಗುರಿ ತಲುಪಿದ ಜಾಗದಲ್ಲಿ ನಿಂತು ಒಂದು ಜ್ಯೋತಿ ಬೆಳಗಬೇಕು. ನಿಧಾನವಾಗಿಯಾದರೂ ಜನ ಆ ಜ್ಯೋತಿಯ ಬೆಳಕನ್ನು ಹುಡುಕುತ್ತಾ ನಮ್ಮ ಕಾಲುದಾರಿಯಲ್ಲಿ ಬರುತ್ತಾರೆ, ಜ್ಯೋತಿಯ ಬೆಳಕು ಎಲ್ಲೆಡೆಗೂ ಪಸರಿಸಬೇಕು”
“ಸ್ವಲ್ಪ ಬಿಡಿಸಿ ಹೇಳು”
“ನನ್ನ ಪರ್ತಕರ್ತ ಮಿತ್ರನೊಬ್ಬ ನಕ್ಸಲರ ಕರೆಯ ಮೇರೆಗೆ ಅವರನ್ನು ಭೇಟಿಯಾಗಿ ಬಂದಿದ್ದಾನೆ. ಅವನಿಗೆ ನಾನು ನಕ್ಸಲ್ ಬೆಂಬಲಿಗ ಎಂಬ ವಿಷಯ ತಿಳಿಯದಂತೆ ಜಾಗೃತೆ ವಹಿಸಿ ಅವನು ಅವರನ್ನು ತಲುಪಿದ ರೀತಿಯನ್ನು ಕೇಳಿ ತಿಳಿದುಕೊಂಡಿದ್ದೀನಿ. ಅವನು ಹೇಳಿದ ವಿಷಯಗಳು ನಾನು ನಕ್ಸಲರನ್ನು ತಲುಪಲು ಬಹಳಷ್ಟು ಸಹಾಯ ಮಾಡುತ್ತವೆ ಎಂದುಕೊಂಡಿದ್ದೇನೆ”
“ಮನೆಯವರನ್ನೆಲ್ಲಾ ಬಿಟ್ಟು ಹೋಗಲು ಕಷ್ಟವಾಗುತ್ತಲ್ವಾ?”
“ವಿಧಿಯಿಲ್ಲ. ಮನೆಯವರಿಗಿಂತ, ನನ್ನನ್ನು ಪ್ರೀತಿಸುತ್ತಿರೋ ಪೂರ್ಣಿಗಿಂತ ಆದರ್ಶಗಳೇ ಮುಖ್ಯ ಎಂದು ನನಗೆ ಮನವರಿಕೆಯಾಗಿದೆ. ನನಗಿಂತ ಹೆಚ್ಚಾಗಿ ನನ್ನಿಂದ ದೂರವಿರೋದು ಅವರಿಗೆ ಕಷ್ಟವಾಗುತ್ತೆ ಅಂತಾನೂ ಗೊತ್ತು. ಏನು ಮಾಡೋದು, ಈ ವಿಷಯದಲ್ಲಿ ನಾನು ನಿಸ್ಸಹಾಯಕ. ನೀನೂ ನನ್ನ ಜೊತೆ ಬರೋದಿಕ್ಕೆ ತಯಾರಿದ್ದೀಯಾ?”
“ನಾನೂ ಯಾವತ್ತೋ ತಯಾರಾಗಿದ್ದೀನಿ. ಯಾರ ಜೊತೆ ಹೋಗೋದು? ಎಲ್ಲಿಗ್ಹೋಗೋದು? ಎಂದು ಯೋಚಿಸುತ್ತಿದ್ದೆ. ಈಗ ನೀನು ಸಿಕ್ಕಿದ್ದೀಯಲ್ಲ ಇನ್ನೇನೂ ಯೋಚ್ನೆಯಿಲ್ಲ”
“ನಿನ್ನ ಮನೆಯ ಕಡೆ”
“ನಾನು ಹೈಸ್ಕೂಲಿನಲ್ಲಿದ್ದಾಗ ತಂದೆ ತಾಯಿ ಅಪಘಾತವೊಂದರಲ್ಲಿ ತೀರಿಹೋದರು. ನಾನೂ ನನ್ನಣ್ಣ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದು ದೊಡ್ಡವರಾದೆವು. ನಾನು ಮನೆ ಬಿಟ್ಟು ಹೋಗೋದ್ರಿಂದ ನಮ್ಮ ಚಿಕ್ಕಮ್ಮನಿಗೇನೂ ಅಷ್ಟು ಬೇಸರವಾಗೋದಿಲ್ಲ. ಅವರಿಗೆ ಮುಂಚಿನಿಂದಾನೂ ನನ್ನನ್ನು ಕಂಡ್ರೆ ಅಸಡ್ಡೆ. ನಾವವರಿಗೆ ಹೊರೆಯಾಗಿದ್ದೀವೆ ಎಂಬ ಭಾವನೆಯೇನೂ ಅವರ ಮನದಲ್ಲಿಲ್ಲ ಅನ್ನಿಸುತ್ತೆ. ಯಾಕಂದ್ರೆ ನನ್ನಣ್ಣನನ್ನು ಪ್ರೀತಿಯಿಂದಲೇ ಕಾಣುತ್ತಾರೆ. ನನ್ನ ಮೇಲೆ ಯಾಕಷ್ಟೊಂದು ಕೋಪ ತಿಳಿದಿಲ್ಲ. ನನ್ನಣ್ಣ ಮತ್ತು ನನ್ನ ಚಿಕ್ಕಪ್ಪ ನಾನೀ ರೀತಿ ಕಾನೂನಿನ ಪ್ರಕಾರ ದ್ರೋಹದ ಕೆಲಸ ಮಾಡಿದರೆ ಹೇಗೆ ಸಹಿಸಿಕೊಳ್ತಾರೋ ಗೊತ್ತಿಲ್ಲ. ಅದರ ಬಗ್ಗೆ ಯೋಚಿಸಿದಾಗಲೆಲ್ಲ ಆದರ್ಶಗಳನ್ನು ಬಿಟ್ಟು ಎಲ್ಲರಂತಾಗಬೇಕು ಅನ್ನಿಸುತ್ತೆ. ನಾನೂ ಬಹಳಷ್ಟು ಆದರ್ಶವಾದಿಗಳಂತೆ ತುಂಬಾ ದಿನದ ತನಕ ನಾನೂ ಆದರ್ಶಗಳನ್ನು ಪಾಲಿಸುತ್ತಿದ್ದೀನಿ ಅಂತ. ಒಂದು ದಿನ ಜ್ಞಾನೋದಯವಾಯಿತು – ‘ಆದರ್ಶಗಳು ಎಲ್ಲರ ಮನಸ್ಸಾಕ್ಷಿಯ ಹಿಂದಿದೆ. ಒಳ್ಳೆ ಕೆಲಸ ಮಾಡಿದಾಗ ಆದರ್ಶ ಮನಸ್ಸಾಕ್ಷಿಯ ಬೆನ್ನು ತಟ್ಟುತ್ತಿತ್ತು. ತಪ್ಪು ದಾರಿಯಲ್ಲಿ ನಡೆದಾಗ ಒದ್ದು ಬುದ್ಧಿ ಹೇಳುತ್ತಿತ್ತು ಎಂದು”
“ಎಲ್ಲರ ಮನದಲ್ಲೂ ಆದರ್ಶಗಳಿರುತ್ತೆ ಅಂತೀಯಾ?”
“ಖಂಡಿತವಾಗಿ ಇರುತ್ತೆ. ಆದರೆ ಬಹುತೇಕ ಜನ ತಮ್ಮ ಮನಸ್ಸಾಕ್ಷಿಯನ್ನೇ ಮಣ್ಣು ಮಾಡಿಬಿಟ್ಟಿರುತ್ತಾರೆ. ಹಾಗಾಗಿ ಅವರಲ್ಲಿರೋ ಆದರ್ಶಗಳು ಯಾರೊಡನೆ ಮಾತನಾಡಬೇಕೆಂದು ತಿಳಿಯದೆ ಮನದಲ್ಲಿನ ಯಾವುದೋ ಒಂದು ಕತ್ತಲೆಯ ಮೂಲೆಯಲ್ಲಿ ಅವಿತುಹೋಗುತ್ತೆ. ಅದರ ಮೇಲೆಯೇ ಸ್ವಾರ್ಥ, ಲಂಚ, ಅನ್ಯಾಯ, ಅಧರ್ಮದ ಬಂಗಲೆಗಳೇಳುತ್ತೆ”
“ಬಹಳ ಚೆನ್ನಾಗಿ ಮಾತನಾಡ್ತೀಯ ನೀನು”
“ಥ್ಯಾಂಕ್ಸ್. ಹೊರಡೋಣ ಲೋಕಿ. ತುಂಬಾನೇ ಸಮಯವಾಯ್ತು” ಎಂದು ಮೇಲೆದ್ದಳು. ಇಬ್ಬರೂ ಮುಖ್ಯದ್ವಾರದೆಡೆಗೆ ನಡೆಯಲಾರಂಭಿಸಿದರು.
“ಘಟ್ಟಕ್ಕೆ ಯಾವಾಗ ಹೊರಡೋದು ಲೋಕಿ”
“ಮುಂದಿನ ವಾರ ಇವತ್ತು ಬಂದ ಸಮಯಕ್ಕೇ ಇಲ್ಲಿಗೆ ಬಾ ಕೀರ್ತನಾ. ಅಷ್ಟರೊಳಗೆ ಒಂದು ನಿರ್ಧಾರ ತೆಗೆದುಕೊಂಡಿರ್ತೀನಿ. ಯಾವತ್ತೂ ಹೊರಡಬೇಕು ಅನ್ನೋದನ್ನು ಅವತ್ತು ಚರ್ಚಿಸೋಣ” ಎಂದ್ಹೇಳಿದ ಲೋಕಿ.
ಮುಂದುವರೆಯುವುದು

No comments:

Post a Comment