Jul 25, 2014

ವಿಧಾನಸಭಾ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೊದಲ ಸಭೆಯಲ್ಲಿ ದೇವರಾಜ ಅರಸುರವರ ಮಾತುಗಳು.



ನವ, ಯುವ ಮತ್ತು ಹಿರಿಯ ಶಾಸಕರೇ, ನಿಮಗೆಲ್ಲ ಶುಭಾಶಯಗಳು. ಶ್ರೀಮತಿ ಇಂದಿರಾಗಾಂಧಿಯವರಿಗೆ ಮತ್ತು ನನ್ನ ಕಷ್ಟಕಾಲದಲ್ಲಿ ಕೈಹಿಡಿದ ಮತದಾರ ಬಂಧುಗಳಿಗೆ ಅಂತರಂಗದ ನಮಸ್ಕಾರಗಳು. ದಿII ಕೆಂಗಲ್ ಹನುಮಂತಯ್ಯನವರು ಕಟ್ಟಿದ ನಾಡ ಆಡಳಿತದ ಗುಡಿಗೆ ನಿಮಗೆಲ್ಲ ಸ್ವಾಗತ. ನಿಮ್ಮಲ್ಲಿ ಅನೇಕರು ಹೊಸಬರಿದ್ದೀರಿ. ಚಿಕ್ಕವರಿದ್ದೀರಿ. ಆಡಳಿತದ ಅನುಭವದ ಬಯಕೆಗಳನ್ನು ಆಶಿಸುವವರಿದ್ದೀರಿ. ನೀವು ಮತ ಕೇಳಲು ಹೋದಾಗ ಕೆಲವರು ನಿಮ್ಮನ್ನು ವಿರೋಧಿಸಿದ್ದಾರೆ. ನಿಮ್ಮ ಕಾರಿಗೆ ಸಗಣಿ, ಕಲ್ಲು ತೂರಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಮತದಾರ ನಿಮ್ಮನ್ನು ಆಯ್ಕೆ ಮಾಡಿದ್ದಾನೆ.

ನೀವು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ ಸಹ ಪಕ್ಷಾತೀತವಾಗಿ ನೀವು ನಿಮ್ಮ ಸಮಸ್ತ ತಾಲ್ಲೂಕಿನ ಪ್ರತಿನಿಧಿಗಳು. ಅಭಿವೃದ್ಧಿ ಕೆಲಸಗಳಲ್ಲಿ ಪಕ್ಷದ ಪ್ರಶ್ನೆ ಉದ್ಭವಿಸಲೇಬಾರದು. ಮೊದಲು ನಿಮ್ಮನ್ನು ವಿರೋಧಿಸಿದವರು, ಈಗ ನೀವು ಅಧಿಕಾರಕ್ಕೆ ಬಂದ ಮೇಲೆ ಬಂದು ಹೂವಿನ ಹಾರ ಹಾಕಿದರೆ ಹಾಕಿಸಿಕೊಳ್ಳಿ, ಅವರನ್ನೂ ಆಲಂಗಿಸಿ ಪ್ರೀತಿಯಿಂದ ನಡೆಸಿಕೊಳ್ಳಿ. ನೀವು ರಾಜಕೀಯದಲ್ಲಿ ಬಹುವರ್ಷಗಳ ಕಾಲ ಉಳಿಯಬೇಕೆಂದರೆ ‘ಕ್ಷಮಾಗುಣ’ ಮುಖ್ಯ. ಇದು ನಮ್ಮ ವ್ಯಕ್ತಿತ್ವಕ್ಕೆ ಅಪಾರ ಶೋಭೆ ನೀಡುತ್ತದೆ. ಮುಂದೆ ಶಾಸಕರಾಗಿ ಜವಾಬ್ದಾರಿಯ ಜೊತೆಗೆ ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದೊಡನೆ ಸರಕಾರದ ವಿವಿಧೋದ್ದೇಶ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿ ಅನುಷ್ಠಾನಗೊಳಿಸುವ ಹರಿಕಾರರು ನೀವಾಗಬೇಕು. ನೀವೇ ಸರ್ಕಾರ ಹಾಗೂ ಜನರ ನಡುವಿನ ಬಾಂಧವ್ಯದ ಬೆಸುಗೆಗಳು. (ಮೇಜಿನ ಮೇಲಿದ್ದ ಗಾಜಿನ ಲೋಟದಲ್ಲಿದ್ದ ನೀರನ್ನು ಹಿಡಿದರು) ಇದು ಸರಕಾರದ ಕಾರ್ಯಕ್ರಮ. ದಾಹವಾಗಿರುವವನಿಗೆ ಈ ಲೋಟದ ನೀರನ್ನು ಕೊಟ್ಟು ಬಾ ಎಂದು ಜನಗಳ ಪ್ರತಿನಿಧಿಯಾದ ನಿಮಗೆ ಇದನ್ನು ಕೊಡುತ್ತಿದ್ದೇನೆ. ನೀವು ಇದನ್ನು ಕೈಲಿಡಿದು ನನ್ನ ಪಕ್ಷದವನೆಲ್ಲಿದ್ದಾನೆ? ನನ್ನ ಜಾತಿಯವನೆಲ್ಲಿದ್ದಾನೆ? ಎಂದು ಕಾದು ಹಂಚಬೇಡಿ. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರ ವ್ಯವಸ್ಥೆಗೆ ನೀವು ಮಾಡುವ ಅಪಚಾರ. ಯಾರಿಗೆ ದಾಹವಾಗಿದೆಯೋ ಅವರನ್ನೇ ಗುರುತಿಸಿ ತಲುಪಿಸುವುದೇ ರಾಜ್ಯಧರ್ಮ. ಜನತಂತ್ರದ ಮಂತ್ರ. ನೀವು ತಲುಪಿಸುವಾಗ ಸ್ವಲ್ಪ ಚೆಲ್ಲಬಹುದು. ಅದಕ್ಕಾಗಿ ಹೆದರುವುದು ಬೇಡ. ಅದು ಸಹಜ. ಬಾಯಾರಿದವನ ಪಾಲಿನ ನೀರನ್ನು, ನೀರಡಿಕೆ ಇಲ್ಲದವನಿಗೆ ಕೊಡಬೇಡಿ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ – ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ” – ಮಾಜಿ ಮುಖ್ಯಮಂತ್ರಿ ದೇವರಾಜ ಅರಸು.
ಆಧಾರ – ಎಚ್. ವಿಶ್ವನಾಥರ ಅಂಕಿತ ಪ್ರಕಾಶನದವರು ಹೊರತಂದ “ಹಳ್ಳಿ ಹಕ್ಕಿಯ ಹಾಡು” ಆತ್ಮಕಥೆಯಿಂದ.
image source - wikimedia

No comments:

Post a Comment