May 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 28

 ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ

ನಗರ ಕೇಂದ್ರ ಗೃಂಥಾಲಯ. ತರಾಸುರವರ ತಿರುಗುಬಾಣವನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾಳೆ ಕೀರ್ತನಾ. ಒಂದು ಪುಟ ಓದ್ತಾಳೆ; ನಂತರ ಪುಸ್ತಕ ಜೋಡಿಸಿದ್ದ ಸಾಲಿನತ್ತ ನೋಡುತ್ತಾ ಅಲ್ಲಿರೋ ಜನರನ್ನು ನೋಡಿ ಬೇಸರಪಟ್ಟು ಮತ್ತೊಂದು ಪುಟ ತಿರುವುತ್ತಾ ಓದುವುದರಲ್ಲಿ ಮಗ್ನಳಾಗುತ್ತಾಳೆ. ಅವಳು ಗೃಂಥಾಲಯಕ್ಕೆ ಬರುತ್ತಿರುವುದು ಇದು ಎರಡನೆಯ ಬಾರಿ. ಮೊದಲ ಬಾರಿ ಬಂದಾಗ ಧೈರ್ಯ ಸಾಲದೆ ಅಂದುಕೊಂಡ ಕೆಲಸವನ್ನು ಸಾಧಿಸದೇ ವಾಪಸ್ಸಾಗಿದ್ದಳು.
ಆದರಿವತ್ತು ಅಂದುಕೊಂಡ ಕೆಲಸವನ್ನು ಮಾಡಲೇಬೇಕೆಂದು ಬಂದಿದ್ದಳು. ಜನರನ್ನು ನೋಡುತ್ತಿದ್ದಂತೆ ಧೈರ್ಯ ಕುಸಿಯುತ್ತಿತ್ತು. ತಿರುಗುಬಾಣವನ್ನು ಓದಿ ಮುಗಿಸಿದ ಮೇಲೆ ‘ಏನಾದರೂ ಆಗಲಿ ಇವತ್ತೀ ಕೆಲಸ ಮಾಡಿ ಮುಗಿಸಲೇಬೇಕು’ ಎಂದು ಧೃಡನಿಶ್ಚಯ ಮಾಡಿ ಪುಸ್ತಕದ ಸಾಲಿನತ್ತ ಹೊರಟಳು.
ಎಲ್ಲಾ ಸಾಲುಗಳೆಡೆಗೂ ಕಣ್ಣು ಹಾಯಿಸಿದಳು. ಮೊದಲೆರಡು ಸಾಲಿನಲ್ಲಿ ಆಂಗ್ಲ ಭಾಷೆಯ ಪುಸ್ತಕಗಳಿದ್ದವು; ನಂತರದ ಮೂರು ಸಾಲಿನಲ್ಲಿ ಕನ್ನಡ ಕಾದಂಬರಿಗಳು, ನಂತರದೆರಡು ಸಾಲಿನಲ್ಲಿ ಕನ್ನಡ ಕಥೆಗಳಿದ್ದವು. ಅದರ ಮುಂದಿದ್ದ ಸಾಲಿನಲ್ಲಿ ಕನ್ನಡ ಸಾಹಿತ್ಯ, ಆತ್ಮಕಥೆಗಳು, ತೆಲುಗು, ತಮಿಳು ಹಿಂದಿಯ ಪುಸ್ತಕಗಳನ್ನು ಜೋಡಿಸಿಟ್ಟಿದ್ದರು. ಯಾವ ಸಾಲಿನಲ್ಲಿಟ್ಟರೆ ಒಳ್ಳೆಯದು ಎಂದು ಯೋಚಿಸಿದಳು. ಕನ್ನಡದ ಕಾದಂಬರಿ ಮತ್ತು ಕಥೆಗಳನ್ನು ಓದುವವರ ಸಂಖೈಯೇ ಹೆಚ್ಚು. ಅಲ್ಲಿಟ್ಟರೇ ನನ್ನ ಆಶಯ ಜನಗಳಿಗೆ ತಲುಪೋದು ಎಂದುಕೊಂಡಳು. ಕಥೆಗಳಿದ್ದ ಸಾಲಿನ ಬಳಿ ಒಬ್ಬ ಹುಡುಗ ಮಾತ್ರ ನಿಂತಿದ್ದ. ಆತನಿಂದ ಕೊಂಚ ದೂರ ಹೋಗಿ ಆತನಿಗೆ ಬೆನ್ನು ಮಾಡಿ ನಿಂತುಕೊಂಡು ತನ್ನ ಪರ್ಸಿನಲ್ಲಿ ಮಡಚಿಟ್ಟಿದ್ದ ಹಾಳೆಯೊಂದನ್ನು ತೆಗೆದುಕೊಂಡು ಜೋಡಿಸಿಟ್ಟಿದ್ದ ಪುಸ್ತಕಗಳ ಮೇಲಿಟ್ಟಳು. ಅದೇ ರೀತಿಯ ಇನ್ನೊಂದು ಹಾಳೆಯನ್ನು ಕಾದಂಬರಿಗಳ ಮೇಲಿಟ್ಟು ಅತ್ತಿತ್ತ ನೋಡದೆ ಗೃಂಥಾಲಯದಿಂದ ಹೊರಗ್ಹೋಗಿ ಮೆಟ್ಟಿಲಿಳಿದು ಅಲ್ಲೇ ಇದ್ದ ಆಟೋವೊಂದನ್ನು ಹತ್ತಿ “ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿಗೆ ಹೋಗಪ್ಪ” ಎಂದ್ಹೇಳಿ ಕರವಸ್ತ್ರವನ್ನು ತೆಗೆದುಕೊಂಡು ಹಣೆಯ ಮೇಲೆ ಮೂಡಿದ್ದ ಬೆವರಿನ ಹನಿಗಳನ್ನು ಒರೆಸಿಕೊಂಡಳು. ಆಟೋದವನು ಮೊದಲ ಗೇರಿಗೆ ಹಾಕಿ ಕ್ಲಚ್ ಬಿಡುವಷ್ಟರಲ್ಲಿ ಲೋಕಿ ಗೃಂಥಾಲಯದ ಮೆಟ್ಟಿಲನ್ನು ಹತ್ತಲಾರಂಭಿಸಿದ್ದ.
ಗೃಂಥಾಲಯದೊಳಗೆ ಹೋಗುವಾಗೆಲ್ಲಾ ಲೋಕಿಗೆ ಹುಚ್ಚನ ನೆನಪು ಕಾಡುತ್ತದೆ. ಒಂದು ನಿಟ್ಟುಸಿರುಬಿಟ್ಟು ನನ್ನ ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ ಎಂದುಕೊಳ್ಳುತ್ತಾ ಪುಸ್ತಕಗಳ ಸಾಲಿನೆಡೆಗೆ ಹೋದ. ಇವತ್ತೊಂದು ಕಥೆ ಪುಸ್ತಕವನ್ನು ಓದೋಣ ಎಂದುಕೊಂಡು ಅವುಗಳಿದ್ದ ಸಾಲಿನ ಬಳಿ ತೆರಳಿದ. ಕಥೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ಫ್ಯಾನಿನ ಗಾಳಿಯಿಂದಾಗಿ ಮಡಿಚಿಟ್ಟ ಹಾಳೆಯೊಂದು ಮೇಲೆದ್ದು ಅದರ ಮೇಲೆ ಬರೆದಿದ್ದ ‘ಆಜಾದಿ’ ಪದ ಕಂಡಿತು. ಆಜಾದಿ ಎಂಬ ಹೆಸರೇ ಅವನಲ್ಲಿ ಕುತೂಹಲ ಮೂಡಿಸಿತು. ಹೋಗಿ ಅದನ್ನು ಎತ್ತಿಕೊಂಡು ಪೂರ್ಣ ಬಿಡಿಸಿ ನೋಡಿದ. ಹಾಳೆಯ ಒಂದು ಮಗುಲಲ್ಲಿ ಮಾತ್ರ ಬರೆಯಲಾಗಿತ್ತು. ಮೇಲೆ ದೊಡ್ಡ ಅಕ್ಷರಗಳಲ್ಲಿ ಆಜಾದಿ ಎಂದು ಬರೆದು ಅದರ ಕೆಳಗೆ ಕ್ಯಾಪ್ಶನ್ನಿನಂತೆ ಕೈಬರಹ ಪತ್ರಿಕೆಯ ಮೊದಲ ಸಂಚಿಕೆ ಎಂದು ಬರೆದಿತ್ತು. ಹಾಳೆಯ ಕೆಳಗಿನ ತುದಿಯಲ್ಲಿ ಸಹಿ ಮಾಡುವ ಜಾಗದಲ್ಲಿ ‘ಆಜಾದ್’ ಎಂದು ಬರೆದು ಅವತ್ತಿನ ದಿನಾಂಕ ಬರೆದಿದ್ದರು. ಆ ಹಾಳೆಯನ್ನು ಮತ್ತೆ ಮಡಿಚಿ ಜೇಬಿಗ್ಹಾಕಿಕೊಂಡು ಗೃಂಥಾಲಯದಿಂದ ಹೊರಬಿದ್ದ ಲೋಕಿ ಗೃಂಥಾಲಯದಿಂದ ನೇರ ಮನೆಗ್ಹೋಗಿ ಸ್ನೇಹ ಕೊಟ್ಟ ಕಾಫಿಯನ್ನು ಅವಸರವಸರವಾಗಿ ಕುಡಿದು ರೂಮಿಗ್ಹೋಗಿ ಬಾಗಿಲ್ಹಾಕಿಕೊಂಡು ‘ಆಜಾದಿ’ ಪತ್ರಿಕೆಯನ್ನು ಹೊರತೆಗೆದು ಓದಲಾರಂಭಿಸಿದ.
‘ಆಜಾದಿ’ – ಕೈಬರಹ ಪತ್ರಿಕೆಯ ಓದುಗರಿಗೆ ನಮಸ್ಕಾರ. ಗೃಂಥಾಲಯದಲ್ಲಿ ಕದ್ದು ಇಡೋ ಅನಿವಾರ್ಯತೆ ಏನಿದೆ ಅಂತ ತಮಗನ್ನಿಸಬಹುದು. ಆದರೆ ನಾನು ಬರೆಯ ಹೊರಟಿರೋ ವಿಷಯಗಳು ‘ಪ್ರಜಾಪ್ರಭುತ್ವದ’ ಕಾನೂನಿನ ಪ್ರಕಾರ ಅಪರಾಧ, ದ್ರೋಹದ ಕೆಲಸ. ನಾನಿಲ್ಲಿ ಹೇಳಲಿರುವ ಬಹಳಷ್ಟು ವಿಷಯಗಳು ನಿಮಗೆ ಸರಿ ಕಾಣದಿರಬಹುದು; ಆದರೆ ಹೇಳೋ ವಿಷಯ ಸತ್ಯವಾದದ್ದು ಎಂದು ಎದೆಮುಟ್ಟಿ ಹೇಳಬಲ್ಲೆ.
ನಕ್ಸಲರ ವಿಷಯದಲ್ಲಿ ಸರ್ಕಾರ ನಡೆಯುತ್ತಿರುವುದನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಒಂದು ಸಾಮಾಜಿಕ ಆರ್ಥಿಕ ಸಮಸ್ಯೆಯನ್ನು ಬಂದೂಕಿನಿಂದ ದಮನಗೊಳಿಸಬೇಕು ಎನ್ನುತ್ತಿರುವ ಸರ್ಕಾರದ ನಿರ್ಧಾರ ಮೂರ್ಖತನವಲ್ಲದೆ ಮತ್ತೇನು? ಕಣ್ಣ ಮುಂದೆಯೇ ಆಂಧ್ರದ ಉದಾಹರಣೆಯಿದೆ. ಬಂದೂಕಿನಿಂದ, ನಕ್ಸಲರ ಸಾವಿನಿಂದ ಒಂದು ಚಳುವಳಿ ಸತ್ತು ಹೋಗುವಂತಿದ್ದರೆ ಆಂಧ್ರದಲ್ಲಿ ನಕ್ಸಲಿಸಂ ಸತ್ತು ದಶಕಗಳಾಗಬೇಕಿತ್ತು. ಆದರೆ ಅಲ್ಲಿ ಆಗಿರುವುದೇನು? ದಿನೇ ದಿನೇ ನಕ್ಸಲ್ ಸಂಘಟನೆ ಬಲವಾಗುತ್ತಿದೆ. ಕೆಲವು ಲಂಪನೈಸ್ ಆದವರನ್ನೇ ನಿಜವಾದ ನಕ್ಸಲರೆಂಬಂತೆ ಸರ್ಕಾರ ಮತ್ತು ಬಹುತೇಕ ಮಾಧ್ಯಮಗಳು ಬಿಂಬಿಸಿ ನಗರ ಪ್ರದೇಶಗಳಲ್ಲಿ ನಕ್ಸಲರ ಬೆಂಬಲಿಗರ ಸಂಖೈಯನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದರೂ ಈ ದೇಶದ ಬೇರುಗಳಾದ ಹಳ್ಳಿಗಳಲ್ಲಿ ನಿಜವಾದ ನಕ್ಸಲ್ ಚಳುವಳಿ ಬಲವಾಗಿಯೇ ಬೇರೂರುತ್ತಿದೆ. ಇದಕ್ಕೆ ಸಾಕ್ಷಿ ಯಾರಿಗೂ ತಿಳಿಯದಂತೆ ನಾಲ್ಕೈದು ವರ್ಷಗಳಿಂದ ಮಲೆನಾಡಿನಲ್ಲಿ ನಕ್ಸಲ್ ಚಳುವಳಿಯನ್ನು ಬಲಪಡಿಸಿರುವ ಪ್ರೇಮ್ ಮತ್ತಾತನ ಸಂಗಡಿಗರು. ಗಿರಿಜನರ ಬೆಂಬಲವಿರದಿದ್ದರೆ ನಕ್ಸಲೀಯರ ಚಳುವಳಿ ಇಷ್ಟು ಬಲವಾಗಿ ಬೇರೂರುತ್ತಿತ್ತಾ? ಆಳೋ ಸರ್ಕಾರವೊಮ್ಮೆ ಯೋಚಿಸಬೇಕು. ಕಾನೂನಿನ ಪರವಾಗಿ ನಿಂತಿರುವ ಸರ್ಕಾರಕ್ಕಿಂತ ಸಾಮಾಜಿಕ ನ್ಯಾಯದ ಪರ ನಿಂತಿರುವ ನಕ್ಸಲೀಯರಿಗ್ಯಾಕೆ ಜನ ಬೆಂಬಲ ಕೊಡುತ್ತಿದ್ದಾರೆ ಎಂಬ ಬಗ್ಗೆ ಚಿಂತಿಸಬೇಕು. ಈಗ ಚಿಂತಿಸಲು ತಡ ಮಾಡಿದರೆ ಮುಂದೆ ನಡೆಯೋ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.  – ಆಜಾದ್.
ಓದಿ ಮುಗಿಸಿ ಹಾಳೆಯನ್ನ ಮಡಿಚಿ ಜೇಬಿನೊಳಗಿಟ್ಟು ಮೇಜಿನ ಮೇಲೆ ತಲೆ ಇಟ್ಟು ಯೋಚಿಸಲಾರಂಭಿಸಿದ. ‘ನನಗೇ ಯಾಕೆ ಹೀಗಾಗುತ್ತೆ? ಗೃಂಥಾಲಯಕ್ಕೆ ದಿನಾ ಅಷ್ಟೊಂದು ಜನರು ಬರುತ್ತಾರೆ. ಅವರೆಲ್ಲರನ್ನೂ ಬಿಟ್ಟು ಹುಚ್ಚ ನನ್ನನ್ನೇ ಆರಿಸಿಕೊಂಡ. ಇವತ್ತು ಈ ಪತ್ರಿಕೆ ನನ್ನ ಕೈಗೇ ಯಾಕೆ ಸಿಕ್ಕಿತು? ಪೂರ್ಣಿಗೆ ಕೊಟ್ಟ ಮಾತನ್ನು ಮುರಿಯೋ ಸಮಯ ಹತ್ತಿರವಾಗ್ತಾ ಬಂತಾ? ನನ್ನ ಜೀವನದ ಕೊನೆಯ ನಿಲ್ದಾಣ ಬಹುಶಃ ನಕ್ಸಲ್ ಚಳುವಳಿಯೇ ಇರಬೇಕು. ಅದಿಕ್ಕೆ ನನ್ನ ಜೀವನದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ.’ “ಊಟಕ್ಕೆ ಬಾರೋ ಲೋಕೇಶಣ್ಣಾ” ಎಂದು ಸ್ನೇಹಾ ಕೂಗಿದಾಗ ಯೋಚನೆಗಳಿಂದ ಎಚ್ಚೆತ್ತು ಉದ್ವೇಗದ ಭಾವಗಳಿಂದ ತುಂಬಿದ್ದ ಮುಖದ ಮೇಲೆ ಬಲವಂತದ ನಗುವನ್ನು ತಂದುಕೊಂಡು ಊಟದ ಮನೆಯೆಡೆಗೆ ಹೊರಟ.
“ಏನೋ ಅಣ್ಣಾ. ಅತ್ತಿಗೆ ಬಹಳ ದಿನಗಳಿಂದ ಮನೆಯ ಕಡೆಗೆ ಬರಲೇ ಇಲ್ಲಾ? ಇಬ್ಬರೂ ಜಗಳ ಮಾಡಿಕೊಂಡಿದ್ದೀರೋ ಹೇಗೆ?”
“ಜಗಳ ಏನೂ ಇಲ್ಲ. ಏನೋ ಬರೋದಿಕ್ಕಾಗಿಲ್ಲ ಅನ್ನಿಸುತ್ತೆ”
“ಅಲ್ವೋ ಅಣ್ಣಾ ಯಾವ ಹುಡುಗಿಯ ಜೊತೆಯೂ ಹೆಚ್ಚಿಗೆ ಮಾತನಾಡದವನು ಅದ್ಹೇಗೆ ಅಷ್ಟು ಚೆಂದದ ಹುಡುಗಿಯನ್ನು ಬುಟ್ಟಿಗೆ ಹಾಕ್ಕೊಂಡೆ”
“ನಾನೂ ಬುಟ್ಟಿಗೆ ಹಾಕಿಕೊಳ್ಳಲಿಲ್ಲ, ಅವಳೂ ನನ್ನನ್ನು ಬುಟ್ಟಿಗೆ ಹಾಕಿಕೊಳ್ಳಲಿಲ್ಲ. ಇಬ್ಬರೂ ಕೈ ಕೈ ಹಿಡಿದುಕೊಂಡು ಖುಷಿಖುಷಿಯಾಗಿ ಹಳ್ಳಕ್ಕೆ ಬಿದ್ದೆವು” ಇಬ್ಬರೂ ನಕ್ಕರು.
“ಅಣ್ಣಾ, ಒಂದು ವಿಷಯ ಹೇಳೋದಿಕ್ಕೆ ಮರೆತುಬಿಟ್ಟೆ. ಇವತ್ತು ಸಂಜೆ ಅಪ್ಪ ವಿಜಯನನ್ನು ಕರೆದುಕೊಂಡು ಬರ್ತಾರಂತೆ. ಅದಿಕ್ಕೆ ಸಂಜೆ ನೀನು ಹೋಗಿ ಒಂದು ಕೆ.ಜಿ ಕೋಳಿ ತೆಗೆದುಕೊಂಡು ಬರಬೇಕಂತೆ”
“ಸರಿ” ಎಂದ್ಹೇಳಿದ ಲೋಕಿ. ವಿಜಿಯನ್ನು ನೋಡುತ್ತಿದ್ದಂತೆ ನನ್ನ ಕ್ರಾಂತಿಯ ಆಲೋಚನೆಗಳು; ನನ್ನ ಆದರ್ಶಗಳೆಲ್ಲಾ ಬರೀ ಬೂಟಾಟಿಕೆ ಎಂದೆನ್ನಿಸಲಾರಂಭಿಸುತ್ತದೆ. ವಿಜಿಯ ಜೀವನದಲ್ಲಿ ಆ ಘಟನೆ ನಡೆದು ನಾನು ನನ್ನ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಂಡ ನಂತರ ವಿಜಿಯ ಮುಖ ನೋಡಿ ಮಾತನಾಡಿದ್ದೇ ಇಲ್ಲ. ಛೀ ನನ್ನ ಜನ್ಮಕ್ಕಿಷ್ಟು ಎಂದುಕೊಂಡ.
“ವಿಜಯ್ ಬಗ್ಗೆ ಯೋಚಿಸುತ್ತಿದ್ದೀಯಾ ಲೋಕೇಶಣ್ಣಾ?”
“ಹ್ಞೂ. ನಾನು ಮಾಡಿದ ತಪ್ಪುಗಳನ್ನು ನೆನೆದು ಅದರ ಪಶ್ಚಾತಾಪಕ್ಕೆ ಏನು ಮಾಡಬೇಕೆಂದು ಯೋಚಿಸುತ್ತಿದ್ದೇನೆ”
“ನಡೆದು ಹೋದದ್ದರ ಬಗ್ಗೆ ಯೋಚಿಸಿ ಏನು ಮಾಡ್ತೀಯಾ? ವಿಜಯ್ ಕೂಡ ಹಳೆಯದನ್ನು ಮರೆತು ನಗುನಗುತ್ತಾ ಇಲ್ವಾ?”
‘ನಾನೂ ಮೇಲ್ಮೇಲೆ ನಗುತ್ತಲೇ ಇರ್ತೀನಿ. ಆದರೆ ಒಳಗೆ’ ನಾಲಗೆಯ ತುದಿಯವರೆಗೆ ಬಂದ ಮಾತುಗಳನ್ನು ನುಂಗಿಕೊಂಡ ಲೋಕಿ. ಊಟ ಮುಗಿಸಿ ರೂಮಿಗ್ಹೋಗಿ ಹಾಸಿಗೆಯ ಮೇಲೆ ಅಡ್ಡಾದ. ಯಾರಿರಬಹುದು ಈ ‘ಆಜಾದ್’. ಬಹುಶಃ ನಕ್ಸಲ್ ತತ್ವಗಳನ್ನು ನಗರಗಳಲ್ಲಿ ಪ್ರಸಾರಮಾಡಲು ನೇಮಿಸಲ್ಪಟ್ಟ ನಕ್ಸಲೀಯರಿರಬೇಕು. ಅವರನ್ನು ಹೇಗೆ ಭೇಟಿಮಾಡೋದು. ಇವತ್ತು ಬುಧವಾರ. ಬಹುಶಃ ಮುಂದಿನ ಸಂಚಿಕೆಯನ್ನು ಮುಂದಿನ ಬುಧವಾರ ಇಡಬಹುದು. ಸೋಮವಾರ ಗೃಂಥಾಲಯಕ್ಕೆ ರಜೆ. ಮಂಗಳವಾರದಿಂದ ಎಲ್ಲಿಗೂ ಹೋಗದೆ ಗೃಂಥಾಲಯದಲ್ಲೇ ಇರಬೇಕು. ಅದೃಷ್ಟವಿದ್ದರೆ ಅವರನ್ನು ಭೇಟಿಯಾಗಬಹುದು. ಯೋಚನೆಗಳ ನಡುವೆಯೇ ನಿದ್ದೆ ಹೋದ ಲೋಕಿ. ಎದ್ದಾಗ ಸಂಜೆ ಆರಾಗಿತ್ತು. ಅಂಗಡಿಗ್ಹೋಗಿ ಕೋಳಿ ತರುವಷ್ಟರಲ್ಲಿ ವಿಜಯ್ ಬಂದಿದ್ದ. ಅಪ್ಪ ಆತನನ್ನು ಕರೆದುಕೊಂಡು ಬಂದು ಮನೆಗೆ ಬಿಟ್ಟು ಅಂಗಡಿಯ ಕಡೆ ಹೋಗಿದ್ದರು. ವಿಜಿ ಸ್ನೇಹಳೊಡನೆ ಅಡುಗೆಮನೆಯಲ್ಲಿ ಆಕೆಗೆ ಸಹಾಯ ಮಾಡುತ್ತಾ ನಗುತ್ತಾ ಮಾತನಾಡುತ್ತಿದ್ದನು. ಲೋಕಿಯನ್ನು “ಏನಣ್ಣಾ ಇನ್ನೆಷ್ಟು ಲೇಖನಗಳು ಪ್ರಕಟವಾಯ್ತು?” ಎಂದು ಕೇಳಿ “ಆದ್ರೂ ಅಣ್ಣಾ ನೀನು ನನಗೆ ಈ ರೀತಿಯಾಗಿ ಮೋಸ ಮಾಡಬಾರದಿತ್ತು”
ಇವನಿಗೆ ನನ್ನ ಮೇಲಿರೋ ಕೋಪ ಈ ಜನ್ಮದಲ್ಲಿ ಕಡಿಮೆಯಾಗೋ ಲಕ್ಷಣಗಳಿಲ್ಲಾ. ಇವನನ್ನು ಹೇಗೆ ಸಮಾಧಾನಪಡಿಸಲಿ
“ವಿಜಿ....ಅದೂ....”
“ನಾನೂ ನಿನ್ನ ತಮ್ಮ ತಾನೇ. ಸ್ನೇಹಳಿಗೆ ಮಾತ್ರ ಅತ್ತಿಗೆಯನ್ನು ತೋರಿಸಿದೆ. ನನಗೂ ತೋರಿಸಬಹುದಲ್ವಾ?”
ಈ ವಿಷಯಾನ ಎಂದು ಸಮಾಧಾನದ ನಗೆ ನಕ್ಕು “ನೀನು ಅಪ್ಪನಿಗೆ ಹೇಳಿಬಿಟ್ಟರೆ ಎಂದು ಹೆದರಿ.....” ಲೋಕಿಯ ಮಾತುಗಳನ್ನು ತುಂಡರಿಸುತ್ತಾ “ಎಲ್ಲಾ ವಿಷಯವನ್ನು ಅಪ್ಪನಿಗೆ ಹೇಳೋ ಕಾಲ ಹೋಗಿ ಬಹಳ ದಿವಸವಾಯ್ತು” ಕೊಂಚ ಬೇಸರದಿಂದ ಹೇಳಿದ.
“ಬೇಸರ ಮಾಡಿಕೋಬ್ಯಾಡ ಕಣೋ ವಿಜಿ. ನಿನಗೆ ಬಂದ ಕಷ್ಟಗಳು ಬೇರೆಯವರಿಗೆ ಬಂದಿದ್ದರೆ ಏನಾಗಿಬಿಡುತ್ತಿದ್ದರೋ. ನೀನು ಇಷ್ಟು ಖುಷಿಯಾಗಿರೋದ್ರಿಂದಾನೇ ಗೊತ್ತಾಗುತ್ತೆ ನಿನ್ನದು ಬಹಳಾ ಧೃಡ ಮನಸ್ಸು ಅಂತ” ಸ್ನೇಹಾ ಹೇಳಿದಳು.
“ಇದರಲ್ಲಿ ನನ್ನದೇನೂ ಇಲ್ಲ ಅಕ್ಕ. ಶಾಲೆಗೆ ಮರಳಿ ಹೋದ ಮೇಲೂ ನನ್ನಲ್ಲಿ ಉತ್ಸಾಹವೇ ಇರಲಿಲ್ಲ. ಮತ್ತೆ ಮತ್ತೆ ಅದೇ ನೆನಪುಗಳು ಬರುತ್ತಿತ್ತು. ಶಾಲೆಯ ಹುಡುಗರು ನನ್ನೆಡೆಗೆ ಅನುಕಂಪ, ಕರುಣೆಯ ದೃಷ್ಟಿಯಿಂದಲೇ ನೋಡುತ್ತಿದ್ದರು. ಅದೂ ನನ್ನನ್ನು ಬಹಳ ಚುಚ್ಚುತ್ತಿತ್ತು. ಉತ್ತರ ಕರ್ನಾಟಕದವನೊಬ್ಬ ಸೀನಿಯರ್ ಇದ್ದಾನೆ. ಅವನು ಒಂದು ದಿನ ಬಳಿ ಬಂದು ‘ಲೋ ತಮ್ಮಾ ಜೀವನ್ ದಾಗ್ ಬಾಳ್ ತ್ರಾಸ್ ಕೋಡೋದು ಸೋಲುಗಳಲ್ಲ; ಕಷ್ಟಗಳೂ ಅಲ್ಲ. ಆ ಸೋಲು, ಕಷ್ಟ ನಮ್ಮ ಮನದಾಗ್ ಮೂಡಿಸೋ ಬೇಸರ ಬಾಳ್ ತ್ರಾಸ್ ಕೊಡ್ತದ. ಆ ಬೇಸರದಿಂದ ತಪ್ಪಿಸಿಕೊಳ್ ಬೇಕು ಅನ್ನೋ ಆಸೆ ಇದ್ರ ಮುಂದೆ ಗೆಲ್ತೀವೋ ಸೋಲ್ತೀವೋ ಅನ್ನೋದ್ರ ಬಗ್ಗೆ ಯೋಚಿಸ್ದೆ ಗೆಲುವಿನೆಡೆಗೆ ಪಯಣಿಸಬೇಕು’ ಎಂದು ಹೇಳಿದ. ನಾನು ಉತ್ಸಾಹದಿಂದ ಪುಟಿಯುವುದಕ್ಕೆ ಅವನ ಮಾತುಗಳೇ ಕಾರಣ”

ಮುಂದುವರೆಯುವುದು

No comments:

Post a Comment