ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ
ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ
ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ
ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ
ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ
ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ
ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ
ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ
ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ
ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು
ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ
ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ
ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ
ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ
ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.