Apr 23, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 27

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ


‘ಘಟ್ಟಗಳಲ್ಲಿ ನಕ್ಸಲ್ ಚಳುವಳಿ ಬಲವಾಗಿ ಬೇರೂರುತ್ತಿದೆ’ ಎಂದು ಗುಪ್ತಚರರು ಸರ್ಕಾರಕ್ಕೆ ಅನೇಕ ಬಾರಿ ವರದಿ ಕಳುಹಿಸಿದ್ದರು. ಎಲ್ಲಾ ವಿಷಯಗಳಲ್ಲೂ ನಿರ್ಲಕ್ಷ್ಯ ತೋರುವ ಸರ್ಕಾರಕ್ಕೆ ಆ ವರದಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದೆನಿಸಲೇ ಇಲ್ಲ. ಎಲ್ಲಾ ವರದಿಗಳಂತೆ ಅದೂ ಧೂಳು ತಿನ್ನುತ್ತಾ ಕುಳಿತುಕೊಂಡಿತ್ತು. ಆದರೆ ಪತ್ರಿಕಾ ವರದಿಗಳು ಸರ್ಕಾರವನ್ನು ಬೆಚ್ಚಿಬೀಳಿಸಿದವು. ನಕ್ಸಲ್ ಚಳುವಳಿಯಿರಲಿ, ದೇಶದಲ್ಲಿ ನಡೆದ, ನಡೆಯುತ್ತಿರುವ ಯಾವೊಂದು ಚಳುವಳಿಯ ಒಳ ಹೊರಗು; ಆಗು ಹೋಗುಗಳು ಗೊತ್ತಿಲ್ಲದ ರಾಜಕಾರಣಿಗಳೆಲ್ಲಾ ದಿನಕ್ಕೊಂದು ಮಾತನ್ನಾಡಲಾರಂಭಿಸಿದವು.
ಆಡಳಿತ ನಡೆಸುವವರಲ್ಲೇ ಸರಿಯಾದ ಸಂಪರ್ಕ – ಮಾಹಿತಿಯ ಕೊರತೆಯಿಂದಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದರು. ಖುದ್ದು ರಾಜ್ಯದ ಮುಖ್ಯಮಂತ್ರಿಯೇ ಬೆಳಿಗ್ಗೆಯೊಂದು ಸಂಜೆಯೊಂದು ಮಾತನ್ನಾಡುತ್ತಿದ್ದರು. ವಿಧಾನಸೌಧದ ಬಳಿ ನಡೆದ ಪತ್ರಿಕಾಗೋಷ್ಟಿಯಲ್ಲಿ ‘ನಕ್ಸಲಿಸಂ ಒಂದು ಸಾಮಾಜಿಕ ಸಮಸ್ಯೆ. ಅದನ್ನು ಮಾತುಕತೆಯಿಂದ, ಆರ್ಥಿಕ ಅಭಿವೃದ್ಧಿಯಿಂದ ನಿರ್ಮೂಲಗೊಳಿಸುತ್ತೇವೆ’ ಎಂದ್ಹೇಳಿದರೆ ರಾಜ್ಯ ಪೋಲೀಸ್ ಆಯುಕ್ತರೊಂದಿಗಿನ ಸಭೆಯಲ್ಲಿ ಭಾಗವಹಿಸಿದ ನಂತರ ‘ಕಾನೂನಿನ ವಿರುದ್ಧ ನಿಂತು ಹಿಂಸಾಪ್ರವೃತ್ತಿಯಲ್ಲಿ ತೊಡಗುವ ನಕ್ಸಲರ ಬಗ್ಗೆ ಯಾವುದೇ ಕರುಣೆ ತೋರಿಸಲು ಸಾಧ್ಯವಿಲ್ಲ. ವೀರಪ್ಪನ್ ಹಿಡಿಯುವುದಕ್ಕೋಸ್ಕರ ನೇಮಿಸಿದ್ದ ಎಸ್.ಟಿ.ಎಫ್ ಅನ್ನು ನಕ್ಸಲ್ ನಿಗ್ರಹಕ್ಕೂ ಬಳಸುತ್ತೇವೆ’ ಎಂದು ಹೇಳಿಬಿಡುತ್ತಿದ್ದರು. ಸರ್ಕಾರದ ನಡವಳಿಕೆ ಸ್ಪಷ್ಟವಾಗಿ ಹೇಳುತ್ತಿತ್ತು – ಘಟ್ಟದ ನಕ್ಸಲ್ ಚಳುವಳಿ ಆಡಳಿತ ನಡೆಸುವವರಲ್ಲಿ ಒಂದು ಸಣ್ಣ ಮಟ್ಟದ ನಡುಕ ಹುಟ್ಟಿಸಿದೆ – ಎಂದು.
* * *
“ಶೃಂಗೇರಿಗೆ ಹೋಗ್ತಾ ಇದ್ದೀನಿ ಅನ್ನೋದನ್ನು ನನಗೆ ಹೇಳೇ ಇರಲಿಲ್ವಲ್ಲಾ ಸಯ್ಯದ್” ಹುಸಿಮುನಿಸು ತೋರುತ್ತಾ ಕೇಳಿದ ಲೋಕಿ.
“ನಮ್ಮ ಬಾಸ್ ಯಾರಿಗೂ ಹೇಳಬಾರದು ಎಂದಪ್ಪಣೆ ಮಾಡಿದ್ದರು. ನಿನಗೇ ಗೊತ್ತಲ್ಲಾ ನಕ್ಸಲ್ ಬಗ್ಗೆ ಜೋರಾಗಿ ಮಾತನಾಡೋ ಹಾಗೂ ಇಲ್ಲ. ಅದಿಕ್ಕೆ ರಹಸ್ಯವಾಗಿಟ್ಟಿದ್ದೆ. ಸಾರಿ”
“ಹೋಗ್ಲಿ ಬಿಡು. ಅಂದ್ಹಾಗೆ ಶೃಂಗೇರಿಯಲ್ಲಿ ಏನೇನ್ ಆಯ್ತು. ಭಯವಾಗಲಿಲ್ವಾ?”
“ಭಯ ಯಾಕೆ? ಅವರೂ ಮನುಷ್ಯರೇ ಅಲ್ವಾ?” ಎಂದ್ಹೇಳಿ ಶೃಂಗೇರಿಯ ತನ್ನ ಅನುಭವಗಳನ್ನು ವಿಶದವಾಗಿ ತಿಳಿಸಿದ. ತಾನೇನಾದರೂ ನಕ್ಸಲ್ ಚಳುವಳಿಗೆ ಸೇರಲು ಒಬ್ಬಂಟಿಯಾಗಿ ಶೃಂಗೇರಿಗೆ ಹೋದರೆ ಇವನ್ಹೇಳಿದ ಯಾವ್ಯಾವ ವಿಷಯಗಳು ನನಗೆ ಅನುಕೂಲವಾಗುತ್ತೆ ಎಂದುಕೊಂಡು ಆತನ ಮಾತುಗಳನ್ನು ಗಮನವಿಟ್ಟು ಕೇಳಿದ ಲೋಕಿಗೆ ನೆನಪಿನಲ್ಲುಳಿದಿದ್ದು ‘ಚಿನ್ನಪ್ಪಣ್ಣನ ಅಂಗಡಿ ಸರ್ಕಲ್’.
* * *
“ಏನು ಸಾಹೇಬ್ರು ಕಾಲೇಜಿನ ಕಡೆ ಬಂದು ಬಹಳ ದಿನಗಳಾಗಿ ಹೋಯ್ತು. ಕಾಲೇಜಿಗೆ ಸೇರಿರೋದು ಸಂಜೆ ಬಂದು ಪೂರ್ಣಿಮಾಳನ್ನು ಮಾತನಾಡಿಸಿ ಹೋಗೋದಿಕ್ಕೆ ಮಾತ್ರ ಅಂತ ತಿಳಿದುಕೊಂಡಿರೋ ಹಾಗಿದೆ” ಲೋಕಿಯನ್ನು ರೇಗಿಸುತ್ತಾ ಕ್ಯಾಂಟೀನಿನಲ್ಲಿ ಕುಳಿತಿದ್ದವನ ಬಳಿ ಬಂದಳು ಸಿಂಚನಾ.
“ಹಾಗೇನಿಲ್ಲಾ ಸಿಂಚನಾ. ಒಂದು ಲೇಖನ ಸಿದ್ಧಪಡಿಸುತ್ತಿದ್ದೆ. ಅದ್ರಿಂದ ಬರೋದಿಕ್ಕಾಗಲಿಲ್ಲ” ಪೂರ್ಣಿಮಾಳಿಗೆ ಹೇಳಿದ್ದ ಸುಳ್ಳನ್ನೇ ಇವಳಿಗೂ ಹೇಳಿದ.
“ಎಲ್ಲಿ ಪೂರ್ಣಿಮಾ ಇನ್ನೂ ಬಂದಿಲ್ವಾ?”
“ಬಂದಿದ್ದಳು. ಅವಳ ತಾಯಿಗೆ ಹುಷಾರಿಲ್ವಂತೆ. ಅದಿಕ್ಕೆ ಬೇಗ ಹೊರಟುಹೋದಳು. ನಿನಗೆ ಹೇಳಲಿಲ್ವಾ?”
“ಹೇಳಿದ್ದಳು. ನಿನ್ನ ಜೊತೆ ಮಾತನಾಡಿಕೊಂಡು ಐದೂವರೆಗೆ ಹೋಗ್ತೀನಿ ಅಂದಿದ್ದಳು”
“ಬೆಳಿಗ್ಗೆಯಿಂದ ಕಡಿಮೆಯಿದ್ದ ಜ್ವರ ಸಂಜೆ ಮತ್ತೆ ಜಾಸ್ತಿಯಾಗಿದೆ ಎಂದು ಅವರ ತಂದೆ ಫೋನ್ ಮಾಡಿದ್ದರು. ಅದಿಕ್ಕೆ ಬೇಗ ಹೋಗಿರಬೇಕು”
“ಹ್ಞೂ” ಎಂದ್ಹೇಳಿ ಸುಮ್ಮನಾದ ಲೋಕಿ ಕ್ಯಾಂಟೀನಿನ ರಾಜನನ್ನು ಕರೆದು “ಎರಡು ಕಾಫಿ ತಾ” ಎಂದ. ಸಿಂಚನಾ “ಹಾಗೇ ಒಂದು ಕಿಂಗ್ ಸಿಗರೇಟು” ಎಂದ್ಹೇಳಿ ನಕ್ಕಳು.
“ಬೇರೆಯವರನ್ನು ರೇಗಿಸು ಅಂದ್ರೆ ಚೆನ್ನಾಗಿ ರೇಗಿಸ್ತೀಯ. ಒಂದು ಮಾತು ಹೇಳ್ತೀನಿ. ನಿನ್ನ ನಗು ತುಂಬಾನೇ ಚೆನ್ನಾಗಿದೆ. ಬಹುಶಃ ನಿನ್ನ ಸ್ಮೈಲೇ ಗೌತಮನನ್ನು ಮರಳುಮಾಡಿಬಿಟ್ಟಿರಬೇಕು”
“ಅಯ್ಯಪ್ಪಾ! ಈಗಾಗಲೇ ಒಬ್ಬಳು ಲವರ್ ಇದ್ದು ಮತ್ತೊಂದು ಹುಡುಗಿಗೆ ಅದೂ ಆ ಲವರ್ರಿನ ಜಿಗರಿ ದೋಸ್ತಿಯನ್ನೇ ಹೊಗಳುತ್ತಿದ್ದೀಯಾ? ಇರು ಪೂರ್ಣಿಮಾಳಿಗೆ ಹೇಳ್ತೀನಿ”
“ಅದರಲ್ಲೇನಿದೆ? ಸೌಂದರ್ಯವನ್ನು ಹೊಗಳೋದರಲ್ಲಿ ತಪ್ಪೇನಿದೆ. ಪೂರ್ಣಿಯೊಡನೆಯೂ ಈ ವಿಷಯ ಎಷ್ಟೋ ಬಾರಿ ಹೇಳಿದ್ದೀನಿ”
“ಸರಿ ಹೋಯ್ತು. ಮೊದಲು ಪೂರ್ಣಿಮಾಳಿಗೆ ಹೇಳ್ತೀನಿ. ಒಂದಷ್ಟು ಬಿಗಿ ಮಾಡು, ಈಗಲೇ ಇಷ್ಟು ಸಡಿಲ ಬಿಟ್ಟುಬಿಟ್ರೆ ಮದುವೆಯಾದ ಮೇಲೆ ಕಷ್ಟ ಕಷ್ಟ ಅಂತ”
“ನಮ್ಮಿಬ್ಬರ ನಡುವಿನ ಪ್ರೀತಿ ಅಷ್ಟೊಂದು ದುರ್ಬಲವಾಗಿದೆಯಾ?”
“ಇಲ್ಲ ಕಣೋ. ಸುಮ್ನೆ ತಮಾಷೆ ಮಾಡಿದೆ. ನನಗೆ ಗೊತ್ತಿಲ್ವಾ ನಿಮ್ಮಿಬ್ಬರ ನಡುವಿನ ಪ್ರೀತಿ ಎಂಥದ್ದು ಅಂತ. ಅದರಲ್ಲೂ ನಿಮ್ಮಿಬ್ಬರ ಮನಸ್ಸು ನನ್ನ ಮನಸ್ಸಿನಂತೆ ಚಂಚಲವಾಗಿಲ್ಲ” ಕೊನೆಯ ವಾಕ್ಯ ಹೇಳುವಾಗ ಸಿಂಚನಾಳ ಮೊಗದಲ್ಲಿ ನಗು ಮಾಯವಾಗಿತ್ತು.
“ಗೌತಮ್ ವಿಷಯವಾಗಿ ಈ ರೀತಿ ಹೇಳ್ತಾ ಇದ್ದೀಯಾ?” ರಾಜ ತಂದುಕೊಟ್ಟ ಸಿಗರೇಟನ್ನು ಹಚ್ಚುತ್ತಾ ಕೇಳಿದ ಲೋಕಿ.
“ಹೌದು ಲೋಕಿ. ನನಗೇನು ಮಾಡಬೇಕು ಅನ್ನೋದೆ ತಿಳಿಯುತ್ತಾ ಇಲ್ಲ. ಒಂದು ಕಡೆ ಈಗಾಗಲೇ ನಾನು ಮನಸಾರೆ ಪ್ರೀತಿಸ್ತಿರೋ ನನ್ನತ್ತೆಯ ಮಗ ವಿವೇಕ್. ಇನ್ನೊಂದೆಡೆ ನನ್ನನ್ನು ತುಂಬಾನೆ ಪ್ರೀತಿಸುತ್ತಿರೋ ಗೌತಮ್. ಬಹಳಷ್ಟು ಸಲ ಅನ್ನಿಸುತ್ತೆ ನಾನು ಯೋಚಿಸ್ತಾ ಇರೋದು ತಪ್ಪು ಅಂತ. ವಿವೇಕ್ ದೂರದಲ್ಲಿದ್ದಾನೆ, ಗೌತಮ್ ದಿನಾ ಸಿಗುತ್ತಿರುತ್ತಾನೆ ಅದಿಕ್ಕೆ ಮನ ಒಮ್ಮೊಮ್ಮೆ ಇವನೆಡೆ ವಾಲುತ್ತೆ; ಕೊನೆಗನ್ನಿಸುತ್ತೆ ನನ್ನ ಪ್ರೀತಿ ಯಾವತ್ತಿದ್ದರೂ ವಿವೇಕನೆಡೆಗೆ ಅಂತ. ಆದರೆ ಒಂದೊಂದ್ಸಲ ಈ ಗೌತಮ್ ನನ್ನ ಜೀವನದಲ್ಲಿ ಮುಂಚೇನೆ ಸಿಗಬಾರದಿತ್ತಾ ಅನ್ನಿಸಿಬಿಡುತ್ತೆ. ನಾನೇನು ಮಾಡ್ಲಿ ಹೇಳು ಲೋಕಿ?”
ಇನ್ನೂ ಅರ್ಧ ಉಳಿದಿದ್ದ ಸಿಗರೇಟಿನಿಂದ ಮೂರು ಜುರಿಕೆ ಎಳೆದು ಸಿಗರೇಟನ್ನು ಕೆಳಗೆ ಹಾಕಿ ಕಾಲಿನಿಂದ ಹೊಸಕಿ “ನೋಡು ಸಿಂಚನಾ; ನಾನೀಗ ಆಡೋ ಮಾತುಗಳು ನಿಷ್ಟುರವಾಗಿರಬಹುದು, ಆದರೆ ಸತ್ಯಕ್ಕೆ ಹತ್ತಿರವಾದುದು ಎಂಬುದನ್ನು ಮಾತ್ರ ಹೇಳಬಲ್ಲೆ. ನೀನು ಹೇಳು ಅಂದ್ರೆ ಹೇಳ್ತೀನಿ”
“ಪ್ಲೀಸ್ ಹೇಳು ಲೋಕಿ. ಸಾಧ್ಯವಾದಷ್ಟು ಬೇಗ ಇದಕ್ಕೊಂದು ಉತ್ತರ ಹುಡುಕಬೇಕೆಂದು ತೀರ್ಮಾನಿಸಿದ್ದೇನೆ”
“ಹಾಗಾದ್ರೆ ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಾ ಹೋಗು ಸಿಂಚನಾ” ಎಂದ್ಹೇಳಿ ಮತ್ತೊಂದು ಸಿಗರೇಟ್ ತರಿಸಿ ಹಚ್ಚಿಕೊಂಡ.
“ಗೌತಮ್ ನಿನ್ನ ಮನಸ್ಸಿನಲ್ಲಿ ಪ್ರೇಮದ ಭಾವನೆ ಹುಟ್ಟಿಸುತ್ತಾನಾ?”
“ಹೌದು. ಸ್ವಲ್ಪ”
“ವಿವೇಕನನ್ನು ಪ್ರೀತಿಸುತ್ತೀಯಾ?”
“ಬೆಟ್ಟದಷ್ಟು”
“ಯಾವತ್ತಾದರೂ ಗೌತಮ್ ಮೇಲಿನ ಪ್ರೀತಿಯೇ ಬೆಟ್ಟದಷ್ಟಾಗಬಹುದು ಎನ್ನಿಸಿದ್ದಿದೆಯಾ?”
“ಬಹಳಷ್ಟು ಬಾರಿ ಅನ್ನಿಸಿದೆ”
“ಅದರ ಬಗ್ಗೆಯೇ ಯೋಚಿಸೋಣ. ವಿವೇಕ್ ಗಿಂತ ಗೌತಮ್ ಮೇಲಿನ ನಿನ್ನ ಪ್ರೀತಿಯೇ ಜಾಸ್ತಿ ಮುಖ್ಯವಾಯ್ತು ಅಂತಿಟ್ಕೋ. ಗೌತಮನನ್ನು ಮದುವೆಯಾಗ್ತೀಯಾ?”
“ಮನೇಲಿ....”
“ಮನೆಯ ವಿಷಯ ಬಿಟ್ಟುಬಿಡು. ಹೋಗಲಿ.....ಮನೆಯವರೂ ಒಪ್ಪಿಗೆ ಕೊಟ್ಟುಬಿಟ್ಟರೆ ಮದುವೆಯಾಗ್ತೀಯಾ?”
“ಬಹುಶಃ ಹೌದು”
“ಸರಿ. ನಿಮ್ಮಿಬ್ಬರ ಮದುವೆಯೂ ಆಯ್ತು. ಗೌತಮನಿಗಂತೂ ಸ್ವರ್ಗವೇ ಸಿಕ್ಕಷ್ಟು ಖುಷಿಯಾಗುತ್ತೆ. ಆದರ್ಶ ದಂಪತಿಗಳೆಂದರೆ ಹೀಗಿರಬೇಕು ಅನ್ನೋ ರೀತಿ ಬದುಕುತ್ತೀರಿ. ನಿನ್ನ ಕಾಲು ನೆಲದ ಮೇಲೆ ಇಡೋದಿಕ್ಕೂ ಬಿಡದಷ್ಟು ನಿನ್ನನ್ನು ಚೆನ್ನಾಗಿ ನೋಡಿಕೊಳ್ತಾನೆ ಗೌತಮ್. ಹೌದಲ್ವಾ?”
“ಹ್ಞೂ”
“ಅದೆಲ್ಲಾ ಎಷ್ಟು ವರ್ಷ ಇರಬಹುದು. ಎರಡು? ಮೂರು? ನಂತರ ಜೀವನದಲ್ಲಿ ಬಹಳಷ್ಟು ಜವಾಬ್ದಾರಿ ಬರುತ್ತೆ. ಪ್ರೀತಿ ಯಾವುದೇ ಕಾರಣಕ್ಕೂ ಕಡಿಮೆಯಾಗದಿರಬಹುದು. ಆದರೆ ಅದನ್ನು ವ್ಯಕ್ತಪಡಿಸುವ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತವೆ”
“ಇರಬಹುದು”
“ಮದುವೆಯಾದ ಕೆಲವು ವರುಷಗಳ ಮೇಲೆ ನಿನ್ನ ಹಳೇ ಸ್ನೇಹಿತನೊಬ್ಬ.....ನಾನೇ ಅಂತಿಟ್ಕೋ.....ನಿಮ್ಮನ್ನು ಭೇಟಿಯಾಗ್ತಾನೆ. ನನಗೆ ಗೌತಮನಿಗಿಂತ ನೀನೇ ಹೆಚ್ಚು ಪರಿಚಯ. ಆ ಕಾರಣದಿಂದ ನಿನ್ನೊಡನೆಯೇ ಹೆಚ್ಚು ಹರಟುತ್ತೀನಿ. ಹಳೇ ಸ್ನೇಹಿತ ಅನ್ನೋ ಸಲುಗೆಯಿಂದ ನೀನೂ ನನ್ನೊಡನೆ ಬಹಳಷ್ಟು ಮಾತನಾಡುತ್ತೀಯ. ಇದ್ರಿಂದ ಗೌತಮ್ ಮನದಲ್ಲಿ ಏನಾಗಬಹುದು ಹೇಳು?”
“ಹಳೇ ಗೆಳೆಯನೊಡನೆ ಮಾತನಾಡಿದ ಮಾತ್ರಕ್ಕೆ ಅನುಮಾನ ಪಡ್ತಾನಾ ಅವನು?”
“ಹೌದು ಸಿಂಚನಾ. ಅವನು ಅನುಮಾನ ಪಡಲೇಬೇಕು. ಯಾಕೆ ಹೇಳು? ಅವನು ನಿನ್ನನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಅವನ ಮನದ ಒಂದು ಮೂಲೇಲಿ ಈಗಾಗಲೇ ಇವಳು ಒಬ್ಬನನ್ನು ಪ್ರೀತಿಸಿದವಳು; ಅವನನ್ನು ಮೂರು ವರ್ಷದಿಂದ ಗಾಢವಾಗಿ ಪ್ರೀತಿಸಿದ್ದರೂ ನನ್ನನ್ನು ಮದುವೆಯಾದಳು ಅಂದರೆ ಇವಳ ಮನಸ್ಸು ಬಹಳ ಚಂಚಲವೇ ಇರಬೇಕು ಎಂಬ ಭಾವನೆ ಬಂದಿರುತ್ತೆ. ಮುಂದೆ ಯಾವತ್ತೋ ಸಿಗುವ ಒಬ್ಬ ಗೆಳೆಯ ಆ ಅನುಮಾನದ ಚಿಗುರಿಗೆ ನೀರು, ಗೊಬ್ಬರ ಹಾಕಿ ಬೆಳೆಸುತ್ತಾನೆ. ಕೊನೆಗಾ ಚಿಗುರು ದೊಡ್ಡ ಮರವಾಗಿ ಬೆಳೆದು, ಆಳವಾಗಿ ಬೇರು ಬಿಟ್ಟುಬಿಟ್ಟ ಮೇಲೂ ನಿಮ್ಮ ಸಂಸಾರ ಚೆನ್ನಾಗಿರೋದಿಕ್ಕೆ ಸಾಧ್ಯವಾ? ನಿನ್ನ ಮೇಲಿರೋ ಪ್ರೀತಿಯಿಂದ ಅವನು ನಿನ್ನನ್ನು ಏನೂ ಕೇಳದೆ ಇರಬಹುದು. ಆದ್ರೆ ಅನುಮಾನದ ಮರದ ಕೆಳಗೆ ಪ್ರೀತಿಯ ಚಿಕ್ಕ ಚಿಗುರೂ ಬೆಳೆಯುವುದಕ್ಕಾಗುವುದಿಲ್ಲಾ, ಬೆಳೆದಿರುವ ಗಿಡವೂ ಬಾಡಿಹೋಗದೆ ಇರಲಾರದು”
ಲೋಕಿ ಹೇಳಿದ ಮಾತುಗಳನ್ನು ಕೇಳಿ ಒಂದೈದು ನಿಮಿಷ ಯೋಚಿಸುತ್ತಾ ಕುಳಿತಳು ಸಿಂಚನಾ. ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿ ನಿಟ್ಟುಸಿರು ಬಿಟ್ಟು ನಿರ್ಮಲ ನಗೆ ನಕ್ಕು “ಥ್ಯಾಂಕ್ಸ್ ಲೋಕಿ” ಎಂದಳು.

ಮುಂದುವರೆಯುವುದು....

No comments:

Post a Comment