Apr 15, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 26



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 25 ಓದಲು ಇಲ್ಲಿ ಕ್ಲಿಕ್ಕಿಸಿ
ಪ್ರೇಮ್ ನ ವಾಗ್ಝರಿಗೆ ಪತ್ರಕರ್ತರೆಲ್ಲ ಅವಕ್ಕಾಗಿ ಕುಳಿತಿದ್ದರು. ಮೊದಲನೇ ಪ್ರಶ್ನೆಯನ್ನು ಸಯ್ಯದ್ ಕೇಳಿದ್ದ
“ಬಂದೂಕಿನಿಂದ ಬದಲಾವಣೆ ಅನ್ನೋದು ನಿಜಕ್ಕೂ ಸಾಧ್ಯವಾಗೋ ಕೆಲಸವಾ?”
“ನೀವೇ ಕಾದು ನೋಡಿ, ಒಂದೆರಡು ದಿನದಲ್ಲಲ್ಲದಿದ್ದರೂ ಕೆಲವು ವರುಷಗಳಲ್ಲಿ ಬದಲಾವಣೆ ಖಂಡಿತವಾಗ್ಯೂ ಆಗುತ್ತೆ”
“ನಕ್ಸಲಿಸಂ ಅನ್ನೋದು ನಮ್ಮ ದೇಶಕ್ಕೆ ಹೊಸದೇನೂ ಅಲ್ಲ. ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ವರ್ಷಗಳಿಂದ ಇದೆ. ಅಲ್ಲೆಲ್ಲಾ ಎಷ್ಟರಮಟ್ಟಿಗೆ ಬದಲಾವಣೆ ಆಗಿದೆ?”
“ನೋಡಿ ಸರ್. ಒಂದು ಚಳುವಳಿ ಅಂದಮೇಲೆ, ಆ ಚಳುವಳಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನರು ಇದ್ದೇ ಇರುತ್ತಾರೆ. ಆಂಧ್ರದಲ್ಲಿ ಕೆಲವು ನಕ್ಸಲೀಯರು ಲಂಪನೈಸ್ ಆಗಿಬಿಟ್ಟಿದ್ದಾರೆ. ಅಂದ್ರೆ ನಕ್ಸಲ್ ತತ್ವಗಳಿಗೆ ತಿಲಾಂಜಲಿಯಿಟ್ಟು ಡಕಾಯಿತಿಗಿಳಿದಿದ್ದಾರೆ. ಬಹುತೇಕ ಎಲ್ಲಾ ಪತ್ರಿಕೆಗಳೂ ಇವರನ್ನೇ ನಿಜವಾದ ನಕ್ಸಲರೆಂದು ಬಿಂಬಿಸಿಬಿಟ್ಟಿರುವುದರಿಂದ ನಮ್ಮ ಬಗ್ಗೆ ಪಟ್ಟಣಗಳಲ್ಲಿ ವಾಸಿಸುತ್ತಿರುವವರಿಗೆ ಕೆಟ್ಟ ಅಭಿಪ್ರಾಯವಿರಬಹುದು. ಆದರೆ ನಕ್ಸಲ್ ತತ್ವಗಳನ್ನು ಕಾಯ ವಾಚ ಮನಸಾ ಪಾಲಿಸುತ್ತಿರುವವರಿರುವ ಊರುಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಇವೆಲ್ಲಾ ಪತ್ರಿಕೆಗಳಲ್ಲಿ ಬರುವುದಿಲ್ಲ ಅಷ್ಟೆ”
“ನಿಮ್ಮ ಮಾತನ್ನು ನಂಬಬಹುದಾ?”
“ಖಂಡಿತವಾಗಿ ನಂಬಿ. ನಕ್ಸಲರೆಲ್ಲ ಕೆಟ್ಟವರಾಗಿಬಿಟ್ಟಿದ್ದರೆ ಅಷ್ಟು ವರ್ಷಗಳಿಂದ ನಮಗೆ ಜನರ ಬೆಂಬಲ ಸಿಗುತ್ತಿತ್ತಾ? ನೀವೇ ಯೋಚಿಸಿ”
“ಆಂಧ್ರದ ವಿಷಯ ಬಿಡಿ. ಮಲೆನಾಡಿಗೆ ಈ ಚಳುವಳಿಯ ಅವಶ್ಯಕತೆಯಿತ್ತಾ?”
“ಸರ್ಕಾರ ಇಲ್ಲಿನ ಜನರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯನ್ನು ವಿರೋಧಿಸಿ ಇಲ್ಲಿನ ಜನರು ನಡೆಸಿದ ಸತ್ಯಾಗ್ರಹಕ್ಕೆ, ಶಾಂತ ರೀತಿಯ ಚಳುವಳಿಗೆ ಸರ್ಕಾರ ಉತ್ತರಕೊಟ್ಟಿದ್ದರೆ ಪಶ್ಚಿಮ ಘಟ್ಟದೊಳಕ್ಕೆ ಬಂದೂಕುಗಳು ಬರುವ ಅವಶ್ಯಕತೆಯಿರಲಿಲ್ಲ”
“ಗಿರಿಜನರು ನಿಮ್ಮನ್ನು ಬೆಂಬಲಿಸುತ್ತಾರಾ?”
“ಜನರ ಬೆಂಬಲ, ಅವರ ರಕ್ಷೆ ಇಲ್ಲದೆ ಕೇವಲ ಬಂದೂಕಿಟ್ಟುಕೊಂಡು ಚಳುವಳಿ ಮಾಡ್ತೀವಿ ಅನ್ನೋದು ಸುಳ್ಳು, ಮೂರ್ಖತನ. ಸರ್ಕಾರದ ಅಸಡ್ಡೆಯಿಂದಾಗಿ ಇಲ್ಲಿನ ಜನ ಬೇಸರಗೊಂಡಿದ್ದರು. ನಮ್ಮಿಂದಾದ್ರೂ ಅವರ ಆಸೆಗಳು ಈಡೇರುತ್ತಾವೇನೋ ಅನ್ನೋ ಅಪೇಕ್ಷೆ ಅವರದ್ದು”
“ಪಾರ್ವತಿ ಮತ್ತು ಹಾಜೀಮಾರ ಹತ್ಯೆಯಾದ ಮೇಲೆ ಪ್ರಾಣಭಯದಿಂದಾಗಿ ಜನರ ಬೆಂಬಲ ಕಡಿಮೆಯಾಯ್ತಾ?”
“ಒಬ್ಬ ನಕ್ಸಲ್ ಸತ್ತಾಗಲೂ ಚಳುವಳಿಗೆ ಇಬ್ಬರು ಸೇರುತ್ತಾರೆ. ಹತ್ತು ಜನ ಹೊರಗಿನಿಂದ ಬೆಂಬಲಿಸುತ್ತಾರೆ”
“ಸಾಮಾನ್ಯವಾಗಿ ನಕ್ಸಲರ ಹತ್ಯೆಯಾದಾಗ ಪ್ರತೀಕಾರ ತೀರಿಸಿಕೊಳ್ಳುವುದು ಮಾಮೂಲು. ಇಲ್ಯಾಕೆ ನೀವು ಯಾವುದೇ ಪ್ರತೀಕಾರ ತೆಗೆದುಕೊಳ್ಳಲಿಲ್ಲ?”
“ಕರ್ನಾಟಕದಲ್ಲಿನ ನಕ್ಸಲ್ ಚಳುವಳಿಗೆ ನಾನು ಕಾರ್ಯದರ್ಶಿ. ಆಂಧ್ರದ ಕಾಮ್ರೇಡುಗಳಿಗಿಂತ ನನ್ನ ಚಿಂತನೆಗಳು ಕೊಂಚ ಭಿನ್ನವಾಗಿದೆ. ನಮ್ಮ ಸ್ನೇಹಿತರು ಸತ್ತಾಗ ಬಂದೂಕಿಡಿದು ದ್ವೇಷ ತೀರಿಸಿಕೊಳ್ಳುತ್ತಾ ಹೋದರೆ ನ್ಯಾಯಕ್ಕಾಗಿ ಶುರುಮಾಡಿದ ಹೋರಾಟ ಕೊನೆಗೆ ಪೋಲೀಸ್ ಮತ್ತು ನಕ್ಸಲರ ನಡುವಿನ ಯುದ್ಧವಾಗಿ ಮಾರ್ಪಟ್ಟು ನಮ್ಮ ಮೂಲ ಉದ್ದೇಶವೇ ಮರೆಯಾಗಿಹೋಗುತ್ತೆ. ಬದಲಾವಣೆ ಬಯಸಿದ ಮೇಲೆ ಸಾವು ನೋವುಗಳೆಲ್ಲ ನಿರೀಕ್ಷಿತವೇ. ಪ್ರತೀ ಸಾವೂ ನಮ್ಮ ಚಳುವಳಿಯನ್ನು ಬಲಪಡಿಸುತ್ತಾ ಹೋಗುತ್ತೆ”
“ಪೋಲೀಸರನ್ನು ಸಾಯಿಸುವುದಿಲ್ಲಾ ಅಂತೀರಾ. ಮತ್ತೆ ನೀವು ಬಂದೂಕಿಡಿಯೋ ಅನಿವಾರ್ಯತೆ ಏನಿದೆ?”
“ನಾವು ಬಂದೂಕಿಡಿದಿರೋದು ಆತ್ಮರಕ್ಷಣೆಗೋಸ್ಕರ ಅಷ್ಟೆ” ಎಂದ್ಹೇಳಿ ಪ್ರೇಮ್ ಮೇಲೆದ್ದ. ಆಡಿದ ಪ್ರತೀ ಮಾತಿನಲ್ಲೂ ಧೃಡತೆಯಿತ್ತು. ವಿನಾಕಾರಣ ಉದ್ವೇಗಕ್ಕೊಳಗಾಗುತ್ತಿರಲಿಲ್ಲ. ಪ್ರೇಮ್ ಅಡುಗೆ ಮಾಡುತ್ತಿದ್ದ ಸ್ಥಳದತ್ತ ಹೋಗಿ ಮಧ್ಯಾಹ್ನದ ಊಟಕ್ಕೆ ಎಲ್ಲಾ ತಯಾರಿಯಾಗಿರುವುದನ್ನು ಗಮನಿಸಿ ಮತ್ತೆ ಪತ್ರಕರ್ತರ ಬಳಿ ಬಂದು “ಎಲ್ಲಾ ಕೈ ತೊಳೆದುಕೊಳ್ಳಿ. ಊಟ ಮಾಡೋಣ” ಎಂದ.
ಪತ್ರಕರ್ತರೆಲ್ಲಾ ಕೈ ತೊಳೆದುಕೊಂಡು ಬಂದು ಊಟಕ್ಕೆ ಕುಳಿತರು. ಪ್ರೇಮ್ ಒಬ್ಬನನ್ನು ಬಿಟ್ಟರೆ ಉಳಿದವರ್ಯಾರೂ ಪತ್ರಕರ್ತರ ಬಳಿ ಅನಾವಶ್ಯಕವಾಗಿ ಮಾತನಾಡುತ್ತಿರಲಿಲ್ಲ. ‘ಇನ್ನು ಸ್ವಲ್ಪ ಅನ್ನ ಬೇಕಾ?’ ‘ಸಾರು ಹಾಕ್ಲಾ ಸರ್’ ‘ನೀರು ಬೇಕಾ?’ ಹೀಗೆ ಮೂರ್ನಾಲ್ಕು ಪದಗಳನ್ನಷ್ಟೇ ಅವರು ಮಾತನಾಡುತ್ತಿದ್ದುದು. ಯಾರೂ ಪತ್ರಕರ್ತರ ಬಳಿ ವಿನಾಕಾರಣ ಮಾತನಾಡಬಾರದು ಎಂದವರಿಗೆ ಅಪ್ಪಣೆಯಾಗಿರಬೇಕು ಎಂದುಕೊಂಡ ಸಯ್ಯದ್. ಯಾರನ್ನಾದ್ರೂ ಮಾತಿಗೆಳೆಯಬೇಕು ಎಂದುಕೊಂಡು ಒಬ್ಬನನ್ನು “ನಿಮ್ಮ ಹೆಸರು ಸರ್” ಎಂದು ಕೇಳಿದ. “ಕಾಮ್ರೇಡ್” ಎಂದುತ್ತರಿಸಿ ನಕ್ಕು ಹೊರಟುಹೋದ.
ಪತ್ರಕರ್ತರ ಊಟದ ನಂತರ ನಕ್ಸಲರು ತಮ್ಮ ಊಟ ಮುಗಿಸಿದರು. ಊಟವಾದ ಅರ್ಧ ಘಂಟೆಯ ನಂತರ ಎಲ್ಲಾ ನಕ್ಸಲರು ಬಂದೂಕು ತರಬೇತಿ ಪಡೆಯಲು ಡೇರೆಗಳಿಗಿಂತ ಕೊಂಚ ದೂರದಲ್ಲಿದ್ದ ಚಿಕ್ಕ ಮೈದಾನದಂಥ ಪ್ರದೇಶಕ್ಕೆ ಹೋದರು, ತಮ್ಮ ತಮ್ಮ ಬಂದೂಕುಗಳನ್ನು ಡೇರೆಗಳಿಂದ ತೆಗೆದುಕೊಂಡು ಪ್ರೇಮ್ ಪತ್ರಕರ್ತರನ್ನು ತರಬೇತಿ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋದ. ಎಲ್ಲರ ಕ್ಯಾಮೆರಾಗಳನ್ನು ತೆಗೆದುಕೊಂಡು ನಕ್ಸಲರ ಮುಖಚರ್ಯೆ ತಿಳಿಯಬಾರದೆಂಬಂತೆ ಅವರ ಹಿಂದಿನಿಂದ ಕೆಲವು ಫೋಟೋಗಳನ್ನು ತೆಗೆದು ಪತ್ರಕರ್ತರಿಗೆ ಕೊಟ್ಟ. ‘ಲಾಲ್ ಸಲಾಮ್’ ಎಂಬ ಘೋಷಣೆಯೊಂದಿಗೆ ಮಧ್ಯಾಹ್ನದ ತರಬೇತಿ ಮುಕ್ತಾಯವಾಯಿತು.
“so friends, ಆಗಲೇ ಮೂರು ಘಂಟೆಯಾಗಿದೆ. ನೀವಿನ್ನು ಹೊರಡಿ. ಇಷ್ಟು ದೂರ ಬಂದಿದ್ದಕ್ಕಾಗಿ ಧನ್ಯವಾದ. ಸಾಧ್ಯವಾದರೆ ಮತ್ಯಾವಗಲಾದ್ರೂ ಭೆಟ್ಟಿಯಾಗೋಣ”
ಪತ್ರಕರ್ತರು ಹೊರಡಲನುವಾದರು. ಬೆಳಿಗ್ಗೆ ಇವರನ್ನು ಕರೆದುಕೊಂಡ ಬಂದ ವ್ಯಕ್ತಿಯೇ ಮತ್ತೆ ಇವರನ್ನು ಬಿಟ್ಟು ಬರಲು ಮುಂದಾಳತ್ವ ವಹಿಸಿದ. ಬೆಳಿಗ್ಗೆ ಬಂದ ದಾರಿಯಲ್ಲಿ ಕರೆದೊಯ್ಯದೆ ಮತ್ತೊಂದು ದಾರಿಯಲ್ಲಿ ಕರೆದೊಯ್ದ. ಕೇವಲ ಒಂದು ಘಂಟೆಯ ಪಯಣದ ನಂತರ ಟಾರು ರಸ್ತೆ ಸಿಕ್ಕಿತು. ಪತ್ರಕರ್ತರೊಡನೆ ಬಂದಿದ್ದ ಕಾಮ್ರೇಡ್ ಬಲಕ್ಕೆ ಕೈ ತೋರಿಸಿ “ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿ, ಹತ್ತು ಹದಿನೈದು ನಿಮಿಷದ ನಂತರ ನಾಲ್ಕೈದು ಮನೆಗಳು ಸಿಗುತ್ತವೆ. ಅದು ಕಿಗ್ಗಾ ಎಂಬ ಊರು. ಅಲ್ಲಿರುವವರ ಬಳಿ ಶೃಂಗೇರಿಗೆ ಹೋಗೋದಿಕ್ಕೆ ಬಸ್ ಎಲ್ಲಿ ಬರುತ್ತೆ ಅಂತ ಕೇಳಿ. ಅವರು ತಿಳಿಸಿದ ಜಾಗಕ್ಕೆ ಹೋಗಿ ಬಸ್ ಹತ್ತಿ ಶೃಂಗೇರಿಗೆ ತಲುಪಿಕೊಳ್ಳಿ. ನಾನಿನ್ನು ಬರ್ತೀನಿ” ಎಂದ್ಹೇಳಿ ಕಾಡಿನೊಳಗೆ ಕರಗಿಹೋದ.
ಆತ ಹೇಳಿದ ದಾರಿಯಲ್ಲೇ ನಡೆದು ಬಂದರು. ಆ ಮನೆಯವರು ಹೇಳಿದ ಹಾದಿಯಲ್ಲಿ ಇಪ್ಪತ್ತು ನಿಮಿಷದ ದಾರಿ ಸವೆಸಿದ ನಂತರ ಒಂದು ಸರ್ಕಲ್ ಸಿಕ್ಕಿತು. ಶೃಂಗೇರಿಗೆ ಬಸ್ ಬರೋದಿಕ್ಕೆ ಇನ್ನೂ ಹದಿನೈದು ನಿಮಿಷಗಳಾಗುತ್ತೆ ಎಂದು ತಿಳಿದು ಅಲ್ಲೇ ಇದ್ದ ಒಂದು ಅಂಗಡಿಯ ಬಳಿಗೆ ಹೋದ ಸಯ್ಯದ್. ಆ ಅಂಗಡಿಯಲ್ಲಿದ್ದಾತನನ್ನು ನೋಡಿ ಅಚ್ಚರಿಯಾಯಿತು. ಬೆಳಿಗ್ಗೆ ನಕ್ಸಲ್ ಕ್ಯಾಂಪಿಗೆ ದಿನಸಿ ಸಾಮಗ್ರಿಗಳೊಂದಿಗೆ ಬಂದಿದ್ದ ಚಿನ್ನಪ್ಪಣ್ಣನ ಅಂಗಡಿ ಅದು! ಒಂದು ಸಿಗರೇಟು ಕೊಂಡು ಹಚ್ಚಿದ. ಪಕ್ಕದಲ್ಲಿ ಕುಳಿತಿದ್ದ ಸ್ಥಳೀಯನೊಬ್ಬನನ್ನು ‘ಈ ಸರ್ಕಲ್ ಹೆಸರೇನು?’ ಎಂದ.
“ಚಿನ್ನಪ್ಪಣ್ಣನ ಅಂಗಡಿ ಇದೆಯಲ್ಲಾ. ಅದಿಕ್ಕೆ ಚಿನ್ನಪ್ಪಣ್ಣನ ಅಂಗಡಿ ಸರ್ಕಲ್ ಅನ್ನುತ್ತೇವೆ” ಎಂದ. ಸಿಗರೇಟ್ ಸೇದಿ ಮುಗಿಯುವಷ್ಟರಲ್ಲಿ ಬಸ್ ಬಂತು. ಸಿಗರೇಟರನ್ನು ಬಿಸುಟಿ ಬಸ್ ಹತ್ತಿದ ಸಯ್ಯದ್. ಚಿನ್ನಪ್ಪಣ್ಣನನ್ನು ಉಳಿದ ಪತ್ರಕರ್ತರು ಗಮನಿಸಲಿಲ್ಲ.
* * *
ಆ ವಾರ ಹೊರಬಂದ ಪತ್ರಿಕೆಗಳು ರಾಜ್ಯದಲ್ಲಿ ಸಂಚಲನವುಂಟು ಮಾಡಿದವು. ಕರ್ನಾಟಕದಲ್ಲಿ ಅದರಲ್ಲೂ ಮಲೆನಾಡು, ಪಶ್ಚಿಮಘಟ್ಟದಲ್ಲಿ ನಕ್ಸಲಿಸಮ್ಮಾ? ಎಂದು ಜನ ಅಚ್ಚರಿಪಟ್ಟರು. ಇಡೀ ವಾರ ಲೋಕಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಿಕೆಗಳನ್ನು ಓದುವುದರಲ್ಲಿ ಮಗ್ನನಾಗಿದ್ದನು. ಪೂರ್ಣಿಮಾಳಿಗೆ ಅನುಮಾನ ಬರಬಾರದೆಂಬ ಕಾರಣಕ್ಕೆ ದಿನಾ ಸಂಜೆ ಕಾಲೇಜಿನ ಬಳಿ ಹೋಗಿ ಅವಳನ್ನು ಮಾತನಾಡಿಸಿ; ಒಂದು ಲೇಖನ ಬರೀತಾ ಇದ್ದೀನಿ ಅದಕ್ಕೆ ಕಾಲೇಜಿಗೆ ಬರಲಾಗುತ್ತಿದ್ದ ಎಂದು ಸಮಜಾಯಿಷಿ ಕೊಡುತ್ತಿದ್ದ. ಬೇರೆಲ್ಲಾ ಪತ್ರಿಕೆಗಳಿಗಿಂತ ‘ಸಧನ್ಯಾ’ ಪತ್ರಿಕೆಯಲ್ಲಿ ಬಂದಿದ್ದ ವರದಿ ಲೋಕಿಗೆ ಹೆಚ್ಚು ಪ್ರಿಯವಾಗಿತ್ತು. ಕಾಂತರಾಜ್ ಮೇಷ್ಟ್ರು ಕೊಟ್ಟಿದ್ದ ಹೆಡ್ಡಿಂಗೇ ಆಕರ್ಷಕವಾಗಿತ್ತು. ‘ಹಸಿರ ನಾಡಿನಲ್ಲಿ ಕೆಂಬಾವುಟ’ ಸಯ್ಯದನನ್ನು ಯಾವಾಗ ಭೇಟಿಯಾಗ್ತೀನಿ? ಅವನನ್ನು ಭೆಟ್ಟಿಯಾದ ದಿನ ಅವನು ಶೃಂಗೇರಿಗೆ ಹೋದಾಗಿನ ಅನುಭವಗಳನ್ನು ಕೇಳಿ ತಿಳಿದುಕೊಳ್ಳಬೇಕು. ಸಾಧ್ಯವಾದರೆ ನಕ್ಸಲ್ ಚಳುವಳಿಯ ಬಗ್ಗೆ ಅವನ ಅಭಿಪ್ರಾಯವೇನು ಎಂಬುದನ್ನೂ ತಿಳಿಯಬೇಕು.

ಮುಂದುವರೆಯುವುದು....

No comments:

Post a Comment