Apr 9, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 25



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಬಾಗ 24 ಓದಲು ಇಲ್ಲಿ ಕ್ಲಿಕ್ಕಿಸಿ
ಶೃಂಗೇರಿಗೆ ತಲುಪಿದಾಗ ಬೆಳಗಿನ ಜಾವ ಐದು ಘಂಟೆಯಾಗಿತ್ತು. ಮಂಜು ಕವಿದ ವಾತಾವರಣ; ಅಂಗಿಯ ಮೇಲೊಂದು ಸ್ವೆಟರ್ ಹಾಕಿಕೊಂಡಿದ್ದರೂ ಮೈ ನಡುಗಿಸುವ ಚಳಿಯಿತ್ತು. ಮುಂಜಾನೆ ಬರುವ ಪ್ರಯಾಣಿಕರಿಗಾಗಿಯೇ ಚಹಾ ಕಾಯಿಸುತ್ತಿದ್ದ ಪೆಟ್ಟಿ ಅಂಗಡಿಯ ಬಳಿ ಹೋಗಿ ಒಂದು ಕಪ್ ಚಾ, ಒಂದು ಸಿಗರೇಟ್ ತೆಗೆದುಕೊಂಡು ಕುಳಿತ ಸಯ್ಯದ್. ಆರು ಘಂಟೆಯ ಸುಮಾರಿಗೆ ದೇವಸ್ಥಾನದ ಮುಂಭಾಗಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು.
ಸಿಗರೇಟ್ ಸೇದಿ ಮುಗಿಸಿದ. ಪೆಟ್ಟಿಗೆ ಅಂಗಡಿಯ ಪಕ್ಕದಲ್ಲಿದ್ದ ಸಾರ್ವಜನಿಕ ಸ್ನಾನಗೃಹಕ್ಕೆ ಹೋಗಿ ತಣ್ಣಗೆ ಕೊರೆಯುತ್ತಿದ್ದ ನೀರನ್ನು ಸುರುವಿಕೊಂಡು ಸ್ನಾನ ಮುಗಿಸಿ ಹೊರಬಂದ. ಮತ್ತೊಂದು ಚಹಾ ತೆಗೆದುಕೊಂಡು ಬನ್ನನ್ನು ಅದರಲ್ಲಿ ಅದ್ದಿ ತಿಂದು ಮುಗಿಸಿ ದೇವಸ್ಥಾನದೆಡೆಗೆ ಹೋದ. ಈತನನ್ನು ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಸಯ್ಯದನ ಬಳಿ ಬಂದು ‘ಸಧನ್ಯಾ ಪತ್ರಿಕೆಯವರಾ?’ ಎಂದ. ‘ಹೌದು’ ಎಂದು ಸಯ್ಯದ್ ಹೇಳುವಷ್ಟರಲ್ಲಿ ‘ಬನ್ನಿ’ ಎಂದ್ಹೇಳಿ ದೇವಸ್ಥಾನದ ಹೊರಗೆ ನಡೆಯಲು ಶುರು ಮಾಡಿದ; ಬಸ್ ನಿಲ್ದಾಣದ ಬಳಿಗೆ ಬಂದು ಅಲ್ಲೇ ನಿಂತಿದ್ದ ಟಾಟಾ ಸುಮೋದೊಳಗೆ ಸಯ್ಯದನನ್ನು ಕೂರಿಸಿ ಮುಂದಿನ ಸೀಟಿನಲ್ಲಿ ತಾನು ಕೂತು ಡ್ರೈವರ್ ಗೆ ಹೊರಡಲು ಹೇಳಿದ. ಸುಮೋದೊಳಗೆ ಸಯ್ಯದ್ ಗೆ ಪರಿಚಯವಿದ್ದ ಇಬ್ಬರು ಪತ್ರಕರ್ತರಿದ್ದರು. ಉಳಿದವರ ಗುರುತಿರಲಿಲ್ಲ. ಎಲ್ಲರೆಡೆಗೂ ಒಮ್ಮೆ ನೋಡಿ ನಕ್ಕ. ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ? ನಕ್ಸಲರು ಯಾವುದಾದರೂ ಲಾಡ್ಜಿನಲ್ಲಿ ನಮ್ಮನ್ನು ಭೆಟ್ಟಿಯಾಗ್ತಾರಾ? ಅಥವಾ ಕಾಡಿನೊಳಗೇ ಕರೆಸಿಕೊಳ್ಳುತ್ತಾರಾ? ಪ್ರತಿಯೊಬ್ಬ ಪತ್ರಕರ್ತನೂ ಯೋಚನೆಯಲ್ಲಿ ಮುಳುಗಿದ್ದರಿಂದ ಯಾರೂ ಮಾತನಾಡಲಿಲ್ಲ.
ಶೃಂಗೇರಿಯಿಂದ ಚಿಕ್ಕಮಗಳೂರಿನ ಕಡೆಗೆ ಹೋಗುವ ರಸ್ತೆಯಲ್ಲಿ ಅರ್ಧ ಘಂಟೆ ಪಯಣಿಸಿದ ನಂತರ ತಿರುವೊಂದರಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಂತಿತು.
“ಇಳಿಯಿರಿ” ಎಂದ.
ಸಯ್ಯದ್ ಕೊನೆಯಲ್ಲಿ ಇಳಿಯುತ್ತಿರುವಾಗ “ಬರ್ತೀನಿ ಕಾಮ್ರೇಡ್” ಎಂದು ಡ್ರೈವರ್ ಆ ವ್ಯಕ್ತಿಗೆ ಹೇಳಿದ್ದು ಅಸ್ಪಷ್ಟವಾಗಿ ಕೇಳಿಸಿತು. ‘ಓ! ನಮ್ಮನ್ನು ಕರೆದುಕೊಂಡು ಬಂದ ವ್ಯಕ್ತಿ ಕೂಡ ನಕ್ಸಲನೇ’ ಎಂದುಕೊಂಡ. ಸುಮೋ ಹೊರಟುಹೋಯಿತು. ರಸ್ತೆಯಲ್ಲಿ ಯಾವುದೇ ವಾಹನ ಬರದಿದ್ದುದನ್ನು ಗಮನಿಸಿ “ನನ್ನ ಹಿಂದೆಯೇ ಬನ್ನಿ” ಎನ್ನುತ್ತಾ ಕಾಮ್ರೇಡ್ ರಸ್ತೆಯ ಪಕ್ಕದಲ್ಲಿ ಕೊಂಚ ಎತ್ತರದಲ್ಲಿದ್ದ ಮಣ್ಣಿನ ದಿಬ್ಬವನ್ನೆತ್ತಿ ಕಾಡಿನೊಳಗೆ ನಡೆಯಲಾರಂಭಿಸಿದ. ಕಾಮ್ರೇಡನ ಹಿಂದೆಯೇ ಸಯ್ಯದ್ ಹೋಗುತ್ತಿದ್ದ. ಆತನ ಹಿಂದೆ ಇನ್ನುಳಿದವರು.
“ನಿಮ್ಮ ಹೆಸರು?” ಸಯ್ಯದ್ ಕೇಳಿದ.
ಕಾಮ್ರೇಡ್ ಉತ್ತರಿಸಲಿಲ್ಲ.
“ಇನ್ನೂ ಎಷ್ಟು ದೂರ ನಡೆಯಬೇಕು?”
ಕಾಮ್ರೇಡನ ಮೌನವೇ ಉತ್ತರ.
ಇಪ್ಪತ್ತೆಜ್ಜೆ ಹಾಕುವಷ್ಟರಲ್ಲಿ ಇನ್ನೊಬ್ಬ ಕಾಮ್ರೇಡ್ ಸೇರಿಕೊಂಡ. ಈತನ ಹೆಗಲಲ್ಲೊಂದು ಕಾಲೇಜ್ ಬ್ಯಾಗಿತ್ತು. ಬಗಲಲ್ಲೊಂದು ‘ತಪಾಂಚ’ – ನಕ್ಸಲರೇ ತಯ್ಯಾರಿಸಿಕೊಂಡ ಬಂದೂಕು. ಆತ ಎಲ್ಲರ ಹಿಂದೆ ನಡೆಯಲು ತೊಡಗಿದ.
ಐದು ನಿಮಿಷದ ಹಾದಿ ಸವೆಸಿದ ನಂತರ ಮುಂದಿನವ ನಿಂತು ಹಿಂದಿದ್ದ ಕಾಮ್ರೇಡಿನತ್ತ ನೋಡಿದ. ಕಾಮ್ರೇಡ್ ಬ್ಯಾಗ್ ತೆಗೆದು ಹರಳೆಣ್ಣೆ ತುಂಬಿದ್ದ ಒಂದು ದೊಡ್ಡ ಬಾಟಲಿಯನ್ನು ತೆಗೆದು “ಈ ಎಣ್ಣೆಯನ್ನು ಎಲ್ಲರೂ ನಿಮ್ಮ ಕಾಲುಗಳಿಗೆ ಮಂಡಿಯಿಂದ ಕೆಳಗೆ ಹಚ್ಚಿಕೊಳ್ಳಿ” ಎಂದ್ಹೇಳಿ ಪತ್ರಕರ್ತರ ಕೈಗೆ ಕೊಟ್ಟ.
“ಏತಕ್ಕೆ?” ಪತ್ರಕರ್ತನೊಬ್ಬ ಕೇಳಿದ.
“ಇಲ್ಲಿಂದ ಮುಂದಕ್ಕೆ ಇಂಬಳದ ಕಾಟ ಜಾಸ್ತಿ ಇದೆ ಅದಿಕ್ಕೆ” ಮುಂದೆ ಕಾಮ್ರೇಡುಗಳಿಬ್ಬರೂ ಮಾತನಾಡಲಿಲ್ಲ. ಸುತ್ತಲಿನ ಕಾಡನ್ನು ಗಮನಿಸುತ್ತಿದ್ದರು. ಎಲ್ಲರೂ ಎಣ್ಣೆ ಹಚ್ಚಿಕೊಂಡ ನಂತರ ಪತ್ರಕರ್ತರ ಚಾರಣ ಮುಂದುವರೆಯಿತು.
ಮುಂದೆ ಎರಡು ಘಂಟೆಯ ಚಾರಣದಲ್ಲಿ ಯಾರೂ ಮಾತನಾಡಲಿಲ್ಲ. ದಣಿವಾಗುತ್ತಿತ್ತು. ಸಣ್ಣ ತೊರೆಯೊಂದು ಸಿಕ್ಕಿದಾಗ ಮುಖ ತೊಳೆದುಕೊಂಡು ವಿಶ್ರಮಿಸಿದರು. ಆಗಲೇ ಅವರಿಗೆ ಸಮಯ ಒಂಭತ್ತಾಗಿದೆ ಎಂದು ತಿಳಿದಿದ್ದು. ಸೂರ್ಯನಿಗಾ ಕಾಡಿನಲ್ಲಿ ಪ್ರವೇಶವನ್ನು ನಿಷೇಧಿಸಲಾಗಿತ್ತು. ತೊರೆಯ ನಂತರ ಸಿಕ್ಕಿದ ಇಳಿಜಾರನ್ನು ಎಲ್ಲರೂ ವೇಗವಾಗಿ ಇಳಿದರು. ಅನಂತರ ಸಿಕ್ಕಿದ ಗುಡ್ಡವನ್ನು ಏದುಸಿರು ಬಿಡುತ್ತಾ ಹತ್ತತೊಡಗಿದರು. ಗುಡ್ಡ ಹತ್ತುತ್ತಿದ್ದಂತೆ ಮರಗಳ ಮೇಲೆ, ಬಂಡೆಗಳ ಹಿಂದಿದ್ದ ನಕ್ಸಲರೆಲ್ಲಾ ಇವರನ್ನು ಸುತ್ತುವರಿಯುತ್ತಾ ನಡೆದರು. ಇನ್ನೈದು ನಿಮಿಷ ಪಯಣಿಸಿದ ನಂತರ ನಕ್ಸಲರ ಕ್ಯಾಂಪ್ ಕಾಣಿಸಿತು.
ಐದು ಡೇರೆ ಹಾಕಿದ್ದರು; ಪ್ಲಾಸ್ಟಿಕ್ ಶೀಟಿನಿಂದ ಮಾಡಿದ ಡೇರೆಗಳು. ಒಂದು ಮೂಲೆಯಲ್ಲಿ ಒಲೆ ಹಚ್ಚಿ ಇಬ್ಬರು ನಕ್ಸಲರು ತಿಂಡಿ ಮಾಡುವುದರಲ್ಲಿ ತೊಡಗಿದ್ದರು. ಸುತ್ತಲಿದ್ದ ಮರಗಳ ಮರೆಯಿಂದ ನಕ್ಸಲರ ಅಭ್ಯಾಸ ಕಾಣುತ್ತಿತ್ತು. ಬಹುತೇಕ ನಕ್ಸಲರ ಕೈಯಲ್ಲಿ ತಪಾಂಚ, ಇನ್ನುಳಿದವರ ಬಳಿ ನಾಡ ಬಂದೂಕುಗಳು, ಕೆಲವರ ಬಳಿ ಎ.ಕೆ.47.
‘ಲಾಲ್ ಸಲಾಮ್’ ನಕ್ಸಲರಿಂದ ಹೊರಟ ಉದ್ಗೋಷ ಕಾಡಿನ ನೀರವತೆಯಲ್ಲಿ ಮಾರ್ದನಿಸಿತು. ‘ಲಾಲ್ ಸಲಾಮ್’ ಕೂಗಿದರೆಂದ ಮೇಲೆ ಅಂದಿನ ಶಸ್ತ್ರಾಭ್ಯಾಸ ಮುಗಿಯಿತೆಂದರ್ಥ. ನಲವತ್ತರ ಆಸುಪಾಸಿನ ಒಬ್ಬ ವ್ಯಕ್ತಿ ಮುಖದಲ್ಲಿ ನಗು ಹೊತ್ತು, ಕಣ್ಣುಗಳಲ್ಲಿ ಆತ್ಮೀಯತೆ ಮತ್ತು ಆತ್ಮವಿಶ್ವಾಸವನ್ನು ತುಂಬಿಕೊಂಡು ಪತ್ರಕರ್ತರು ಕುಳಿತಿದ್ದ ಡೇರೆಯ ಬಳಿ ಬಂದ.
“ಹಲೋ ಫ್ರೆಂಡ್ಸ್. ನನ್ನ ಹೆಸರು ಪ್ರೇಮ್ ಅಂತ. ಸಿ.ಪಿ.ಐ ಮಾವೋವಾದಿ ಸಂಘಟನೆಯ ಕರ್ನಾಟಕದ ಕಾರ್ಯದರ್ಶಿ. ನಿಮ್ಮ ಪರಿಚಯ” ಪತ್ರಕರ್ತರು ತಮ್ಮ ಪರಿಚಯ ಹೇಳಿಕೊಂಡರು.
“ನಿಮ್ಮನ್ನೆಲ್ಲಾ ಇಲ್ಲಿಗೆ ಕರೆಸಿದ ಉದ್ದೇಶ ಹೇಳುವುದಕ್ಕೆ ಮೊದಲು ನಿಮಗೆ ಕೆಲವು ಸೂಚನೆಗಳನ್ನು ಕೊಡಬೇಕು. ದಯವಿಟ್ಟು ಎಲ್ಲಾ ನನ್ನ ಸೂಚನೆಗಳನ್ನು ಪಾಲಿಸಿ. ಎಲ್ಲರಿಗೂ ಅಲ್ಲದಿದ್ದರೂ ನಿಮ್ಮಲ್ಲಿ ಬಹಳಷ್ಟು ಮಂದಿಗೆ ಸಿಗರೇಟಿನ ಚಟವಿರಬೇಕು. ಕಾಡಿನೊಳಗೆ ಯಾರೂ ಸಿಗರೇಟ್ ಸೇದಬೇಡಿ. ಕಾಡಿನ ಪರಿಸರಕ್ಕದು ಹಾನಿಕಾರಕ. ಜೊತೆಗೆ ನಮ್ಮಿರುವಿಕೆ ದೂರದಲ್ಲಿರುವವರಿಗೆ ತಿಳಿಯುವ ಸಾಧ್ಯತೆ ಜಾಸ್ತಿ. ಯಾರೂ ವೀಡಿಯೋ ಕ್ಯಾಮೆರಾಗಳನ್ನು ಉಪಯೋಗಿಸಬೇಡಿ. ಮಾಮೂಲಿ ಕ್ಯಾಮೆರಾಗಳಲ್ಲಿ ಫೋಟೋ ತೆಗೆಯಬೇಕಾದಾಗ ನಮ್ಮ ನಕ್ಸಲ್ ಸ್ನೇಹಿತರ್ಯಾರದೂ ಮುಖ ಕಾಣಿಸೋದು ಬೇಡ. ಫೋಟೋ ತೆಗೆಯಬೇಕೆಂದಾಗ ನಮಗೆ ತಿಳಿಸಿ ಅಥವಾ ಕ್ಯಾಮೆರಾವನ್ನು ನಮ್ಮವರ ಕೈಗೇ ಕೊಡಿ. ನಾವೇ ನಮ್ಮವರ ಫೋಟೋ ತೆಗೆದುಕೊಡುತ್ತೇವೆ. ಎರಡು ಘಂಟೆಯಿಂದ ನಡೆದು ದಣಿದಿರುಬೇಕು. ಅರ್ಧ ಘಂಟೆ ವಿಶ್ರಾಂತಿ ತೆಗೆದುಕೊಳ್ಳಿ. ಅಷ್ಟರಲ್ಲಿ ತಿಂಡಿ ಕೂಡ ತಯಾರಾಗಿರುತ್ತದೆ. ನಂತರ ಮಾತನಾಡೋಣ” ಮೆದುದನಿಯಲ್ಲಿ ಧೃಡವಾಗಿ ತಿಳಿಸಿಹೇಳಿದ ಪ್ರೇಮ್ ಅಡುಗೆಯ ತಯಾರಿ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿನ ಕೆಲಸ ಪರಿಶೀಲಿಸತೊಡಗಿದ.
ಪತ್ರಕರ್ತರೆಲ್ಲಾ ತಮ್ಮ ಬ್ಯಾಗನ್ನು ತೆಗೆದು ಕ್ಯಾಮೆರ ಸಿದ್ಧಗೊಳಿಸಿಕೊಂಡರು. ಪೆನ್ನು, ನೋಟ್ ಪುಸ್ತಕ, ಟೇಪ್ ರೆಕಾರ್ಡರುಗಳನ್ನೆಲ್ಲಾ ಹೊರತೆಗೆದರು.
ಅರ್ಧ ಘಂಟೆಯ ನಂತರ ಎಲ್ಲರಿಗೂ ತಿಂಡಿ ಬಂತು. ಚಿತ್ರಾನ್ನ ಜೊತೆಗೆ ಉಪ್ಪಿನಕಾಯಿ, ಅತಿಥಿಗಳು ಬಂದಿದ್ದಕ್ಕಾಗಿ ಮೂರು ಚಮಚದಷ್ಟು ಕೇಸರಿಬಾತ್. ಪತ್ರಕರ್ತರ ಜೊತೆ ಪ್ರೇಮ್ ಕೂಡ ತಿಂಡಿ ತಿನ್ನುತ್ತಿದ್ದ. ತಿಂಡಿ ತಿನ್ನುತ್ತಿದ್ದ ಸಮಯದಲ್ಲೇ ಒಬ್ಬ ವ್ಯಕ್ತಿ ಗೋಣಿ ಚೀಲದಿಂದ ಬ್ಯಾಗಿನಲ್ಲಿ ದಿನಸಿ ಸಾಮಾನುಗಳನ್ನು ತಂದ. ಕ್ಯಾಂಪಿನಲ್ಲಿ ಎಂದಿಗಿಂತ ಹೆಚ್ಚು ಜನರಿದ್ದುದನ್ನು ಗಮನಿಸಿ “ರಾತ್ರಿಗೆ ಮತ್ತೆ ದಿನಸಿ ತಂದುಕೊಡಬೇಕಾ ಕಾಮ್ರೇಡ್”
“ಬೇಡ. ಇವರೆಲ್ಲಾ ಸಂಜೆ ಹಿಂದಿರುಗುತ್ತಾರೆ. ಹಾಗೂ ರಾತ್ರಿ ದಿನಸಿ ಬೇಕಾದರೆ ನಾವೇ ಬರ್ತೇವೆ. ನೀವು ಬರೋ ತೊಂದ್ರೆ ತೆಗೆದುಕೊಳ್ಳಬೇಡಿ ಚಿನ್ನಪ್ಪಣ್ಣ”
“ಸರಿ ಕಾಮ್ರೇಡ್” ಎಂದ್ಹೇಳಿ ಚಿನ್ನಪ್ಪಣ್ಣ ಕಾಡಿನೊಳಗೆ ಕರಗಿಹೋದ.
ಎಲ್ಲರದೂ ತಿಂಡಿಯಾದ ಮೇಲೆ ಪ್ರೇಮ್ ಮೊದಲು ಮಾತನಾಡಿದ.
“ನಾನು ಹೇಳಬೇಕು ಅಂತಿರೋ ವಿಷಯಗಳನ್ನು ಮೊದಲು ತಿಳಿಸಿಬಿಡುತ್ತೇನೆ. ನಂತರ ನಿಮ್ಮ ಪ್ರಶ್ನೆಗಳನ್ನು ಕೇಳಿ. ಆಗಲೇ ಹೇಳಿದ ಹಾಗೆ ನಾವೆಲ್ಲಾ ಸಿ.ಪಿ.ಐ ಮಾವೋವಾದಿ ಸಂಘಟನೆಗೆ ಸೇರಿದ ನಕ್ಸಲರು. ಕರ್ನಾಟಕಕ್ಕೆ ನಕ್ಸಲ್ ಚಳುವಳಿ ಹೊಸದಲ್ಲ. ರಾಯಚೂರು, ಪಾವಗಡ, ಗುಲ್ಬರ್ಗ ಮುಂತಾದೆಡೆ ನಕ್ಸಲ್ ಚಳುವಳಿ ಸಕ್ರಿಯವಾಗಿದೆ. ಮಲೆನಾಡಿಗೆ ನಕ್ಸಲ್ ಚಳುವಳಿ ನಿಮ್ಮ ದೃಷ್ಟಿಯಲ್ಲಿ ಹೊಸದಿರಬಹುದು. ಆದರೆ ನಾಲ್ಕೈದು ವರುಷಗಳಿಂದ ಇಲ್ಲಿ ಚಳುವಳಿ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಕಾಡಿನೊಳಗೆ ನಕ್ಸಲೈಟ್ಸ್ ಇದ್ದಾರೆ ಎಂದು ನಾಡಿನವರಿಗೆ ತಿಳಿದಿದ್ದು ಬಹುಶಃ ಪಾರ್ವತಿ ಮತ್ತು ಹಾಜಿಮಾರ ಹತ್ಯೆಯಾದಾಗಲೇ ಇರಬೇಕೆಂದು ಭಾವಿಸುತ್ತೇನೆ. ಮಲೆನಾಡಿನಲ್ಯಾಕೆ ನಕ್ಸಲ್ ಚಳುವಳಿ ಎಂಬುದೇ ನಿಮ್ಮ ಮೊದಲ ಪ್ರಶ್ನೆಯಾಗಿರುತ್ತಲ್ವಾ? ದೂರದ ಬೆಂಗಳೂರಿನಲ್ಲಿ ಕುಳಿತು ಬಹಳಷ್ಟು ಜನ ಬರೆದಿದ್ದೀರಾ – ಬಯಲುಸೀಮೆಯಲ್ಲಿ ಪೋಲೀಸರ ಹಾವಳಿ ಜಾಸ್ತಿಯಾಗಿರುವುದರಿಂದ ಅಡಗಿಕೊಳ್ಳಲು ಸೂಕ್ತ ತಾಣವಾಗಿರುವುದರಿಂದ ಮಲೆನಾಡಿಗೆ ಬಂದಿದ್ದಾರೆ ಎಂದು. ಅದು ತಪ್ಪು ತಿಳುವಳಿಕೆ. ಪೋಲೀಸರ ಹಾವಳಿ ಇದೆ ಅನ್ನೋ ಕಾರಣಕ್ಕೆ ಕರ್ನಾಟಕದ ಬಯಲುಸೀಮೆಯಲ್ಲಾಗಲೀ ಆಂಧ್ರದಲ್ಲಾಗಲೀ ನಕ್ಸಲ್ ಚಳುವಳಿ ನಿರ್ನಾಮಹೋಗಿದೆಯಾ? ಇಲ್ಲವಲ್ಲ. ನಕ್ಸಲರು ನೂರಾರು ಮಂದಿ ಸತ್ತಿರಬಹುದು. ಆದರೆ ನಕ್ಸಲ್ ಚಳುವಳಿ ಇನ್ನೂ ಸತ್ತಿಲ್ಲ. ಅದಿಕ್ಕೆ ಕಾರಣ ಇನ್ನೂ ಮುಂದುವರೆಯುತ್ತಿರುವ ಭೂಮಾಲೀಕರ ದೌರ್ಜನ್ಯ, ಸರಕಾರದ ಅಸಮರ್ಥ ಕಾರ್ಯವೈಖರಿ. ಮಲೆನಾಡಿನಲ್ಲಿ ನಕ್ಸಲ್ ಚಳುವಳಿ ಹುಟ್ಟು ಹಾಕಲು ಪ್ರಮುಖ ಕಾರಣ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ. ಪತ್ರಕರ್ತರಿಗೆ ಬಿಡಿಸಿ ಹೇಳೋ ಅವಶ್ಯಕತೆಯಿಲ್ಲಾ. ಈ ಯೋಜನೆಯಡೆ ಪಶ್ಚಿಮಘಟ್ಟಗಳಲ್ಲಿ ವಾಸಿಸುತ್ತಿರುವ ಎಲ್ಲಾ ಗಿರಿಜನರನ್ನು ಒಕ್ಕಲೆಬ್ಬಿಸಬೇಕೆಂದಿದ್ದಾರೆ. ತಲತಲಾಂತರದಿಂದ ಕಾಡಿನೊಡನೆ ಸಹೋದರ ಭಾವನೆ ಬೆಳೆಸಿಕೊಂಡಿರುವ ಜನರನ್ನು ಇದ್ದಕ್ಕಿದ್ದಂತೆ ಹೊರಗೋಡಿಸಿಬಿಟ್ಟರೆ ಅವರ ಗತಿ ಏನಾಗಬೇಕು? ನಮ್ಮ ಹೋರಾಟದ ಮೊದಲ ಆದ್ಯತೆ ಈ ಯೋಜನೆಯ ವಿರುದ್ಧ. ನಾವೀ ಕಾಡಿನೊಳಗೆ ಬಂದಿದ್ದೂ ಈ ಕಾರಣಕ್ಕಾಗಿಯೇ. ಬಹಳಷ್ಟು ಸ್ಥಳೀಯ ಜನರೂ ನಮ್ಮೀ ಅಭಿಪ್ರಾಯಕ್ಕಿ ಬೆಂಬಲ ಸೂಚಿಸಿ ನಮ್ಮ ಸಂಘಟನೆ ಸೇರಿದ್ದಾರೆ. ಇಲ್ಲೂ ಕೂಡ ಕಡಿಮೆ ಕೂಲಿ ಕೊಡೋ ಭೂಮಾಲೀಕರಿದ್ದಾರೆ. ಅವರ ವಿರುದ್ಧವೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇದರ ಜೊತೆಗೆ ಸರ್ಕಾರದ ಭಾಗವಾಗಿರೋ ಕೆಲವು ಜನರಿಂದ ಕಾಡುಗಳ್ಳತನ ನಿರಾತಂಕವಾಗಿ ಮುಂದುವರೆಯುತ್ತಿದೆ. ಕಾಡಿನ ಪರಿಸರವನ್ನು ಉಳಿಸುವ ಉದ್ದೇಶದಿಂದಾಗಿ ಅವರ ವಿರುದ್ಧ ಉಗ್ರ ಸ್ವರೂಪದ ಹೋರಾಟವನ್ನೇ ಕೈಗೊಳ್ಳುತ್ತೇವೆ” ಪ್ರೇಮ್ ಮಾತು ನಿಲ್ಲಿಸಿದ.

ಮುಂದುವರೆಯುವುದು....

No comments:

Post a Comment