Apr 2, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 24



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 23 ಓದಲು ಇಲ್ಲಿ ಕ್ಲಿಕ್ಕಿಸಿ
ಸುssss....ಯ್ ಬೀಸುತ್ತಿದ್ದ ಗಾಳಿಗೆ ತರಗಲೆಗಳು ಪಟ ಪಟ ಹೊಡೆದುಕೊಳ್ಳುತ್ತಿತ್ತು. ಕೆರೆಯ ನೀರು ತುಯ್ದಾಡುತ್ತಿತ್ತು. ಕುಕ್ಕರಹಳ್ಳಿ ಕೆರೆಯ ಒಂದು ದಡದಲ್ಲಿ ಯಾರೂ ಹೆಚ್ಚು ಓಡಾಡದ ದಾರಿಯಲ್ಲಿ ಕುಳಿತಿದ್ದರು ಲೋಕಿ ಮತ್ತು ಸಯ್ಯದ್. ಅದೇ ದಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಪೋಲೀಸ್ ಭವನದಲ್ಲಿ ರೂಪಾಳ ಮದುವೆ. ಬೇಸರ ಕಳೆಯಲು ಸಯ್ಯದ್ ಲೋಕಿಯನ್ನು ಕುಕ್ಕರಹಳ್ಳಿ ಕೆರೆಗೆ ಕರೆದುಕೊಂಡು ಬಂದಿದ್ದ.
“ನಿಮ್ಮಿಬ್ಬರ ಪ್ರೀತಿಯಲ್ಲಿ ಬಿರುಕ್ಯಾವಾಗ ಮೂಡಿತು ಸಯ್ಯದ್?”
ಕಂಡೂ ಕಾಣದಂತೆ ಇಣುಕುತ್ತಿದ್ದ ಕಣ್ಣಂಚಿನ ನೀರನ್ನು ಬೆರಳ ತುದಿಯಿಂದ ಒರೆಸಿಕೊಳ್ಳುತ್ತ “ಒಂದು ತಿಂಗಳ ಹಿಂದಿನವರೆಗೂ ಎಲ್ಲಾ ಸರಿಯಾಗೇ ಇತ್ತು. ರೂಪಾಳಿಗೆ ಅವಳ ತಂದೆ ತಾಯಿ ಗಂಡು ಹುಡುಕುತ್ತಿದ್ದರು. ಇವಳನ್ನು ನೋಡಿದ ಆಕಾಶ್ ಇವಳನ್ನೊಪ್ಪಿದ”
“ಆಕಾಶ್ ಜೊತೆಯಲ್ಲೇನಾ ಇವಳ ಮದುವೆಯಾಗ್ತಿರೋದು”
“ಹ್ಞೂ”
“ನಾಲ್ಕು ವರ್ಷದ ಪ್ರೇಮಕ್ಕೆ ತಿಲಾಂಜಲಿ ಇಟ್ಟುಬಿಟ್ಟಳಾ?”
“ಅವಳದೂ ತಪ್ಪಿಲ್ಲ ಲೋಕಿ. ಮೂವತ್ತು ಸಾವಿರ ಸಂಬಳ ತರುವ ಸಾಫ್ಟ್ ವೇರ್ ಇಂಜಿನಿಯರ್ ಬೇಕಾ, ಆರೇಳು ಸಾವಿರ ತರುವ ಪತ್ರಕರ್ತ ಬೇಕಾ ಅಂದ್ರೆ ಯಾರಾದ್ರೂ ಇದೇ ಕೆಲಸ ಮಾಡುತ್ತಿದ್ದರೇನೋ?”
“ಆದರೂ...”
“ಹೋಗಲಿ ಬಿಡು. ಈಗ್ಯಾಕೆ ಆ ವಿಷಯ”
ಕೆಲ ಸಮಯ ಇಬ್ಬರೂ ವಾತಾವರಣದಲ್ಲಿದ್ದ ನಿರ್ಲಿಪ್ತತೆಯನ್ನು ಅನುಭವಿಸುತ್ತ ಕುಳಿತು. ಸಯ್ಯದನ ಫೋನ್ ರಿಂಗಣಿಸಿತು.
“ಹಲೋ”
“........”
“ಹೇಳಿ ಸರ್”
“..........”
“ಸರಿ ಸರ್. ಯಾವಾಗ ಹೊರಡಲಿ ಸರ್”
“..........”
“ರಾತ್ರಿ ಒಂಭತ್ತೂವರೆಗಾ ಸರ್. ಓಕೆ. ಈಗ ಬಸ್ ಸ್ಟ್ಯಾಂಡಿಗೆ ಹೋಗಿ ರಿಸರ್ವೇಷನ್ ಮಾಡಿಸಿಬಿಟ್ಟು ಆಫೀಸಿಗೆ ಬರ್ತೀನಿ ಸರ್”
“ಯಾರದು ಫೋನು?”
“ಕಾಂತರಾಜ್ ಸರ್ ಮಾಡಿದ್ರು”
“ಏನು ವಿಷಯ?”
“ಕೆಲಸದ ಮೇಲೆ ಶೃಂಗೇರಿಗೆ ಹೋಗಬೇಕಂತೆ. ಇವತ್ತು ರಾತ್ರಿಯೇ ಹೊರಡಬೇಕು”
“ಒಳ್ಳೇದಾಯ್ತು ಬಿಡು. ಏನಾದರೂ ಕೆಲಸದಲ್ಲಿ ತೊಡಗಿಕೊಂಡರೆ ಮನಸ್ಸಿನ ಬೇಸರ ಕಳೆಯೋದಿಕ್ಕೆ ಅನುಕೂಲವಾಗುತ್ತೆ”
“ಹ್ಞೂ. ಅದು ಸರಿಯೇ. ಹೊರಡೋಣ್ವಾ ಲೋಕಿ. ಬಸ್ ಸ್ಟ್ಯಾಂಡಿಗ್ಹೋಗಿ ರಿಸರ್ವೇಶನ್ ಮಾಡಿಸಿಕೊಂಡು ಕಾಂತರಾಜ್ ಸರ್ ಭೇಟಿಯಾಗಬೇಕು. ಮಾತನಾಡಬೇಕಂತೆ”
“ಸರಿ ಸಯ್ಯದ್. ಹೋಗ್ತಾ ನನ್ನನ್ನು ಕಾಲೇಜಿನ ಬಳಿ ಬಿಟ್ಟುಬಿಡು”
“ಓಕೆ”
ಕಾಲೇಜು ಗೇಟಿನ ಬಳಿ ಲೋಕಿಯನ್ನು ಬಿಟ್ಟು ಸಯ್ಯದ್ ಹೊರಟ. ಲೋಕಿ ತರಗತಿಗೆ ಬಂದ. ಲೆಕ್ಚರರ್ರುಗಳ್ಯಾರು ಇನ್ನೂ ಬಂದಿರಲಿಲ್ಲ. ತರಗತಿ ಗಿಜಿಗುಡುತ್ತಿತ್ತು ಪೂರ್ಣಿ ಲೋಕಿಯನ್ನು ನೋಡಿ ಮುಗುಳ್ನಕ್ಕಳು. ಪಕ್ಕದಲ್ಲಿ ಕುಳಿತಿದ್ದ ಸಿಂಚನಾ; ಅವರ ಹಿಂದಿನ ಬೆಂಚಿನಲ್ಲಿ ಗೌತಮ್. ಸಿಂಚನಾ ಗೌತಮ್ ಮಾತನಾಡುತ್ತ ನಗಾಡುತ್ತಿದ್ದರು. ಇವನು ಬದಲಾಗೋದಿಲ್ಲ ಎಂದುಕೊಂಡ ಲೋಕಿ. ಗೌತಮ್ ಲೋಕಿಯನ್ನು ನೋಡಿ ನಗುವುದನ್ನು ನಿಲ್ಲಿಸಿ ತಲೆತಗ್ಗಿಸಿದ. ಹಿಂದಿನ ದಿನದ ಕುಡಿತದ ಕುರುಹಾಗಿ ಕಣ್ಣು ಕೆಂಪಗಾಗಿತ್ತು.
* * *
“ಒಳಗೆ ಬರಬಹುದಾ ಸರ್”
“come in sayyad”
“ಟಿಕೆಟ್ ಬುಕ್ ಮಾಡಿಸಿದಾ ಸಯ್ಯದ್”
“ಮಾಡಿಸಿದೆ ಸರ್. ವಿಷಯ ಏನು ಅಂತ ತಿಳಿಯಲಿಲ್ಲ”
“ವಿಷಯ ತುಂಬಾ ರಹಸ್ಯವಾಗಿರಬೇಕು. ನೀನು ಶೃಂಗೇರಿಗೆ ಹೋಗಿ ವಾಪಸ್ಸಾಗುವವರೆಗೂ ಯಾರಿಗೂ ತಿಳಿಯುವುದೂ ಬೇಡ”
“ಸರಿ ಸರ್”
“ಪಾರ್ವತಿ ಮತ್ತು ಹಾಜೀಮಾರ ಹೆಸರು ನೆನಪಿದೆಯಾ?”
“ಪೋಲೀಸ್ ಎನ್ ಕೌಂಟರಿನಲ್ಲಿ ಸತ್ತ ನಕ್ಸಲರು ತಾನೇ?”
“ಹೌದು. ಎನ್ ಕೌಂಟರ್ ಆದ ಮೇಲೆ ಮಲೆನಾಡಿನಲ್ಲಿ ನಕ್ಸಲಿಸಂ ಸಂಪೂರ್ಣವಾಗಿ ನಿರ್ನಾಮವಾಗಿದೆಯೆಂದೇ ಎಲ್ಲರೂ ತಿಳಿದಿದ್ದರು. ಆದರೆ ಅವರ ಸಾವಿನಿಂದೆದ್ದ ಅನುಕಂಪದ ಅಲೆಯಲ್ಲಿ ಸಂಘಟನೆ ಮತ್ತಷ್ಟು ಬಲವಾಗಿದೆಯಂತೆ. ನಕ್ಸಲರು ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸಲು ರಾಜ್ಯದ ಕೆಲವು ಪ್ರಮುಖ ಪತ್ರಿಕೆಗಳ ವರದಿಗಾರರನ್ನು ಕರೆಸಿಕೊಳ್ಳುತ್ತಿದ್ದಾರೆ. ಇವತ್ತು ಬೆಳಿಗ್ಗೆ ನನಗೂ ಫೋನ್ ಮಾಡಿ ಒಬ್ಬ ನಂಬಿಗಸ್ಥ ಪತ್ರಕರ್ತನನ್ನು ಶೃಂಗೇರಿಗೆ ಕಳುಹಿಸಿ ಎಂದು ಹೇಳಿದ್ದಾರೆ. ಅದಿಕ್ಕೆ ನಿನಗೆ ಬರಲು ಹೇಳಿದೆ. ಹೋಗೋದಿಕ್ಕೆ ನಿನಗೇನೂ ತೊಂದರೆ ಇಲ್ಲಾ ಅಲ್ವಾ?”
“ನನಗ್ಯಾಕೆ ಸರ್ ತೊಂದರೆ. ನಿಜಕ್ಕೂ ನಕ್ಸಲರನ್ನು ಕಂಡು ಅವರ ಸಂದರ್ಶನ ಪಡೆಯಬೇಕು ಅನ್ನೋ ವಿಚಾರ ನನ್ನ ಮನದಲ್ಲೂ ಇತ್ತು. ನಕ್ಸಲಿಸಂ ಬಗ್ಗೆ ನಿಮ್ಮ ಅಭಿಪ್ರಾಯ ಹೇಗಿದೆಯೋ ಏನೋ ಎಂದುಕೊಂಡು ತಿಳಿಸಿರಲಿಲ್ಲ”
“ಅತಿಯಾದ ಉತ್ಸಾಹ ತೋರಿ ಅವರ ಬಗ್ಗೆ ಅತಿ ರಂಜಿತವಾಗಿ ಬರೆಯಬೇಡ ಸಯ್ಯದ್. ಅವರು ಮಾಡ್ತಿರೋದು ಸರಿಯೋ ತಪ್ಪೋ ಅಂತ ವಿಮರ್ಶೆ ಮಾಡೋದು ಕಷ್ಟವೂ ಹೌದು. ನಮಗದರ ಅವಶ್ಯಕತೆಯೂ ಇಲ್ಲ. ಅವರೇನು ಮಾಡ್ತಿದ್ದಾರೆ ಅನ್ನೋದರ ವರದಿ ಮಾಡಿದರೆ ಸಾಕು”
“ಸರಿ. ಸರ್”
ಮೇಜಿನ ಮೇಲೆ ಒಂದಷ್ಟು ದುಡ್ಡು, ಜೊತೆಗೆ ಒಂದು ಡಿಜಿಟಲ್ ಕ್ಯಾಮೆರಾ ಇಟ್ಟು “ತಗೋ” ಅಂದರು. ದುಡ್ಡನ್ನು ಜೇಬಿಗೆ ಹಾಕಿಕೊಂಡು ಕ್ಯಾಮೆರಾವನ್ನು ಬ್ಯಾಗಿಗಿಳಿಸಿ ಮನೆಯ ಕಡೆ ಹೊರಟನು ಸಯ್ಯದ್.
ರಾತ್ರಿಯ ಬಸ್ಸಿಗೆ ಶೃಂಗೇರಿಗೆ ಹೊರಟನು ಸಯ್ಯದ್.
* * *
“ನೀನೂ ಈ ರೀತಿ ಮಾಡುತ್ತೀಯೆಂದು ನಾನೆಣಿಸಿರಲಿಲ್ಲ ಅಣ್ಣ” ನೀರವ ರಾತ್ರಿಯಲ್ಲಿ ತೇಲಿಬಂದ ನಿರ್ಭಾವುಕ ದನಿ ಮಹಡಿಯ ಮೇಲೆ ಮಂದ ಬೆಳಕಿನ ದೀಪದ ಕೆಳಗೆ ಕುಳಿತು ಸಿಗರೇಟು ಸೇದುತ್ತಾ ಲೇಖನ ಬರೆಯುವುದರಲ್ಲಿ ಮಗ್ನನಾಗಿದ್ದ ಲೋಕಿಯನ್ನು ಬೆಚ್ಚಿಬೀಳಿಸಿತು.
“ಘಂಟೆ ಹನ್ನೆರಡಾದರೂ ನಿದ್ರೆ ಬರಲಿಲ್ವಾ ವಿಜಯ್?”
“ಉಹ್ಞೂ”
“ಬಾ, ಕುಳಿತುಕೋ”
ವಿಜಯ್ ಬಂದು ಲೋಕಿಯ ಪಕ್ಕ ಗೋಡೆಗೊರಗಿ ಕುಳಿತ.
“ಯಾಕೆ ವಿಜಿ ಬೇಸರದಲ್ಲಿದ್ದೀಯಾ?”
“ಕಾರಣ ಹೇಳಬೇಕು ಅಂತೀಯಾ?” ಲೋಕಿಯ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೇಳಿದ ವಿಜಯ್.
ಅವನ ದೃಷ್ಟಿಯನ್ನೆದುರಿಸಲಾರದೆ “ಸಾರಿ ವಿಜಿ” ಎಂದ್ಹೇಳಿ ತಲೆತಗ್ಗಿಸಿದ. ಇವನ ಮುಖದಲ್ಲಿ ನಗು ನೋಡಿ ಎಷ್ಟು ದಿನಗಳು ಕಳೆದುಹೋಯ್ತಲ್ಲ ಎಂದುಕೊಂಡು. ಉಳಿದಿದ್ದ ಕಾಲುಭಾಗ ಸಿಗರೇಟನ್ನು ಸೇದಿ ಬಿಸಾಡುವವರೆಗೂ ವಿಜಿ ಮಾತನಾಡಲಿಲ್ಲ.
“ಎಲ್ರೂ ಸೇರಿ ನನಗ್ಯಾಕೆ ಅನ್ಯಾಯ ಮಾಡಿದ್ರಿ”
    
“ಅಪ್ಪನ ವಿಷ್ಯ ಬಿಡು. ಅವರ್ಯಾವತ್ತೂ ಅನ್ಯಾಯದೆದುರು ಹೋರಾಡಿದವರಲ್ಲ. ನ್ಯಾಯ ತಮ್ಮ ಕಡೆಗೇ ಇದ್ದರೂ ದೊಡ್ಡ ದನಿಯಲ್ಲಿ ಕೇಳಿದವರಲ್ಲ. ಆದರೆ ನಿನಗೇನಾಗಿತ್ತು? ಮುಂಚಿನಿಂದ ಅತಿ ಎನ್ನಿಸುವಷ್ಟು ಆದರ್ಶ, ನ್ಯಾಯ, ಧರ್ಮ ಎಂದು ಮಾತನಾಡುತ್ತಿದ್ದೆ. ಅನ್ಯಾಯದ ವಿರುದ್ಧ ಮುಂದಾಳತ್ವ ವಹಿಸಿ ಹೋರಾಡುತ್ತಿದ್ದೆ. ನೀನು ಕೂಡ ಅವರು ನೀಡಿದ ಹಣ ನೋಡಿದ ಕೂಡಲೇ ಸುಮ್ಮನಾಗಿಬಿಟ್ಟೆಯಾ?”
“ನಿನಗ್ಯಾರೇಳಿದ್ದು ವಿಜಿ, ಅಪ್ಪ ಹಣ ತೆಗೆದುಕೊಂಡಿರೋ ವಿಷಯ”
“ಸ್ನೇಹಾ ಹೇಳಿದ್ಲು”
“ನಾನೆಲ್ಲಿ ತಪ್ಪು ಮಾಡಿದೆ ಅನ್ನೋದೆ ತಿಳೀತಾ ಇಲ್ಲ ವಿಜಿ. ಅಪ್ಪ, ಆ ಇನ್ಸ್ ಪೆಕ್ಟರ್ ವಿಕ್ರಮ್, ನಿಮ್ಮ ಸ್ಕೂಲಿನ ಪ್ರಿನ್ಸಿಪಾಲ್ ಎಲ್ಲಾ ಸೇರಿ ನನ್ನ ಬ್ರೈನ್ ವಾಷ್ ಮಾಡಿದ್ರೋ ಅಥವಾ ನೀನು ಹೇಳಿದ ಹಾಗೆ ನಾನೂ ಕೂಡ ಹಣದ ಆಮಿಷಕ್ಕೆ ಬಲಿಯಾಗಿಬಿಟ್ಟೆನಾ? ನನಗಂತೂ ತಿಳೀತಿಲ್ಲ”
“ಬೇಸರದಿಂದ ಆ ಮಾತನ್ನು ಹೇಳಿದೆ ಅಣ್ಣ. ನೀನಂತವನಲ್ಲ ಅನ್ನೋ ನಂಬಿಕೆಯಿದೆ ನನಗೆ. ಹೋಗ್ಲಿ ಬಿಡು. ಮುಂದಿನ ವಾರದಿಂದ ಶಾಲೆಗೆ ಹೋಗಬೇಕೆಂದಿದ್ದೇನೆ”
“ಯಾವ ಶಾಲೆಗೆ ಸೇರುತ್ತೀಯಾ?”
“ಯಾವ ಶಾಲೆಗೆ ಅಂದ್ರೆ? ಮತ್ತದೇ ನೆಹರೂ ವಿದ್ಯಾಸಂಸ್ಥೆಗೆ”
“ಬೇಡ ವಿಜಯ್. ಇಲ್ಲೇ ಯಾವುದಾದ್ರು ಶಾಲೆಗೆ ಸೇರು. ಅಲ್ಲಿಗೆ ಹೋದರೆ ಹಳೆಯ ನೆನಪುಗಳು ಕಾಡುತ್ವೆ”
“ಹಾಗೇನೂ ಇಲ್ಲ ಅಣ್ಣಾ. ನೆನಪುಗಳಿಗೇನು. ಎಲ್ಲಿದ್ದರೂ ಕಾಡುತ್ತವೆ. ಅವನ್ಯಾರೋ ಒಬ್ಬ ಮಾಡಿದ ತಪ್ಪಿಗೆ ಅಷ್ಟು ಒಳ್ಳೆಯ ಸಂಸ್ಥೆಯನ್ನು ಬಿಟ್ಟು ನನ್ನ ವಿದ್ಯಾಭ್ಯಾಸವನ್ಯಾಕೆ ಹಾಳು ಮಾಡಿಕೊಳ್ಳಲಿ”
“ಇಷ್ಟು ದೃಡತೆ ಇದೆಯಲ್ಲ, ಸಾಕು ಬಿಡು. ನಾಳೆ ಅಪ್ಪನಿಗೆ ಈ ವಿಷ್ಯ ತಿಳಿಸ್ತೀನಿ. ಅಷ್ಟು ಸುಲಭವಾಗಿ ಅವರು ಒಪ್ಪೋದು ಕಷ್ಟ”
“ಅವರು ಒಪ್ಪಿದ್ರೂ ಅಷ್ಟೇ, ಒಪ್ಪದಿದ್ರೂ ಅಷ್ಟೇ. ನಾನು ಅದೇ ಶಾಲೆಗೆ ಹೋಗೋದು” ಅಪ್ಪನ ಬಗ್ಗೆ ಮಾತನಾಡುವಾಗ ವಿಜಿಯ ದನಿಯಲ್ಲಿ ಕಂಡ ಕಾಠಿಣ್ಯವನ್ನು ಗಮನಿಸಿದ ಲೋಕಿ.
“ಅಪ್ಪನ ವಿರುದ್ಧ ಇಷ್ಟೊಂದು ಕಠಿಣವಾಗಿ ವರ್ತಿಸಬೇಡ ಲೋಕಿ. ಅವರ ಮನಃಸ್ಥಿತಿ ಹೇಗಿರುತ್ತೋ ನಮಗೇನು ತಿಳಿಯುತ್ತೆ”
“ಸರಿ” ಒರಟುತನದಿಂದ ಉತ್ತರಿಸಿ ಹೊರಟುಹೋದ ವಿಜಯ್.

ಮುಂದುವರೆಯುವುದು...

No comments:

Post a Comment