ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ
ಕೈಯಿಟ್ಟ ವ್ಯಕ್ತಿ ಎ.ಎಸ್.ಐ
ರಾಮಸ್ವಾಮಿ!!
“ಉನ್ನದು ಎಂದ ಊರು” (ನಿನ್ನದ್ಯಾವ ಊರು)
“ಮೈಸೂರು” ನಡೆದ ಘಟನೆಗಳಿಂದ
ಕೊಂಚ ಅಧೀರನಾಗಿದ್ದ ಲೋಕಿ ಮೆಲ್ಲನೆ ತಗ್ಗಿದ ದನಿಯಲ್ಲಿ ಉತ್ತರಿಸಿದ.
“ಕೊಂಚ ಕೊಂಚ” (ಸ್ವಲ್ಪ ಸ್ವಲ್ಪ)
“ನೀ ಎದರ್ ಕ್ ಕೋವಿಲ್ ಕುಳ್ಳೋ
ಪೋಲೆ?” (ನೀನ್ಯಾಕೆ ಅಮ್ಮನವರ ಗುಡಿಯೊಳಗೆ ಹೋಗಲಿಲ್ಲ)
“ನಂಬಿಕೆಯಿಲ್ಲೈ ಸಾರ್”
ನಾಸ್ತಿಕರಾಗಿದ್ದ
ರಾಮಸ್ವಾಮಿಗೆ ಲೋಕಿ ಇಷ್ಟವಾಗಿ ಮಧುರೈ ಬಿಡುವವರೆಗೂ ಲೋಕಿಯ ಜೊತೆಯೇ ಇದ್ದರು. ದೇವರು ದಿಂಡಿರ ಬಗ್ಗೆ
ಚರ್ಚಿಸುತ್ತಿದ್ದರು. ಆಧ್ಯಾತ್ಮದ ಬಗ್ಗೆ ತಿಳಿಸುತ್ತಿದ್ದರು. ಆಧ್ಯಾತ್ಮಕ್ಕೂ ಕುರುಡು ನಂಬುಗೆಗೂ
ಇದ್ದ ವ್ಯತ್ಯಾಸವನ್ನು ತಿಳಿಹೇಳುತ್ತಿದ್ದರು. ಲೋಕಿಗೆ ಅವರ ತಮಿಳು ಭಾಷೆ ಎಷ್ಟರಮಟ್ಟಿಗೆ ಅರ್ಥವಾಯಿತೋ.
ಸಿಗುವ ಫಿಯೆಟ್ ಕಾರಿನ ಬಗ್ಗೆಯೇ ಯೋಜನೆಯಿದ್ದವನಿಗೆ ಆಧ್ಯಾತ್ಮದ ಮಾತುಗಳನ್ನು ಕೇಳುವುದು ಕಷ್ಟವಾದರೂ
ವಿಧಿಯಿರಲಿಲ್ಲ. ಇದರ ಮಧ್ಯೆ ಆ ಮಹಿಳೆ ಲೋಕಿಯನ್ನು ಹಿಂಬಾಲಿಸುತ್ತಾ ಹೋಟೆಲಿನೊಳಗೂ ಬಂದಿದ್ದಳು. ಲೋಕಿಯ
ಪಕ್ಕದಲ್ಲೇ ಕುಳಿತಿದ್ದ ಇನ್ಸ್ ಪೆಕ್ಟರರನ್ನು ನೋಡಿ ನಿರಾಶೆಯಿಂದ ಮರಳಿದ್ದಳು. ಆಕೆ ತಿಳಿಸಬೇಕೆಂದಿದ್ದು
“ಬಾಂಬ್ ಎಸ್.ಐ” ವಿಷಯ!
ಮಧುರೈಯನ್ನು ಮಧ್ಯಾಹ್ನ ಒಂದು
ಘಂಟೆಗೆ ಬಿಟ್ಟು ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿರುವ ಕೊಟ್ಟಾಯಮ್ ಜಲಪಾತಕ್ಕೆ ಹೊರಟರು.
ಅಲ್ಲೂ ಮತ್ತೆ ಪೋಲೀಸರ ರಕ್ಷಣೆ; ಲೋಕಿಗದು ಕಾಟ. ಮನದ ಆಲೋಚನೆಗಳನ್ನು ಬದಿಗಿರಿಸಿ ಲೋಕಿ ಪ್ರಕೃತಿ
ಸೌಂದರ್ಯವನ್ನು ಕಣ್ತುಂಬಿಕೊಂಡ. ಮಳೆ ಸಣ್ಣಗೆ ಜಿನುಗಲು ಪ್ರಾರಂಭಿಸಿತು. ಮಳೆಯಲ್ಲಿ ನೆನೆಯುತ್ತಾ
ಸಿಂಚನಾ ಮತ್ತು ಗೌತಮ್ ಇದ್ದ ಇದ್ದ ಒಂದೇ ಜರ್ಕಿನ್ನನ್ನು ತಲೆಯ ಮೇಲೆ ಹಿಡಿದುಕೊಂಡು ಹೋಗುತ್ತಿದ್ದರು.
ಸಿಂಚನಾಳ ಕೈ ಗೌತಮನ ಕೈಯೊಳಗೆ ಬೆಸೆದುಕೊಂಡಿತ್ತು. ಪಾಪ ಅನ್ನಿಸಿತು ಅವರೀರ್ವರ ಬಗ್ಗೆ.
ಅವರಿಂದೆ ಬರುತ್ತಿದ್ದ ಪೂರ್ಣಿಮಾ
ಆಸೆಗಣ್ಣಿಂದ ಲೋಕಿಯೆಡೆಗೆ ನೋಡಿದಳು. ಗಮನಿಸದವನಂತೆ ಜಲಪಾತದೆಡೆಗೆ ಮುಖಮಾಡಿದ. ಎಷ್ಟೇ ನಿಗ್ರಹಿಸಿಕೊಂಡರೂ
ಮೈಮನಗಳನ್ನು ಪುಳಕಿತಗೊಳಿಸುವಂತೆ ಜಿನುಗುತ್ತಿದ್ದ ಮಳೆ, ಬೀಸುತ್ತಿದ್ದ ತಣ್ಣನೆಯ ಗಾಳಿ ಮನದಲ್ಲಿ
ಕಾಮಾಧಿ ಭಾವನೆಗಳನ್ನು ಹುಟ್ಟುಹಾಕುತ್ತಿದ್ದವು. ಮನವನ್ನು ಉದ್ರೇಕಿಸುತ್ತಿದ್ದ ತಣ್ಣನೆಯ ವಾತಾವರಣವನ್ನು
ತೊಡೆದುಹಾಕುವಂತೆ ಲೋಕಿ ಸಿಗರೇಟು ಹಚ್ಚಿದ.
ಕೊಟ್ಟಾಯಮ್ ಜಲಪಾತದಲ್ಲೂ ಮಹತ್ತರವಾದುದೇನೂ
ಘಟಿಸಲಿಲ್ಲ. ಮತ್ತೆ ಮಧುರೈಗೆ ಹಿಂದಿರುಗಿದರು. ಬೆಳಿಗ್ಗೆ ಐದು ಘಂಟೆಗೆ ಮಧುರೈ ಬಿಟ್ಟು ಕೊಡೈಕೆನಾಲಿನತ್ತ
ಪ್ರಯಾಣ ಬೆಳೆಸಿದರು. ‘ಇವತ್ತೇ ಕೊನೆ ದಿನ. ಇವತ್ತೂ ಯಾರೂ ಭೇಟಿಯಾಗದಿದ್ದರೆ? ನನ್ನ ಚಂಚಲ ಮನಸ್ಸು
ಬಹುಶಃ ಅವರಿಗೂ ತಿಳಿದುಹೋಯಿತಾ? ಆ ಮಹಿಳೆ ಬೇರೆ ನನ್ನನ್ನು ನೋಡಲು ಬಂದಿದ್ದಳು. ಯಾವ ಸೂಚನೆ ಕೊಡಬೇಕಿತ್ತೋ
ಏನೋ? ಆ ರಾಮಸ್ವಾಮಿಯವರು ನನ್ನ ಬಳಿ ಬಂದು ಆಕೆ ಹೊರಟುಹೋಗುವಂತೆ ಮಾಡಿಬಿಟ್ಟರು. ಇವತ್ತು ಏನಾಗುತ್ತೋ?’
ಕೊಡೈಕೆನಾಲ್ ತಲುಪಿ ತಿಂಡಿ
ತಿಂದು ‘ಗುನಾ ಕೇವ್’ ‘ಪಿಲ್ಲರ್ ರಾಕ್’ ‘ಸ್ಯೂಸೈಡ್ ಪಾಯಿಂಟ್’ ಮುಂತಾದ ಸ್ಥಳಗಳನ್ನೆಲ್ಲಾ ನೋಡಿಕೊಂಡು
ಸಂಜೆಯ ವೇಳೆಗೆ ‘ಲೇಕ್’ ಬಳಿಗೆ ಬಂದರು. ಆ ದೊಡ್ಡ ಕೆರೆಯ ಸುತ್ತ ಇದ್ದ ರಸ್ತೆಯನ್ನು ಒಂದು ಸುತ್ತು
ಸುತ್ತಲು ಬಾಡಿಗೆಗೆ ಸೈಕಲ್ ಕೊಡುತ್ತಿದ್ದರು. ಹತ್ತು ರುಪಾಯಿಯ ಬಾಡಿಗೆ. ಸೈಕಲ್ ತುಳಿಯೋದಿಕ್ಕೆ ಯಾಕೆ
ಹೋಗಬೇಕು ಎಂದುಕೊಂಡ ಲೋಕಿ. ಆದರೆ ಎಲ್ಲರೂ ಹೊರಟಿದ್ದನ್ನು ನೋಡಿ ನಾನೊಬ್ಬನೇ ಇಲ್ಲಿ ಏನು ಮಾಡಲಿ ಎಂದು
ಯೋಚಿಸಿ ಒಂದು ಸೈಕಲ್ ತೆಗೆದುಕೊಂಡು ಹೊರಟ. ಇಡೀ ಕೆರೆಯನ್ನು ಸುತ್ತಿ ಬರಲು ಆರು ಕಿಲೋಮೀಟರುಗಳಾಗುತ್ತಿತ್ತು.
ಅರ್ಧ ದಾರಿ ಸವೆಸಿದ್ದ ಲೋಕಿ. ಪಕ್ಕದ ಇಳಿಜಾರು ರಸ್ತೆಯಿಂದ ಸೈಕಲ್ ಮೇಲೆ ವೇಗವಾಗಿ ಬರುತ್ತಿದ್ದ ಬಾಲಕನೊಬ್ಬ
ಸೈಕಲನ್ನು ನಿಯಂತ್ರಿಸಲಾಗದೆ ಲೋಕಿಯ ತರಗತಿಯವನಾದ ಸ್ಯಾಮ್ಸಂಗಿಗೆ ಬಂದು ಗುದ್ದಿದ. ಹತ್ತಿರದಲ್ಲೇ
ಇದ್ದ ಲೋಕಿ ವೇಗವಾಗಿ ಸೈಕಲ್ ತುಳಿಯುತ್ತಾ ಸ್ಯಾಮ್ಸಂಗ್ ಬಳಿಗೆ ಬಂದ. ಅದಾಗಲೇ ಅವನ ಸ್ನೇಹಿತರು ಅವನನ್ನು
ಪಕ್ಕದ ಕಟ್ಟೆಯ ಮೇಲೆ ಕೂರಿಸಿದ್ದರು. ತುಟಿಗೆ ಏಟು ಬಿದ್ದು ರಕ್ತ ಸುರಿಯುತ್ತಿತ್ತು. ಅದನ್ನು ತಡೆಯಲು
ಅಡ್ಡವಾಗಿಟ್ಟಿದ್ದ ಕರವಸ್ತ್ರ ರಕ್ತದಿಂದ ತೊಯ್ದು ಹೋಗಿತ್ತು. ಸೈಕಲ್ ತುಳಿದುಕೊಂಡು ಮೂರು ಕ್ರಿಮಿ
ಕ್ರಮಿಸಲು ಸ್ಯಾಮ್ಸಂಗ್ ಶಕ್ತನಾಗಿರಲಿಲ್ಲ. ಲೋಕಿ ಸುತ್ತಮುತ್ತ ನೋಡಿದ, ಯಾವುದೇ ಆಟೋವಾಗಲಿ, ಟ್ಯಾಕ್ಸಿಯಾಗಲೀ
ಕಾಣಲಿಲ್ಲ. ಲೋಕಿ ರಸ್ತೆಯೆಡೆಗೆ ತಿರುಗುತ್ತಿದ್ದಂತೆ ಒಂದು ವಾಹನ ಚಲಿಸಲಾರಂಭಿಸಿತು. ಫಿಯೆಟ್ ಕಾರು!
ಕಾರು ತನ್ನೆಡೆಗೆ ಚಲಿಸುತ್ತಿದ್ದಂತೆ ಲೋಕಿಗೆ ಸಂತಸವಾಯಿತು. ನನ್ನನ್ನು ಭೇಟಿಯಾಗಲು ಇವರೇ ಈ ಅಪಘಾತ
ಮಾಡಿಸಿದ್ರಾ? ಎಂಬ ಅನುಮಾನ ಮೂಡಿತು. ಅದು ಹತ್ತಿರ ಬರುತ್ತಿದ್ದಂತೆ ಕೈಯೊಡ್ಡಿದ. ನಿಲ್ಲಿಸಿದರು.
ಹೋಗುತ್ತಿದ್ದಂತೆಯೇ ಹತ್ತು ರುಪಾಯಿ ತೆಗೆದುಕೊಟ್ಟರೆ ಸರಿಹೋಗುವುದಿಲ್ಲವೆಂದುಕೊಂಡು ಅವರ ಬಳಿ ಹೋಗಿ
“ಒರು ಚಿನ್ನ ಆಕ್ಸಿಡೆಂಟ್
ಸರ್. ಆಸ್ಪತ್ರೆಕ್ಕೆ ಸೇಪಿಂಗ್ಳಾ?”
“ಮುಡಿಯಾದು” ಒಂದೇ ಮಾತಿನಲ್ಲಿ
ತಿರಸ್ಕರಿಸಿಬಿಟ್ಟ.
ಹತ್ತು ರುಪಾಯಿಯ ಆ ನೋಟನ್ನು
ತೆಗೆದು ಅವರ ಕೈಯಲ್ಲಿಟ್ಟ. ಅದರ ನಂಬರನ್ನು ಗಮನಿಸಿದ ಅವರು “ಏನ್ ಲೋಕಿ ನೀನು. ಸಂಘಟನೆಗೆ ಸೇರಬೇಕು
ದೇಶದಲ್ಲಿ ಬದಲಾವಣೆ ತರಬೇಕು ಅಂತೀಯ. ಆದರೆ ಪ್ರತೀ ದಿನ ಏನೇನು ನಡೆಯುತ್ತಿದೆ ಅನ್ನೋದನ್ನು ತಿಳಿದುಕೊಳ್ಳಬೇಕು
ಅನ್ನೋದನ್ನೂ ನಾವೇ ಹೇಳಿಕೊಡಬೇಕಾ? Indian Secret Revolutionary Agency ಬಗ್ಗೆ ಪೋಲೀಸರಿಗೆ
ತಿಳಿದುಬಿಟ್ಟಿದೆ. ಎಲ್ಲರನ್ನೂ ಬಂಧಿಸುವ ಸಾಧ್ಯತೆಗಳಿರುವುದರಿಂದ ಬಹಳಷ್ಟು ಜನ ಭೂಗತರಾಗಿಬಿಟ್ಟಿದ್ದಾರೆ.
ಇನ್ನೂ ಕೆಲವರು ತಾವು ಮೊದಲಿದ್ದ ನಕ್ಸಲೀಯ ಚಳುವಳಿಗೆ ಹಿಂದಿರುಗುವ ಕುರಿತು ಯೋಚಿಸುತ್ತಿದ್ದಾರೆ.
ಕಳೆದ ಮೂರು ದಿನಗಳ ಪತ್ರಿಕೆಯನ್ನು ಓದು ನಿನಗೇ ಎಲ್ಲಾ ತಿಳಿಯುತ್ತೆ. ಪೋಲೀಸರು ನಿನ್ನ ಬೆನ್ನು ಹತ್ತೋ
ಸಾಧ್ಯತೆಗಳು ತುಂಬಾನೇ ಕಡಿಮೆ. ಆದರೂ ಸ್ವಲ್ಪ ಎಚ್ಚರದಿಂದಿರು” ಎಂದ್ಹೇಳಿದರು.
ಅವರು ಹೇಳಿದ ವಿಷಯಗಳನ್ನು
ಕೇಳಿ ಲೋಕಿಗೆ ತನ್ನ ಆಸೆಗಳೆಲ್ಲಾ ನುಚ್ಚುನೂರಾದಂತೆ ಭಾಸವಾಯಿತು. ತನ್ನನ್ನು ಪೋಲೀಸರು ಬಂಧಿಸಿಬಿಟ್ಟರೆ
ಎಂದು ಭಯವೂ ಶುರುವಾಯಿತು. ಯಾಂತ್ರಿಕವಾಗಿ ಸ್ಯಾಮ್ಸಂಗನನ್ನು ಕರೆತಂದು ಕಾರಿನಲ್ಲಿ ಕೂರಿಸಿದ. ಅವನ
ಜೊತೆ ಅವನ ಗೆಳೆಯ ಗೋಪಿ ಕುಳಿತುಕೊಂಡ. ಲೋಕಿ ಸ್ಯಾಮ್ಸಂಗ್ ನ ಸೈಕಲನ್ನು ಒಂದು ಕೈಯಲ್ಲಿ ಹಿಡಿದು ತನ್ನ
ಸೈಕಲ್ಲನ್ನೇರಿ ಬಸ್ಸಿನೆಡೆಗೆ ಹೊರಟ. ಬಸ್ಸು ನಿಂತಿದ್ದ ಜಾಗಕ್ಕೆ ಬಂದು ಸೈಕಲನ್ನು ಅದರ ಮಾಲೀಕನಿಗೆ
ಒಪ್ಪಿಸಿ ಫಾಸ್ಟ್ ಫುಡ್ಡಿನ ಬಳಿ ಗೋಬಿ ತಿನ್ನುತ್ತಿದ್ದ ಪೂರ್ಣಿಮಾಳ ಬಳಿ ಹೋಗಿ ಸ್ಯಾಮ್ಸಂಗಿಗೆ ಅಪಘಾತವಾಗಿರುವ
ವಿಷಯ ತಿಳಿಸಿ “ಇಂಟರ್ನೆಟ್ಟಿನಲ್ಲಿ ನನಗೆ ಸ್ವಲ್ಪ ಕೆಲಸ ಇದೆ. ಗೋಪಿ ಮತ್ತು ಸ್ಯಾಮ್ಸಂಗ್ ಬರುವಷ್ಟರಲ್ಲಿ
ತಿರುಗಿ ಬರುತ್ತೇನೆ. ಅವರೇನಾದರೂ ಬೇಗ ಬಂದರೆ ಇಲ್ಲೇ ಇದೆ ನೋಡು ಇಂಟರ್ನೆಟ್ ಸೆಂಟರ್” ಎಂದು ಅಂಗಡಿಯನ್ನು
ತೋರಿಸಿ “ಅಲ್ಲಿಗೆ ಬಂದು ಕರಿ. ಬರ್ತೀನಿ”
www.thatskannada.com ಎಂದು ಟೈಪಿಸಿ ಎಂಟರ್ ಒತ್ತಿದ.
ಹತ್ತು ಸೆಕೆಂಡುಗಳ ನಂತರ ಸೈಟ್ ತೆರೆದುಕೊಂಡಿತು. ಅದರಲ್ಲೆಲ್ಲೂ ISRAದ ಬಗ್ಗೆ ಮಾಹಿತಿ ಇರಲಿಲ್ಲ.
ಆ ಸೈಟನ್ನು ಮುಚ್ಚಿ ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭದ ವೆಬ್ ಪುಟಗಳನ್ನು ತೆರೆದ. ಇವುಗಳಲ್ಲೂ
ಮಾಹಿತಿ ಸಿಗಲಿಲ್ಲ. ಹೇಗಿದ್ದರೂ ಊರಿಗೆ ಹೋಗುತ್ತಿದ್ದೇನೆ ಅಲ್ಲೇ ಹಳೆಯ ಪತ್ರಿಕೆಗಳನ್ನು ತಿರುವಿ
ಹಾಕಿದರಾಯಿತು ಎಂದುಕೊಂಡು ಮೇಲೆದ್ದ. ಎಲ್ಲಾ ಜಾಲತಾಣದಲ್ಲೂ ಇದ್ದ ‘ಬಾಂಬ್ ಎಸ್.ಐ’ ಎಂಬ ಕೊಂಡಿಯ ಮೇಲೆ
ಕ್ಲಿಕ್ಕಿಸಿದ್ದರೆ ಲೋಕಿಗೆ ಬೇಕಾದ ಎಲ್ಲಾ ಮಾಹಿತಿಯೂ ಸಿಕ್ಕಿಬಿಡುತ್ತಿತ್ತು. ಹೊರಗೆ ಬಂದ ಲೋಕಿ ಅಂಗಡಿಗೆ
ಹೋಗಿ ಒಂದು ಪ್ಯಾಕ್ ಸಿಗರೇಟ್ ತೆಗೆದುಕೊಂಡು, ಅದರಿಂದೊಂದು ಸಿಗರೇಟನ್ನು ಹೊರತೆಗೆದು ಹಚ್ಚಿದ. ಒಂದು
ಜುರಿಕೆ ಎಳೆದುಕೊಂಡು ಹೊರಬಿಡುವಷ್ಟರಲ್ಲಿ ಆ ಮಹಿಳೆ ಬಂದಳು, ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ
ತನಗೆ ಮಾಹಿತಿ ನೀಡಿದವಳು!
“ಏನ್ ವಿಷಯ ಅಕ್ಕ. ಮಧುರೈಯಿಂದ
ಫಾಲೋ ಮಾಡ್ತಾನೇ ಇದ್ದೀರಾ?”
“ನನ್ನ ಸಂಗಡಿಗರು ನಿನಗೀಗಾಲೇ
ವಿಷಯ ತಿಳಿಸಿರಬೇಕಲ್ವಾ?”
“ಸಂಪೂರ್ಣವಾಗಿ ಏನನ್ನೂ ತಿಳಿಸಲಿಲ್ಲಾ”
“ಶಾಸಕರ ಭವನಕ್ಕೆ ಒಬ್ಬ ಬಾಂಬ್
ಇಟ್ಟಿದ್ದ ಗೊತ್ತಾ?”
“ಹ್ಞೂ ಗೊತ್ತು. ಎರಡು ಬಾರಿ
ಇಟ್ಟಿದ್ರಲ್ವಾ?”
“ಹೌದು. ಅದನ್ನು ಇಟ್ಟಿದ್ದು
ಒಬ್ಬ ಎಸ್.ಐ!”
“ಬಾಂಬ್ ಎಸ್.ಐ?”
“ನಮ್ಮ ಪತ್ರಿಕೆಗಳು ಆತನಿಗೆ
ಕೊಟ್ಟಿರೋ ಹೆಸರದು”
“ಅವನಿಗೂ ನಮ್ಮ ISRAಗೂ ಸಂಬಂಧವಿದೆಯೇನು?”
“ಸಂಬಂಧ ಇದೆ ಲೋಕಿ. ನಾವು
ಪ್ರಾರಂಭಿಸಬೇಕು ಎಂದಿದ್ದ ISRAದ ಮೂಲರೇಷೆಗಳನ್ನು ತಯಾರಿಸುವ ಇಬ್ಬರು ಪ್ರಮುಖರಲ್ಲಿ ಆತನೂ ಒಬ್ಬ.
ಅವನ್ಯಾಕೆ ಈ ರೀತಿ ಆತುರಾತುರವಾಗಿ ಈ ಕೆಲಸ ಮಾಡಿದ ಅನ್ನೋದೆ ನಮಗ್ಯಾರಿಗೂ ತಿಳಿಯುತ್ತಿಲ್ಲ. ಅವನೇನಾದ್ರೂ
ಬಾಯಿ ಬಿಟ್ಟುಬಿಟ್ಟರೆ ಅವನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ನಮ್ಮಲ್ಲನೇಕರು ಬಂಧನಕ್ಕೊಳಗಾಗೋ ಸಾಧ್ಯತೆಗಳಿವೆ”
“ಆತ ಬಾಂಬ್ ಇಡೋ ವಿಷಯ ನಿಮಗ್ಯಾರಿಗೂ
ತಿಳಿದಿರಲಿಲ್ವಾ?”
“ಯಾರಿಗೂ ತಿಳಿಸಿರಲಿಲ್ಲ.
ಆತ ಇಟ್ಟಿರೋ ಬಾಂಬ್ ಸ್ಪೋಟಗೊಳ್ಳುವಂತದ್ದೂ ಅಲ್ಲ. ಕೇವಲ ಪ್ರಚಾರಕ್ಕೋಸ್ಕರ ಈ ಕೆಲಸ ಮಾಡಿಬಿಟ್ನಾ
ಅಂತ ಅನುಮಾನ ನಮ್ಮ ಇನ್ನೊಬ್ಬ ಪ್ರಮುಖರಿಗೆ ಬಂದಿದೆ”
“ಅವರ್ಯಾರು?”
“ಲೈಬ್ರರಿಯಲ್ಲಿ ನೀನು ನೋಡಿದ
ಹುಚ್ಚ. ಪೋಲೀಸರ ದೃಷ್ಟಿಯಲ್ಲಿ ಸತ್ತುಹೋಗಿರುವ ಮಾಜಿ ನಕ್ಸಲೈಟ್ ಬಸನಗೌಡ ಪಾಟೀಲ್” ಆಕೆಯೇ ಮಾತು ಮುಂದುವರಿಸಿದಳು
“ರಾಯಚೂರಿನ ಗಡಿಭಾಗದ ನಕ್ಸಲರಲ್ಲಿ ಬಹುತೇಕರು ಸಿದ್ಧಾಂತದ ದಾರಿ ತೊರೆದು ಬಂದೂಕಿಡಿದು ಹಣ ವಸೂಲಿಗೆ
ನಿಂತುಬಿಟ್ಟರು. ಬೇಸರವಾಗಿ ಮೈಸೂರಿಗೆ ಬಂದುಬಿಟ್ಟಿದ್ದರು. ಅವರು ಮೈಸೂರಿಗೆ ಬಂದ ಸಮಯದಲ್ಲೇ ನಕಲಿ
ನಕ್ಸಲನೊಬ್ಬನ ಹತ್ಯೆಯಾಗಿ ಪೋಲೀಸರು ಸತ್ತವನು ಮೋಸ್ಟ್ ವಾಂಟೆಡ್ ಬಸನಗೌಡ ಪಾಟೀಲನೇ ಎಂದು ಶರಾ ಬರೆದುಬಿಟ್ಟಿದ್ದರು.
ರಾಯಚೂರಿನಲ್ಲಿದ್ದಾಗ ಅವರಿಗೆ ಪರಿಚಯವಾಗಿದ್ದವನೇ ಈ ಎಸ್ ಐ ಗಣೇಶ್. ಪ್ರಾಮಾಣಿಕ. ಬಹುತೇಕ ಎಲ್ಲಾ
ಪ್ರಾಮಾಣಿಕರಲ್ಲೂ ಇವತ್ತಿನ ಸಂದರ್ಭದಲ್ಲಿ ಕಂಡುಬರುವ ಹಟ, ಕೊಂಚ ಒರಟುತನ, ಅನ್ಯಾಯವನ್ನು ಕಂಡಾಕ್ಷಣ
ಸ್ಪೋಟಗೊಳ್ಳುವ ಕೋಪ ಆತನಲ್ಲೂ ಇತ್ತು. ಆತನ ಪ್ರಾಮಾಣಿಕತೆಯೇ ಆತನಿಗೆ ಇಲಾಖೆಯಲ್ಲಿ ಅನೇಕ ಶತ್ರುಗಳನ್ನು
ಹುಟ್ಟುಹಾಕಿತ್ತು. ಇದರಿಂದ ಬೇಸತ್ತಿದ್ದ ಅವನಿಗೆ ನಮ್ಮ ಕಾಮ್ರೇಡ್ ಬಸನಗೌಡ ಪಾಟೀಲರು ಬದುಕಿರುವ ವಿಷಯ
ತಿಳಿದು ಮೈಸೂರಿಗೆ ಬಂದು ಭೇಟಿಯಾದ. ಹೊಸ ಸಿದ್ಧಾಂತಗಳಿರೋ, ಸಮಾಜವನ್ನು ಬದಲಾಯಿಸೋ ಶಕ್ತಿಯಿರೋ ಒಂದು
ಸಂಘಟನೆ ಶುರು ಮಾಡೋಣ ಎಂದು ಹೇಳಿದ. ಅವನ ಪ್ರಾಮಾಣಿಕತೆಯ ಬಗ್ಗೆ ತಿಳಿದಿದ್ದ ಕಾಮ್ರೇಡ್ ಪಾಟೀಲರು
ಅವನ ಮಾತಿಗೆ ಒಪ್ಪಿ ISRAದ ಸಿದ್ಧಾಂತಗಳನ್ನು, ಅದು ಕೆಲಸ ಮಾಡಬೇಕಾಗಿರುವ ಬಗೆಯನ್ನು ತಿಳಿಸುವ ಪುಸ್ತಕ
ಬರೆಯಲಾರಂಭಿಸಿದ್ದರು. ಅದಕ್ಕೋಸ್ಕರವೇ ಅವರು ದಿನಾ ಸಂಜೆ ಗ್ರಂಥಾಲಯಕ್ಕೆ ಬರುತ್ತಿದ್ದರು”
ಲೋಕಿಗೆ ಏನು ಮಾತನಾಡಬೇಕೆಂದು
ತಿಳಿಯಲಿಲ್ಲ. ಕೆಲವು ಸಮಯ ಸುಮ್ಮನೆ ನಿಂತಿದ್ದರು.
“ಮುಂದೆ ಏನು ಮಾಡೋಣ” ಲೋಕಿ
ಕೇಳಿದ.
“ಕಾಮ್ರೇಡ್ ಪಾಟೀಲರು
ISRAದ ಬಗೆಗಿನ ನಂಬಿಕೆ ಕಳೆದುಕೊಂಡಿದ್ದಾರೆ. ಗಣೇಶನ ಆತುರದ ಕೆಲಸ, ಆತನ ಬಂಧನದಿಂದಾಗಿ ಬಹಳ ಬೇಸರಗೊಂಡಿದ್ದಾರೆ.
ಆಂಧ್ರದಲ್ಲಿರುವ ಕಾಮ್ರೇಡುಗಳು ಮತ್ತೆ ನಕ್ಸಲ್ ಚಳುವಳಿಗೆ ಹಿಂದಿರುಗುವಂತೆ ಒತ್ತಾಯಿಸುತ್ತಿದ್ದಾರೆ.
ಬಹುಶಃ ಕಾಮ್ರೇಡ್ ಪಾಟೀಲರು ಮಲೆನಾಡಿನಲ್ಲಿ ಚಿಗುರೊಡೆಯುತ್ತಿರುವ ನಕ್ಸಲ್ ಚಳುವಳಿಗೆ ಆಸರೆಯಾಗಿ ನಿಂತುಕೊಳ್ಳಬಹುದು”
“ಅವರೇನೋ ಹೋಗಿಬಿಡುತ್ತಾರೆ.
ISRAದ ಬಗ್ಗೆ ಸಾವಿರಾರು ಆಸೆಗಳಿಟ್ಟುಕೊಂಡಿದ್ದ ನನ್ನಂತವರೇನು ಮಾಡಬೇಕು?” ಬೇಸರದಿಂದ ನುಡಿದ ಲೋಕಿ.
ನಂತರ “ಮುಂದೆ ನೀವೇನು ಮಾಡ್ತೀರಾ?” ಎಂದ.
“ನಾನು ಈಗಿರುವ ಕೆಲಸದಲ್ಲೇ
ಮುಂದುವರೆಯುತ್ತೇನೆ ಸದ್ಯಕ್ಕೆ”
“ಯಾವ ಕೆಲಸ”
“ಪೋಲೀಸ್ ಇಲಾಖೆಯಲ್ಲಿ ಕಾನ್ಸ್
ಟೇಬಲ್ ಕೆಲಸ”
“ನೀವೂ ಪೋಲೀಸ್ ಕೆಲಸದಲ್ಲಿದ್ದೀರಾ?”
“ಹ್ಞೂ”
“ನಾನೇನು ಮಾಡಲಿ?”
“ನನಗನ್ನಿಸುವಂತೆ ಸದ್ಯಕ್ಕೆ
ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ನಿನ್ನ ಬಿ.ಎ ಕೋರ್ಸ್ ಪೂರ್ತಿ ಮಾಡು. ನಂತರ ಏನು ಮಾಡಬೇಕು
ಅನ್ನೋದನ್ನು ನಿರ್ಧರಿಸಿದರಾಯಿತು”
“ನಾನೂ ಪಾಟೀಲರ ಜೊತೆ ನಕ್ಸಲ್
ಚಳುವಳಿಗೆ ಸೇರಿಬಿಡಲಾ?”
“ಆತುರಾತುರವಾಗಿ ನಿರ್ಧಾರ
ತೆಗೆದುಕೊಳ್ಳಬೇಡ ಲೋಕಿ...” ದೂರದಲ್ಲಿ ಪೂರ್ಣಿಮಾ ಇವರೆಡೆಗೆ ಬರುತ್ತಿದ್ದುದನ್ನು ನೋಡಿ ಆ ಮಹಿಳೆ
“ಬರ್ತೀನಿ” ಎಂದು ತಿಳಿಸಿ ಹೊರಟುಹೋದಳು.
“ಮುಗೀತಾ ಲೋಕಿ ಕೆಲಸ”
“ಹ್ಞೂ” ಎಂದ್ಹೇಳಿದ ಲೋಕಿ.
ಇಬ್ಬರೂ ಬಸ್ಸಿನ ಬಳಿ ಬಂದರು.
ಸ್ಯಾಮ್ಸಂಗ್ ಮತ್ತು ಗೋಪಿ ಆಸ್ಪತ್ರೆಯಿಂದ ಬಂದಿದ್ದರು. ಸ್ಯಾಮ್ಸಂಗ್ ನ ಮೂಗಿನ ಕೆಳಗೆ ಮೂರು ಹೊಲಿಗೆ
ಹಾಕಿದ್ದರು. ರಾತ್ರಿ ಎಂಟರ ಸುಮಾರಿಗೆ ಬಸ್ಸು ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿತು.
ಮುಂದುವರೆಯುವುದು
No comments:
Post a Comment