ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ
"ಬಾಂಬ್’ ಎಸ್.ಐ ಬಂಧನ!”
ಲೋಕಿ ಸಿಂಚನಾಳ ಬಳಿ ಬಂದು
“ಮಧುರೈಗೆ ಹೋಗಲು ಇದು ಸರಿಯಾದ ದಾರಿ ಅಲ್ವಂತೆ? ಕರ್ನಾಟಕ ರಿಜಿಸ್ಟ್ರೇಷನ್ ಇರೋ ಬಸ್ಸನ್ನೇ ಮಾಡಬಹುದಿತ್ತಲ್ವಾ?”
“ಕರ್ನಾಟಕ ರಿಜಿಸ್ಟ್ರೇಷನ್
ಇರೋ ಗಾಡಿ ಮಾಡಿದ್ದರೆ ಆರು ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕಿತ್ತು ತಮಿಳುನಾಡಿನಲ್ಲಿ. ಅದಿಕ್ಕೆ
ಹೋಗೋದು ಸ್ವಲ್ಪ ಲೇಟಾದ್ರೂ ಪರವಾಗಿಲ್ಲ ಅಂತ ಈ ಬಸ್ಸನ್ನೇ ಮಾಡಿದ್ದು”
“ಆರು ಸಾವಿರ ಉಳಿಸೋದಿಕ್ಕೆ
ಸರಕಾರಕ್ಕೆ ಮೋಸ ಮಾಡಬೇಕಿತ್ತಾ? ಆರು ಸಾವಿರ ದೊಡ್ಡ ಮೊತ್ತದಂತೆ ಕಾಣಬಹುದು, ಆದರೆ ನಾವು ಅರವತ್ತು
ಜನ ಅದನ್ನು ಹಂಚಿಕೊಂಡರೆ ಒಬ್ಬೊಬ್ಬರಿಗೆ ನೂರು ರುಪಾಯಿ ಜಾಸ್ತಿಯಾಗುತ್ತಿತ್ತು ಅಷ್ಟೆ” ಎಂದ್ಹೇಳಿ
ಅವಳ ಉತ್ತರಕ್ಕೂ ಕಾಯದೆ ಬಸ್ಸಿಗೆ ಹೋಗಿ ಕುಳಿತ.
“ಪರ್ವಾಗಿಲ್ಲ ಆರು ಸಾವಿರ
ಉಳಿಸಿದ್ದೀಯ ಬುದ್ಧಿವಂತೆ ನೀನು ಅಂತ ಹೊಗಳ್ತಾನೆ ಅಂದುಕೊಂಡಿದ್ದರೆ ಈ ರೀತಿ ಹೇಳಿಬಿಟ್ಟನಲ್ಲಾ?”
“ಅವನು ನಂಬಿರೋ ಆದರ್ಶಗಳು
ಅವನ ಕೈಯಿಂದ ಈ ರೀತಿ ಹೇಳಿಸಿದ್ದು” ಪೂರ್ಣಿ ಹೇಳಿದಳು.
ಊಟಕ್ಕೆಂದು ಮೆಟ್ಟೂರಿನಲ್ಲಿ
ಬಸ್ ನಿಂತಾಗ ರಾತ್ರಿ ಹನ್ನೊಂದಾಗಿತ್ತು. ಸೋಮನಾಥಪುರದಲ್ಲಿ ಬಸ್ ಹತ್ತಿದಾಗ ನಿದ್ದೆ ಹೋಗಿದ್ದ ಲೋಕಿ
ಮತ್ತೆ ಎದ್ದಿದ್ದು ಮೆಟ್ಟೂರಿನಲ್ಲೇ. ಊಟ ಮುಗಿಸಿ ಮತ್ತೆ ಬಸ್ ಹತ್ತಿದ ನಂತರ ಲೋಕಿಗೆ ನಿದ್ದೆ ಹತ್ತಲಿಲ್ಲ.
ಕುಳಿತುಕೊಳ್ಳಲು ಬೇಸರವಾಗಿ ಬಾಗಿಲಿನ ಬಳಿ ನಿಂತು ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿದ. ಮನದಲ್ಲಿ
ಸಾವಿರ ಕನಸುಗಳು ‘ಸಂಘಟನೆಗೆ ಸೇರಿದ ನಂತರ ಅದರ ಕಾರ್ಯಚಟುವಟಿಕೆಗಳು ಶುರುವಾದ ಮೇಲೆ ಬಹುಶಃ ಇನ್ನು
ಕೆಲವು ವರುಷಗಳಲ್ಲಿ ನಮ್ಮ ದೇಶದಲ್ಲಿ ಎಷ್ಟೆಲ್ಲಾ ಬದಲಾವಣೆಗಳು ಕಾಣಬಹುದಲ್ವಾ? ನಮ್ಮ ಮಕ್ಕಳಿಗೆ ಒಂದು
ಸುಂದರ ವ್ಯವಸ್ಥೆಯಿರೋ ದೇಶವನ್ನು ಬಿಟ್ಟು ಹೋಗಬಹುದು’ ಮಕ್ಕಳು ಅನ್ನೋ ಪದ ಯೋಚನಾಲಹರಿಯಲ್ಲಿ ಬರುತ್ತಿದ್ದ
ಹಾಗೆ ಲೋಕಿಗೆ ಪೂರ್ಣಿಮಾಳ ನೆನಪಾಯಿತು. ‘ಛೇ! ಸಂಜೆಯಿಂದ ಅವಳ ಜೊತೆ ಮಾತನಾಡಲೇ ಇಲ್ಲವಲ್ಲ. ಎಲ್ಲಿ
ಕುಳಿತಿದ್ದಾಳೆ ಅಂದುಕೊಂಡು ಮುಂದೆ ನೋಡಿದ. ಆಕೆ ಕಾಣಲಿಲ್ಲ. ಸಂಜೆಯಿಂದ ಕಿರುಚಿ ಕಿರುಚಿ ಸುಸ್ತಾಗಿ
ಎಲ್ಲಾ ಮಲಗಿಬಿಟ್ಟಿದ್ದಾರೆ. ಬಹುಶಃ ಇಡೀ ಬಸ್ಸಿನಲ್ಲಿ ಡ್ರೈವರ್ ಬಿಟ್ಟರೆ ಎದ್ದಿರುವವನು ನಾನೊಬ್ಬನೇ
ಇರಬೇಕು.
*
* *
“ನನ್ನ ಮಾತು ಕೇಳು ಸಿಂಚನಾ.
ನೀನು ಗೌತಮ್ ನನ್ನು ತುಂಬಾ ಮೆಸ್ ಮಾಡ್ಕೋತಾ ಇದ್ದೀಯಾ ಅಂತ ನನಗೆ ಗೊತ್ತು. ಊಟ ಆದಮೇಲೆ ಅವನ ಪಕ್ಕ
ಹೋಗಿ ಕುಳಿತುಕೋ. ಬೆಳಗಿನವರೆಗೆ ಇಬ್ಬರೂ ಅಕ್ಕಪಕ್ಕದಲ್ಲೇ ಕುಳಿತಿದ್ದರೆ ಇಬ್ಬರಲ್ಲಿ ಒಬ್ಬರಾದರೂ
ನಿಮ್ಮಿಬ್ಬರ ನಡುವಿನ ಮೌನವನ್ನು ಮುರಿಯುತ್ತೀರ” ಊಟ ಮಾಡುವಾಗ ಪೂರ್ಣಿಮಾ ಹೇಳಿದಳು.
“ಅವನ ಪಕ್ಕದಲ್ಲೇ ಹೋಗಿ ಕುಳಿತಿಕೋ
ಅಂತೀಯಾ?”
“ಹೌದು ಅದೇ ಸರಿ ಅನ್ಸುತ್ತೆ”
“ಅವನೇನಾದರೂ ಎದ್ದೋಗು ಅಂತ
ಹೇಳಿಬಿಟ್ಟರೆ”
“ಅದೆಲ್ಲಾ ಆಮೇಲಿನ ವಿಷಯ.
ಮೊದಲು ಹೋಗಿ ಅವನ ಬಳಿ ಕುಳಿತುಕೊಂಡು ನೀನೆ ಮೊದಲು ಮಾತು ಪ್ರಾರಂಭಿಸು. ಅನಂತರ ಉಳಿದ ವಿಷಯ”
“ಸರಿ” ಎಂದ್ಹೇಳಿದ ಸಿಂಚನಾ
ಗೌತಮ್ ಬಸ್ಸಿನೊಳಗೆ ಹೋಗುತ್ತಿದ್ದಂತೆ ಅವನ ಹಿಂದೆಯೇ ಹೋಗಿ ಅವನ ಪಕ್ಕದಲ್ಲಿ ಕುಳಿತಳು. ಗೌತಮನಿಗೆ
ಇಬ್ಬಂದಿತನ. ಒಂದು ಬಾರಿ ಮನ ‘ನೀನೆ ಕ್ಷಮೆ ಕೇಳಿ ಮಾತನಾಡಿಸು’ ಎಂದರೆ ಮತ್ತೊಮ್ಮೆ ‘ಕ್ಷಮೆ ಕೇಳೋದಿಕ್ಕೆ
ನೀನೇನು ಅಪರಾಧ ಮಾಡಿದ್ದೀಯಾ? ಬೇಕಿದ್ದರೆ ಅವಳೇ ಮಾತನಾಡಿಸಲಿ ತೆಪ್ಪಗಿರು’ ಎನ್ನುತ್ತಿತ್ತು. ಮನದ
ಆಯಾಸಕ್ಕೆ ಕಣ್ಣು ಮುಚ್ಚಿದ.
‘ಮಾತನಾಡೋಣ ಎಂದು ಬಂದರೆ ಇವನು
ಮಲಗೇ ಬಿಟ್ಟನಲ್ಲಾ. ನಿಜವಾಗಲೂ ನಿದ್ರೆ ಮಾಡ್ತಾ ಇದ್ದಾನೋ ಅಥವಾ ನಾನು ಎಲ್ಲಿ ಮಾತನಾಡಿಸಿ ಬಿಡ್ತೀನೋ
ಅಂತ ನಿದ್ರೆಯ ನಾಟಕವಾಡುತ್ತಿದ್ದಾನೋ’ ಯೋಚಿಸುತ್ತಾ ಕುಳಿತಳು.
ಬಸ್ಸು ಮೆಟ್ಟೂರಿನಿಂದ ಹೊರಟು
ಒಂದು ಘಂಟೆಯಾಗಿತ್ತು. ಲೋಕಿ ಬಾಗಿಲ ಬಳಿ ನಿಂತುಕೊಂಡು ಯೋಚನಾಮಗ್ನನಾಗಿದ್ದ. ಬಸ್ಸಿನ ಇಂಜಿನ್ನಿನ
ಶಬ್ದ ಬಿಟ್ಟು ಬೇರ್ಯಾವ ಶಬ್ದವೂ ಇರಲಿಲ್ಲ. ಇಷ್ಟು ನಿಶ್ಯಬ್ದವಾಗಿರೋದನ್ನು ನೋಡಿದರೆ ಎಲ್ಲಾ ಮಲಗಿಬಿಟ್ಟಿರುತ್ತಾರೆ.
ಸಿಂಚು ಕೂಡ ನಿದ್ರೆ ಮಾಡುತ್ತಿರುತ್ತಾಳೆ ಎಂದುಕೊಂಡು ಗೌತಮ್ ಕಣ್ಣು ತೆರೆದು ನಿಧನಿಧಾನವಾಗಿ ಸಿಂಚನಾಳೆಡೆಗೆ
ತಿರುತಿದ. ಸಿಂಚನಾ ಗೌತಮನನ್ನೇ ದಿಟ್ಟಿಸುತ್ತಿದ್ದಳು. ಅವಳ ಕಣ್ಣ ನೋಟವನ್ನು ಎದುರಿಸಲಾಗದೆ ಗೌತಮ್
ಕಿಟಕಿಯ ಕಡೆ ಮುಖ ಮಾಡಿದ. ಮನದಲ್ಲಿ ಮೂಡುತ್ತಿದ್ದ ಅಸಂಖ್ಯ ಭಾವನೆಯ ಅಲೆಗಳು ಕಂಬನಿಯ ರೂಪದಲ್ಲಿ ಹೊರಬಂತು.
ಸಿಂಚನಾ ಗೌತಮ್ ಕೈಹಿಡಿದು.
“ನಿನ್ನನ್ನು ಅಳಿಸುವಷ್ಟು
ದುಃಖ ಕೊಟ್ಟಿಬಿಟ್ಟೆನೇನೋ”
“ಹಾಗೇನಿಲ್ಲಾ ಸಿಂಚನಾ”
“ಸಾರಿ ಕಣೋ”
“ನಾನು ತಪ್ಪು ಮಾಡಿದ್ದೀನಿ.
ನೀನ್ಯಾಕೆ ಕ್ಷಮೆ ಕೇಳ್ತೀಯ. ನಮ್ಮಿಬ್ಬರ ಮಧ್ಯೆ ಇದ್ದ ಸ್ನೇಹವನ್ನು ಒಂದು ಪ್ರೇಮಪತ್ರ ಹಾಳು ಮಾಡುತ್ತೆ
ಅಂತ ನಾನೆಣಿಸಿರಲಿಲ್ಲ”
“ಹಾಗ್ಯಾಕೆ ಅಂದುಕೊಳ್ತೀಯ.
ಇನ್ನು ಮುಂದೆ ನಾವಿಬ್ಬರೂ ಮೊದಲಿನಂತಯೇ ಒಳ್ಳೆಯ ಗೆಳೆಯರಾಗಿದ್ದು ಬಿಡೋಣ ಆಯ್ತಾ?”
“ಓಕೆ”
“ಥ್ಯಾಂಕ್ಸ್ ಗೌತಮ್”
ಯಾರಿದು ಪಿಸುಗುಟ್ಟುತ್ತಾ
ಇರೋದು? ಎಂದು ತಿರುಗಿ ನೋಡಿದ ಪೂರ್ಣಿಮಾಗೆ ಸಿಂಚು ಮತ್ತು ಗೌತಮ್ ಮಾತನಾಡುತ್ತಿದ್ದುದನ್ನು ಕಂಡು
ಸಮಾಧಾನವಾಯಿತು. ಹಿಂದಿನ ಬಾಗಿಲ ಬಳಿ ಯಾರೋ ನಿಂತಿರುವುದು ಕಂಡಿತು. ಬಸ್ಸಿನೊಳಗಿದ್ದ ಮಂದಬೆಳಕಿನಲ್ಲಿ
ಆ ವ್ಯಕ್ತಿಯನ್ನು ನೋಡಿದ ಪೂರ್ಣಿಮಾಗೆ ಅವನು ಲೋಕಿ ಎಂದನ್ನಿಸಿತು. ಹೇಗಿದ್ದರೂ ನಿದ್ರೆ ಸುಳಿಯುತ್ತಿಲ್ಲ.
ಅವನ ಬಳಿ ಹೋಗಿ ಹರಟೆ ಹೊಡೆಯೋಣ ಎಂದೆನಿಸಿ ಹಿಂದಿನ ಬಾಗಿಲ ಹತ್ತಿರ ಹೋದಳು.
“ಏನ್ ಲೋಕಿ ಎಲ್ಲರೂ ಮಲಗಿದ್ದಾಗ
ಒಬ್ಬನೇ ಬಂದು ಇಲ್ಲಿ ನಿಂತಿದ್ದೀಯಾ?”
“ನಿದ್ರೆ ಬರ್ತಿಲ್ಲ ಅದಿಕ್ಕೆ”
“ಎಲ್ಲಾ ಹಾಡಿ ಕುಣಿಯುತ್ತಿದ್ದಾಗ
ಮಲಗಿಬಿಟ್ಟಿದ್ದೆ! ಈಗ ನಿದ್ರೆ ಹೇಗೆ ಬರಬೇಕು ಅಲ್ವಾ?”
ಲೋಕಿ ನಕ್ಕ.
“ಯಾಕೆ ಒಬ್ಬನೇ ಕುಳಿತಿದ್ದೆ?
ಮುಂದೇನೂ ಬರಲಿಲ್ಲ. ಟೂರಿಗೆ ಬರೋದಿಕ್ಕೆ ಆಸಕ್ತಿ ಇರಲಿಲ್ವಾ?”
“ಹಾಗೇನಿಲ್ಲ. ಆಸಕ್ತಿ ಇರೋದ್ರಿಂದಲೇ
ಬಂದಿದ್ದಲ್ವಾ? ಆದರೆ ಕುಣಿದು ಕುಪ್ಪಳಿಸೋದೆಲ್ಲಾ ನನ್ನಿಂದ ಆಗದ ಮಾತು”
“ಹೋಗಲಿ ಬಿಡು. ಒಬ್ಬೊಬ್ಬರಿಗೆ
ಒಂದೊಂದರಲ್ಲಿ ಆಸಕ್ತಿ. ಒಂದು ವಿಷಯ ಹೇಳೋಣ ಅಂತ ಬಂದೆ. ಸಿಂಚನಾ ಮತ್ತು ಗೌತಮ್ ಮತ್ತೆ ಮಾತನಾಡಲು
ಶುರು ಮಾಡಿದ್ದಾರೆ”
“ಮ್”
“ಊಟವಾದ ನಂತರ ಸಿಂಚನಾಳೇ ಗೌತಮ್
ಪಕ್ಕ ಕುಳಿತು ಮಾತನಾರಂಭಿಸಿದಳು”
“ಓ! ಮೊದಲನೇ ತಪ್ಪು ಸಿಂಚನಾ
ಮಾಡಿದ್ದಾಳೆ. ಅದನ್ನು ಗೌತಮ್ ಮುಂದುವರಿಸುತ್ತಾನಾ ನೋಡಬೇಕು”
“ತಪ್ಪಾ? ನನಗರ್ಥವಾಗಲಿಲ್ಲ”
“ಸದ್ಯಕ್ಕದು ನಿನಗೆ ಅರ್ಥವೂ
ಆಗಲಿಕ್ಕಿಲ್ಲ. ಈಗ ನಾನದನ್ನು ಹೇಳಿದರೆ ಇವನೊಬ್ಬ ಹುಚ್ಚ ಅಂತ ಅಂದುಕೊಳ್ತೀಯ. ಸಮಯ ಬಂದಾಗ ನಾನೇ ಹೇಳ್ತೀನಿ
ಬಿಡು”
ಮಾತನಾಡಲು ಪೂರ್ಣಿಗೆ ಇನ್ಯಾವ
ವಿಷಯವೂ ಸಿಗಲಿಲ್ಲ. ಕಣ್ಣು ಎಳೆಯುತ್ತಿತ್ತು. “ಸರಿ ಲೋಕಿ ಬರ್ತೀನಿ. ನಿದ್ರೆ ಬರ್ತಿದೆ” ಎಂದ್ಹೇಳಿ
ಹೊರಟುಹೋದಳು.
ಸ್ವಲ್ಪ ಸಮಯದ ನಂತರ ಲೋಕಿಗೂ
ಸತತ ನಿಂತಿದ್ದರಿಂದ ಕಾಲು ನೋಯಲು ಪ್ರಾರಂಭಿಸಿತು. ಹೋಗಿ ಕುಳಿತುಕೊಂಡು ಮಲಗಿದ.
ಮಧುರೈ ತಲುಪಿದಾಗ ಬೆಳಿಗ್ಗೆ
ಐದು ಘಂಟೆಯಾಗಿತ್ತು. ಮಧುರೈ ಪ್ರವೇಶಿಸುತ್ತಿದ್ದಂತೆ ಲೋಕಿಗೆ ಎಚ್ಚರವಾಯಿತು. ಬಸ್ಸಿನಲ್ಲಿ ಬಹಳಷ್ಟು
ಜನ ಇನ್ನೂ ನಿದ್ರೆಯಲ್ಲಿದ್ದರು. ಲೋಕಿ ಮತ್ತೆ ಹೋಗಿ ಹಿಂಬಾಗಿಲ ಬಳಿ ನಿಂತ. ಮುಂದಿದ್ದ ಬಾಗಿಲ ಬಳಿ
ಕ್ಲೀನರ್ ನಿಂತಿದ್ದ. ‘ಯೂಥ್ ಹಾಸ್ಟೆಲ್” ಬುಕ್ ಮಾಡಲಾಗಿತ್ತು. ಜಾಗಿಂಗಿಗೆ ಹೋಗುತ್ತಿದ್ದ ಜನರನ್ನು
ಕ್ಲೀನರ್ ಹಾಸ್ಟೆಲ್ಲಿನ ವಿಳಾಸ ಕೇಳುತ್ತಿದ್ದ. ಕೊಂಚ ದೂರ ಸಾಗುತ್ತಿದ್ದಂತೆ ಬಸ್ಸಿನ ಎಡಭಾಗದಿಂದ
ಬೈಕೊಂದು ನುಗ್ಗಿ ಬಂತು; ಬೈಕಿನ ಮೇಲಿದ್ದದ್ದು ಪೋಲೀಸ್!! ಬಾಗಿಲಿನ ಬಳಿ ಲೋಕಿ ಕಾಣುತ್ತಿದ್ದಂತೆಯೇ
ಬೈಕಿನ ವೇಗವನ್ನು ತಗ್ಗಿಸಿ,
“ಮೈಸೂರ್ಲಿಂದು ವಂದಿರಿಕ್ಕಿಯ?”
(ಮೈಸೂರಿನಿಂದ ಬಂದಿರೋದ?) ಎಂದು ಕೇಳಿದ. ಪೋಲೀಸನ್ನು
ನೋಡುತ್ತಿದ್ದಂತೆ ಲೋಕಿಗೆ ದಿಗಿಲಾಯಿತು. ನನ್ನನ್ನು ಬಂಧಿಸೋದಿಕ್ಕೇ ಬಂದಿರೋದು ಅನ್ನಿಸಿತು. ಗಾಬರಿಗೊಂಡು
ತೋರ್ಪಡಿಸದೆ ಕನ್ನಡದಲ್ಲೇ “ಹೌದು” ಎಂದ. ಲೋಕಿಯ ಕನ್ನಡ ಆತನಿಗೆಷ್ಟು ಅರ್ಥವಾಯಿತೋ ತಿಳಿಯದು. ಮತ್ತೆ
“ಜರ್ನಲಿಸಂ ಸ್ಟೂಡೆಂಟ್ಸಾ?” ಎಂದು ಕೇಳಿದ. ಹೌದೆಂಬಂತೆ ತಲೆಯಾಡಿಸಿದ ಲೋಕಿ. ಬೈಕಿನ ವೇಗವನ್ನು ಹೆಚ್ಚಿಸಿ
ಮುಂಬಾಗಿಲ ಬಳಿ ನಿಂತಿದ್ದ ಕ್ಲೀನರ್ರಿಗೆ ಏನೋ ಹೇಳಿ ಬಸ್ಸಿನ ಮುಂದಕ್ಕೆ ಹೋದ. ಬಸ್ಸು ಪೋಲೀಸಿದ್ದ
ಬೈಕನ್ನು ಹಿಂಬಾಲಿಸಲಾರಂಭಿಸಿತು.
‘ಓ! ಇವರು ಖಂಡಿತ ನನ್ನನ್ನು
ಬಂಧಿಸಲೇ ಬಂದಿದ್ದಾರೆ. ಬಹುಶಃ Indian Secret Revolutionary Agency ಬಗ್ಗೆ ಪ್ರತಿಯೊಂದು ಮಾಹಿತಿಯೂ
ಇವರಿಗೆ ತಿಳಿದುಬಿಟ್ಟಿರಬೇಕು. ನಾನು ನಿನ್ನೆ ಮಧ್ಯಾಹ್ನ ಹೊರಟಮೇಲೆ ಮೈಸೂರಿನಲ್ಲಿದ್ದ ಸಂಘಟನೆಯ ಸದಸ್ಯರನ್ಯಾರನ್ನೋ
ಬಂಧಿಸಿರಬೇಕು. ಅವರು ಕೊಟ್ಟ ಮಾಹಿತಿಯನ್ನು ಕರ್ನಾಟಕದ ಪೋಲೀಸರು ಇವರಿಗೆ ತಿಳಿಸಿ ನನ್ನನ್ನು ಬಂಧಿಸಲು
ಸೂಚಿಸಿರಬೇಕು. ಈಗ ಏನು ಮಾಡೋದು? ಬಸ್ಸಿನಿಂದ ಹಾರಿ ಓಡಿ ಹೋದರೆ’ ಎಂಬ ಯೋಚನೆ ಬಂತು. ಹಾಗೇನಾದರೂ
ಮಾಡಿದರೆ ಎನ್ ಕೌಂಟರ್ ಮಾಡಿ ಸಾಯಿಸಿಬಿಟ್ಟರೆ? ಅಸಲಿಗೆ ಈಗ ನನ್ನ ಕೈಲಿ ಏನೂ ಇಲ್ಲ. ಬಹುಶಃ ಬಸ್ಸನ್ನು
ಪೋಲೀಸ್ ಠಾಣಿಗೆ ಕರೆದೊಯ್ಯುತ್ತಿರಬೇಕು. ಏನೇನಾಗುತ್ತೋ ಕಾದು ನೋಡೋಣ ಎಂದುಕೊಂಡ.
ಅವನ ನಿರೀಕ್ಷೆಯಂತೆ ಯಾವುದೂ
ನಡೆಯಲಿಲ್ಲ! ಬಸ್ಸು ನೇರವಾಗಿ ಯೂಥ್ ಹಾಸ್ಟೆಲ್ಲಿಗೆ ಹೋಯಿತು. ಎಲ್ಲರೂ ಬಸ್ಸಿನಿಂದ ಇಳಿದರು. ಬಸ್ಸಿನ
ಮುಂದೆಯೇ ಬಂದಿದ್ದ ಪೋಲೀಸ್ ಸಿಂಚನಾಳ ಬಳಿ ಬಂದು “ಎದಾವದು ಉದವಿ ವೇಣುಮ್ ನಾ ಕೇಳ್. ಕೋವಿಲಾಂಡೈ ಎಂಗ
asi ವಂದು ವುಂಗಳೈ ಪಾರ್ ಪಾಂಗಳಾ” (ಏನು ಸಹಾಯ ಬೇಕಿದ್ದರೂ
ಕೇಳು. ಮಧುರೈ ದೇವಸ್ಥಾನದ ಬಳಿ ನಮ್ಮ asi ಬಂದು ನಿಮ್ಮನ್ನು ಭೇಟಿ ಮಾಡುತ್ತಾರಂತೆ) ಎಂದು ಹೇಳಿದ.
ಇವಳಿಗೆ ಇಲ್ಲಿಯ ಪೋಲೀಸರು
ಹೇಗೆ ಪರಿಚಯ? ಎಂಬ ಅನುಮಾನ ಸುಳಿಯಿತು ಲೋಕಿಯ ಮನಸ್ಸಿನಲ್ಲಿ. ಪೂರ್ಣಿಮಾಳ ಬಳಿ ಹೋಗಿ ಕೇಳಿದ.
“ನಿನಗೆ ಗೊತ್ತಿಲ್ವಾ ಲೋಕಿ?
ಸಿಂಚನಾಳ ದೊಡ್ಡಪ್ಪ ರಾಜೇಂದ್ರನ್ ಅಂತ ಚೆನ್ನೈನಲ್ಲಿ ಎಸ್ಪಿ ಆಗಿದ್ದಾರೆ. ಇವಳು ಟೂರಿಗೆ ಹೊರಡೋದಿಕ್ಕೆ
ಮುಂಚೆ ಅವರಿಗೆ ಫೋನ್ ಮಾಡಿ ಇಲ್ಲಿಗೆ ಬರೋ ವಿಷಯ ಹೇಳಿದ್ದಳು. ‘ಇಲ್ಲಿರೋ ಪೋಲೀಸರಿಗೆಲ್ಲಾ ಹೇಳಿರ್ತೀನಿ;
ಅವರು ನಿಮ್ಮಗಳ ಜೊತೆ ಬರುತ್ತಾರೆ’ ಎಂದವರು ಹೇಳಿದರಂತೆ. ಇಡೀ ಪ್ರವಾಸದಲ್ಲಿ ನಾವು ಪೋಲೀಸರ ರಕ್ಷಣೆಯಲ್ಲಿ
ಇರುತ್ತೀವಿ. ಎಷ್ಟು ಚೆನ್ನಾಗಿರುತ್ತಲ್ವಾ?”
‘ಬದುಕಿದೆಯಾ ಬಡಜೀವವೇ’ ಎಂದುಕೊಂಡ
ಲೋಕಿ. “ಹೌದೌದು ತುಂಬಾ ಚೆನ್ನಾಗಿರುತ್ತ” ಎಂದ್ಹೇಳಿ ಹಾಸ್ಟೆಲ್ಲಿನ ರೂಮಿಗೆ ಹೋದ.
ಎಲ್ಲರೂ ನಿತ್ಯಾದಿ ಕರ್ಮಗಳನ್ನು
ಮುಗಿಸಿ ಹೊರಬಂದರು. ಲೋಕಿ ಬಸ್ಸಿನ ಬಳಿ ಸಿಗರೇಟು ಸೇದುತ್ತಾ ಕುಳಿತಿದ್ದ. ಪೂರ್ಣಿಮಾ ಅವನನ್ನು ನೋಡಿ
ಬಳಿಗೆ ಬಂದಳು. ಎಂದೂ ಆ ರೀತಿ ಮಾಡದಿದ್ದು ಲೋಕಿ ಅಂದು ಪೂರ್ಣಿಮಾ ಬರುತ್ತಿದ್ದಂತೆ ಸಿಗರೇಟು ಎಸೆದುಬಿಟ್ಟ.
“ನನ್ನನ್ನು ನೋಡಿ ಸಿಗರೇಟ್
ಯಾಕೆ ಎಸೆದುಬಿಟ್ಟೆ?”
“ಯಾಕೋ ನಿನ್ನ ಮುಂದೆ ಸಿಗರೇಟು
ಸೇದಲು ಮನಸ್ಸಾಗಲಿಲ್ಲ”
“ಥ್ಯಾಂಕ್ಸ್ ಕಣೋ. ನನ್ನ ಮುಂದೆ
ಸಿಗರೇಟು ಸೇದಿದರೆ ನನಗೂ ಕಸಿವಿಸಿ. ಸಿಗರೇಟನ್ನು ಸಂಪೂರ್ಣವಾಗಿ ಬಿಡೋದಿಕ್ಕಾಗಲ್ವಾ ಲೋಕಿ”
“ಕಷ್ಟ”
“ಏನು ಬೆಳಿಗ್ಗೆ ಬೆಳಿಗ್ಗೇನೆ
ಇಬ್ಬರೂ ಎಲ್ಲೋ ಕಳೆದುಹೋಗ್ತಿರೋ ಆಗಿದೆ” ನಗುತ್ತಾ ಬಂದಳು ಸಿಂಚನಾ.
“ಯಾವ ಮೂಡಿಗೂ ಇಲ್ಲ ಸಿಂಚು.
ಸುಮ್ನೆ ಹಿಂಗೆ ಮಾತನಾಡ್ತಿದ್ದೋ” ಪೂರ್ಣಿಮಾಗೆ ಅದೇ ಮೊದಲ ಬಾರಿಗೆ ಸಿಂಚನಾಳ ಇರುವಿಕೆ ಕೊಂಚ ಅಸಹನೆ
ಮೂಡಿಸಿತು. ಸಿಂಚನಾ ಲೋಕಿಯನ್ನುದ್ದೇಶಿಸಿ “ಟೂರಿಗೆ ನಿದ್ರೆ ಮಾಡೋದಿಕ್ಕೆ ಬಂದಿರೋ ಹಾಗಿದೆ” ಎಂದು
ರೇಗಿಸಿದಳು.
“ಹಾಗೇನಿಲ್ಲ”
“ನೀನು ಮುಂದೆ ಬರದೆ ಹಿಂದೇನೆ
ಕುಳಿತುಬಿಟ್ಟಿದ್ದೆ. ಪಾಪ ಪೂರ್ಣಿಯ ಕಷ್ಟ ಪೂರ್ಣಿಗೆ”
ಲೋಕಿ ಪೂರ್ಣಿಮಾಳೆಡೆಗೆ ನೋಡಿದ.
ಇಬ್ಬರ ಕಣ್ಣೂ ಸಂಧಿಸಿದವು. ಮರುಕ್ಷಣವೇ ತಲೆತಗ್ಗಿಸಿದರು.
“ನಿಮ್ಮಿಬ್ಬರ ಮಧ್ಯೆ ನಾನ್ಯಾಕೆ?
ಮಾತಡ್ತಿರಿ, ನಾನಿನ್ನು ಬರ್ತೀನಿ”
“ಹೋಗು ಹೋಗು. ಅಲ್ಲಿ ಗೌತಮ್
ಕಾಯ್ತಿರ್ತಾನೆ” ಪೂರ್ಣಿಮಾ ಛೇಡಿಸಿದಳು.
“ಏಯ್ ಕತ್ತೆ! ಆಮೇಲೆ ವಿಚಾರಿಸಿಕೊಳ್ತೀನಿ
ನಿನ್ನ” ಎಂದ್ಹೇಳಿ ಹೊರಟುಹೋದಳು.
ಆಡೋ ಮಾತುಗಳಿಗಿಂತ ಮೌನಕ್ಕೇ
ಹೆಚ್ಚು ಅರ್ಥವಿರುತ್ತೆ. ಇಬ್ಬರೂ ಕೆಲಕ್ಷಣಗಳು ಮೌನವಾಗಿದ್ದರು.
ಪೂರ್ಣಿಮಾ ಮೆಲ್ಲನೆ “ಒಂದು
ವಿಷಯ ಕೇಳ್ತೀನಿ. ನೀನು ಕೋಪ ಮಾಡಿಕೊಂಡರೂ ಪರವಾಯಿಲ್ಲ ಬೇಸರ ಅಂತೂ ಖಂಡಿತ ಮಾಡಿಕೊಳ್ಳಬಾರದು”
“ಸರಿ ಕೇಳು” ಎಂದು ಹೇಳುವಷ್ಟರಲ್ಲಿ
ಲೋಕಿಯ ಎದೆಬಡಿತ ಹೆಚ್ಚಾಗಿತ್ತು.
“ನಾವಿಬ್ಬರೂ ಒಬ್ಬರನ್ನೊಬ್ಬರು
ಲವ್ ಮಾಡ್ತಾ ಇದ್ದೀವಾ?”
“ನನಗೂ ಅದೇ ಅನುಮಾನ” ತೊದಲುತ್ತಾ
ನುಡಿದ ಲೋಕಿ.
“ಥ್ಯಾಂಕ್ಸ್ ಲೋಕಿ”
ಮನದ ಭಾವನೆಗಳ ಸಾಗರದಿಂದ ಮಾತುಗಳನ್ನೆಕ್ಕಲು
ಇಬ್ಬರಿಗೂ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ತರಗತಿಯ ಇತರರು ಬಸ್ಸಿನ ಬಳಿ ಬಂದರು. ಈಗ ಇಷ್ಟು ಮಾತು ಸಾಕೆಂಬಂತೆ
ಲೋಕಿ ತನಗೆ ಮೀಸಲಿರಿಸಿದಂತಿದ್ದ ಹಿಂದಿನ ಸೀಟಿಗೆ ಹೋಗಿ ಕುಳಿತ. ಕೆಟಕಿಯ ಮೂಲಕ ಪೂರ್ಣಿಮಾಳೆಡೆಗೆ
ನೋಡಿದ. ಪೂರ್ಣಿಮಾ ಕೂಡ ಲೋಕಿಯೆಡೆಗೆ ನೋಡಿದಳು. ಇಬ್ಬರೂ ಒಬ್ಬರನ್ನೊಬ್ಬರು ಕಣ್ಣಿನಲ್ಲಿ ತುಂಬಿಕೊಂಡರು.
ಎಲ್ಲರೂ ಬಸ್ಸು ಹತ್ತಿದರು. ಮಧುರೈ ದೇವಸ್ಥಾನದ ಬಳಿ ಎ.ಎಸ್.ಐ ರಾಮಸ್ವಾಮಿ ಇವರಿಗೋಸ್ಕರ ಕಾಯುತ್ತಿದ್ದರು.
ಇವರು ಬಂದ ಮೇಲೆ ಎಲ್ಲರನ್ನೂ ದೇವಾಲಯದ ಬಳಿಗೆ ಕರೆದುಕೊಂಡು ಹೋದರು.
ಜೊತೆಯಲ್ಲಿ ಇನ್ಸ್ ಪೆಕ್ಟರ್
ಬಂದಮೇಲೆ ಗೈಡುಗಳಿಗೆ ಬರವಿರಲಿಲ್ಲ. ಐದಾರು ಗೈಡುಗಳು ಮುತ್ತಿಕೊಂಡರು. ರಾಮಸ್ವಾಮಿಯವರು ತಮಗೆ ಪರಿಚಯವಿದ್ದ
ಒಬ್ಬ ಗೈಡನ್ನು ಆರಿಸಿದರು. ಗೈಡ್ ಎಲ್ಲರನ್ನೂ ಮೂಡು ದಿಕ್ಕಿನ ಬೀದಿಯಲ್ಲಿರುವ ಅಮ್ಮನವರ ಸನ್ನಿಧಿ
ದ್ವಾರದ ಮುಖಾಂತರ ಒಳಗೆ ಕರೆದುಕೊಂಡು ಹೋದರು.
ಮೀನಾಕ್ಷಿ ಅಮ್ಮನ ಗುಡಿಯೊಳಗೆ
ಎಲ್ಲಾ ವಿದ್ಯಾರ್ಥಿಗಳು ಹೋದರು. ಲೋಕಿ ಹೊರಗಡೆಯೇ ನಿಂತಿದ್ದ, ದೇವಸ್ಥಾನದ ಶಿಲಾವೈಭವವನ್ನು ಸವಿಯುತ್ತಾ.
ಅಂದಿನ ಜನರ ನಿಪುಣತೆಗೆ ಸಾಕ್ಷಿಯಾಗಿ ನಿಂತಿತ್ತು ಆ ದೇವಾಲಯ. ದೇವಾಲಯವನ್ನು ಪೂರ್ಣವಾಗಿ ಇಂದಿದ್ದ
ಸ್ಥಿತಿಗೆ ಕಟ್ಟಲು ಬರೋಬ್ಬರಿ ಆರುನೂರು ವರುಷಗಳು ಹಿಡಿದಿತ್ತು. ಬಾನೆತ್ತರದ ಕಂಬಗಳು, ವಿಶಾಲ ಪ್ರಾಂಗಣಗಳು,
ಕೆತ್ತನೆ ಇವುಗಳನ್ನು ನೋಡಿದವರಿಗೆ ದೇವಾಲಯವನ್ನು ಕಟ್ಟುವುದಕ್ಕೆ ಆರು ನೂರು ವರುಷಗಳು ಬೇಕಾದವು ಎಂಬುದು
ಅತಿಶಯೋಕ್ತಿಯಾಗಿ ಕಾಣುವುದಿಲ್ಲ. ಪೂಜೆ ಮುಗಿಸಿಕೊಂಡು ಎಲ್ಲರೂ ಹೊರಬಂದರು.
“ಯಾಕೆ ಲೋಕಿ ಒಳಗೆ ಬರಲಿಲ್ಲ?”
ಪೂರ್ಣಿಮಾ ಕೇಳಿದಳು.
“ದೇವರಲ್ಲಿ ನನಗೆ ನಂಬಿಕೆಯಿಲ್ಲ”
“ಹೌದಾ?! ನಾನು ದೇವರನ್ನು
ತುಂಬಾ ನಂಬುತ್ತೀನಲ್ಲ. ಮುಂದೆ ಇದರಿಂದ ನಮಗೆ ತೊಂದರೆಯಾಗುವುದಿಲ್ವಾ?”
“ತೊಂದರೆ ಯಾಕಾಗುತ್ತೆ? ಅವರವರ
ನಂಬಿಕೆ ಅವರಿಗೆ. ನೀನು ದೇವರನ್ನು ನಂಬಬೇಡ ಅಂತ ನಾನು ಬಲವಂತಿಸುವುದಿಲ್ಲ. ನಂಬು ಎಂದು ನನಗೆ ತೊಂದರೆ
ಕೊಡಬೇಡ ಅಷ್ಟೇ!”
ಗುಡಿಯನ್ನು ದಾಟಿದ ಕೂಡಲೇ
ಮಿನಾಕ್ಷಿ ನಾಯಕನ್ ಮಂಟಪ ಸಿಗುತ್ತದೆ. ಮೇಲ್ಭಾಗದಲ್ಲಿ ಯಾಳ್ಯೀ ಎಂಬ ತೋರಣ ಶಿಲ್ಪವೂ ಕೆಳಭಾಗದಲ್ಲಿ
ಚಿಕ್ಕ ಚಿಕ್ಕ ಶಿಲ್ಪ ವಿಗ್ರಹಗಳೂ ತುಂಬಿದ ಆರು ವರಿಸೆಯ ಕಂಬಗಳು ಈ ಮಂಟಪವನ್ನು ಅಲಂಕರಿಸಿದೆ. ಈ ಮಂಟಪದ
ಪಶ್ಚಿಮದ ಕೊನೆಯಲ್ಲಿ ಹಿತ್ತಾಳೆಯ ಸಾವೆರದೆಂಟು ದೀಪ ಪ್ರಣಿತೆಗಳು ಕಣ್ತುಂಬುವ ದೃಶ್ಯವಿದೆ. ಮಿನಾಕ್ಷಿ
ನಾಯಕನ್ ಮಂಟಪದ ಪಕ್ಕದಲ್ಲಿರುವ ಮುದಲಿಪಿಳ್ಳೈ ಮಂಟಪವನ್ನು ದಾಟಿದರೆ ಹೊಂದಾವರೆ ಕೊಳ ಸಿಗುತ್ತದೆ.
ಕೊಳದ ಮಧ್ಯೆ ಚಿನ್ನದ ಕಮಲವೊಂದಿದೆ. ಗೈಡ್ ಕೊಳದ ಇತಿಹಾಸ ಹೇಳುತ್ತಿದ್ದ – ಇಂದ್ರನು ಪೂಜೆಗಾಗಿ ಈ
ಕೊಳದಿಂದ ಸ್ವರ್ಣ ಕಮಲವನ್ನು ಹರಿದುಕೊಂಡನಂತೆ. ಚೌಕಾಕಾರವಾಗಿರುವ ಕೊಳದ ಉತ್ತರ ತೀರದಲ್ಲಿರುವ ಕಂಬಗಳಲ್ಲಿ
24 ಪುರಾತನ ಮಹಾಕವಿಗಳ ಶಿಲಾ ವಿಗ್ರಹಗಳಿವೆ. ದೇವಾಲಯ ಮತ್ತು ನಗರವನ್ನು ನಿರ್ಮಾಣ ಮಾಡಿದ ಕುಲಶೇಖರ
ಪಾಂಡ್ಯನ ವಿಗ್ರಹವೂ ಇದೆ. ಈಗ ಕೊಳದಲ್ಲಿರೋ ಸ್ವರ್ಣ ಕಮಲವನ್ನು ರಾಜ್ ಟಿ.ವಿಯವರು ಕೊಟ್ಟಿರುವುದಂತೆ.
ಅದರ ಬೆಲೆ ಸುಮಾರು ಇಪ್ಪತ್ತನಾಲ್ಕು ಲಕ್ಷ ಎಂದು ಹೇಳಿದ. ಲೋಕಿ ಕಮಲದೆಡೆಗೆ ನೋಡಿದ. ಆತ ಅದರ ಬೆಲೆಯನ್ನು
ಕೊಂಚ ಉತ್ಪ್ರೇಕ್ಷೆಗೊಳಿಸಿದ ಎಂದೆನಿಸಿತು. ಹಾಗೆಯೇ ಕೊಳದ ಎದುರು ತೀರದ ಕಡೆ ನೋಡಿದ. ಮೆಟ್ಟಿಲಿನ
ಮೇಲೆ ಕುಳಿತಿದ್ದ ಹೆಂಗಸೊಬ್ಬಳು ತನ್ನೆಡೆಯೇ ನೋಡುತ್ತಿರುವಂತೆ ಭಾಸವಾಯಿತು. ಆಕೆಯನ್ನು ಕೊಂಚ ದಿಟ್ಟಿಸಿ
ನೋಡಿದ ಲೋಕಿ. ಸ್ಕೇಟಿಂಗ್ ಗ್ರೌಂಡಿನಲ್ಲಿ ತನಗೆ ಸೂಚನೆ ಕೊಟ್ಟಿದ್ದವಳು ಇವಳೇ ಅಲ್ವಾ? ಇವಳ್ಯಾಕೆ
ಇಲ್ಲಿಗೆ ಬಂದಿದ್ದಾಳೆ; ನನಗೆ ಮತ್ತೆ ಯಾವುದಾದರೂ ಸೂಚನೆ ಕೊಡಬೇಕಿದೆಯಾ? ಲೋಕಿ ತನ್ನನ್ನು ಗುರುತಿಸಿದ್ದನ್ನು
ಗಮನಿಸಿದ ಆ ಹೆಂಗಸು ಮೆಟ್ಟಿಲುಗಳನ್ನೇರಿ ಲೋಕಿಯೆಡೆಗೆ ಬಂದಳು. ಆಕೆ ಹತ್ತಿರ ಬರುತ್ತಿದ್ದಂತೆಯೇ ಆಕೆಯ
ಮುಖದ ಮೇಲೆದ್ದ ಗಾಬರಿಯ ನೆರಿಗೆಗಳನ್ನು ಲೋಕಿ ಗಮನಿಸಿದ. ಆಕೆ ಲೋಕಿಗಿಂತ ಕೆಲವು ಅಡಿಗಳು ಮಾತ್ರ ದೂರದಲ್ಲಿದ್ದಳು.
ಲೋಕಿ ಇನ್ನೇನು ಆಕೆಯೆಡೆಗೆ ಹೋಗಬೇಕೆನ್ನುವಷ್ಟರಲ್ಲಿ ಯಾರದೋ ಕೈ ಲೋಕಿಯ ಹೆಗಲ ಮೇಲೆ ಬಿತ್ತು. ಕೈಯಿಟ್ಟ
ವ್ಯಕ್ತಿಯನ್ನು ನೋಡಿ ಮತ್ತಷ್ಟು ಗಾಬರಿಗೊಂಡ ಆ ಮಹಿಳೆ ತಿರುಗಿ ವೇಗದಿಂದ ಹೊರಟುಹೋದಳು.
ಕೈಯಿಟ್ಟ ವ್ಯಕ್ತಿ ಎ.ಎಸ್.ಐ
ರಾಮಸ್ವಾಮಿ!!
ಮುಂದುವರೆಯುವುದು
No comments:
Post a Comment