“ನಾಳೆ ಟೂರಿಗೆ ಹೊರಡೋದಿಕ್ಕೆ
ಎಲ್ಲಾ ಸಿದ್ಧ ಮಾಡಿಕೊಂಡಾ ಲೋಕಿ?”
‘ಸದ್ಯ! ಇಷ್ಟಾದರೂ ಮಾತನಾಡಿದನಲ್ಲಾ’
ಎಂದುಕೊಳ್ಳುತ್ತ
“ಗೌತಮ್ ನಿನ್ನ ಜೊತೆ ಏನಾದ್ರೂ
ಮಾತನಾಡಿದ್ನಾ?”
“ಇಲ್ಲವಲ್ಲ. ಯಾಕೆ?” ‘ಸಂಘಟನೆಯವರು
ನನ್ನ ವಿಷಯ ಮರೆತುಬಿಟ್ಟಿರಬೇಕು ಅಥವಾ ಒಂದು ಸಂಘಟನೆಗೆ ಸೇರಿ ಹೋರಾಡೋದಿಕ್ಕೆ ನಾನಿನ್ನೂ ಪಕ್ವವಾಗಿಲ್ಲ
ಎಂದವರಿಗೆ ಅನ್ನಿಸಿರಬೇಕು. ಅದಿಕ್ಕೆ ಅವರ್ಯಾರೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ನನಗೆ ಬೇಸರವಾಗಿದೆ
ಅನ್ನೋ ಕಾರಣಕ್ಕೆ ಪೂರ್ಣಿಯನ್ಯಾಕೆ ನೋಯಿಸಬೇಕು. ಇನ್ನೆಷ್ಟು ದಿನ ಅವಳ ಸಾಮೀಪ್ಯ ಸಿಗುತ್ತೋ ಏನೋ?
“ಒಂದು ವಾರದಿಂದ ಅವನನ್ನು
ಗಮನಿಸಿದ್ದೀಯಾ? ಕ್ಲಾಸಿಗೆ ಬಂದರೆ ಬಂದ ಇಲ್ಲವಾದರೆ ಇಲ್ಲ. ಬಂದರೂ ಯಾರೊಡನೆಯೂ ಹೆಚ್ಚು ಮಾತಿಲ್ಲ”
“ನಿನ್ನ ಜೊತೆಯೂ ಮಾತನಾಡಿಲ್ವ
ಅವನು?”
“ನನ್ನ ಜೊತೆಯಿರಲೀ ಸಿಂಚು
ಅವನು ಎಷ್ಟು ಆಪ್ತರಿದ್ದರು. ಅವಳ ಜೊತೆಯೂ ಮಾತನಾಡುತ್ತಿಲ್ಲ”
“ನನಗವತ್ತೇ ಅನ್ನಿಸಿತ್ತು.
ಒಂದು ಬಾರಿ ಒಬ್ಬ ಹುಡುಗ ತನಗೆ ತುಂಬಾ ಹತ್ತಿರವಿದ್ದ ಗೆಳತಿಗೆ ಪ್ರಪೋಸ್ ಮಾಡಿಬಿಟ್ಟರೆ ಅವರಿಬ್ಬರ
ನಡುವೆ ಪ್ರೇಮವಿರುವ ಸಾಧ್ಯತೆ ಇದೆಯೇ ಹೊರತು ಮೊದಲಿನಂತೆ ಸ್ನೇಹವಂತೂ ಇರಲಾಗದು”
‘ನಮ್ಮಿಬ್ಬರ ಮಧ್ಯೆಯೂ ನಾನು
ಪ್ರಪೋಸ್ ಮಾಡಿ ನೀನು ತಿರಸ್ಕರಿಸಿಬಿಟ್ಟರೆ ನಮ್ಮೀರ್ವರ ನಡುವಿನ ಸ್ನೇಹಕ್ಕೆ ಕುಂದಾಗುತ್ತದಲ್ವಾ?’
ಇಬ್ಬರಲ್ಲೂ ಯೋಚನೆ ಬಂತು.
“ನೀನ್ಯಾರನ್ನು ಲವ್ ಮಾಡಿಲ್ವಾ
ಲೋಕಿ?” ಕೇಳಲೋ ಬೇಡವೋ ಎಂದು ಯೋಚಿಸುತ್ತಾ ಮೆಲ್ಲ ಕೇಳಿದಳು ಪೂರ್ಣಿಮಾ.
“ಒಬ್ಬಳು ಹುಡುಗಿ ಇದ್ದಾಳೆ.
ನನಗೆ ತುಂಬಾನೇ ಹತ್ತಿರದವಳು. ಅವಳನ್ನು ತುಂಬಾ ಪ್ರೀತಿಸುತ್ತಿದ್ದೀನಿ. ಸ್ನೇಹಾ ಅಂತ”
‘ಛೇ!’ ಮನಸ್ಸಿಗಾದ ಬೇಸರವನ್ನು
ತೋರ್ಪಡಿಕೊಳ್ಳದಿರಲು ಪ್ರಯತ್ನಿಸುತ್ತ “ಹತ್ತಿರದವಳು ಅಂದ್ರೆ ನೆಂಟರ ಪೈಕಿ ಹುಡುಗೀನಾ?”
“ಸ್ನೇಹಾ ನಾನು ನೆಂಟರೇಗಾಗ್ತೀವಿ?!
ನಮ್ಮ ಮನೆ ಕಡೆಯೆಲ್ಲ ಅಣ್ಣ ತಂಗಿಗೆ ಯಾರೂ ನೆಂಟರು ಅಂತ ಕರೆಯೋದಿಲ್ಲ” ಪೂರ್ಣಿಯ ಮುಖಭಾವದಲ್ಲಾಗುತ್ತಿದ್ದ
ಬದಲಾವಣೆಗಳನ್ನು ಗಮನಿಸುತ್ತಾ ಹೇಳಿದ.
”ತಂಗೀನಾ!” ನಿಟ್ಟುಸಿರು ಬಿಡುತ್ತಾ
ಹೇಳಿದಳು “ನಾನೆಲ್ಲೋ ನಿಜವಾಗಲೂ ನೀನ್ಯಾರನ್ನೋ ಲವ್ ಮಾಡ್ತಿದ್ದೀಯಾ ಅಂದುಕೊಂಡೆ”
“ತಮಾಷೆಯಲ್ಲ, ನಿಜವಾಗಲೂ ನಾನವಳನ್ನು
ಪ್ರೀತಿಸುತ್ತಿದ್ದೀನಿ”
“ಅಪ್ಪಾ ಬೃಹಸ್ಪತಿ! ನೀನು
ಕನ್ನಡದಲ್ಲಿ ದೊಡ್ಡ ಪಂಡಿತ ಅಂತ ಗೊತ್ತು. ನಾನು ಕೇಳಿದ್ದು ನೀನ್ಯಾರನ್ನಾದರೂ ಪ್ರೇಮಿಸುತ್ತಿದ್ದೀಯಾ
ಅಂತ” ನಗುತ್ತಾ ಕೇಳಿದಳು.
“ಓ, ಪ್ರೇಮದ ವಿಷಯಾನ. ನನ್ನ
ತಂಗಿ ಬಿಟ್ಟರೆ ಒಂದು ಹುಡುಗಿಯೊಂದಿಗೆ ಅತಿ ಹೆಚ್ಚು ಮಾತನಾಡಿದ್ದೇ ನಿನ್ನ ಜೊತೆ. ಅಂತಹದ್ರಲ್ಲಿ ಪ್ರೇಮ
– ಗೀಮ ಎಲ್ಲಾ ನನ್ನ ಮನಸ್ಸಲ್ಲಿ ಎಲ್ಲಿಂದ ಹುಟ್ಟಬೇಕು”
“ಮಾತನಾಡಿದರೆ ಮಾತ್ರ ಪ್ರೇಮ
ಹುಟ್ಟೋದಾ?”
“ಅಂದ್ರೆ?”
“ಎಷ್ಟೊಂದು ಜನ ಮೊದಲ ನೋಟಕ್ಕೇ
ಪ್ರೀತಿ ಹುಟ್ಟಿತು ಅಂತ ಹೇಳ್ತಾರಲ್ಲಾ. ಅದಕ್ಕೆ ಕೇಳಿದೆ ಅಷ್ಟೇ”
“ಮೊದಲ ನೋಟಕ್ಕೇ ಪ್ರೇಮದ ಭಾವನೆ
ಹುಟ್ಟುತ್ತೆ ಅನ್ನೋದು ನನ್ನ ಅನಿಸಿಕೆಯಲ್ಲಿ ಸುಳ್ಳು. ಮೊದಲ ದಿನ ನೋಡೋದು, ಎರಡನೇ ದಿನ ಪ್ರಪೋಸ್
ಮಾಡೋದು, ಮೂರನೇ ದಿನ ಸುತ್ತಾಡೋದು, ನಾಲ್ಕನೇ ದಿನ ಮದುವೆಯಾಗೋದು – ಈ ರೀತಿ ಆಗಿಬಿಟ್ಟರೆ ಪ್ರೇಮ
ವಿವಾಹಕ್ಕೂ ಅರೇಂಜ್ಡ್ ಮ್ಯಾರೇಜಿಗೂ ಏನು ವ್ಯತ್ಯಾಸವಿರುತ್ತೆ ಹೇಳು. ಅದರಲ್ಲೂ ನೋಡ್ತೀಯ, ಇಷ್ಟಪಡ್ತೀಯ
ಮದುವೆಯಾಗ್ತೀಯ. ಪ್ರೇಮ ಅನ್ನೋದು ಹುಟ್ಟಬೇಕಾಗಿರೋದು ನಂಬಿಕೆ ಅನ್ನೋ ತಳಹದಿಯ ಮೇಲೆ. ಇನ್ನೊಬ್ಬರ
ವ್ಯಕ್ತಿತ್ವವನ್ನು ಸಂಪೂರ್ಣವಾಗಲ್ಲದಿದ್ದರೂ ಕಿಂಚಿತ್ತಾದರೂ ಅರ್ಥೈಸಿಕೊಳ್ಳೋ ಶಕ್ತಿಯಿರೋ ನಮ್ಮ ಮನಸ್ಸಿನಿಂದ”
ಲೋಕಿಯ ವಾಗ್ಝರಿಯನ್ನು ತನ್ಮಯತೆಯಿಂದ
ಆಲಿಸುತ್ತಾ ಅವನನ್ನೇ ದಿಟ್ಟಿಸುತ್ತಾ ಕುಳಿತ ಪೂರ್ಣಿಮಾಗೆ ಆತ ಮಾತು ನಿಲ್ಲಿಸಿದ್ದೂ ತಿಳಿಯಲಿಲ್ಲ.
“ಹಲೋ.... ಪೂರ್ಣಿ ಏನು ಯೋಚಿಸುತ್ತಿದ್ದೀಯಾ?”
“ಏನೂ ಇಲ್ಲ. ನಿನ್ನ ಮಾತುಗಳನ್ನು
ಕೇಳಿ ಎಲ್ಲೋ ಕಳೆದುಹೋದಂತಾಯಿತು”
ಇವಳೇ ನನ್ನ ಬಗ್ಗೆ ಕೇಳಿದ
ಮೇಲೆ ನಾನು ಕೇಳೋದರಲ್ಲಿ ಏನೂ ತಪ್ಪಿರೋದಿಲ್ಲ ಎಂದುಕೊಂಡು “ಬರೀ ನನ್ನ ಬಗ್ಗೇನೆ ಕೇಳಿದೆಯಲ್ಲಾ...ನೀನು
ಯಾರನ್ನೂ ಪ್ರೀತಿ.....ಅಂದ್ರೆ ಪ್ರೇಮಿಸಿಲ್ವಾ?”
“ಇಲ್ಲಿಯವರೆಗಂತೂ ಯಾರೂ ಇರಲಿಲ್ಲ.
ಇನ್ನು ಮುಂದೆಯೂ ಯಾರೂ ಇರೋದಿಲ್ಲ ಅನ್ನೋ ನಂಬಿಕೆ ನನಗಂತೂ ಇಲ್ಲ” ನಾಚಿಕೆಯಿಂದ ಹೇಳಿದವಳ ಕೆನ್ನೆ
ರಂಗೇರಿತ್ತು.
“ಪೂರ್ಣಿ ಆಗಲೇ ಏಳು ಘಂಟೆಯಾಯಿತು.
ಹೋರಡೋಣ್ವಾ?” ಮತ್ತಷ್ಟು ಮಾತನಾಡಿದರೆ ಎಲ್ಲಿ ಪ್ರೇಮ ನಿವೇದನೆ ಮಾಡಿಕೊಂಡುಬಿಡುತ್ತೇನೋ ಎಂಬ ಭಯದಿಂದ
ಲೋಕಿ ಪೂರ್ಣಿಯನ್ನು ಹೊರಡಿಸಿದ.
“ಸರಿ ಲೋಕಿ. ನಾಳೆ ಸಿಗೋಣ”
*
* *
ಲೋಕಿ ಮನೆಯೆಡೆಗೆ ನಡೆಯುತ್ತಿದ್ದಾಗ
ದಾರಿಯಲ್ಲಿ ಅವತ್ತು ಹೋಟೆಲಿನೆದುರಿಗೆ ಸಿಕ್ಕಿದ್ದ ಸಣಕಲು ವ್ಯಕ್ತಿ ಭೇಟಿಯಾದ. ಪೂರ್ಣಿಯನ್ನೇ ನೆನಪಿಸಿಕೊಂಡು
ಬರುತ್ತಿದ್ದ ಲೋಕಿಗೆ ಆತನನ್ನು ನೋಡುತ್ತಿದ್ದಂತೆ ಅಷ್ಟು ಹೊತ್ತು ನಡೆದಿದ್ದೆಲ್ಲಾ ಮರೆತುಹೋದಂತಾಯಿತು.
ಆತ ಹತ್ತು ರುಪಾಯಿಯ ನೋಟೋಂದನ್ನು ಲೋಕಿಗೆ ಕೊಟ್ಟು
“ಮಧುರೈ ಅಥವಾ ಕೊಡೈಕೆನಾಲಿನಲ್ಲಿ
ಒಬ್ಬರು ಫಿಯೆಟ್ ಕಾರಿನಲ್ಲಿ ನಿನ್ನನ್ನು ಭೇಟಿ ಮಾಡುತ್ತಾರೆ. ಅವರ ಕೈಗೆ ಇದನ್ನು ಕೊಡು. ಅವರು ನಿನಗೊಂದು
ಪತ್ರ ಕೊಡುತ್ತಾರೆ” ಎಂದ್ಹೇಳಿ ಆತ ಹೊರಟುಹೋದ.
ಮನೆಗೆ ಬಂದ ಲೋಕಿಗೆ ಈ ಹತ್ತು
ರುಪಾಯಿಯ ಸಹಾಯದಿಂದ ನನ್ನನ್ನವರು ಹೇಗೆ ಕಂಡುಹಿಡಿಯುತ್ತಾರೆ. ಇದರಲ್ಲೇನಾದರೂ ಬರೆದಿದೆಯೋ ಎಂದು ನೋಟನ್ನೊಮ್ಮೆ
ಗಮನಿಸಿದ. ಏನೂ ಕಾಣಲಿಲ್ಲ. ಆಕಸ್ಮಿಕವಾಗಿ ಬೇರೆ ಯಾರೋ ಅವರಿಗೆ ಹತ್ತು ರುಪಾಯಿಯ ನೋಡು ಕೊಟ್ಟು ನನಗೆ
ಕೊಡಬೇಕಿದ್ದ ಪತ್ರವನ್ನು ಅವರಿಗೇ ಕೊಟ್ಟುಬಿಟ್ಟರೆ. ಆ ರೀತಿ ಆಗಲಾರದು. ಈ ನೋಟಿನಲ್ಲೇ ಏನೋ ಸಂಕೇತವಿರಬೇಕೆಂದು
ಗಮನಿಸಿದವನಿಗೆ ನೋಟಿನ ಮೇಲೆ ದಪ್ಪಕ್ಷರದಲ್ಲಿ ಮುದ್ರಿಸಿರುವ ಸಂಖೈ ಕಾಣಿಸಿತು. ನಾನೆಂತಹ ದಡ್ಡ, ಪ್ರತಿ
ನೋಟಿಗೂ ಅದರದೇ ಆದ ಸಂಖೈಯಿರುತ್ತದೆ. ಅದೊಂದನ್ನು ನೆನಪಿಟ್ಟುಕೊಂಡರೆ ಅದಕ್ಕಿಂತ ಒಳ್ಳೆ ಕೋಡ್ ವರ್ಡ್
ಬೇಕಾ?!!
*
* *
ಅಧ್ಯಾಯ – 8
ಮಾರನೆಯ ದಿನ ತಮಿಳುನಾಡಿಗೆ
ಹೊರಟಾಗ ಸಂಜೆ ನಾಲ್ಕು ಘಂಟೆಯಾಗಿತ್ತು. ಎಲ್ಲರಿಗೂ ತರಗತಿಯಿಂದ ಮೊದಲ ಬಾರಿ ಪ್ರವಾಸಕ್ಕೆ ಹೋಗುವ ಖುಷಿಯಿದ್ದರೆ
ಲೋಕಿ ಮಾತ್ರ ತಮಿಳುನಾಡಿನಲ್ಲಿ ಏನಾಗುತ್ತೋ? ಎಂಬ ಕಾರಣಕ್ಕೆ ಉದ್ವೇಗಗೊಂಡಿದ್ದ. ಪೂರ್ಣಿಮಾ ಮುಂದೆ
ಕುಳಿತಿದ್ದಳು. ಅವಳ ಜೊತೆ ಹೆಚ್ಚು ಮಾತನಾಡಲು ಮನಸ್ಸಿಲ್ಲದ ಕಾರಣ ಲೋಕಿ ಕೊನೆಯ ಸೀಟಿನಲ್ಲಿ ಕಿಟಕಿಯ
ಬಳಿ ಕುಳಿತ. ಸಿಂಚನಾ ಪೂರ್ಣಿಯ ಪಕ್ಕ ಕುಳಿತಿದ್ದಳು. ಗೌತಮ್ ಕೂಡ ಮುಂದೆಯೇ ಕುಳಿತಿದ್ದ. ಅವನು ಸಿಂಚನಾಳೊಡನೆ
ಮಾತನಾಡಿ ಬಹಳ ದಿನಗಳೇ ಆಗಿಹೋಗಿದ್ದವು. ಬಸ್ ಹೊರಟ ಮೇಲೆ ಎಲ್ಲರೂ ಹಾಡಲು ಶುರುಮಾಡಿದ್ದರು. ಬಸ್ಸಿನೊಳಗಿನ
ಆ ಚಿಕ್ಕ ಜಾಗದಲ್ಲೇ ಕುಣಿದು ಕುಪ್ಪಳಿಸುವವರೂ ಬಹಳ ಜನ ಇದ್ದರು. ಲೋಕಿಗೂ ಕೂಡ ಭಾಗವಹಿಸಲು ಒತ್ತಾಯ
ಮಾಡಿದರು; ಅನ್ಯಮನಸ್ಕನಾಗಿದ್ದ ಲೋಕಿ ಅವರ ಒತ್ತಾಯದಿಂದ ತಪ್ಪಿಸಿಕೊಳ್ಳಲು ಕಣ್ಣು ಮುಚ್ಚಿದ, ನಿದ್ರೆ
ಮಾಡುವವನಂತೆ ನಟಿಸುತ್ತಾ. ಮನದಲ್ಲಿ ಸಾವಿರಾರು ಯೋಚನೆಗಳು ಕಾಡುತ್ತಿದ್ದವು. ‘ನಾನ್ಯಾಕೆ ಇವರಂತಿಲ್ಲ?
ನಾನ್ಯಾಕೆ ಹೀಗೆ ಬೇವರ್ಸಿಯ ಹಾಗೆ ಕುಳಿತಿದ್ದೀನಿ? ಆದರ್ಶ ಅಂತೆ ತತ್ವ ಅಂತೆ ಸಿದ್ಧಾಂತ ಅಂತೆ! ನನಗ್ಯಾಕೆ
ಬೇಕು ಇವೆಲ್ಲಾ? ಕೈಯಲ್ಲಿ ದುಡ್ಡಿದೆ, ಸಮಾಜದ ದೃಷ್ಟಿಯಲ್ಲಿ ಆನಂದವನ್ನನುಭವಿಸೋದಿಕ್ಕೆ ವಯಸ್ಸಿದೆ.
ಪ್ರೀತಿಸೋದಿಕ್ಕೆ ತಂಗಿ, ಅಪ್ಪ, ತಮ್ಮ ಇದ್ದಾರೆ; ಪ್ರೇಮಿಸೋದಿಕ್ಕೆ ಬಹುಶಃ ಪೂರ್ಣಿ. ಇದೆಲ್ಲಾ ಬಿಟ್ಟು
ಈ ವ್ಯವಸ್ಥೆ ಸರಿ ಮಾಡೋ ಹುಚ್ಚಿಗ್ಯಾಕೆ ಬೀಳ್ಬೇಕು? ಯಾಕೆ ಬೀಳಬಾರದು? ಈ ದೇಶ ನಮಗೇನೆಲ್ಲಾ ಕೊಟ್ಟಿದೆ,
ಆದರೆ ನಾವು ಈ ದೇಶಕ್ಕೆ ಕೊಟ್ಟಿರೋದಾದ್ರೂ ಏನು? ಭ್ರಷ್ಟಾಚಾರ, ಲಂಚಕೋರತನ ಅವ್ಯವಸ್ಥೆ ಅಷ್ಟೇ. ಇದನ್ನೆಲ್ಲಾ
ಸರಿಮಾಡೋದು ನಮ್ಮ ಕರ್ತವ್ಯವಲ್ಲದೆ ಇನ್ಯಾರದು? ನಾನು ಮಾಡ್ತಾ ಇರೋದೆ ಸರಿ. ಸರಿಯಾ?’ ಹೀಗೆ ಸಾಗಿತ್ತು
ಲೋಕಿಯ ಆಲೋಚನೆ.
ಹಾಡುತ್ತಿದ್ದ ಸಿಂಚನಾಳೆಡೆಗೆ
ನೋಡಿ ಒಮ್ಮೆ ನಿಡುಸುಯ್ದ ಗೌತಮ್. ‘ಇಂಥಾ ಹುಡುಗಿಯನ್ನು ಪಡೆಯೋ ಭಾಗ್ಯ ನನಗಿಲ್ಲದೆ ಹೋಯಿತಲ್ಲ. ಛೇ!
ನಿಜಕ್ಕೂ ನಾನು ದುರದೃಷ್ಟವಂತ. ಎಲ್ಲಾ ಆ ದೇವರು ಬರೆದದ್ದು. ನನ್ನದೇನಿದೆ? ಇವಳಿಲ್ಲದಿದ್ದರೆ ಇನ್ನೊಬ್ಬಳು
ಸಿಗ್ತಾಳೆ.... ಬೇರೆಯವಳನ್ನು ನನ್ನ ಮನ ಮನಸ್ಪೂರಕವಾಗಿ ಒಪ್ಪಿಕೊಳ್ಳುತ್ತಾ? ಥೂ! ಈ ಸಿಂಚನಾಳೆಡೆಗೆ
ನೋಡಿದಾಗೆಲ್ಲಾ ಹೀಗೆ. ಜೀವನದಲ್ಲಿ ಪ್ರೇಮ ಬಿಟ್ಟರೆ ಮತ್ತೇನೂ ಇಲ್ಲವೇನೋ ಎಂಬಂತಹ ಆಲೋಚನೆಗಳು’ ಎಂದುಕೊಂಡು
ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತ.
“ಯಾಕೆ ಪೂರ್ಣಿ? ನಿನ್ನ ಲೋಕಿ
ಒಬ್ಬನೇ ಕುಳಿತುಕೊಂಡಿದ್ದಾನೆ. ಹೋಗಿ ಕರೆದುಕೊಂಡು ಬಾ” ಸಿಂಚನಾ ಕೇಳಿದಳು.
“ನಾನ್ಯಾಕೆ ಕರೆದುಕೊಂಡು ಬರಲಿ”
ಹುಸಿಮುನಿಸು ತೋರುತ್ತಾ ಹೇಳಿದಳು ಪೂರ್ಣಿಮಾ.
“ಏನೋಪ್ಪಾ!? ಪ್ರೇಮಿಗಳಿಬ್ಬರೂ
ಒಟ್ಟಿಗೆ ಇರಲಿ ಎನ್ನೋ ಆಸೆಯಿಂದಾ ಹೇಳಿದೆ. ನಿನಗೇ ಇಷ್ಟ ಇಲ್ಲ ಅಂದ್ರೆ ಬೇಡ ಬಿಡು”
“ನನಗಿಷ್ಟ ಇಲ್ಲ .... ಅಂತಾ
ಅಲ್ಲ. ಆತನ ಮೂಡ್ ಸರಿಯಿದ್ದರೆ ಅವನೇ ಬರುತ್ತಿದ್ದ. ಮನದಲ್ಲೇನೋ ಯೋಚಿಸುತ್ತಿರಬೇಕು. ಅದಕ್ಕೇ ಬಂದಿಲ್ಲ”
“ನೀನಿಲ್ಲಿ ಕುಳಿತಿರಬೇಕಾದರೆ
ಇನ್ಯಾವುದರ ಬಗ್ಗೆ ಯೋಚಿಸುತ್ತಿರುತ್ತಾನೆ. ಇವಳಿಗೆ ಯಾವಾಗ ಹೇಗೆ ಪ್ರಪೋಸ್ ಮಾಡೋದು ಅಂತ ಪ್ಲಾನ್
ಮಾಡ್ತಿರ್ತಾನೆ ಅಷ್ಟೇ?”
ಪೂರ್ಣಿಮಾ ಉತ್ತರಿಸಲಿಲ್ಲ.
ಕೆಲವು ಕ್ಷಣಗಳ ಬಳಿಕ ಸಿಂಚನಾಳೆಡೆಗೆ ತಿರುಗಿ “ಅವನು ನಿಜಕ್ಕೂ ನನ್ನನ್ನು ಲವ್ ಮಾಡ್ತಿದ್ದಾನೆ ಅಂತೀಯಾ?”
“ಕಣಿ ಕೇಳು... ಇನ್ನೂ ಅನುಮಾನಾನಾ
ನಿನಗೆ. ಅವನ ಮನದ ತುಂಬಾ ನೀನೇ ಇದ್ದೀಯ ಅಂತ ಅವನ ಕಣ್ಣುಗಳೇ ಸಾಕ್ಷ್ಯ ನುಡಿಯುತ್ತೆ”
“ಮ್. ಇರಬಹುದೇನೋ. ಆದರೂ ಅವನಿಗೆ
ನನಗಿಂತ ಬೇರೆ ಯಾವುದರಲ್ಲೋ ಹೆಚ್ಚಿನ ಆಸಕ್ತಿಯಿರಬೇಕು ಅಂತ ನನ್ನ ಅನಿಸಿಕೆ” ಪೋಲೀಸ್ ಠಾಣೆಯಲ್ಲಿ
ನಕ್ಸಲೀಯರ ಬಗ್ಗೆ ಆಸಕ್ತಿಯಿಂದ ಓದುತ್ತಿದ್ದವನನ್ನು ನೆನಪಿಸಿಕೊಂಡು ಹೇಳಿದಳು ಪೂರ್ಣಿಮಾ.
“ಈ ವಯಸ್ಸಿನಲ್ಲಿ ಹುಡುಗರ
ಆಸಕ್ತಿ ಹುಡುಗಿಯರ ಬಗ್ಗೆಯಿಲ್ಲದೆ ಇನ್ಯಾವುದರ ಬಗ್ಗೆಯಿರುತ್ತೆ. ನೀನವನನ್ನು ಪ್ರೀತಿಸ್ತಿದ್ದೀಯಾ
ತಾನೇ?”
ಪೂರ್ಣಿಮಾ ನಾಚಿಕೆಯಿಂದ ತಲೆತಗ್ಗಿಸಿದಳು.
ಅವಾಗಿನಿಂದ ನನ್ನನ್ನು ರೇಗಿಸುತ್ತಿದ್ದಾಳೆ, ಇವಳನ್ನೂ ಕೆಣಕಬೇಕಲ್ಲಾ ಎಂದು ಯೋಚಿಸುತ್ತಾ “ಸಿಂಚನಾ.
ಗೌತಮ್ ಜೊತೆ ಇನ್ನೂ ನೀನು ಮಾತನಾಡಿಲ್ವಾ?”
ನಗುನಗುತ್ತಾ ಮಾತನಾಡುತ್ತಿದ್ದ
ಸಿಂಚನಾಳ ಮುಖದಲ್ಲಿ ಬೇಸರ ಮೂಡಿತು.
“ನಾನೂ ಮಾತನಾಡಿಸೋ ಪ್ರಯತ್ನ
ಮಾಡಿಲ್ಲ. ಅವನೂ ಬಂದು ಮಾತನಾಡಿಸಲಿಲ್ಲ. ಒಬ್ಬ ಒಳ್ಳೇ ಗೆಳೆಯನನ್ನು ಕಳೆದುಕೊಳ್ತಾ ಇದ್ದೀನಲ್ಲ ಅಂತ
ಬೇಸರವಾಗ್ತಿದೆ. ಯಾವಾಗಲೂ ಮಾತನಾಡುತ್ತಾ ಎಲ್ಲರನ್ನೂ ನಗಿಸುತ್ತಾ ಇರುತ್ತಿದ್ದವನು ನೋಡು ಒಬ್ಬನೇ
ಹೇಗೆ ಕುಳಿತಿದ್ದಾನೆ. ಹೊಟ್ಟೆ ಚುರುಕ್ ಅನ್ನುತ್ತೆ ಅವನನ್ನು ನೋಡಿದರೆ” ಎಂದ್ಹೇಳಿ ಸಿಂಚನಾ ಮೌನವಹಿಸಿದಳು.
“ಸಾರಿ ಸಿಂಚು. ಗೌತಮ್ ಬಗ್ಗೆ
ಕೇಳಿ ನಿನ್ನ ಮನಸ್ಸಿಗೆ ಬೇಸರವಾಗೋ ಹಾಗೆ ಮಾಡಿಬಿಟ್ಟೆ”
“ಪರವಾಗಿಲ್ಲ ಬಿಡು”
ಇಬ್ಬರ ನಡುವೆ ಮೌನ ಮಾತ್ರ
ಉಳಿಯಿತು.
ಬಸ್ ಸೋಮನಾಥಪುರದ ಬಳಿ ನಿಂತಾಗಲೇ
ಲೋಕಿ ನಿದ್ರಾನಾಟಕದಿಂದ ಹೊರಬಂದು ಕೆಳಕ್ಕೆ ಇಳಿದಿದ್ದು. ತರಗತಿಯವರೆಲ್ಲ ಇದ್ದಾರೆ, ಇಷ್ಟು ಜನರ ಮುಂದೆ
ಸಿಗರೇಟು ಸೇದಲೋ ಬೇಡವೋ ಎಂದು ಯೋಚಿಸುತ್ತಾ ಕೊನೆಗೆ ಯಾರು ಏನಾದ್ರೂ ತಿಳಿದುಕೊಳ್ಳಲಿ ನನಗಂತೂ ಈಗ
ಒಂದು ಸಿಗರೇಟ್ ಬೇಕೆ ಬೇಕು ಎಂದುಕೊಳ್ಳುತ್ತಾ ಸಿಗರೇಟನ್ನು ಹಚ್ಚಿದ. ಸಿಗರೇಟು ಕೊಂಡ ಅಂಗಡಿಯವನ ಹತ್ತಿರ
“ಇಲ್ಲಿಂದ ಮಧುರೈಗೆ ಎಷ್ಟು ದೂರ?” ಎಂದು ಕೇಳಿದ.
“ಸೋಮನಾಥಪುರದ ಮೇಲೆ ಮಧುರೈಗೆ
ಹೋಗೋದಿಲ್ವಲ್ಲಾ ಸಾರ್?” ಎಂದ.
ಅಷ್ಟರಲ್ಲಿ ಬಸ್ಸಿನ ಡ್ರೈವರ್
ಕೂಡ ಅದೇ ಅಂಗಡಿಯ ಬಳಿ ಬಂದು ಲೋಕಿ ಅವನನ್ನುದ್ದೇಶಿಸಿ
“ಈಗ ನಾವು ಮಧುರೈಗೆ ಹೋಗ್ತಾ
ಇರೋದು ಅಲ್ವಾ?”
“ಹೌದು. ಯಾಕೆ?”
“ಈ ಊರಿನ ಮೇಲೆ ಮಧುರೈಗೆ ಹೋಗೋದಿಲ್ಲ
ಅಂತ ಅಂಗಡಿಯವನು ಹೇಳ್ತಾ ಇದ್ದಾನೆ”
“ಸಾಮಾನ್ಯವಾಗಿ ಈ ರೂಟಿನಲ್ಲಿ
ಹೋಗಲ್ಲ ಸರ್. ನಮ್ಮದು ತಮಿಳುನಾಡು ರಿಜಿಸ್ಟ್ರೇಷನ್ ಗಾಡಿ ನೋಡಿ. ಕರ್ನಾಟಕದಲ್ಲಿ ಪರ್ಮಿಟ್ ಇಲ್ಲ.
ಮಾಮೂಲಿ ರೂಟಿನಲ್ಲಿ ಹೋದರೆ ಪೋಲೀಸರ ಕಾಟ ಜಾಸ್ತಿ. ಸಿಕ್ಕಿಹಾಕಿಕೊಂಡರೆ ಹತ್ತು ಸಾವಿರ ದಂಡ ಕಟ್ಬೇಕು.
ಅದಿಕ್ಕೆ ಪೋಲೀಸರ ಓಡಾಟ ಅಷ್ಟಾಗಿಲ್ಲದ ಹಳ್ಳಿ ರೂಟಿನಲ್ಲಿ ಹೋಗಿ ಕರ್ನಾಟಕ ಬಾರ್ಡರ್ ಕ್ರಾಸ್ ಮಾಡಿಬಿಡ್ತೀವಿ”
ಎಂದ್ಹೇಳಿ ಸಿಗರೇಟು ಕೊಂಡು ಹೊರಟುಹೋದ.
‘ಹೋಗ್ತಾ ಇರೋದು ವ್ಯವಸ್ಥೆಯನ್ನು
ಸರಿಪಡಿಸಬೇಕು ಅನ್ನೋ ಒಂದು ಸಂಘಟನೆಗೆ ಸೇರುವ ಉದ್ದೇಶದಿಂದ. ಆದರಾ ಉದ್ದೇಶಕ್ಕೆ ತಲುಪೋದಿಕ್ಕೆ ಹತ್ತಿರೋ
ವಾಹನವೇ ಸರಕಾರಕ್ಕೆ ತೆರಿಗೆ ಕಟ್ಟದೆ ಮೋಸ ಮಾಡ್ತಿದೆ! ಕಳ್ಳ ರೂಟಿನಲ್ಲಿ ಹೋಗೋ ಈ ಬಸ್ಸನ್ನು ಯಾಕೆ
ಗೊತ್ತು ಮಾಡಿದರು?’ ಸಿಂಚನಾಳನ್ನು ಕೇಳಿದರೆ ತಿಳಿಯಬಹುದೆಂದು ಅರ್ಧ ಮುಗಿದಿದ್ದ ಸಿಗರೇಟನ್ನು ಬಿಸಾಕಿ
ಒಂದು ಪ್ಯಾಕ್ ಸಿಗರೇಟು ಕೊಂಡು ಸಿಂಚನಾಳೆಡೆಗೆ ಹೋದನು. ಪೂರ್ತಿ ಸಿಗರೇಟನ್ನು ಸೇದಿದ್ದರೆ ಇನ್ನೊಂದು
ನಿಮಿಷ ಲೋಕಿ ಅಲ್ಲೇ ಇರುತ್ತಿದ್ದ. ಲೋಕಿ ಹೋಗಿ ಸರಿಯಾಗಿ ಒಂದು ನಿಮಿಷಕ್ಕೆ ಅಂಗಡಿಗೆ ಪತ್ರಿಕಾ ಏಜೆಂಟ್
ಸಂಜೆ ಪತ್ರಿಕೆಯ ಬಂಡಲನ್ನು ತಂದುಕೊಟ್ಟ. ಅದರಲ್ಲಿ ಲೋಕಿಗೆ ಬೇಕಾಗಿದ್ದ ಒಂದು ವರದಿ ಮುಖಪುಟದಲ್ಲಿ
ಬಂದಿತ್ತು –
"‘ಬಾಂಬ್’ ಎಸ್.ಐ ಬಂಧನ!”
ಮುಂದುವರೆಯುವುದು
No comments:
Post a Comment