Jan 30, 2014

ದಿನೇಶ್ ಕುಮಾರ್ ಕವಿತೆ

ದಿನೇಶ್ ಕುಮಾರ್

ಹೌದು ಸ್ವಾಮೀ....

ಸ್ವಾಮೀ ಜಾತಿಯೆಂಬುದೇ ಇಲ್ಲ, ಇರಲಿಲ್ಲ
ಎಂಬ ನಿಮ್ಮ ವಾದವೇ ದಿಟ

ನಮಗೆ ಹುಚ್ಚು ನಾಯಿ ಕಚ್ಚಿತ್ತು
ಊರಿಂದ ಹೊರಗೆ ಜೋಪಡಿಗಳಲ್ಲಿ ಬದುಕಿದೆವು


ನಿಮ್ಮ ಮನೆಯಂಗಣದ ತಿಪ್ಪೆ ತೆಗೆದೆವು
ನೀವು ಮಾಡಿದ ಕಕ್ಕ ಬಾಚಿದೆವು
ನೀವು ಹಚ್ಯಾ ಅಂದಾಗ ನಾಯಿಗಳಂತೆ ಬಾಲ ಮುದುರಿಕೊಂಡೆವು

ನಿಮ್ಮ ಮನೆಗಳಲ್ಲಿ, ಹೋಟೇಲುಗಳಲ್ಲಿ
ಕೇಳಿದ್ದರೆ ನಮಗೆ ಬೆಳ್ಳಿಯ ಲೋಟವನ್ನೇ ಕೊಡುತ್ತಿದ್ದರು
ಹುಚ್ಚುನಾಯಿ ಕಚ್ಚಿತ್ತು ನೋಡಿ, ಪ್ಲಾಸ್ಟಿಕ್ ಲೋಟದಲ್ಲಿ ಕಾಫಿ ಕುಡಿದೆವು
ಕೆಲವೆಡೆ ಅದೂ ಇಲ್ಲದಂತೆ ವಾಪಾಸು ಬಂದೆವು

ನಮ್ಮನ್ನು ಯಾರೂ ಜೀತಕ್ಕೆ ಇಟ್ಟುಕೊಂಡಿರಲಿಲ್ಲ
ನಾವೇ ನಮ್ಮ ಖುಷಿಗಾಗಿ ಜೀತ ಮಾಡಿದೆವು
ಆಹಾ ಜೀತವಲ್ಲ ಅದು, ಪರಿಚಾರಿಕೆ.. ನಾವೇ ಧನ್ಯರು
ನಿಮ್ಮ ಬಾರುಕೋಲುಗಳ ಏಟು ನಮಗೆ ಮಲ್ಲಿಗೆ ಸುರಿದಂತೆ
ಭಾರತದ ಅಧ್ಯಾತ್ಮದಲ್ಲಿ ಯೋಗದೃಷ್ಟಿ ಅಂತ ಒಂದಿದೆ ನೋಡಿ
ಹಾಗಾಗಿ ನಾವು ಮಾಡಿದ್ದು ಜೀತ ಎಂದೆನಿಸಲೇ ಇಲ್ಲ

ವಿದ್ಯೆ ನಾವು ಕಲಿತರಲ್ಲವೇ?
ಪಾಪ ಗುರುಕುಲಗಳು ಬೋರ್ಡು ತಗುಲಿಸಿಕೊಂಡು
ಅನೌನ್ಸ್ ಮೆಂಟು ಕೊಟ್ಟು ನಮ್ಮನ್ನು ಸೇರಿಸಿಕೊಳ್ಳಲು ಯತ್ನಿಸಿದವು
ಕೈಹಿಡಿದು ಅ ಆ ಇ ಈ ಕಲಿಸಲು ಬಂದರೂ ನಾವು ವಿದ್ಯೆ ಕಲಿಯಲಿಲ್ಲ
ಹಾಳಾದ್ದು ದಡ್ಡಮುಂಡೇವು ನೋಡಿ ವಿದ್ಯೆ ಹತ್ತಲಿಲ್ಲ

ಜಾತಿ ಕಾರಣಕ್ಕೆ ಲಕ್ಷಲಕ್ಷ ಜನರನ್ನು ಕೊಚ್ಚಿ ಕೊಲ್ಲಲಾಯಿತು
ಕ್ಷಮಿಸಿ, ಕೊಲ್ಲಲಾಯಿತು ಎಂದರೆ ಅದು ವಸಾಹತುಶಾಹಿ ಭಾಷೆ
ನಮ್ಮ ಅಧ್ಯಾತ್ಮದ ಭಾಷೆಯಲ್ಲಿ ಹೇಳುವುದಾದರೆ
ನಮಗೆ ಮುಕ್ತಿ, ಪೂರ್ಣ ಸಾಯುಜ್ಯ ದೊರಕಿಸಿಕೊಡಲಾಯಿತು
ಕೊಂದವರೇ ನಮ್ಮ ಪಾಲಿನ ದೇವರು

ಖೈರ್‍ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ಬೆತ್ತಲಾದವರು, ಸುಟ್ಟು ಹೋದವರು
ಅವರ ಬಗ್ಗೆ ಮಾತನಾಡುವುದೇ ವೇಸ್ಟು ಬಿಡಿ
ಬೆಂಡಿಗೇರಿಯಲ್ಲಿ ನಮಗೆ ತಿನ್ನಿಸಲಾಗಿದ್ದು ಮಲವಲ್ಲ, ಮೈಸೂರು ಪಾಕು
ವಸಾಹತುಶಾಹಿ ದೃಷ್ಟಿಕೋನ ನೋಡಿ
ಹಳದಿಯೆಲ್ಲ ಮಲದಂತೇ ಕಾಣುತ್ತದೆ

ನಾವು ಮುಟ್ಟಿಸಿಕೊಳ್ಳಲಾರದವರು, ನೋಡಿದರೂ ಅಪಶುಕನವಾದವರು
ಹಾಗಂತ ದೂರುತ್ತ ಕುಳಿತುಕೊಳ್ಳಬಾರದು ನೋಡಿ
ಅದನ್ನೂ ಪರಂಪರೆಯ ಕಣ್ಣಲ್ಲಿ ನೋಡಬೇಕು, ಅದಕ್ಕೆ ಅಧ್ಯಾತ್ಮಸಿದ್ಧಿ ಬೇಕು

ಬಸವಣ್ಣನೂ ಸುಳ್ಳು, ಅವನ ವಚನಗಳೂ ಸುಳ್ಳು
ಅವನು ಇಂಟರ್ ಕ್ಯಾಸ್ಟ್ ಮದುವೆ ಮಾಡಿದ್ದೂ ಮಹಾಸುಳ್ಳು
ಕ್ಯಾಸ್ಟೇ ಇಲ್ಲ, ಇನ್ನು ಇಂಟರ್ ಕ್ಯಾಸ್ಟ್ ಎಲ್ಲಿಂದ ಬರುತ್ತದೆ
ಮುಠ್ಠಾಳ ವಸಾಹತುಶಾಹಿಗಳು ಏನೇನೋ ಸೃಷ್ಟಿಸಿಬಿಟ್ಟರು ನೋಡಿ

ಕರ್ಮ ಮಾಡು ಫಲಕ್ಕೆ ನಿರೀಕ್ಷೆ ಮಾಡಬೇಡ ಎಂದ ಭಗವದ್ಗೀತೆ ಬರೆದವನು
ಎಂಥ ಅದ್ಭುತ ಮಾತು, ಇದಲ್ಲವೇ ಯೋಗದೃಷ್ಟಿ
ಅವಮಾನವಾದವನಿಗೇ ಅವಮಾನ ಎನಿಸದಿದ್ದರೆ ಅವಮಾನವೇ ಅಲ್ಲ ಎನ್ನುತ್ತಾರೆ
ಫಾರಿನ್ ಫಂಡು ತಿನ್ನುವ ಆಧುನಿಕ ಮನುಗಳು
ನಿಜ ಕಣ್ರೀ ನಮ್ಮ ಕಣ್ಣಿಗೆ ಈ ಯೋಗದೃಷ್ಟಿಯನ್ನು ಹಾಕಿಸಿಕೊಳ್ಳಬೇಕು
ಹೇಗೂ ಉಚಿತವಾಗಿ ಹಾಕಿಕೊಡಲು ಸಂಸ್ಕೃತಿ ರಕ್ಷಕರ, ಶೋಧಕರ ದಂಡೇ ಇದೆ
ಸಂಸ್ಖೃತಿ ಅಧ್ಯಯನಕಾರರ ಆಸ್ಪತ್ರೆಯಲ್ಲಿ ಆಪರೇಷನ್ ಖರ್ಚೂ ಫ್ರೀ ಕಣ್ರೀ

ಹೌದೂ ಸ್ವಾಮಿ
ಅಗ್ರಹಾರಗಳು, ಹೊಲಗೇರಿಗಳೇ ಸುಳ್ಳು
ಮುಟ್ಟು, ಮಡಿ, ಮೈಲಿಗೆಯೇ ಸುಳ್ಳು
ಇಲ್ಲಿ ಜಾತಿ ಎಂಬುದೇ ಇರಲಿಲ್ಲ, ಇಲ್ಲ
ಎಲ್ಲ ಸೃಷ್ಟಿಸಿದ್ದು ಆ ಬಿಳಿತೊಗಲಿನ ಜನರು
ಅಲ್ಲಿಯವರೆಗೆ ಈ ಇಂಡಿಯಾ ಫಳಫಳಾಂತ ಹೊಳೆಯುತ್ತಿತ್ತು
ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಲೋಹಿಯಾ ಎಲ್ಲ ಸುಳ್ಳು
ಎಲ್ಲರ ಕಣ್ಣಿಗೂ ವಸಾಹತುಶಾಹಿಯ ಕನ್ನಡಕವಿತ್ತು
ಅವರಾಡಿದ ಮಾತುಗಳೆಲ್ಲ ಸುಳ್ಳು

ಹೌದು ಸ್ವಾಮೀ
ಅದೇನೋ ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ
ಯೋಗದೃಷ್ಟಿ ಅಂತ ಒಂದಿದೆಯಲ್ಲ..
ಅದೊಂದೇ ನಿಜ ಕಣ್ರೀ

1 comment:

  1. Seriously you have spoke from the heart and the reality.

    ReplyDelete