ಶಶೀಧರ್ ಹೆಮ್ಮಾಡಿ
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು
(ಗೌರಿ ಲಂಕೇಶ್ ಪತ್ರಿಕೆಯಿ ಜನವರಿ 22, 2014ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು
ಬೇವಕೂಫೋಂ
ಕಿ ಕಮಿ ನಹಿ
ಏಕ್ ಢೂಂಡೊ ಹರಝಾರ್ ಮಿಲ್ತೆಂ
ಹೈಂ
ದಿನ ಬೆಳಗಾದರೆ ಧರ್ಮದ ಹೆಸರಿನಲ್ಲಿ, ಧರ್ಮ
ಗ್ರಂಥಗಳ ಹೆಸರಿನಲ್ಲಿ, ಜ್ಯೋತಿಷ್ಯ-ವಾಸ್ತು ಎಂದೆಲ್ಲ ನಮ್ಮನ್ನು
ಮೂರ್ಖರನ್ನಾಗಿಸಲು ಟಿವಿ ಚಾನೆಲ್ಗಳು
ಕಾದು ಕೂತಿರುತ್ತವೆ. ದೇವರನ್ನು ಆರಾಧಿಸಲಿಕ್ಕೇಂದೇ ಪ್ರತ್ಯೇಕ ಚಾನೆಲ್ಗಳಿವೆ. ಕುರಾನ್,
ಬೈಬಲ್, ಗೀತೆಗಳನ್ನು ಬೋಧನೆ ಮಾಡುವ ಚಾನೆಲ್ಗಳು, ರೇಡಿಯೋ ಸ್ಟೇಷನ್ಗಳೂ ಇವೆ. ಇಂಟರ್ನೆಟ್ನಲ್ಲಿಯೇ ತಿರುಪತಿ ತಿಮ್ಮಪ್ಪನಿಗೂ,
ಶಿರಡಿ ಸಾಯಿಬಾಬಾನಿಗೂ ಆರತಿ ಬೆಳಗಲು, ಪೂಜೆ
ಮಾಡಲು, ಕಾಣಿಕೆ ಹಾಕಲು ವ್ಯವಸ್ಥೆ
ಇದೆ. ಬಗೆಬಗೆಯ ಪೋಷಾಕು ಧರಿಸಿದ,
ವಿವಿಧ ಆಕೃತಿಯ ನಾಮಗಳನ್ನು ಧರಿಸಿದ
"ಸ್ವಾಮಿಗಳ' ಬಾಯಿಂದ ಬಂದ ಮಾತನ್ನೇ
ಪ್ರವಚನ ಎಂದು ತನ್ಮಯರಾಗಿ ಕೇಳುವ
ಜನರು, ಕುರಾನ್ನ ಒಂದೊಂದು
ವಾಕ್ಯವನ್ನೂ ಅದು ಯಾವ ಪುಟದಲ್ಲಿದೆ
ಎಂದು ಕರಾರುವಕ್ಕಾಗಿ ಹೇಳುತ್ತಾ ಎಲ್ಲದಕ್ಕೂ ಇಲ್ಲಿದೆ ಪರಿಹಾರ ಎಂದು
ಮಂಕುಬೂದಿ ಎರಚುವ ರಝಾಕೀರ್ ನಾಯ್ಕ್ಗಳು, "ಗಾಡ್ ಸೆಡ್, ಯು
ವಿಲ್ ಗೋ ಟು ಹೆಲ್'
ಎಂದು ಗಂಡಸೊಬ್ಬ ಹೇಳಿದರೆ ಹೆಂಗಸೊಬ್ಬಳು "ದೇವರು
ಹೇಳಿದ, ನೀನು ನರಕಕ್ಕೆ ಹೋಗುವಿ' ಎಂದು
ಅಷ್ಟೇ ವೇಗದಲ್ಲಿ ಭಾಷಾಂತರ ಮಾಡಿ ಭಯ
ಹುಟ್ಟಿಸುವ ಜೋಡಿಗಳು ಟಿವಿ ಪರದೆಗಳಲ್ಲಿ
ಅದೆಷ್ಟು ವ್ಯಸ್ತರಾಗಿದ್ದಾರೆ.
ಮೌಢ್ಯವನ್ನು
ಮಟ್ಟ ಹಾಕಲು ಕಾನೂನು ತರುತ್ತೇವೆ
ಎಂದು ಸರಕಾರ ಹೊರಟರೆ ಮೌಢ್ಯ
ವಿರೋಧಿ ಕಾನೂನನ್ನೇ ವಿರೋಧಿಸಿ ಚಾನೆಲ್ಗಳಲ್ಲಿ ಚರ್ಚೆಗಳು
ನಡೆಯುತ್ತವೆ. ವಿಜ್ಞಾನಿಗಳನ್ನೋ, ವಿಚಾರವಾದಿಗಳನ್ನೋ ಈ ಚರ್ಚೆಗಳಿಗೆ ಕರೆಯದೆ
ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು ಕರೆದು ಮೌಢ್ಯವೇ ವಿಜ್ಞಾನ
ಎಂದು ನಂಬಿಸುವ ಕೆಲಸಗಳು ನಡೆಯುತ್ತಿವೆ.
ಜ್ಯೋತಿಷ್ಯವೇ ಒಂದು ದೊಡ್ಡ ಢೋಂಗಿ.
ಆದರೂ ನಮ್ಮ ಚಾನೆಲ್ಗಳು
ಢೋಂಗಿ ಜ್ಯೋತಿಷಿಗಳು, ಢೋಂಗಿ ಬಾಬಾಗಳು ಎಂದು
ಪ್ರತ್ಯೇಕ ಕ್ಯಾಟಗರಿಯೊಂದನ್ನು ಹುಟ್ಟುಹಾಕಿ ಅವರ ವಿರುದ್ಧ ಕಾರ್ಯಾಚರಚರಣೆ
ಕೈಗೊಂಡಂತೆ ನಾಟಕ ಮಾಡಿ ತಮ್ಮ
ಚಾನೆಲ್ಗಳಲ್ಲಿ ಬರುವ ಜ್ಯೋತಿಷಿಗಳು,
ಬಾಬಾಗಳೇ ಅಸಲಿ ಎಂದು ಅವರ
ಮಾರ್ಕೆಟ್ ಹೆಚ್ಚಿಸುವ ಕೆಲಸ ಮಾಡುತ್ತಿವೆ. ರವಿಶಂಕರ
ಗುರೂಜಿ, ನಿತ್ಯಾನಂದ, ಪೇಜಾವರ ಸ್ವಾಮಿ, ಬಾಬಾ
ರಾಮ್ದೇವ್, ಆಸಾರಾಂ ಬಾಪೂ,
ನಿರ್ಮಲ್ ಬಾಬಾ, ಕಾಳಿ ಸ್ವಾಮಿ,
ಬ್ರಹ್ಮಾಂಡ ಗುರೂಜಿ ಮುಂತಾದವರೆಲ್ಲ ನಿತ್ಯವೂ
ನಮ್ಮ ಜನರನ್ನು ತಮ್ಮ ಮಾತು-ಕೃತಿಗಳ ಮೂಲಕ ಮೂರ್ಖರನ್ನಾಗಿಸುತ್ತಿದ್ದಾರೆ.
ಇಷ್ಟೆಲ್ಲ ಇರುವ ಈ ದೇಶದಲ್ಲಿ
ಇವರದೇ ಸಂತತಿಗೆ ಸೇರಿರುವ ಅವನ್ಯಾವನೋ ಒಬ್ಬ
ಬೆನ್ನಿ ಹಿನ್ ಬೆಂಗಳೂರಿಗೆ ಬರುತ್ತಾನೆಂದರೆ
ಚೆಡ್ಡಿಗಳು ತಮ್ಮ ಚೆಡ್ಡಿ ಹರಿದು
ಹೋದಂತೆ ಆಡುತ್ತಿದ್ದಾರೆ. ಮೇಲೆ ಹೇಳಿದ ಸ್ವಾಮಿಗಳು,
ಬಾಬಾಗಳು, ಜ್ಯೋತಿಷಿಗಳು ಎಲ್ಲರೂ ಅದೇನೋ ಸುನಾಮಿ
ಬರುತ್ತಿದೆ ಎಂಬಂತೆ ಭಯಹುಟ್ಟಿಸುತ್ತಿವೆ. ಅಷ್ಟಕ್ಕೂ
ಈತನಿಗೂ ಮತ್ತು ನಮ್ಮ ದೇಶದ
ರವಿಶಂಕರ್-ರಾಮ್ದೇವ್-ಝಾಕೀರ್
ನಾಯ್ಕ್ ಮುಂತಾದವರಿಗೂ ಇರುವ ವ್ಯತ್ಯಾಸಗಳೆಂದರೆ ಬೆನ್ನಿ
ಹಿನ್ ಇವರೆಲ್ಲರಿಗಿಂತ ಹೆಚ್ಚು ಶ್ರೀಮಂತ ಮತ್ತು
ಇವರೆಲ್ಲರಿಗಿಂತ ಹೆಚ್ಚು ವೈಭವದಿಂದ ಜೀವನ
ಸಾಗಿಸುತ್ತಿದ್ದಾನೆ ಮತ್ತು ಆತನ ಮೋಡಸ್
ಒಪೆರಾಂಡಿ ಬೇರೆ ಎನ್ನುವುದು ಮಾತ್ರ.
ಬೆನ್ನಿ
ಹಿನ್ ಹೋದಲ್ಲೆಲ್ಲ ಆತನ ಒಂದು ಸ್ಪರ್ಶಕ್ಕೆ-ಹೀಲಿಂಗ್ ಟಚ್-ಲಕ್ಷಾಂತರ ಜನ ಕಾಯುತ್ತಾರೆ. ಈತ
ಮುಟ್ಟಿದರೆ ನಿಮ್ಮ ಕಾಲು ನೋವು,
ಸಂಧಿವಾತ, ಹೊಟ್ಟೆ ನೋವು, ಮಧುಮೇಹ,
ಕ್ಯಾನ್ಸರ್ ಎಲ್ಲವೂ ಗುಣವಾಗುತ್ತದಂತೆ. ಈತ
ಮುಟ್ಟಿದ ಎಂದರೆ ನಡೆಯಲಿಕ್ಕಾಗದವರು ನಡೆದಾಡುತ್ತಾರೆ,
ಕಿವುಡರ ಕಿವಿ ಕೇಳಿಸುವಂತಾಗುತ್ತದೆ, ಕುರುಡನಿಗೆ
ಕಣ್ಣು ಬರುತ್ತದೆ, ಲಕ್ವ ಬಡಿದವನ ಅಂಗಾಂಗಗಳು
ಮತ್ತೆ ಚಟುವಟಿಕೆಯಿಂದ ಪುಟಿದೇಳುತ್ತವೆ ಎಂದೆಲ್ಲ ಹೇಳಲಾಗುತ್ತದೆ. ಹಾಗಂತ
ಪ್ರಚಾರ ಮಾಡಿಕೊಳ್ಳಲು ಆತನದೇ ಟಿವಿ ಚಾನೆಲ್ಗಳಿವೆ, ಶೋಗಳಿವೆ, ಪುಸ್ತಕಗಳಿವೆ
ಮತ್ತು ಇನ್ನೂ ನಾನಾ ವಿಧಾನಗಳಿವೆ. ಇದಕ್ಕೆಲ್ಲ
ಮರುಳಾದ ಲಕ್ಷಾಂತರ ಮಂದಿ ಯೇಸುವೇ ಕಳುಹಿಸಿದ
ಈ ದೇವದೂತ ನಮ್ಮ
ಊರಿಗೆ ಯಾವಾಗ ಬರುತ್ತಾನೆಂದು ಹಾತೊರೆಯುತ್ತಾರೆ.
2005ರಲ್ಲಿ ಬೆಂಗಳೂರಿಗೆ ಬಂದಿದ್ದ ಬೆನ್ನಿ ಹಿನ್ನ ಸಮಾವೇಶಕ್ಕೆ ದಾಖಲೆ
ಸಂಖ್ಯೆಯ ಜನರು ನೆರೆದಿದ್ದರು. ಅದು
ಬೆನ್ನಿ ಹಿನ್ನ ವೆಬ್ಸೈಟ್ನಲ್ಲಿಯೂ ದಾಖಲಾಗಿದೆ.
ಈಗ ಆತ ಮತ್ತೆ ಜನವರಿ
ತಿಂಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದಾನೆ.
ಬೆನ್ನಿ
ಹಿನ್ ಇಸ್ರೇಲ್ನಲ್ಲಿ ಹುಟ್ಟಿದವನು.
ಅರಬ್-ಇಸ್ರೇಲ್ ಯುದ್ಧದ ತರುವಾಯ ಕೆನಡಾಕ್ಕೆ
ವಲಸೆ ಹೋಗಿ ಈಗ ಅಮೇರಿಕದಲ್ಲಿ
ನೆಲೆಸಿದ್ದಾನೆ. ಅಮೇರಿಕದ ಬುದ್ಧಿವಂತ ಜನರಿಗೆ
ಈತ ಎಂತಹ ಮಂಕುಬೂದಿ ಎರಚಿದ್ದಾನೆಂದರೆ
ಈತನ ಧಾರ್ಮಿಕ ಸಭೆಗಳು ನಡೆಯುವುದೇ
ಅಲ್ಲಿನ ದೊಡ್ಡ ಸ್ಟೇಡಿಯಂಗಳಲ್ಲಿ. ಈತನ
ದೈನಂದಿನ 30 ನಿಮಿಷಗಳ ಟೆಲಿವಿಷನ್ ಶೋ
"ದಿಸ್ ಇಸ್ ಯುವರ್ ಡೇ'
ವಿಶ್ವದಾದ್ಯಂತ ಹಲವು ಚಾನೆಲ್ಗಳಲ್ಲಿ
ಪ್ರಸಾರವಾಗುತ್ತಿದೆ ಮತ್ತು ಅತ್ಯಂತ ಹೆಚ್ಚು
ವೀಕ್ಷಕರನ್ನು ಈ ಶೋ ಹೊಂದಿದೆ.
ರೋಗಿಗಳು ಎಂದು ವೇದಿಕೆ ಹತ್ತಿದವರ
ಮೈ ಮುಟ್ಟಿದ ಕೂಡಲೇ ಅವರು
ಅಲ್ಲಿಯೇ ಕುಸಿದು ನೆಲಕ್ಕೊರಗುವುದು ಮತ್ತು
ಆ ರೋಗಿಗಳು ರೋಗ
ಗುಣಮುಖರಾದಂತೆ ವರ್ತಿಸುವುದನ್ನು ನೀವು ಯಾವತ್ತಾದರೂ ಟಿವಿ
ಚಾನೆಲ್ಗಳಲ್ಲಿ ನೋಡಿರುತ್ತೀರಿ. ಈತ
ಬರೆದ ಹತ್ತಾರು ಪುಸ್ತಕಗಳು ದಾಖಲೆಸಂಖ್ಯೆಯಲ್ಲಿ
ಮಾರಾಟವಾಗಿದೆ. ಈತನ ಸಭೆಗಳಿಗೆ ನೀವು
ಹೋಗಬೇಕೆಂದರೆ ದುಬಾರಿ ಶುಲ್ಕವೂ ಇದೆ.
ಬೆಂಗಳೂರಿನಲ್ಲಿಯೂ ಈತನ ದರ್ಶನಕ್ಕೆ "ಭಕ್ತಾದಿಗಳು'
ಸಾವಿರ ರೂಪಾಯಿ ಕಾಣಿಕೆ ನೀಡಿಯೇ
ಹೋಗಬೇಕು.
ನಿಜಕ್ಕೂ
ಈತನ ಸ್ಪರ್ಶ ರೋಗಗಳನ್ನು ಗುಣಪಡಿಸುತ್ತದೆಯೆ?
ಈತನೇನು ದೈವಾಂಶ ಸಂಭೂತನೆ? ಖಂಡಿತ
ಅಲ್ಲ. ಈತ ನಮ್ಮ ಭಾರತೀಯ
ಬಾಬಾಗಳಂತೆಯೆ ಒಬ್ಬ ವಂಚಕ. ಯಾರನ್ನೂ
ಮರುಳು ಮಾಡಬಲ್ಲ ಮಾತುಗಾರಿಕೆ, ನೋಡಿದರೆ
ನಂಬಬೇಕು ಎಂಬಂತಹ ರೂಪ, ಸುಳ್ಳನ್ನೇ
ಸತ್ಯ ಮಾಡುವ ಜಾಣ್ಮೆ ಮತ್ತು
ಪ್ರಚಾರ ಈತನ ಬಂಡವಾಳ. "ದೇವರು
ನನ್ನೊಳಗೆ ಬಂದಿದ್ದಾನೆ, ನನ್ನು ಮೂಲಕ ನಿಮ್ಮನ್ನೆಲ್ಲ
ಆತ ತಲುಪುತ್ತಾನೆ, ನಿಮ್ಮ ರೋಗಗಳನ್ನು ವಾಸಿ
ಮಾಡಲು ಆತ ನನ್ನೊಳಗೆ ಇದ್ದಾನೆ,
ನನ್ನ ಸ್ಪರ್ಶದಿಂದ ನಿಮ್ಮ ದೇಹದೊಳಕ್ಕೆ ಒಂದು
ಬೆಚ್ಚನೆಯ ಅನುಭವ ಬಂದು ನಿಮ್ಮ
ರೋಗಗಳಿಂದ ನೀವು ಮುಕ್ತರಾಗುವಿರಿ' ಎಂದೆಲ್ಲ
ಬೆನ್ನಿ ಹಿನ್ ಬೊಗಳೆ ಬಿಡುತ್ತಾನೆ.
"ನನ್ನೊಳಗೆ ಯೇಸು ಅಭಿಷಿಕ್ತನಾಗಿದ್ದಾನೆ, ನನ್ನೊಳಗೆ
ದೇವರ ಶಕ್ತಿಯಿಂದ ಮಹಾಕಂಪನವಾಗುತ್ತಿದೆ, ನನ್ನ ಅನುಭವಕ್ಕೆ ಯೇಸು
ಬರುತ್ತಿದ್ದಾನೆ' ಎಂದೂ ಹೇಳುವ ಈತ
ಮಾಡುವುದೆಲ್ಲ ಕಣ್ಣಿಗೆ ಮಣ್ಣೆರಚುವ ಕೆಲಸ.
ಈತ ಎಂತಹ ಮೋಸಗಾರನೆಂಬುದನ್ನು ಅಮೇರಿಕದ
ಅನೇಕ ಮಾಧ್ಯಮಗಳು ತಮ್ಮ ಕುಟುಕು ಕಾರ್ಯಾಚರಣೆಗಳ
ಮೂಲಕ, ಹಿಡನ್ ಕ್ಯಾಮೆರಾಗಳ ಮೂಲಕ
ಜಗತ್ತಿಗೆ ತೋರಿಸಿಕೊಟ್ಟಿವೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ
ಡಿವೈನ್ ಪಾರ್ಕ್ ಎಂಬ ಮಠ
ನಿರ್ಮಿಸಿ ಕೋಟಿಗಟ್ಟಲೆ ದುಡ್ಡು ಮಾಡಿರುವ ವ್ಯಕ್ತಿಯೊಬ್ಬ
ತನ್ನೊಳಗೆ ವಿವೇಕಾನಂದ ಇದ್ದಾನೆ ಎಂದು ಹೇಳುತ್ತಿರುವುದು
ನೆನಪಾಗುತ್ತಿದೆ.
ಬೆನ್ನಿ
ಹಿನ್ನ ಸಭೆಗಳಲ್ಲಿ ಆತನ
ಬಾಡಿಗಾರ್ಡ್ಗಳ ದೊಡ್ಡ ಪಡೆಯೇ
ಇರುತ್ತದೆ. ಮುಂದಿನ ಸಾಲುಗಳನ್ನು ದೊಡ್ಡ
ದಾನಿಗಳು, ಗಣ್ಯರಿಗೆ ಮೀಸಲಾಗಿಡಲಾಗಿರುತ್ತದೆ. ಈತನ ಸ್ಪರ್ಶದ ಮಾಯೆಯ
ಪ್ರಚಾರ ಕೇಳಿ ಬಂದ ರೋಗಿಗಳು,
ಅಶಕ್ತರು, ಗಾಲಿ ಕುರ್ಚಿಗಳಲ್ಲಿ ಬಂದವರು
ಹಿಂದಿನ ಸಾಲುಗಳಲ್ಲಿ ಇರುತ್ತಾರೆ. ದೊಡ್ಡ ಆರ್ಕೆಸ್ಟ್ರಾದ ಸಂಗೀತ,
ಭ್ರಮಾಲೋಕ ಸೃಷ್ಟಿಸುವ ಬೆಳಕು, ಎಲ್ಲರೂ ದಿಗ್ಭ್ರಾಂತರಾಗಬೇಕೆಂದೇ
ನಿರ್ಮಿಸಿದ ಕೃತಕವಾದ ವಾತಾವರಣ ಈತನ
ಎಲ್ಲ ಸಭೆಗಳಲ್ಲೂ ಇರುತ್ತದೆ. ಈತನ ಸ್ಪರ್ಶಕ್ಕಾಗಿ ಮುಂದೆ
ಬರುವವರಲ್ಲಿ ಹೆಚ್ಚಿನವರು ಮಾಡುವುದು ನಾಟಕ ಮಾತ್ರ. ಅದರಲ್ಲಿ
ಕೆಲವರು ಈತನ ಬಾಡಿಗಾರ್ಡ್ಗಳೇ
ಬೇರೆ ವೇಷದಲ್ಲಿ ಬಂದಿರುವರು. ಈತ ಮುಟ್ಟಿದ ಕೂಡಲೇ
ಅಡ್ಡ ಬೀಳುವುದು-ಏಳುವುದು ಎಲ್ಲವೂ ನಾಟಕ
ಮಾತ್ರ. ಕೆಲವರನ್ನು ಈತ ಸಮ್ಮೋಹಿನಿಗೆ ಒಳಗಾಗಿಸುವುದೂ
ಇದೆ. ಈತ ಮುಟ್ಟುವ ಹೆಚ್ಚಿನ
ರೋಗಿಗಳ ಕಾಯಿಲೆ ಕಣ್ಣಿಗೆ ಕಾಣದಕಾಯಿಲೆಗಳು.
ಅರ್ಥಾತ್ ಕ್ಯಾನ್ಸರ್ ಮುಂತಾದ ದೇಹದ ಒಳಗಿನ
ರೋಗಗಳು. ಈತ ಮುಟ್ಟಿದ ಕೂಡಲೇ
ನಿಮ್ಮ ರೋಗ ವಾಸಿಯಾಗಿದೆ ಅಥವಾ
ಈ ಕ್ಷಣ ವಾಸಿಯಾಗಿಲ್ಲ
ಎಂದರೆ ದೇವರು ಬಯಸಿದ ಕೂಡಲೇ
ವಾಸಿಯಾಗುತ್ತದೆ ಎಂದು ಹೇಳುತ್ತಾನೆ. ಈತ
ಮುಟ್ಟಿದ ಕೂಡಲೇ ಗಾಲಿ ಕುರ್ಚಿಯಲ್ಲಿರುವ
ವ್ಯಕ್ತಿ ಎದ್ದು ನಿಂತಂತೆ ತೋರಿಸಲಾಗುತ್ತದೆ.
ಕಿವುಡನಿಗೆ ಕಿವಿ ಕೇಳಿಸಿದಂತೆ ತೋರಿಸಲಾಗುತ್ತದೆ.
ಆದರೆ ಇದೆಲ್ಲವೂ ಈತನ ವಂಚನೆಯ ಭಾಗವೇ
ಆಗಿರುತ್ತದೆ. ಈತನ ಸಭೆಗಳಿಗೆ ಬರುವ
ನಿಜವಾಗಿಯೂ ಕೈ ಕಾಲುಗಳಲ್ಲಿ ಬಲಹೀನತೆ
ಇರುವ ಜನಗಳು, ಲಕ್ವ ಬಡಿದ
ರೋಗಿಗಳು, ದೇಹದಲ್ಲಿ ಚಲನೆ ಕಳೆದುಕೊಂಡ ರೋಗಿಗಳು
ವೇದಿಕೆ ಹತ್ತಲಿಕ್ಕೂ ಈತನ ಸಭೆಗಳಲ್ಲಿ ಅವಕಾಶವಿಲ್ಲ.
ಅಮೇರಿಕದ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಇದು
ಸ್ಪಷ್ಟವಾಗಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಯಾರಿಗೆ ಎದ್ದು ನಿಲ್ಲಲು
ಸಾಧ್ಯವಿಲ್ಲಮೋ ಅವರನ್ನು ಈತನ ಬಾಡಿಗಾರ್ಡ್ಗಳು ಬೇರೆ ದಿಕ್ಕಿಗೆ
ಕಳುಹಿಸುತ್ತಾರೆ. ಒಂದೊಮ್ಮೆ ಅಂತಹ ವ್ಯಕ್ತಿಗಳು ಅಥವಾ
ಅವರ ಸಂಬಂಧಿಗಳು ಬೆನ್ನಿ ಹಿನ್ ತಮ್ಮನ್ನು
ಮುಟ್ಟಲೇಬೇಕೆಂದು ಹಠ ಮಾಡಿದರೆ, ವೇದಿಕೆ
ಏರುವ ಪ್ರಯತ್ನ ಮಾಡಿದರೆ ಅಂತಹ
ವ್ಯಕ್ತಿಗಳಿಗೆ ಹಿಂದಕ್ಕೆ ಕರೆದುಕೊಂಡು ಹೋಗಿ ಎಚ್ಚರಿಕೆ ನೀಡಲಾಗುತ್ತದೆ
ಅಥವಾ ಅವರ ಮೇಲೆ ಹಲ್ಲೆ
ನಡೆಸಿ ಬಾಯಿ ಮುಚ್ಚಿಸಲಾಗುತ್ತದೆ. ಇಂತಹ ಹಲ್ಲೆಗಳನ್ನು ನಡೆಸಿದ
ಆರೋಪಗಳು ಸ್ವತಃ ಬೆನ್ನಿ ಹಿನ್
ಮಗನ ಮೇಲೂ ಇದೆ. ಎಲ್ಲ
ನಾಟಕವನ್ನೂ ಮೊದಲೇ ವ್ಯವಸ್ಥಿತವಾಗಿ ಯೋಜಿಸಿರಲಾಗುತ್ತದೆ.
ನರೇಂದ್ರ
ಮೋದಿ ಭಾರತದ ಇತಿಹಾಸದ ಬಗ್ಗೆ
ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾದರೆ ಬೆನ್ನಿ ಹಿನ್ ಬೈಬಲ್
ಬಗ್ಗೆ ಪದೇಪದೇ ಸುಳ್ಳು ಹೇಳುತ್ತಾನೆ.
ಬೈಬಲ್ನಲ್ಲಿ ಹೇಳಿದ್ದೋಂದು. ಈತ
ಹೇಳುವುದೇ ಇನ್ಣೆೊಂದು. ಈತ ಭವಿಷ್ಯ ಕೂಡ
ಹೇಳುತ್ತಾನೆ. ಎಂತಹ ಭವಿಷ್ಯಗಳೆಂದರೆ ಕೆಲ
ಸ್ಯಾಂಪಲ್ಗಳು ಇಲ್ಲಿವೆ. 1995ರಲ್ಲಿ
ಅಮೇರಿಕದಲ್ಲಿ ಸಲಿಂಗರತಿ ನಿರ್ನಾಮವಾಗುತ್ತದೆ ಎಂದು ಹೇಳಿದ. 2000ನೇ
ಇಸವಿಯಲ್ಲಿ ಅಮೇರಿಕದ ಪೂರ್ವ ಕರಾವಳಿ
ಭೂಕಂಪದಲ್ಲಿ ಸಂಪೂರ್ಣ ನಾಶವಾಗಿ ಹೋಗುತ್ತದೆ
ಎಂದು ಹೆದರಿಸಿದ. ಕ್ಯೂಬಾದ ಫಿಡೆಲ್ ಕಾಸ್ಟ್ರೋ
1990ರಲ್ಲಿ ಸಾಯುತ್ತಾನೆ ಎಂದು ಭವಿಷ್ಯ ನುಡಿದ.
ಇವೆಲ್ಲ ಭವಿಷ್ಯಗಳೂ ಠುಸ್ ಆಯಿತು. ಇನ್ನೂ
ತಮಾಷೆಯ ವಿಷಯವೆಂದರೆ 1999ರಲ್ಲಿ ಟಿಬಿಎನ್ ನೆಟ್ವರ್ಕ್ ಎಂಬ ಚಾನೆಲ್
ಒಂದರಲ್ಲಿ ಕಾಣಿಸಿಕೊಂಡ ಬೆನ್ನಿ ಹಿನ್ ದೇವರು
ತನಗೆ ಅದ್ಭುತವಾದ ಶಕ್ತಿಯೊಂದನ್ನು ನೀಡಿದ್ದು ತನ್ನು ಬೋಧನೆ ನಡೆಯುವ
ವೇಳೆ ಟಿವಿ ಪರದೆ ಮುಟ್ಟಿದರೆ
ಗೋರಿಯಲ್ಲಿರುವ ನಿಮ್ಮ ಬಂಧುಗಳು ಮರುಜನ್ಮ
ಪಡೆಯುತ್ತಾರೆ ಎಂದು ಹೇಳಿದ. ಅಂದರೆ
ಸತ್ತ ವ್ಯಕ್ತಿಗಳು ಬಂದು ಟಿವಿ ಪರದೆಮುಟ್ಟಿದರೆ
ಅವರಿಗೆ ಮರುಜೀವ ಬರುತ್ತದೆ ಎಂದು
ಆತ ಪ್ರತಿಪಾದಿಸಿದ್ದ. ಇದೆಲ್ಲವೂ ದೇವೇಗೌಡರ ಅಚ್ಚುಮೆಚ್ಚಿನ ಕೋಡಿ ಮಠದ ಸ್ವಾಮಿ
ಹೇಳುವ ಭವಿಷ್ಯದಷ್ಟೇ ಅಗ್ಗದ ಮತ್ತು ಹಾಸ್ಯಾಸ್ಪದ
ಭವಿಷ್ಯವಾಣಿಯಾಗಿಯೇ ಉಳಿಯಿತು. ತನ್ನು ಟೀಕಾಕಾರರಿಗೆ ಈತ
ಶಾಪ ಬೇರೆ ಕೊಡುತ್ತಾನೆ. ಕ್ಯಾಲಿಫೋರ್ನಿಯಾದ
ಜನ ಈತನ ವಿರುದ್ಧ ಮಾತನಾಡಿದಾಗ
"ನೀವು ಇದನ್ನು ದೇವರ ಸೇವಕನ
ಬಾಯಿಂದ ಕೇಳಿರಿ, ನೀವು ಅಪಾಯದಲ್ಲಿದ್ದೀರಿ,
ನಿಮ್ಮ ತಲೆಯ ಮೇಲಿಂದ ದೇವರ
ಕೈ ಮಾಯವಾಗಲಿದೆ. ನೀವು ಸೋಲುವಿರಿ, ನಿಮ್ಮ
ಮಕ್ಕಳು ನಿಮ್ಮ ಪಾಪವನ್ನು ಅನುಭವಿಸುತ್ತಾರೆ'
ಎಂದೆಲ್ಲ ಬಡಬಡಾಯಿಸಿದ್ದನಂತೆ.
ಈತನ ವಂಚನೆಯಲ್ಲಿ ಈತನ ಹೆಂಡತಿ ಮತ್ತು
ಮಕ್ಕಳೂ ಸಹಕಾರ ನೀಡುತ್ತಿದ್ದಾರೆ. ಒಮ್ಮೆ
ತನ್ನು ಹೆಂಡತಿ ಸುಝನ್ ಜೊತೆ
ವಿಚ್ಛೆದನ ಪಡೆದ ಈತ ಬೇರೆ
ಹೆಂಗಸರೊಡನೆ ಸಂಬಂಧ ಬೆಳೆಸಿದ. ಮತ್ತೆ
ತನ್ನು ಕುಕೃತ್ಯಗಳು ಬಹಿರಂಗಕ್ಕೆ ಬರುತ್ತಿದ್ದ ಹಾಗೆ ಪುನಃ ಸುಝನ್ಳನ್ನು ಮರುಮದುವೆಯಾದ. ಅಮೇರಿಕದಲ್ಲಿ
ಅತ್ಯಂತ ವೈಭವದ ಜೀವನ ನಡೆಸುತ್ತಿರುವ
ಈ "ದೇವಮಾನವ' ಪ್ರತಿ ವರ್ಷ ನೂರು
ಮಿಲಿಯನ್ ಡಾಲರ್ಗಿಂತ ಹೆಚ್ಚು
ಸಂಪಾದನೆ ಮಾಡುತ್ತಾನೆ. ಅತ್ಯಂತ ದುಬಾರಿಯಾದ ಜಾಗದಲ್ಲಿ
ಈತನ ಬೃಹತ್ ಮನೆ ಇದೆ.
ಈತ ಓಡಾಡುವ ವಿಮಾನ ಅತ್ಯಂತ
ದುಬಾರಿಯಾದವಿಮಾನ. ವಿಮಾನದ ನಿರ್ವಹಣಾ ವೆಚ್ಚವೇ
ವರ್ಷಕ್ಕೆ 6 ಮಿಲಿಯನ್ ಡಾಲರ್ಗಳು. ಈತನಿಗೆ
ದಾನವಾಗಿ ಬರುವ ಹಣಕ್ಕೆ ಲೆಕ್ಕವಿಲ್ಲ.
ಅಮೇರಿಕದ ಸರಕಾರ ಈತನ ಅಕ್ರಮ
ಗಳಿಕೆ, ಲೆಕ್ಕಪತ್ರಗಳಿಲ್ಲದ ವ್ಯವಹಾರದ ವಿರುದ್ಧ ತನಿಖೆಗೆ ಆದೇಶಿಸಿದೆ.
ರಾಮ್ದೇವ್ ಬಾಬಾನಿಗೆ ಇವನೇ
ಮಾದರಿಯಾಗಿರಬೇಕು. ಈಗ ಈ ಬೆನ್ನಿ
ಹಿನ್ ಎಂಬ ಮಹಾ ವಂಚಕ
ಬೆಂಗಳೂರಿಗೆ ಬಂದು ಮತ್ತೊಮ್ಮೆ ಈತನ
"ಭಕ್ತಾದಿಗಳಿಗೆ' ಮೋಸದ ಸ್ಪರ್ಶ ಮತ್ತು
ದರ್ಶನ ನೀಡಿ ಕೋಟ್ಯಂತರ ರೂ
ಕಾಣಿಕೆ ಪಡೆದು ಮರಳಲಿದ್ದಾನೆ.
ಬೆನ್ನಿ
ಹಿನ್ ಬೆಂಗಳೂರಿಗೆ ಬಂದು ಜನರನ್ನು ವಂಚಿಸುವುದನ್ನು
ಖಂಡಿತ ತಡೆಯಬೇಕಾಗಿದೆ. ವಿಚಾರವಂತರೆಲ್ಲ ಈತನ ವಿರುದ್ಧ ದನಿ
ಎತ್ತಬೇಕಾಗಿದೆ. ಜನರು ಈತ ಪ್ರಚುರಪಡಿಸುವ
ಮೌಢ್ಯದಿಂದ ಹೊರಬರಬೇಕಾಗಿದೆ. ಇದೆಲ್ಲ ಸರಿ. ಆದರೆ
ಬೆನ್ನಿ ಹಿನ್ ಮೌಢ್ಯವನ್ನು ಬಿತ್ತುತ್ತಾನೆಂದೂ
ಮತ್ತು ಆ ಕಾರಣಕ್ಕೆ ಆತನನ್ನು
ಭಾರತಕ್ಕೆ ಬರಲು ಬಿಡಬಾರದೆಂದೂ ಪೇಜಾವರ
ಸ್ವಾಮಿ, ಆರೆಸ್ಸೆಸ್ ಗ್ಯಾಂಗ್, ರಾಮ್ದೇವ್ ಬಾಬಾ,
ಸುರೇಶ್ ಕುಮಾರ್ ಎಂಬ ಮಾಜಿ
ಬಿಜೆಪಿ ಸಚಿವರು, ಅದೇ ಪಕ್ಷದ
ಅನ್ಯ ಧುರೀಣರೂ ಬೊಬ್ಬೆ ಹೊಡೆಯುತ್ತಿರುವುದು
ಮಾತ್ರ ಹಾಸ್ಯಾಸ್ಪದವಾಗಿದೆ. 24 ಗಂಟೆಗಳ ತಮ್ಮ ಕಾರ್ಯಕ್ರಮಗಳಲ್ಲಿ
3-4
ಗಂಟೆಯನ್ನು ಜ್ಯೋತಿಷ್ಯ, ವಾಸ್ತು ಎಂದು ಕಾರ್ಯಕ್ರಮ
ಬಿತ್ತರಿಸುವ, ಶನಿವಾರಶಿವದೇಗುಲಕ್ಕೆ ಯಾಕೆ ಹೋಗಬಾರದು, ಸೋಮವಾರ
ಹೆಂಗಸರು ಮನೆ ಹೊರಗೆ ಹೋದರೆ
ಏನಾಗುತ್ತದೆ ಎಂದೆಲ್ಲ ಜ್ಯೋತಿಷಿಗಳನ್ನು ಕರೆದು
ಚರ್ಚೆ ನಡೆಸುವ ಕನ್ನುಡದ ಚಾನಲ್ಗಳು ಬೆನ್ನಿ ಹಿನ್
ವಿರುದ್ಧ ಜನಾಭಿಪ್ರಾಯ ರೂಪಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು
ಇನ್ನೂ ತಮಾಷೆ ಅನಿಸುತ್ತಿದೆ. ಬೆನ್ನಿ
ಹಿನ್ ಇಲ್ಲಿಗೆ ಮತಾಂತರ ಮಾಡಲು
ಬರುತ್ತಿದ್ದಾನೆ ಎಂದು ಬಿಜೆಪಿ ಮಂದಿ
ಹೆದರಿಸುತ್ತಿದ್ದಾರೆ. ಇದಂತೂ ಅಪ್ಪಟ ಸುಳ್ಳು.
ಬೆನ್ನಿ ಹಿನ್ ಇಲ್ಲಿನ ಜನರನ್ನು
ದೇವರು, ಪ್ರಾರ್ಥನೆ, ಸ್ಪರ್ಶ ಎಂದೆಲ್ಲ ವಂಚಿಸಿ
ದುಡ್ಡು ಮಾಡಲಿಕ್ಕಾಗಿ ಬರುತ್ತಿದ್ದಾನೆ. ಆತ ಮತಾಂತರ ಮಾಡಿದ
ಕುರಿತು ಯಾವ ದಾಖಲೆಗಳೂ ಇಲ್ಲ.
ಬೆನ್ನಿ ಹಿನ್ ಇಲ್ಲಿಗೆ ಬರುತ್ತಾನೆಂದ
ಕೂಡಲೇ ಇಲ್ಲಿನ ಕ್ರೈಸ್ತ ಸಮುದಾಯವನ್ನೇ
ಅನುಮಾನದಿಂದ ನೋಡುವುದು, ಅವರೆಲ್ಲ ಬೆನ್ನಿ ಹಿನ್
ಭಕ್ತರೆಂದು ಪ್ರಚಾರ ಮಾಡುವುದು ಮತ್ತು
ಆ ನೆವ ಹಿಡಿದುಕೊಂಡು
ಇಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುವುದು
ಸಲ್ಲದು. ಬಿಜೆಪಿಗಳು ಇದಕ್ಕೆಲ್ಲ ತಯಾರಾಗಿ ನಿಂತಿರಬಹುದು. ಸರಕಾರ
ಎಚ್ಚೆತ್ತುಕೊಳ್ಳಬೇಕು. ಎಲ್ಲ ಧರ್ಮಗಳಲ್ಲಿಯೂ ಮುಗ್ದರು,
ಮೂರ್ಖರು ಇದ್ದೇ ಇರುತ್ತಾರೆ. ಅಂತಹವರು
ಬೆನ್ನಿ ಹಿನ್ ಸಭೆಗಳಿಗೆ ಹೋಗಬಹುದು.
ಬೆನ್ನಿ ಹಿನ್ ಸಭೆಗಳಿಗೆ ಹಿಂದೂಗಳು
ಸಹ ಕಳೆದ ಬಾರಿ ಬಂದಾಗ
ಹೋಗಿದ್ದರು.ಅದರಲ್ಲೇನು ಮಹಾ ವಿಶೇಷವಿಲ್ಲ. ನಮ್ಮ
ಸ್ವಾಮೀಜಿಗಳು-ಕಾವಿಧಾರಿಗಳು-ಬಾಬಾಗಳು ಮಾಡುವ ಢೋಂಗಿ
ಏನು ಕಡಿಮೆ ಇದೆಯೆ? ಭಾರತದ
ತಥಾಕತಿಥ ದೇವಮಾನವರೆಲ್ಲ ಅರಬ್ ದೇಶಗಳಿಗೆ, ಅಮೇರಿಕಕ್ಕೆ,
ಜಪಾನಿಗೆ ಎಲ್ಲ ಹೋಗುವುದಿಲ್ಲವೆ? ಅಲ್ಲಿನ
ಜನರು ಭಾರತದ ಬಾಬಾಗಳ ವಿರುದ್ಧ
ಪ್ರತಿಭಟಿಸಿದ್ದಾರೆಯೆ? ಮೌಢ್ಯ ವಿರೋಧಿ ವಿಧೇಯಕದ
ಪ್ರಸ್ತಾವವನ್ನೇ ವಿರೋಧಿಸುವ ಆರೆಸ್ಸೆಸ್ ಗ್ಯಾಂಗ್ಗೆ ಬೆನ್ನಿ
ಹಿನ್ ಮೌಢ್ಯ ಬಿತ್ತುತ್ತಾರೆ ಎಂದು
ಹೇಳುವ ನೈತಿಕತೆಯಾದರೂ ಎಲ್ಲಿಂದ ಬರಬೇಕು?
ಬೆನ್ನಿ
ಹಿನ್ ಅನ್ನು ವಿರೋಧಿಸಬೇಕು. ಆದರೆ
ಅದು ವೈಚಾರಿಕ ನೆಲೆಯಲ್ಲಿ ಮಾತ್ರ.
ಆತ ಬಂದು ಭಾರತವೇ ಹಾಳಾಗುತ್ತದೆ
ಎಂದು ಬಾಯಿ ಬಡಿದುಕೊಳ್ಳುವ ಅಗತ್ಯವಿಲ್ಲ.
ಬೆನ್ನಿ ಹಿನ್ ಸೇರಿದಂತೆ ಬೆಂಗಳೂರಿನಲ್ಲಿ
ನಡೆಯುವ ಎಲ್ಲ ಮೌಢ್ಯ ಬಿತ್ತುವ
ಧಾರ್ಮಿಕ-ರಾಜಕೀಯ ನಾಯಕರ ಸಭೆಗಳನ್ನು
ನಿಷೇಧಿಸುವ ಸಾಧ್ಯತೆಯನ್ನು ಸರಕಾರ ಯೋಚಿಸಬೇಕಾಗಿದೆ. ಬೆನ್ನಿ
ಹಿನ್ ಅನ್ನು ಇಷ್ಟೆಲ್ಲ ವಿರೋಧಿಸುತ್ತಲೇ
ಒಂದು ಮಾತು ಹೇಳಲೇಬೇಕು. ಬೆನ್ನಿ
ಹಿನ್ ಬರುತ್ತಾನೆ. ಜನರಿಗೆ ಮಂಕು ಬೂದಿ
ಎರಚಿ ತನ್ನು ಕೆಲಸ ಮುಗಿಸಿ
ದುಡ್ಡಿನ ಚೀಲದೊಂದಿಗೆ ವಾಪಸಾಗುತ್ತಾನೆ. ಅಲ್ಲಿ ಬೆನ್ನಿ ಹಿನ್
ಹಿಂದೂ ಧರ್ಮದ ವಿರುದ್ಧಮೋ, ಇಸ್ಲಾಂ
ಇರುದ್ಧಮೋ ಮಾತನಾಡಲಾರ. ಅಲ್ಲಿ
ಹೋದ ಜನಗಳಿಗೆ ಬೆನ್ನಿ ಹಿನ್ಸ್ಪರ್ಶದಿಂದ ಸಮಾಧಾನವಾಗಬಹುದು ಅಥವಾ ಸ್ಪರ್ಶ ಸಿಗದೆ
ಅಸಮಾಧಾನವೂ ಆಗಬಹುದು. ಆದರೆ ಅವರೆಲ್ಲ ಶಾಂತಿಯಿಂದ
ಮನೆಗಳಿಗೆ ಮರಳುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ಟರ
ಹಾಗೆ, ಪೇಜಾವರ ಸ್ವಾಮಿಯ ಹಾಗೆ,
ಮುತಾಲಿಕ್-ತೊಗಾಡಿಯನ ಹಾಗೆ ಬೆನ್ನಿ ಹಿನ್
ಜನರನ್ನು ಕೆರಳಿಸುವ ಮಾತನಾಡುವುದಿಲ್ಲ ಮತ್ತು ಈ ಹಿಂದೂತ್ವವಾದಿಗಳ
ಪ್ರಚೋದನೆಯ ಮಾತು ಕೇಳಿ ಮನೆಗೆ
ಮರಳುವ ಬಜರಂಗಿಗಳು ಮುಸ್ಲಿಮರ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿದ ಹಾಗೆ
ಬೆನ್ನಿ ಹಿನ್ ಭಕ್ತರು ಅನ್ಯರ
ಬದುಕನ್ನು ಹಾಳು ಮಾಡುವುದಿಲ್ಲ. ಬೆನ್ನಿ
ಹಿನ್ ಭಾರತಕ್ಕೆ ಬರುವುದನ್ನು ನಿಷೇಧಿಸೋಣ. ಅದಕ್ಕೂ ಮೊದಲು ನಿಷೇಧಿಸಬೇಕಾದವರು,
ಬಂಧಿಸಬೇಕಾದವರು, ಜೈಲಿಗೆ ಹೋಗಬೇಕಾದವರು ಎಷ್ಟು
ಜನ ನಮ್ಮ ನಡುವೆಯೆ ಇದ್ದಾರಲ್ಲ.
ಅವರ ಬಗ್ಗೆಯೂ ಮಾತನಾಡಬೇಕಲ್ಲವೆ? ಬೆನ್ನಿ
ಹಿನ್ ಬಗೆ ಮಾತನಾಡುವ ಮೊದಲು
ನಮ್ಮ ಬೆನ್ ಹಿಂದೆ ಒಮ್ಮೆ
ನೋಡಿಕೊಳ್ಳಬೇಕಲ್ಲವೆ?
-ಶಶಿಧರ ಹೆಮ್ಮಾಡಿ (ಗೌರಿ ಲಂಕೇಶ್ ಪತ್ರಿಕೆಯಿ ಜನವರಿ 22, 2014ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಇದನ್ನು ಬರೆದ ಹೆಮ್ಮಾಡಿಯವರೇ ಹಾಗು ಅಶೋಕ್ ಕೆ ಆರ್ ಅವ್ರೇ ಬೆನ್ನಿ ಹಿನ್ ಎಂಬುವವನ ವಿಕಿಪಿಡಿಯಾದಲ್ಲಿರುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನೇ ಕೊಟ್ಟಿದ್ದಿರಿ, ತುಂಬಾ ಒಳ್ಳೆಯ ತರ್ಜುಮೆ, ಇನ್ನೊಂದು ವಿಷಯ ಹೆಮ್ಮಾಡಿ ಸಾಹೇಬ್ರೆ ನೀವು ಆ ಹೀನನ ಹೆಸರನ್ನು ಹೇಳುವಾಗ ಸುಮಾರು ಭಾರತೀಯರ ಉದಾಹರಣೆಗಳನ್ನು ತೆಗೆದುಕೊಂಡಿದ್ದಿರಿ ಉದಾ: ಮೋದಿ, ದೇವೆಗೌಡ್ರು, ಪೇಜಾವರ ಸ್ವಾಮಿ, ಇತ್ಯಾದಿ. ಒಂದು ಕಡೆ ಆ ಹೀನ ಮನುಷ್ಯ ಬಂದ್ರೆ ಎನು ನಷ್ಟ ಅಂತ ಕೇಳ್ತಿರಿ, ಇನ್ನೊಂದು ಕಡೆ ಅವನು ಬರಬಾರದು ಅಂತಿರಿ, ನೀವು ತುಂಬಾ ಒಗಟಾಗಿ ಪತ್ರಿಕೋದ್ಯಮದ ಭಾಷೆಯಲ್ಲಿ ಮಾತನಾಡಿದರೆ ಪಾಮರರಾದ ನಮ್ಮಂತವರಿಗೆ ಅರ್ಥ ಆಗಲ್ಲ ಸ್ವಾಮಿ. ಆಮೇಲೆ ನಿಮ್ಮ ಉದಾಹರಣೆಗಳು ಕೇವಲ ಪ್ರಚಲಿತದಲ್ಲಿರುವವರ ಮೇಲೆ ಮಾತ್ರ ಸೀಮಿತವಾಗಿದೆ ಯಾಕೆ ಸರ್? ಬರೀ ಬಜರಂಗಿಗಳು ಮಾತ್ರ ಈ ದೇಶದಲ್ಲಿ ಗಲಾಟೆ ಮಾಡ್ತಾರಾ, ೨೬/೧೧ ಜ್ಞಾಪಕವಿದೇಯಾ ನಿಮಗೆ? ನಾನು ಕೊಡುತ್ತಿರೊ ಒಂದು ಉದಾಹರಣೆ ಮಾತ್ರ ಇದು, ಅದನ್ನ ಮಾಡಿದ್ದು ಬಜರಂಗಿಗಳಾ, ಇಲ್ಲಾ ಪೇಜಾವರದ ಸ್ವಾಮಿಗಳಾ, ದೇವೆಗೌಡ್ರಾ. ಮೋಸ್ಟ್ಲಿ ನರೇಂದ್ರ ಮೋದಿಯವರು ಇರಬೇಕು ಅಲ್ವಾ? ಒಬ್ಬ ಪತ್ರಕರ್ತರಾಗಿ ಎಲ್ಲವನ್ನೂ ಎಲ್ಲರನ್ನೂ ಒಂದೇ ದೃಷ್ಠಿಯಲ್ಲಿ ಇಟ್ಟು ಬರೆದರೆ ಜನ ಮೆಚ್ಚಬಹುದು, ಅದು ಬಿಟ್ಟು ರಾಜಕೀಯ ನಾಯಕರ ತರಹ ಬರೆದರೆ ಹೇಗೆ ಸರ್, ನನಗನ್ಸುತ್ತೆ ನೀವು ಮತ್ತೊಬ್ಬರನ್ನ ತೆಗಳುವುದೇ ಪತ್ರಿಕೋದ್ಯಮ ಅನ್ಕೋಂಡಿದಿರಿ ಅಂತ, ಬೆನ್ನಿ ಹಿನ್ ಬಗ್ಗೆ ಬರೆಯುವ ನೆಪದಲ್ಲಿ ನೀವು ಆಯ್ದ ಕೆಲ ವ್ಯಕ್ತಿಗಳನ್ನ ಮಾತ್ರ ತೆಗಳುವುದಕ್ಕೆ ಈ ಅಂಕಣ ಬರೆದಿರುವ ಹಾಗಿದೆ. ಮಿಕ್ಕಂತೆ ಈ ಟಿವಿ ಚಾನಲಗಳು ಹಾಗು ಅದರಲ್ಲಿ ಬರುವ ಜ್ಯೋತಿಷಿಗಳ ಬಗ್ಗೆ ನೀವು ಬರೆದಿರುವುದಕ್ಕೆ ನನ್ನ ಸಹಮತವಿದೆ. ಅಂದಹಾಗೆ ಬೆನ್ನಿಹಿನ್ ಎಂಬ ಆ ಕಾಯಿಲೆ ಇಲ್ಲಿ ಬರ್ತಿಲ್ವಂತೆ.
ReplyDeleteಮಹೇಶ ಎಸ್