Jan 5, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 14



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 13 ಓದಲು ಇಲ್ಲಿ ಕ್ಲಿಕ್ಕಿಸಿ
ಗೌತಮ್ – ತರಗತಿಯಲ್ಲಿದ್ದ ಎಲ್ಲಾ ಹುಡುಗರಲ್ಲೂ ಅಸೂಯೆ ಹುಟ್ಟಿಸುವಂಥ ವ್ಯಕ್ತಿತ್ವ. ನೋಡ್ಲಿಕ್ಕೆ ಚೆನ್ನಾಗಿದ್ದ ಅನ್ನೋದಕ್ಕಿಂತ ಎಲ್ಲಾ ವಿಷಯಗಳಲ್ಲೂ ಮುಂದು. ಒಂದು ರೀತೀಲಿ ಸಕಲಕಲಾವಲ್ಲಭ. ಹುಡುಗೀರ ಜೊತೆ ಮಾತನಾಡೋದರಲ್ಲಿರಬಹುದು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿರಬಹುದು ಎಲ್ಲಾದರಲ್ಲೂ ಮುಂದು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಮಯದಲ್ಲಿ ನಡೆಸಿದ್ದ ಆಶುಭಾಷಣ ಸ್ಪರ್ಧೆ, ಪ್ರಬಂಧ ರಚನೆ, ಸಂಗೀತ, ಡಿಬೇಟ್, ನಾಟಕ ಎಲ್ಲದರಲ್ಲೂ ಮೊದಲ ಸ್ಥಾನ ಗೌತಮನಿಗೆ. ಹುಡುಗಿಯರು ಪ್ರತೀ ವಿಷಯಕ್ಕೂ ‘ಗೌತಮ್ ಗೌತಮ್’ ಅಂತ ಕೂಗುತ್ತಿದ್ದರೆ ಹುಡುಗರೆಲ್ಲಾ ‘ನಮಗೇ ಅದೃಷ್ಟ ಇಲ್ವಲ್ಲಾ ಗುರೂ’ ಎಂದು ಪೇಚಾಡಿಕೊಳ್ಳುತ್ತಿದ್ದರು. ಲೋಕಿಗೂ ಮೊದಮೊದಲು ‘ಛೇ ನಾನು ಯಾವುದರಲ್ಲೂ ಭಾಗವಹಿಸುವುದಿಲ್ಲವಲ್ಲಾ. ನಿಜಕ್ಕೂ ನಾನೊಬ್ಬ ದಂಡಪಿಂಡ’ ಎನ್ನಿಸುತ್ತಿತ್ತು. ಆದರೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದಾಗಲೆಲ್ಲ ಈ ಕೀಳರಿಮೆ ಕಡಿಮೆಯಾಗುತ್ತಿತ್ತು.

ಕಾಲೇಜಿಗೆ ಸೇರಿದಾಗಿನಿಂದ ಗೌತಮ್ ಗೆ ಸಿಂಚನಾಳೆಡೆಗೆ ಆಸಕ್ತಿ. ಎಲ್ಲಾ ಹುಡುಗಿಯರ ಬಳಿ ಮಾತನಾಡಿದರೂ ಸಿಂಚನಾಳ ಜೊತೆ ಮಾತನಾಡುವಾಗ ಮಾತಿನಲ್ಲಿ ಅಕ್ಕರೆ ತುಂಬಿರುತ್ತಿತ್ತು. ಇದನ್ನು ಮೊದಲು ಗುರುತಿಸಿದವಳು ಪೂರ್ಣಿಮಾ. “ಗೌತಮ್ ನಿನ್ನನ್ನು ಇಷ್ಟ ಪಡ್ತಾಯಿರಬೇಕು ಸಿಂಚನಾ” ಎಂದಿದ್ದಳು.

“ಇರಬಹುದು. ನನಗೂ ಅವನು ಇಷ್ಟವಾಗ್ತಾನೆ”

“ಏನೇ ಸಿಂಚು?? ಈ ರೀತಿ ಹೇಳ್ತಿ? ವಿವೇಕ್ ಗತಿ?”

“ಅಯ್ಯೋ! ಪ್ರೀತಿಸಿದವರನ್ನು ಇಷ್ಟ ಪಡ್ತೀವಿ ಅನ್ನೋದು ಸತ್ಯ. ಆದರೆ ಇಷ್ಟವಾದವರನ್ನೆಲ್ಲ ಪ್ರೀತಿಸೋದಿಲ್ಲ ಅಲ್ವ? ರಾಹುಲ್ ದ್ರಾವಿಡ್ ಇಷ್ಟವಾಗ್ತಾನೆ ಅನ್ನೋ ಕಾರಣಕ್ಕೆ ಅವನನ್ನು ಲವ್ ಮಾಡೋಕಾಗುತ್ತ?” 

“ಅವನು ನಿನ್ನನ್ನು ಲವ್ ಮಾಡಿದರೆ”

“ಯಾರು ರಾಹುಲ್ಲಾ??”

“ಏ ಅಲ್ವೇ... ಗೌತಮ್ಮೂ”

“ಗೌತಮ್ ನನ್ನನ್ನು ಪ್ರೀತಿಸ್ತಾನೆ ಅಂತ ನನಗಂತೂ ಅನ್ನಿಸಿಲ್ಲ. ಅವನು ನನ್ನನ್ನು ಲವ್ ಮಾಡಿದರೂ ನನ್ನ ನಿರ್ಧಾರ ಏನು ಅಂತ ನಿನಗೆ ಗೊತ್ತೇ ಇದೆ. ನಾನು ಪ್ರೀತಿಸೋದು ಮದುವೆಯಾಗೋದು ವಿವೇಕ್ ನನ್ನೇ”

ಬೆಂಗಳೂರಿನ ಸರಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯ ವರ್ಷ ಓದುತ್ತಿದ್ದ ವಿವೇಕ್. ಸಿಂಚನಾಳ ತಂದೆಯ ಅಕ್ಕನ ಮಗ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸಿಂಚನಾಳ ತಂದೆ ಪ್ರಖ್ಯಾತ ವೈದ್ಯರಾಗಿದ್ದರು, ಎರಡು ವರ್ಷದ ಹಿಂದೆ ರಸ್ತೆ ಅಪಘಾತವೊಂದರಲ್ಲಿ ತೀರಿಕೊಂಡಿದ್ದರು. ಸಿಂಚನಾಳ ತಂದೆಗೆ ವಿವೇಕನ ಅಣ್ಣ ಶರತ್ ನೊಡನೆ ಸಿಂಚನಾಳ ಮದುವೆ ಮಾಡಬೇಕೆಂದುಕೊಂಡಿದ್ದರು. ತಮ್ಮ ಅಕ್ಕನ ಬಳಿ ಕೂಡ ಈ ವಿಷಯ ಹೇಳಿದ್ದರು. ಸಿಂಚನಾಳ ಜೊತೆ ಈ ವಿಷಯವಾಗಿ ಯಾವತ್ತೂ ಚರ್ಚಿಸಿರಲಿಲ್ಲ. ಅವರು ತೀರಿಕೊಂಡು ಒಂದು ವರ್ಷದ ಬಳಿಕ ನೆಂಟರ ಮದುವೆ ಸಮಾರಂಭವೊಂದರಲ್ಲಿ ಸಿಂಚನಾಳಿಗೆ ಈ ವಿಷಯ ತಿಳಿಯಿತು. ಆದರೆ ಅಷ್ಟರಲ್ಲಾಗಲೇ ಸಿಂಚನಾ ಮತ್ತು ವಿವೇಕ್ ನಡುವೆ ಪ್ರೇಮ ಚಿಗುರೊಡೆದು ಮರವಾಗಿ ಬೆಳೆದಿತ್ತು. ವಿವೇಕ್ ತನ್ನ ತಾಯಿಯೊಡನೆ ಈ ವಿಷಯ ಹೇಳಲು ಹೆದರಿದನಾದರೂ ಸಿಂಚನಾ ಧೈರ್ಯವಾಗಿ “ಇಲ್ಲಾ ಅತ್ತೆ ನಾನು ಶರತ್ ನನ್ನು ಮದುವೆಯಾಗಲು ಸಾಧ್ಯವಿಲ್ಲ. ನಾನೂ ವಿವೇಕ್ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ದೀವಿ. ನಾವಿಬ್ಬರೂ ಮದುವೆಯಾಗ್ತೀವಿ” ಎಂದು ಹೇಳಿದ್ದಳು. ಸಿಂಚನಾಳ ಅತ್ತೆ “ನನ್ನ ತಮ್ಮನ ಕೊನೆ ಆಸೆ ಈಡೇರಿಸೋದಿಕ್ಕಾಗೋದಿಲ್ವಾ? ಶರತ್ ಜೊತೆ ಮದುವೆ ಇಷ್ಟವಿಲ್ಲ ಅಂದ್ರೆ ನೀನು ನನ್ನ ಸೊಸೆಯಾಗೋದು ನನಗೂ ಇಷ್ಟವಿಲ್ಲ” ಎಂದು ರಂಪಾಟ ಮಾಡಿ “ನಿಮ್ಮ ಜೊತೆಗೆ ಸಂಬಂಧಾನೆ ಬೇಡ” ಎಂದ್ಹೇಳಿ ಹೊರಟುಬಿಟ್ಟರು. ಕೊನೆಗೆ ಅವರನ್ನು ಸಮಾಧಾನಿಸಿದ್ದು ಶರತ್. “ಅವರಿಬ್ಬರೂ ಪ್ರೀತಿಸ್ತಿದ್ದಾರೆ. ಆ ವಿಷಯ ನನಗೂ ಗೊತ್ತಿತ್ತು. ಅವಳು ನಮ್ಮ ಮನೆಗೆ ಸೊಸೆಯಾಗಿ ಬಂದರೆ ಸಾಕಲ್ಲ? ಮಾವನ ಆತ್ಮಕ್ಕೂ ಶಾಂತಿ ಸಿಗುತ್ತೆ” ತಿಂಗಳುಗಳವರೆಗೆ ಇದೇ ಮಾತನ್ನು ಹೇಳಿ ಹೇಳಿ ತಾಯಿ ಒಪ್ಪುವಂತೆ ಮಾಡಿದ್ದ ಶರತ್.
* * *
ಲೋಕಿ ಮತ್ತು ಪೂರ್ಣಿಮಾಳ ಜೊತೆಯಿದ್ದ ಸಿಂಚನಾಳನ್ನು ಫೋನ್ ಮಾಡಿ ಕರೆಸಿದ್ದ ಗೌತಮ್. “ಸಿಂಚನಾ, ಇವತ್ತು ಏನು ಮಾತಾಡಬೇಕು ಅನ್ನೋದೆ ತಿಳಿಯುತ್ತಿಲ್ಲ. ನಿನಗೆ ಹೇಳಬೇಕು ಎಂದು ತುಂಬಾ ದಿನಗಳಿಂದ ಅಂದುಕೊಂಡಿದ್ದನ್ನೆಲ್ಲಾ ಈ ಪತ್ರದಲ್ಲಿ ಬರೆದಿದ್ದೇನೆ” ಪತ್ರವನ್ನು ಆಕೆಯ ಕೈಯಲ್ಲಿಟ್ಟು ಹೊರಟುಹೋದ.

‘ಪೂರ್ಣಿಮಾ ಹೇಳಿದ್ದೇ ನಿಜವಾಗ್ತ ಇರೋ ಆಗಿದೆಯಲ್ಲಾ’ ಎಂದೆನಿಸಿತು ಸಿಂಚನಾಳಿಗೆ. ಮನೆಗೆ ಹೋಗಿ ರೂಮಿನ ಬಾಗಿಲು ಹಾಕಿ ಪತ್ರ ತೆರೆದಳು.

ಪ್ರೀತಿಯ ಸಿಂಚನಾ,
ಈ ಪತ್ರ ನಿನ್ನ ಕೈಗೆ ಕೊಟ್ಟಾಗಲೇ ಈ ಪತ್ರದಲ್ಲೇನಿದೆಯೆಂದು ನೀನು ಊಹಿಸಿರುತ್ತೀಯಾ ಎಂದು ಭಾವಿಸುತ್ತೇನೆ. ಉಳಿದೆಲ್ಲಾ ವಿಷಯದಲ್ಲೂ ಮುನ್ನುಗ್ಗೋ ನನಗೂ ಕೂಡ ಈ ಪ್ರೀತಿ ಪ್ರೇಮದ ವಿಷಯದಲ್ಲಿ ನೇರವಾಗಿ ನಿನ್ನ ಬಳಿ ಮಾತನಾಡಲು ಆಗಲಿಲ್ಲ. ನಾನು ನಿನ್ನನ್ನು ತುಂಬ ತುಂಬ ತುಂಬಾ ಪ್ರೀತಿಸುತ್ತೀನಿ ಸಿಂಚು. ಐ ಲವ್ ಯು. ನಿನ್ನನ್ನು ಕಾಲೇಜಿನಲ್ಲಿ ನೋಡಿದ ಮೊದಲ ದಿನದಿಂದಲೇ ನಿನ್ನೆಡೆಗೆ ಆಕರ್ಷಿತನಾಗಿದ್ದೆ ಅಂತ ಸುಳ್ಳು ಹೇಳ್ಲಿಕ್ಕೆ ಬರೋದಿಲ್ಲ ನನಗೆ. ನಿಜ ಹೇಳಬೇಕೆಂದರೆ ಕಾಲೇಜಿನ ಮೊದಲ ದಿನಗಳಲ್ಲಿ ಕಣ್ಣುಗಳು ಮೊದಲು ಹುಡುಕುತ್ತಿದ್ದುದು ಪೂರ್ಣಿಮಾಳನ್ನು! ಹತ್ತದಿನೈದು ದಿನವಷ್ಟೇ. ಅದು ಆ ದಿನಗಳ ಆಕರ್ಷಣೆಯಷ್ಟೇ ಎಂದರಿವಾಯಿತು. ಅವಳ ಪಕ್ಕದಲ್ಲೇ ಇರುತ್ತಿದ್ದ ನಿನ್ನನ್ನು ನೋಡಿದಾಗಲೆಲ್ಲ ಇವಳೂ ಚೆನ್ನಾಗಿದ್ದಾಳಲ್ವಾ ಅಂತ ಅನ್ನಿಸಿದ್ದು ನಿಜ.
ಅದೊಂದು ದಿನ... ಆ ತಾರೀಖು ಸಹಿತ ನೆನಪಿದೆ ನನಗೆ. ಆಗಸ್ಟ್ ಹನ್ನೆರಡನೇ ಮಧ್ಯಾಹ್ನ, ಸುಮಾರು ಒಂದೂ ಐವತ್ತಾಗಿತ್ತು. ಎರಡು ಘಂಟೆಗೆ ಕ್ಲಾಸಿತ್ತು. ತರಗತಿಗೆ ನಾನವತ್ತು ಬೇಗ ಬಂದಿದ್ದೆ. ತರಗತಿಯಲ್ಲಿ ನೀನು, ಪೂರ್ಣಿಮಾ, ನಾಲ್ಕೈದು ಜನ ಹುಡುಗಿಯರು. ನಾನು ತರಗತಿಯೊಳಗೆ ಕಾಲಿಡುವುದಕ್ಕೂ ನೀನು ನಿನ್ನ ತಲೆಗೂದಲನ್ನೆಲ್ಲಾ ಒಟ್ಟು ಮಾಡಿ ಕ್ಲಿಪ್ ಹಾಕುವುದಕ್ಕೂ ಸರಿಹೋಯಿತು. ಅವತ್ತು ನೀನು ಶ್ವೇತವರ್ಣದ ಚೂಡಿದಾರ ಧರಿಸಿದ್ದೆ. ಬಹುಶಃ ಬೆಳಿಗ್ಗೆ ಎಣ್ಣೆ ಹಚ್ಚಿಕೊಂಡು ತಲೆಸ್ನಾನ ಮಾಡಿದ್ದೆಯೆಂದು ತೋರುತ್ತೆ. ನಿಜಕ್ಕೂ ಅದು ಕೂದಲಾ ಅಥವಾ ರೇಷ್ಮೆ ನೂಲನ್ನೇ ತಲೆಗೆ ಕಟ್ಟಿಕೊಂಡು ಬಂದಿದ್ದಾಳಾ ಎಂಬ ಅನುಮಾನ ಬರುತ್ತಿತ್ತು..... ಅವತ್ತಿನಿಂದ ನನ್ನ ಮನಸ್ಸು ಸ್ಥಿಮಿತದಲ್ಲಿಲ್ಲ. ನಿನ್ನ ರೂಪವನ್ನು ಮರೆಯಲೇ ಆಗುತ್ತಿಲ್ಲ. ಕಣ್ಣು ಮುಚ್ಚಿದಾಗಲೆಲ್ಲ ನಿನ್ನದೇ ರೂಪ....
ಬೇರೆಯವರ ಬಗ್ಗೆ ಗೊತ್ತಿಲ್ಲ. ನಿನ್ನನ್ನು ನಾನು ಇಷ್ಟಪಟ್ಟಿದ್ದು ನಿನ್ನ ರೂಪ ನೋಡಿಯೇ! ನಿನ್ನ ಪರಿಚಯವಾಗುವ ಮೊದಲೇ ನಿನ್ನನ್ನು ಪ್ರೀತಿಸಲು ಶುರುಮಾಡಿದೆ. ಅದು ಹೆಚ್ಚಾಗಿದ್ದು ನಿನ್ನ ಸ್ನೇಹ ಪರ ನಡವಳಿಕೆ, ಕಲ್ಮಷವಿಲ್ಲದ ಮನಸ್ಸು, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದನ್ನೆಲ್ಲಾ ನೋಡಿದ ಮೇಲೆ. ಪ್ರೀತಿಸಿದರೆ ಇಂತ ಹುಡುಗೀನ ಪ್ರೀತಿಸಬೇಕು ಅಂತ ಅನ್ನಿಸೋದಕ್ಕಿಂತ ಹೆಚ್ಚಾಗಿ ಮದುವೆಯಾದರೆ ಇವಳನ್ನೇ ಮದುವೆಯಾಗಬೇಕು ಎಂದು ನಿಶ್ಚಯಿಸಿದ್ದೇನೆ. ನೀನು ನನ್ನ ಜೊತೆ ಸ್ನೇಹದಿಂದ ಮಾತನಾಡಿಸುತ್ತೀಯಾ ಅಂದ ಮಾತ್ರಕ್ಕೆ ನೀನೂ ಕೂಡ ನನ್ನನ್ನು ಪ್ರೀತಿಸ್ತಿದ್ದೀಯಾ ಅಂತ ಅಂದುಕೊಳ್ಳುವಷ್ಟು ಮೂರ್ಖ ನಾನಲ್ಲ. ಪ್ರೀತೀನೇ ಬೇರೆ, ಸ್ನೇಹಾನೇ ಬೇರೆ. ನಿನಗೆ ನನ್ನ ಮೇಲೆ ಪ್ರೀತಿ ಇಲ್ಲದಿದ್ದರೆ (ಹಾಗಾಗದೇ ಇರಲಿ ಅಂತ ನಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿಟ್ಟಿದ್ದೀನಿ) ಆದಷ್ಟು ಬೇಗ ತಿಳಿಸಿಬಿಡು; ನನಗೆ ನಿನ್ನ ಮನಸ್ಸಿನ ಯಾವುದಾದರೂ ಒಂದು ಮೂಲೇಲಿ ಜಾಗ ಕೊಡಬಹುದು ಎಂದೆನಿಸಿದರೆ ಆರಾಮವಾಗಿ ಯೋಚಿಸು. ಒಂದು ವಾರ ಅಥವಾ ಒಂದು ತಿಂಗಳು ಬಿಟ್ಟು ತಿಳಿಸು ಜೀವನ ಸಂಗಾತಿ ಆಗುವವಳಿಗೋಸ್ಕರ ಒಂದು ತಿಂಗಳು ಕಾಯೋದು ದೊಡ್ಡ ಸಂಗತಿಯೇನಲ್ಲ.

ನೀನು ನನ್ನನ್ನು ಪ್ರೀತಿಸುತ್ತೀಯೋ ಇಲ್ಲವೋ ತಿಳಿಯದು. ಈ ಪತ್ರವನ್ನು ಓದಿದ ಕ್ಷಣದಿಂದ ನಮ್ಮಿಬ್ಬರ ನಡುವಿನ ಸ್ನೇಹ ಮೊದಲಿನಂತಿರಲು ಸಾಧ್ಯವಿಲ್ಲ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಆ ಭಯದಿಂದಾನೇ ಇಷ್ಟು ದಿನ ನಿನ್ನಲ್ಲಿ ಈ ವಿಷಯ ಹೇಳಿರಲಿಲ್ಲ. ಮನಸ್ಸಿನಲ್ಲಿಟ್ಟುಕೊಂಡು ಕೊರಗೋದಕ್ಕಿಂತಾ ಹೇಳಿಬಿಡೋದು ವಾಸಿ ಅಂತ ನಿರ್ಧರಿಸಿ ಎಲ್ಲವನ್ನೂ ಬರೆದಿದ್ದೇನೆ.
ಈ ಫೋನ್ ಬಂದಮೇಲೆ ನಮಗೆಲ್ಲಾ ಬರೆಯೋ ಅಭ್ಯಾಸವೇ ಮರೆತುಹೋಗಿದೆ. ಆದರೂ ಕಷ್ಟಪಟ್ಟು ಪ್ರಯಾಸದಿಂದ ಮನಸ್ಸಿನ ಭಾವನೆಗಳನ್ನೆಲ್ಲಾ ಈ ಹಾಳೆಗಳ ಮೇಲೆ ಬರೆದಿದ್ದೇನೆ. ನಿನ್ನ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಕಣೇ ಸಿಂಚು......
‘ಛೇ! ಕೊನೆಗೂ ಪೂರ್ಣಿ ಹೇಳಿದ್ದೇ ನಿಜವಾಗಿಯೋಯ್ತಲ್ಲ’ ಎಂದು ನಿಟ್ಟುಸಿರುಬಿಟ್ಟಳು, ಪತ್ರವನ್ನೋದಿದ ಸಿಂಚನಾ ‘ಪತ್ರವನ್ನು ಹರಿದುಹಾಕಿಬಿಡಲಾ ಎಂದು ಯೋಚಿಸಿ ಬೇಡ ವಿವೇಕ್ ಬಂದಾಗ ಅವನಿಗೆ ಈ ಪತ್ರ ತೋರಿಸಿ ನೋಡೋ ನನಗೆಷ್ಟು ಡಿಮ್ಯಾಂಡ್ ಇದೆ ಎಂದ್ಹೇಳಿ ಕಿಚಾಯಿಸಬಹುದು. ಗೌತಮ್ ಬಳಿ ನಾಳೆಯೇ ಹೋಗಿ ನನ್ನ ಮದುವೆ ನಿಶ್ಚಯವಾಗಿರೋದನ್ನು ತಿಳಿಸಿಬಿಡಬೇಕು. ಇಲ್ಲಾಂದ್ರೆ ಪಾಪ ಸುಮ್ಮನೆ ತಲೆಕೆಡಿಸಿಕೋತಾನೆ. ನಾನೇ ತಪ್ಪು ಮಾಡಿಬಿಟ್ಟೆ. ಅವನು ನನ್ನ ಸ್ನೇಹಿತನಾಗುತ್ತಿದ್ದ ಹಾಗೆ ವಿವೇಕ್ ವಿಷಯ ಹೇಳಿಬಿಡಬೇಕಿತ್ತು. ಆಗ ನನ್ನ ಬಗೆಗಿನ ಭಾವನೆಗಳನ್ನು ಬಲವಂತವಾಗಿಯಾದರೂ ಬದಲಿಸಿಕೊಳ್ಳುತ್ತಿದ್ದನೋ ಏನೋ?
ಮುಂದುವರೆಯುವುದು......

No comments:

Post a Comment