Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ
ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ
ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ
ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್
ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು
ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ
ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ
ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ
ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ
ನೋಡಿದರು.