Nov 9, 2013

ಗಾನ ಮುಗಿಸಿದ ಮನ್ನಾ ಡೇ



ಡಾ ಅಶೋಕ್ ಕೆ ಆರ್
ಭಾರತೀಯ ಚಲನಚಿತ್ರಗಳಿಗೂ ಸಂಗೀತ – ಹಾಡಿಗೂ ಬಿಡಿಸಲಾರದ ನಂಟು. ವಿಶ್ವದ ಇತರೆ ಚಿತ್ರೋದ್ಯಮಕ್ಕೂ ನಮ್ಮ ವಿವಿಧ ಚಿತ್ರೋದ್ಯಮಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವಿದು. ನಮ್ಮಲ್ಲೂ ಅಲ್ಲೊಂದು ಇಲ್ಲೊಂದು ಪ್ರಾಯೋಗಿಕವಾಗಿ ಹಾಡಿಲ್ಲದ ಚಿತ್ರಗಳು ಬರುತ್ತವಾದರೂ ಅವುಗಳ ಸಂಖೈ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದು ಹಾಸ್ಯ ಚಿತ್ರವಿರಲಿ, ಸಾಹಸ ಪ್ರಧಾನವಿರಲಿ, ಒಂದು ಗಂಭೀರ ಕಥೆಯ ಚಿತ್ರವಾಗಲಿ ಹಾಡುಗಳಿಲ್ಲದೆ ಭಾರತೀಯ ಚಿತ್ರಗಳು ಅಷ್ಟಾಗಿ ರುಚಿಸುವುದಿಲ್ಲ. ಶಾಸ್ತ್ರೀಯ ಸಂಗೀತ, ರಾಕ್ ಪಾಪ್ ಸಂಗೀತಗಳು ಸೀಮಿತ ಆಸಕ್ತ ಜನರನ್ನು ಮಾತ್ರ ತಲುಪಿದರೆ ಎಲ್ಲ ರೀತಿಯ ಸಂಗೀತವನ್ನು ತನ್ನದೇ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಸಿನಿಮಾರಂಗದ್ದು. ಸಂಗೀತದೊಡನೆ ಬೆರೆತ ಸಾಹಿತ್ಯವನ್ನು ಜನರ ಮನ ಮುಟ್ಟಿಸಿದ್ದು ಅತ್ಯಮೋಘ ಗಾಯಕರು.
ಹೊಸ ಚಿತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಛಾಯಾಗ್ರಹಣ, ಅತ್ಯಾಧುನಿಕ ಸಂಗೀತ ಉಪಕರಣಗಳನ್ನು ಉಪಯೋಗಿಸಿ ಉತ್ತಮ ಹಾಡುಗಳನ್ನು ನೀಡಿದರೂ ಕೊನೆಗೆ ನಾವು ಮತ್ತೆ ಮತ್ತೆ ಗುನುಗುವಂತೆ ಮಾಡುವುದು ನಮ್ಮ ಮನಸ್ಥಿತಿಗೆ ಹೊಂದಿಸಿಕೊಳ್ಳುವಂಥ ಹಾಡುಗಳು ಸಿಗುವುದು ಹಳೆಯ ಸಿನಿಮಾಗಳಲ್ಲೇ. ಎಷ್ಟೇ ಚೆಂದದ ಹಾಡು ಮಾಡಿದರೂ ಹೊಸ ಚಿತ್ರದ ಹಾಡುಗಳು ಕೆಲವು ತಿಂಗಳು ಅಬ್ಬಬ್ಬಾ ಎಂದರೆ ಒಂದೆರಡು ವರುಷದಲ್ಲಿ ಮರೆಯಾಗಿಬಿಡುತ್ತದೆ. ಕನ್ನಡ ಸೇರಿದಂತೆ ಬಹುತೇಕ ಎಲ್ಲ ಭಾಷೆಯ ಸಿನಿಮಾಗಳಿಗೂ ಈ ಮಾತು ಅನ್ವಯಿಸುತ್ತದೆ ಎಂಬುದು ಹಳೆಯ ಗೀತೆಗಳ ಮಾಧುರ್ಯಭರಿತ ನಿನಾದದ ಮಹತ್ವವನ್ನು ಪುಷ್ಟೀಕರಿಸುತ್ತದೆ.

ಹಿಂದಿ ಸಿನಿಮಾದ ಸುಮಧುರ ಗಾಯಕರನ್ನು ನೆನೆಪಿಸಿಕೊಂಡಾಗ ಥಟ್ಟಂತ ನೆನಪಾಗುವುದು ಕಿಶೋರ್ ಕುಮಾರ್, ರಫಿ, ಮುಖೇಶ್. ಬಹುಶಃ ಇವರು ಮೂವರ ಅಬ್ಬರದಲ್ಲಿ ಇತ್ತೀಚೆಗೆ ನಿಧನಗೊಂಡ ಮನ್ನಾ ಡೇ ಎಲೆ ಮರೆಯಲ್ಲೇ ಉಳಿದು ಹೋದರು ಎಂದರೆ ತಪ್ಪಲ್ಲ. 1919ರ ಕಾರ್ಮಿಕರ ದಿನಾಚರಣೆಯ ದಿನದಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ ಮನ್ನಾ ಡೇ ತನ್ನ ಸಮಕಾಲೀನ ಪ್ರಖ್ಯಾತ ಗಾಯಕರ ಅಬ್ಬರದ ನಡುವೆಯೂ ತಮ್ಮದೇ ಒಂದು ಅಸ್ತಿತ್ವವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾದರು. 1942ರಲ್ಲಿ ಹಿಂದಿಯ ತಮನ್ನಾ ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಆರಂಭಿಸಿದ ಮನ್ನಾ ಡೇ ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಯ ಸಿನಿಮಾಗಳನ್ನು ತಮ್ಮ ದನಿಯ ಮೂಲಕ ಸಿಂಗರಿಸಿದರು; ತಮ್ಮ ಗಾಯನದವಧಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದರು. ಹಿಂದೂಸ್ತಾನಿ ಸಂಗೀತ ಪದ್ಧತಿಯನ್ನು ಶಾಸ್ತ್ರಬದ್ಧವಾಗಿ ಕಲಿತ ಮನ್ನಾ ಡೇ ಹಿಂದಿ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಲು ಬಂದವರು. ಕೃಷ್ಣ ಚಂದ್ರ ಡೇ, ಸಚಿನ್ ದೇವ್ ಬರ್ಮನ್ ರಂಥ ಸಂಗೀತ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿ ಹಲವು ಚಿತ್ರಗಳಿಗೆ ತಾವೇ ಸಂಗೀತ ನೀಡಿದರು. ಇಷ್ಟರಲ್ಲಿ ಮನ್ನಾರವರ ದನಿಯ ಶಕ್ತಿ ಗುರುತಿಸಿದ್ದ ಸಂಗೀತ ನಿರ್ದೇಶಕ ಕೃಷ್ಣ ಚಂದ್ರ ಡೇ ತಮನ್ನಾ ಚಿತ್ರದ ‘ಜಾಗೊ ಆಯೀ ಉಷಾ’ ಹಾಡನ್ನು ಮನ್ನಾರವರ ಕೈಯಲ್ಲಿ ಹಾಡಿಸಿದರು. ಗಾಯಕನಾಗಿ ಗುರುತಿಸಿಕೊಳ್ಳಲು ಇದು ಸಹಾಯಕವಾಯಿತು. 1954ರಲ್ಲಿ ತೆರೆಕಂಡ ಮಹಾಪೂಜಾ ಹಿಂದಿ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಆದರೆ ಮನ್ನಾ ಡೇ ಹಿನ್ನೆಲೆ ಗಾಯಕನಾಗಿ ಗಳಿಸಿದಷ್ಟು ಖ್ಯಾತಿಯನ್ನು ಸಂಗೀತ ನಿರ್ದೇಶಕನಾಗಿ ಗಳಿಸಲಾಗಲಿಲ್ಲ. ಹಿನ್ನೆಲೆ ಗಾಯಕನಾಗಿ ಮನ್ನಾ ಡೇ ಐವತ್ತು ಅರವತ್ತರ ದಶಕದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿದ್ದರು. ವರುಷವೊಂದಕ್ಕೆ ಎಂಬತ್ತಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದೂ ಇದೆ.

ಮಳೆ ಮತ್ತು ಪ್ರೇಮದ ಸಮಯದಲ್ಲೆಲ್ಲ ತಪ್ಪದೇ ನೆನಪಾಗುವುದು ಶ್ರೀ 420 ಚಿತ್ರದಲ್ಲಿ ಮಳೆಯಲ್ಲಿ ಕೊಡೆಯಿಡಿದು ಸಾಗುವ ರಾಜ್ ಕಪೂರ್ ಮತ್ತು ನರ್ಗೀಸ್. ಅವರೀರ್ವರ ಅಭಿನಯದ “ಪ್ಯಾರ್ ಹುವಾ ಇಕರಾರ್ ಹುವಾ” ಹಾಡಿಗೆ ದನಿಯಾಗಿದ್ದು ಮನ್ನಾ ಡೇ ಮತ್ತು ಲತಾ ಮಂಗೇಶ್ಕರ್. ಮೇರಾ ನಾಮ್ ಜೋಕರ್ ಚಿತ್ರದ “ಅರೆ ಭಾಯ್ ಜರಾ ದೇಖ್ಕೆ ಚಲೋ”, ಕಿಶೋರ್ ಕುಮಾರ್ ಜೊತೆಗೆ ಶೋಲೆ ಚಿತ್ರಕ್ಕೆ ಹಾಡಿದ “ಯೇ ದೋಸ್ತಿ ಹಮ್ ನಹೀ ತೋಡೆಂಗೇ” ಅದೇ ಕಿಶೋರ್ ಜೊತೆ “ಏಕ್ ಚತುರ ನಾರ್ ಕರ್ಕೇ ಸಿಂಗಾರ್” ಹಾಡು ಮನ್ನಾ ಡೇಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದವು. ರಾಜೇಶ್ ಖನ್ನಾ ಅಭಿನಯದಲ್ಲಿ ಮೂಡಿಬಂದ “ಝಿಂದಗಿ ಕೈಸೆ ಹೈ ಪಹೇಲಿ”, “ಲಗಾ ಚುನರಿ ಮೇ ದಾಗ್”, ಲತಾ ಜೊತೆಗೂಡಿ ಹಾಡಿದ “ಯೇ ರಾತ್ ಭೀಗಿ ಭೀಗಿ” ಮನ್ನಾರವರ ಕೆಲವು ಖ್ಯಾತ ಹಿಂದಿ ಗೀತೆಗಳು. ಹಿಂದಿ ಮತ್ತು ಬಂಗಾಳದಲ್ಲಿ ಹೆಚ್ಚಾಗಿ ಹಾಡಿದ ಮನ್ನಾ ಡೇ ಭೋಜ್ ಪುರಿ, ಕೊಂಕಣಿ, ಪಂಜಾಬಿ, ಗುಜರಾತಿ, ಸಿಂಧಿ, ಓರಿಯಾ, ಮಲಯಾಳಂ ಮಾತ್ರವಲ್ಲದೇ ನೇಪಾಳಿ ಭಾಷೆಯ ಹಾಡುಗಳಿಗೂ ದನಿಯಾದರು. ಕನ್ನಡದಲ್ಲಿ ಇವರು ಹಾಡಿದ್ದು ಐದೇ ಹಾಡುಗಳು. ಕಲ್ಪವೃಕ್ಷ ಚಿತ್ರದ “ಜಯತೇ ಜಯತೇ ಸತ್ಯಮೇವ ಜಯತೇ” ಹಾಡು ಇಂದಿಗೂ ಪ್ರಸಿದ್ಧ. (ಗುರುಪ್ರಸಾದ್ ನಿರ್ದೇಶನದ ಮಠ ಚಿತ್ರದಲ್ಲೂ ಈ ಹಾಡನ್ನು ಉಪಯೋಗಿಸಿರುವುದು ಅದರ ಪ್ರಸಿದ್ಧಿಗೆ ಸಾಕ್ಷಿ)

ಕನ್ನಡದಲ್ಲಿ ಮನ್ನಾ ಡೇ ಹಾಡಿರುವುದು ಕಡಿಮೆಯಾದರೂ ಕರ್ನಾಟಕದೊಡನೆ, ಬೆಂಗಳೂರಿನೊಡನೆ ಅವರಿಗೆ ಅವಿನಾಭಾವ ಸಂಬಂಧ. ಕೇರಳದ ಸುಲೋಚನಾರನ್ನು ಮದುವೆಯಾದ ಮನ್ನಾ ಡೇ ತಮ್ಮ ಜೀವಿತದ ಬಹುಭಾಗವನ್ನು ಕಳೆದಿದ್ದು ಮುಂಬಯಿಯಲ್ಲಿ. ಬೆಂಗಳೂರಿನೊಡನೆ ನಿರಂತರ ಸಂಪರ್ಕದಲ್ಲಿದ್ದ ಮನ್ನಾ ಡೇ ತಮ್ಮ ಪತ್ನಿ ಸುಲೋಚನಾರವರು ಕ್ಯಾನ್ಸರಿನಿಂದ ಮೃತಪಟ್ಟ ನಂತರ ಬೆಂಗಳೂರಿನಲ್ಲೇ ನೆಲೆಸಿದರು. ಮೂರು ತಿಂಗಳಿನಿಂದ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ ಮನ್ನಾ ಡೇರವರ ಆರೋಗ್ಯ ದಿನೇ ದಿನೇ ಕ್ಷೀಣಿಸಿ ಅಕ್ಟೋಬರ್ 24ರಂದು ವಿಧಿವಶವರಾದರು. ಸಾಯುವ ಕಾಲದಲ್ಲಿ ಮನ್ನಾ ಡೇರವರ ಸಂಬಂಧಿಯೊಬ್ಬ ಹಣದ ವಿಷಯದಲ್ಲಿ ವಂಚಿಸಿದ. ಲಕ್ಷಾಂತರ ರುಪಾಯಿಯನ್ನು ನುಂಗಿ ಹಾಕಿದನೆಂದು ಮನ್ನಾರವರ ಪುತ್ರಿ ಪಶ್ಚಿಮ ಬಂಗಾಳ ಸರಕಾರಕ್ಕೆ ದೂರಿತ್ತರೂ ಪ್ರಯೋಜನವಾಗಲಿಲ್ಲ. ಮನ್ನಾರವರ ಆರೋಗ್ಯಕ್ಕಾಗಿ ಕೊನೆಯ ದಿನಗಳಲ್ಲಿ ಲಕ್ಷಾಂತರ ರುಪಾಯಿ ವ್ಯಯವಾಗಿದೆ. ಕರ್ನಾಟಕ ಸರಕಾರ ಆಸ್ಪತ್ರೆಗೆ ಬಾಕಿ ಇರುವ ಅಷ್ಟೂ ಹಣವನ್ನು ಚುಕ್ತಾ ಮಾಡುವುದಾಗಿ ತಿಳಿಸಿದೆ. ಪದ್ಮಶ್ರೀ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಗೌರವವನ್ನು ಮತ್ತಷ್ಟು ಹೆಚ್ಚಿಸಿದ ಮನ್ನಾ ಡೇಯಂಥ ಸಾಂಸ್ಕೃತಿಕ ರಾಯಭಾರಿಯ ಕುಟುಂಬಕ್ಕೆ ಸಹಾಯ ಮಾಡುವುದು ಸರಕಾರಗಳ ಕರ್ತವ್ಯವೇ ಅಲ್ಲವೇ....
ಪ್ರಜಾಸಮರದ ದೀಪಾವಳಿ ವಿಶೇಷಾಂಕಕ್ಕೆ ಬರೆದ ಪುಟ್ಟ ಲೇಖನ.

No comments:

Post a Comment