Nov 5, 2013

ಭಾಷೆಯೊಂದರ ಜನನ ಮರಣದ ಸುತ್ತ...


ಡಾ ಅಶೋಕ್ ಕೆ ಆರ್


ಭಾವನೆಗಳ ಅಭಿವ್ಯಕ್ತಿಗೆ, ಸಂವಹನದ ಸರಾಗತೆಗಾಗಿ ಹುಟ್ಟಿದ್ದು ಭಾಷೆ. ಶಬ್ದ, ಮುಖದ ಹಾವಭಾವಗಳ ಮುಖಾಂತರ ಭಾವನೆಗಳು ವ್ಯಕ್ತವಾಗುವುದಕ್ಕೂ ಮುಂಚಿತವಾಗಿ ಕೈಸನ್ನೆ ‘ಭಾಷೆ’ಯಾಗಿ ಬಳಕೆಯಾಗುತ್ತಿತ್ತು ಎಂದು ತಿಳಿಸುತ್ತದೆ ಮಾನವನ ನಿಕಟ ಸಂಬಂಧಿ ಚಿಂಪಾಂಜಿಯ ಮೇಲೆ ನಡೆದ ಕೆಲವು ವೈಜ್ಞಾನಿಕ ಅಧ್ಯಯನಗಳು. ಕೈಸನ್ನೆ, ಹಾವಭಾವಗಳೆಲ್ಲ ಸಮ್ಮಿಲನಗೊಂಡು ಶಬ್ದಕ್ಕೊಂದು ಮಾಧುರ್ಯ ದೊರೆತು ಹುಟ್ಟಿದ್ದು ಮನುಷ್ಯ ಭಾಷೆ. ಸಾವಿರಾರು ವರುಷಗಳ ಹಿಂದೆ ಪ್ರಪಂಚದ ನಾನಾ ಕಡೆಗಳಲ್ಲಿ ನಾನಾ ರೂಪದಲ್ಲಿ ಹುಟ್ಟಿದ ಭಾಷೆಗೂ ಒಂದು ಆಯಸ್ಸಿದೆ. ದಿನನಿತ್ಯದ ಸಂಗಾತಿಯಾಗಿ ತನ್ನನ್ನು ಬಳಸುವವರ ಸಂಖ್ಯೆ ಕಡಿಮೆಯಾಗಲು ಶುರುವಾದ ದಿನವೇ ಭಾಷೆಯ ಅವನತಿಯೂ ಪ್ರಾರಂಭವಾಗುತ್ತದೆ. ಸರಿಸುಮಾರು ಹತ್ತು ಸಾವಿರ ವರುಷಗಳ ಹಿಂದೆ ಅಂದಾಜು ಇಪ್ಪತ್ತು ಸಾವಿರ ಭಾಷೆಗಳಿದ್ದವು. ಸಂಪೂರ್ಣ ನಶಿಸುತ್ತ, ಮಗದೊಂದು ಭಾಷೆಯ ಜೊತೆಗೆ ಬೆರೆತು ಹೋಗಿ ಈಗ ಉಳಿದಿರುವ ಭಾಷೆಗಳ ಸಂಖೈ ಏಳು ಸಾವಿರ ಮಾತ್ರ. ಇನ್ನೂ ಆಘಾತದ ಅಂಶವೆಂದರೆ ಅಧ್ಯಯನವೊಂದರ ಪ್ರಕಾರ ಎರಡು ವಾರಕ್ಕೊಂದು ಭಾಷೆ ವಾರಸುದಾರರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ! 2100ರ ವೇಳೆಗೆ ಇರುವ ಭಾಷೆಗಳಲ್ಲಿ ಅರ್ಧದಷ್ಟು ನಶಿಸುವ ಸಂಭವವಿದೆ!

ಭಾಷೆಯೊಂದು ನಶಿಸಿಹೋಗಲು ಕಾರಣಗಳು ಹಲವಾರು. ಮುಂಚಿನ ದಿನಗಳಲ್ಲಿ ಸೀಮಿತ ಸಂಖೈಯ ಜನಾಂಗವೊಂದರ ಭಾಷೆ ನಿಧನವಾಗಲು ಆ ಇಡೀ ಜನಾಂಗ ನೈಸರ್ಗಿಕ ಪ್ರಕೋಪ ಅಥವಾ ಎಲ್ಲರನ್ನೂ ಬಲಿ ತೆಗೆದುಕೊಳ್ಳುವ ಬಲವಿದ್ದ ಖಾಯಿಲೆ ಸಾಕಿತ್ತು. ಲೌಕಿಕವಾಗಿ, ಭೌತಿಕವಾಗಿ ಮನುಷ್ಯ ಅಭಿವೃದ್ಧಿ (?) ಹೊಂದಲಾರಂಭಿಸಿದ ಮೇಲೆ ಈ ರೀತಿಯ ನೈಸರ್ಗಿಕ ಕಾರಣಗಳಿಗೆ ಬಲಿಯಾಗುವ ಭಾಷೆಗಳ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಕೃತಕ ಗಡಿಗಳ ನಿರ್ಮಿಸುತ್ತ ದೇಶ – ರಾಜ್ಯಗಳನ್ನು ಸೃಷ್ಟಿಸಿದ ಮಾನವನ ಭೌತಿಕ ದುರಾಸೆಯ ಫಲದಿಂದ ಪರರಾಜ್ಯ ಪರದೇಶಗಳ ಮೇಲೆ ದಂಡೆತ್ತಿ ಹೋದ ಮನುಷ್ಯನ ಜೊತೆಗೆ ಅವನಾಡುತ್ತಿದ್ದ ಭಾಷೆಯೂ ಹೋಯಿತು. ಸೋಲುಂಡ ದೇಶಗಳ ಭಾಷೆಯನ್ನು ಆಕ್ರಮಿಸಲಾರಂಭಿಸಿತು. ಭಾಷೆಯ ಜೊತೆ ಜೊತೆಗೇ ಸಾಗುವ ಸಂಸ್ಕೃತಿಯಲ್ಲೂ ಪಲ್ಲಟಗಳುಂಟಾದವು. ‘ಅಧಿಕೃತ’ ವಸಾಹತು ಯುಗ ಮುಗಿದು ಜಾಗತೀಕರಣದ ಯುಗ ಶುರುವಾದ ನಂತರ ಭಾಷೆಗಳ ನಿಧನದ ವೇಗವೂ ಹೆಚ್ಚಾಗಿಬಿಟ್ಟಿರುವುದು ಸುಳ್ಳಲ್ಲ. ಇದೇ ಜಾಗತೀಕರಣದಿಂದ ಕೆಲವು ಭಾಷೆಗಳ ಉಳಿಯುವಿಕೆಯೂ ಸಾಧ್ಯವಾಗಿದೆ!

ದ್ರಾವಿಡ ಭಾಷೆಗಳಲ್ಲೊಂದಾದ ಕನ್ನಡಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ. ಹಳೆಗನ್ನಡ ನಡುಗನ್ನಡವಾಗಿ ನಡುಗನ್ನಡ ಇಂದಿನ ಕನ್ನಡವಾಗಿ ಮಾರ್ಪಡಲು ನೂರಾರು ವರುಷದ ಹಾದಿ ಸವೆಸಬೇಕಾಯಿತು. ಭಾಷೆಯೆಂಬುದು ನಿರಂತರ ಬದಲಾವಣೆ ಕಾಣುತ್ತಿರುತ್ತದೆ ಎಂಬುದಕ್ಕೆ ಕನ್ನಡವೂ ಒಂದು ಉದಾಹರಣೆ. ಪುರಾತನ ಇಜಿಪ್ಶಿಯನ್ನರ ಭಾರತದ ಕುರಿತ ಪ್ರವಾಸಕಥನಗಳಲ್ಲೂ ಕನ್ನಡ ಭಾಷೆಯ ಕೆಲವು ಸಾಲುಗಳಿವೆಯೆಂಬ ಅಧ್ಯಯನ ವರದಿಗಳಿವೆ! ಇನ್ನು ಕನ್ನಡದ ಲಿಪಿ ಬ್ರಾಹ್ಮಿ ಲಿಪಿ, ಕದಂಬರ ಲಿಪಿಯಿಂದ ಪ್ರೇರಣೆ ಪಡೆದುಕೊಂಡು ಹುಟ್ಟಿರಬಹುದು. ಲಿಪಿ ಸ್ತಬ್ಧವಾಗುಳಿಯದೆ ಕಾಲಕಾಲಕ್ಕೆ ಬದಲಾಗುತ್ತ ಸಾಗಿದೆ. ತೆಲುಗು ಲಿಪಿ ಕನ್ನಡ ಲಿಪಿಯಿಂದ ಸ್ಪೂರ್ತಿಗೊಂಡಿದೆ. ಕೇವಲ ಸಣ್ಣದೊಂದು ಸಮುದಾಯದ ಭಾಷೆಯಾಗುಳಿಯದ ಕನ್ನಡ ಸಾವಿರಾರು ವರುಷಗಳ ಹಿಂದೆಯೇ ಆಡಳಿತದ ಭಾಷೆಯಾಗಿತ್ತೆಂಬುದಕ್ಕೆ ಹಲ್ಮಿಡಿಯಂತಹ ಹತ್ತಲವಾರು ಶಾಸನಗಳೇ ಸಾಕ್ಷಿ. ಸಂಸ್ಕೃತ, ಪ್ರಾಕೃತ, ಪಾಲಿ ಭಾಷೆಗಳೊಡನೆ ಕೊಡುಕೊಳ್ಳುವಿಕೆ ನಡೆಸಿತ್ತು ಕನ್ನಡ ಭಾಷೆ. ಮಾತನಾಡುವ ಜನಸಂಖೈಯ ಆಧಾರದ ಮೇಲೆ ಕನ್ನಡಕ್ಕೆ ಜಾಗತಿಕವಾಗಿ ನಲವತ್ತನೇ ಸ್ಥಾನ. ಇರುವ ಏಳು ಸಾವಿರ ಚಿಲ್ಲರೆ ಭಾಷೆಗಳಲ್ಲಿ ನಲವತ್ತನೇ ಸ್ಥಾನದಲ್ಲಿರುವ ಕನ್ನಡಕ್ಕೂ ನಿಧನದ ಭೀತಿಯಿದೆಯೇ?

ಭಾರತದ್ದೇ ಅನ್ಯಭಾಷಿಕರ ರಾಜ್ಯದ ಆಕ್ರಮಣ, ಪರ್ಷಿಯ, ಅರೇಬಿಕ್, ಆಂಗ್ಲರ ಆಕ್ರಮಣವನ್ನೆಲ್ಲವನ್ನೂ ಸಹಿಸಿಕೊಳ್ಳುತ್ತಾ ಇತರೆ ಭಾಷೆಗಳ ಪದಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತ ಸಾಗಿರುವ ಕನ್ನಡ ಇನ್ನು ಕೆಲದಶಕಗಳಲ್ಲಿ ಸಂಪೂರ್ಣವಾಗಿ ಇಲ್ಲವಾಗಿಬಿಡಬಹುದು ಎಂದು ಹೇಳಿದರೆ ಮೇಲ್ನೋಟಕ್ಕೆ ಅದು ಕಪೋಲಕಲ್ಪಿತ ಭ್ರಮೆ ಎಂಬ ಭಾವ ಮೂಡಬಹುದು. ಆದರೆ ಪ್ರಪಂಚದಾದ್ಯಂತ ನಶಿಸಿರುವ ಭಾಷೆಗಳ ಇತಿಹಾಸವನ್ನು ಗಮನಿಸಿದರೆ ಕನ್ನಡವೂ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆಯೆಂಬ ಸಂಗತಿಯನ್ನು ಸಂಪೂರ್ಣ ತಳ್ಳಿಹಾಕಲಾಗದು. ವಿಜ್ಞಾನ ಲೋಕಕ್ಕೆ ನೂರಾರು ಪದಗಳನ್ನು ಎರವಲು ಕೊಟ್ಟಿರುವ ಲ್ಯಾಟಿನ್, ಗ್ರೀಕ್ ನಂತಹ ಭಾಷೆಗಳು ಕೂಡ ಕಾಲಗರ್ಭದಲ್ಲಿ ಹೂತುಹೋದವು. ಅಪಾರ ಜ್ಞಾನವನ್ನು ತನ್ನೊಳಗಡಗಿಸಿಕೊಂಡ ಸಂಸ್ಕೃತ ಅದನ್ನುಪಯೋಗಿಸುವವರ ಕಾರಣದಿಂದ ಎಲ್ಲರನ್ನೂ ತಲುಪಲಾಗದೆ ಮಂತ್ರೋಚ್ಛಾರಣೆಗೆ ಅಧ್ಯಯನಕ್ಕೆ ಸೀಮಿತವಾಗಿಬಿಟ್ಟಿದೆ. ಈಗ ಅಸಾಧ್ಯವೆಂಬಂತೆ ಕಾಣುವ ಕನ್ನಡದ ನಿಧನ ಇನ್ನು ಕೆಲ ದಶಕಗಳಲ್ಲಿ ಕಂಪ್ಯೂಟರ್ ಹಾರ್ಡ್ ಡಿಸ್ಕಿನೊಳಗಷ್ಟೇ ಜೀವಿಸುವ ಕಾಲವೂ ಬಂದುಬಿಡಬಹುದು. ಕನ್ನಡ ಭಾಷೆಯ ಉಳಿವಿಗಾಗಿ ನಡೆದಷ್ಟು ಸಾಮೂಹಿಕ ಚಳುವಳಿಗಳು ಭಾರತದ ಬೇರೆ ಭಾಷೆಯಲ್ಲಿ ನಡೆದಿಲ್ಲವೇನೋ. ಗೋಕಾಕ್ ಚಳುವಳಿ, ಡಬ್ಬಿಂಗ್ ವಿರೋಧಿ ಚಳುವಳಿಗಳೆಲ್ಲ ಭಾಷೆ ಮತ್ತು ಭಾಷಾ ಸಂಸ್ಕೃತಿಯನ್ನುಳಿಸುವ ಸಲುವಾಗಿ ನಡೆದ ಹೋರಾಟಗಳು. ಕನ್ನಡ ಭಾಷೆಯ ಬಗ್ಗೆ ಇರುವಷ್ಟು ಹಾಡುಗಳು ಬೇರೊಂದು ಭಾಷೆಯಲ್ಲಿರುವುದು ಅನುಮಾನ. ಇಷ್ಟೆಲ್ಲದರ ನಂತರವೂ ಕನ್ನಡ ಭಾಷೆ ಅವಸಾನವಾಗುತ್ತಿದೆಯೆಂದೆ ಅದಕ್ಕೆ ಕಾರಣವೇನು?

ಆಂಗ್ಲ, ಹಿಂದಿ ಭಾಷೆಯ ನಿರಂತರ ಆಕ್ರಮಣ, ಜಾಗತೀಕರಣ, ಕನ್ನಡ ‘ಅನ್ನ ಹುಟ್ಟಿಸುವ’ ‘ಕೆಲಸ ಕೊಡಿಸುವ’ ಭಾಷೆಯಾಗದಿರುವುದು ಕನ್ನಡದ ಅವನತಿಗೆ ಪ್ರಮುಖ ಕಾರಣಗಳೆಂದು ತೋರುತ್ತಾದರೂ ಸಾಮೂಹಿಕ ಕನ್ನಡಪರ ಚಳುವಳಿಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಕನ್ನಡಿಗ ವೈಯಕ್ತಿಕತೆಯ ನೆಲೆಯಲ್ಲಿ ಕನ್ನಡದ ಬಗ್ಗೆ ತೋರುವ ಅನಾದಾರವೇ ಪ್ರಮುಖ ಕಾರಣ. ಕನ್ನಡಪರ ಚಳುವಳಿಗಳು ವಿಫಲವಾಗಲು ಆಂಗ್ಲ ಭಾಷಾ ವ್ಯಾಮೋಹ ಹೆಚ್ಚಿಸಿಕೊಂಡಿರುವ ನಮ್ಮ ಮನಸ್ಥಿತಿಯೇ ಕಾರಣ. ಭಾರತ ಬ್ರಿಟೀಷರ ವಸಾಹತುವಾಗಿದ್ದ ಕಾರಣ ದೇಶದಲ್ಲಿ ಆಂಗ್ಲ ಭಾಷೆಯ ಆಕ್ರಮಣ ಸಹಜ. ಆಂಗ್ಲ ಭಾಷಾ ಶಿಕ್ಷಣ ಪದ್ಧತಿ ರಾಷ್ಟ್ರವ್ಯಾಪಿ ಪಸರಿಸಿ ವಿಜ್ಞಾನದ ಆಗುಹೋಗುಗಳನ್ನು ಅರಿಯಲು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಇಂಗ್ಲೀಷ್ ‘ಅನಿವಾರ್ಯ’ ಎಂಬ ‘ಅಸತ್ಯ ಭ್ರಮೆ’ ಸೃಷ್ಟಿಯಾಯಿತು. ಶಿಕ್ಷಣದ ಕೊನೆಯ ಗುರಿ ಕೆಲಸ ದೊರಕಿಸುವುದು ಎಂಬ ಮತ್ತೊಂದು ತಪ್ಪು ಕಲ್ಪನೆ ‘ಅಸತ್ಯ ಭ್ರಮೆ’ ಸತ್ಯವಾಗಿ ಮಾರ್ಪಡುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಕರ್ನಾಟಕದಲ್ಲೇ ಕನ್ನಡ ಎಳ್ಳಷ್ಟೂ ಗೊತ್ತಿಲದೆಯೂ ಇಂಗ್ಲೀಷ್ ಮಾತ್ರ ಬಲ್ಲ ಅಭ್ಯರ್ಥಿಗಿರುವಷ್ಟು ಉದ್ಯೋಗಾವಕಾಶಗಳು ಅದೇ ಮಟ್ಟದ ಶೈಕ್ಷಣಿಕ ಜ್ಞಾನವಿರುವ ಆದರೆ ಇಂಗ್ಲೀಷ್ ಬರದ ಅಭ್ಯರ್ಥಿಗಿಲ್ಲ. ಇದೇ ಕಾರಣವನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ಕಡ್ಡಾಯಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸುವವರು ನೀಡುತ್ತಾರೆ. ಭಾವನಾತ್ಮಕ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಕನ್ನಡ ಮಾಧ್ಯಮದಲ್ಲೇ ಇರಬೇಕು ಎಂಬುದು ಸರಿ ಎಂಬಂತೆ ಕಂಡರೂ ಉನ್ನತ ಶಿಕ್ಷಣದಲ್ಲಿ (ಅದರಲ್ಲೂ ವಿಜ್ಞಾನ ರಂಗದಲ್ಲಿ) ಕನ್ನಡ ಮಾಧ್ಯಮ, ಕನ್ನಡದ ಪಠ್ಯ ಪುಸ್ತಕಗಳು ಇಲ್ಲದೇ ಇರುವಾಗ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಕನ್ನಡದಲ್ಲೇ ಮಾಡಬಯಸುವುದು ಸರಿಯಾ? ವಿಜ್ಞಾನಕ್ಕೆ ಸಂಬಂಧಿಸಿದ ಪಠ್ಯಗಳನ್ನು ಇಂಗ್ಲೀಷಿನಲ್ಲಿ ಉಳಿದವುಗಳನ್ನು ಕನ್ನಡದಲ್ಲಿರುವಂತೆ ಮಾಡುವುದು ಇದಕ್ಕೆ ಪರಿಹಾರವಾಗಬಹುದು. ಅಥವಾ ಕೆಲವು ದೇಶಗಳಲ್ಲಿರುವಂತೆ ಎಲ್ಲ ಆಂಗ್ಲ ಭಾಷಿಕ ವಿಜ್ಞಾನದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಬೇಕು. ಮತ್ತು ಈ ಅನುವಾದದ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು. ಆ ಮಟ್ಟದ ಅನುವಾದಕ್ಕೆ ವೆಚ್ಚ ಮಾಡಬೇಕಿರುವ ಸಮಯ, ವ್ಯಯಿಸಬೇಕಿರುವ ಹಣ ಮತ್ತಿದಕ್ಕಿಂತ ಹೆಚ್ಚಾಗಿ ಅಷ್ಟರಮಟ್ಟಿಗಿನ ಆಸಕ್ತಿ ನಮ್ಮಲ್ಲಿದೆಯಾ?

‘ಅನ್ನ ನೀಡುವ’ ಆಂಗ್ಲ ಭಾಷೆಯೊಂದನ್ನೇ ಕನ್ನಡ ಭಾಷೆಯ ಸಂಕಷ್ಟಗಳಿಗೆ ಹೊಣೆಯಾಗಿಸುವುದೂ ತಪ್ಪಾಗುತ್ತದೆ. ನಮ್ಮ ದಕ್ಷಿಣ ಭಾರತವನ್ನೇ ಉದಾಹರಣೆಗೆ ತೆಗೆದುಕೊಂಡರೆ ತಮಿಳು, ಮಲಯಾಳಂ ಭಾಷೆಗಳಿಗಿಲ್ಲದ ಅಂಜಿಕೆ ಕನ್ನಡ ಭಾಷೆಗೆ ಮಾತ್ರ ಯಾಕೆ? ಅಲ್ಲೂ ಇಲ್ಲಿನಂತೆ ಮಾತೃ ಭಾಷೆ ಮತ್ತು ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳಿವೆ. ನಮ್ಮ ಜನರಂತೆಯೇ ಅಲ್ಲಿನವರಿಗೂ ಆಂಗ್ಲ ಭಾಷಾ ಶಾಲೆಯ ಬಗೆಗಿನ ವ್ಯಾಮೋಹ ಹೆಚ್ಚು. ಪ್ರಮುಖ ವ್ಯತ್ಯಾಸವೆಂದರೆ ನಾವು ಮನೆ – ಮನದೊಳಗೂ ‘ಅನ್ನ ನೀಡುವ’ ಭಾಷೆಯನ್ನು ಬರಸೆಳೆದು ಅಪ್ಪಿಕೊಂಡುಬಿಟ್ಟಿದ್ದೇವೆ. ಕನ್ನಡ ಬಾರದವರೊಡನೆ ಮಾತನಾಡಲು ಮಾತ್ರ ಆಂಗ್ಲ ಭಾಷೆಯನ್ನು ಸೀಮಿತವಾಗಿಡದೆ ಕನ್ನಡ ಬರುವವರೊಟ್ಟಿಗೂ ಸಹ ಆಂಗ್ಲದಲ್ಲೇ ವ್ಯವಹರಿಸುತ್ತ ಭಾವನೆಗಳ ಸಂವಹನವನ್ನು ಕೃತ್ರಿಮಗೊಳಿಸಲಾರಂಭಿಸಿದ್ದೇವೆ. ಮಕ್ಕಳ ಇಂಗ್ಲೀಷ್ ಉತ್ತಮಗೊಳ್ಳಲಿ ಎಂಬ ಪೊಳ್ಳು ಕಾರಣದಿಂದ ಮನೆಯಲ್ಲೂ ಮಕ್ಕಳೊಡನೆ ಇಂಗ್ಲೀಷಿನಲ್ಲಿ ಮಾತನಾಡುವ ತಂದೆ ತಾಯಂದಿರ ಸಂಖೈ ಹೆಚ್ಚತೊಡಗಿದೆ. ತತ್ಪರಿಣಾಮವಾಗಿ ಕನ್ನಡವೆಂಬುದು ಪಾಸಗಲೇಬೇಕಾದಂತಹ ಒಂದು ಅನಿವಾರ್ಯ ಕರ್ಮವೆಂಬ ಭಾವ ಮಕ್ಕಳಲ್ಲಿ ಬೆಳೆಯಲಾರಂಭಿಸಿದೆ. ಆ ಮಕ್ಕಳಲ್ಲಿ ನಿಧನವಾಗುವುದು ಕೇವಲ ಕನ್ನಡ ಭಾಷೆಯಲ್ಲ, ಭಾಷೆಯ ಜೊತೆಜೊತೆಗೇ ಬೆಳೆಯುವ ಬೆಳೆಸುವ ಸಂಸ್ಕೃತಿಯ ಪತನವೂ ಶುರುವಾಗುತ್ತದೆ. ‘ಅನ್ನ ನೀಡುವ’ ಭಾಷೆಗಷ್ಟೇ ಸೀಮಿತವಾಗುವ ಮಕ್ಕಳಿಗೆ ‘ಕೆಲಸಕ್ಕಷ್ಟೇ’ ಸೀಮಿತವಾಗುವ ಸಂಸ್ಕೃತಿ ಮಾತ್ರ ಉಳಿದುಬಿಡುವ ಅಪಾಯವಿದೆ. ಕನ್ನಡ ಭಾಷೆಯದೇ ಹತ್ತಾರು ವಿಧಗಳು ಸೌಹಾರ್ದಯುತವಾಗಿ ನೂರಾರು ವರುಷಗಳಿಂದ ಬದುಕುತ್ತಿರುವಾಗ ಕನ್ನಡಿಗರಿಗೆ ಮತ್ತೊಂದು ಭಾಷೆಯನ್ನು ತನ್ನೊಳಗೆ ಅಂತರ್ಧಾನವಾಗಿಸಿಕೊಳ್ಳುವುದು ಕಷ್ಟದ ಸಂಗತಿಯಲ್ಲ. ಎಷ್ಟೋ ದೇಶಗಳಲ್ಲಿ ಆಂಗ್ಲದ ಜೊತೆಜೊತೆಗೆ ಮಾತೃ ಭಾಷೆಯೂ ಸದೃಡವಾಗಿ ಬೆಳೆಯುತ್ತಿರುವುದು ಈ ದ್ವಿಭಾಷೆಯ ಅನಿವಾರ್ಯತೆಯನ್ನು ಜಾಗತೀಕರಣದ ಹಿನ್ನೆಲೆಯಲ್ಲಿ ಒಪ್ಪಿಕೊಂಡು ಮುನ್ನಡೆಯುತ್ತಿರುವ ಕಾರಣದಿಂದ.

ದ್ವಿಭಾಷೆಯ ಅನಿವಾರ್ಯತೆಯನ್ನು ಅರ್ಥೈಸಿಕೊಳ್ಳುವಿಕೆ ನಮ್ಮಲ್ಲೂ ಪ್ರಾರಂಭವಾಗಿದೆಯಾದರೂ ಇನ್ನೂ ಅಧಿಕ ಯಶ ಗಳಿಸಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಸರಕಾರಗಳ ಅನಾದಾರ. ‘ಅನ್ನ ನೀಡುವ’ ಭಾಷೆಯಾಗುವುದು ಜಾಗತೀಕರಣದ ಭರಾಟೆಯಲ್ಲಿ ಕನ್ನಡಕ್ಕೆ ಕಷ್ಟವಾಗಬಹುದಾದರೂ ಆಡಳಿತದ ಭಾಷೆಯಾಗುವುದಕ್ಕೆ ಕಷ್ಟವಿರಲಿಲ್ಲ. ಆಡಳಿತ ಸಂಪೂರ್ಣ ಕನ್ನಡೀಕೃತಗೊಳ್ಳದಿರುವುದು ಕೂಡ ಕನ್ನಡದ ಅವಸಾನಕ್ಕೆ ಕಾರಣ. ದೈನಂದಿನ ವ್ಯವಹಾರದಲ್ಲಿ ಕನ್ನಡ ಅನಿವಾರ್ಯವೆಂಬ ಪರಿಸ್ಥಿತಿಯಿದ್ದರೆ ಅನ್ಯಭಾಷಿಕ ಕಂಪನಿಗಳು ಅನ್ಯಮಾರ್ಗವಿಲ್ಲದೆ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲೇಬೇಕಿತ್ತು. ಅದರ ಪರಿಣಾಮ ‘ಅನ್ನ ನೀಡುವ’ ಭಾಷೆಗೆ ಮಾರುಹೋದವರ ಮೇಲೂ ಆಗುತ್ತಿತ್ತು. ಕನ್ನಡದ ಬೆಳವಣಿಗೆಯೂ ಸಾಗುತ್ತಿತ್ತು. ಕೆಲಸಕ್ಕೆ ಬೇಡದ, ವ್ಯವಹಾರಕ್ಕೆ ಬೇಡದ ಕನ್ನಡ ಮನೆಯಿಂದಲೂ ಹೊರಗ್ಹೋಗುವುದರಲ್ಲಿ ಅಚ್ಚರಿಯೇನಿದೆ? ಬ್ಯಾಂಕ್ ಮತ್ತು ಪೋಸ್ಟ್ ಆಫೀಸಿನ ವ್ಯವಹಾರಗಳಲ್ಲಿ ಆಂಗ್ಲದ ಜೊತೆಗೆ ಹಿಂದಿಯ ಆಕ್ರಮಣವನ್ನೂ ಕನ್ನಡ ಎದುರಿಸಬೇಕಿದೆ. ಹಿಂದಿಗೆ ‘ಅನಧಿಕೃತ’ ರಾಷ್ಟ್ರ ಭಾಷೆಯ ಸ್ಥಾನಮಾನ ನೀಡಿ ರಾಷ್ಟ್ರಾದ್ಯಂತ ಹಿಂದಿ ಹೇರಬೇಕೆನ್ನುವ ಉತ್ತರ ಭಾರತೀಯರ ಆಕ್ರಮಣಕಾರಿ ಮನೋಭಾವ ದಕ್ಷಿಣದ ಭಾಷೆಗಳನ್ನು ಅಪಾಯಕ್ಕೆ ನೂಕುತ್ತಿದೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಯಶಸ್ವಿಯಾಗಿ ನಡೆದ ಹೋರಾಟ ಕರ್ನಾಟಕದಲ್ಲಿ ಕಂಡು ಬರಲಿಲ್ಲ. ಬ್ಯಾಂಕು, ಪೋಸ್ಟ್ ಆಫೀಸಿನ ಅರ್ಜಿಗಳಲ್ಲಿ ಕನ್ನಡ ಮಾಯವಾಗುತ್ತ ನಾಡಿನ ಬಹುತೇಕರಿಗೆ ಅರ್ಥವೇ ಆಗದ ಆಂಗ್ಲ ಮತ್ತು ಹಿಂದಿ ಮಾತ್ರ ರಾರಾಜಿಸುತ್ತಿದೆ. ಭಾಷೆಗಳಿಗಷ್ಟೇ ಅಲ್ಲದೆ ದೇಶದ ಸಮಗ್ರತೆಗೇ ಹಿಂದಿ ಭಾಷಾ ಹೇರಿಕೆ ಧಕ್ಕೆ ತರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಇಷ್ಟೆಲ್ಲಾ ನೇತ್ಯಾತ್ಮಕ ಸಂಗತಿಗಳ ನಡುವೆಯೂ ಆಶಾಭಾವ ಹುಟ್ಟಿಸುವ ವಿಷಯಗಳಿವೆ. ಹಫ್ತಾ ವಸೂಲಿ ಮಾಡುವವರೂ ಕೆಲವರಿದ್ದಾರೆ ಎಂಬ ಆರೋಪಗಳ ನಡುವೆಯೂ ಕನ್ನಡ ರಕ್ಷಣೆ ಮಾಡುವ ಸಂಘಟನೆಗಳ ಸಂಖೈ ಹೆಚ್ಚುತ್ತಿದೆ. ಅವುಗಳ ಕಾರ್ಯವೈಖರಿಯ ಬಗ್ಗೆ ಆಕ್ಷೇಪವೆತ್ತಬಹುದಾದರೂ ಕನ್ನಡ ಭಾಷಾ ಚಳುವಳಿಯನ್ನು ಜೀವಂತವಾಗಿಡುವಲ್ಲಿ ಈ ಸಂಘಟನೆಗಳ ಪಾತ್ರವನ್ನು ನಿರಾಕರಿಸಲಾಗದು. ಜಾಗತೀಕರಣದಿಂದ ಬಹಳಷ್ಟು ಜನರಿಗೆ ಕಂಪ್ಯೂಟರ್ ತಂತ್ರಜ್ಞಾನ ಸಮೀಪವಾಗಿರುವುದರಿಂದ ಕನ್ನಡದಲ್ಲಿ ಅಂತರ್ಜಾಲ ಮಾಧ್ಯಮಕ್ಕೆ ಬರೆಯುವವರ ಮತ್ತು ಓದುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನು ಭಾಷೆಯೆಂಬುದು ಕಾಲಕಾಲಕ್ಕೆ ಮೂಲಕ್ಕೆ ಧಕ್ಕೆಯಾಗದಂತೆ ಮಾರ್ಪಾಡಾಗುವುದು ಸಹಜ. ಕನ್ನಡದಲ್ಲೂ ಇಂಥ ಪ್ರಯತ್ನಗಳು ನಡೆಯುತ್ತಿವೆ. ಅಲ್ಪಪ್ರಾಣ, ಮಹಾಪ್ರಾಣಗಳೆಲ್ಲ ಇಂದಿನ ಕನ್ನಡವನ್ನು ಕ್ಲಿಷ್ಟವಾಗಿಸಿ ಕೇವಲ ಇಪ್ಪತ್ತಾರು ಅಕ್ಷರಗಳ ಆಂಗ್ಲ ಭಾಷೆಗೆ ಯುವಜನತೆ ಮಾರುಹೋಗುತ್ತಿದ್ದಾರೆಂಬ ಭಾವನೆಯಿಂದ ‘ಅನವಶ್ಯಕ’ ವ್ಯಾಕರಣವನ್ನು ತೊರೆದು ಕನ್ನಡವನ್ನು ಸರಳೀಕರಣದ ಪ್ರಕ್ರಿಯೆಗೆ ಒಳಪಡಿಸುತ್ತ ಮಾತನಾಡುವ ಭಾಷೆಯನ್ನೇ ‘ಎಲ್ಲರ ಕನ್ನಡ’ವನ್ನಾಗಿ ಉಪಯೋಗಿಸುವ ಪ್ರಯತ್ನಗಳೂ ನಡೆಯುತ್ತಿದೆ. ‘ಹೊನಲು’ ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಈ ‘ಎಲ್ಲರ ಕನ್ನಡ’ವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಗ್ರಾಂಥಕ ಕನ್ನಡಕ್ಕೆ ಒಗ್ಗಿಹೋಗಿರುವ ನಮಗೆ ಈ ‘ಎಲ್ಲರ ಕನ್ನಡ’ ಅಭಾಸದಂತೆ, ಅನವಶ್ಯಕವೆಂಬಂತೆ ಕಂಡರೂ ಮುಂದೊಂದು ದಿನ ಈ ‘ಎಲ್ಲರ ಕನ್ನಡದ’ ಪ್ರಯತ್ನವೇ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣವಾಗಬಹುದು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಕ್ಕಿರುವ ಅಪಾಯದ ಬಗ್ಗೆಯೇ ಯೋಚಿಸುವ ನಮಗೆ ಕನ್ನಡ ಭಾಷೆ ಕೂಡ ಆಕ್ರಮಣಕಾರಿಯಾಗಿ ಕೆಲವೊಂದು ಭಾಷೆಗಳ ಅವನತಿಗೆ ನಿಧನಕ್ಕೆ ಕಾರಣವಾಗುವುದನ್ನು ಒಪ್ಪುವುದು ಕಷ್ಟ! ತುಳು, ಹವ್ಯಕ, ಅರೆ ಭಾಷೆ, ಕೊಂಕಣಿ, ಲಂಬಾಣಿ ಇನ್ನು ಹತ್ತು ಹಲವಾರು ಭಾಷೆಗಳು ಕರ್ನಾಟಕದಲ್ಲೇ ಇವೆ. ಹಿಂದಿ, ಆಂಗ್ಲ ಭಾಷೆಯ ಜೊತೆಜೊತೆಗೆ ಈ ಭಾಷೆಗಳು ನಮ್ಮದೇ ನೆಲದ ಕನ್ನಡ ಭಾಷೆಯ ಆಕ್ರಮಣವನ್ನೂ ಎದುರಿಸಿ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಕನ್ನಡ ಭಾಷೆಯ ಉಳಿವು ಗೆಲುವಿನ ಜೊತೆಯಲ್ಲಿಯೇ ಕನ್ನಡಿಗರೆಲ್ಲರೂ ನಮ್ಮದೇ ರಾಜ್ಯದ ಇತರೆ ಭಾಷೆಗಳ ಅಭಿವೃದ್ಧಿಗೂ ಕೈಜೋಡಿಸಬೇಕಷ್ಟೇ.

ಸಾವಿರಾರು ಭಾಷೆಗಳ ನಿಧನ; ಸಾವಿರಾರು ಭಾಷೆಗಳು ಸಾವಿನಂಚಿನಲ್ಲಿ. ಭಾಷೆಯ ಬಗ್ಗೆ ಮಾತನಾಡುವಾಗ ಮರಣದ ಸಂಖ್ಯೆಯೇ ಹೆಚ್ಚಾದರೂ ಹೊಸ ಶಿಶುವಿನ ಜನನವೂ ನಡೆಯುತ್ತಿರುವ ಸಂತಸದ ಸುದ್ದಿ ಆಸ್ಟ್ರೇಲಿಯಾದ ತನಾಮಿ ಮರುಭೂಮಿಯಿಂದ ಬಂದಿದೆ! ಲಜಮಾನು ಎಂಬ ಸರಿಸುಮಾರು ಏಳು ನೂರು ಜನರ ಪುಟ್ಟ ಹಳ್ಳಿಯಲ್ಲಿ ಹೊಸ ಭಾಷೆಯೊಂದು ಜನನವಾಗುತ್ತಿರುವ ಸುದ್ದಿಯಿದೆ. ಕಾರಣಾಂತರಗಳಿಂದ ಕಳೆದ ಮೂವತ್ತೈದು ವರುಷದಿಂದ ಉಳಿದ ಪ್ರದೇಶಗಳೊಡನೆ ಹೆಚ್ಚು ಒಡನಾಡದ ಈ ಊರಿನಲ್ಲಿ ಲೈಟ್ ವಾರ್ಲ್ ಪಿರಿ (light warlpiri) ಎಂಬ ಭಾಷೆ ಜನನವಾಗುತ್ತಿದೆ. ವಾರ್ಲ್ ಪಿರಿ ಎಂಬ ಹಳೆಯ ಭಾಷೆ, ಇಂಗ್ಲೀಷ್ ಮತ್ತು ಕ್ರಿಯೋಲ್ ಎಂಬ ಭಾಷೆಯ ಸ್ಪೂರ್ತಿಯಿಂದ ಈ ಲೈಟ್ ವಾರ್ಲ್ ಪಿರಿ ಜನನವಾಗುತ್ತಿದೆ! ಸ್ಪೂರ್ತಿಯಷ್ಟೇ ಪಡೆದುಕೊಂಡು ತನ್ನದೇ ಸ್ವಂತ ವ್ಯಾಕರಣ, ವಿಶಿಷ್ಟ ಪದ ರಚನೆ ಸೃಷ್ಟಿಸಿಕೊಂಡಿರುವ ಲೈಟ್ ವಾರ್ಲ್ ಪಿರಿಗೆ ಸ್ವತಂತ್ರ ಭಾಷೆಯಾಗುವ ಎಲ್ಲ ಅರ್ಹತೆಯಿದೆ ಎಂಬುದು ತಜ್ಞರ ಅಭಿಮತ!
ಪ್ರಜಾಸಮರಕ್ಕೆ ಬರೆದ ಲೇಖನ

 

No comments:

Post a Comment