Oct 30, 2013

ಹಿಂದೂಗಳೆಲ್ಲ ಒಂದು! ಆದರೆ ಎಂದು??!

ಶಶಿಧರ್ ಹೆಮ್ಮಾಡಿ
ಹಿಂದೂಗಳೆಲ್ಲ ಒಂದು ಎಂಬ ಮಾತನ್ನು ಪದೇ ಪದೇ ಕೇಳುವ ಪ್ರಸಂಗಗಳು ಇತ್ತೀಚೆಗೆ ಹೆಚ್ಚುತ್ತಿದೆಯಾದರೂ ಈಗಲೂ ""   ವಿದ್ಯಾವಂತರೆಂಬ ಹೆಸರು ಗಳಿಸಿದ ಅನಕ್ಷರಸ್ಥರಿರುವ ಬಹುತೇಕ ಎಲ್ಲ ಊರುಗಳಲ್ಲಿ ದಲಿತರಿಗೆ ಮನೆ ಸಿಗುವುದು ಕಷ್ಟದ ಕೆಲಸ. ಗೆಳತಿಯೊಬ್ಬಳು ಹೇಳುತ್ತಿದ್ದಳು ಸ್ವಂತ ಮನೆಯಲ್ಲಿರುವ ಅವರಿಗೆ ಮನೆಗೆಲಸದವರು ಸಿಗುವುದೇ ಕಷ್ಟವಂತೆ, ಕಾರಣ ಅವರಿರುವ ಪ್ರದೇಶದಲ್ಲಿ ದಲಿತರ ಸಂಖೈ ಕಡಿಮೆ ಮತ್ತವರ ಮನೆಗೆ ಇತರೆ ಕೆಲಸದವರು ಬರಲಾಗದ್ದಕ್ಕೆ ಕಾರಣ ಗೆಳತಿ ದಲಿತ ಜಾತಿಗೆ ಸೇರಿದವಳು. ಫೇಸ್ ಬುಕ್ಕಿನಲ್ಲಿ ಶಶಿಧರ ಹೆಮ್ಮಾಡಿ ಬರೆದಿರುವ ಈ ಲೇಖನ ನೋಡಿದೆ. ಓದಿ ಪ್ರತಿಕ್ರಿಯಿಸಿ....


ನಂಜನಗೂಡು ಪರಿಸರದ ಮಾನವಂತರೆ, ನನ್ನ ಗೆಳೆಯ ಸಂತೋಷ ಗುಡ್ಡಿಯಂಗಡಿ ನಿಮ್ಮ ಊರಿನ ಹಳ್ಳಿಯೊಂದರಲ್ಲಿ ಮಾಸ್ತರರಾಗಿ ಪಾಠ ಮಾಡುತ್ತಿದ್ದಾರೆ. ಆತ ನೀನಾಸಂ ಪದವೀಧರ. ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಾರೆ. ನಾಟಕ ಕಲಿಸಿಕೊಡುತ್ತಾರೆ. ಬದುಕು ರೂಪಿಸಿಕೊಳ್ಳುವ ಕಲೆಯನ್ನೂ ಹೇಳಿಕೊಡುತ್ತಾರೆ. ಚೆನ್ನಾಗಿ ಹಾಡುತ್ತಾರೆ. ಪಾಠದ ಜೊತೆಗೆ ಮಕ್ಕಳ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪೋಷಿಸುತ್ತಾರೆ. ಸಂತೋಷ್ ಹಿಂದೆ ಇದ್ದ ಹೆಮ್ಮರಗಾಲ ಶಾಲೆಯಲ್ಲಿ ''ಹೆಮ್ಮರ' ಎಂಬ ಮಕ್ಕಳ ಹಸ್ತಪತ್ರಿಕೆಯನ್ನು ಆರಂಭಿಸಿದ್ದರು. ಈಗ ಕೆಲಸ ಮಾಡುತ್ತಿರುವ ಹೆಗ್ಗಡಹಳ್ಳಿ ಪ್ರೌಡಶಾಲೆಯಲ್ಲಿ 'ಅಳ್ಳೀಮರ' ಎಂಬ ಹೆಸರಿನಲ್ಲಿ ಹೊಸದೊಂದು ಪತ್ರಿಕೆಯನ್ನು ಮಕ್ಕಳಿಂದ ಮಕ್ಕಳಿಗಾಗಿಯೇ ಪ್ರಕಟಿಸುತ್ತಿದ್ದಾರೆ. ಸಂತೋಷ್ ಪ್ರಯತ್ನ ಈಗ ರಾಜ್ಯಮಟ್ಟದಲ್ಲಿಯೇ ಜನಪ್ರಿಯವಾಗಿದ್ದು ಇವರ ಸ್ಪೂರ್ತಿಯಿಂದ ಅನೇಕ ಕೈಬರಹದ ಶಾಲಾ ಮ್ಯಾಗಝೀನ್ಗಳು ಆರಂಭಗೊಂಡಿವೆ. ಕುರಿತು ನಾಡಿನ ಮಾಧ್ಯಮಗಳಲ್ಲೂ ಸುದ್ದಿ ಬಂದಿದೆ. ಸಂತೋಷ್ ಬಹುಮುಖ ಪ್ರತಿಭಾವಂತ ಮತ್ತು ಯಾವುದೇ ಶಾಲೆಗೆ ಅವರು ಬಲು ದೊಡ್ಡ ಆಸ್ತಿ. ಮಕ್ಕಳಿಗೆ ಅಚ್ಚುಮೆಚ್ಚಿನ ಮೇಷ್ಟ್ರು ಸಂತೋಷ್. ತಮ್ಮ ಕಥೆಗೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಒಮ್ಮೆ ದ್ವಿತೀಯ ಬಹುಮಾನವನ್ನೂ ಪಡೆದಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವನ ಪ್ರಕಟವಾಗಿದೆ. ಇಷ್ಟೆಲ್ಲ ಪ್ರತಿಭಾವಂತ ನಿಜ. ಆದರೆ ಏನ್ಮಾಡೋಣ. ಆತ ನಮ್ಮೂರಿನ ದಲಿತರ ಜಾತಿಯಲ್ಲಿ ಹುಟ್ಟಿದವರು. ದಲಿತರು ಎಷ್ಟೇ ಪ್ರತಿಭಾವಂತರಾದರೂ ಅವರು ದಲಿತರೆ. ಇದು ಇಪ್ಪತ್ತೊಂದನೇ ಶತಮಾನದಲ್ಲೂ ನಮ್ಮ ಸಮಾಜದ ನಿಲುವು. ನಮ್ಮ ಕಥಾನಾಯಕ ಸಂತೋಷ್ ಈಗ ನಂಜನಗೂಡಿನ ಅಕ್ಕಪಕ್ಕದಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕುತ್ತಿದ್ದಾರೆ. ಆದರೆ ಅವರು ದಲಿತರು ಎಂಬ ಕಾರಣಕ್ಕೆ ಮನೆ ಹುಡುಕುವ ಕಾರ್ಯ ಬಹಳ ಕಠಿಣವಾಗಿದೆ. ಮನೆ ಬಾಡಿಗೆಗೆ ಇದ್ದರೂ ದಲಿತ ಎನ್ನುವ ಕಾರಣಕ್ಕೆ ಇವರಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಲಾಗುತ್ತಿದೆ. ತನಗಾಗುತ್ತಿರುವ ಅವಮಾನಗಳ ಬಗ್ಗೆ ಅವರು ದಿನಾಲೂ Facebookನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಅವರ ಸ್ಟೇಟಸ್ ಸಂದೇಶಗಳ ಎರಡು ಸ್ಯಾಂಪಲ್ ನೋಡಿ. . ಇವತ್ತೊಂದು ಮನೆ ನೋಡಲು ಹೋಗಿದ್ದೆ. ನಾನು ದಲಿತನೆಂಬುದ ಕೇಳಿಯೂ ಗಂಡ ಕೊಡಲು ಒಪ್ಪಿದ್ದ ಆತನ ಹೆಂಡತಿಗೆ ಇಷ್ಟವಿಲ್ಲ, ನನ್ನ ಜಾತಿಯ ವಿಚಾರವಾಗಿ ಅವರಿಬ್ಬರ ಜಗಳವೆ ಶುರುವಾಗಿ ನನಗೆ ಇಂದೂ ಬಾಡಿಗೆಗೆ ಮನೆ ಸಿಗಲಿಲ್ಲ . ಇಂದು ನಂಜನಗೂಡಿನಲ್ಲಿ ಬಾಡಿಗೆ ಹುಡುಕಲು ಹೋಗಿದ್ದೆ. ಮನೆ ನೋಡಿದೆ ಚನ್ನಾಗಿತ್ತು ಹಣದ ವಿಚಾರವನ್ನೂ ಮಾತಾಡಿದೆ. ಕಡೆಯಲ್ಲಿ ಜಾತಿಯ ಮಾತು ಬಂತು. ನಾನು ದಲಿತ ಎಂದೆ ಇಲ್ಲ ಮನೆಕೊಡುವುದಿಲ್ಲ ಎಂದರು. ಇದನ್ನು ನೀರಿಕ್ಷಿಸಿದ್ದರಿಂದ ನನಗೇನೂ ಬೇಜಾರಾಗಿಲ್ಲ ನಂಜನಗೂಡಿನಲ್ಲಿ ಬಹಳಷ್ಟು ಅನುಭವವಾಗಿದೆ ಇಂತದ್ದು. ಇಲ್ಲಿ ಯಾರಾದರೂ ನಂಜನಗೂಡಿನ ಮಾನವಂತರು ಇದ್ದರೆ ನನ್ನದೊಂದು ಬಿನ್ನಹ. ನನ್ನ ಗೆಳೆಯ ಸಂತೋಷನಿಗೆ ಮನುಷ್ಯರು ವಾಸಿಸಲು ಯೋಗ್ಯವಾದ ಪರಿಸರದಲ್ಲಿ ಒಂದು ಅಚ್ಚುಕಟ್ಟಾದ ಬಾಡಿಗೆ ಮನೆಯನ್ನು ಹುಡುಕಲು ನೀವು ನೆರವಾಗುವಿರಾ? ನಂಜನಗೂಡಿನ ಮಾನ ಉಳಿಸುವಿರಾ? ಸಂತೋಷನಿಗೆ ಆಗುತ್ತಿರುವ ಅವಮಾನ ಮತ್ತು ನೋವು ನಮ್ಮ ಮತ್ತು ನಿಮ್ಮ ನೋವು ಆಗಬೇಕು. ನಮ್ಮೂರಿನ ಹುಡುಗ ನಿಮ್ಮೂರಿನ ನಾಳಿನ ಹುಡುಗ-ಹುಡುಗಿಯರ ಭವಿಷ್ಯ ರೂಪಿಸುತ್ತಿದ್ದಾನೆ. ಆತನ ವರ್ತಮಾನಕ್ಕೆ ನೆರವಾಗುವ ಸೌಜನ್ಯ ನಿಮಗಿಲ್ಲವೆ?
 

No comments:

Post a Comment