ಡಾ ಅಶೋಕ್ ಕೆ ಆರ್
ಅತ್ತ ಕಡೆ ಚೀನಾ ಒಂದೊಂದೆ ಹೆಜ್ಜೆ ಭಾರತದೆಡೆಗೆ ಇಟ್ಟಾಗಲೂ ಅವರ ಮರಾಮೋಸದ
ಬಗ್ಗೆ, ನಮ್ಮ ನೆಲವನ್ನು ಕಬಳಿಸಬಯಸುವ ಅವರ ಆಕ್ರಮಣಕಾರಿ ನಡಾವಳಿಯ ಬಗ್ಗೆ ನಮ್ಮಲ್ಲಿ ಹತ್ತಾರು ರೀತಿಯ
ಚರ್ಚೆಗಳು ಪ್ರಾರಂಭವಾಗಿಬಿಡುತ್ತದೆ. ಅದೇ ಸಮಯದಲ್ಲಿ ಇತ್ತ ಕಡೆ ನಮ್ಮದೇ ದೇಶದ ಜನತೆ ನಮ್ಮದೇ ದೇಶದ
ಭೂಮಿಯನ್ನು ಅಗೆದು ಬರಿದು ಮಾಡಿ ಚೀನಾದಂತಹ ದೇಶಗಳಿಗೇ ರಫ್ತು ಮಾಡಿಬಿಡುತ್ತಾರೆ! ಚೀನಾದವರಿಗಿಂದ
ನಾವು ಈ ದೇಶಕ್ಕೆ ಹೆಚ್ಚು ಮೋಸ ಮಾಡಿದ್ದೇವೆ ಎಂದು ಮೆರೆಯುತ್ತಿದ್ದ ಜನರಲ್ಲಿ ಕೆಲವರು “ಜನಾನುರಾಗಿಯಾಗಿ”(?)
ಮತ್ತೆ ಮತ್ತೆ ಶಾಸಕ ಸ್ಥಾನ ಅಲಂಕರಿಸಿದ್ದಾರೆ. ಸಚಿವರಾದವರೂ ಇದ್ದಾರೆ! 2008, 2011ರ ಜುಲೈನಲ್ಲಿ
ವರದಿ ನೀಡಿದ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತದ 2008ರ ವರದಿಯ ನಂತರ ಅಕ್ರಮ ಗಣಿಗಾರಿಕೆಯ ಕುರಿತು
ಸುಪ್ರೀಂಕೋರ್ಟಿಗೆ ವರದಿ ನೀಡಿದ ಸಿಇಸಿ; ಇವೆಲ್ಲದರ ಸಹಾಯದಿಂದ ಮತ್ತಷ್ಟು ತನಿಖೆ ನಡೆಸಿದ ಸಿ.ಬಿ.ಐ
ಗಣಿ ಹಗರಣದ ಪ್ರಮುಖ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸುತ್ತ, ವಿಚಾರಣೆಗೊಳಪಡಿಸುತ್ತ ಕೆಲವು ಆರೋಪಿಗಳನ್ನು
ಜೈಲಿಗೂ ಅಟ್ಟುತ್ತಿದ್ದಾರೆ. ಮಣ್ಣು ಬಗೆದು ದೇಶಕ್ಕೇ ದ್ರೋಹ ಬಗೆದವರು ಜೈಲು ಸೇರುತ್ತಿರುವುದು ಸಂತಸದ
ಸಂಗತಿ.