ಡಾ. ಅಶೋಕ್. ಕೆ. ಆರ್
ರಾಷ್ಟ್ರಾದ್ಯಂತ ನಡೆಯಬೇಕಿರುವ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಒಂದು
ವರುಷ ಬಾಕಿಯಿರುವಾಗ ಕರ್ನಾಟಕದ ಜನತೆಗೆ ಎರಡು ಲೋಕಸಭಾ ಚುನಾವಣೆಯ ಭಾರವನ್ನು ಹೊರುವ ಸುಯೋಗ! ಲೋಕಸಭೆಗೆ
ಆಯ್ಕೆಯಾದವರು ತಮ್ಮ ಸಂಸತ್ ಅವಧಿಯ ಮಧ್ಯದಲ್ಲೇ ವಿಧಾನಸಭೆಗೆ ಸ್ಪರ್ಧಿಸಲು ಸಾಂವಿಧಾನಿಕವಾಗಿ ಯಾವ
ಅಡ್ಡಿ ಆತಂಕಗಳೂ ಇಲ್ಲವಾಗಿರುವುದರಿಂದ ರಾಜಕೀಯ ನೇತಾರರ ಅಸರ್ಮಪಕ ನಿರ್ಧಾರಗಳಿಂದ ಬೆಂಗಳೂರು ಗ್ರಾಮಾಂತರ
ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಜನರಿಗೆ ಕೇವಲ ಎಂಟತ್ತು ತಿಂಗಳುಗಳಿಗಾಗಿ ಸಂಸತ್ ಸದಸ್ಯರೊಬ್ಬರನ್ನು
ಆರಿಸುವ ಅನಿವಾರ್ಯ ಕರ್ಮ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದ ಜೆ.ಡಿ.ಎಸ್
ನ ಮಾನ್ಯ ಕುಮಾರಸ್ವಾಮಿಯವರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಅದೇ
ಜೆ.ಡಿ.ಎಸ್ ನ ಮಾನ್ಯ ಚೆಲುವರಾಯಸ್ವಾಮಿಯವರು ರಾಜ್ಯಕ್ಕೆ “ಸೇವೆ” ಸಲ್ಲಿಸುವ ಉದ್ದೇಶದಿಂದ ಸಂಸತ್
ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆಗೆ ನಿಂತು ಗೆಲುವು ಕಂಡರು. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ
ಜೆ.ಡಿ.ಎಸ್ ನಿರ್ಣಾಯಕಾರಿ ಪಾತ್ರ ವಹಿಸುತ್ತದೆ ಮತ್ತು ತಾವು ಅಧಿಕಾರದ ಕುರ್ಚಿ ಏರಬಹುದು ಎಂಬುದಿವರ
ಉದ್ದೇಶವಾಗಿತ್ತೇ ಹೊರತು “ರಾಜ್ಯ ಸೇವೆ” ಎಂಬುದು ನೆಪವಷ್ಟೇ. ಅದೃಷ್ಟವಶಾತ್ ರಾಜ್ಯದಲ್ಲಿ ಅತಂತ್ರತೆ
ಸೃಷ್ಟಿಯಾಗದೆ ಏಕಪಕ್ಷ ಬಹುಮತ ಪಡೆದ ಕಾರಣದಿಂದ ಜೆ.ಡಿ.ಎಸ್ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ಸೀಮಿತವಾಗಬೇಕಾಯಿತು.
ಲೋಕಸಭಾ ಚುನಾವಣೆಗೆ ಉಳಿರಿರುವುದು ಕೆಲವೇ ತಿಂಗಳು ಮರುಚುನಾವಣೆ ನಡೆಯಲಾರದು ಎಂದು ನಂಬಿಕೊಂಡಿದ್ದ
ಜೆ.ಡಿ.ಎಸ್ ಗೆ ಮರುಚುನಾವಣೆ ಘೋಷಿತವಾಗಿರುವುದು ಬಿಸಿ ತುಪ್ಪದಂತೆ ಪರಿಣಮಿಸಿದೆ. ಆರು ತಿಂಗಳ ಅವಧಿಯ
ಒಳಗೇ ಲೋಕಸಭಾ ಚುನಾವಣೆ ನಡೆಯುವಂತಿದ್ದರೆ ಮರುಚುನಾವಣೆಯ ಅವಶ್ಯಕತೆಯಿಲ್ಲ ಆದರೆ ಮುಂದಿನ ಲೋಕಸಭಾ
ಚುನಾವಣೆ ಎಂಟು ತಿಂಗಳುಗಳ ನಂತರವಿರುವುದರಿಂದ ಅಲ್ಲಿಯ ತನಕ ಕ್ಷೇತ್ರವನ್ನು ಅನಾಥವಾಗಿ ಬಿಡಬಾರದ ಕಾರಣಕ್ಕೆ
ಮರುಚುನಾವಣೆಯನ್ನು ಘೋಷಿಸಿದೆ ಚುನಾವಣಾ ಆಯೋಗ.
ಮಾಜಿ ಮುಖ್ಯಮಂತ್ರಿ ಮಾನ್ಯ ಕುಮಾರಸ್ವಾಮಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯಾವಾಗ ಇವರ ವಚನ ಭೃಷ್ಟತೆಯ ನೆರವಿನಿಂದ ಬಿಜೆಪಿ ಬಹುಮತದ ಹತ್ತಿರಕ್ಕೆ
ಬಂದು ಪಕ್ಷೇತರ ಅಭ್ಯರ್ಥಿಗಳ ಸಹಾಯದಿಂದ ಸರಕಾರ ರಚಿಸಿತೋ ಇಪ್ಪತ್ತು ತಿಂಗಳ ಅಧಿಕಾರದ ರುಚಿ ಕಂಡಿದ್ದ
ಕುಮಾರಸ್ವಾಮಿಯವರಿಗೆ ತಡೆಯಲಾಗಲಿಲ್ಲ. ವಿಧಾನಸಭೆಯನ್ನು ತೊರೆದು “ರಾಷ್ಟ್ರಸೇವೆಗೆ” ಬೆಂಗಳೂರು ಗ್ರಾಮಾಂತರ
ಕ್ಷೇತ್ರದಿಂದ ಲೋಕಸಭೆಗೆ ನಿಂತರು. ಮತ್ತು ನಮ್ಮ ಜನರ ಆಶೀರ್ವಾದದಿಂದ ಗೆಲುವನ್ನೂ ಕಂಡರು. ಅಲ್ಲಿಗೆ
ಮತ್ತೊಂದು ವಿಧಾನಸಭಾ ಚುನಾವಣೆಗೆ ಅವರ ಕ್ಷೇತ್ರ ಸಾಕ್ಷಿಯಾಗಬೇಕಾಯಿತು. ಈಗ ಅವರ ರಾಜ್ಯಸೇವೆಯ ಮಹತ್ವಾಕಾಂಕ್ಷೆಯಿಂದ
ಅವರ ಲೋಕಸಭಾ ಕ್ಷೇತ್ರದಲ್ಲಿ ಮರುಚುನಾವಣೆಯ ಭರಾಟೆ. ಅಧಿಕಾರದಾಹಿ ರಾಜಕಾರಣಿಗಳ ದೆಸೆಯಿಂದ ಈ ರೀತಿಯಾಗಿ
ವಿನಾಕಾರಣ ಮರುಚುನಾವಣೆ ನಡೆಯುವುದು ಸಾಧುವೇ? ಚುನಾವಣೆಗೆ ಸರಕಾರದ ಮೇಲಾಗುವ ಖರ್ಚು ವೆಚ್ಚಗಳು ಜನಸಾಮಾನ್ಯರ
ತೆರಿಗೆ ಹಣದಿಂದಲೇ ಆಗುತ್ತದೆ. ಅಲ್ಲಿಗೆ ರಾಜಕಾರಣಿಗಳ ಶೋಕಿಗೋಸ್ಕರ ಜನರ ಹಣದ ಅಪವ್ಯಯವಾಗುತ್ತಿದೆಯಲ್ಲವೇ?
ಅವಧಿ ಮುಗಿಯುವ ಮುನ್ನವೇ ಲೋಕಸಭೆಗೆ ಅಥವಾ ವಿಧಾನಸಭೆಗೆ ಅಭ್ಯರ್ಥಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ?
ಕೊನೇ ಪಕ್ಷ ಅಂಥ ಅಭ್ಯರ್ಥಿಗಳಿಂದ ದಂಡದ ರೂಪದಲ್ಲಿ ಹಣವನ್ನಾದರೂ ಪಡೆಯುವುದು ಕಾರ್ಯಸಾಧ್ಯವಾಗಬೇಕು.
ಚಳುವಳಿಗಳ ಮಂಡ್ಯದಲ್ಲೀಗ ಸ್ಟಾರ್ ಗಳದ್ದೇ ಕಾರುಬಾರು!
ರೈತ ಹೋರಾಟಗಳಿರಬಹುದು, ಕನ್ನಡ ಭಾಷೆಗೆ ಸಂಬಂಧಪಟ್ಟ ಹೋರಾಟವಿರಬಹುದು,
ಇವೆರಡಕ್ಕಿಂತ ಮುಖ್ಯವಾಗಿ ಕಾವೇರಿ ನದಿಯ ವಿಷಯದಲ್ಲಿ ಚಳುವಳಿಗೆ ದುಮುಕಲು ಮಂಡ್ಯದ ಜನತೆ ಎಂದೂ ಹಿಂಜರಿದವರಲ್ಲ.
ಕೆಲವೇ ವರ್ಷಗಳ ಹಿಂದೆ ಮಂಡ್ಯದಲ್ಲಿ ಎಲ್ಲಿ ನೋಡಿದರಲ್ಲಿ HMTಗಳೇ (ಅರ್ಥಾತ್ ಹೆಗಲ್ ಮೇಲ್ ಟವೆಲ್!).
ಕೆಲವು ಧೀಮಂತ ನಾಯಕರನ್ನು ರಾಜ್ಯಕ್ಕೆ ಕೊಟ್ಟ ಕೀರ್ತಿ ಮಂಡ್ಯ ಜಿಲ್ಲೆಗಿದೆ. ಒಕ್ಕಲಿಗರೇ ಬಹುಸಂಖ್ಯಾತರಾಗಿರುವ
ಮಂಡ್ಯದ ಬಹುತೇಕ ತಾಲ್ಲೂಕುಗಳಲ್ಲಿ ಒಕ್ಕಲಿಗ ಶಾಸಕರೇ ಹೆಚ್ಚು ಸಂಖ್ಯೆಯಲ್ಲಿ ಗೆಲುವು ಕಾಣುವುದು ಜಾತಿ
ರಾಜಕಾರಣದ ಪ್ರಭಾವವನ್ನು ತೋರಿಸುತ್ತದೆ. ಮುಂಚಿನಿಂದಲೂ ಇಲ್ಲಿ ನಿಕಟವಾದ ಪೈಪೋಟಿ ಕಾಂಗ್ರೆಸ್ ಮತ್ತು
ಜೆ.ಡಿ.ಎಸ್ ಪಕ್ಷದ ನಡುವೆ. ಐಕ್ಯ ಜನತಾದಳ ಇರುವವರೆಗೂ ಮೇಲುಗೈ ಸಾಧಿಸುತ್ತಿದ್ದ ಕಾಂಗ್ರೆಸ್ ಯಾವಾಗ
ಜನತಾದಳ ಭಾಗವಾಗಿ ಜೆ.ಡಿ.ಎಸ್ ಸರ್ವವೂ ದೇವೇಗೌಡರೇ ಆಗಿಹೋದರೋ ಮಂಡ್ಯದಲ್ಲಿ ಜೆ.ಡಿ.ಎಸ್ ಅನ್ನು ಅಲುಗಾಡಿಸುವುದು
ಕಷ್ಟವಾಗಿ ಹೋಗಿದೆ. ಚಳುವಳಿಗಳ ಜಿಲ್ಲೆ ನಿಧಾನಕ್ಕೆ ಒಕ್ಕಲಿಗರ ಜಿಲ್ಲೆಯಷ್ಟೇ ಆಗಿ ಉಳಿದು ಹೋಗಿದೆ.
ಯಾವಾಗ ಚಳುವಳಿಗಳ ಪಾತ್ರ ಕಡಿಮೆಯಾಗಿ ಜಾತಿ ಪ್ರಾಧಾನ್ಯತೆ ಪಡೆಯಲಾರಂಭಿಸಿತೋ ಅಭ್ಯರ್ಥಿಯ ಯೋಗ್ಯತೆಯನ್ನೂ
ಮರೆತು ಮತ ಹಾಕುವುದು ಮಂಡ್ಯದ ಜನರಿಗೆ ಸಲೀಸಾಗಿಹೋಗಿದೆ. ಈ ಬಾರಿಯ ಚುನಾವಣೆಯಲ್ಲೂ ಕೂಡ ನೇರ ಪೈಪೋಟಿ
ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ. ಜೆಡಿಎಸ್ ನಿಂದ ವಿಧಾನಸಭಾ ಚುನಾವಣೆಯಲ್ಲಿ
ಪರಾಭವಗೊಂಡ ಪುಟ್ಟರಾಜು ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್ಸಿನಿಂದ ಅಭ್ಯರ್ಥಿಯಾಗಿರುವುದು ನಾಯಕ ನಟಿ
ರಮ್ಯಾ(ದಿವ್ಯ ಸ್ಪಂದನ).
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಅಂಬರೀಷ್ ಸದ್ಯ ಮಂಡ್ಯ ವಿಧಾನಸಭಾ
ಕ್ಷೇತ್ರದ ಸದಸ್ಯರು ಮತ್ತು ಸಿದ್ಧರಾಮಯ್ಯನವರ ಸಂಪುಟದ ಸಚಿವರೂ ಹೌದು. ಮುಂಚೆ ಲೋಕಸಭಾ ಸದಸ್ಯರಾಗಿದ್ದ
ಅಂಬರೀಷ್ ಮಂಡ್ಯಕ್ಕೆ ನೀಡಿದ ಕೊಡುಗೆ ಏನೂ ಇಲ್ಲ. ಹಿಂದೊಮ್ಮೆ ರಾಜ್ಯ ರಾಜಕೀಯ ಪ್ರವೇಶಿಸುವ ಉದ್ದೇಶದಿಂದ
ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿದ್ದರಾದರೂ ಕೆಲವು ಹಳ್ಳಿಗಳಲ್ಲಿ ‘ಏನೂ ಕೆಲಸ ಮಾಡದೆ ಯಾವತ್ತೂ ಕೈಗೆ
ಸಿಗದೆ ಈಗ ಚುನಾವಣೆಯ ಸಮಯದಲ್ಲಿ ದರ್ಶನ’ ಕೊಡುತ್ತಿರುವ ನಾಯಕನನ್ನು ಪ್ರಚಾರ ಮಾಡಲು ಬಿಡದೆ ಓಡಿಸಿಬಿಟ್ಟಿದ್ದರು!
ಈ ಬಾರಿಯ ಚುನಾವಣೆಯಲ್ಲೂ ಸೋಲನ್ನು ಕಾಣಬೇಕಿದ್ದ ಅಂಬರೀಷ್ ಎಲ್ಲರೂ ಚಕಿತರಾಗುವಂತೆ ನಲವತ್ತು ಸಾವಿರಕ್ಕೂ
ಅಧಿಕ ಮತಗಳ ಅಂತರದಿಂದ ಗೆಲುವು ಕಂಡುಬಿಟ್ಟರು. ಎಂ. ಶ್ರೀನಿವಾಸ್ ಜೆಡಿಎಸ್ ಅಭ್ಯರ್ಥಿಯಾಗಿದ್ದು,
ಎಸ್ ಡಿ ಜಯರಾಂರ ಮಗ ಅಶೋಕ್ ಜಯರಾಂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದು ಅಂಬರೀಷ್ ಗೆಲುವಿಗೆ
ಸಹಕಾರಿಯಾಯಿತು. ಜೊತೆಗೆ ‘ಇದೊಂದು ಬಾರಿ ಅವಕಾಶ ಕೊಟ್ಟು ನೋಡ್ರಪ್ಪ, ನನಗೂ ವಯಸ್ಸಾಯಿತು ಮುಂದಿನ
ಚುನಾವಣೆಗೆ ನಿಲ್ತೀನೋ ಇಲ್ವೋ’ ಎಂದು ಅಂಬರೀಷ್ ಭಾವನಾತ್ಮಕವಾಗಿ ಮಾತನಾಡಿದ್ದು ನೋಡಿ ಮಂಡ್ಯದ ಜನತೆ
ಮರುಳಾಗಿಬಿಟ್ಟರೇನೋ. ಸ್ಥಳೀಯ ನಾಯಕರಾದ ಆತ್ಮಾನಂದ, ಸಚ್ಚಿದಾನಂದ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ
ಬೆಂಬವಿಲ್ಲದೆಯೂ ಅಷ್ಟೊಂದು ಬಹುಮತ ಗಳಿಸಿದ್ದಾದರೂ ಹೇಗೆ? ಅಂಬರೀಷ್ ಹೊರತು ಪಡಿಸಿ ಮತ್ತೊಬ್ಬ ಒಕ್ಕಲಿಗ
ಮಂತ್ರಿಯಾಗಿಬಿಟ್ಟರೆ ತಮ್ಮ ಒಕ್ಕಲಿಗ ಅಧಿಪತ್ಯಕ್ಕೆ ಸಂಚಕಾರ ಬರಬಹುದೆಂಬ ಅನುಮಾನದಿಂದ ಜೆಡಿಎಸ್ ಮುಂದಾಳುಗಳೇ
ಅಂಬರೀಷ್ ಗೆಲುವಿಗೆ ಸಹಕರಿಸಿದರು ಎಂಬುದು ಕೇವಲ ಅನುಮಾನವಲ್ಲವಷ್ಟೇ!! ಮಂಡ್ಯ ಜಿಲ್ಲಾ ರಾಜಕೀಯದ ಅಧಿಪತ್ಯವನ್ನಾದರೂ
ಪಡೆಯಬೇಕೆಂಬ ಆಸೆಯಿಟ್ಟುಕೊಂಡಿರುವ ಅಂಬಿ ಲೋಕಸಭಾ ಚುನಾವಣೆಗೆ ತಮ್ಮದೇ ಅಭ್ಯರ್ಥಿಯಾಗಬೇಕೆಂಬ ಉದ್ದೇಶದಿಂದ
ನಾಯಕ ನಟಿ ರಮ್ಯಾಳಿಗೆ ಕಾಂಗ್ರೆಸ್ಸಿನ ಬಿ.ಫಾರಂ ಕೊಡಿಸುವಲ್ಲಿ ಯಶಸ್ವಿಯಾಗಿಬಿಟ್ಟಿದ್ದಾರೆ. ಮಂಡ್ಯಕ್ಕೆ
ಒಬ್ಬ ಸೂಕ್ತ ಲೋಕಸಭಾ ಅಭ್ಯರ್ಥಿಯನ್ನು ಹುಡುಕಲೂ ಕಾಂಗ್ರೆಸ್ಸಿಗೆ ಶಕ್ತಿಯಿಲ್ಲದಂತಾಯಿತೇ? ಮಾದೇಗೌಡರು
ನಿರಾಕರಿಸಿದ ಕಾರಣಕ್ಕೆ ರಮ್ಯಾಳಿಗೆ ಟಿಕೇಟ್ ಕೊಟ್ಟಿದ್ದು ಸಮರ್ಥನೀಯವೇ? ಚುನಾವಣಾ ಕಣಕ್ಕಿಳಿಯುವ
ಮೊದಲ ದಿನವೇ ತನ್ನ ಸಾಕುತಂದೆಯನ್ನು ಕಳೆದುಕೊಂಡಿದ್ದು, ಜೆ.ಡಿ.ಎಸ್ ನ ಮಾಜಿ ಶಾಸಕ ಎಂ. ಶ್ರೀನಿವಾಸ್
ಮತ್ತಿತರರು ರಮ್ಯಾಳ ಬಗ್ಗೆ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡಿದ್ದು ಚುನಾವಣೆಯಿಂದ ಹಿಂದೆ ಸರಿಯುವ
ಮಾತನಾಡಿದ್ದು ಕಡೆಗೆ ಹಿರಿಯರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಚುನಾವಣ ಪ್ರಚಾರಕ್ಕೆ ತೆರಳಿ
ಏನೂ ಮಾತನಾಡಲಾಗದೆ ಅತ್ತಿದ್ದು – ಇವೆಲ್ಲವೂ ಜನರಲ್ಲಿ ರಮ್ಯಳ ಬಗ್ಗೆ ಅನುಕಂಪ ಸೃಷ್ಟಿಸಿ ಆಕೆಯ ಗೆಲುವಿಗೆ
ಸಹಕಾರಿಯಾಗಿಬಿಟ್ಟರೆ ಅಚ್ಚರಿಯಿಲ್ಲ. ಸಾಕು ತಂದೆಯ ಸಾವು, ತನ್ನದಲ್ಲದ ತಪ್ಪಿಗೆ ಹುಟ್ಟಿನ ಬಗೆಗೆ
ಕೀಳುಮಾತನಾಡುವ ಜನರು – ಇವೆಲ್ಲದರಿಂದ ಯಾರದೇ ಮನಸ್ಸಿಗಾದರೂ ಅಘಾತವಾಗುವುದು ಸತ್ಯ. ಅದಕ್ಕಾಗಿ ರಮ್ಯಾಳ
ಬಗ್ಗೆ ಅನುಕಂಪ ತೋರಿಸುವುದನ್ನೇನೋ ಒಪ್ಪಬಹುದು, ಆದರೆ ಆ ಅನುಕಂಪ ಮತಗಳಾಗಿ ಪರಿವರ್ತನೆಯಾಗುವುದನ್ನೇ
ನಿರೀಕ್ಷಿಸುತ್ತಿರುವ ರಾಜಕಾರಣಿಗಳ ವರ್ತನೆ ಅಸಹ್ಯಕರವಲ್ಲವೇ? ಚಿತ್ರರಂಗ ನೀಡಿದ ಜನಪ್ರಿಯತೆಯನ್ನು
ರಾಜಕೀಯಕ್ಕೆ ಬರಲು ಮೆಟ್ಟಿಲಾಗಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಆ ರೀತಿ ರಾಜಕೀಯ ಪ್ರವೇಶಿಸಿದ
ಅನೇಕರು ಕೇವಲ ಪ್ರದರ್ಶನದ ಗೊಂಬೆಗಳಾಗಷ್ಟೇ ಸೀಮಿತರಾಗಿರುವುದೂ ಸತ್ಯ. ಇದಕ್ಕೆ ಜ್ವಲಂತ ಉದಾಹರಣೆಯಾಗಿ
ಅಂಬರೀಷ್ ಇದ್ದರೂ ಮಂಡ್ಯದ ಜನತೆ ರಮ್ಯಾರನ್ನೇನಾದರೂ ಆರಿಸಿದರೆ ಅದು ಮಂಡ್ಯದವರ ಮೌಡ್ಯತೆಯೆಂದೇ ಹೇಳಬೇಕು.
ಜನರ ನಡುವೆ ಎಂದೂ ಒಡನಾಡದ ವ್ಯಕ್ತಿ ಅಪ್ಪಿತಪ್ಪಿ ಗೆಲುವೂ ಕಂಡುಬಿಟ್ಟರೆ ಅವರನ್ನು ಕಾಣಲಾದರೂ ಸಾಧ್ಯವೇ?
ಕೊನೆಗೆ ಗೆಲ್ಲಿಸಿದ ತಪ್ಪಿಗೆ ಜನತೆ ತಮ್ಮನ್ನು ತಾವೇ ಹಳಿದುಕೊಳ್ಳಬೇಕು.
ಜಾತಿ ರಾಜಕಾರಣಕ್ಕೆ, ಜೆಡಿಎಸ್ ನ ಆಟಾಟೋಪಕ್ಕೆ ಕಡಿವಾಣ ಬೀಳಬೇಕೆಂಬುದು
ಎಷ್ಟು ಸರಿಯೋ ಜೆಡಿಎಸ್ ಸೋಲು ಕಂಡರೆ ಗೆಲುವು ಕಾಣುವುದು ಕ್ಷೇತ್ರಕ್ಕೆ ಯಾವುದೇ ರೀತಿಯಿಂದಲೂ ಸಹಾಯಕವಾಗದ
ವ್ಯಕ್ತಿ! ಕೊನೆಗೆ ಮಂಡ್ಯದ ಜನತೆಯ ಆಯ್ಕೆ ಯಾರೆಂಬುದನ್ನು ಕಾದು ನೋಡಬೇಕಷ್ಟೇ.
ರಿಪಬ್ಲಿಕ್ ಆಫ್ ಬೆಂಗಳೂರ್ ರೂರಲ್!
ಇನ್ನು ಬೆಂಗಳೂರು ಗ್ರಾಮಾಂತರದಲ್ಲೂ ಕೂಡ ನೇರ ಹಣಾಹಣಿಯಿರುವುದು ಕಾಂಗ್ರೆಸ್
ಮತ್ತು ಜೆಡಿಎಸ್ ಪಕ್ಷದ ನಡುವೆ. ಜೆಡಿಎಸ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಶಾಸಕಿ ಅನಿತಾ
ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ಸಿನಿಂದ ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಸಹೋದರ
ಡಿ.ಕೆ.ಸುರೇಶ್ ಕಣದಲ್ಲಿದ್ದಾರೆ. ಅಲ್ಲಿಗೆ ಬೆಂಗಳೂರು ಗ್ರಾಮಾಂತರದಲ್ಲಿರುವುದು ಕುಟುಂಬಗಳ ನಡುವಿನ
ಕಲಹದ ಮತ್ತೊಂದು ಮಜಲು. ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನೇ ಪುನಃ ಲೋಕಸಭಾ ಚುನಾವಣೆಯಲ್ಲಿ
ಕಣಕ್ಕಿಳಿಸುತ್ತಿರುವ ಜೆಡಿಎಸ್ ಆ ಮುಖಾಂತರ ತನ್ನಲ್ಲಿರುವ ಅಭ್ಯರ್ಥಿಗಳ ಕೊರತೆಯನ್ನು ಪ್ರದರ್ಶಿಸುತ್ತಿದೆ.
ಬಹುಶಃ ಇನ್ನು ಕೆಲವು ವರುಷಗಳ ನಂತರ ತಮ್ಮ ಕುಟುಂಬ ವರ್ಗದವರನ್ನು ಹೊರತುಪಡಿಸಿ ಜೆಡಿಎಸ್ ನಲ್ಲಿ ಅಭ್ಯರ್ಥಿಗಳೇ
ಇರುವುದಿಲ್ಲವೋ ಏನೋ?!! ಅನಿತಾ ಕುಮಾರಸ್ವಾಮಿ ಗೆದ್ದರೂ ಸೋತರೂ ಅದಕ್ಕೆ ಅವರ ಪತಿ ಕುಮಾರಸ್ವಾಮಿ ಕಾರಣಕರ್ತರಾಗುತ್ತಾರೆಯೇ
ಹೊರತು ಅನಿತಾರವರ ಕೊಡುಗೆ ಎಳ್ಳಷ್ಟೂ ಇರಲಾರದು. ಜನರ ನಡುವೆ ಒಡನಾಡುವ ಕುಮಾರಸ್ವಾಮಿಯವರು ಲೋಕಸಭೆಗೆ
ಹಾಜರಾಗಿದ್ದೂ ಕಡಿಮೆ, ಹಾಜರಾದ ಅವಧಿಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದೂ ಮತ್ತೂ ಕಡಿಮೆ ಮತ್ತವರು
ಒಂದೂ ಪ್ರಶ್ನೆಯನ್ನೂ ಲೋಕಸಭೆಯಲ್ಲಿ ಕೇಳಿಲ್ಲ! ಇನ್ನು ಕೇವಲ ಪತಿಯ ಬಲದಿಂದ ರಾಜಕಾರಣಿಯಾಗಿರುವ ಅನಿತಾ
ಕುಮಾರಸ್ವಾಮಿಯವರು ಗೆಲುವು ಕಂಡುಬಿಟ್ಟರೆ ಕ್ಷೇತ್ರಕ್ಕಾಗುವ ಉಪಕಾರವಾದರೂ ಏನು?
ಸರಿ ಜೆಡಿಎಸ್ ಅಭ್ಯರ್ಥಿ ಗೆಲ್ಲಬಾರದು, ಕಾಂಗ್ರೆಸ್ಸನ್ನೇ ಗೆಲ್ಲಿಸೋಣವೆಂದು
ಅದರ ಅಭ್ಯರ್ಥಿಯ ಕಡೆಗೆ ಕಣ್ಣು ಹಾಯಿಸಿದರೆ ಮತ್ತಷ್ಟು ನಿರಾಸೆ. ಸಿದ್ಧರಾಮಯ್ಯನವರ ನೇತ್ರತ್ವದಲ್ಲಿ
ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಾಗ ಹಿಂದಿನ ಬಿಜೆಪಿ ಸರಕಾರದ ತಪ್ಪುಗಳನ್ನು ಮಾಡದಿರುವ ಸಲುವಾಗಿ
ಮತ್ತು ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕಳಂಕಿತರಿಗೆ ಸಚಿವ ಸ್ಥಾನ ನೀಡಬಾರದೆಂದು ನಿರ್ಧರಿಸಲಾಯಿತು.
ಅದೇ ನೆಪದಿಂದ ಡಿ.ಕೆ. ಶಿವಕುಮಾರ್ ಗೆ ಸಚಿವ ಸ್ಥಾನ ನಿರಾಕರಿಸಲಾಯಿತು. ಡಿ.ಕೆ.ಶಿ ಯಾವುದೇ ಕ್ಷಣದಲ್ಲೂ
ಬಂಡಾಯವೇಳುವ ಸಾಧ್ಯತೆ ದಟ್ಟವಾಗಿತ್ತು. ಅವರನ್ನು ಸಮಾಧಾನಪಡಿಸಲೋಸುಗ ಅವರ ತಮ್ಮನಿಗೆ ಲೋಕಸಭಾ ಚುನಾವಣೆಗೆ
ಟಿಕೆಟ್ ನೀಡಲಾಯಿತು. ಅಣ್ಣನಿಗಿಂತ ನಾನೇನು ಕಡಿಮೆ ಎಂಬ ಉತ್ಸಾಹದ ಡಿ.ಕೆ. ಸುರೇಶ್ ಮೇಲಿರುವುದು ಕೇವಲ
ಹದಿನಾಲ್ಕು ಕ್ರಿಮಿನಲ್ ಮೊಕದ್ದಮೆಗಳಷ್ಟೇ! ಕಳಂಕಿತರಿಗೆ ಸಚಿವ ಸ್ಥಾನ ಕೊಡದ ಕಾಂಗ್ರೆಸ್ಸಿನಿಂದ ಈ
ಕೊಡುಗೆ! ಒಂದೊಮ್ಮೆ ಡಿ.ಕೆ.ಸುರೇಶ್ ಗೆಲುವು ಕಂಡರೆ ಬಿಜೆಪಿ ಆಡಳಿತಾವಧಿಯಲ್ಲಿ ಬಳ್ಳಾರಿ ಯಾರ ಅಂಕೆಗೂ
ಸಿಗದ ರಿಪಬ್ಲಿಕ್ ಆದಂತೆ ಬೆಂಗಳೂರು ಗ್ರಾಮಾಂತರ ಕೂಡ ಮತ್ತೊಂದು ರಿಪಬ್ಲಿಕ್ ಆಗಿಬಿಡಬಹುದೆಂಬ ಭಯ
ನಿಜವಾಗಿಬಿಡಬಹುದು.
ನೈತಿಕತೆ – ಅನೈತಿಕತೆಯ ವ್ಯಾಪ್ತಿಗೆ ಬರದ ರಾಜಕೀಯ!
ಕಾಂಗ್ರೆಸ್ ತೊರೆದು ಬಿಜೆಪಿ ತೊರೆದು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ
ಸಮಾಜವಾದಿ ಪಕ್ಷ ಸೇರಿ ತನ್ನ ಸ್ವಂತ ವರ್ಚಸ್ಸಿನಿಂದಲೇ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ ಸಿ.ಪಿ.ಯೋಗೇಶ್ವರ
ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಗಳೆರಡರ ನಾಯಕರೂ ಹರಸಾಹಸ ಪಡುತ್ತಿದ್ದಾರೆ. ಇನ್ನು ದೇಶದಾದ್ಯಂತ
ಮೋದಿ ಅಲೆ ಅಲೆಅಲೆಯಾಗಿ ಜೋರಾಗಿ ಬಿರುಗಾಳಿಯೋಪಾದಿಯಲ್ಲಿ ನುಗ್ಗುತ್ತಿದೆ ಎಂದು ಬೊಬ್ಬರಿಯುವ ಬಿಜೆಪಿ
ಪಕ್ಷಕ್ಕೆ ಇವೆರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ನಿಲ್ಲಿಸಲಾಗಿಲ್ಲ! ಐದು ವರುಷಗಳಿಂದ ಕಿತ್ತಾಡಿದ್ದ
(ಕೊನೇಪಕ್ಷ ಮೇಲ್ನೋಟಕ್ಕೆ!) ಜೆಡಿಎಸ್ ಗೆ ಬೆಂಬಲ ಸೂಚಿಸಿ ಚುನಾವಣಾ ಕಣದಿಂದ ಹಿಂದೆ ಸರಿದಿದೆ. ಇನ್ನು
ಯಡಿಯೂರಪ್ಪನವರ ಕೆಜೆಪಿ ಕೂಡ ಜೆಡಿಎಸ್ ಗೆ ಬೆಂಬಲ ಸೂಚಿಸಿದೆ! ಗೆಲುವೋ ಸೋಲೋ ಕೊನೆಗೆ ತಾತ್ವಿಕ ಕಾರಣಕ್ಕಾದರೂ
ಪ್ರತ್ಯೇಕವಾಗಿ ಸ್ಪರ್ಧಿಸಬೇಕೆಂಬುದೂ ಮರೆತುಹೋಯಿತೇ ಈ ಪಕ್ಷಗಳಿಗೆ?
ಮುಂದಿನ ಲೋಕಸಭಾ ಚುನಾವಣೆಗೆ ಈ ಮರುಚುನಾವಣೆ ಮುನ್ನುಡಿಯಲ್ಲವಾದರೂ ತಮ್ಮ
ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮುಖ್ಯವಾಗಿದೆ. ತನ್ನ ಸಂಸದರಿದ್ದ
ಕ್ಷೇತ್ರಗಳನ್ನು ಉಳಿಸಿಕೊಂಡು ತಾನಿನ್ನೂ ಜೀವಂತ ಪಕ್ಷವೆಂದು ತೋರಿಸಿಕೊಳ್ಳುವ ಹಪಾಹಪಿ ಜೆಡಿಎಸ್ ಗಿದ್ದರೆ,
ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮುಂದಿನ ಮುಖ್ಯ ಚುನಾವಣೆಯಲ್ಲಿ
ಸ್ಪರ್ದಿಸಲು ಮತ್ತಷ್ಟು ಹುರುಪು ಗಳಿಸಿಕೊಳ್ಳುವ ತವಕ ಕಾಂಗ್ರೆಸ್ಸಿಗೆ. ಮಂಡ್ಯದಲ್ಲಿ ಕಾಂಗ್ರೆಸ್
ಸೋತು ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದರೆ ಸಿದ್ಧರಾಮಯ್ಯನವರ ಪ್ರಭಾವ ಮತ್ತಷ್ಟು ಕುಸಿತ ಕಾಣುವುದು
ಖಚಿತ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆದ್ದರೆ ಅದು ಡಿ.ಕೆ.ಶಿವಕುಮಾರರ ಗೆಲುವಾಗುತ್ತದೆ.
ಬಹುಶಃ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆಗಳೂ ಇದೆ. ರಮ್ಯಾ ಮತ್ತು ಡಿ.ಕೆ.ಸುರೇಶರ ಅಭ್ಯರ್ಥಿತನಕ್ಕೆ
ಸಿದ್ಧರಾಮಯ್ಯರಂಥ ಮುತ್ಸದ್ಧಿ(?) ರಾಜಕಾರಣಿಯಿಂದ ಹೆಚ್ಚಿನ ವಿರೋಧ ವ್ಯಕ್ತವಾಗದಿರುವುದರಲ್ಲೇ ಅವರ
ವರ್ಚಸ್ಸಿಗೆ ಧಕ್ಕೆಯುಂಟಾಗಿದೆ. ಇನ್ನು ಕ್ರಿಮಿನಲ್ ಹಿನ್ನಲೆಯುಳ್ಳವರು ರಾಜಾರೋಷವಾಗಿ ಅವರ ಸಚಿವ
ಸಂಪುಟವನ್ನೂ ಪ್ರವೇಶಿಸಿಬಿಟ್ಟರೆ ಸಿದ್ಧರಾಮಯ್ಯನವರಿಂದ ಅಲ್ಪಸ್ವಲ್ಪ ನಿರೀಕ್ಷೆ ಇಟ್ಟುಕೊಳ್ಳುವುದನ್ನೂ
ಮರೆತುಬಿಡಬಹುದೇನೋ! ಸಿದ್ಧರಾಮಯ್ಯನವರ ಪ್ರಭಾವ ಕಡಿಮೆಯಾಗಲೆಂದೇ ನಡೆಯುತ್ತಿರುವ ರಾಜಕೀಯ ನಡೆಗಳಾ
ಇವೆಲ್ಲಾ? ಮುಂದಿನ ದಿನಗಳಲ್ಲಿ ಉತ್ತರ ದೊರಕುವುದು ಖಂಡಿತ.
ಪ್ರಜಾಸಮರದಲ್ಲಿ ಪ್ರಕಟವಾಗಿದ್ದ ಲೇಖನ
No comments:
Post a Comment